ಅಥವಾ

ಒಟ್ಟು 28 ಕಡೆಗಳಲ್ಲಿ , 12 ವಚನಕಾರರು , 27 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಒಲುಮೆ ಒಚ್ಚತವಾದವರು ಕುಲಛಲವನರಸುವರೆ ? ಮರುಳುಗೊಂಡವರು ಲಜ್ಜೆನಾಚಿಕೆಯ ಬಲ್ಲರೆ ? ಚೆನ್ನಮಲ್ಲಿಕಾರ್ಜುನದೇವಗೊಲಿದವರು ಲೋಕಾಭಿಮಾನವ ಬಲ್ಲರೆ ?
--------------
ಅಕ್ಕಮಹಾದೇವಿ
ಕಾಮುಕಗೆ ದುರ್ಜನಗೆ ಕಪಟಿಗೆ ಹೇಮಚೋರಗೆ ಕಾರುಕ ಸಮ್ಮಗಾರಗೆ ಆವ ಭಾವದ ವ್ರತವ ಮಾಡಲಿಕ್ಕೆ, ಅವ ಭಾವಿಸಿ ನಡೆಯಬಲ್ಲನೆ? ಕಾಗೆಗೆ ರಸಾನ್ನ ಮುಂದಿರಲಿಕೆ, ಹರಿವ ಕೀಟಕಂಗೆ ಸರಿವುದಲ್ಲದೆ ಮತ್ತೆ ಅದು ಸವಿಯಸಾರವ ಬಲ್ಲುದೆ? ಇಂತೀ ಇವು ತಮ್ಮ ಜಾತಿಯ ಲಕ್ಷಣವ ಕೊಂದಡೂ ಬಿಡವಾಗಿ, ವ್ರತಾಚಾರವ ಸಂಬಂದ್ಥಿಸುವಲ್ಲಿ ಶರಣರೆಲ್ಲರ ಕೂಡಿ, ಈ ಗುಣ ಅಹುದು ಅಲ್ಲ ಎಂದು ಹೇಳಿ, ಜಾತಿವರ್ಗದ ಗುಣವ ನೀಕರಿಸಿ ಬಿಡಿಸಿ, ಸುಜಾತಿಯ ಅರಸಿನ ಪಟ್ಟವಂ ಕಟ್ಟಿ ಶರಣರೆಲ್ಲರು ನಿಹಿತಾಚಾರದಲ್ಲಿ ಸಹಭೋಜನವಂ ಮಾಡಿ ಇಂತೀ ಗುಣನಿಹಿತವ್ರತ ಅಜಾತನ ಒಲುಮೆ, ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದ ನಿಹಿತದ ಶೀಲದ ನೇಮ.
--------------
ಅಕ್ಕಮ್ಮ
ಜ್ಞಾನಿ ತಾನಾದಡೆ ಮಾನವರ ಗುಣವೇನಾದಡೂ ಆಗಲಿ. ಭಾನುತೇಜಕ್ಕೆ ನಾನಾಗುಣವೆಲ್ಲವೂ ಸರಿ. ಬೀಸುವ ವಾಯುವಿಂಗೆ ಸುಗುಣ ದುರ್ಗುಣವಿಲ್ಲ. ಇದು ಅಜಾತನ ಒಲುಮೆ. ಮಿಕ್ಕಿನ ಮಾತಿನ ಮಕ್ಕಳಿಗಿಲ್ಲಯೆಂದೆ, ಜಗದೀಶನ ಒಲುಮೆ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಶ್ರೀಗುರುಕರುಣ ಕಟಾಕ್ಷಮಾತ್ರದಿಂದ ಶಿವಲಿಂಗದ ಒಲುಮೆ. ಆ ಶಿವಲಿಂಗದ ಒಲುಮೆಗೆ ಗುರುಕರುಣವೇ ಮುಖ್ಯ. ಅದು ಕಾರಣ, ಗುರುಪೂಜೆಯ ಮಾಡಿ, ಗುರು ಕೃಪೆಯನೆ ಪಡೆದಿಹುದಯ್ಯ. ಉಪಮಿಸಬಾರದ ಮಹಾದೇವನು, ಪ್ರತ್ಯಕ್ಷವಾಗಿ, ಗುರುರೂಪಿಂದ ಇಹನೆಂದರಿದು, ಗುರುಭಕ್ತಿಯನೆ ಮಾಡುವುದು, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ.
--------------
ಸ್ವತಂತ್ರ ಸಿದ್ಧಲಿಂಗ
ಎಲ್ಲರೂ ಕೂಡಿ ಬೀರನ ಚಪ್ಪರಕ್ಕೆ ಬಂದ ಅಜಗಾಹಿಗಳಂತೆ. ದ್ವೇಷದಲ್ಲಿ , ಅಸಿಯ ಒಡಲಲ್ಲಿ ಗಸಣಿಗೊಂಡಡೆ, ಅದು ಮಿಸುಕದಂತೆ. ಕೂಟದಲ್ಲಿ ಕೂಡಿ, ಮಾತಿನಲ್ಲಿ ನಿಜವಿಲ್ಲದೆ, ಅದೇತರ ಭಕ್ತಿಯ ವ್ರತ? ನಿಜನೀತಿಯ ನಿಚ್ಚಟಂಗೆ ಬಳಕೆಯ ಬಳಸುವ ನೀತಿಯ ಅರ್ತಿಕಾರರಿಗಿಲ್ಲ, ನಿಚ್ಚಟಂಗಲ್ಲದೆ. ಬಂಕೇಶ್ವರಲಿಂಗದ ಒಲುಮೆ ಎಲ್ಲರಿಗೆಲ್ಲಿಯದೊ !
--------------
ಸುಂಕದ ಬಂಕಣ್ಣ
ಕಾಡಿ ಬೇಡಿ ಉಂಬರೆಲ್ಲರು ಜಗದ ರೋಡಗವಂತರು. ಬೇಡದೆ ಕಾಡದೆ ಚಿತ್ತದಲ್ಲಿ ಆಸೆಯ ಕಲೆದೋರದೆ, ಹೊತ್ತ ಘಟಕ್ಕೆ ತುತ್ತು, ಶೀತಕ್ಕೆ ಅಂಬರ ನಿರ್ಜಾತನ ಒಲುಮೆ ಎಲ್ಲಿದ್ದರೂ ತಪ್ಪದೆಂದು ವಿಶ್ವಾಸವುಳ್ಳ ಶರಣಂಗೆ ಅವ ತೊಟ್ಟಿದ್ದುದು ಅದೇತರ ಕಾಯ? ದಗ್ಧಪಟ ನ್ಯಾಯ! ನಾರಾಯಣಪ್ರಿಯ ರಾಮನಾಥನಲ್ಲಿ ಕಳೆದುಳಿದಶರಣಂಗೆ!
--------------
ಗುಪ್ತ ಮಂಚಣ್ಣ
ಮನ ಮುಂದಿಟ್ಟು ಮಹಾದೇವಾ ಒಲಿದನೆಂಬುದು ಪುಸಿಯಯ್ಯಾ. ಮನವಿಲ್ಲದಿರೆ ಮಹಿಮನ ಒಲುಮೆ ನೋಡಯ್ಯಾ. ಮನದ್ಲಹ ಮಹಾದೇವನ ಮುಂಟ್ಟು ತೋರುವ ಉಭಯಭ್ರಷ್ಟರ ಮೆಚ್ಚುವನೆ, ಮಹಾದೇವ ಕಪಿಲಸಿದ್ಧಮಲ್ಲಿಕಾರ್ಜುನ?
--------------
ಸಿದ್ಧರಾಮೇಶ್ವರ
ಲಿಂಗವನರಿತು ಅಂಗ ಲಯವಾಗಬೇಕು. ಅಂಕುರ ತೋರಿ ಬೀಜ ನಷ್ಟವಾದಂತೆ, ಸ್ವಯಂಭು ತೋರಿ ಪ್ರತಿಷ್ಠೆ ನಷ್ಟವಾದಂತೆ, ಅರ್ಕೇಶ್ವರಲಿಂಗವ ಅರಿದ ಗೊತ್ತಿನ ಒಲುಮೆ.
--------------
ಮಧುವಯ್ಯ
ಹಗಲು ನಾಲ್ಕುಜಾವ ನಿಮ್ಮ ಕಳವಳದಲ್ಲಿಪ್ಪೆನು. ಇರುಳು ನಾಲ್ಕುಜಾವ ಲಿಂಗದ ವಿಕಳಾವಸ್ಥೆಯಲ್ಲಿಪ್ಪೆನು. ಹಗಲಿರುಳು ನಿಮ್ಮ ಹಂಬಲದಲ್ಲಿ ಮೈಮರೆದೊರಗಿಪ್ಪೆನು. ಚೆನ್ನಮಲ್ಲಿಕಾರ್ಜುನಯ್ಯಾ, ನಿಮ್ಮ ಒಲುಮೆ ನಟ್ಟು ಹಸಿವು ತೃಷೆ ನಿದ್ರೆಯ ತೊರೆದೆನಯ್ಯಾ
--------------
ಅಕ್ಕಮಹಾದೇವಿ
ಇದು ಜಗವ್ಯವಹಾರಣೆಯ ಧರ್ಮ, ಮುಂದಕ್ಕೆ ಐಕ್ಯಾನುಭಾವ. ಕಾಯ ಅಕಾಯದಲ್ಲಿ ಅಡಗಿ, ಜೀವ ನಿರ್ಜೀವದಲ್ಲಿ ಅಡಗಿ, ಭ್ರಮೆ ಸಂಚಾರವಿಲ್ಲದೆ, ಮಹಾಘನದಲ್ಲಿ ಸಂದು, ಉಭಯದ ಸಂದಿಲ್ಲದೆ ಬಂಕೇಶ್ವರಲಿಂಗದಲ್ಲಿ ಸಲೆ ಸಂದವನ ಒಲುಮೆ.
--------------
ಸುಂಕದ ಬಂಕಣ್ಣ
ಹಿಂದಣ ಜನ್ಮದಲ್ಲಿ ಗುರುಲಿಂಗಜಂಗಮವ ಶಿವನೆಂದರಿದು ನಂಬಿ ಪೂಜಿಸಿದ ಕಾರಣ ಮುಂದೆ ಹುಟ್ಟುವನು ಸತ್ಕುಲಜ ಬಲವಂತನಾಗಿ, ಧನಧಾನ್ಯ ಸಕಲ ಭೋಗೈಶ್ವರ್ಯ ಉಳ್ಳವನಾಗಿ, ಸಕಲಲೋಕಕ್ಕೆ ಮನ್ನಣೆ ಉಳ್ಳವನಾಗಿ, ವಿದ್ಯೆಬುದ್ಧಿಯಲ್ಲಿ ವಿಶೇಷನಾಗಿ, ಸತ್ಯ ಸದಾಚಾರ ಭಕ್ತಿಜ್ಞಾನ ಉಳ್ಳವನಾಗಿ, ನಮ್ಮ ಅಖಂಡೇಶ್ವರನ ಪೂರ್ಣ ಒಲುಮೆ ಉಳ್ಳವನಾಗಿರ್ಪನು ನೋಡಿರೋ.
--------------
ಷಣ್ಮುಖಸ್ವಾಮಿ
ಯೋಗಿನಾಥನ ಒಲುಮೆ ಯೋಗಿಯಾದವಂಗಲ್ಲದೆ, ಭೋಗಿಯಾದಾತಂಗೆಲ್ಲಿಹುದಯ್ಯಾ? ಪಂಚಮಸ್ವರದಾಯತ ಕೋಗಿಲೆಗಲ್ಲದೆ ಕಾಗೆಗೆಲ್ಲಿಹುದೊ? ಕಪಿಲಸಿದ್ಧಮಲ್ಲಿಕಾರ್ಜುನ ಯೋಗಿನಾಥಾ
--------------
ಸಿದ್ಧರಾಮೇಶ್ವರ
ಆಕಾಶದ ಮಧ್ಯದಲ್ಲಿ ಒಂದು ಭೇಕ ನುಡಿಯುತ್ತದೆ. ಅದು ಅನೇಕ ಗೀತ ವಾದ್ಯ ನೃತ್ಯಂಗಳಿಂ[ದಾಡುತ್ತಿದ್ದಿತ್ತು]. ಎನ್ನಾಟವ ನೋಡುವರಿಲ್ಲಾಯೆಂದು ನೇತಿಗಳೆಯಿತ್ತು ತನ್ನಂಗವ. ಅದು ನಿರ್ಜಾತನ ಒಲುಮೆ. ಅರ್ಕೇಶ್ವರಲಿಂಗವನರಿವುದಕ್ಕೆ ತೆರಪಾಗಿರಣ್ಣಾ.
--------------
ಮಧುವಯ್ಯ
ನೈಷಿ*ಕಭಾವ ನಂಬುಗೆ ಇಲ್ಲದ ಬಳಿಕ, ಎಷ್ಟು ಓದಿದಡೇನು ? ಎಷ್ಟು ಕೇಳಿದಡೇನು ? ಎಷ್ಟು ಪೂಜೆಯ ಮಾಡಿದಡೇನು ? ಅದು ನಷ್ಟವಲ್ಲದೆ ದೃಷ್ಟಕ್ಕೆ ಸಂಧಾನವಲ್ಲ ನೋಡಾ. ಇದು ಕಾರಣ, ನೈಷೆ* ಬಲಿದು ಭಾವತುಂಬಿ ನಂಬುಗೆ ಇಂಬುಗೊಂಡು ಮಾಡುವುದೆ ದೇವರಪೂಜೆ. ಅದೇ ನಮ್ಮ ಅಖಂಡೇಶ್ವರಲಿಂಗದ ಒಲುಮೆ.
--------------
ಷಣ್ಮುಖಸ್ವಾಮಿ
ಇದು ಅರಿಬಿರಿದು ಇದಾರಿಗೂ ಅಸಂಗ. ಹಾವು ಹದ್ದಿನಂತೆ ಹುಲಿ ಹುಲ್ಲೆಯಂತೆ ಹಾವು ಹರಿಯ ಕೂಟದಂತೆ ಅರಿ ಬಿರಿದಿನ ಸಂಗ. ತೆರಹಿಲ್ಲದ ಆಲಯ, ಭಟರಿಲ್ಲದ ಕಟಕ, ದಿಟಪುಟವಿಲ್ಲದ ಜಾವಟಿ, ಎಸಕವಿಲ್ಲದ ಒಲುಮೆ, ರಸಿಕರಿಲ್ಲದ ರಾಜನಗರ ಇಂತಿವರ ಉಪಸಾಕ್ಷಿ ಸಂತೈಸುವದಕ್ಕೆ, ಭ್ರಾಂತನಳಿವುದಕ್ಕೆ ಶ್ರುತದಲ್ಲಿ ಕೇಳಿ ದೃಷ್ಟದಲ್ಲಿ ಕಂಡು ಆಮ್ನೆಯ ಅನುಮಾನದಲ್ಲಿ ಅರಿದು ಅಭಿನ್ನವಿಲ್ಲದೆ ಅವಿರಳನಾಗಾ, ಮನಸಿಜಪಿತಪ್ರಿಯ ಶ್ರುತಿ ನಾಮ ದೂರ ಗತಿ ಮತಿ ಈವ ರಾಮೇಶ್ವರ ಲಿಂಗದಲ್ಲಿ ಪ್ರತಿಭಿನ್ನವಿಲ್ಲದ ಶರಣಂಗೆ.
--------------
ಗುಪ್ತ ಮಂಚಣ್ಣ
ಇನ್ನಷ್ಟು ... -->