ಅಥವಾ

ಒಟ್ಟು 7 ಕಡೆಗಳಲ್ಲಿ , 2 ವಚನಕಾರರು , 7 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಈ ಪರಂಜ್ಯೋತಿ ಪ್ರಕಾಶವಾದ ಬೆಳಗ ನೋಡಿ ನೋಟವ ಮರೆದೆ, ಕೂಡಿ ಕೂಟವ ಮರೆದೆ. ತಾನು ತಾನಾಗಿಪ್ಪ ಮಹಾಬೆಳಗಿನಲ್ಲಿ ನಾನು ಓಲಾಡಿ ಸುಖಿಯಾದೆನಯ್ಯಾ, ಚೆನ್ನಮಲ್ಲೇಶ್ವರನ ಕರುಣವಿಡಿದು ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ.
--------------
ಹಡಪದಪ್ಪಣ್ಣಗಳ ಪುಣ್ಯಸ್ತ್ರೀ ಲಿಂಗಮ್ಮ
ಮಚ್ಚಬೇಡ, ಮರಳಿ ನರಕಕ್ಕೆರಗಿ ಕರ್ಮಕ್ಕೆ ಗುರಿಯಾಗಬೇಡ. ನಿಶ್ಚಿಂತವಾಗಿ ನಿಜದಲ್ಲಿ ಚಿತ್ತವ ಸುಯಿದಾನವಮಾಡಿ, ಲಿಂಗದಲ್ಲಿ ಮನವ ಅಚ್ಚೊತ್ತಿದಂತಿರಿಸಿ ಕತ್ತಲೆಯನೆ ಕಳೆದು, ಬಚ್ಚಬರಿಯ ಬೆಳಗಿನೊಳಗೆ ಓಲಾಡಿ ಸುಖಿಯಾಗೆಂದರು ನಮ್ಮ ಅಪ್ಪಣ್ಣಪ್ರಿಯ ಚೆನ್ನಬಸವಣ್ಣ.
--------------
ಹಡಪದಪ್ಪಣ್ಣಗಳ ಪುಣ್ಯಸ್ತ್ರೀ ಲಿಂಗಮ್ಮ
ತನುವೆಂಬ ಹುತ್ತದಲ್ಲಿ ಮನವೆಂಬ ಸರ್ಪ ಹೆಡೆಯನುಡುಗಿಕೊಂಡಿರಲು ಜ್ಞಾನಶಕ್ತಿ ಬಂದು ಎಬ್ಬಿಸಲು, ಉರಿ ಭುಗಿಲೆನುತ್ತ ಹೆಡೆಯನೆತ್ತಿ ಊರ್ದ್ವಕ್ಕೇರಲು, ಅಷ್ಟಮದವೆಲ್ಲ ಹಿಟ್ಟುಗುಟ್ಟಿದವು; ಕರಣಂಗಳೆಲ್ಲ ಉರಿದುಹೋದವು. ಇದ್ದ ಶಕ್ತಿಯನೆ ಕಂಡು, ಮನ ನಿಶ್ಚಯವಾದುದನೆ ನೋಡಿ, ಪಶ್ಚಿಮದ ಕದವ ತೆಗೆದು, ಬಟ್ಟಬಯಲ ಬೆಳಗಿನೊಳಗೆ ಓಲಾಡಿ ಸುಖಿಯಾದೆನಯ್ಯಾ ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ.
--------------
ಹಡಪದಪ್ಪಣ್ಣಗಳ ಪುಣ್ಯಸ್ತ್ರೀ ಲಿಂಗಮ್ಮ
ಶುದ್ಧ ಕಾನನದೊಳಗೆ ಶುದ್ಧವಾಯುವು ಬೀಸಿ ಪ್ರಸಿದ್ಧ ಕಮಲದಲ್ಲಿ ಬಹು ಛಾಯದ ಹಲವು ಪರಿಯಲ್ಲಿ ಎಸೆವ ತೆರಹಿಲ್ಲಹ ಗಮನ ಕುರುಹಿಂಗೆ ಬಾರಹ ಶೂನ್ಯಾಂಗನ ಸ್ವಾನುಭಾವದ ಮನೆಯ ನಾನೊಡನೆ ಓಲಾಡಿ ನೀನು ನಾನಾದೆ ಕಪಿಲಸಿದ್ಧಮಲ್ಲೇಶ್ವರಾ.
--------------
ಸಿದ್ಧರಾಮೇಶ್ವರ
ಏನೇನು ಇಲ್ಲದಾಗ ನೀವಿಲ್ಲದಿದ್ದಡೆ ನಾನಾಗಬಲ್ಲೆನೆ ಅಯ್ಯಾ ? ಆದಿ ಅನಾದಿ ಇಲ್ಲದಂದು ನೀವಿಲ್ಲದಿದ್ದಡೆ ನಾನಾಗಬಲ್ಲೆನೆ ಅಯ್ಯಾ ? ಮುಳುಗಿ ಹೋದವಳ ತೆಗೆದುಕೊಂಡು, ನಿಮ್ಮ ತೊತ್ತಿನ ತೊತ್ತಿನ ಪಡಿದೊತ್ತಿನ ಮಗಳೆಂದು ರಕ್ಷಣೆಯ ಮಾಡಿದ ಶಿಶುವಾದ ಕಾರಣ ಹಡದಪ್ಪಣ್ಣನೆ ಎನ್ನ ಕರಸ್ಥಲಕ್ಕೆ ಲಿಂಗವಾಗಿ ಬಂದು ನೆಲೆಗೊಂಡನು. ಚೆನ್ನಮಲ್ಲೇಶ್ವರನೆ ಎನ್ನ ಮನಸ್ಥಲಕ್ಕೆ ಪ್ರಾಣವಾಗಿ ಬಂದು ಮೂರ್ತಗೊಂಡನು. ಆ ಕರಸ್ಥಲದ ಲಿಂಗವನರ್ಚಿಸಿ ಪೂಜಿಸಿ ವರವ ಬೇಡಿದಡೆ ತನುವ ತೋರಿದನು; ಆ ತನುವಿಡಿದು ಮಹಾಘನವ ಕಂಡೆ; ಆ ಘನವಿಡಿದು ಮನವ ನಿಲಿಸಿದೆ. ಮನವ ನಿಲಿಸಿ ನೋಡುವನ್ನಕ್ಕ ಪ್ರಾಣದ ನೆಲೆಯನರಿದೆ; ಪ್ರಣವವನೊಂದುಗೂಡಿದೆ. ಕಾಣಬಾರದ ಕದಳಿಯನೆ ಹೊಕ್ಕು ನೂನ ಕದಳಿಯ ದಾಂಟಿದೆ. ಜ್ಞಾನಜ್ಯೋತಿಯ ಕಂಡೆ. ತಾನುತಾನಾಗಿಪ್ಪ ಮಹಾಬೆಳಗಿನಲ್ಲಿ ಓಲಾಡಿ ಸುಖಿಯಾದೆನಯ್ಯಾ, ಚೆನ್ನಮಲ್ಲೇಶ್ವರನ ಕರುಣದ ಶಿಶುವಾದ ಕಾರಣದಿಂದ ಅಪ್ಪಣ್ಣಪ್ರಿಯ ಚೆನ್ನಬಸವಣ್ಣ.
--------------
ಹಡಪದಪ್ಪಣ್ಣಗಳ ಪುಣ್ಯಸ್ತ್ರೀ ಲಿಂಗಮ್ಮ
ಅಯ್ಯಾ, ನಾ ಮರ್ತ್ಯದಲ್ಲಿ ಹುಟ್ಟಿ ಕಷ್ಟಸಂಸಾರಿ ಎನಿಸಿಕೊಂಡೆ. ಕತ್ತಲೆಯಲ್ಲಿ ಮುಳುಗಿ ಕರ್ಮಕ್ಕೆ ಗುರಿಯಾಗುತ್ತಿದ್ದಡೆ, ಹೆತ್ತ ತಾಯಿ ಎಂಬ ಗುರುಸ್ವಾಮಿ ಎನ್ನ ಕೊರಳಿಗೆ ಗಂಡನೆಂಬ ಲಿಂಗವ ಕಟ್ಟಿದನು. ತಂದೆಯೆಂಬ ಜಂಗಮಲಿಂಗವು ಎನ್ನ ಪ್ರಾಣಕ್ಕೆ ಪ್ರಸಾದವ ಊಡಿದನು. ಪ್ರಾಣಕ್ಕೆ ಪ್ರಸಾದವನೂಡಲಾಗಲೆ ಕತ್ತಲೆ ಹರಿಯಿತ್ತು; ಕರ್ಮ ಹಿಂಗಿತ್ತು ಮನ ಬತ್ತಲೆಯಾಯಿತ್ತು; ಚಿತ್ತ ಸುಯಿದಾನವಾಯಿತ್ತು ನಿಶ್ಚಿಂತವಾಯಿತ್ತು. ನಿಜವ ನೆಮ್ಮಿ ನೋಡುವನ್ನಕ್ಕ, ಎನ್ನ ಅತ್ತೆ ಮಾವರು ಅರತುಹೋದರು; ಅತ್ತಿಗೆ ನಾದಿನಿಯರು ಎತ್ತಲೋಡಿಹೋದರು, ಸುತ್ತಲಿರುವ ಬಂಧುಗಳೆಲ್ಲ ಬಯಲಾದರು. ಎನ್ನ ತಂದೆ ತಾಯಿ ಕಟ್ಟಿದ ಚಿಕ್ಕಂದಿನ ಗಂಡನ ನೋಡುವ ನೋಟ ಹೋಗಿ, ಎನ್ನ ಮನಕ್ಕೆ ಸಿಕ್ಕಿತ್ತು; ಅಂಗಲಿಂಗವೆಂಬ ಉಭಯವಳಿಯಿತ್ತು; ಸಂಗಸುಖ ಹಿಂಗಿತ್ತು. ಮಂಗಳದ ಮಹಾಬೆಳಗಿನಲ್ಲಿ ಓಲಾಡಿ ಸುಖಿಯಾದೆನಯ್ಯಾ ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ.
--------------
ಹಡಪದಪ್ಪಣ್ಣಗಳ ಪುಣ್ಯಸ್ತ್ರೀ ಲಿಂಗಮ್ಮ
ಆಧಾರವ ಬಲಿಯೆ ಬೇಗೆವರಿಯಿತ್ತು; ಕಿಚ್ಚು ಆವರಿಸಿ ಊರ್ದ್ವಕ್ಕೇರಿತ್ತು. ಸಾಸಿರದಳದ ಅಮೃತದ ಕೊಡ ಕಾಯಿತ್ತು. ಕಾಯ್ದ ಅಮೃತ ಉಕ್ಕಿ ತೊಟ್ಟಿಕ್ಕೆ, ಅಮೃತವನುಂಡು ಹಸಿವು ಕೆಟ್ಟಿತ್ತು; ತೃಷೆಯಡಗಿತ್ತು ನಿದ್ರೆಯರತಿತ್ತು; ಅಂಗಗುಣವಳಿಯಿತ್ತು ಲಿಂಗಗುಣ ನಿಂದಿತ್ತು ಸಂಗಸುಖ ಹಿಂಗಿತ್ತು. ಅಂಗಲಿಂಗವೆಂಬ ಉಭಯವಳಿದು, ಮಂಗಳ ಮಹಾಬೆಳಗಿನಲ್ಲಿಯೇ ಓಲಾಡಿ ಸುಖಿಯಾದೆನಯ್ಯಾ ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ.
--------------
ಹಡಪದಪ್ಪಣ್ಣಗಳ ಪುಣ್ಯಸ್ತ್ರೀ ಲಿಂಗಮ್ಮ
-->