ಅಥವಾ

ಒಟ್ಟು 26 ಕಡೆಗಳಲ್ಲಿ , 6 ವಚನಕಾರರು , 11 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಓಂಕಾರವೇ ನಾದಮಯ. ಓಂಕಾರವೇ ಮಂತ್ರಮಯ. ಓಂಕಾರವೇ ಪರಿಪೂರ್ಣವಾಗಿ ಸರ್ವವ್ಯಾಪಕತ್ವವನ್ನುಳ್ಳುದು ನೋಡಾ. ಪ್ರಣವವೇ ಪರಮಾತ್ಮ ಸ್ವರೂಪವಾಗಿ ಪರಮೇಶ್ವರನ ಗೌಪ್ಯಮುಖ ನೋಡಾ. ಪ್ರಣವವೆ ಶಿವಶರಣರ ಹೃದಯಾದ್ಥಿಪತಿ ಇದು ಕಾರಣ, ಹೃದಯಕಮಲ ಮಧ್ಯದಲ್ಲಿ ಪ್ರಣವವನುಚ್ಚರಿಸುತ್ತ ಪರಶಿವಧ್ಯಾನದಲ್ಲಿ ತರಹರವಾಗಿ ಪ್ರಣವಸ್ವರೂಪನಾಗಿದ್ದೆನಯ್ಯ. ಪಂಚಾಕ್ಷರವೆ ಪಂಚಬ್ರಹ್ಮಮಯವಾಗಿ ಆ ಪಂಚಾಕ್ಷರಿಮಂತ್ರವೆ ಶರೀರವಾಗಿರ್ದೆನು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಓಂಕಾರವೇ ಶಿವ, ಯಕಾರವೇ ಸದಾಶಿವ, ವಾಕಾರವೇ ಈಶ್ವರ, ಶಿಕಾರವೇ ಮಹೇಶ್ವರ, ಮಃಕಾರವೇ ಈಶ್ವರ, ನಕಾರವೇ ಈಶಾನ. ಈ ಷಡಕ್ಷರವೆ ಷಡ್ವಿಧಮಂತ್ರಮೂರ್ತಿಯಾಗಿ ಒಪ್ಪುತಿಪ್ಪುದಯ್ಯ, ಮತ್ತೆ-ನಕಾರವೇ ಮೂರ್ತಿಬ್ರಹ್ಮ, ಮಃಕಾರವೇ ಪಿಂಡಬ್ರಹ್ಮ, ಶಿಕಾರವೇ ಕಲಾಬ್ರಹ್ಮ, ವಾಕಾರವೇ ಆನಂದಬ್ರಹ್ಮ, ಯಕಾರವೇ ವಿಜ್ಞಾನಬ್ರಹ್ಮ, ಓಂಕಾರವೇ ಪರಬ್ರಹ್ಮ, ಈ ಷಡಕ್ಷರವೆ ಷಡ್ವಿಧಬ್ರಹ್ಮವೆಂದು ಹೇಳಲ್ಪಟ್ಟಿತ್ತು ನೋಡಾ. ಮತ್ತೆ-ನಕಾರವೇ ಕ್ರಿಯಾಶಕ್ತಿ:ಮಕಾರವೇ ಜ್ಞಾನಶಕ್ತಿ, ಶಿಕಾರವೇ ಇಚ್ಛಾಶಕ್ತಿ, ವಾಕಾರವೇ ಆದಿಶಕ್ತಿ, ಯಕಾರವೇ ಪರಶಕ್ತಿ, ಓಂಕಾರವೇ ಚಿಚ್ಛಕ್ತಿ, ಇಂತಿವು ಮಂತ್ರಶಕ್ತಿಸ್ವರೂಪೆಂದರಿವುದು ನೋಡಾ. ಮತ್ತೆ-ನಕಾರವೇ ಕರ್ಮಸಾದಾಖ್ಯ, ಮಃಕಾರವೇ ಕರ್ತೃಸಾದಾಖ್ಯ, ಶಿಕಾರವೇ ಮೂರ್ತಿಸಾದಾಖ್ಯ, ವಾಕಾರವೇ ಅಮೂರ್ತಿಸಾದಾಖ್ಯ; ಯಕಾರವೇ ಶಿವಸಾದಾಖ್ಯ, ಓಂಕಾರವೇ ಮಹಾಸಾದಾಖ್ಯ ನೋಡ. ಮತ್ತೆ-ನಕಾರವೇ ಪೀತವರ್ಣ, ಮಃಕಾರವೇ ನೀಲವರ್ಣ, ಶಿಕಾರವೇ ಕುಂಕುಮವರ್ಣ, ವಾಕಾರವೇ ಶ್ವೇತವರ್ಣ, ಯಕಾರವೇ ಸ್ಫಟಿಕವರ್ಣ, ಓಂಕಾರವೇ ಜ್ಯೋತಿರ್ಮಯಸ್ವರೂಪು ನೋಡಾ. ಇಂತಿವು ಮಂತ್ರಮೂರ್ತಿಯ ವರ್ಣಭೇದವೆಂದರಿವುದಯ್ಯ. ಮತ್ತೆ-ನಕಾರವೇ ಸದ್ಯೋಜಾತಮಂತ್ರಮೂರ್ತಿ. ಮಃಕಾರವೇ ವಾಮದೇವಮಂತ್ರಮೂರ್ತಿ. ಶಿಕಾರವೇ ಅಘೋರಮಂತ್ರಮೂರ್ತಿ. ವಾಕಾರವೇ ತತ್ಪುರುಷಮಂತ್ರಮೂರ್ತಿ. ಯಕಾರವೇ ಈಶಾನ್ಯಮಂತ್ರಮೂರ್ತಿ. ಓಂಕಾರವೇ ಮಹಾಮಂತ್ರಮೂರ್ತಿ. ಇಂತಿವು ಮಂತ್ರಮೂರ್ತಿಯ ವದನಭೇದವೆಂದರಿವುದು ನೋಡಾ. ಮತ್ತೆ-ನಕಾರವೇ ಸತ್ತು, ಮಃಕಾರವೇ ಚಿತ್ತು, ಶಿಕಾರವೇ ಆನಂದ ವಾಕಾರವೇ ನಿತ್ಯ, ಯಕಾರವೇ ಪರಿಪೂರ್ಣ, ಓಂಕಾರವೇ ನಿರಂಜನಸ್ವರೂಪವೆಂದರಿವುದಯ್ಯ. ಮತ್ತೆ-ನಕಾರವೇ ಆಚಾರಲಿಂಗ, ಮಃಕಾರವೇ ಗುರುಲಿಂಗ, ಶಿಕಾರವೇ ಶಿವಲಿಂಗ, ವಾಕಾರವೇ ಜಂಗಮಲಿಂಗ, ಯಕಾರವೇ ಪ್ರಸಾದಲಿಂಗ, ಓಂಕಾರವೇ ಮಹಾಲಿಂಗ ಇಂತಿವು ಷಡಕ್ಷರ ಮಂತ್ರಲಿಂಗವೆಂದರಿವುದಯ್ಯ. ಇಂತಿವು ಲಿಂಗಷಡಕ್ಷರವೆಂದು ಹೇಳಲ್ಪಟ್ಟವು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಓಂಕಾರವೇ ಪಂಚಭೂತಾತ್ಮಮಯ ನೋಡ. ನಕಾರವೇ ದಶೇಂದ್ರಿಯ, ಮಃಕಾರವೇ ಮನಪಂಚಕಂಗಳು ನೋಡ. ಶಿಕಾರವೇ ಪ್ರಾಣಸ್ವರೂಪು, ವಾಕಾರವೇ ದಶವಾಯುಗಳಸ್ವರೂಪು, ಯಕಾರವೇ ತ್ರಿಗುಣಸ್ವರೂಪು ನೋಡ. ಓಂಕಾರವೇ ಪಾದಾದಿ ಮಸ್ತಕಪರಿಯಂತರ ಪರಿಪೂರ್ಣವಾಗಿ ತ್ವಗುಮಯವಾಗಿಪ್ಪುದು. ನಕಾರವೇ ರುದ್ಥಿರಮಯವಾಗಿಪ್ಪುದು. ಮಃಕಾರವೇ ಮಾಂಸಮಯವಾಗಿಪ್ಪುದು. ಶಿಕಾರವೇ ಮೇದಸ್ಸುಮಯವಾಗಿಪ್ಪುದು. ವಾಕಾರವೇ ಅಸ್ಥಿಮಯವಾಗಿಪ್ಪುದು. ಯಕಾರವೇ ಮಜ್ಜಾಮಯವಾಗಿಪ್ಪುದು. ಈ ಷಡಕ್ಷರಮಂತ್ರವೆಲ್ಲವು ಕೂಡಿ ಶುಕ್ಲಮಯವಾಗಿಪ್ಪುದು ನೋಡಾ. ಇದು ಕಾರಣ, ಶರಣನ ಸಪ್ತಧಾತು ಸರ್ವೇಂದ್ರಿಯ ವಿಷಯ ಕರಣಂಗಳೆಲ್ಲವು ಷಡಕ್ಷರಮಂತ್ರಮಯವಾಗಿಪ್ಪವು. ಇದು ಕಾರಣ, ಶರಣನ ಶರೀರವೆ ಶಿವನ ಶರೀರ ನೋಡಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಮುಕ್ತಿಗೆ ಸದಾ ಸಂಧಾನವಾದ ಮಹಾಜ್ಞಾನ ಶಿವಕ್ಷೇತ್ರವೆಂಬ ಶಾಂಭವಿಯಚಕ್ರವಿವರವೆಂತೆಂದೊಡೆ: ಅಗ್ನಿಮಂಡಲದ ಪೂರ್ವದಿಕ್ಕಿನ ಸಕಾರವೇ ವಾಮೆ, ಷಕಾರವೇ ಜೇಷೆ*, ಶಕಾರವೇ ರೌದ್ರಿ, ವಕಾರವೇ ಕಾಳಿ. ಅಗ್ನಿಮಂಡಲದ ನೈಋತ್ಯದಳಕ್ಕೆ ಆಧಾರಚಕ್ರಸಂಬಂಧವು. ಅದರ ಮುಂದಣ ಲಕಾರವೇ ಬಾಲೆ, ರಕಾರವೇ ಬಲಪ್ರಮಥಿನಿ, ಯಕಾರವೇ ಸರ್ವಭೂತದಮನಿ, ಮಕಾರವೇ ಮನೋನ್ಮನಿ. ಇನ್ನು ಸೂರ್ಯಮಂಡಲದ ಬಕಾರ ಭಕಾರಗಳೆರಡು ಕೂಡಿ ಅಗ್ನಿಮಂಡಲದ ಈಶಾನ್ಯದಳಕ್ಕೆ ಸ್ವಾಧಿಷಾ*ನಚಕ್ರಸಂಬಂಧವು. ಮುಂದೆ ಚಂದ್ರಮಂಡಲದ ವಿವರವೆಂತೆಂದೊಡೆ: ಅಃ ಎಂಬುದೇ ಷಣ್ಮುಖಿ, ಅಂ ಎಂಬುದೇ ಭವ, ಔಕಾರವೇ ಶರ್ವ, ಓಕಾರವೇ ರುದ್ರ, ಐಕಾರವೇ ಮಹಾದೇವ, ಏಕಾರವೇ ಸೋಮ, ಲೂೃಕಾರವೇ ಭೀಮ, ಲೃಕಾರವೇ ಉಗ್ರ, Iೂಕಾರವೇ ಪಶುಪತಿ, ಋಕಾರವೇ ಉಮೇಶ್ವರ, ಊಕಾರವೇ ಚಂಡೇಶ್ವರ, ಉಕಾರವೇ ನಂದೀಶ್ವರ, ಈಕಾರವೇ ಮಹಾಕಾಳ, ಇಕಾರವೇ ಭೃಂಗಿರಿಟಿ, ಆಕಾರವೇ ಗಣೇಶ್ವರ, ಅಕಾರವೇ ವೃಷಭೇಶ್ವರ, ಚಂದ್ರಮಂಡಲದಲ್ಲಿ ವಿಶುದ್ಧಿಚಕ್ರಸಂಬಂಧವು. ಇನ್ನು ಮುಂದೆ ಸೂರ್ಯಮಂಡಲವೆಂತೆಂದೊಡೆ: ಪೂರ್ವದಳದ ಕಕಾರವೇ ಅನಂತ, ಖಕಾರವೇ ಸೂಕ್ಷ್ಮ, ಗಕಾರವೇ ಶಿವೋತ್ತಮ, ಘಕಾರವೇ ಏಕನೇತ್ರ, ಙಕಾರವೇ ಏಕರುದ್ರ. ಚಕಾರವೇ ತ್ರಿಮೂರ್ತಿ, ಛಕಾರವೇ ಶ್ರೀಕಂಠ, ಜಕಾರವೇ ಶಿಖಂಡಿ, ಝಕಾರವೇ ಇಂದ್ರ, ಞಕಾರವೇ ಅಗ್ನಿ. ಟಕಾರವೇ ಯಮ, ಠಕಾರವೇ ನೈಋತ್ಯ. ಸೂರ್ಯಮಂಡಲದ ನೈಋತ್ಯದಳಕ್ಕೆ ಅನಾಹತಚಕ್ರಸಂಬಂಧವು. ಡಕಾರವೇ ವರುಣ, ಢಕಾರವೇ ವಾಯುವ್ಯ, ಣಕಾರವೇ ಕುಬೇರ, ತಕಾರವೇ ಈಶಾನ್ಯ, ಥಕಾರವೇ ಧರಾ, ದಕಾರವೇ ಧ್ರುವ, ಧಕಾರವೇ ಸೋಮ, ನಕಾರವೇ ಅಪ್ಪು, ಪಕಾರವೇ ಅನಿಲ, ಫಕಾರವೇ ಅನಲ, ಸೂರ್ಯಮಂಡಲದ ವರುಣದಳದಿಂದೆ ಈಶಾನ್ಯದಳಕ್ಕೆ ಮಣಿಪೂರಕಚಕ್ರ ಸಂಬಂಧವು. ಈಶಾನ್ಯ ಇಂದ್ರ ಮಧ್ಯದ ಬಕಾರ ಭಕಾರಂಗಳ ಪೆಸರು, ಬಕಾರವೇ ಪ್ರತ್ಯೇಶ, ಭಕಾರವೇ ಪ್ರಭವ, ಇವೆರಡು ಸ್ವಾಧಿಷಾ*ನಚಕ್ರದವು. ಇನ್ನು ಅಕಾರ ಹಕಾರಂಗಳಿಗೆ ಭೇದವಿಲ್ಲದ ಕಾರಣ ಚಂದ್ರಮಂಡಲದ ಅ ಎಂಬಕ್ಷರವು ಅಗ್ನಿಮಂಡಲದ ಲಂಬಕ್ಷರವು ಇವೆರಡು ಆಜ್ಞಾಚಕ್ರಸಂಬಂಧವಾಗಿಹವು. ಈ ಷಟ್‍ಚಕ್ರಂಗಳು ಶಾಂಭವಿಚಕ್ರದಲ್ಲಿ ಸಂಬಂಧವಾಗಿಹವು. ಇನ್ನು ಅಷ್ಟದಳಂಗಳಿಗೆ ಹಂಚಿಹಾಕುವ ವಿವರವೆಂತೆಂದೊಡೆ: ವಾಮ, ಗಣೇಶ್ವರ, ವೃಷಭೇಶ್ವರ, ಅನಂತ, ಸೂಕ್ಷ್ಮ, ಶಿವೋತ್ತಮ, ಇಂದ್ರ, ಸತ್ಯ, ಭೃಂಗಿ, ಅಂತರ್ಲಕ್ಷ ಈ ಹತ್ತು ಇಂದ್ರದಳದಲ್ಲಿ ಸಂಬಂಧವು. ಜೇಷ*, ಮಹಾಕಾಳ, ಭೃಂಗರೀಟಿ, ಏಕನೇತ್ರ, ಏಕರುದ್ರ, ತ್ರಿಮೂರ್ತಿ, ಅಗ್ನಿ, ಪೂಷನ್, ವಿಧಿ, ದಮ ಈ ಹತ್ತು ಅಗ್ನಿದಳದಲ್ಲಿ ಸಂಬಂಧವು. ರೌದ್ರಿ, ನಂದೀಶ್ವರ, ಚಂಡೇಶ್ವರ, ಶ್ರೀಕಂಠ, ಶಿಖಂಡಿ, ಇಂದ್ರ ಯಮ, ಭಾಸ್ಕರ, ಪುಷ್ಪದತ್ತ , ಬಲಾಟ ಈ ಹತ್ತು ಯಮದಳದಲ್ಲಿ ಸಂಬಂಧವು. ಕಾಳಿ, ಉಮೇಶ್ವರ, ಪಶುಪತಿ, ಅಗ್ನಿ, ಯಮ, ನೈಋತ್ಯ, ದೌವಾರಿಕ, ಸುಗ್ರೀವ, ಆವರಣ ಈ ಹತ್ತು ನೈಋತ್ಯದಳದಲ್ಲಿ ಸಂಬಂಧವು. ಬಾಲೆ, ಉಗ್ರ, ಭೀಮ, ವರುಣ, ಏಕನೇತ್ರ, ಕುಬೇರ, ಅರುಣ, ಅಸುರ, ಗಂಹ್ವರ, ವೇಗ, ಈ ಹತ್ತು ವರುಣದಳದಲ್ಲಿ ಸಂಬಂಧವು. ಬಲಪ್ರಮಥಿನಿ, ಸೋಮ, ಅಪನಿಲ, ಮಹಾದೇವ, ಈಶಾನ್ಯ, ಧರಾ, ಧ್ರುವ, ವಾಯು, ನಾಗಮುಖ, ಸೋಮ, ಈ ಹತ್ತು ವಾಯುವ್ಯದಳದಲ್ಲಿ ಸಂಬಂಧವು. ಸರ್ವಭೂತದಮನಿ, ರುದ್ರ, ಶರ್ವ, ಸೋಮ, ಅಪ್ಪು, ನೀಲ, ಕುಬೇರ, ಅಘೋರ, ದಿತಿ, ಅದಿತಿ, ಈ ಹತ್ತು ಕುಬೇರದಳದಲ್ಲಿ ಸಂಬಂಧವು. ಮನೋನ್ಮನಿ, ಭವ, ಷಣ್ಮುಖಿ, ನಳ, ಪ್ರತ್ಯೇಶ, ಪ್ರಭವ, ಈಶಾನ್ಯ, ಪರ್ಜನ್ಯ, ಜಯಂತ, ಸಂಕರ, ಈ ಹತ್ತು ಈಶಾನ್ಯದಳದಲ್ಲಿ ಸಂಬಂಧವು. ಇಲ್ಲಿಗೆ ಅಷ್ಟದಳದ ವಿವರ ಮುಗಿಯಿತು. ಇನ್ನು ಮುಂದೆ ಚೌದಳದ ವಿವರವೆಂತೆಂದೊಡೆ : ಇಂತಪ್ಪ ಅಷ್ಟದಳವನೊಳಕೊಂಡು ಅಂಬಿಕೆ, ಗಣಾನಿ, ಈಶ್ವರಿ, ಮನೋನ್ಮನಿ ಎಂಬ ಚತುರ್ದಳ ಶಕ್ತಿಯರಿರ್ಪರು. ಪೂರ್ವದಳದ ಸಕಾರವೇ ಅಂಬಿಕೆ. ದಕ್ಷಿಣದಳದ ಅಕಅರವೇ ಗಣಾನಿ. ಪಶ್ಚಿಮದಳದ ವಿಕಾರವೇ ಈಶ್ವರಿ. ಉತ್ತರದಳದ ಕ್ಷಕಾರವೇ ಮನೋನ್ಮನಿ. ಇಂತೀ ಚತುರ್ವಿಧಶಕ್ತಿಯನೊಳಕೊಂಡಿರ್ಪಳು ಹ್ರೀಂಕಾರಶಕ್ತಿ. ಹ್ರೀಂಕಾರಶಕ್ತಿ ಎಂದಡೂ ಮೂಲಜ್ಞಾನ ಚಿತ್ತು ಎಂದಡೂ ಚಿದಾತ್ಮ ಎಂದಡೂ ಪರ್ಯಾಯ ನಾಮವು. ಇಂತಪ್ಪ ಹ್ರೀಂಕಾರಶಕ್ತಿಗೆ ಆಶ್ರಯವಾಗಿರ್ಪುದು ನಿಷ್ಕಲಲಿಂಗವು. ನಿಷ್ಕಲಲಿಂಗವೆಂದಡೂ ಶುದ್ಧಪ್ರಸಾದವೆಂದಡೂ ಹಕಾರಪ್ರಣವವೆಂದಡೂ ಪರ್ಯಾಯ ನಾಮಂಗಳು. ಇಂತಪ್ಪ ನಾಮಂಗಳನೊಳಕೊಂಡು ಪಿಂಡ ಬ್ರಹ್ಮಾಂಡಗಳೊಳಹೊರಗೆ ಪರಿಪೂರ್ಣವಾಗಿ ತುಂಬಿ ತೊಳಗಿ ಬೆಳಗುತಿರ್ಪುದು ನೋಡಾ ನಿಷ್ಕಲಲಿಂಗವು. ಇಂತಪ್ಪ ಅನಾದಿ ನಿಷ್ಕಲ ಪರಶಿವಬ್ರಹ್ಮದ ನಿಜದ ನಿಲವನು ಶ್ರುತಿಗುರುವಚನ ಸ್ವಾನುಭಾವಂಗಳಿಂದರಿದು ತನ್ನೊಳಗೆ ಗರ್ಭೀಕರಿಸಿಕೊಂಡು ಸುಳಿವ ಮಹಾಶರಣರ ಶ್ರೀಚರಣಕ್ಕೆ ನಮೋ ನಮೋ ಎಂಬೆನಯ್ಯಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಪ್ರಸಾದವೆಂಬುದು ನಿರ್ಮಳಮುಖದಿಂದ ಉದ್ಭವವಾದದ್ದು. ಚಿತ್‍ಶಕ್ತಿಯಿಂದ ಮಹಾಲಿಂಗರೂಪವಾಯಿತು. ಮಹಾಲಿಂಗಪ್ರಸಾದದಿಂದ ಪ್ರಸಾದಲಿಂಗ ಉದ್ಭವವಾಯಿತು. ಪ್ರಸಾದಲಿಂಗದಿಂದ ಜಂಗಮಲಿಂಗ ಉದ್ಭವವಾಯಿತು. ಜಂಗಮಲಿಂಗಪ್ರಸಾದದಿಂದ ಶಿವಲಿಂಗ ಉದ್ಭವವಾಯಿತು. ಶಿವಲಿಂಗಪ್ರಸಾದದಿಂದ ಗುರುಲಿಂಗಪ್ರಸಾದ ಉದ್ಭವವಾಯಿತು. ಗುರುಲಿಂಗಪ್ರಸಾದದಿಂದ ಅಚಾರಲಿಂಗ ಉದ್ಭವವಾಯಿತು. ಇಂತೀ ಷಡ್ವಿಧಲಿಂಗವು ಪ್ರಸಾದದಿಂದ ಉದ್ಭವಿಸಿದವು. ಲಿಂಗದಿಂದ ಜಗತ್ತು ಉದ್ಭವಿಸಿದವು. 'ಲಿಂಗಮಧ್ಯೇ ಜಗತ್ಸರ್ವಂ ತ್ರೆೃಲೋಕ್ಯಂ ಸಚರಾಚರಂ | ಲಿಂಗ ಬಾಹ್ಯಾತ್ ಪರಂ ನಾಸ್ತಿ [ತಸ್ಮಾತ್] ಲಿಂಗಂ ಪ್ರಪೂಜಯೇತ್ || ಲೀಯಾಲೀಯ ಸಂಪ್ರೋಕ್ತಂ ಸಕಾರಂ ಸ್ಫಟಿಕಮುಚ್ಯತೇ ! ಲಯರ್ನಾಗಮಶ್ಯನಂ ಲಿಂಗಶಬ್ದಮೇವಚೇತ್ || ಲೀಯತೇ ಗಮ್ಯತೇ ಯತ್ರಯೋನಿಃ ಸರ್ವಚರಾಚರಂ | ತದೀಯಂ ಲಿಂಗಮಿತ್ಯುಕ್ತಂ ಲಿಂಗತತ್ವಪರಾಯಣೈಃ ||'' ಸರ್ವ ಸಚರಾಚರವೇ ಪ್ರಸಾದರೂಪ. ಅನಂತಕೋಟಿ ಬ್ರಹ್ಮಾಂಡಗಳಿಗೆ ಪ್ರಸಾದವೆ ಕಾಯ ಜೀವ ಪ್ರಾಣವಾಯಿತು, ಕಾಯ ಇಷ್ಟಲಿಂಗವಾಯಿತು, ಜೀವ ಪ್ರಾಣಲಿಂಗವಾಯಿತು, ಭಾವವೇ ತೃಪ್ತಿಲಿಂಗವಾಯಿತು. ಪೃಥ್ವಿ ಅಪ್ಪುಗಳೆರಡು ಕಾಯವಾಯಿತು. ಅಗ್ನಿ ವಾಯುಗಳೆರಡು ಪ್ರಾಣಲಿಂಗವಾಯಿತು. ಅಕಾರ ಓಂಕಾರವೇ ಭಾವವಾಯಿತು. ಇಂತೀ ಪಂಚತತ್ವಪ್ರಸಾದವೆನಿಸಿದ ಪ್ರಣಮವು [ಹೀಗೆ ಕಾಯ ಜೀವ ಪ್ರಾಣ ಪ್ರಸಾದವಾಯಿತ್ತು] ಚೆನ್ನಯ್ಯಪ್ರಿಯ ನಿರ್ಮಾಯಪ್ರಭುವೆ.
--------------
ಚೆನ್ನಯ್ಯ
ನಿಃಕಲಶಿವತತ್ವದಿಂದ ಜ್ಞಾನಚಿತ್ತು ಉದಯಿಸಿತ್ತು ನೋಡಾ. ಆ ಜ್ಞಾನಚಿತ್ತುವಿನಿಂದ ಅಕಾರ ಉಕಾರ ಮಕಾರವೆಂದು ಈ ಮೂರು ಬೀಜಾಕ್ಷರ; ಅಕಾರವೇ ನಾದ, ಉಕಾರವೇ ಬಿಂದು, ಮಕಾರವೇ ಕಲೆ. ಈ ನಾದ ಬಿಂದು ಕಲೆಗೆ ಪ್ರಕೃತಿಯೇ ಆಧಾರ. ಪ್ರಕೃತಿಗೆ ಪ್ರಾಣವೇ ಆಧಾರ, ಪ್ರಾಣಕ್ಕೆ ಲಿಂಗವೇ ಆಧಾರ. ಲಿಂಗಕ್ಕೆ ಶಿವಶಕ್ತಿ ಆದಿಯಾಗಿ ಓಂಕಾರವಾಯಿತ್ತು ನೋಡಾ. ಆ ಓಂಕಾರವೇ ಅಖಂಡ ಪರಿಪೂರ್ಣ ಗೋಳಕಾಕಾರ ತೇಜೋಮಯವಪ್ಪ ಮಹಾಲಿಂಗ ತಾನೇ ನೋಡಾ, ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ನಕಾರವೇ ಪೃಥ್ವಿ:ಮಃಕಾರವೇ ಅಪ್ಪು, ಶಿಕಾರವೇ ಅಗ್ನಿ, ವಾಕಾರವೇ ವಾಯು, ಯಕಾರವೇ ಆಕಾಶ, ಓಂಕಾರವೇ ಆತ್ಮಸ್ವರೂಪು ನೋಡಾ. ಮತ್ತೆ ನಕಾರವೇ ಬ್ರಹ್ಮ, ಮಃಕಾರವೇ ವಿಷ್ಣು, ಶಿಕಾರವೇ ರುದ್ರ, ವಾಕಾರವೇ ಈಶ್ವರ, ಯಕಾರವೇ ಸದಾಶಿವ, ಓಂಕಾರವೇ ಮಹಾತ್ಮನು ನೋಡಾ. ಮತ್ತೆ ಅಂತ್ರರ್ಯಾಮಿಯೇ ನಕಾರ, ಚೈತನ್ಯ ಮಃಕಾರ, ಭಾವನೇ ಶಿಕಾರ, ಕರ್ತಾರನೇ ವಾಕಾರ, ಕ್ಷೇತ್ರಜ್ಞನೇ ಯಕಾರ, ಶಿವನೆ ಓಂಕಾರ ನೋಡ. ಮತ್ತೆ ಕರ್ಮಾಂಗ ಸ್ವರೂಪನಪ್ಪ ಭಕ್ತನೇ ನಕಾರ. ವಿದ್ಯಾಂಗ ಸ್ವರೂಪನಪ್ಪ ಮಾಹೇಶ್ವರನೇ ಮಃಕಾರ. ಕಾಮಾಂಗ ಸ್ವರೂಪನಪ್ಪ ಪ್ರಸಾದಿಯೇ ಶಿಕಾರ. ಯೋಗಾಂಗ ಸ್ವರೂಪನಪ್ಪ ಪ್ರಾಣಲಿಂಗಿಯೇ ವಾಕಾರ. ಭೂತಾಂಗ ಸ್ವರೂಪನಪ್ಪ ಶರಣನೆ, ಯಕಾರ. ಶಿವಾಂಗ ಸ್ವರೂಪನಪ್ಪ ಐಕ್ಯನೇ ಓಂಕಾರ ನೋಡಾ. ಮತ್ತೆ ನಕಾರವೇ ಸದ್ಭಕ್ತಿ, ಮಃಕಾರವೇ ನೈಷಿ*ಕಾಭಕ್ತಿ, ಶಿಕಾರವೇ ಅವಧಾನಭಕ್ತಿ, ವಾಕಾರವೇ ಅನುಭಾವಭಕ್ತಿ, ಯಕಾರವೇ ಆನಂದಭಕ್ತಿ, ಓಂಕಾರವೇ ಸಮರಸಭಕ್ತಿ ನೋಡ. ಮತ್ತೆ ಆತ್ಮತತ್ವವೇ ನಕಾರ, ವಿದ್ಯಾತತ್ವವೇ ಮಃಕಾರ, ಶಿಕಾರವೇ ಶಿವತತ್ವ ನೋಡಾ. ವಾಕಾರವೇ ಅನುಭಾವಭಕ್ತಿ, ಯಕಾರವೇ ಆನಂದಭಕ್ತಿ, ಓಂಕಾರವೇ ಸಮರಸಭಕ್ತಿ ನೋಡ. ಮತ್ತೆ ಆತ್ಮತತ್ವವೇ ನಕಾರ, ವಿದ್ಯಾತತ್ವವೇ ಮಃಕಾರ, ಶಿಕಾರವೇ ಶಿವತತ್ವ ನೋಡ. ವಾಕಾರವೇ ಈಶ್ವರತತ್ವ, ಯಕಾರವೇ ಸದಾಶಿವತತ್ವ, ಓಂಕಾರವೇ ಪರತತ್ವ ನೋಡಾ. ಮತ್ತೆ ನಕಾರವೇ ಸುಚಿತ್ತ ಹಸ್ತ, ಮಃಕಾರವೇ ಸುಬುದ್ಧಿ ಹಸ್ತ, ಶಿಕಾರವೇ ನಿರಹಂಕಾರ ಹಸ್ತ, ವಾಕಾರವೇ ಸುಮನ ಹಸ್ತ, ಯಕಾರವೇ ಸುಜ್ಞಾನ ಹಸ್ತ, ಓಂಕಾರವೇ ಸದ್ಭಾವ ಹಸ್ತ, ಇಂತಿವು ಅಂಗಷಡಕ್ಷರ ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ನಕಾರವೇ ಆಚಾರಲಿಂಗ, ಮಕಾರವೇ ಗುರುಲಿಂಗ, ಶಿಕಾರವೇ ಶಿವಲಿಂಗ, ವಕಾರವೇ ಚರಲಿಂಗ, ಯಕಾರವೇ ಪ್ರಸಾದಲಿಂಗ, ಓಂಕಾರವೇ ಮಹಾಲಿಂಗ ನೋಡಾ. ಇದಕ್ಕೆ ಈಶ್ವರೋýವಾಚ : ``ನಕಾರಮಾಚಾರಲಿಂಗಂ ಮಕಾರಂ ಗುರುಲಿಂಗಕಂ | ಶಿಕಾರಂ ಶಿವಲಿಂಗಂ ಚ ವಕಾರಂ ಚರಲಿಂಗಕಂ || ಯಕಾರಂ ಪ್ರಸಾದಂ ಚೈವ ಓಂಕಾರಂ ಚ ಮಹಸ್ತಥಾ | ಇತಿ ಷಡಕ್ಷರಂ ದೇವೀ ಷಡ್ಲಿಂಗಂ ಚ ನ ಸಂಶಯಃ |'' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ನಕಾರವೇ ರುಧಿರಮಯವಾಗಿಹುದು. ಮಕಾರವೇ ಮಾಂಸಮಯವಾಗಿಹುದು. ಶಿಕಾರವೇ ಮೇದಸ್ಸುಮಯವಾಗಿಹುದು. ವಕಾರವೇ ಅಸ್ಥಿಮಯವಾಗಿಹುದು. ಯಕಾರವೇ ಮಜ್ಜೆಮಯವಾಗಿಹುದು. ಓಂಕಾರವೇ ಶುಕ್ಲಮಯವಾಗಿಹುದು. ಈ ಷಡಕ್ಷರವೇ ಆಚಾರಾದಿ ಮಹಾಲಿಂಗಂಗಳಾಗಿಹುದು ನೋಡಾ. ಇದಕ್ಕೆ ದಿವ್ಯಾಗಮೇ : ``ನಕಾರೋ ರುಧಿರೇಸ್ಯಾತ್ತು ಮಕಾರೋ ಮಾಂಸ ಸಂಚಯಃ | ಶಿಕಾರೋ ಮೇಧಸೀಸ್ಯಾತ್ತು ವಕಾರಸ್ಥಾತುಮಸ್ಥಿಷು || ಯಕಾರಸ್ಥಾತು ಮಜ್ಜಾಯಾಂ ಶುಕ್ಲೇಸ್ಥಾತು ಷಡಾತ್ಮಕಃ | ಏವಂ ಷಡಕ್ಷರಮಯಂ ಶಿವವರ್ಮಾಂತು ಸಂಸ್ಥಿತಂ | ದೇಹಂ ಮಮೇತಿ ಯೋತ್ ಧ್ಯಾಯೇ ಸೋýಹಮೇವ ನ ಸಂಶಯಃ||'' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಓಂಕಾರವೇ ಪೀಠ, ಅಕಾರವೇ ಕಂಠ, ಉಕಾರವೆ ಮೇಗಣಪೀಠವಾಗಿ, ಆ ಮೇಗಣಪೀಠದ ಮೇಲಿಹ ಬಟುವೇ ಮಕಾರ, ಆ ಬಟುವಿನೊಳಗಣ ಗುಣಿಯ ಬಿಂದು, ಆ ಬಿಂದುವಿನೊಳಗಣ ನಾದವೆ ಲಿಂಗವಾಗಿ ಅರ್ಚಿಸುವುದು ನಿರಾಧಾರಯೋಗ ನೋಡಾ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಅಯ್ಯಾ ತತ್ವ ವಿತತ್ವ ಶೂನ್ಯ ಮಹಾಶೂನ್ಯವಿಲ್ಲದಂದು, ಬ್ರಹ್ಮ ವಿಷ್ಣು ರುದ್ರ ಇನ ಶಶಿ ವ್ಯೋಮ ಸಮೀರ ಅಗ್ನಿ ಅಂಬು ಪೃಥ್ವಿ ನವಗ್ರಹ ದಶದಿಕ್ಕು ಛತ್ತೀಸ ತತ್ವಂಗಳೇನೂ ಇಲ್ಲದಂದು, ತಾರಜ ತಂಡಜ ಬಿಂದುಜ ಭಿನ್ನಾಯುಕ್ತ ಅವ್ಯ[ಕ್ತ] ಅಮದಾಯುಕ್ತ ಮಣಿರಣ ಮಾನ್ಯರಣ್ವ ವಿಶ್ವರಣ ವಿಶ್ವಾವಸು ಅಲಂಕೃತ ಕೃತಯುಗ ತ್ರೇತಾಯುಗ ದ್ವಾಪರ ಕಲಿಯುಗ ಇಂತಿವು ಯಾವವೂ ಇಲ್ಲದಂದು, ನಾದ ಬಿಂದು ಕಳೆಗಳಿಲ್ಲದಂದು, ಪಶುಪಾಶ ಪತಿ ಕುಂಡಲಿ ಕಾರಕ ಇವೇನೂ ಇಲ್ಲದಂದು, ವಿಜ್ಞಾನಾಲಕರು ಸಕಲಾಕಲರು ಪ್ರಳಯಾಕಲರು ಇವೇನೂ ಇಲ್ಲದಂದು, ದನುಜ ಮನುಜ ದಿವಿಜ ಮನು ಮುನಿ ನಕ್ಷತ್ರಮಂಡಲ ಇವೇನೂ ಇಲ್ಲದಂದು, ಅಂದು ನೀನು ನಿಷ್ಕಲ ನಿರವಯ ನಿಃಶೂನ್ಯನಾಗಿರ್ದೆಯಯ್ಯ ಬಸವಣ್ಣ. ನೀವೊಂದು ಅನಂತಕಾಲ ಅನಂತಯುಗ ನಿಮ್ಮ ಲೀಲಾ ವಿಚಿಂತನೆ ನೆನೆದ ನೆನಹೇ ಸುನಾದ. ಆ ಸುನಾದದ ಪ್ರಕಾಶ ತೇಜೋಪುಂಜವೇ ಬಿಂದು. ನಾದವೇ ನಿರಂಜನ. ಬಿಂದುವೇ ನಿರಾಲಂಬ..... ಕೂಟವೇ ನಿರಾಮಯ. ಇಂತೀ ನಾದ ಬಿಂದು ಕಳೆ ಮೂರು ಕೂಡೆ ಅಖಂಡ ತೇಜೋಮಯವಾಗಿ ಷಡ್‍ಬ್ರಹ್ಮಸ್ವರೂಪವನೈದಿದೆಯಲ್ಲ ಬಸವಣ್ಣ. ನಿನ್ನ ವಿನೋದದಿಂದ ಆ ಷಡ್‍ಬ್ರಹ್ಮದಿಂದ ಷಡ್ವಿಧ ಭೂತಂಗಳು ಪುಟ್ಟಿ ಆ ಷಡ್ವಿಧಭೂತಂಗಳೇ ಎನಗಂಗವಾದಲ್ಲಿ ಆ ಷಡ್‍ಬ್ರಹ್ಮವೇ ಷಡಕ್ಷರಿಮಯವಾಗಿ ಆ ಷಡ್ವಿಧಭೂತಂಗಳೊಳಗೆ ಸಮೇತವಾಗಿ ಕೂಡಿ ಛತ್ತೀಸತತ್ವ ಮಂತ್ರಸ್ವರೂಪವಾದ ಭೇದ ಹೇಗೆಂದಡೆ ಅದಕ್ಕೆ ವಿವರ: ಓಂಕಾರವೇ ಆತ್ಮನು. ಓಂಕಾರ ಯಕಾರ ಸಂಯೋಗವಾದಲ್ಲಿ ಆಕಾಶ ಪುಟ್ಟಿತ್ತು. ಓಂಕಾರ ವಾಕಾರ ಸಂಯೋಗವಾದಲ್ಲಿ ವಾಯು ಪುಟ್ಟಿತ್ತು. ಓಂಕಾರ ಶಿಕಾರ ಸಂಯೋಗದಲ್ಲಿ ಅಗ್ನಿ ಪುಟ್ಟಿತ್ತು. ಓಂಕಾರ ಮಃಕಾರ ಸಂಯೋಗದಲ್ಲಿ ಅಪ್ಪು ಪುಟ್ಟಿತ್ತು. ಓಂಕಾರ ನಕಾರ ಸಂಯೋಗವಾದಲ್ಲಿ ಪೃಥ್ವಿ ಪುಟ್ಟಿತ್ತು. ಇನ್ನ ಯಕಾರ ಓಂಕಾರ ಸಂಯೋಗವಾದಲ್ಲಿ ಭಾವ ಪುಟ್ಟಿತ್ತು. ಯಕಾರವೇ ಜ್ಞಾನ. ಯಕಾರ ವಾಕಾರ ಸಂಯೋಗವಾದಲ್ಲಿ ಮನ ಪುಟ್ಟಿತ್ತು. ಯಕಾರ ಶಿಕಾರ ಸಂಯೋಗವಾದಲ್ಲಿ ಅಹಂಕಾರ ಪುಟ್ಟಿತ್ತು. ಯಕಾರ ಮಃಕಾರ ಸಂಯೋಗವಾದಲ್ಲಿ ಬುದ್ಧಿ ಪುಟ್ಟಿತ್ತು. ಯಕಾರ ನಕಾರ ಸಂಯೋಗವಾದಲ್ಲಿ ಚಿತ್ತು ಪುಟ್ಟಿತ್ತು. ಇನ್ನು ವಕಾರ ಓಂಕಾರ ಸಂಯೋಗವಾದಲ್ಲಿ ಪಂಚವಾಯು ಪುಟ್ಟಿದವು. ವಕಾರ ಯಕಾರ ಸಂಯೋಗವಾದಲ್ಲಿ ಸಮಾನವಾಯು ಪುಟ್ಟಿತ್ತು. ವಾಕಾರ ತಾನೇ ಉದಾನವಾಯು. ವಕಾರ ಶಿಕಾರ ಸಂಯೋಗವಾದಲ್ಲಿ ವ್ಯಾನವಾಯು ಪುಟ್ಟಿತ್ತು. ವಕಾರ ಮಃಕಾರ ಸಂಯೋಗವಾದಲ್ಲಿ ಅಪಾನವಾಯು ಪುಟ್ಟಿತ್ತು. ವಕಾರ ನಕಾರ ಸಂಯೋಗವಾದಲ್ಲಿ ಪ್ರಾಣವಾಯು ಪುಟ್ಟಿತ್ತು. ಇನ್ನು ಶಿಕಾರ ಓಂಕಾರ ಸಂಯೋಗವಾದಲ್ಲಿ ಹೃದಯ ಪುಟ್ಟಿತ್ತು. ಶಿಕಾರ ಯಕಾರ ಸಂಯೋಗವಾದಲ್ಲಿ ಶ್ರೋತ್ರ ಪುಟ್ಟಿತ್ತು. ಶಿಕಾರಾ ವಾಕಾರ ಸಂಯೋಗವಾದಲ್ಲಿ ತ್ವಕ್ಕು ಪುಟ್ಟಿತ್ತು. ಶಿಕಾರ ತಾನೇ ನೇತ್ರ ಶಿಕಾರ ಮಃಕಾರ ಸಂಯೋಗವಾದಲ್ಲಿ ಜಿಹ್ವೆ ಪುಟ್ಟಿತ್ತು. ಶಿಕಾರ ನಕಾರ ಸಂಯೋಗವಾದಲ್ಲಿ ಘ್ರಾಣ ಪುಟ್ಟಿತ್ತು. ಇನ್ನು ಮಃಕಾರ ಓಂಕಾರ ಸಂಯೋಗವಾದಲ್ಲಿ ತೃಪ್ತಿ ಪುಟ್ಟಿತ್ತು. ಮಕಾರ ಯಕಾರ ಸಂಯೋಗವಾದಲ್ಲಿ ಶಬ್ದ ಪುಟ್ಟಿತ್ತು. ಮಕಾರ ವಾಕಾರ ಸಂಯೋಗವಾದಲ್ಲಿ ಸ್ಪರ್ಶನ ಪುಟ್ಟಿತ್ತು. ಮಕಾರ ಶಿಕಾರ ಸಂಯೋಗವಾದಲ್ಲಿ ರೂಪು ಪುಟ್ಟಿತ್ತು. ಮಃಕಾರ ತಾನೇ ರಸ. ಮಕಾರ ನಕಾರ ಸಂಯೋಗವಾದಲ್ಲಿ ಗಂಧ ಪುಟ್ಟಿತ್ತು. ಇನ್ನು ನಕಾರ ಓಂಕಾರ ಸಂಯೋಗವಾದಲ್ಲಿ ಅಂತರ್ವಾಕ್ಕು ಪುಟ್ಟಿತ್ತು. ನಕಾರ ಯಕಾರ ಸಂಯೋಗವಾದಲ್ಲಿ ವಾಕ್ಕು ಪುಟ್ಟಿತ್ತು. ನಕಾರ ವಾಕಾರ ಸಂಯೋಗವಾದಲ್ಲಿ ಪಾಣಿ ಪುಟ್ಟಿತ್ತು. ನಕಾರ ಶಿಕಾರ ಸಂಯೋಗವಾದಲ್ಲಿ ಪಾದ ಪುಟ್ಟಿತ್ತು. ನಕಾರ ಮಃಕಾರ ಸಂಯೋಗವಾದಲ್ಲಿ ಗುಹ್ಯ ಪುಟ್ಟಿತ್ತು. ನಕಾರ ತಾನೇ ವಾಯು. ಇಂತೀ ಛತ್ತೀಸತತ್ವವೆಲ್ಲ ಮಂತ್ರಸ್ವರೂಪವಾದ ಬಸವಣ್ಣನೇ. ಎನಗೆ ಅಂಗ ಲಿಂಗ ಹಸ್ತ ಮುಖ ಶಕ್ತಿ ಭಕ್ತಿ ಪದಾರ್ಥ ಪ್ರಸಾದ ಇಂತಿವೆಲ್ಲವನರಿದು ಅರ್ಪಿಸುವ ಭೇದ ಹೇಗೆಂದಡೆ ಪ್ರಮಥದಲ್ಲಿ ಷಟ್‍ಸ್ಥಲದ ವಿವರ: ಭಕ್ತ ಮಾಹೇಶ್ವರ ಪ್ರಸಾದಿ ಪ್ರಾಣಲಿಂಗಿ ಶರಣ ಐಕ್ಯ. ಇನ್ನು ಭಕ್ತನ ಷಡ್ವಿಧಲಿಂಗದ ವಿವರ: ಆಚಾರಲಿಂಗ ಗುರುಲಿಂಗ ಶಿವಲಿಂಗ ಜಂಗಮಲಿಂಗ ಪ್ರಸಾದಲಿಂಗ ಮಹಾಲಿಂಗ. ಇನ್ನು ಭಕ್ತನ ಷಡ್ವಿಧಹಸ್ತದ ವಿವರ: ಸುಚಿತ್ತ ಸುಬುದ್ಧಿ ನಿರಹಂಕಾರ ಸುಮನ ಸುಜ್ಞಾನ ಸದ್ಭಾವ. ಇನ್ನು ಭಕ್ತನ ಷಡ್ವಿಧಮುಖದ ವಿವರ: ಘ್ರಾಣ ಜಿಹ್ವೆ ನೇತ್ರ ತ್ವಕ್ಕು ಶ್ರೋತ್ರ ಹೃದಯ. ಇನ್ನು ಭಕ್ತನ ಷಡ್ವಿಧಶಕ್ತಿಯ ವಿವರ: ಶ್ರದ್ಧೆ ನೈಷೆ* ಸಾವಧಾನ ಅನುಭಾವ ಆನಂದ ಸಮರಸ. ಇನ್ನು ಭಕ್ತನ ಷಡ್ವಿಧಪದಾರ್ಥದ ವಿವರ: ಗಂಧ ರಸ ರೂಪು ಸ್ಪರ್ಶನ ಶಬ್ದ ಪರಿಣಾಮ. ಇನ್ನು ಭಕ್ತನ ಷಡ್ವಿಧಪ್ರಸಾದದ ವಿವರ: ಗಂಧಪ್ರಸಾದ ರಸಪ್ರಸಾದ ರೂಪುಪ್ರಸಾದ ಸ್ಪರ್ಶಪ್ರಸಾದ ಶಬ್ದಪ್ರಸಾದ ಪರಿಣಾಮಪ್ರಸಾದ. ಇನ್ನು ದ್ವಿತೀಯದಲ್ಲಿ ಮಾಹೇಶ್ವರನ ಷಟ್‍ಸ್ಥಲ ವಿವರ: ಮಾಹೇಶ್ವರ ಭಕ್ತ ಪ್ರಸಾದಿ ಪ್ರಾಣಲಿಂಗಿ ಶರಣ ಐಕ್ಯ. ಇನ್ನು ಮಾಹೇಶ್ವರನ ಷಡ್ವಿಧಲಿಂಗದ ವಿವರ: ಗುರುಲಿಂಗ ಆಚಾರಲಿಂಗ ಶಿವಲಿಂಗ ಜಂಗಮಲಿಂಗ ಪ್ರಸಾದಲಿಂಗ ಮಹಾಲಿಂಗ. ಇನ್ನು ಮಾಹೇಶ್ವರನ ಷಡ್ವಿಧಹಸ್ತದ ವಿವರ: ಸುಬುದ್ಧಿ ಸುಚಿತ್ತ ನಿರಹಂಕಾರ ಸುಮನ ಸುಜ್ಞಾನ ಸದ್ಭಾವ. ಇನ್ನು ಮಾಹೇಶ್ವರನ ಷಡ್ವಿಧಮುಖದ ವಿವರ: ಜಿಹ್ವೆ ಘ್ರಾಣ ನೇತ್ರ ತ್ವಕ್ಕು ಶ್ರೋತ್ರ ಹೃದಯ. ಇನ್ನು ಮಾಹೇಶ್ವರನ ಷಡ್ವಿಧಶಕ್ತಿಯ ವಿವರ: ಜ್ಞಾನಶಕ್ತಿ ಕ್ರಿಯಾಶಕ್ತಿ ಇಚ್ಛಾಶಕ್ತಿ ಆದಿಶಕ್ತಿ ಪರಾಶಕ್ತಿ ಚಿತ್ಯಕ್ತಿ. ಇನ್ನು ಮಾಹೇಶ್ವರನ ಷಡ್ವಿಧಭಕ್ತಿಯ ವಿವರ: ನೈಷೆ* ಶ್ರದ್ಧೆ ಸಾವಧಾನ ಅನುಭಾವ ಆನಂದ ಸಮರಸ. ಇನ್ನು ಮಾಹೇಶ್ವರನ ಷಡ್ವಿಧಪದಾರ್ಥದ ವಿವರ: ರಸ ಗಂಧ ರೂಪು ಸ್ಪರುಶನ ಶಬ್ದ ಪರಿಣಾಮ ಇನ್ನು ಮಾಹೇಶ್ವರನ ಷಡ್ವಿಧಪ್ರಸಾದದ ವಿವರ: ರಸಪ್ರಸಾದ ಗಂಧಪ್ರಸಾದ ರೂಪುಪ್ರಸಾದ ಸ್ಪರುಶನಪ್ರಸಾದ ಶಬ್ದಪ್ರಸಾದ ಪರಿಣಾಮಪ್ರಸಾದ. ಇನ್ನು ತೃತೀಯದಲ್ಲಿ ಪ್ರಸಾದಿಯ ಷಟ್‍ಸ್ಥಲದ ವಿವರ: ಪ್ರಸಾದಿ ಭಕ್ತ ಮಾಹೇಶ್ವರ ಪ್ರಾಣಲಿಂಗಿ ಶರಣ ಐಕ್ಯ. ಇನ್ನು ಪ್ರಸಾದಿಯ ಷಡ್ವಿಧಲಿಂಗದ ವಿವರ: ಶಿವಲಿಂಗ ಆಚಾರಲಿಂಗ ಗುರುಲಿಂಗ ಜಂಗಮಲಿಂಗ ಪ್ರಸಾದಲಿಂಗ ಮಹಾಲಿಂಗ. ಇನ್ನು ಪ್ರಸಾದಿಯ ಷಡ್ವಿದಹಸ್ತದ ವಿವರ: ನಿರಹಂಕಾರ ಸುಚಿತ್ತ ಸುಬುದ್ಧಿ ಸುಮನ ಸುಜ್ಞಾನ ಸದ್ಭಾವ. ಇನ್ನು ಪ್ರಸಾದಿಯ ಷಡ್ವಿಧಮುಖದ ವಿವರ: ನೇತ್ರ ಘ್ರಾಣ ಜಿಹ್ವೆ ತ್ವಕ್ಕು ಶ್ರೋತ್ರ ಹೃದಯ. ಇನ್ನು ಪ್ರಸಾದಿಯ ಷಡ್ವಿಧಶಕ್ತಿಯ ವಿವರ: ಇಚ್ಛಾಶಕ್ತಿ ಕ್ರಿಯಾಶಕ್ತಿ ಜ್ಞಾನಶಕ್ತಿ ಆದಿಶಕ್ತಿ ಪರಾಶಕ್ತಿ ಚಿತ್ಯಕ್ತಿ. ಇನ್ನು ಪ್ರಸಾದಿಯ ಷಡ್ವಿಧಭಕ್ತಿಯ ವಿವರ: ಸಾವಧಾನ ಶ್ರದ್ಧೆ ನೈಷೆ* ಅನುಭಾವ ಆನಂದ ಸಮರಸ. ಇನ್ನು ಪ್ರಸಾದಿಯ ಷಡ್ವಿಧಪದಾರ್ಥದ ವಿವರ: ರೂಪು ಗಂಧ ರಸ ಸ್ಪರುಶನ ಶಬ್ದ ಪರಿಣಾಮ. ಇನ್ನು ಪ್ರಸಾದಿಯ ಷಡ್ವಿಧಪ್ರಸಾದದ ವಿವರ: ರೂಪುಪ್ರಸಾದ ಗಂಧಪ್ರಸಾದ ರಸಪ್ರಸಾದ ಸ್ಪರುಶನ ಪ್ರಸಾದ ಶಬ್ದಪ್ರಸಾದ ಪರಿಣಾಮಪ್ರಸಾದ. ಇಂತೀ ಮಾರ್ಗಕ್ರಿ ಅಂಗ ಲಿಂಗವಾದಲ್ಲಿ ಮುಂದೆ ಮೀರಿದ ಕ್ರಿಯೆ ಅಂಗ ಲಿಂಗ ತೃತೀಯಸ್ಥಲ. ಇನ್ನು ಚತುರ್ಥದಲ್ಲಿ ಪ್ರಾಣಲಿಂಗಿಯ ಷಡ್ವಿಧ ವಿವರ: ಪ್ರಾಣಲಿಂಗಿ ಭಕ್ತ ಮಾಹೇಶ್ವರ ಪ್ರಸಾದಿ ಶರಣ ಐಕ್ಯ. ಇನ್ನು ಪ್ರಾಣಲಿಂಗಿಯ ಷಡ್ವಿಧಲಿಂಗದ ವಿವರ: ಜಂಗಮಲಿಂಗ ಆಚಾರಲಿಂಗ ಗುರುಲಿಂಗ ಶಿವಲಿಂಗ ಪ್ರಸಾದಲಿಂಗ ಮಹಾಲಿಂಗ. ಇನ್ನು ಪ್ರಾಣಲಿಂಗಿಯ ಷಡ್ವಿಧಹಸ್ತದ ವಿವರ: ಸುಮನ ಸುಚಿತ್ತ ಸುಬುದ್ಧಿ ನಿರಹಂಕಾರ ಸುಜ್ಞಾನ ಸದ್ಭಾವ. ಇನ್ನು ಪ್ರಾಣಲಿಂಗಿಯ ಷಡ್ವಿಧಶಕ್ತಿಯ ವಿವರ: ಆದಿಶಕ್ತಿ ಕ್ರಿಯಾಶಕ್ತಿ ಜ್ಞಾನಶಕ್ತಿ ಇಚ್ಛಾಶಕ್ತಿ ಪರಶಕ್ತಿ ಚಿತ್ಯಕ್ತಿ. ಇನ್ನು ಪ್ರಾಣಲಿಂಗಿಯ ಷಡ್ವಿಧಭಕ್ತಿಯ ವಿವರ: ಅನುಭಾವ ಶ್ರದ್ಧೆ ನೈಷೆ* ಸಾವಧಾನ ಆನಂದ ಸಮರಸ. ಇನ್ನು ಪ್ರಾಣಲಿಂಗಿಯ ಷಡ್ವಿಧಪದಾರ್ಥದ ವಿವರ: ಸ್ಪರುಶನ ಗಂಧ ರಸ ರೂಪು ಶಬ್ದ ಪರಿಣಾಮ. ಇನ್ನು ಪ್ರಾಣಲಿಂಗಿಯ ಷಡ್ವಿಧಪ್ರಸಾದದ ವಿವರ: ಸ್ಫರುಶನಪ್ರಸಾದ ಗಂಧಪ್ರಸಾದ ರಸಪ್ರಸಾದ ರೂಪುಪ್ರಸಾದ ಶಬ್ದಪ್ರಸಾದ ಪರಿಣಾಮಪ್ರಸಾದ. ಇನ್ನು ಪಂಚಮದಲ್ಲಿ ಶರಣನ ಷಟ್‍ಸ್ಥಲದ ವಿವರ: ಶರಣ ಭಕ್ತ ಮಾಹೇಶ್ವರ ಪ್ರಸಾದಿ ಪ್ರಾಣಲಿಂಗಿ ಐಕ್ಯ. ಇನ್ನು ಶರಣನ ಷಡ್ವಿಧಲಿಂಗದ ವಿವರ: ಪ್ರಸಾದಲಿಂಗ ಆಚಾರಲಿಂಗ ಗುರುಲಿಂಗ ಶಿವಲಿಂಗ ಜಂಗಮಲಿಂಗ ಮಹಾಲಿಂಗ. ಶರಣನ ಷಡ್ವಿಧಹಸ್ತದ ವಿವರ: ಸುಜ್ಞಾನ ಸುಚಿತ್ತ ಸುಬುದ್ಧಿ ನಿರಂಕಾರ ಸುಮನ ಸದ್ಭಾವ ಇನ್ನು ಶರಣನ ಷಡ್ವಿಧಶಕ್ತಿಯ ವಿವರ: ಪರಾಶಕ್ತಿ ಕ್ರಿಯಾಶಕ್ತಿ ಜ್ಞಾನಶಕ್ತಿ ಇಚ್ಛಾಶಕ್ತಿ ಆದಿಶಕ್ತಿ ಚಿತ್ಯಕ್ತಿ. ಇನ್ನು ಶರಣನ ಷಡ್ವಿಧಭಕ್ತಿಯ ವಿವರ: ಆನಂದ ಶ್ರದ್ಧೆ ನೈಷೆ* ಸಾವಧಾನ ಅನುಭಾವ ಸಮರಸ. ಇನ್ನು ಶರಣನ ಷಡ್ವಿಧ ಪ್ರಸಾದದ ವಿವರ: ಶಬ್ದಪ್ರಸಾದ ಗಂಧಪ್ರಸಾದ ರಸಪ್ರಸಾದ ರೂಪುಪ್ರಸಾದ ಸ್ಪರುಶನಪ್ರಸಾದ ಪರಿಣಾಮಪ್ರಸಾದ. ಇನ್ನು ಷಷ*ಮದಲ್ಲಿ ಆ ಐಕ್ಯನ ಷಟ್‍ಸ್ಥಲದ ವಿವರ: ಐಕ್ಯ ಭಕ್ತ ಮಾಹೇಶ್ವರ ಪ್ರಸಾದಿ ಪ್ರಾಣಲಿಂಗಿ ಶರಣ. ಇನ್ನು ಐಕ್ಯನ ಷಡ್ವಿಧಲಿಂಗದ ವಿವರ: ಮಹಾಲಿಂಗ ಆಚಾರಲಿಂಗ ಗುರುಲಿಂಗ ಶಿವಲಿಂಗ ಜಂಗಮಲಿಂಗ ಪ್ರಸಾದಲಿಂಗ. ಇನ್ನು ಐಕ್ಯನ ಷಡ್ವಿಧಹಸ್ತದ ವಿವರ: ಸದ್ಭಾವ ಸುಚಿತ್ತ ಸುಬುದ್ಧಿ ನಿರಹಂಕಾರ ಸುಮನ ಸುಜ್ಞಾನ. ಇನ್ನು ಐಕ್ಯನ ಷಡ್ವಿಧಮುಖದ ವಿವರ: ಹೃದಯ ಪ್ರಾಣ ಜಿಹ್ವೆ ನೇತ್ರ ತ್ವಕ್ಕು ಶ್ರೋತ್ರ. ಇನ್ನು ಐಕ್ಯನ ಷಡ್ವಿಧಶಕ್ತಿಯ ವಿವರ: ಚಿತ್ಯಕ್ತಿ ಕ್ರಿಯಾಶಕ್ತಿ ಜ್ಞಾನಶಕ್ತಿ ಇಚ್ಛಾಶಕ್ತಿ ಆದಿಶಕ್ತಿ ಪರಾಶಕ್ತಿ. ಇನ್ನು ಐಕ್ಯನ ಷಡ್ವಿಧಭಕ್ತಿಯ ವಿವರ: ಸಮರಸ ಶ್ರದ್ಧೆ ನೈಷೆ* ಸಾವಧಾನ ಅನುಭಾವ ಆನಂದ. ಇನ್ನು ಐಕ್ಯನ ಷಡ್ವಿಧಪದಾರ್ಥದ ವಿವರ: ಪರಿಣಾಮ ಗಂಧ ರಸ ರೂಪು ಸ್ಪರುಶನ ಶಬ್ದ. ಇನ್ನು ಐಕ್ಯನ ಷಡ್ವಿಧಪ್ರಸಾದದ ವಿವರ: ಪರಿಣಾಮಪ್ರಸಾದ ಗಂಧಪ್ರಸಾದ ರಸಪ್ರಸಾದ ರೂಪುಪ್ರಸಾದ ಸ್ಪರುಶನಪ್ರಸಾದ ಶಬ್ದಪ್ರಸಾದ. ಇಂತಿವೆಲ್ಲವೂ ಅರ್ಪಿತವಾಗಲೊಡನೆ ಏಕಮೇವ ಪರಬ್ರಹ್ಮ ತಾನೆಯಾಗಿ ಉಳಿದ ಉಳುಮೆಯೇ ಬಸವಣ್ಣ. ಆ ಬಸವಣ್ಣನೇ ಎನಗೆ ಇಷ್ಟಬ್ರಹ್ಮವು. ಆ ಇಷ್ಟಬ್ರಹ್ಮದಲ್ಲಿ ಎನ್ನ ಅಂಗ ಮನ ಪ್ರಾಣ ಇಂದ್ರಿಯ ಕರಣಂಗಳೆಲ್ಲವು ನಿರವಯಲಾದ ಭೇದ ಹೇಗೆಂದಡೆ ವಾರಿ[ಬಲಿ]ದು ವಾರಿಕಲ್ಲಾಗಿ ವಾರಿಯಾದ ಹಾಗೆ ಉಪ್ಪಿನ ಪೊಟ್ಟಣವಪ್ಪುವಿನೊಳು ಬಯಚಿಟ್ಟ ಹಾಗೆ ಉರಿ ಕರ್ಪುರ ಸಂಯೋಗವಾದ ಹಾಗೆ ಎನ್ನ ಅಂಗ ಮನ ಅಂಗ ಏಕರಸವಾದ ಭೇದವನು ಸಿದ್ಧೇಶ್ವರನು ತೋರಿ[ದ ಕಾ]ರಣ ಪರಂಜ್ಯೋತಿ ಮಹಾಲಿಂಗಗುರು ಸಿದ್ಧಲಿಂಗಪ್ರಭುವಿನಲ್ಲಿ ಬಸವೇಶ್ವರನ ಶ್ರೀಪಾದದಲ್ಲಿ ಮನಮಗ್ನ ಯೋಗವೆನಗಾಯಿತಯ್ಯಾ, ಬೋಳಬಸವೇಶ್ವರ ನಿಮ್ಮ ಧರ್ಮ ನಿಮ್ಮ ಧರ್ಮ.
--------------
ಗುಮ್ಮಳಾಪುರದ ಸಿದ್ಧಲಿಂಗ
-->