ಅಥವಾ

ಒಟ್ಟು 12 ಕಡೆಗಳಲ್ಲಿ , 8 ವಚನಕಾರರು , 9 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಲೋಕದ ಡೊಂಕ ನೀವು ತಿದ್ದುವಿರಯ್ಯ ನಿಮ್ಮ (ತನುಮನದ) ಡೊಂಕ ತಿದ್ದಿ ತೀಡಿಕೊಳಲರಿಯದೆ. ಪುರಾತನರು, ನುಡಿದಂತೆ ನಡೆಯದವರೆಲ್ಲ, ಕಡು ಓದಿದ ಗಿಳಿ ತನ್ನ ಮಲವ ತಾ ತಿಂದಂತೆ. ನೆರೆಮನೆಯವರ ದುಃಖವ ಕೇಳಿ, ಗಡ್ಡ ಮೀಸೆ ಮುಂಡೆಯ ಬೋಳಿಸಿಕೊಂಡು (ಕಡೆಯಲ್ಲಿ) ಹೋಗಿ ಅಳುತಿಪ್ಪವರ ಕಂಡರೆ ಕೂಡಲಚೆನ್ನಸಂಗನ ಶರಣರು ನಗುತಿಪ್ಪರಯ್ಯಾ.
--------------
ಚನ್ನಬಸವಣ್ಣ
ಓದಿದ ಫಲ ಶಿವಲೆಂಕ ಮಂಚಣ್ಣಂಗಾಯಿತ್ತು. ಓದಿದ ಫಲ ಹಲಾಯುಧಂಗಾಯಿತ್ತು. ಓದಿದ ಫಲ ಮಲಯರಾಜಂಗಾಯಿತ್ತು. ಓದಿದ ಫಲ ಜನ್ಮವಳಿದವಂಗಾಯಿತ್ತು ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
ಓದಿದಡೇನು, ಕೇಳಿದಡೇನು, ಶಿವಪಥವನರಿಯದನ್ನಕ್ಕ ಓದಿತ್ತು ಕಾಣಿರೋ ಶುಕನು, ಶಿವಜ್ಞಾನವನರಿಯದನ್ನಕ್ಕ. ಓದಿದ ಫಲವು ಮಾದಾರ ಚೆನ್ನಯ್ಯಂಗಾುತ್ತು ಕೂಡಲಸಂಗಮದೇವಾ. 143
--------------
ಬಸವಣ್ಣ
ಓದಿದ ವೇದದಲ್ಲಿ ಏನಹುದಯ್ಯಾ ? ಓದಿಸಬಾರದಂಥ ಲಿಂಗಸ್ಥಲ. ಸಾಧಿಸಿದ ಶಾಸ್ತ್ರದಲೇನಹುದಯ್ಯಾ ? ಸಾಧ್ಯವಾಗದಂಥ ಜಂಗಮಸ್ಥಲ. ತರ್ಕಿಸಿದ ತರ್ಕದಲ್ಲಿ ಏನಹುದಯ್ಯಾ ? ತರ್ಕಕ್ಕಗೋಚರವಹಂಥ ಪ್ರಸಾದಿಸ್ಥಲ. ಓದು ವೇದಶಾಸ್ತ್ರ ತರ್ಕಕ್ಕಗೋಚರ ಕೂಡಲಚೆನ್ನಸಂಗಾ ನಿಮ್ಮ ಶರಣ.
--------------
ಚನ್ನಬಸವಣ್ಣ
ವೇದ ನಾಲ್ಕನು ಓದಿದಡೇನು ? ಶಾಸ್ತ್ರವ ನೆರೆ ಕೇಳಿದಡೇನು ? ಶಿವಜ್ಞಾನಹೀನರು ಬಲ್ಲರೆ ಭಕ್ತಿಯ ಪಥವನು ? ಅಲೋಡ್ಯಂ ಚ ಚತುರ್ವೇದೀ ಸರ್ವಶಾಸ್ತ್ರವಿಶಾರದಃ | ಶಿವತತ್ವಂ ನ ಜಾನಾತಿ ದರ್ವೀ ಪಾಕರಸಂ ಯಥಾ || ಕ್ಷೀರದೊಳಗಣ ಸಟ್ಟುಗ ಸವಿಸ್ವಾದುಗಳ ಬಲ್ಲುದೆ ? ಓದಿದ ನಿರ್ಣಯವ ನಮ್ಮ ಮಾದಾರ ಚೆನ್ನಯ್ಯ, ಮಡಿವಾಳಯ್ಯ, ಡೋಹರ ಕಕ್ಕಯ್ಯನವರು ಬಲ್ಲರು, ಬಸವಪ್ರಿಯ ಕೂಡಲಚೆನ್ನಸಂಗಮದೇವಾ.
--------------
ಸಂಗಮೇಶ್ವರದ ಅಪ್ಪಣ್ಣ
ಅರ್ಹನ್, ಬುದ್ಧ, ಚಾರ್ವಾಕ, ಮೀಮಾಂಸಕ, ನೀಲಪಟರೆಂಬವರು ಕಾಯದರುಶನಂಗಳಲ್ಲಿ ದೀಕ್ಷಿತರಾಗಿ ¸õ್ಞರ ಶಾಕ್ತೇಯ ವೈಷ್ಣವ ಗಾಣಾಪತ್ಯ ದರುಶನಂಗಳಂ ಹೊಕ್ಕು, ಒಡಲ ಮುಡುಹಂ ಸುಟ್ಟು, ಮುಟ್ಟಿಯನಿಟ್ಟು ಉಭಯಗೆಟ್ಟು ಶಿವಧ್ಯಾನವಿಲ್ಲದೆ ನರಕಕ್ಕಿಳಿದು ಅಧಮರಾಗಿ ಹೋಗಿ ಎಂದು ಹೇಳಿತ್ತೆಯಾ ವೇದ ? `ಶಿವಾರ್ಚನವಿಹೀನಂ ತು ಜನ್ಮಮೃತ್ಯೂನ ಮುಂಚತಃ' ಎಂದುದಾಗಿ ಮರಳಿ ಮರಳಿ ಜನ್ಮಕ್ಕೆ ಬಂದು ಮಾಡಿದ ಕರ್ಮದಿಂದ ನರಕಕ್ಕಿಳಿದು ಮಗ್ನರಾಗಹೇಳಿತ್ತೆಯಾ ವೇದ ? `ಓಂ ಅಪ್ರಶಿಖಾಯಾಂ ತ್ವಾಮಯಾಧನ್ಯ ಜೀವಾಗಮತ್ (?)' ಎಂದು ಹೇಳಿದ ಶ್ರುತ್ಯರ್ಥವನರಿಯದೆ ಹೋತನಂ ಕೊಂದು ಹೋಮಂಗಿಕ್ಕಿ ಚಾಂಡಾಲರಾಗ ಹೇಳಿತ್ತೆಯಾ ವೇದ ? ಶಿವಾರ್ಚಕಪದದ್ವಂದ್ವಯಜನಾದ್ಧಾರಣಾದಪಿ ಶಿವನಾಮ್ನಸ್ಸದಾಕಾಲಂ ಜಪಾದ್ವಿಪ್ರೋ ಭವಿಷ್ಯತಿ ಎಂಬರ್ಥವನರಿದು ಅರಿಯದೆ ನರಕಕ್ಕಿಳಿಯ ಹೇಳಿತ್ತೆಯಾ ವೇದ ? `ಏವಂ ರುದ್ರಾಯ ವಿಶ್ವದೇವಾಯ ರುದ್ರಪಾದಾಯ ದತ್ತಮಸ್ತು' ಎಂದುದಲ್ಲದೆ `ವಿಷ್ಣುಪಾದಾಯ ದತ್ತಮಸ್ತು' ಎಂದು ಹೇಳುವ ವೇದ ಉಳ್ಳರೆ ಹೇಳಿ ? ಅದಂತಿರಲಿ, ಕಾಶಿಕಾಂಡದಲ್ಲಿ ಹೇಳಿದ ಪುರಾಣಾರ್ಥದ ಹಾಗೆ ವ್ಯಾಧನ ಕೈಯಿಂದ ವಿಷ್ಣು ಹತವಾದನೆಂದಡೆ ಪರಿಣಾಮಿಸುವರು, ವೀರಭದ್ರನ ಕೈಯಿಂದ ವಿಷ್ಣು ಹತವಾದನೆಂದಡೆ ಅದು ಮಿಥ್ಯವೆಂಬರು. ಮಹಾಭಾರತದಲ್ಲಿ ವಿಷ್ಣು ಈಶ್ವರಂಗೆ ಬಿನ್ನಹಂ ಮಾಡಿದುದು: ಮನ್ನಾಥೋ ಲೋಕನಾಥಶ್ಚ ಅದ್ಯಕ್ಷರಸಮಾಯುತಃ ಏಕ ಏವ ಮಹಾದೇವೋ ಮಹೇಶಾನಃ ಪರಸ್ಥಿತಃ ಈಶ್ವರಸ್ಯ ಸಮೋ ನಾಸ್ತಿ ಬ್ರಹ್ಮಾ ವಿಷ್ಣುಶ್ಚ ಕಿಂಕರಃ ಶಿವವಾಕ್ಯಸಮೋ ನಾಸ್ತಿ ವೇದಶಾಸ್ತ್ರಾಗಮೇಷು ಚ ಎಂಬ ಮಹಾವಿಷ್ಣುವಿನ ಮಹಾಭಾಷ್ಯವ ಕೇಳರಿಯಿರೇ, ಓದಿದ ವೇದದ ಮಾತು ತಥ್ಯವೇ ? ಅಲ್ಲ. ನಿಮ್ಮಧಿದೇವತೆಯಾಗುತಂ ಇಹ ವಿಷ್ಣುವಿನ ಮಾತು ಮಿಥ್ಯವೆಂದರೆ ಬಿಡಿ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಯ್ಯನ ಜಾತನೆಂದಿಕ್ಕಿದೆ ಮುಂಡಿಗೆಯನಾರ್ಪವರೆತ್ತಿಕೊಳ್ಳಿರೆ.
--------------
ಉರಿಲಿಂಗಪೆದ್ದಿ
ವೇದಕ್ಕೆಯಾ [ಮುಖ್ಯ] ಶ್ರೀವಿಭೂತಿ, ಶಾಸ್ತ್ರಕ್ಕೆಯಾ ಮುಖ್ಯ ಶ್ರೀವಿಭೂತಿ, ಪೌರಾಣಕ್ಕೆ[ಯಾ] ಮುಖ್ಯ ಶ್ರೀವಿಭೂತಿ, ಆಗಮಕ್ಕೆಯಾ ಮುಖ್ಯ ಶ್ರೀವಿಭೂತಿ. ವೇದಾಗಮಶಾಸ್ತ್ರಪುರಾಣವನೋದುವ ವಿಪ್ರನಾದರೂ ಆಗಲಿ, ಶ್ರೀವಿಭೂತಿ ಶ್ರೀ ಪಂಚಾ[ಕ್ಷ]ರಿಯಿಲ್ಲದೆ ಓದಿದ ಓದು ವ್ಯರ್ಥ. ಶ್ರೀವಿಭೂತಿಯ ಧರಿಸಿ, ಶ್ರೀ ಪಂಚಾಕ್ಷರಿಯ ನೆನೆದು, ಏಳು ಜನ್ಮದಲ್ಲಿ ಹೊರೆಯ ಕಳೆದು, ಶಿವದೇಹಿಯಾದೆನು ನೋಡಾ. ಅದು ಎಂತೆಂದರೆ : ಸಾಕ್ಷಿ :``ನಮಃ ಶಿವಾಯೇತಿ ಮಂತ್ರಂ ಯಂ ಕರೋತಿ ತ್ರಿಪುಂಡ್ರಕಂ | ಸಪ್ತಜನ್ಮಕೃತಂ ಪಾಪಂ ತತ್‍ಕ್ಷಣೇನ ವಿನಶ್ಯತಿ ||'' ಎಂದುದಾಗಿ, ಪರಮಾತ್ಮನ ಸ್ವರೂಪವುಳ್ಳ ಶ್ರೀ ವಿಭೂತಿಯ ಸರ್ವಾಂಗವೆಲ್ಲಕೆಯೂ ಉದ್ಧೂಳನವ ಮಾಡಿ ಪರಮಪದದಲ್ಲಿ ಓಲಾಡುತಿದ್ದೆನು ಕಾಣಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಅಯ್ಯ, ಒಂದು ಕೋಟಿ ವರುಷ ತಲೆ ಕೆಳಗಾಗಿ ತಪವ ಮಾಡಿದಕಿಂದಲು ಒಂದು ದಿನ ಶಿವಭಕ್ತರಲ್ಲಿ ನಿರಹಂಕಾರವಾಗಿರ್ದಡೆ ಸಾಕು ನೋಡಾ. ಒಂದು ಕೋಟಿ ವರುಷ ಊಧ್ರ್ವಮುಖವಾಗಿ ಸೂರ್ಯನ ನೋಡಿದ ಫಲವು ಒಂದು ದಿನ ಸದಾಚಾರ ಸದ್ಧರ್ಮರಪ್ಪ ಶಿವಭಕ್ತರ ನೋಡಿದುದಕ್ಕೆ ಸರಿಯಲ್ಲ ನೋಡಾ. ಒಂದು ಕೋಟಿ ವರುಷ ಅಖಿಳ ದೇವತೆಗಳ ಸ್ತೋತ್ರವ ಮಾಡಿದ ಫಲವು ಒಂದು ದಿನ ಶರಣರಿಗೆ ಶರಣು ಮಾಡಿದುದಕ್ಕೆ ಸರಿಯಲ್ಲ ನೋಡಾ. ಒಂದು ಕೋಟಿ ವರುಷ ಅರವತ್ತಾರು ಕೋಟಿ ನದಿಗಳ ಮಿಂದು ಮುಡಿಯಿಟ್ಟ ಫಲವು, ಒಂದು ದಿನ ಸದ್ಭಕ್ತ_ಜಂಗಮ_ಶರಣಗಣ ತೀರ್ಥಕ್ಕೆ ಸರಿಯಲ್ಲ ನೋಡಾ. ಒಂದು ಕೋಟಿ ವರುಷ ಚಾಂದ್ರಾಯಣವ್ರತ ಮೊದಲಾದ ಸರ್ವವ್ರತಂಗಳ ನಡಸಿದ ಫಲವು ಒಂದು ದಿನ ಗುರು_ಲಿಂಗ_ಜಂಗಮ_ಪ್ರಸಾದಕ್ಕೆ ಸರಿಯಲ್ಲ ನೋಡಾ. ಒಂದು ಕೋಟಿ ವರುಷ ವೇದಾಗಮ ಪುರಾಣಶಾಸ್ತ್ರ ಮಂತ್ರಂಗಳ ಓದಿದ ಫಲವು ಒಂದು ದಿನ ಶಿವಭಕ್ತಶರಣರ ಸಂಭಾಷಣಕ್ಕೆ ಸರಿಯಲ್ಲ ನೋಡಾ. ಒಂದು ಕೋಟಿ ವರುಷ ಮಹಾಯೋಗವ ಮಾಡಿದ ಫಲವು ಒಂದು ದಿನ ಶ್ರೀಗುರು_ಲಿಂಗ_ಜಂಗಮ ಧ್ಯಾನಕ್ಕೆ ಸರಿಯಲ್ಲ ನೋಡಾ. ಒಂದು ಕೋಟಿ ವರುಷ ಷೋಡಶ ಮಹಾದಾನಂಗಳ ಮಾಡಿದ ಫಲವು ಒಂದು ದಿನ ಸದ್ಧರ್ಮಿ ಶಿವಯೋಗಿಗೆ ನೀಡಿದ ತೃಪ್ತಿಯ ಮಾಡಿದುದಕ್ಕೆ ಸರಿಯಲ್ಲ ನೋಡಾ. ಅಖಿಳ ಕ್ರಿಯೆಗಳು ಲಿಂಗಜಂಗಮಾರ್ಚನೆ ಕ್ರಿಯೆಗಳೆಗೆ ಸರಿಯಲ್ಲ ನೋಡಾ. ಯೋಗದ ಬಲದಿಂದ ಸಮಸ್ತ ಭೋಗವ ಪಡೆದ ಫಲವು ಒಂದು ವೇಳೆ ಗುರು_ಲಿಂಗ_ಜಂಗಮಕ್ಕೆ ದೀರ್ಘದಂಡ ನಮಸ್ಕಾರವ ಮಾಡಿ ಸನ್ನಿಧಿಯಲ್ಲಿ ಭೃತ್ಯನಾಗಿರ್ದುದಕ್ಕೆ ಸರಿಯಲ್ಲ ನೋಡಾ. ಪ್ರಾಣನ ಬ್ರಹ್ಮರಂಧ್ರದಲ್ಲಿ ಬಿಡುವ ಯೋಗವು ಪ್ರಾಣಲಿಂಗ ಸಂಬಂಧಕ್ಕೆ ಸರಿಯಲ್ಲ ನೋಡಾ [ಗುಹೇಶ್ವರ]
--------------
ಅಲ್ಲಮಪ್ರಭುದೇವರು
ಪೊಡವಿಗೀಶ್ವರ ಗೌರಿಯೊ[ಡನೆ] ಮದುವೆಯಾದಂದು, ಒಡನಾಡಿದ ಮಾಧವ ಗೋವನಾದ, ಮಿಗೆ ಓದಿದ ಬ್ರಹ್ಮ ಹೋತನ ತಿಂದ, ಎಡೆಯಲಾದ ಜಿನ್ನ ಉಟ್ಟುದ ತೊರೆದ. ಇವರ ಪೊಡಮಟ್ಟು ಪೊಡಮಟ್ಟು ಧಾತುಗೆಟ್ಟವರ ಕೇಡಿಂಗೆ ಕಡೆಯಿಲ್ಲೆಂದನಂಬಿಗ ಚೌಡಯ್ಯ.
--------------
ಅಂಬಿಗರ ಚೌಡಯ್ಯ
-->