ಅಥವಾ

ಒಟ್ಟು 18 ಕಡೆಗಳಲ್ಲಿ , 9 ವಚನಕಾರರು , 16 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಹರಿಯಾಣದೊಳಗಣ ಓಗರವ ಹರಿಯವರು ಹರಿಹರಿದುಂಡರಯ್ಯಾ. ಪರ ವಧು ಬಂದು ಬೆರಸಲು ಆ ಹರಿ ಪರಹರಿಯಾದ. ಉಣಬಂದ ಹರಿಯ ಶಿರವ ಮೆಟ್ಟಿ ನಿಂದಳು ನಿಮ್ಮ ಹೆಣ್ಣು. ಇದ ಕಂಡು ನಾ ಬೆರಗಾದೆನಯ್ಯಾ, ಕಪಿಲಸಿದ್ಧಮಲ್ಲಿನಾಥಯ್ಯಾ
--------------
ಸಿದ್ಧರಾಮೇಶ್ವರ
ಪ್ರಸಾದ ಪ್ರಸಾದವೆಂದು ಒಪ್ಪಕ್ಕೆ ಕೊಂಬ ಬೊಪ್ಪಗಳು ನೀವು ಕೇಳಿರೊ. ಕಾಯಪ್ರಸಾದವನರಿದು, ಕರಣಪ್ರಸಾದವನರಿದು, ಜೀವಪ್ರಸಾದವನರಿದು, ನಿಜಪ್ರಸಾದವನರಿದು ಕೊಳಬಲ್ಲರೆ ಪ್ರಸಾದಿ. ಕೊಂಬವರ ಕಂಡು ಪ್ರಸಾದವ ಕೈಕೊಂಡರೆ ಕಂಡವರ ಕಂಡು ಕೌದಿಯ ಹೊಲಿಯ ಹೋದರೆ ಕುಂಟೆಳೆ ಬಿದ್ದಂತೆ. ನವಿಲು ಕುಣಿಯಿತ್ತೆಂದು ಶಾಬಕ ಕುಣಿದು ಪುಚ್ಚವ ಕಳಕೊಂಡಂತೆ. ಸಿಂಹ ಲೆಂಘಣಿಸಿತ್ತೆಂದು ಸೀಳನಾಯಿ [ಲೆಂಘಣಿಸಿ] ಸೊಂಟವ ಕಳಕೊಂಡಂತೆ. ಸದ್ಭಕ್ತರ ಕಂಡು ನಾನು ಸದ್ಭಕ್ತನೆಂದು ಓಗರವ ನೀಡಿಸಿಕೊಂಡು ಅಯ್ಯಾ, ಹಸಾದ, ಮಹಾಪ್ರಸಾದವ ಪಾಲಿಸಿರೆಂದು ತನ್ನಾದಿ ಕ್ರಿಯಾದೀಕ್ಷೆ, ತನ್ನ ಮಧ್ಯೆ ಜ್ಞಾನದೀಕ್ಷೆ, ತನ್ನವಸಾನ ಮಹಾಜ್ಞಾನ ದೀಕ್ಷೆಯ ತಿಳಿಯದೆ ತನ್ನ ಪೂರ್ವಾಪರ, ತನ್ನ ಉದಯಾಸ್ತಮಾನವರಿಯದೆ, ಅರ್ಪಿತಾವಧಾನಭಕ್ತಿಯನರಿಯದೆ, ಗುರು ಲಿಂಗ ಜಂಗಮದ ನಿಲುಕಡೆಯನರಿಯದೆ, ಕಾಂಚನವ ಕೊಟ್ಟು, ಕೈಯಾಂತು ಪಡಕೊಂಬ ಭಕ್ತನ ಅಂಗವಿಕಾರವು ಮುನ್ನಿನಂತೆ. ಆ ಭಕ್ತನ ಆಚಾರ ವಿಚಾರ ನಡೆ ನುಡಿ ದೀಕ್ಷಾತ್ರಯಂಗಳ ವಿಚಾರಿಸದೆ ಪ್ರಸಾದವ ಕೊಟ್ಟ ಗುರುವಿನ ವಿಚಾರವು ಮುನ್ನಿನಂತೆ. ಈ ಉಭಯತರು, ಬಟ್ಟೆಗುರುಡನ ಕೈಯ ಬಟ್ಟೆಗುರುಡ ಹಿಡಿದು ಹಳ್ಳವ ಬಿದ್ದಂತೆ ಕಾಣಾ, ಚೆನ್ನಯ್ಯಪ್ರಿಯ ನಿರ್ಮಾಯಪ್ರಭುವೆ.
--------------
ಚೆನ್ನಯ್ಯ
ತನುವಿನಲ್ಲಿ ಗುರು ಭರಿತವಾದುದೇ ಭರಿತಬೋನ. ಮನದಲ್ಲಿ ಲಿಂಗ ಭರಿತವಾದುದೇ ಭರಿತಬೋನ. ಧನದಲ್ಲಿ ಜಂಗಮ ಭರಿತವಾದುದೇ ಭರಿಬೋನ. ಪ್ರಾಣದಲ್ಲಿ ಪ್ರಸಾದ ಭರಿತವಾದುದೇ ಭರಿತಬೋನ. ಅಂತರಂಗ ಬಹಿರಂಗದಲ್ಲಿ ಪರಿಪೂರ್ಣವಸ್ತು ಭರಿತವಾಗಿ ಎಡೆ ಕಡೆಯಿಲ್ಲದ ವಸ್ತುವಿನಲ್ಲಿ ತಾ ಭರಿತವಾದುದೇ ಭರಿತಬೋನ. ಹೀಂಗಲ್ಲದೆ: ಪುರುಷಾಹಾರಪ್ರಮಾಣಿನಿಂದ ಓಗರವ ಗಡಣಿಸಿಕೊಂಡು ಲಿಂಗಾರ್ಪಿತಮಾಡಿ ಪ್ರಸಾದವೆಂದು ಕೊಂಡು ಎಂಜಲುಯೆಂದು ಕಳೆದು ಬಂದ ಪದಾರ್ಥವ ಮುಟ್ಟಿ ಲಿಂಗಾರ್ಪಿತವ ಮಾಡಲಮ್ಮದವರಿಗೆ ಲಿಂಗಾರ್ಪಿತವಿಲ್ಲ. ಲಿಂಗಾರ್ಪಿತವಿಲ್ಲವಾಗಿ ಪ್ರಸಾದವಿಲ್ಲ. ಪ್ರಸಾದವಿಲ್ಲವಾಗಿ ಮುಕ್ತಿಯೆಂಬುದು ಇಲ್ಲ. ಇವರ ಲಿಂಗಾಂಗಸಂಬಂಧಿಗಳೆಂತೆಂಬೆನಯ್ಯ? ಲಿಂಗಾಂಗಿಯ ಅಂಗದಲ್ಲಿ ಸಂದೇಹ ಸೂತಕ ಉಂಟೇ? ಈ ಭಂಗಿತರ ಮುಖವ ನೋಡಲಾಗದು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಅಂಬರವಿಲ್ಲದ ಮೇರು, ಅಂಬುಧಿಯಿಲ್ಲದ ಗುಂಪ ತಂದವರಿಲ್ಲದೆ ಬಂದಿತ್ತು, ನಿಜವನೊಳಕೊಂಡಿತ್ತು ಸಾಧನವಿಲ್ಲದ ಓಗರವ ಭಾಜನವಿಲ್ಲದೆ ಗಡಣಿಸಿ ಭೋಜನವಿಲ್ಲದೆ ತೃಪ್ತಿಯಾಯಿತ್ತು ನೋಡಾ. ಕ್ರಿಯಾವಿರಹಿತಯೋಗ ಫಲದಾಯಕ ಹೀನಭಕ್ತಿ, ಆಯತ ಸ್ವಾಯತವರಿಯದೆ ಹೋಯಿತ್ತು ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಮೇರುಮಂದಿರದಲ್ಲಿ ಈರೈದರತಲೆ, ಧಾರುಣಿಯ ಜನರೆಲ್ಲ ಬಣ್ಣಿಸುತ್ತಿಪ್ಪರು. ಜ್ಞಾನಾಮೃತರಸದಲ್ಲಿ ಓಗರವ ಮಾಡಿ ಆರೋಗಣೆಯ ಮಾಡಿದೆನು. ವಿಷಮಾಕ್ಷ ಹರ ಭಸ್ಮವಿಭೂಷಣ ಶಶಿಧರ ಶರಣು ಶರಣೆನುತಿದ್ದೆನು. ಇಂದ್ರಾಗ್ನಿಯ ಪುರಪಟ್ಟಣದಲ್ಲಿ ಚಂದ್ರಾಹಾರವ (ಚಂದ್ರಹಾರ?) ಬೇಡಿದಡೆ ಖಂಡಕಪಾಲದಲ್ಲಿ ಉಂಡ ತೃಪ್ತಿ, ಅಖಂಡ ನಿರಾಳ ಗುಹೇಶ್ವರ.
--------------
ಅಲ್ಲಮಪ್ರಭುದೇವರು
ಅಗ್ಘವಣಿಯ ತಂದು ಮಜ್ಜನವ ಮರೆದವನ, ಪುಷ್ಪವ ತಂದು ಪೂಜೆಯ ಮರೆದವನ, ಓಗರವ ತಂದು ಅರ್ಪಿತವ ಮರೆದವನ, ಲಿಂಗವ ಕಂಡು ತನ್ನ ಮರೆದವನ, ಮಹಾಘನವ ಒಳಕೊಂಡಿತ್ತು ಗುಹೇಶ್ವರ.
--------------
ಅಲ್ಲಮಪ್ರಭುದೇವರು
ಅನಾಚಾರದ ಕಾಯ[ಕ]ವ ಮಾಡಿ, ಪದಾರ್ಥವನೆ ಗಳಿಸಿ ಆ ಪದಾರ್ಥವನೆ ಪಾಕವ ಮಾಡಿ, ಓಗರವ ಮಾಡುವುದು, ಆ ಓಗರವನೆ ಪ್ರಸಾದವ ಮಾಡಿ, ಆ ಪ್ರಸಾದವನೆ ಓಗರವ ಮಾಡಿ! ಇದು ಕಾರಣ ಕೂಡಲಚೆನ್ನಸಂಗನ ಶರಣನು ಅರ್ಪಿತವಲ್ಲದೆ ಮಾಡನು.
--------------
ಚನ್ನಬಸವಣ್ಣ
ಆದಿನಿರಾಳ, ಮಧ್ಯನಿರಾಳ, ಊಧ್ರ್ವನಿರಾಳ ಅಂತೆ ನಿನ್ನ ಪರಿಯಯ್ಯಾ. ಅನಾಮಯಶೂನ್ಯನೆಂದು ಹೊಗಳುತ್ತೈದಾರೆ ನಿನ್ನ ಹಲಬರು, ನೀನು ಭಕ್ತಕಾರಣ ಪರಶಿವಮೂರ್ತಿಯೆಂಬುದನರಿಯರಾಗಿ. ಎಲೆ ಅಯ್ಯಾ, ಸುಚಿತ್ತವಾದ ಲೋಕಂಗಳಲ್ಲಿ ನೀನು ಉರುತರ ನಿತ್ಯನೆಂಬುದನರಿಯರು ಕಾಣಾ ಎಲೆ ಅಯ್ಯಾ, ಅಯ್ಯ ನಿನ್ನ ಅನಾಹತ ಪಟ್ಟಣದಲ್ಲಿ ಶೂನ್ಯಕಾಯನೆಂಬ ಮಹಾಗಣೇಶ್ವರನ ಮನೆಯಲ್ಲಿ ಪದನಾಶನೆಂಬ ಯೋಗಿಯಾಗಿ ಬಂದು, ಫಲಕ್ಕೆ ಬಿತ್ತಲಿದ್ದ ಬೀಜಂಗಳ ನೀನು ಸಂಗ್ರಹಿಸಿ ಸ್ವಯಂಪಾಕವ ಮಾಡಿ, ಆತ ಕಿಂಕಿಲದಿಂ ಸದ್ಭಾವವೆಂದೆಂಬ ಪರಿಯಾಣದಲ್ಲಿ ಅಷ್ಟಪಾದಂಗಳನುಳ್ಳ ಆಧಾರವಂ ತಂದಿಟ್ಟು ಮಥಿತ ಮರ್ಧನ, ಸುಚಿತ್ತ ಸುಗುಣಂಗಳೆಂಬ ಓಗರವಂ ತಂದು ಎನಗೆ ಬಡಿಸಲಾಗಿ, ನಿತ್ಯವೆಂಬ ದೀಪ್ತಿಯ ಬೆಳಗಿನಲ್ಲಿ ಸುಚಿತ್ತಂ ಆರೋಗಣೆಯಂ ಮಾಡಿ, ರೇತೋದಾರನೆಂಬ ಗಣೇಶ್ವರ ಲೆಕ್ಕ ಮೂವತ್ತಾರು ಸಾವಿರ ಪಟ್ಟಣಂಗಳಲ್ಲಿ ಪ್ರವೇಶಿಸಿ ಬಂದ ಕಾಲದಲ್ಲಿ, ನಿನ್ನ ಸುಮತಿ ಪ್ರಸನ್ನತೆ ಪರಿಣಾಮ ಪ್ರಯೋಗವೆಂಬ ಪ್ರಸಾದ ಸ್ವೀಕಾರಂ ಮಾಡಲ್ಕಾಗಿ, ಆತನ ಮೂರರಿಂ ಮೇಲೆ ಹತ್ತರಿಂದೊಳಗೆ ಇದ್ದಂಥ ಹಲವೆಲ್ಲವೂ ಏಕೀಭವಿಸಿದವು. ಆತ ನಿತ್ಯನಾದ, ಆತ ಫಲಕ್ಕೆ ಪದಕ್ಕೆ ಭವಕ್ಕೆ ತುರೀಯ ಸಿದ್ಧ ತ್ವಮಸಿಯನೆಯ್ದಿ ಸಂದು ಹರಿದ, ಹಂಗು ಹರಿದ, ಆನಂದವೆಂಬ ಶ್ವೇತಜಲದಲ್ಲಿ ಚಂದ್ರಕಾಂತದ ಮಂಟಪವನಿಕ್ಕಿ, ಅರ್ಚನೆ ಪೂಜನೆ ವ್ಯವಹರಣೆಯೆಂಬವನತಿಗಳೆದು ಸದ್ಧಲಿಂಗಾರ್ಚನೆಯ ಮಾಡಿ ಸುಖಸಂಯೋಗದಲ್ಲಿ ಎರಡಿಲ್ಲದೆ ಮೂರ್ಚಿತವೋಗೈದಾನೆ ಕಾಣಾ ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ಓಗರವ ಪ್ರಸಾದವ ಮಾಡಿ, ಪ್ರಸಾದವ ಓಗರವ ಮಾಡಿ, ಕೊಟ್ಟುಕೊಂಬನಾಗಿ ಆತ ಲಿಂಗಪ್ರಸಾದಿ ರೂಪು ರಸ ಗಂಧ ಶಬ್ದ ಪರುಶ ಸಹಿತ ಜಂಗಮಕ್ಕೆ ಅರ್ಪಿತವ ಮಾಡಿಕೊಂಬನಾಗಿ ಆತ ಜಂಗಮಪ್ರಸಾದಿ. ಸಪ್ತಧಾತು ಅಷ್ಟಮದವಿಲ್ಲಾಗಿ ಆತ ಲಿಂಗಪ್ರಸಾದಿ. ಕಾಮ ಕ್ರೋಧ ಲೋಭ ಮೋಹ ಮದ ಮತ್ಸರವಿಲ್ಲಾಗಿ ಆತ ಜಂಗಮಪ್ರಸಾದಿ. ಇದು ಕಾರಣ, ಕೂಡಲಚೆನ್ನಸಂಗಾ ನಿಮ್ಮ ಪ್ರಸಾದಿಗೆ ನಮೋ ನಮೋಯೆಂಬೆ.
--------------
ಚನ್ನಬಸವಣ್ಣ
ಅನಾದಿ ಶರಣನ ಹೃತ್ಕಮಲ ಮಧ್ಯದ ತೇಜೋಮಯವನೇನೆಂದುಪಮಿಸಯ್ಯಾ ? ಜಲವೆ ಪಾದಶಿಲೆ, ಪೃಥ್ವಿಯೆ ಪಿಂಡಿಗೆ ಆಕಾಶವೆ ಲಿಂಗ, ಸಪ್ತಸಮುದ್ರಗಳೆ ಪಂಚಾಮೃತ, ಮೇಘವೆ, ಅಗ್ಘವಣಿಯ ಬಿಂದಿಗೆ, ಮಳೆಗಾಲವೆ ಮಜ್ಜನ, ಚಂದ್ರಮನೆ ನೊಸಲ ಗಂಧ, ನಕ್ಷತ್ರವೆ ಅಕ್ಷತೆ, ತರುಮರಾಧಿಗಳೆ ಪತ್ರೆಪುಷ್ಪ, ಮೊಳಗೆ ಪಂಚಮಹಾವಾದ್ಯ ! ಮಾಗಿಯೆಂಬ ಪರಿಯಾಣವ ಬೆಳಗಿ, ಬೇಸಗೆಯೆಂಬ ಓಗರವ ಗಡಣಿಸಿ ಸರ್ವಪರಿಮಳವೆಂಬ ತುಪ್ಪವನೆರೆದು, ಪರವೆಂಬ ಮೇಲೋಗರವನಿಕ್ಕಿ ಬೆಳಗು ಕತ್ತಲೆಯೆಂಬ ಕನ್ನಡವ ಕಟ್ಟಿ, ಲಿಂಗವ ಆರೋಗಣೆಯ ಮಾಡಿಸಿ ಸುಜ್ಞಾನದಲ್ಲಿ ಕೈಗೆರೆದು ಭಾವವೆಂಬ ವೀಳೆಯವ ಕೊಟ್ಟು, ಅನು ನೀನೆಂಬ ಅನುಲೇಪಗಂಧವ ಪೂಸಿ ವಾಯುವೆಂಬ ವಸ್ತ್ರವನುಡಿಸಿ, ಗುಹೇಶ್ವರನೆಂಬ ಲಿಂಗ ಪರಿಪೂರ್ಣವಾಗಿದ್ದ ಬಳಿಕ, ಮಜ್ಜನಕ್ಕೆರೆವಠಾವಾವುದೈ ಸಂಗನಬಸವಣ್ಣಾ ?
--------------
ಅಲ್ಲಮಪ್ರಭುದೇವರು
ಓಗರ ಮೇಲೋಗರವನುಂಬನ್ನಕ್ಕ ಗಡಿತಡಿಯ ಕಾಯಿಸಿ, ಮತ್ತೊಡೆಯರ ಕರೆಯೆಂದು, ಮತ್ತೊಡೆಯರು ಬಂದಲ್ಲಿ ಮಡದಿಯರ ಮನೆಯೊಳಗವಿಸಿ, ತನ್ನ ಬಿಡುಗಡೆಯ ಸ್ತ್ರೀಯರ ಕೈಯಲ್ಲಿ ಒಡೆಯರು ಪಾದವೆಂದು ಅಡಿಯ ತೊಳೆವುತ್ತ, ಆ ತೊಳೆದ ನೀರ ತಾ ಕುಡಿವುತ್ತ, ಲಿಂಗಮಜ್ಜನವೆಂದು ಎರೆವುತ್ತ, ಅವರು ಉಂಡು ಮಿಕ್ಕ ಓಗರವ ಪ್ರಸಾದವೆಂದು ಲಿಂಗಕ್ಕೆ ತೋರಿ ತಾವು ಭುಂಜಿಸುತ್ತ, ಇಂತಿವರು ತಮ್ಮ ವ್ರತವ ತಾವರಿಯದೆ, ತಮ್ಮ ಭಾವವ ತಾವರಿಯದೆ, ಸುರೆಯ ಕುಡಿದವರಂತೆ, ಮರುಳು ಗ್ರಹ ಹೊಡೆದವರಂತೆ! ಇಂತೀ ತ್ರಿವಿಧ ಗುಡಿಹಿಯ ಭಕ್ತಿ ಅಸಗ ನೀರಡಿಸಿ ಸತ್ತಂತಾಯಿತ್ತು. ಆ ಗುಣಕಟ್ಟಳೆ ಏಲೇಶ್ವರಲಿಂಗವ ಮುಟ್ಟದೆ ಇತ್ತಲೆ ಉಳಿಯಿತ್ತು.
--------------
ಏಲೇಶ್ವರ ಕೇತಯ್ಯ
ಭವಿಯ ತಂದು ಭಕ್ತನ ಮಾಡುವುದೆ ಅನಾಚಾರ, ಭಕ್ತನ ತಂದು ಭವಿಯ ಮಾಡುವುದೆ ಆಚಾರ. ಭವಿ ಮಾಡಿದ ಓಗರವ ಭಕ್ತ ನೋಡಿದರೆ ನಾಯಕನರಕ, ಆ ಭಕ್ತ ಭವಿಯಹನಲ್ಲದೆ ಆ ಭವಿ ಭಕ್ತನಾಗಲರಿಯನಾಗಿ. ಈ ಕ್ರಮವರಿದು ಮಾಡೂದು ಕೂಡಲಚೆನ್ನಸಂಗಯ್ಯನಲ್ಲಿ ಲಿಂಗೈಕ್ಯವು.
--------------
ಚನ್ನಬಸವಣ್ಣ
ಸ್ವರದ ಹುಳ್ಳಿಯ ಕೊಂಡು, ಗಿರಿಯ ತಟಾಕಕ್ಕೆ ಹೋಗಿ, ಹಿರಿಯರು ಓಗರವ ಮಾಡುತ್ತಿಪ್ಪರು. ಗಿರಿ ಬೇಯದಾಗಿ ಓಗರವಾಗದು. ಅರ್ಪಿತವಿಲ್ಲಾಗಿ ಪ್ರಸಾದವಿಲ್ಲ ಗುಹೇಶ್ವರಾ
--------------
ಅಲ್ಲಮಪ್ರಭುದೇವರು
ಕಾಯ ಹಸಿದು ಓಗರವ ಬೇಡುವಾಗ, ಲಿಂಗಕ್ಕೆ ಅರ್ಪಿತವೆಲ್ಲಿಯಿತ್ತೊ ? ಮನ ತನುವ ಬಿಟ್ಟು ಸರ್ವವಿಕಾರದಲ್ಲಿ ಭ್ರಮಿಸುವಾಗ, ಸಾವಧಾನಿಗಳೆಂತಾದಿರೊ? ಸ್ಥೂಲದಲ್ಲಿ ಹಿಡಿದು, ಸೂಕ್ಷ್ಮದಲ್ಲಿ ಮರೆದು, ಕಾರಣದಲ್ಲಿ ಏನೆಂದರಿಯದೆ, ಜಗದ ಉತ್ಪತ್ಯಕ್ಕೆ ಒಳಗಾಹವರ ಪ್ರಾಣಲಿಂಗಿಗಳೆಂಬೆನೆ? ಎನ್ನೆನು. ಇಂತಿವರೆಲ್ಲರೂ ಡಾಗಿನ ಪಶುಗಳು, ವೇಷಧಾರಿಗಳು, ಶಾಸ್ತ್ರದ ಸಂತೆಯವರು, ಪುರಾಣದ ಪುಂಡರು, ತರ್ಕದ ಮರ್ಕಟರು, ಭವಸಾಗರದ ಬಾಲಕರು. ತತ್ವವನರಿಯದ ಮತ್ತರು. ಇಂತಿವರು ಕೆಟ್ಟ [ಕೇಡ] ನೋಡಿ ಗುರು[ವಿನ] ಕೊರಳ ಕೊಯ್ದು, ಲಿಂಗದ ತಲೆಯೊಡೆಯಲಿಕ್ಕಿ, ಜಂಗಮದ ಸಂದ ಮುರಿದೆ. ದ್ವಂದ್ವವ ಹಿಂಗಿದೆ, ಸಂದನಳಿದೆ, ಸದಮಲಾನಂದ ಹಿಂಗಿದೆ. ಹೊಂದದ ಬಟ್ಟೆಯಲ್ಲಿ ಸಂದೆನಯ್ಯಾ, ಮಹಾದಾನಿ ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಹಡೆದವರಿಂದೆ ಪಡೆದ ಪ್ರಸಾದವ ಹಿಡಿದುಕೊಟ್ಟು, ನೋಡಿಕೊಟ್ಟು, ತಿಳಿದುಕೊಟ್ಟು, ನಿತ್ಯಸುಖಿಸುವನಲ್ಲದೆ ಜಡದೇಹದೊಡವೆಯ ಸುಖವಿಡಿದು ಒಡೆಯರ ಪ್ರಸಾದವ ಪಡೆದವರೆಂದು ಓಗರವ ಗಡಣಿಸಿಕೊಂಡು ಮೃತ್ಯುಂಜಯಲಿಂಗಕ್ಕೆ ತೋರಿ ತೋರಿ ಉಂಬ ಡಂಭಕನಂತಲ್ಲ ಗುರುನಿರಂಜನ ಚನ್ನಬಸವಲಿಂಗ ನಿಮ್ಮ ಪ್ರಸಾದಿ.
--------------
ದೇಶಿಕೇಂದ್ರ ಸಂಗನಬಸವಯ್ಯ
ಇನ್ನಷ್ಟು ... -->