ಅಥವಾ

ಒಟ್ಟು 3 ಕಡೆಗಳಲ್ಲಿ , 2 ವಚನಕಾರರು , 3 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಕಾಯದ ಕಣ್ಣಿನಲ್ಲಿ ನೋಡಿ ವಿಕಾರವಳಿದು ಸುಖಪಟ್ಟಣವ ಕಂಡೆ. ಆ ಪಟ್ಟಣದರಸಿಂಗೆ ಭಾವ ಕಾಲಿಲ್ಲ. ಪ್ರಧಾನಂಗೆ ಪಾರುಪತ್ಯಕ್ಕೆ ನುಡಿವಡೆ ಬಾಯಿಲ್ಲ. ತಳವಾರ ತಿರುಗುವುದಕ್ಕೆ ಕಣ್ಣಿಲ್ಲ. ಆ ಪಟ್ಟಣದಲ್ಲಿ ಮೂವರಿಗೆ ಕರ್ತನೊಬ್ಬ ಅರಸು. ಆ ಅರಸ ಕಣ್ಣಿನಲ್ಲಿ ಕಾಣಲಿಲ್ಲ, ಎಲ್ಲಿದ್ದಹರೆಂದು ಕೇಳಲಿಲ್ಲ. ಇದ್ದ ಠಾವಿಂಗೆ ಒಬ್ಬರೂ ಹೊದ್ದಲಿಲ್ಲ. ಅರಸಿನ ಆಜ್ಞೆ, ಬಲುಹ, ಓಲಗಕ್ಕೆ ತೆರಪಿಲ್ಲ. ಜೀವಿತಕ್ಕೆ ಅಡಹಿಲ್ಲ, ಎನ್ನ ಬಡತನವ ಇನ್ನಾರಿಗೆ ಹೇಳುವೆ? ಬಂಟರು ಸತ್ತರು, ಅರಸು ನಷ್ಟವಾದ. ಆ ಉಭಯದ ಬೇಧವ ನಾನರಿಯೆ, ನೀ ಹೇಳು. ಪುಣ್ಯಾರಣ್ಯದಹನ ಬ್ಥೀಮೇಶ್ವರಲಿಂಗ ನಿರಂಗಸಂಗ.
--------------
ಕೋಲ ಶಾಂತಯ್ಯ
ಹಂಸಪತಿ ಗರುಡಪತಿ ವೃಷಭಪತಿ ಮೊದಲಾದ ಸರ್ವಜೀವಾಧಿಪತಿ ದೇವರಾಯ ಮಹಾರಾಯನ ಅರಸುತನ ಹೊಸತು: ಓಲಗಕ್ಕೆ ಬಾರ, ಸಿಂಹಾಸನದಲ್ಲಿ ಕುಳ್ಳಿರ, ಸ್ತ್ರೀಲಂಪಟನಾಗಿ ಅಂತಃಪುರವ ಬಿಟ್ಟು ಹೊರವಂಡ. ಕಪ್ಪಕಾಣಿಕೆಯನೊಪ್ಪಿಸಿಕೊಂಬವರಿಲ್ಲ, ಗುರುವೆಂಬ ತಳವಾರನ ಆಜ್ಞೆ ಕೆಟ್ಟಿತ್ತು, ತೆರೆದ ಬಾಗಿಲ ಮುಚ್ಚುವರಿಲ್ಲ, ಮುಚ್ಚಿದ ಬಾಗಿಲ ತೆರೆವವರಿಲ್ಲ. ಹಂಪೆಯ ವಿರುಪಯ್ಯನ ಅರಸುತನ ಕೆಟ್ಟಿತ್ತು, ಭಕ್ತರೆಂಬವರಿನ್ನು ಬದುಕಲೇ ಬಾರದು.
--------------
ಅಗ್ಘವಣಿ ಹಂಪಯ್ಯ
ಊರ ಬಾರುಕನ ಬಾಗಿಲಲ್ಲಿ ಮಹಾರಾಜ ಕಾಯಿದೈದಾನೆ. ಅವನ ಓಲಗಕ್ಕೆ ಎಡೆತೆರಪಿಲ್ಲದೆ ಅವಸರವ ಕಾಯಿದೈದಾನೆ. ಆವ ಮನೆಮನೆಯ ಹೊಕ್ಕು ಬವಣೆಗೆ ಬಹ ಬಾರುಕನ ಭವಕ್ಕೊಳಗಾದನರಸು. ಒಡೆಯ ಬಂಟನಾದುದನರಿ, ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ.
--------------
ಕೋಲ ಶಾಂತಯ್ಯ
-->