ಅಥವಾ

ಒಟ್ಟು 146 ಕಡೆಗಳಲ್ಲಿ , 18 ವಚನಕಾರರು , 86 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮೊಲೆಯಿಲ್ಲದಾವಿಂಗೆ ತಲೆ[ಯೆ] ಮೊಲೆ ! ಮನದಲ್ಲಿ ಉಣ್ಣು ಕಂಡಾ, ಮನದಲ್ಲಿ ಉಣ್ಣು ಕಂಡಾ ! ತಾ ಸತ್ತು, ಹಾಲ ಕುಡಿಯ ಬಲ್ಲಡೆ, ಗುಹೇಶ್ವರನೆಂಬ ಲಿಂಗವು ತಾನೆ ಕಂಡಾ !
--------------
ಅಲ್ಲಮಪ್ರಭುದೇವರು
ಮನವೆಂಬ ಮಂಟಪದ ನೆಳಲಲ್ಲಿ ನೆನೆಹೆಂಬ ಜಾÕನಜ್ಯೋತಿಯ ಬೆಳಗನಿಟ್ಟು ಘನಪುರುಷ ಪವಡಿಸೈದಾನೆ, ಎಲೆ ಅವ್ವಾ. ಅದನೊಂದೆರಡೆನ್ನದೆ ಮೂರು ಬಾಗಿಲ ಮುಚ್ಚಿ ನಾಲ್ಕ ಮುಟ್ಟದೆ ಐದ ತಟ್ಟದೆ ಇರು ಕಂಡಾ, ಎಲೆ ಅವ್ವಾ. ಆರೇಳೆಂಟೆಂಬ ವಿಹಂಗಸಂಕುಳದ ಉಲುಹು ಪ್ರಬಲವಾದಡೆ, ಕಪಿಲಸಿದ್ಧಮಲ್ಲಿಕಾರ್ಜುನನು ನಿದ್ರೆಗೆಟ್ಟಲ್ಲಿರನು.
--------------
ಸಿದ್ಧರಾಮೇಶ್ವರ
ಆಡಿ ಅಳುಪದಿರಾ, ಲೇಸಮಾಡಿ ಮರುಗದಿರಾ, ಎಲೆ ಮನವೆ. ಕೂಡಿ ತಪ್ಪದಿರಾ, ಬೇಡಿದವರಿಗಿಲ್ಲೆನ್ನದಿರು ಕಂಡಾ. ನಾಡ ಮಾತು ಬೇಡ, ಸೆರಗೊಡ್ಡಿ ಬೇಡು ಕೂಡಲಸಂಗನ ಶರಣರ. 279
--------------
ಬಸವಣ್ಣ
ಜಾನು ಜಂಗೆಯಲ್ಲಿ ಹುಟ್ಟಿ ಜಂಗಮವೆನಿಸಿಕೊಳಬಹುದೆ ? ಆಠಾವು ಹಿಂಗಿದಡೆ ಭಂಗಿತನು ಕಂಡಾ. ಅಂತರಂಗದಲೊದಗೂದನರಿಯರು ಗುಹೇಶ್ವರನೆಂಬುದು ಮೀರಿದ ಘನವು
--------------
ಅಲ್ಲಮಪ್ರಭುದೇವರು
ಅನಂತಾನಂತಕಾಲ ನಿತ್ಯವೆಂಬಿರಿ ಸಂಸಾರ. ಸಂಸಾರವೆಂಬುದು ಹುಸಿ ಕಂಡಾ ಎಲವೋ! ಇಂದಿನಿಂದಿನ ಸುಖ ಇಂದಿಂಗೆ ಪರಿಣಾಮ. ದಿನದಿನದ ಸುಖ ಹುಸಿ ಕಂಡಾ ಎಲ್ಲವೊ! ಘನಘನವೆಂಬ ರೂಪಿಂಗೆ ರತಿಯಿಲ್ಲಯ್ಯಾ. ಮಹಾಲಿಂಗ ಗಜೇಶ್ವರನಲ್ಲಿ ತಿಳಿದು ನೋಡಾ ಎಲ್ಲವೊ!
--------------
ಗಜೇಶ ಮಸಣಯ್ಯ
ಹೊತ್ತಾರೆ ಪೂಜಿಸಲು ಬೇಡ ಕಂಡಾ. ಬೈಗೆಯೂ ಪೂಜಿಸಲು ಬೇಡ ಕಂಡಾ. ಇರುಳುವುನು ಹಗಲುವನು ಕಳೆದು, ಪೂಜೆಯನು ಪೂಜಿಸಲು ಬೇಕು ಕಂಡಾ, ಇಂತಪ್ಪ ಪೂಜೆಯನು ಪೂಜಿಸುವರ, ಎನಗೆ ನೀ ತೋರಾ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಮನಶುದ್ಧವಾಗಿ ಮಜ್ಜನಕ್ಕೆರೆದರೆ ಭಾವ ಮತ್ತೇಕಯ್ಯಾ ? ಪತ್ರ ಪುಷ್ಪ ರಂಗವಲ್ಲಿಯನಿಕ್ಕಲೇನು, ಭಿತ್ತಿಯ ಚಿತ್ತಾರವೆ ? ಅವರು ಕಾಣಬೇಕು, ಇವರು ಕಾಣಬೇಕೆಂಬ ಭ್ರಮೆಯ ಭ್ರಮಿತರು ಅಂಗಹೀನರು. ಮನದಂಗವನಗಲರು, ಲಿಂಗ ಮತ್ತೆಲ್ಲಿಯದೋ ? ಸದಮದವಳಿದು ನಿಜವನರಿದಡೆ ಲಿಂಗಕ್ಕೆ ಪೂಜೆ ಕಂಡಾ, ಕೂಡಲಚೆನ್ನಸಂಗಯ್ಯ ಸಾಹಿತ್ಯನಾಗಿಹನು.
--------------
ಚನ್ನಬಸವಣ್ಣ
ನಿನ್ನ ಜನ್ಮದ ಪರಿಭವವ ಮರದೆಯಲ್ಲಾ ಮನವೆ, ಲಿಂಗವ ನಂಬು ಕಂಡಾ ಮನವೆ, ಜಂಗಮವ ನೆರೆ ನಂಬು ಕಂಡಾ, ಎಲೆ ಮನವೆ, ಕೂಡಲಸಂಗಮದೇವರ ಬೆಂಬತ್ತು ಕಂಡಾ, ಎಲೆ ಮನವೆ.
--------------
ಬಸವಣ್ಣ
ಎನ್ನ ಈ ಸಂಸಾರದ ಬಾಳುವೆ ನೆಲೆಯಿಲ್ಲ ಕಂಡಾ ! ಆದಡೆ, ಶಿವನೆ ನೀನು ಕಾಡುವ ಕಾಟ ನೆಲೆಯಿಲ್ಲ. ಸಂಸಾರದ ಕೂಡೆ ಕಾಡುವುದು ಲಯ. ಇಂತೀ ಎರಡೂ ಲಯವಾದಡೆ ನಾನು ನೀನೂ ಕೂಡಿ ನಿತ್ಯರಾಗಿ ಸುಖಿಯಿಸುವ, ಸಕಳೇಶ್ವರದೇವಾ.
--------------
ಸಕಳೇಶ ಮಾದರಸ
ಉರಗನ ಫಣಾಮಣಿಯ ಬೆಳಗನರಿ ಕಂಡಾ. ಉರವಣಿಸಿ ಮೇಲಕ್ಕೆ ಹಾರುವ ಹದ್ದಿನ ಪರಿಯನರಿ ಕಂಡಾ. ಸರಸ್ವತಿ ಸಿರಿಯೊಡನೇಕಾಂತದಲ್ಲಿಹ ಪರಿಯನರಿ ಕಂಡಾ. ಹರಿಯಜರುದ್ರರ ಕರ್ಮವನಳಿದ ಪರಿಯನರಿ ಕಂಡಾ. ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ, ತಾನೆಂದರಿ ಕಂಡಾ.
--------------
ಸ್ವತಂತ್ರ ಸಿದ್ಧಲಿಂಗ
ಮಾತಿನ ಮಾತಿಂಗೆ ನಿನ್ನ ಕೊಂದಹರೆಂದು ಎಲೆ ಹೋತೇ ಅಳು, ಕಂಡಾ ! ವೇದವನೋದಿದವರ ಮುಂದೆ ಅಳು, ಕಂಡಾ ! ಶಾಸ್ತ್ರ ಕೇಳಿದವರ ಮುಂದೆ ಅಳು, ಕಂಡಾ ! ನೀನತ್ತುದಕ್ಕೆ ತಕ್ಕುದ ಮಾಡುವ ಕೂಡಲಸಂಗಮದೇವ.
--------------
ಬಸವಣ್ಣ
ರೂಪುವಿರಹಿತ ಲಿಂಗ ಕಂಡಾ ! ಗುರುವುಳ್ಳನ್ನಕ್ಕ ಶಿಷ್ಯನಲ್ಲಾ, ಲಿಂಗವುಳ್ಳನ್ನಕ್ಕ ಜಂಗಮವಲ್ಲಾ, ಪ್ರಸಾದವುಳ್ಳನ್ನಕ್ಕ ಭಕ್ತನಲ್ಲಾ. ಲಿಂಗೈಕ್ಯನಾದಡೆ; ಸ್ಥಾವರವಿರಹಿತ ಶರಣಭರಿತನಾಗಿರಬೇಕು. ಕಾಯಕ್ಕೆ ಸಾಹಿತ್ಯವೆಲ್ಲಿಯಾದಡೆಯು ಉಂಟು ಆತ್ಮಸಾಹಿತ್ಯವಪೂರ್ವ ನೋಡಾ ! ಆಚಾರ[ಸಾಹಿತ್ಯ]ವೆ ಲೋಕ, ಅನಾಚರ[ಸಾಹಿತ್ಯ]ವೆ ಶರಣ ಇದು ಕಾರಣ ಕೂಡಲಚೆನ್ನಸಂಗಯ್ಯಾ ಅನಾಚಾರಗಲ್ಲದೆ ಪ್ರಸಾದವಿಲ್ಲ.
--------------
ಚನ್ನಬಸವಣ್ಣ
ಅಂಕ ಕಂಡಾ, ಕೋಲಾಸೆ ಮತ್ತೇಕಯ್ಯಾ ಲೆಂಕ ಕಂಡಾ, ಪ್ರಾಣದಾಸೆ ಮತ್ತೇಕಯ್ಯಾ ಭಕ್ತ ಕಂಡಾ, ತನುಮನಧನದಾಸೆ ಮತ್ತೇಕಯ್ಯಾ ನಿಮ್ಮ ಅಂಕೆಗೆ ಝಂಕೆಗೆ ಶಂಕಿತನಾದಡೆ ಎನ್ನ ಲೆಂಕತನಕ್ಕೆ ಹಾನಿ ಕೂಡಲಸಂಗಮದೇವಾ.
--------------
ಬಸವಣ್ಣ
ಕಾಮಿತವಿಲ್ಲ ಕಲ್ಪಿತವಿಲ್ಲ ನಾಮಸೀಮೆಯೆಂಬುದಿಲ್ಲ. ಭಾವಿಸಲಿಲ್ಲ ಲಕ್ಷಿಸಲಿಲ್ಲ ರೂಹಿಸಲಿಲ್ಲ. ವಾಙ್ಮನಾತೀತವೆಂದಲ್ಲಿ ನೆನೆಯಲಿಲ್ಲ. ಅತ್ಯತಿಷ್ಠದ್ದಶಾಂಗುಲವೆಂದಲ್ಲಿ ಲಕ್ಷಿಸಲಿಲ್ಲ. ಸರ್ವಗೌಪ್ಯ ಮಹಾದೇವಾಯೆಂದಲ್ಲಿ ರೂಹಿಸಲಿಲ್ಲ. ಇಲ್ಲ ಇಲ್ಲ ಎನಲಿಲ್ಲ ಅಲ್ಲಿಯೇ ನಿರ್ಲೇಪವಾದ ಸೌರಾಷ್ಟ್ರ ಸೋಮೇಶ್ವರಲಿಂಗವ ಕಂಡಾ.
--------------
ಆದಯ್ಯ
ಕೇಳು ಕೇಳೆನ್ನ ಭಾಷೆ, ಅರಿದು ಕಂಡಾ ಅವ್ವಾ, ನಲ್ಲನೊಮ್ಮೆ ತೋರಿದಡೆ ಎನ್ನ ಸರಿಹರಿ ನೋಡಿದೆ ಅವ್ವಾ. ಕಪಿಲಸಿದ್ಧಮಲ್ಲಿನಾಥ ರೂಪಂಬಿಟ್ಟು ಅಗಮ್ಯನಾದಡೆ ಅಗಮ್ಯ ರೂಪಂಬಿಡಿಸಿ ಹಿಡಿವೆನೆ ಅವ್ವಾ.
--------------
ಸಿದ್ಧರಾಮೇಶ್ವರ
ಇನ್ನಷ್ಟು ... -->