ಅಥವಾ

ಒಟ್ಟು 7 ಕಡೆಗಳಲ್ಲಿ , 6 ವಚನಕಾರರು , 7 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಭೂತಿಕನ ಸೀರೆಯ ಸಾತ್ವಿಕ ನೆರೆ ಉಟ್ಟಡೆ ಭೂತಿಕ ಸಾತ್ವಿಕನಾದ, ಸಾತ್ವಿಕ ಭೂತಿಕನಾದ; ಈ ಮಾತು ಬಿದ್ದುದು ನೋಡಾ, ರಾಜಬೀದಿಯಲ್ಲಿ. ಅಯ್ಯಾ, ಭೂತ ಕೆಣಕಿದಡಿಲ್ಲ, ಮಾತ ಮುಚ್ಚಿದಡಿಲ್ಲ ಓತು ಕೂಡುವ ಅನುವ, ಕೂಡಲಸಂಗಮದೇವ ತಾನೆ ಬಲ್ಲ.
--------------
ಬಸವಣ್ಣ
ಬೆಳಕಿನ ಕಳೆಯಲ್ಲಿ. ನಾಗವಾಯುವ ನಿಲಿಸಿದರು ಸುಚಿತ್ತ ಸುಬುದ್ಧಿ ಸುಗೋಷಿ*ಯ ಸುಜ್ಞಾನದ ಬೆಳಗಿನ ಕಳೆಯೊಡನೆ ಸುಳಿದಾಡುವ ಮಹಾಲಿಂಗವಂತರ ಅನುಭಾವದಲ್ಲಿ. ಕೂರ್ಮವಾಯುವ ನಿಲಿಸಿದರು, ಶಿವಶ್ರುತಿ ಶಿವಮಂತ್ರ ಷಡಕ್ಷರಿ ಬೀಜಂಗಳ ಜಪಿಸುವಲ್ಲಿ. ಕೃಕರ ವಾಯುವ ನಿಲಿಸಿದರು ಚತುರ್ವಿಧ ಪುರುಷಾರ್ಥಂಗಳ ಕಳೆದು ಷಡ್ವಿಧ ದಾಸೋಹ ಭಕ್ತರತಿಯಾನಂದ ಸೂಕ್ಷ್ಮಸಂಬಂಧದ ಕೂಟದಲ್ಲಿ ತೆರಹಿಲ್ಲದ ತನ್ನ ತಾನರಿವಲ್ಲಿ. ದೇವದತ್ತವಾಯುವ ನಿಲಿಸಿದರು ಶಿವಲಿಂಗವೆ ಲಿಂಗ ಶಿವಭಕ್ತರೆ ಕುಲಜರು, ಶಿವಾಗಮವೆ ಆಗಮ, ಶಿವಾಚಾರವೆ ಆಚಾರವೆಂಬ ಏಕೋಭಾವದ ನಿಷೆ*ಯಿಂದ ಭಾಷೆಯ ನುಡಿದು ದೃಢವಿಡಿದು ಅನ್ಯವ ಜರಿವಲ್ಲಿ. ಧನಂಜಯ ವಾಯುವ ನಿಲಿಸಿದರು, ಅನಂತ ಪರಿಯಲ್ಲಿ ಧಾವತಿಗೊಂಡು ಕಾಯಕ್ಲೇಶದಿಂದ ತನು ಮನ ಬಳಲಿ ಗಳಿಸಿದಂತಹ ಧನವ ಅನರ್ಥವ ಮಾಡಿ ಕೆಡಿಸದೆ, ಲಿಂಗಾರ್ಚನೆಯ ಮಾಡಿ ಗುರುಲಿಂಗಜಂಗಮವೆಂಬ ತ್ರಿವಿಧ ದಾಸೋಹದ ಪರಿಣಾಮದಲ್ಲಿ, ಈ ದಶವಾಯುಗಳ ಪ್ರಯತ್ನಕ್ಕೆ ಧ್ಯಾನ ಗಮನ ಸಂಗ ಸುಬುದ್ಧಿ ನಿರ್ಗುಣ ತಮಂಧ ಕೋಪ ಚಿಂತೆ ಎಂಬಿವನರಿದು, ದುಶ್ಚಿತ್ತವ ಮುರಿದು, ಅಹಂಕಾರವಳಿದು, ದಶವಾಯುಗಳ ದಶಸ್ಥಾನದಲ್ಲಿ ನಿಲಿಸಿ ಭಕ್ತರಾಗಬೇಕು ಕಾಣಿರೆ, ಎಲೆ ಅಣ್ಣಗಳಿರಾ ! ಅಲ್ಲಲ್ಲಿ ಇವರ ಓತು, ಭರವ ಕೆಡಿಸಿ ತಗ್ಗಲೊತ್ತಿ, ಮೇಲೆ ತಲೆಯೆತ್ತಲೀಯದೆ ದಶವಾಯುಗಳ ದಶಸ್ಥಾನದಲ್ಲಿ [ನಿಲಿಸಿ] ದಶಾವಸ್ಥೆಯಿಂದ ಲಿಂಗವನೊಲಿಸಿದ ಮಹಾಮಹಿಮನ ಮಸ್ತಕವೆ ಶ್ರೀಪರ್ವತ, ಲಲಾಟವೆ ಕೇತಾರವೆನಿಸುವುದು. ಆತನ ಹೃದಯದಲ್ಲಿ ಅಷ್ಟಷಷ್ಟಿ ತೀರ್ಥಂಗಳಿಪ್ಪವು. ಆತನ ಶ್ರೀಪಾದ ವಾರಣಾಸಿ ಅವಿಮುಕ್ತಕ್ಷೇತ್ರದಿಂದ ವಿಶೇಷ. ಆತನ ಪಾದಾಂಗುಷ*ಕ್ಕೆ ಸಮಸ್ತ ತೀರ್ಥಕ್ಷೇತ್ರ ಸಪ್ತಸಮುದ್ರಂಗಳ ತಿರುಗಿ ಮಿಂದ ಒಂದು ಕೋಟಿ ಫಲ ಸರಿಯಲ್ಲ. ಆತನು ಸತ್ಯವೆಂಬ ವೃಕ್ಷವನೇರಿ, ನಿಷೆ*ಯೆಂಬ ಕೊನೆಯ ಹಿಡಿದು ಪರಬ್ರಹ್ಮವೆಂಬ ಫಲವ ಸುವಿವೇಕದಿಂದ ಸವಿದು ಸುಖಿಯಾಗಿರ್ಪನಾಗಿ, ಆತನು ಪುಣ್ಯಪಾಪವೆಂಬೆರಡರ ಸುಖದುಃಖದವನಲ್ಲ; ಗತಿ ಅವಗತಿಯೆಂಬೆರಡರ ಮತಿಗೇಡಿಯಲ್ಲ; ಧರ್ಮ ಕರ್ಮವೆಂಬೆರಡರ ಭ್ರಮೆಯವನಲ್ಲ; ಆತನ ನಿಲವು ಪುಷ್ಪ ನುಂಗಿದ ಪರಿಮಳದಂತೆ, ಆಲಿಕಲ್ಲು ನುಂಗಿದ ಅಪ್ಪುವಿನಂತೆ, ಅಗ್ನಿ ಆಹುತಿಗೊಂಡ ಘೃತದಂತೆ, ಕಬ್ಬುನವುಂಡ ನೀರಿನಂತೆ, ಉರಿಯುಂಡ ಕರ್ಪುರದಂತೆ ! ಆತಂಗೆ ತೋರಲೊಂದು ಪ್ರತಿಯಿಲ್ಲ, ಎಣೆಯಿಲ್ಲ. ಆತ ನಿತ್ಯ ನಿರಂಜನ ಚಿನ್ಮಯ ಚಿದ್ರೂಪ ನಿಶ್ಚಿಂತ ನಿರಾಳನಯ್ಯಾ. ಕೂಡಲಚೆನ್ನಸಂಗಮದೇವಾ, ನಿಮ್ಮ ಪ್ರಾಣಲಿಂಗ ಸಂಬಂಧಿಯ ನಿಲವು ಮಹವ ನುಂಗಿದ ಬಯಲೊ !
--------------
ಮಾರುಡಿಗೆಯ ನಾಚಯ್ಯ
ಮಲವ ತೊಳೆಯಬಹುದಲ್ಲದೆ, ಅಮಲವ ತೊಳೆಯಬಹುದೆ ಅಯ್ಯಾ ? ಮಾತಾಡಬಹುದಲ್ಲದೆ, ಅಜಾತನನರಿಯಬಹುದೆ ಅಯ್ಯಾ ? ಮಾಟವ ಮಾಡಬಹುದಲ್ಲದೆ, ವರ್ಮದ ಕೂಟವ ಕೂಡಬಹುದೆ ಅಯ್ಯಾ ? ರಣದ ಪಂಥವ ಹೇಳಬಹುದಲ್ಲದೆ, ಕಾದಬಹುದೆ ಅಯ್ಯಾ ? ಮಾತುಗಳ ಕೂಡಿ ಓತು ಹೇಳುವರೆಲ್ಲರು ಉಮಾಕಾಂತನ ಬಲ್ಲರೆ ? ಈ ಮಾತಿನ ಮಾಲೆಗೆ ಅಂಜಿ, ಅಲೇಖನಾದ ಶೂನ್ಯ ಕಲ್ಲಿನೊಳಗೆ ಅದೆ ಹೇಳಾ.
--------------
ವಚನಭಂಡಾರಿ ಶಾಂತರಸ
ಸೂತ್ರವನಾಡಿಸುವುದೇತರ ಸತ್ವ? ನೀತಿಯ ಗುಣವೊ? ಅದರೊಳಗಿರ್ಪ ಧಾತುವಿನ ಗುಣವೊ? ಆಡಿಸುವಾತನ ಗುಣವೊ? ಓತು ನಿಂದ ಕಂಬದಾಶ್ರಯದ ಗುಣವೊ? ಅದನೇತರಿಂದರಿವೆ. ಒಂದನಹುದು, ಒಂದನಲ್ಲಾ ಎನಬಾರದು. ಇದರ ಸಂದು ಸಂಶಯವ ಬಿಡಿಸಾ, ದ್ವಂದ್ವರಹಿತ ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಅಂತರಂಗದಲ್ಲಿ ಅರುಹಿನ ಶುದ್ಧಿಯನರಿಯದೆ, ಬಹಿರಂಗದಲ್ಲಿ ಕಂಥೆ ಕರ್ಪರ ದಂಡ ಕಮಂಡಲು ಭಸ್ಮದಗುಂಡಿಗೆ ಎಂಬ ಪಂಚಮುದ್ರೆಗಳ ಧರಿಸಿ, ಧರೆಯ ಮಂಡಲದೊಳಗೆ ಚರಿಸುವ ಅಣ್ಣಗಳ ಕಂಡು ಬೆರಗಾದೆನಯ್ಯಾ. ಅದೇನು ಕಾರಣವೆಂದೊಡೆ : ಪುರಜನರ ಮೆಚ್ಚಿಸುವೆನೆಂದು ಜಾತಿಕಾರನು ಓತು ವೇಷವ ಧರಿಸಿ ಒಡಲ ಹೊರೆವಂತೆ, ಕೊಡುಕೊಂಬುವ ಭಕ್ತನ ಮೆಚ್ಚಿಸುವೆನೆಂದು ಮೃಡನ ವೇಷವ ಧರಿಸಿ, ಒಡಲ ಕಕ್ಕುಲತೆಗೆ ತಿರುಗುವ ಕಡುಪಾತಕ ಜಡಜೀವಿಗಳ ಮುಖವ ನೋಡಲಾಗದಯ್ಯಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಪ್ರಾಣಲಿಂಗಸಂಬಂಧಿಗಳೆಂದು ನುಡಿಯುವವರು ಅನೇಕರುಂಟು: ಪ್ರಾಣಲಿಂಗದ ಕಳೆಯನಾರೂ ಅರಿಯರಲ್ಲ ! ಪ್ರಾಣಲಿಂಗದ ಕಳೆ ಎಂತೆಂದಡೆ : ಆಧಾರದಲ್ಲಿ ಎಳೆಯ ಸೂರ್ಯನಂತೆ ಬೆಳಗುತಿರ್ಪುದು ನೋಡಾ ಪ್ರಾಣಲಿಂಗವು. ಸ್ವಾಧಿಷಾ*ನದಲ್ಲಿ ಪೂರ್ಣಚಂದ್ರನಂತೆ ಬೆಳಗುತಿರ್ಪುದು ನೋಡಾ ಪ್ರಾಣಲಿಂಗವು. ಮಣಿಪೂರಕದಲ್ಲಿ ಮಿಂಚಿನಲತೆಯಂತೆ ಬೆಳಗುತಿರ್ಪುದು ನೋಡಾ ಪ್ರಾಣಲಿಂಗವು. ಅನಾಹತದಲ್ಲಿ ಸ್ಫಟಿಕದ ಸಲಾಕೆಯಂತೆ ಬೆಳಗುತಿರ್ಪುದು ನೋಡಾ ಪ್ರಾಣಲಿಂಗವು. ವಿಶುದ್ಧಿಯಲ್ಲಿ ಮೌಕ್ತಿಕದ ಗೊಂಚಲದಂತೆ ಬೆಳಗುತಿರ್ಪುದು ನೋಡಾ ಪ್ರಾಣಲಿಂಗವು. ಆಜ್ಞೇಯದಲ್ಲಿ ರತ್ನದ ದೀಪ್ತಿಯಂತೆ ಬೆಳಗುತಿರ್ಪುದು ನೋಡಾ ಪ್ರಾಣಲಿಂಗವು. ಬ್ರಹ್ಮರಂಧ್ರದಲ್ಲಿ ಸ್ವಯಂಜ್ಯೋತಿಯಂತೆ ಬೆಳಗುತಿರ್ಪುದು ನೋಡಾ ಪ್ರಾಣಲಿಂಗವು. ಶಿಖೆಯಲ್ಲಿ ಶುದ್ಧತಾರೆಯಂತೆ ಬೆಳಗುತಿರ್ಪುದು ನೋಡಾ ಪ್ರಾಣಲಿಂಗವು. ಪಶ್ಚಿಮದಲ್ಲಿ ಉಳುಕ ನಕ್ಷತ್ರದಂತೆ ಬೆಳಗುತಿರ್ಪುದು ನೋಡಾ ಪ್ರಾಣಲಿಂಗವು. ಇಂತಪ್ಪ ಪ್ರಾಣಲಿಂಗದ ಕಳೆಯನರಿಯದೆ ಪ್ರಾಣನ ಸಂಯೋಗಿಸಿ ಪ್ರಳಯವ ಗೆಲಲರಿಯದೆ ಮಾತಿನ ಮಾಲೆಯ ನುಡಿದು ನೀತಿಶಾಸ್ತ್ರ ಘಾತಕದ ಕಥೆಗಳ ಕಲಿತು ಓತು ಎಲ್ಲರೊಡನೆ ಹೇಳಿ ಚಾತುರ್ಯನೆನಿಸಿಕೊಂಡು ಒಡಲ ಹೊರೆವ ಉದರಘಾತಕರ ಪ್ರಾಣಲಿಂಗಸಂಬಂಧಿಗಳೆಂತೆಂಬೆನಯ್ಯಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಕತ್ತಲೆ ಭೂತಳದ ವರ್ತಮಾನಕ್ಕೆ ಹೇಸಿ ಮನ ಓತು ಸುಚಿತ್ತ ನಿರ್ವಾಣದಾಸೋಹಮಂ ಕೈವಿಡಿದೆನಮ್ಮಾ. ಎನ್ನ ತನುವೇ ವನಿತೆ ಕರಣಂಗಳೇ ದ್ರವ್ಯ ಉರವಣಿಸಿದ ಭಕ್ತಿ ಇಂತೀ ತ್ರಿವಿದ ಪದಾರ್ಥಗಳಂ ಹಿಡಿದು ಗಣಂಗಳ ಮುಂದೆ ಕರಪಾತ್ರೆಯೆಂಬ ಕಾಯಕಮಂ ಕಟ್ಟಿದೆ. ಎನ್ನ ಸಮಯಾಚಾರಕ್ಕೆ ಸ್ಮಶಾನ ಮಂಟಪದಲ್ಲಿ ಗುರುವ ತಡೆದೆ. ಹೃದಯಮಂಟಪದಲ್ಲಿಹ ಜಂಗಮವ ತಡೆದೆ. ಎನ್ನ ಸ್ವಯ ಕಾಯಕಮಂ ತಂದು ರೂಪು ಪದಾರ್ಥಗಳಂ ನಿರ್ಭಾವ ಪರಿಯಾಣದಲ್ಲಿ ಗಡಣಿಸಿ ಗುರುವಿನ ಮುಂದಿಕ್ಕಿದೆ. ರುಚಿ ಪದಾರ್ಥಂಗಳಂ ಸುಮನ ಪರಿಯಾಣದಲ್ಲಿ ಗಡಣಿಸಿ ಜಂಗಮದ ಮುಂದಿಕ್ಕಿದೆ. ತೃಪ್ತಿ ಪದಾರ್ಥಂಗಳಂ ಭಾವದ ಪರಿಯಾಣದಲ್ಲಿ ಗಡಣಿಸಿ ಲಿಂಗದ ಮುಂದಿಕ್ಕಿದೆ. ಇಂತೀ ನಿರಂಜನ ಗುರು ಲಿಂಗ ಜಂಗಮ ಸವಿದು ಒಕ್ಕು ಮಿಕ್ಕ ತ್ರಿವಿಧಪ್ರಸಾದವನುಂಡು ತ್ರಿವಿಧಕರ್ಮ ನಾಸ್ತಿಯಾಗಿ ನಾನು ಬದುಕಿದೆನಯ್ಯಾ, ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನಾ.
--------------
ಘನಲಿಂಗಿದೇವ
-->