ಅಥವಾ

ಒಟ್ಟು 46 ಕಡೆಗಳಲ್ಲಿ , 30 ವಚನಕಾರರು , 43 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಒಳಗೆ ತಿಳಿಯದೆ ಹೊರಗೆ ಮಾಡುವ ಮಾಟವೆಲ್ಲ ಅಜ್ಞಾನದ ಗಡಣದೊಳಗು. ಒಳಗೆ ಗುರುಲಿಂಗಜಂಗಮದ ಪಾದತೀರ್ಥಪ್ರಸಾದವ ಕೊಂಡೆವೆಂದು ಹೊರಗೆ ಮಾಡುವ ಭಕ್ತಿಯ ಬಿಟ್ಟರೆ ಮುಂದೆ ಒದಗುವ ಮುಕ್ತಿಯ ಕೇಡು. ಅದೆಂತೆಂದೊಡೆ : ಅಸಲು ಕಳೆದ ಬಳಿಕ ಲಾಭವುಂಟೇ ? ಇಲ್ಲ ಇಲ್ಲ, ಮಾಣು. ಒಳಗಣ ಕೂಟ, ಹೊರಗಣ ಮಾಟವನರಿಯದೆ ಕೆಟ್ಟರು ನೋಡಾ ಹಿರಿಯರೆಲ್ಲರು ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಊರ ಒಳಗಣ ಬಯಲು, ಊರ ಹೊರಗಣ ಬಯಲೆಂದುಂಟೆ ? ಊರೊಳಗೆ ಬ್ರಾಹ್ಮಣಬಯಲು, ಊರ ಹೊರಗೆ ಹೊಲೆಬಯಲೆಂದುಂಟೆ ? ಎಲ್ಲಿ ನೋಡಿದಡೆ ಬಯಲೊಂದೆ; ಭಿತ್ತಿಯಿಂದ ಒಳಹೊರಗೆಂಬನಾಮವೈಸೆ. ಎಲ್ಲಿ ನೋಡಿದಡೆ ಕರೆದಡೆ ಓ ಎಂಬಾತನೆ ಬಿಡಾಡಿ.
--------------
ಬೊಂತಾದೇವಿ
ನಾ ಮಾರಬಂದ ಸುಧೆಯ ಕೊಂಬವರಾರೂ ಇಲ್ಲ. ಹೊರಗಣ ಭಾಜನಕ್ಕೆ, ಒಳಗಣ ಇಂದ್ರಿಯಕ್ಕೆ ಉಂಡು ದಣಿದು, ಕಂಡು ದಣಿದು, ಸಂದೇಹವ ಬಿಟ್ಟು ದಣಿದು, ಕಂಡುದ ಕಾಣದೆ, ಸಂದೇಹದಲ್ಲಿ ಮರೆಯದೆ, ಆನಂದವೆಂಬುದ ಅಲಿಂಗನವ ಮಾಡಿ, ಆ ಕಂಗಳಂ ಮುಚ್ಚಿ, ಮತ್ತಮಾ ಕಂಗಳಂ ತೆರೆದು ನೋಡಲಾಗಿ, ಧಮೇಶ್ವರಲಿಂಗವು ಕಾಣಬಂದಿತ್ತು.
--------------
ಹೆಂಡದ ಮಾರಯ್ಯ
ಅಂತರಂಗದನುವ ಬಹಿರಂಗಕ್ಕೆ ಬೆರಸಿತಂದು ಹಿಡಿ ಹಿಡಿದು ನಡೆವುದೊಂದು ಕಡುಜಾಣದಾಗು, ಈ ಕುರುಹಿನೊಳು ನಿಂದು ಹೊರಗಣನೆರವಿಯ ಗುದ್ದಾಟಕ್ಕೆ ಸೆರೆಸೂರೆಹೋಯಿತ್ತು ಒಳಗಣ ಒಡವೆ ಊರು ಹಾಳಾದಲ್ಲಿ ಕ್ಷೇತ್ರದ ಸುಖವಾರಿಗೆ ? ಗುರುನಿರಂಜನ ಚನ್ನಬಸವಲಿಂಗ ಒಳಹೊರಗೆ ತನ್ನ ತಾ ನೋಡುತಾಡುತಿರ್ಪನು.
--------------
ದೇಶಿಕೇಂದ್ರ ಸಂಗನಬಸವಯ್ಯ
ಕತ್ತೆಯ ಮೇಲೆ ತಿತ್ತಿಯ ಮಾಡಿ ಕಳ್ಳು ಹೇರುವರು, ಅದಕ್ಕದು ಸತ್ಯವಯ್ಯ. ಎತ್ತಿನ ಮೇಲೆ ತಿತ್ತಿಯ ಮಾಡಿ ತೈಲ ತುಪ್ಪವ ಹೇರುವರು, ಅದಕ್ಕದು ಸತ್ಯವಯ್ಯ. ಆ ತಿತ್ತಿಯ ಒಳಗಣ ತೈಲ ತುಪ್ಪವ ತಂದು, ನಿತ್ಯ ಗುರು-ಲಿಂಗ-ಜಂಗಮಕ್ಕೆ ನೀಡುವ ಭಕ್ತನ ಭಕ್ತಿ ಎಂತಾಯಿತ್ತೆಂದಡೆ: ಆ ಕತ್ತೆಯ ಮೇಲೆ ಹೇರುವ ಕಳ್ಳುಗುಂಡಿಗಿಂದ ಕಡೆಯೆಂದಾತ ನಮ್ಮ ಅಂಬಿಗ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ಒಳಗಣ ಕಲ್ಲು, ಮೇಲಣ ಮರ, ನಡುವಣ ಮಣ್ಣು, ಹೊಡೆವವನಂಗ ಹದನರಿದಡೆ ಕುಂಭ. ಇಂತೀ ಮೂವರೆದೆಯನರಿ, ಆಮಳ ಸಂದಿಗೆ ಒಡಗೂಡದಿರು. ಸಾಕು ಬಿಡು, ತೂತಿನ ಹಾದಿಯ ಆತುರವೈರಿ ಮಾರೇಶ್ವರಾ.
--------------
ನಗೆಯ ಮಾರಿತಂದೆ
ಆ ಬೊಕ್ಕಸದ ಮನೆಯಿಪ್ಪ ಭೇದ : ಹೊರಗಣ ಹೊದಕೆ ನಾನಾ ಚಿತ್ರವಿಚಿತ್ರ. ಮಳೆಗೆ ನೆನವುದು, ಬೆಂಕಿಗೆ ಬೇವುದು, ಗಾಳಿಗೆ ಮುರಿಯುವುದು. ಆ ಮನೆಗೆ ವಿರೋಧವಾಹಲ್ಲಿ ಪಟ್ಟಿ ಕೆಡದು ದೇವಾಂಗ ಬೇಯದು, ರತ್ನ ಗಾಳಿಯ ತಪ್ಪಲಿಗೆ ಒಳಗಾಗದು. ಈ ಬೊಕ್ಕಸದ ಮನೆಯ ಹೊರಗಣ ಕೇಡು, ಒಳಗಣ ಲಾಭವ ನಿರೀಕ್ಷಿಸಿ ನೋಡಬೇಕು. ಬಸವಣ್ಣಪ್ರಿಯ ನಾಗರೇಶ್ವರಲಿಂಗವ ಕೇಳಬೇಕು.
--------------
ಆನಂದಯ್ಯ
ಹೊರಗಣ ಮಲತ್ರಯಕ್ಕೆ ಒಳಗಣ ಅರಿವ ನೀಗಾಡಲೇತಕ್ಕೆ? ಅಲ್ಪ ಸುಖಕ್ಕೆ ಮಚ್ಚಿ ಕುಕ್ಕುರನಂತೆ ಸಿಕ್ಕಿಸಾಯಲೇತಕ್ಕೆ? ನಿಶ್ಚಯವಾಗಿ ತಾ ಬಂದ ಆದಿ ಅನಾದಿಯೆಂಬ ವಸ್ತುವ ತಿಳಿದು ನೋಡಿ ಚಿಕ್ಕಯ್ಯಪ್ರಿಯ ಸಿದ್ಧಲಿಂಗವನರಿಯಬಲ್ಲಡೆ ಇಲ್ಲ ಇಲ್ಲ ಎಂದೆ.
--------------
ಘಟ್ಟಿವಾಳಯ್ಯ
ಕ್ರೀಯೆಂದು ಕಲ್ಪಿಸುವಲ್ಲಿ, ನಿಃಕ್ರೀಯೆಂದು ಆರೋಪಿಸುವಲ್ಲಿ, ಆ ಗುಣ ಭಾವವೋ, ನಿರ್ಭಾವವೋ ? ಕ್ರೀಯಲ್ಲಿ ಕಾಬ ಲಕ್ಷ, ನಿಃಕ್ರೀಯಲ್ಲಿ ಕಾಬ ಚಿತ್ತ, ಉಭಯದ ಗೊತ್ತು ಅದೇನು ಹೇಳಾ. ಬೀಜದ ಸಸಿಯ ಒಳಗಣ ಬೇರಿನಂತೆ, ಅದಾವ ಠಾವಿನ ಕುರುಹು ಹೇಳಾ. ಲಕ್ಷ ನಿರ್ಲಕ್ಷವೆಂಬುದು ಅದೆಂತೆ ಇದ್ದಿತ್ತು ಅಂತೆ ಇದ್ದಿತ್ತು, ಕಾಮಧೂಮ ಧೂಳೇಶ್ವರನು.
--------------
ಮಾದಾರ ಧೂಳಯ್ಯ
ಹೊತ್ತಾರೆ ಎದ್ದು ಹೂ ಪತ್ರೆಯ ಕುಯಿ[ದು] ತಂದು ಹೊರ ಉಪಚಾರವ ಮಾಡುವುದೆಲ್ಲ ಬರಿಯ ಭಾವದ ಬಳಲಿಕೆ ನೋಡಾ. ಅಳಲದೆ ಬಳಲದೆ ಆಯಾಸಂಬಡದೆ ಒಳಗಣ ಜ್ಯೋತಿಯ ಬೆಳಗಿನ ಕಳೆಯ ಕಮಲವ ಪೂಜಿಸಬಲ್ಲ ಶರಣಂಗೆ ಬೆಳಗಾಗೆದ್ದು ಪೂಜಿಸಿಹೆನೆಂಬ ಕಳವಳವೆಂದೇನು ಹೇಳಾ? ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಕಂಗಳ ಮುಂದೆ ಕತ್ತಲೆ ಇದೇನೊ? ಮನದ ಮುಂದಣ ಮರಣ (ಮರವೆ ?) ಇದೇನೊ? ಒಳಗಣ ರಣರಂಗ ಹೊರಗಣ ಶೃಂಗಾರ ! ಬಳಕೆಗೆ ಬಂದ ಬಟ್ಟೆ ಇದೇನೊ ಗುಹೇಶ್ವರಾ ?
--------------
ಅಲ್ಲಮಪ್ರಭುದೇವರು
ಹೊರಗಣ ಭವಿಯ ಕಳೆದೆವೆಂಬರು, ಒಳಗಣ ಭವಿಯ ಕಳೆಯಲರಿಯರು. ಕಾಮವೆಂಬುದೊಂದು ಭವಿ, ಕ್ರೋಧವೆಂಬುದೊಂದು ಭವಿ, ಲೋಭವೆಂಬುದೊಂದು ಭವಿ, ಮೋಹವೆಂಬುದೊಂದು ಭವಿ, ಮದವೆಂಬುದೊಂದು ಭವಿ, ಮಚ್ಚರವೆಂಬುದೊಂದು ಭವಿ, ಆಸೆಯೆಂಬುದೊಂದು ಭವಿ, ಆಮಿಷವೆಂಬುದೊಂದು ಭವಿ, ಹೊನ್ನೆಂಬುದೊಂದು ಭವಿ, ಹೆಣ್ಣೆಂಬುದೊಂದು ಭವಿ, ಮಣ್ಣೆಂಬುದೊಂದು ಭವಿ. ಇಂತೀ ಭವಿಯ ಕಳೆದುಳಿದ ಕೂಡಲಚೆನ್ನಸಂಗಾ ನಿಮ್ಮ ಶರಣ.
--------------
ಚನ್ನಬಸವಣ್ಣ
ಶೀಲ ಶೀಲವೆಂದು ನುಡಿವ ಉದ್ದೇಶಪ್ರಾಣಿಗಳು ಎಲ್ಲರೂ ಅನಂತಶೀಲರು, ಅರಿವಿನ ನಿರ್ಣಯವನರಿಯರು. ಹೊರಗೆ ಬಳಸುವರು, ಒಳಗಣ ಶುದ್ಧಿಯನರಿಯರು. ನೇಮಶೀಲವೆಂದು ಹಿಡಿವರು, ನಿರ್ಣಯವನರಿಯರಾಗಿ, ಕೂಡಲಚೆನ್ನಸಂಗಯ್ಯನಲ್ಲಿ ಉದ್ದೇಶಪ್ರಾಣಿಗಳು.
--------------
ಚನ್ನಬಸವಣ್ಣ
ಪಾತಾಳದಿಂದತ್ತ ಮಾತ ಬಲ್ಲವರಿಲ್ಲ, ಗಗನದಿಂದ ಮೇಲೆ ಅನುಭಾವ ತಾನಿಲ್ಲ. ಒಳಗಣ ಜ್ಯೋತಿಯ ಬೆಳಗ ಬಲ್ಲವರಿಲ್ಲ; ಹೊರಗಣ ಹೊರಗನು ಅರಿಯಬಲ್ಲವರಿಲ್ಲ. ಹಿಂದಣ ಹಿಂದನು, ಮುಂದಣ ಮುಂದನು, ತಂದು ತೋರಿದ ನಮ್ಮ ಗುಹೇಶ್ವರನು.
--------------
ಅಲ್ಲಮಪ್ರಭುದೇವರು
ಲಿಂಗಪೂಜೆಯ ಮಾಡುವಲ್ಲಿ ಮನ ಗುರಿಯ ತಾಗಿದ ಕೋಲಿನಂತಿರಬೇಕು. ಶಿವಲಿಂಗಪೂಜೆಯ ಮಾಡುವಲ್ಲಿ ಶ್ರವಕ್ಕೆ ಸಂಜೀವನ ಹುಟ್ಟಿದಂತಿರಬೇಕು. ಹೀಗಲ್ಲದೆ ಪೂಜೆಯಲ್ಲ. ಒಳಗಣ ಹುಳುಕು ಮೇಲಕ್ಕೆ ನಯವುಂಟೆ, ಆ ತರು ಒಣಗುವವಲ್ಲದೆ? ಇಂತೀ ಬರುಬರ ಅರ್ಚನೆ ಹುರಿಯ ಬೊಂಬೆಯಂತೆ. ಇಂತೀ ಅರಿಗುರಿಗಳ ಪೂಜೆ ಬರುಕಟೆಯಂತೆ ನಾರಾಯಣಪ್ರಿಯ ರಾಮನಾಥಾ.
--------------
ಗುಪ್ತ ಮಂಚಣ್ಣ
ಇನ್ನಷ್ಟು ... -->