ಅಥವಾ

ಒಟ್ಟು 6 ಕಡೆಗಳಲ್ಲಿ , 5 ವಚನಕಾರರು , 6 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಕ್ಕಿ ಬೇಳೆ ಬೆಲ್ಲ ಉಪ್ಪು ಮೆಣಸು ಅಡಕೆ ಫಲ ರಸ ದ್ರವ್ಯ ಮುಂತಾದ ದ್ರವ್ಯಕ್ಕೆ ವ್ರತವೊ ? ಮುಟ್ಟುವ ತಟ್ಟುವ ಸೋಂಕುವ ಚಿತ್ತಕ್ಕೆ ವ್ರತವೊ ? ಇವು ಬಾಹ್ಯದಲ್ಲಿ ಮಾಡುವ ಸೌಕರಿಯವಲ್ಲದೆ ವ್ರತಕ್ಕೆ ಸಲ್ಲ. ವ್ರತವಾವುದೆಂದಡೆ ತನ್ನಯ ಸ್ವಪ್ನದಲ್ಲಿ ತನಗಲ್ಲದುದ ಕಂಡಡೆ, ತಾ ಮುಟ್ಟದುದ ಮುಟ್ಟಿದಡೆ, ತಾ ಕೊಳ್ಳದುದ ಕೊಂಡಡೆ, ಆ ಸೂಕ್ಷ್ಮತನುವಿನಲ್ಲಿ ಆ ತನುವಂ ಬಿಟ್ಟು ನಿಂದುದು ವ್ರತ. ಸ್ಥೂಲತನುವಿನಲ್ಲಿ ಸರ್ವರ ನಿಂದೆಗೊಡಲಾಗದೆ, ಮಾಡಿಕೊಂಡ ನೇಮಕ್ಕೆ ಕೇಡುಬಂದಲ್ಲಿ ಆ ಅಂಗಕ್ಕೆ ಓಸರಿಸದೆ ನಿಂದುದು ಆಚಾರ. ಇಂತೀ ಅಂತರಂಗದಲ್ಲಿ ವ್ರತ, ಬಹಿರಂಗದಲ್ಲಿ ಆಚಾರ, ಇಂತೀ ಉಭಯ ಸಿದ್ಭವಾಗಿ ನಡೆವುದೆ ವ್ರತ ಆಚಾರz ಇಂತಿವನರಿದು ಮರೆದಲ್ಲಿ, ತಾ ಮಾಡಿಕೊಂಡ ಕುತ್ತಕ್ಕೆ ಹಾಡಿ ಮದ್ದನರೆದಂತೆ, ಜಗಕ್ಕೆ ಭಕ್ತನಾಗಿ ಆತ್ಮಂಗೆ ಅನುಸರಣೆಯಾದಲ್ಲಿ ಆಚಾರವೆ ಪ್ರಾಣವಾದ ರಾಮೇಶ್ವರಲಿಂಗಕ್ಕೆ ಸಲ್ಲದ ನೇಮ.
--------------
ಅಕ್ಕಮ್ಮ
ಸರ್ವವನೂ ಕಂಡು ಕಂಠಣಿಸದೆ ಓಸರಿಸದೆ ಒಳಕೊಂಡಿಪ್ಪುದದಕೆ ಎಂತಿರಬೇಡಾ ಹಿರಿಯರ ಮನ? ಮನವಿಚ್ಛಂದವಾಗದದೊಂದೆಯಂದದಲ್ಲಿಪ್ಪಂತಪ್ಪ ನಿಮ್ಮದೊಂದು ಸಮತಾಗುಣ ಎನ್ನನೆಂದು ಬಂದು ಹೊದ್ದಿಪ್ಪುದು ಹೇಳಾ, ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
ತನುವಿಂಗೆ ಕ್ರೀ, ಆತ್ಮಂಗೆ ವ್ರತ. ಆ ವ್ರತಕ್ಕೆ ನಿಶ್ಚಯ ಕರಿಗೊಂಡು ಬಾಹ್ಯದ ಕ್ರೀ, ಅರಿವಿನ ಆಚರಣೆ, ಭಾಷೆ ಓಸರಿಸದೆ ನಿಂದಾತನೆ ಆಚಾರವೆ ಪ್ರಾಣವಾದ ರಾಮೇಶ್ವರಲಿಂಗವು ತಾನೆ.
--------------
ಅಕ್ಕಮ್ಮ
ತನು ಮುಟ್ಟುವುದಕ್ಕೆ ಮುನ್ನವೇ ಮನ ಶೀಲವಾಗಿರಬೇಕು, ಮನ ಮುಟ್ಟುವುದಕ್ಕೆ ಮುನ್ನವೆ ಅರಿವು ಶೀಲವಾಗಿರಬೇಕು, ಅಂಗ ಮನ ಅರಿವು ವ್ರತಾಂಗದಲ್ಲಿ ಕರಿಗೊಂಡು ಆಚಾರಕ್ಕೆ ಅನುಸರಣೆಯಿಲ್ಲದೆ, ಆತ್ಮವ್ರತ ತಪ್ಪಿದಲ್ಲಿ ಓಸರಿಸದೆ, ಆ ವ್ರತದ ಅರಿವು ಹೆರೆಹಿಂಗದೆ ಇಪ್ಪಾತನಂಗವೆ ಏಲೇಶ್ವರಲಿಂಗದಂಗ.
--------------
ಏಲೇಶ್ವರ ಕೇತಯ್ಯ
ಹಲುಬಿ ದಯದ ದಾಸೋಹವ ಮಾಡುವ ನಿರಾಸ್ಕರರು ನೀವು ಕೇಳಿರೊ. ಕೇಶ ಜಡೆ ಬೋಳಿನವರ ಕಂಡು ಓಸರಿಸದೆ ಮಾಡುವುದು ದಾಸೋಹ. ಅವರಲ್ಲಿ ಆಸೆ ನಿರಾಸೆಯ ನೋಡದೆ ಸರ್ವೇಶ್ವರನ ಶರಣರಿಗೆ ಮಾಡುವುದೆ ದಾಸೋಹ. ಇಂತಲ್ಲದಿರ್ದಡೆ ಅವನ ಮನೆಯ ವೇಶಿಯ ಮನೆಯಹೊಕ್ಕು ಹೊರಟಂತಾಯಿತ್ತು ಕಾಣಾ ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ ಶಿವಸಾಕ್ಷಿಯಾಗಿ.
--------------
ಕುಷ್ಟಗಿ ಕರಿಬಸವೇಶ್ವರ
ತನುಸ್ವಾಯತವಾಗಿ ತನುವಿನ ಹಂಗಿನ ಗುರುವೆನ್ನದೆ, ಗುರುಸ್ವಾಯತವಾಗಿ ಗುರುವಿನ ಹಂಗಿನ ತನುವೆನ್ನದೆ, ತನ್ನೊಳಗೆ ಗುರು ಐಕ್ಯವೆನ್ನದೆ, ಗುರುವಿನೊಳಗೆ ತಾನೈಕ್ಯವೆನ್ನದೆ, ಅವಿರಳ ಸಂಭಾವನೆಯಿಂದ ಸುಬುದ್ಧಿ ನಿಷೆ* ಅಣುಮಾತ್ರ ಓಸರಿಸದೆ, ರಸಮುಖಾರ್ಪಿತ ತೃಪ್ತನಾಗಿ, ಕಾಯಾಧಾರಲಿಂಗೋಪಜೀವಿಯಾಗಿ, ಸ್ಥಾವರದಂತೆ ನಿಬ್ಬೆರಗಾಗಿ, ತನು ಸೋಂಕಿ ತನು ನಷ್ಟವಾಗಿ ಒಂದು ಮುಖಮಾರ್ಗವಲ್ಲದೆ ಮತ್ತೊಂದ ಮೆಟ್ಟದಿರಬಲ್ಲಡಾತ ಮಹೇಶ್ವರನಯ್ಯಾ ಕೂಡಲಚೆನ್ನಸಂಗಯ್ಯಾ.
--------------
ಚನ್ನಬಸವಣ್ಣ
-->