ಅಥವಾ

ಒಟ್ಟು 20 ಕಡೆಗಳಲ್ಲಿ , 11 ವಚನಕಾರರು , 19 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಜಲಮಣಿಯ ಬೆಗಡವನಿಕ್ಕಬಹುದೆ ? ಬಯಲ ಬಂದ್ಥಿಸಬಹುದೆ ? ಒಲುಮೆಯ ರಸಿಕಕ್ಕೆ ಸಲೆ ನಿಳಯವುಂಟೆ ? ಇದು ಸುಲಲಿತ, ಇದರ ಒಲುಮೆಯ ಹೇಳಾ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಸರ್ವಾಚಾರಸಂಪತ್ತನರಿದಲ್ಲದೆ ನಿರವಯಲಪದವ ಕಾಣಬಾರದು ನೋಡಾ ಆರಿಗೆಯು. ಸರ್ವಾಚಾರಸಂಪತ್ತು ಎಂತೆನಲು, ಷಡ್‍ಭೂತಂಗಳಲ್ಲಿ ಷಡ್ವಿಧ ಮಂತ್ರಂಗಳ ನೆಲೆಗೊಳಿಸಿ, ಆ ಷಡ್ವಿಧ ಮಂತ್ರಂಗಳನೆ ಷಡ್ವಿಧಚಕ್ರಂಗಳೆಂದು ತಿಳಿದು, ಆ ಷಡ್ವಿಧ ಚಕ್ರಂಗಳಿಗೆ ಷಡ್ವಿಧ ಅದ್ಥಿದೈವಂಗಳನೆ ಷಡ್ವಿಧ ಅಂಗವೆಂದಾಧಾರಗೊಳಿಸಿ, ಆ ಷಡ್ವಿಧ ಅಂಗಕ್ಕೆ ಷಡ್ವಿಧ ಕರಣಂಗಳನೆ ಷಡ್ವಿಧ ಹಸ್ತಂಗಳೆಂದು ಅರಿದಳವಡಿಸಿಕೊಂಡು, ಆ ಷಡ್ವಿಧ ಹಸ್ತಂಗಳಿಗೆ ಷಡ್ವಿಧ ಲಿಂಗಂಗಳನಳವಡಿಸಿಕೊಂಡು, ಆ ಷಡ್ವಿಧ ಲಿಂಗಕ್ಕೆ ಷಡ್ವಿಧೇಂದ್ರಿಯಂಗಳನೆ ಷಡ್ವಿಧ ಪದಾರ್ಥಂಗಳೆಂದರಿದು, ಆ ಷಡ್ವಿಧ ಪದಾರ್ಥಂಗಳನು ಷಡ್ವಿಧ ಭಕ್ತಿಯಿಂದೆ ಷಡ್ವಿಧ ಲಿಂಗಮುಖಂಗಳಿಗೆ ಸಮರ್ಪಿಸಲು, ಒಳಹೊರಗೆಲ್ಲ ಆ ಷಡ್ವಿಧ ಲಿಂಗದ ಬೆಳಗು ತುಂಬಿ ತೊಳಗಿ ಬೆಳಗುತಿರ್ಪುದು ನೋಡಾ. ಎಡೆದೆರಹಿಲ್ಲದೆ ಆ ಷಡ್ವಿಧ ಲಿಂಗದ ಬೆಳಗಿನೊಳಗೆ ತನ್ನ ಷಡ್ವಿಧಾಂಗದ ಕಳೆಗಳನೆಲ್ಲವನಡಗಿಸಿ, ತಾನೆಂಬ ಕುರುಹುದೋರದಿರ್ದಡೆ ಅದೇ ಸರ್ವಾಚಾರಸಂಪತ್ತು ನೋಡಾ. ಇಂತಪ್ಪ ಸರ್ವಾಚಾರಸಂಪತ್ತು ನಿಮ್ಮ ಪೂರ್ಣ ಒಲುಮೆಯ ಶರಣರಿಗಲ್ಲದೆ ಉಳಿದವರಿಗಳವಡದಯ್ಯಾ ಅಖಂಡೇಶ್ವರಾ ?
--------------
ಷಣ್ಮುಖಸ್ವಾಮಿ
ಭಕ್ತಿ ಜ್ಞಾನ ವೈರಾಗ್ಯವುಳ್ಳಾತನೆ ಗಂಬ್ಥೀರ, ಭಕ್ತಿ ಜ್ಞಾನ ವೈರಾಗ್ಯವಿಲ್ಲದೆ ಅಂಗಮೂರರ ಸಂಗಸೌಖ್ಯವನರಿಯಬಾರದು. ಅದೆಂತೆಂದೊಡೆ:ಅಡಿಯಿಟ್ಟು ಬಂದ ಗುರುಲಿಂಗಜಂಗಮಕ್ಕೆ ಸ್ಥೂಲತನುತ್ರಯವ ಸೂರೆಮಾಡಿದ ಬರವನರಿದು ಸಮುಖರತಿ ಸಂಧಾನಸುಖವನರಿಯಬಲ್ಲರೆ ಭಕ್ತಿಗಂಬ್ಥೀರನಹುದೆಂಬೆ. ಸೂಕ್ಷ್ಮತನುವ ಸುಜ್ಞಾನದೊಳಿಟ್ಟು ಸುಯಿಧಾನವೆರೆದು ಅವರಂತಸ್ಥಕ್ಕೊತ್ತೆಗೈದು ಒಲುಮೆಯ ಬರವನರಿದು ಘನರತಿಸಂಬಂಧಸುಖವನರಿಯಬಲ್ಲರೆ ಜ್ಞಾನಗಂಭೀರನೆಂಬೆ. ಕಾರಣತನುವನು ನಿಃಸಂಕಲ್ಪ ನಿರ್ವಂಚನೆ ನಿರ್ಭೇದವೆಂಬ ಸತ್ಯಜ್ಞಾನದಲ್ಲಿರಿಸಿ ಮಿಥ್ಯಮಮಕಾರವ bs್ಞೀದಿಸಿ ಸದ್ಭಾವಗೂಡಿ ಅವರ ಮಹಾನುಭಾವಕ್ಕೊತ್ತೆಗೈದು ಹರುಷರಸಬರವನರಿದು ನಿರ್ಭಾವರಸವೆತ್ತಿ ನಿರ್ವಾಣಸುಖಸಮರಸವ ಬಲ್ಲರೆ ಆತ ವೈರಾಗ್ಯ ಗಂಬ್ಥೀರನೆಂಬೆ. ಈ ಸೌಭಾಗ್ಯತ್ರಯವನುಳ್ಳಾತನೆ ಚೆಲುವಂಗ ಪ್ರಾಣಾತ್ಮಪ್ರಿಯ ಸಿದ್ಧಲಿಂಗ ತಾನೆ ಬೇರಿಲ್ಲ.
--------------
ದೇಶಿಕೇಂದ್ರ ಸಂಗನಬಸವಯ್ಯ
ಎಮ್ಮ ನಲ್ಲನೊದು ಒಲಿಸಿ ಕಾಡುತ್ತಿರೆ, `ಬಾರಾ ಬಾರಾ' ಎಂದೆನ್ನ ಕರಣ ಹರಣವ ತೋರಿದಡೆ ತಾನೆ ಒಲಿದು ಬಂದೆನ್ನ ತಲೆಯ ಪಿಡಿದು ನೆಗಹಿ, ಎನ್ನ ಮನೆಗೆ ಬಂದ ಕಪಿಲಸಿದ್ಧಮಲ್ಲಿನಾಥನ ಒಲುಮೆಯ ಘನವೇನೆಂದುಪಮಿಸುವೆನು.
--------------
ಸಿದ್ಧರಾಮೇಶ್ವರ
ಅಂಗ ಮಾಸಿದಲ್ಲಿ ಜಲದೊಲುಮೆ; ಮನ ಮರೆದಲ್ಲಿ ಅರಿವಿನೊಲುಮೆ; ಈ ಉಭಯವು ಮರೆದಲ್ಲಿ ಮಹಾಶರಣರ ಸಂಗದೊಲುಮೆ, ಒಲುಮೆಯ ಒಲವರವ ನಿನ್ನಿ ನೀನರಿ, ಪುಣ್ಯಾರಣ್ಯದಹನ ಬ್ಥೀಮೇಶ್ವರಲಿಂಗ ನಿರಂಗಸಂಗ.
--------------
ಕೋಲ ಶಾಂತಯ್ಯ
ಒಲುಮೆಯ ಕೂಟಕ್ಕೆ ಹಾಸಿನ ಹಂಗೇಕೆ ? ಬೇಟದ ಮರುಳಗೆ ಲಜ್ಜೆ ಮುನ್ನುಂಟೆ ? ನಿಮ್ಮನರಿದ ಶರಣಂಗೆ ಪೂಜೆಯ ಹಂಬಲ, ದಂದುಗವೇಕೆ ? ಮಿಸುನಿಯ ಚಿನ್ನಕ್ಕೆ ಒರೆಗಲ್ಲ ಹಂಗೇಕೆ ? ಗುಹೇಶ್ವರಲಿಂಗಕ್ಕೆ ಕುರುಹು ಮುನ್ನುಂಟೆ ?
--------------
ಅಲ್ಲಮಪ್ರಭುದೇವರು
ಗಂಡನ ಸುಖಬಲ್ಲ ಮಿಂಡೆಯರೆಲ್ಲ ಬನ್ನಿರೆ. ತಂಡ ತಂಡದ ಭೋಗವನಾ ಮಂಡಲದ ಮಾನಿನಿಯರೇನು ಬಲ್ಲರು ಕಾಣಿರೆ ! ಸುಚಿತ್ತಾಲಯದಲ್ಲಿ ಬಹಿರಚತುಷ್ಟಿಕಳಾಯುಕ್ತದಿಂ ನೆರೆವ ವತ್ತರ ಒಲುಮೆಯ ರತಿಯೊಳ್ಮುಳುಗಿದ ಸೊಬಗಿನ ಸೊನ್ನೆಯನೇನೆಂಬೆನವ್ವ ! ಸುಬುದ್ಧಿ ನಿಲಯದಲ್ಲಿ ಮಧ್ಯಚತುಷ್ಟಿಕಳಾಯುಕ್ತದಿಂ ಕೂಡುವ ಬಣ್ಣಿತೆ ಭಾವರಮ್ಯ ನಯವಪ್ಪುಗೆಯಸುಖದೊಳ್ಮುಳುಗಿದ ಪರಿಣಾಮದ ಕುಶಲವನೇನೆಂಬೆನವ್ವ ! ನಿರಹಂಕಾರ ಗೃಹದಲ್ಲಿ ಅಂತಃಚತುಷ್ಟಿಕಳಾಯುಕ್ತದಿಂ ಸಂಯೋಗಿಸುವ ಎಳೆಮೋಹ ಸಮತೆಯ ಸುಖದೊಳ್ಮುಳುಗಿದ ಪರಮಪರಿಣಾಮವನೇನೆಂಬೆನವ್ವ ! ಸುಮನಮಂಟಪದಲ್ಲಿ ಮಹಾನುಭಾವ ಚತುಷ್ಟಿಕಳಾಯುಕ್ತದಿಂ ಸಂಯೋಗಿಸುವ ಕಲೆ ಸೋಂಕು ರತಿರಮ್ಯದೊಳ್ಮುಳುಗಿದ ಅತಿಶಯದುನ್ನತಿಯನೇನೆಂಬೆನವ್ವ ! ಸುಜ್ಞಾನಮಂದಿರದಲ್ಲಿ ಆನಂದಚತುಷ್ಟಿಕಳಾಯುಕ್ತದಿಂ ನೆರೆವ ಮೆಚ್ಚು ಅಚ್ಚೊತ್ತಿರ್ದವಿರಳ ಪರಿ ಸುಖವನೇನೆಂಬೆನವ್ವ ! ಸದ್ಭಾವಾಲಯದಲ್ಲಿ ಸಮರಸಚತುಷ್ಟಿಕಳಾಯುಕ್ತದಿಂ ಸತ್ಕೂಟ ಸನುಮತವೆನಿಸುವ ಅನುಪಮ ಸುಖರತಿಯೊಳ್ಮುಳುಗಿದ ಅಗಣಿತದುನ್ನತಿಯನೇನೆಂಬೆನವ್ವ ! ನಿಜಾಲಯದಲ್ಲಿ ನಿತ್ಯನಿಬ್ಬೆರಗು ಪರವಶ ಪರಿಪೂರ್ಣವೆಂಬ ಅಖಂಡ ಚತುಷ್ಟಿಕಳಾಯುಕ್ತದಿಂ ಅಭಿನ್ನಸಂಯೋಗದತಿಶಯದಾನಂದದೊಳ್ಮುಳುಗಿದ ಘನಸುಖದುನ್ನತಿಯ ಗುರುನಿರಂಜನ ಚನ್ನಬಸವಲಿಂಗದೊಳಗೆ ಏನೆಂಬೆನವ್ವ !
--------------
ದೇಶಿಕೇಂದ್ರ ಸಂಗನಬಸವಯ್ಯ
ಒಲುಮೆಯ ನಲ್ಲನನು ಒಲಿಸಿ ನೆರೆದೆನೆಂಬ ಮರುಳತನವನೇನೆಂಬೆನಯ್ಯಾ. ಒಲಿಸಲೇಕೆ? ತಾನೆ ಒಲಿದಾನು. ನಿನ್ನಲ್ಲಿ ದೃಢಕೆ ಸಂಬಂಧ ಸಮನಿಸಲುಳ್ಳಡೆ ತಾನೆ ಒದಾನು. ನಿನ್ನಲ್ಲೀಕ್ಷಾತ್ರಯ ಸಂಪನ್ನತೆಯುಳ್ಳಡೆ ತಾನೆ ಒದಾನು. ಒಲಿದಾನು. ಒಸದೊಡೊಲಿವನೆ, ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ಬಲುಗೈಯನೊಡನೆ ಹಗೆವಡೆದು ಕೊಲೆಗಂಜಲೇಕೆ? ಭವಸಾಗರದ ಬಲೆಗೆ ಸಿಕ್ಕಿ, ನಿರ್ಗುಣದ ಒಲುಮೆಯ ಮಾತ ನಟಿಸಲೇಕೆ? ತ್ರಾಸಿಂಗೆ ಒಲವರವುಂಟೆ? ಭಾಷೆಗೆ ನುಡಿ ಎರಡುಂಟೆ? ಪರಮೇಶ್ವರನನರಿದವಂಗೆ ಜಗದಾಸೆಯ ಮುಖವಿಲ್ಲವೆಂದೆ. ಅವ ಈಷಣತ್ರಯಕ್ಕೆ ಹೊರಗೆಂದೆ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ತನ್ನ ತಾನರಿದ ಮಹಾಜ್ಞಾನಿ ಶರಣನು ಚರಿಸುವ ಕ್ರಮವೆಂತೆಂದಡೆ: ಸ್ಥೂಲವೆಂಬ ಕಂಥೆಯ ತೊಟ್ಟು, ಸೂಕ್ಷ್ಮವೆಂಬ ಟೊಪ್ಪರವನಿಕ್ಕಿ, ತತ್ವವೆಂಬ ಖರ್ಪರವನಾಂತು, ಸತ್ಯವೆಂಬ ದಂಡವಂ ಪಿಡಿದು, ಶಾಂತಿಯೆಂಬ ಭಸಿತವಂ ತೊಡೆದು, ಸುಚಿತ್ತವೆಂಬ ಮಣಿಯ ಕಟ್ಟಿ, ವೈರಾಗ್ಯವೆಂಬ ಹಾವುಗೆಯಂ ಮೆಟ್ಟಿ, ಮನದೃಢವೆಂಬ ಕೌಪವಂ ಕಟ್ಟಿ, ಆಚಾರವೆಂಬ ಕಂಕಣವನ್ನಿಕ್ಕಿ, ಕ್ಷಮೆದಮೆಗಳೆಂಬ ಕುಂಡಲಮಂ ಧರಿಸಿ, ಪರಮಾನಂದದಿಂದ ಸುಳಿದು, ಜಗವ ಪಾವನವ ಮಾಡಲೆಂದು ಭಕ್ತಿ ಭಿಕ್ಷವಂ ಬೇಡುತ್ತ ಬಂದನಯ್ಯ, ತನ್ನ ಒಲುಮೆಯ ಶರಣರ್ಗೆ ನಿಜಸುಖವನೀಯಲೆಂದು. ಕಲಿದೇವರದೇವಾ, ನಿಮ್ಮ ಶರಣ ಪ್ರಭುವೆಂಬ ಜಂಗಮವಂ ಕಂಡು, ಅರ್ಚಿಸಿ, ಪೂಜಿಸಿ, ಒಕ್ಕುದನುಂಡು, ನಿಶ್ಚಿಂತನಾದೆನಯ್ಯ.
--------------
ಮಡಿವಾಳ ಮಾಚಿದೇವ
ಸತ್ಯನೆಂದೆನಿಸಯ್ಯ ಎನ್ನ ; ನಿತ್ಯನೆಂದೆನಿಸಯ್ಯ ಎನ್ನ ; ಭಕ್ತನೆಂದೆನಿಸಯ್ಯ ಎನ್ನ ; ಮುಕ್ತನೆಂದೆನಿಸಯ್ಯ ಎನ್ನ ; ನಿಮ್ಮ ಪೂರ್ಣ ಒಲುಮೆಯ ಲೆಂಕನೆಂದೆನಿಸಯ್ಯ ಎನ್ನ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
`ಶಿವ' ಎಂಬ ವಚನವ ಬಿಡದಿರಿ, ಮಡದಿಯರ ಒಲುಮೆಯ ನಚ್ಚದಿರಿ, ದರ್ಪಣದ ಒಪ್ಪವ ತಪ್ಪದಿರಿ, ವಾಯುವ ಕಡೆಗಡೆಗೆ ತಿದ್ದದಿರಿ, ಹಿಡಿವಡೆ ದೃಢವಾಗಿ ಹಿಡಿಯಿರೆಲವೊ, ಗುಹೇಶ್ವರ ಸಿಕ್ಕಿದ ಅಲ್ಲಮಂಗೆ.
--------------
ಅಲ್ಲಮಪ್ರಭುದೇವರು
ಅಯ್ಯಾ, ನಿತ್ಯನು ನೀನೆ; ಆ ಸತ್ಯಶುದ್ಧ ದೇಹಿ ನೀನೆ ಕಾಣಾ, ಎಲೆ ಅಯ್ಯಾ. ಅಯ್ಯಾ, ನೀನು ಕಾರುಣ್ಯವುಳ್ಳ ಮಹದಾಶ್ರಯ ಕಾಣಾ, ಎಲೆ ಅಯ್ಯಾ, ನೀನು ಭಕ್ತದೇಹಿಕ ದೇವನಾದ ಕಾರಣ ಮಚ್ಚಿದೆನಯ್ಯಾ. ಒಲುಮೆಯ ಮಚ್ಚು ನಿಶ್ಚಯವೆಂದು ನಂಬಿದೆನಯ್ಯಾ. ಗುರುವೇ, ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ಸದ್ಯೋಜಾತನ ಶುದ್ಧ ಪ್ರಸಾದವೆನ್ನ ನಾಸಿಕವ ನುಂಗಿತ್ತಾಗಿ ಗಂಧಷಡ್ವಿಧ ಬಯಲಾಗಿ ಗಂಧ ದುರ್ಗಂಧವನರಿಯದು ನೋಡಾ. ವಾಮದೇವನ ಒಲುಮೆಯ ಪ್ರಸಾದ ಎನ್ನ ಜಿಹ್ವೆಯ ತುಂಬಿತ್ತಾಗಿ ಷಡ್ವಿಧ ರಸ ಬಯಲಾಗಿ ಮಧುರ ಆಮ್ರ ಲವಣ ತಿಕ್ತ ಕಟು ಕಷಾಯವೆಂಬ ಷಡುರಸ್ನಾನದ ರುಚಿಯನರಿಯದು ನೋಡಾ. ಅಘೋರನ ಅವಿರಳಪ್ರಸಾದ ಎನ್ನ ಕಂಗಳ ತುಂಬಿ ಷಡ್ವಿಧರೂಪು ಬಯಲಾಗಿ ಸುರೂಪು ಕುರೂಪೆಂದರಿಯದು ನೋಡಾ. ತತ್ಪುರುಷನ ಒಪ್ಪುವ ಪ್ರಸಾದವೆನ್ನ ತ್ವಕ್ಕು ತುಂಬಿತ್ತಾಗಿ ಸ್ಪರ್ಶನ ಷಡ್ವಿಧ ಬಯಲಾಗಿ ಮೃದು ಕಠಿಣ ಶೀತೋಷ್ಣವೆಂಬ ಸೋಂಕನರಿಯದು ನೋಡಾ. ಈಶಾನ್ಯನ ವಿಮಲಪ್ರಸಾದ ಎನ್ನ ಶ್ರೋತ್ರ ತುಂಬಿತ್ತಾಗಿ ಶಬ್ದ ಷಡ್ವಿಧ ಬಯಲಾಗಿ ಸುಶಬ್ದ ದುಶ್ಯಬ್ಧವನರಿಯದು ನೋಡ. ಪರಮೇಶ್ವರನ ಪರಮ ಪ್ರಸಾದವೆನ್ನ ಪ್ರಾಣವ ತುಂಬಿ ಪರಿಣಾಮ ಷಡ್ವಿಧ ಬಯಲಾಗಿ ತೃಪ್ತಿ ಅತೃಪ್ತಿಯನರಿಯದು ನೋಡಾ. ಇವೆಲ್ಲವ ಮರೆದು ಮಹಾಘನಪ್ರಸಾದದಲ್ಲಿ ಸಮರಸವಾಯಿತ್ತಾಗಿ ಅರ್ಪಿತವನರಿಯದು, ಅನರ್ಪಿತನರಿಯದು. ಭಾವವನರಿಯದು, ನಿರ್ಭಾವವನರಿಯದು. ನಿರವಯ ಪ್ರಸಾದವನೆಯ್ದಿ ನಿರ್ವಯಲಾಯಿತ್ತು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಶರಣು ಶರಣಾರ್ಥಿ ಮಹಾದೇವಾ, ಶರಣು ಶರಣಾರ್ಥಿ ಪರಬ್ರಹ್ಮಸ್ವರೂಪಾ, ಶರಣು ಶರಣಾರ್ಥಿ ನಿರಾಕಾರತತ್ವವೆ, ನೀವೆ ಗತಿ ನಿಮ್ಮ ಚರಣಕ್ಕೆ ಶರಣಯ್ಯಾ ಪ್ರಭುವೆ. ಸತಿಪತಿಯ ಒಲುಮೆಯ ಮುನಿಸು, ಅತಿಬೇಟವೆಂಬುದು ತಪ್ಪದು ನೋಡಾ. ನಿಮ್ಮ ಶರಣ ಬಸವಣ್ಣನೊಡತಣ ಮುನಿಸು ಎನ್ನ ಮನಕ್ಕೆ ಸಂಶಯ ತೋರದು ನೋಡಾ. ಸಂತೆಯ ನೆರವಿಯಲ್ಲಿ ಅಭಿಮಾನದ ಮಾತ ಮಾರಬಹುದೆ ? ಬೀದಿಯಲ್ಲಿ ನಿಂದು ನುಡಿವ ಅನುಭಾವದ ರಚ್ಚೆ ನಗೆಗೆಡೆ ನೋಡಯ್ಯಾ. ಸಂಗನಬಸವಣ್ಣನೊಳಗೆ ನಿಮ್ಮೊಳಗೆ ಭೇದವಿಲ್ಲೆಂಬುದ ನೀವೆ ಅರಿದರಿದು; ಮತ್ತೆ ಬಾರೆವೆಂಬುದುಚಿತವೆ ? ಕೂಡಲಚೆನ್ನಸಂಗನ ಶರಣ ಬಸವಣ್ಣನೆ ನಿಮ್ಮ ಪ್ರಾಣವಾಗಿರಲು ಇನ್ನಾರೊಡನೆ ಮುನಿವಿರಿ? ಕೃಪೆ ಮಾಡಾ ಪ್ರಭುವೆ.
--------------
ಚನ್ನಬಸವಣ್ಣ
ಇನ್ನಷ್ಟು ... -->