ಅಥವಾ

ಒಟ್ಟು 7 ಕಡೆಗಳಲ್ಲಿ , 4 ವಚನಕಾರರು , 5 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಒಡಲುಗೊಂಡು ಹುಟ್ಟಿದ ಘಟ್ಟಕ್ಕೆ ಅಷ್ಟೋತ್ತರಶತವ್ಯಾಧಿ. ಅದಕ್ಕೆ ನಾನಾ ಔಷಧಿಯ ತಂದು ಹೊರೆವರು, ಆ ಪರಿಯ ನಾನದ ಹೊರಿಯೆನು. ಅದೇನು ಕಾರಣವೆಂದೆಡೆ : ಭವರೋಗವೈದ್ಯ, ಭವಹರನೆಂಬ ಬಿರಿದು ನಿಮ್ಮದಾಗಿ. ಇದು ಕಾರಣ ಕೂಡಲಸಂಗಮದೇವಾ, ನಿಮ್ಮ ಪುರಾತನರ ಪ್ರಸಾದವಲ್ಲದೆ ಕೊಂಡಡೆ ನಿಮ್ಮಾಣೆ.
--------------
ಬಸವಣ್ಣ
ವೈದ್ಯವೆಂದು ಮಾಡುವಲ್ಲಿ ನಾನಾಮೂಲಿಕೆ, ವನದ್ರವ್ಯ ಸಹ ಮುಂತಾಗಿ, ಲವಣ, ಪಾಷಾಣ, ಲೋಹ, ಪಂಚಸಿಂಧೂರಂಗಳಿಂದ ರಸ ದ್ರವ್ಯ ಮುಂತಾದ ಸಾರಂಗಳ ಕ್ರಮಂಗಳಲ್ಲಿ ಸರ ಸಂದಾನ ವಿಹಂಗ ಮೃಗ ನರ ಮತ್ತಿವರೊಳಗಾದ ನಾನಾ ಜೀವಂಗಳ ನಿಮಿತ್ಯವ ಪ್ರಮಾಣಿಸಿ, ತನ್ನಾತ್ಮಸಿದ್ಧಿಯಾಗಿ, ತಾ ಮಾಡಿದ ಔಷಧ ಪ್ರಸಿದ್ಧವಾಗಿ, ಇಂತಿವ ಪ್ರಮಾಣಿಸಿಕೊಂಡು, ಇದರ ರುಜೆಯ ಪರಿಹರಿಸಿದೆನೆಂಬಲ್ಲಿ, ಅವನ ದೃಷ್ಟಿ ಮುಟ್ಟಿ, ಸತ್ವ ಸಮಾಧಾನ ಅವಗಡಿಸಿದ ವ್ಯಾಧಿಯ ಚಿತ್ತವನರಿದು, ವೈದ್ಯವ ಲಕ್ಷಿಸಬೇಕು. ಅವನ ಶರೀರದ ಕಟ್ಟಳೆಯನರಿದು, ತನ್ನ ಔಷಧಿಯ ದೃಷ್ಟವ ಪ್ರಮಾಣಿಸಿ, ಅವನಂಗದ ಪೃಥ್ವಿಗುಣ, ಅಗ್ನಿಗುಣ, ವಾಯುಗುಣ, ಆಕಾಶಗುಣ, ಇಂತೀ ಪಂಚಗುಣ ಕರತಳನಾಡಿಯಲ್ಲಿದು ಆಡುವ ಐದು ಜೀವದ ಗುಣಮಂ ತಿಳಿದು, ಷಡಾಧಾರಂಗಳ ಸ್ವಸ್ಥಾನಮಂ ಮುಟ್ಟಿ ನೋಡಿ, ಆ ಮನ ವಿರೋಚನಕ್ಕೆ ಪ್ರಮಾಣದಲ್ಲಿ ಪ್ರಮಾಣಿಸಿ, ಸುಮನ ಸುಗತಿಯಲ್ಲಿ ಪಿಂಡ ಪ್ರಾಣಾರೋಗ್ಯದಿಂದ ರುಜೆಯ ಸಂಬಂಧವ ಮುರಿದವ ಪಂಡಿತನಪ್ಪ. ಅದರಂದವ ತಿಳಿದು ಬಂದೆ, ಸರ್ವಾಂಗಲಿಂಗಿಗಳಿಗೆ ಪಂಡಿತನಾಗಿ, ಮೂರ ಮುರಿದು, ಆರನರದು, ಏಳ ಕಿತ್ತು, ಎಂಟು ಗಂಟನಿಕ್ಕಿ, ಈರಾರ ಮಾರಿ, ಹದಿನಾರ ವೇಧಿಸಿ, ಇಪ್ಪತ್ತೈದು ನಷ್ಟವಮಾಡಿ, ಮುೂವತ್ತಾರ ತೂರಿ, ಗಾರುಮಾಡಿ, ಐವತ್ತೆರಡರ ಉಲುಹಿನ ಬಲೆಯ ಹರಿದು, ಸಿಂಧೂರ ಬಂದಿದೆ ಕೊಳಬಲ್ಲಡೆ ಕೊಳಬಾರದೆ ? ಕೊಂಡಡೆ ತ್ರಿವಿಧದ ತೊಟ್ಟು ಬಿಟ್ಟು, ಭವಮಾಲೆಯ ಕಟ್ಟಿದ ಕ್ರಮ ಒಡೆದು, ವಸ್ತುವಿನ ನಿಜನಿಳಯದ ಬಟ್ಟೆಯ ಹೋಹೆ. ಇದು ದೃಷ್ಟ, ಪ್ರಮಥರ ಪ್ರಸನ್ನ ಸಾಕ್ಷಿ. ಎನ್ನ ವೈದ್ಯದ ಕ್ರಮ ಸರ್ವವಿಕಾರದ ಭವಹರಿವ ತೆರ, ಮರುಳಶಂಕರಪ್ರಿಯ ಸಿದ್ಧರಾಮೇಶ್ವರಲಿಂಗ ವೈದ್ಯ ವೈದ್ಯನಾದ.
--------------
ವೈದ್ಯ ಸಂಗಣ್ಣ
ಅಷ್ಟೋತ್ತರಶತವ್ಯಾಧಿಗಳ ಧರಿಸಿಕೊಂಡಿಪ್ಪುದು ಆತ್ಮನೊ, ಘಟನೊ ? ಆತ್ಮನೆಂದಡೆ ಸಾಯದು ಚಿತ್ತ , ಘಟವೆಂದಡೆ ಆತ್ಮನಿಲ್ಲದೆ ಅರಿಯದು ದೇಹ. ಇಂತೀ ಒಂದ ಕಳೆದು, ಒಂದಕ್ಕೆ ಔಷಧಿಯ ಕೊಟ್ಟಿಹನೆಂದಡೆ, ಆ ಎರಡರ ಸಂಗದಿಂದ ರುಜೆ ಪ್ರಮಾಣು. ಇಂತೀ ಶರೀರಾತ್ಮ ಆದಿಯಾಗಿ ಬಂದ ವ್ಯಾಧಿಗೆ ನಾನೊಂದು ಔಷಧಿಯ ಭೇದವ ಹೇಳಿಹೆ. ಆಧಾರದಲ್ಲಿಪ್ಪ, ಮೂಲಿಕೆಯ ಬೇರನರದು, ಐದಿಂದ್ರಿಯವ ಕೂಡಿಕೊಂಡು. ಮೂರು ಮುಟ್ಟದ ತಟ್ಟೆಯಲ್ಲಿ ಬೇಗ ತೆಗೆದುಕೊಳ್ಳಿ. ಆ ಮದು ವಾಂತಿಗೆ ಸಲ್ಲ, ವಿರೋಚನವಿಲ್ಲ. ನಾನಾ ವೈದ್ಯರ ಭೇದಗಾಹಿನ ಕ್ರಮವಲ್ಲ. ಇದು ಸಿದ್ಧಾಂತ ಮೂಲಿಕೆ, ಇದ ಸಾಧಿಸಿಕೊಳ್ಳಿ. ಎಂದೆಂದಿಗೂ ರುಜೆಯಿಲ್ಲ, ಸಂದುಸಂಶಯವಿಲ್ಲ, ಮರುಳಶಂಕರಪ್ರಿಯ ಸಿದ್ಧರಾಮೇಶ್ವರಲಿಂಗದಲ್ಲಿ.
--------------
ವೈದ್ಯ ಸಂಗಣ್ಣ
ಔಷಧಿಯ ಕೊಂಡು ಬಿಸಿಹಾಲು ಕುಡಿಯದೆ ಹಸಿಹಾಲವ ಕುಡಿದು ಮಹಿಷಾಸುರನ ಮಗನಾಗಿರ್ಪರು, ನಾನು ಔಷಧಿಯ ಕೊಂಡು ಹಸಿಹಾಲು ಕುಡಿಯದೆ ಬಿಸಿಹಾಲು ಕುಡಿದು ಹಿಂಗಿ ನುಂಗಿ ಉಸುರದೆ ಕಾಯಕವ ಮಾಡುತ್ತಿರ್ಪೆನು ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಶ್ರೀಗುರು ಕರುಣಿಸಲೊಡನೆ ಬಿಟ್ಟಿತ್ತು ಮಾಯೆ. ಶ್ರೀಗುರು ಕರುಣಿಸಲೊಡನೆ ಬಿಟ್ಟಿತ್ತು ಮರವೆ. ಶ್ರೀಗುರು ಕರುಣಿಸಲೊಡನೆ ಬಿಟ್ಟಿತ್ತು ಪ್ರಪಂಚು. ಶ್ರೀಗುರು ಕರುಣಿಸಲೊಡನೆ ಬಿಟ್ಟಿತ್ತು ಎನ್ನ ಸುತ್ತಿರ್ದ ಮಾಯಾಪಾಶ. ಅದೆಂತೆಂದಡೆ: ``ಗುಶಬ್ದಸ್ತ್ವಂಧಕಾರಃ ಸ್ಯಾತ್ ರುಶಬ್ದಸ್ತು ನಿರೋಧಕಃ ಅಂಧಕಾರನಿರೋಧತ್ವಾತ್ ಗುರುರಿತ್ಯ್ಕಭಿಧೀಯತೇ||' ಎಂದುದಾಗಿ, ಇದನರಿದು, ಕಣ್ಣಿಂಗೆ ಸತ್ತ್ವ ರಜ ತಮವೆಂಬ ತಿಮಿರ ಕವಿದು ಅಜ್ಞಾನವಶನಾದಲ್ಲಿ ಸದ್ಗುರುವನುಪಧಾವಿಸಿ ಕಣ್ಗೆ ಔಷಧಿಯ ಬೇಡಲೊಡನೆ ``ಅಜ್ಞಾನತಿಮಿರಾಂಧಸ್ಯ ಜ್ಞಾನಾಂಜನಶಲಾಕಯಾ ಚಕ್ಷುರುನ್ಮೀಲಿತಂ ಯೇನ ತಸ್ಮೆ ೈ ಶ್ರೀಗುರುವೇ ನಮಃ' ಎಂದುದಾಗಿ, ಶಿವಜ್ಞಾನವೆಂಬ ಅಂಜನವನೆಚ್ಚಿ, ಎನ್ನ ಕಣ್ಣ ಮುಸುಂಕಿದ ಅಜ್ಞಾನ ಕಾಳಿಕೆಯ ಬೇರ್ಪಡಿಸಿ ತನ್ನ ಶ್ರೀಪಾದವನರುಹಿಸಿಕೊಂಡನಯ್ಯಾ, ಕಪಿಲಸಿದ್ಧಮಲ್ಲಿನಾಥಾ.
--------------
ಸಿದ್ಧರಾಮೇಶ್ವರ
-->