ಅಥವಾ

ಒಟ್ಟು 74 ಕಡೆಗಳಲ್ಲಿ , 20 ವಚನಕಾರರು , 74 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸಾಸಿರದಳಕಮಲವೆಂದಡೆ ಸೂಸಿಕೊಂಡಿರುವ ಮನ. ಪವನವೆಂದಡೆ ಎಲ್ಲೆಡೆಯಲ್ಲಿ ಸೂಸಿ ಆಡುವಂತಹದು. ಬಿಂದುವೆಂದಡೆ ಆಗುಮಾಡುವಂತಹದು. ಈ ಮನ ಪವನ ಬಿಂದು ಮೂರನು ಒಡಗೂಡಿ ನೋಡಲು, ಪರಂಜ್ಯೋತಿಪ್ರಕಾಶದಂತಹ ಬೆಳಗೆ ಎನ್ನ ಕಂಗಳ ಮುಂದೆ ನಿಂದಿತ್ತು. ಆ ಮಹಾಬೆಳಗನೆ ಕಂಗಳಲ್ಲಿ ಹೆರೆಹಿಂಗದೆ ನೋಡಿದಡೆ, ಎನ್ನಂಗದ ಒಳಹೊರಗೆ ಪರಿಪೂರ್ಣವಾಗಿದ್ದಿತ್ತು ಕಾಣಾ ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ, ನಿಮ್ಮ ಪಾದಕರುಣದಿಂದ.
--------------
ಹಡಪದಪ್ಪಣ್ಣಗಳ ಪುಣ್ಯಸ್ತ್ರೀ ಲಿಂಗಮ್ಮ
ವಿಕಾರ ಈ ಜನ್ಮದ ಹೊರೆಯ ಕಳೆವುದೆಂದು, ಭೂಕಾರ ಭೂತ ಪಿಶಾಚಿಗಳ ಗ್ರಹಗಳ ನಿಟ್ಟೊರಸುವ ಅರಿಯೆಂದು, ತಿಕಾರ ಅಂತರಂಗದ ಒಳಹೊರಗೆ ಇಡಿದಿಹ ತಿಮಿರಕೆ ಜ್ಯೋತಿಸ್ವರೂಪವೆಂದು ಶ್ರೀ ವಿಭೂತಿಯ ಧರಿಸ ಕಲಿಸಿದನಯ್ಯಾ ಶ್ರೀಗುರು. ಪಂಚಗವ್ಯ ಗೋಮಯದಿಂದುದಯವಾದ ಶ್ರೀವಿಭೂತಿ ಪಂಚಭೂತದ ಪೂರ್ವಗ್ರಹವ ಕಳೆವುದೆಂದು ನಿರೂಪಿಸಿ ಧರಿಸಿದನಯ್ಯಾ. ಇಂತಪ್ಪ ಶ್ರೀ ವಿಭೂತಿಯ ಸಂತತ ಧರಿಸಿ ನಿಶ್ಚಿಂತನಾಗಿದ್ದೆನು ಕಾಣಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಆದಿಯಲ್ಲಿ ಒಬ್ಬ ದೇವನು ಮೂವರ ಕೂಡಿಕೊಂಡು ಆರು ಕೇರಿಗಳ ಪೊಕ್ಕು ನೋಡಲು ಆ ಕೇರಿಗಳಲ್ಲಿ ಆರು ಶಕ್ತಿಯರು ನಿಶಿಧ್ಯಾನವ ಮಾಡಿ ಒಳಹೊರಗೆ ಪರಿಪೂರ್ಣವಾಗಿಹರು ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಅಯ್ಯಾ ಹಳೆಯ ಹುತ್ತದೊಳಗೊಂದು ಎಳೆಯ ಸರ್ಪನ ಕಂಡೆ. ಆ ಎಳೆಯ ಸರ್ಪ ಹೊರಟು, ಬೆಳಗು ಕತ್ತಲೆಯೆರಡೂ ನುಂಗಿತ್ತು. ಆ ಎಳೆಯ ಸರ್ಪನ ಕಂಡು, ಅಲ್ಲಿದ್ದ ತಳಿರ ಮರ ನುಂಗಿತ್ತು. ಆ ತಳಿರ ಮರನ ಕಂಡು ಮಹಾಬೆಳಗು ನುಂಗಿತ್ತು. ಆ ಮಹಾಬೆಳಗ ಕಂಡು, ನಾನೊಳಹೊಕ್ಕು ನೋಡಿದಡೆ, ಒಳಹೊರಗೆ ತೊಳತೊಳಗಿ ಬೆಳಗುತ್ತಿದ್ದಿತಯ್ಯಾ, ಬಸವಪ್ರಿಯ ಕೂಡಲಚೆನ್ನಸಂಗಮದೇವ.
--------------
ಸಂಗಮೇಶ್ವರದ ಅಪ್ಪಣ್ಣ
ಅಂತರಂಗದನುವ ಬಹಿರಂಗಕ್ಕೆ ಬೆರಸಿತಂದು ಹಿಡಿ ಹಿಡಿದು ನಡೆವುದೊಂದು ಕಡುಜಾಣದಾಗು, ಈ ಕುರುಹಿನೊಳು ನಿಂದು ಹೊರಗಣನೆರವಿಯ ಗುದ್ದಾಟಕ್ಕೆ ಸೆರೆಸೂರೆಹೋಯಿತ್ತು ಒಳಗಣ ಒಡವೆ ಊರು ಹಾಳಾದಲ್ಲಿ ಕ್ಷೇತ್ರದ ಸುಖವಾರಿಗೆ ? ಗುರುನಿರಂಜನ ಚನ್ನಬಸವಲಿಂಗ ಒಳಹೊರಗೆ ತನ್ನ ತಾ ನೋಡುತಾಡುತಿರ್ಪನು.
--------------
ದೇಶಿಕೇಂದ್ರ ಸಂಗನಬಸವಯ್ಯ
ಸ್ಫಟಿಕದ ಘಟದೊಳಗಣ ಜ್ಯೋತಿಯಂತೆ, ಒಳಹೊರಗೆ ನೋಡುವಡೆ ಕಾಣಬರುತ್ತಿದೆ. ನುಡಿಸುವಂಥಾದಲ್ಲ, ಸಾರಿ ಇದ್ದಿಹುದು, ಮುಟ್ಟುವೊಡೆ ಕೈಗೆ ಸಿಕ್ಕದು. ಶಾಸ್ತ್ರಸಂಬಂಧದ ಕಲಿಕೆಯೊಳಗಲ್ಲ. ವ್ಯಕ್ತಾವ್ಯಕ್ತವನೊಳಕೊಂಡು ಬಯಲಸಮಾಧಿಯಲ್ಲಿ ಸಿಲುಕಿತ್ತು, ಸೌರಾಷ್ಟ್ರ ಸೋಮೇಶ್ವರಲಿಂಗವು ಪ್ರಾಣವಾಗಿ.
--------------
ಆದಯ್ಯ
ನಕಾರ ನರಜನ್ಮದ ಹೊಲೆಯ ಕಳೆದು, ಮಕಾರ ಮಾಂಸಪಿಂಡದ ಹೊಲೆಯ ಕಳೆದು ಮಂತ್ರಪಿಂಡವ ಮಾಡಿತಯ್ಯಾ. ಶಿಕಾರ ಶಿವದೇಹಿಯ ಮಾಡಿತಯ್ಯ, ವಕಾರ ಒಳಹೊರಗೆ ತೊಳಗಿ ಬೆಳಗಿ ಶುದ್ಧನಮಾಡಿತಯ್ಯ, ಯಕಾರ ಎನ್ನ ಭವವ ಹಿಂಗಿಸಿತಯ್ಯ. ಓಂಕಾರ ಪ್ರಾಣ ಜೀವಾತ್ಮ ದೇಹದ ಮಧ್ಯದೊಳು ಸರ್ವಪೂರ್ಣಮಯವಾಗಿದ್ದಿತಯ್ಯಾ. ಇಂತೀ ಷಡಕ್ಷರಿಯ ಮಂತ್ರವ ಜಪಿಸಿ, ಅಂತಕನ ಪಾಶವ ಸುಟ್ಟು ನಿಟ್ಟೊರಸಿದೆನು ಕಾಣಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಇಷ್ಟಲಿಂಗ ಪ್ರಾಣಲಿಂಗ ಒಂದೆಯೆಂದರಿಯದೆ ಬ್ಥಿನ್ನವಿಟ್ಟು ನುಡಿವ ಭ್ರಾಂತರ ಮಾತ ಕೇಳಲಾಗದು. ಅದೇನು ಕಾರಣವೆಂದೊಡೆ : ತಿಳಿದುಪ್ಪ ಗಟ್ಟಿಗೊಂಡು ಹೆರೆದುಪ್ಪವಾದಂತೆ, ನಿರಾಕಾರ ಪರಬ್ರಹ್ಮವ ಸಾಕಾರಗೊಳಿಸಿ, ಶ್ರೀಗುರುಸ್ವಾಮಿ ಕರುಣಿಸಿ ಕರಸ್ಥಲಕ್ಕೆ ಇಷ್ಟಲಿಂಗವೆನಿಸಿ ಕೊಟ್ಟಬಳಿಕ, ಆ ಲಿಂಗದಲ್ಲಿ ನಿಷ್ಠೆ ಬಲಿಯಲು ಬಾಹ್ಯ ಕರಣಂಗಳು ತರಹರವಾಗಿ, ಆ ಲಿಂಗದ ಚಿತ್‍ಕಳೆ ದೃಷ್ಟಿಸೂತ್ರದಿಂದೆ ತನ್ನ ಅಂತರಂಗಕ್ಕೆ ವೇದ್ಥಿಸಿ ಪ್ರಾಣಲಿಂಗವೆನಿಸುವುದು. ಸ್ಫಟಿಕದ ಘಟದಲ್ಲಿರಿಸಿದ ಜ್ಯೋತಿಯಂತೆ ಒಳಹೊರಗೆ ತೋರುತಿರ್ಪುದು ಒಂದೇ ಲಿಂಗವೆಂದರಿಯದೆ, ಭ್ರಾಂತಿಜ್ಞಾನದಿಂದೆ ಅಂತರಂಗದಲ್ಲಿ ಬೇರೆ ಪ್ರಾಣಲಿಂಗವುಂಟೆಂದು ಇಷ್ಟಲಿಂಗದಲ್ಲಿ ಅವಿಶ್ವಾಸಮಾಡುವ ಭ್ರಷ್ಟಭವಿಗಳ ಮುಖವ ನೋಡಲಾಗದಯ್ಯ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಅಂಗದಲ್ಲಿ ಆಚಾರಲಿಂಗಪ್ರಸಾದ ತಾನೆ, ಆತ್ಮನಲ್ಲಿ ಗುರುಲಿಂಗಪ್ರಸಾದ ತಾನೆ, ಪ್ರಾಣನಲ್ಲಿ ಶಿವಲಿಂಗಪ್ರಸಾದ ತಾನೆ, ಕರಣಂಗಳಲ್ಲಿ ಜಂಗಮಲಿಂಗಪ್ರಸಾದ ತಾನೆ, ವಿಷಯಂಗಳಲ್ಲಿ ಪ್ರಸಾದಲಿಂಗಪ್ರಸಾದ ತಾನೆ, ತೃಪ್ತಿಯಲ್ಲಿ ಮಹಾಲಿಂಗಪ್ರಸಾದ ತಾನೆ, ಸ್ಥೂಲಾಂಗದಲ್ಲಿ ನಿಷ್ಕಲಲಿಂಗಪ್ರಸಾದ ತಾನೆ, ಸೂಕ್ಷ್ಮಾಂಗದಲ್ಲಿ ಶೂನ್ಯಲಿಂಗಪ್ರಸಾದ ತಾನೆ, ಕಾರಣಾಂಗದಲ್ಲಿ ನಿರಂಜನಲಿಂಗಪ್ರಸಾದ ತಾನೆ, ಎನ್ನ ಒಳಹೊರಗೆ ತೆರಹಿಲ್ಲದೆ ಪರಿಪೂರ್ಣವಾಗಿಪ್ಪ ಗುರುನಿರಂಜನ ಚನ್ನಬಸವಲಿಂಗಪ್ರಸಾದ ತಾನೆ.
--------------
ದೇಶಿಕೇಂದ್ರ ಸಂಗನಬಸವಯ್ಯ
ಅತಿಶಯವನತಿಗಳೆದು ನಿರತಿಶಯ ಸುಖದೊಳಗೆ ಪರಮಸುಖಿಯಾಗಿಪ್ಪವರಾರು ಹೇಳಾ ? ನಿಜದ ನಿರ್ಣಯವನರಿದು ಭಜನೆ ಭಾವನೆಯಳಿದು ತ್ರಿಜಗಪತಿಯಾಗಿಪ್ಪವರಾರು ಹೇಳಾ ? ಕೋಡಗದ ಮನದೊಳಗೆ ಮನವಿರಹಿತನಾಗಿ ಗಮನಗೆಡದಿಪ್ಪರಿನ್ನಾರು ಹೇಳಾ ? ಹಗೆಯಲ್ಲಿ ಹೊಕ್ಕು ಹಗೆಯಳಿದು ಸುಖಿಯಾಗಿ ತನಗೆ ತಾ ಕೆಳೆಯಾಗಿಪ್ಪರಾರು ಹೇಳಾ ? ಒಳಹೊರಗೆ ಸರ್ವಾಂಗ ಲಿಂಗವೆ ತಾನಾಗಿ ಇರಬಲ್ಲ ಪರಮಾರ್ಥರಾರು ಹೇಳಾ ? ಕಲಿದೇವಾ, ನಿಮ್ಮ ಶರಣ ಚೆನ್ನಬಸವಣ್ಣನ ನಿಲವನರಿದು, ಶರಣೆಂದು ನಾನು ಸುಖಿಯಾದೆನು.
--------------
ಮಡಿವಾಳ ಮಾಚಿದೇವ
ಮಾಣಿಕ್ಯದ ಮಂಟಪದೊಳಗೆ ಏಳು ಚಿತ್ರಕರೊಡನೆ ಮೇಳವಿಸಿದನು ಮಹಾಮಂತ್ರಂಗಳ. ಮೂಲಮಂತ್ರದ ಮೇಲೆ ಪ್ರಾಣಲಿಂಗದ ಬೆಳಗು! ವಾರಿಕಲ್ಲಲ್ಲಿ ವಜ್ರದ ಕೀಲು ಕೂಟ ಜಾಳಾಂಧರದೊಳಗೆ ಮಾಣಿಕ್ಯದ ಪ್ರತಿಬಿಂಬ ಏಳು ರತ್ನದ ಪುತ್ಥಳಿಗಳಾಟವು, ಮಣಿಮಾಲೆಗಳ ಹಾರ, ಹೊಳೆವ ಮುತ್ತಿನ ದಂಡೆ, ಎಳೆಯ ನೀಲದ ತೊಡಿಗೆಯನೆ ತೊಟ್ಟರು, ಸುಳಿದು ಮದ್ದಳೆಗಾರರೊಳು ಮೊಳಗೆ (ದಂದ?) ಮೆನಲು ಕುಣಿವ (ಪಾಡುವ) ಬಹುರೂಪಿಗಳ ನಾಟಕ, ತಾಳಧಾರಿಯ ಮೇ? ಕಹಳೆಗಾರನ ನಾದ ಕೊಳಲ ರವದೊಳಗಾಡುತ್ತ ಒಳಹೊರಗೆ ಕಾಣಬರುತ್ತದೆ ಚಿತ್ರದ ಬೊಂಬೆ! ಫಣಿಪತಿಯ ಕೋಣೆ ಸಂದಣಿಸುತ್ತಿರಲು ಗಣಮೇ? ಕೂಡಲಚೆನ್ನಸಂಗಯ್ಯನಲ್ಲಿ ಕಳಸ (ಕಳಾಸರಿ) ಪ್ರಾಣಲಿಂಗದ ಬೆಳಗಿನೊಳು ಬೆಳಗಿತ್ತು
--------------
ಚನ್ನಬಸವಣ್ಣ
ಆಣವಮಲವ ಕರುಣಜಲದಿಂದೆ ತೊಳೆದು ಸದ್ಗುರುಲಿಂಗವೆನ್ನ ಅಂಗದಲ್ಲಿರಲು, ಸಕಲಕ್ರಿಯಂಗಳೆಲ್ಲ ಸತ್ಕ್ರೀಯಾಸ್ವರೂಪವಾಗಿ ಕಾಣಿಸುತಿರ್ದವು. ಮಾಯಾಮಲವ ವಿನಯಜಲದಿಂದೆ ತೊಳೆದು ಚಿದ್ಗುರುಲಿಂಗವೆನ್ನ ಪ್ರಾಣದಲ್ಲಿರಲು, ಸಕಲಜ್ಞಾನಂಗಳೆಲ್ಲ ಸುಜ್ಞಾನಸ್ವರೂಪವಾಗಿ ಕಾಣಿಸುತಿರ್ದವು. ಕಾರ್ಮಿಕಮಲವ ಸಮತಾಜಲದಿಂದೆ ತೊಳೆದು ಆನಂದಗುರುಲಿಂಗವೆನ್ನ ಭಾವದಲ್ಲಿರಲು, ಸಕಲಭಾವಂಗಳೆಲ್ಲ ಮಹಾನುಭಾವವಾಗಿ ಕಾಣಿಸುತಿರ್ದವು. ಇಂತು ಸತ್ಕ್ರಿಯಾ ಸಮ್ಯಕ್‍ಜ್ಞಾನ ಮಹಾನುಭಾವ ಸನ್ನಿಹಿತನಾಗಿ ಒಳಹೊರಗೆ ಪರಿಪೂರ್ಣ ಪ್ರಕಾಶಮಯವಾಗಿರ್ದೆನು ಕಾಣಾ ಗುರುನಿರಂಜನ ಚನ್ನಬಸವಲಿಂಗಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ಷಡೀಂದ್ರಿಯ ಸಪ್ತಧಾತುಗಳಲ್ಲಿ ಸಂಭ್ರಮಿಸಿ ತುಂಬಿರ್ಪುದು ಒಂದೇ ಪರವಸ್ತುವೆಂದರಿಯರು. ಷಡ್‍ಭೂತ ಷಟ್‍ಚಕ್ರಂಗಳಲ್ಲಿ ಇಡಿದು ತುಂಬಿರ್ಪುದು ಒಂದೇ ಪರವಸ್ತುವೆಂದರಿಯರು. ತನುತ್ರಯ ಮನತ್ರಯ ಭಾವತ್ರಯಂಗಳಲ್ಲಿ ಭರಿತವಾಗಿರ್ಪುದು ಒಂದೇ ಪರವಸ್ತುವೆಂದರಿಯರು. ಒಳಹೊರಗೆ ತೆರಹಿಲ್ಲದೆ ಪರಿಪೂರ್ಣವಾಗಿ ತುಂಬಿರ್ಪುದು ಒಂದೇ ಪರವಸ್ತುವೆಂದರಿಯರು. ವಿಪರೀತ ಭ್ರಾಂತಿಜ್ಞಾನದಿಂದೆ ಒಳಗೆ ಬೇರೆ ಪರವಸ್ತು ಉಂಟೆಂದು ಕಣ್ಣಮುಚ್ಚಿ ನೋಡಿ ಕಳವಳಗೊಂಡು ಪ್ರಳಯಕ್ಕೊಳಗಾಗಿ ಹೋದವರ ಕಂಡು ನಗುತಿರ್ಪನು ನಮ್ಮ ಅಖಂಡೇಶ್ವರನು.
--------------
ಷಣ್ಮುಖಸ್ವಾಮಿ
ಕಾಡಡವಿಯೊಳೋರ್ವನೆ ದೆಸೆಯಗಾಣದೆ ಅಸುವಳಿವ ಕಾಲದಲ್ಲಿ, ಒಸೆದೋರ್ವ ಬಂದು ಬಾ ಬಾ ಎಂದೆತ್ತಿ ಪೊಳಲುಬಳಗದ ಮಧ್ಯ ನಿಲಿಸುವಂತೆ, ಎನ್ನಾದಿಮಧ್ಯವಸಾನವಳಿದು, ಭವಾರಣ್ಯ ಬ್ಥೀತಿತ್ರಯದೊಳಿರ್ಪ ಆತ್ಮನನು ಅಭಯದಿಂದೆತ್ತಿ, ಅರಿ ಸಕಲ ಪರಿಸಿ ತಲೆದಡಹಿ, ಮೋಹದ ಮಾತಿನಿಂ ಕೈಯೊಳಗೆ ಕೈಯನಿತ್ತು ಕರುಣಿಸಿದ ಒಳಹೊರಗೆ ಸಹಜದಲ್ಲಿ ನಿರಂಜನ ಚನ್ನಬಸವಲಿಂಗವೆಂಬ ಸದ್ಗುರುನಾಥನು.
--------------
ದೇಶಿಕೇಂದ್ರ ಸಂಗನಬಸವಯ್ಯ
ಊರೊಳಗಿನ ಬೆಂಕಿ ಅಬ್ಬರಿಸಿ ಆವರಿಸಿದಲ್ಲಿ ಒಬ್ಬರೂ ಮುಖವಂತರಿಲ್ಲ ನೋಡಾ. ಊರಡವಿವೊಂದಾಗಿ ಉರಿಯುತ್ತಿರಲು ವ್ಯಾಘ್ರನ ಪ್ರಾಯವಳಿಯದು ನೋಡಾ. ಮೂರು ದೊರೆಗಳು ಮುಂತಾದ ಸಕಲರ ಸಂಬಂಧವ ನೋಡಾ. ಇದನೊಂದು ಮುಖದಲ್ಲಿ ನೋಡಲು ಹೊರಗಣ ಬೆಂಕಿ ಒಳಗೆದ್ದು ಉರಿವಲ್ಲಿ ಹೊಳಪಗೆಡಿಸಿ ಒಳಹೊರಗೆ ತಾನಲ್ಲದೆ ನೆಳಲಿಲ್ಲದ ಸುಖರೂಪ ಗುರುನಿರಂಜನ ಚನ್ನಬಸವಲಿಂಗಾ ನಿಮ್ಮ ಶರಣ.
--------------
ದೇಶಿಕೇಂದ್ರ ಸಂಗನಬಸವಯ್ಯ
ಇನ್ನಷ್ಟು ... -->