ಅಥವಾ

ಒಟ್ಟು 27 ಕಡೆಗಳಲ್ಲಿ , 11 ವಚನಕಾರರು , 18 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಊರ ಹೊರಗಣ ಹೊಲೆಯರ ಮನೆಯಲ್ಲಿ ಈರೈದು ಮಗ್ಗ. ಆ ಮಗ್ಗಕ್ಕೆ ಒಬ್ಬನೆ ಹಾರುವ ನೈವಾತ. ಆ ಮಗ್ಗದೊಳಗಿದ್ದು ಸುಂಕಕಂಜಿ ಹೊಲೆಯನಾದ, ಬಂಕೇಶ್ವರಲಿಂಗವನರಿಯದೆ.
--------------
ಸುಂಕದ ಬಂಕಣ್ಣ
ವೇದ ಪಾಠಕರೆಲ್ಲಾ ಕೇಳಿಭೋ! ವೇದ ಸ್ವಯಂಭು ಎನಲೊಡನೆ ಅಯ್ಯಾ ಎನ್ನ ಎದೆ ರುsುಲ್ಲೆಂದವಯ್ಯ. ಎಲೆ ಅಜ್ಞಾನಿ ಕೇಳು, ಕಪಿಲಸಿದ್ಧಮಲ್ಲಿಕಾರ್ಜುನ ಒಬ್ಬನೆ ಸ್ವಯಂಭು.
--------------
ಸಿದ್ಧರಾಮೇಶ್ವರ
ಹಲವು ಹಡಗವಾದರೇನಯ್ಯಾ ? ಸಮುದ್ರ ಒಂದೇ ನೋಡಾ ! ಹಲವು ಪಕ್ಷಿ ಇದ್ದರೇನಯ್ಯಾ ? ಹಾರುವ ಪವನ ಒಂದೇ ನೋಡಾ ! ಹಲವು ಉಡುರಾಜರಿದ್ದರೇನಯ್ಯಾ ? ಬೆಳಗಮಾಡಿ ತೋರುವ ಸೂರ್ಯ ಒಂದೇ ನೋಡಾ ! ಹಲಬರಿಗೆ ಹಲವು ಗುರುರೂಪಾದ ತಾ ಪರಮಾತ್ಮ ಒಬ್ಬನೆ ನೋಡಾ ! ಹಲಬರು ಕೈಯೊಳು ಬಿಲ್ಲ ಸೇರಿ ಹಲವಂಬಿಲೆಚ್ಚರದು ಎಚ್ಚಾತನ ಕೈಯೋಜೆ. ಇದಿರಿನಲ್ಲಿ ತೋರುವ ಗುರು ಒಬ್ಬನೆ ನೋಡಾ ! ಹಲವು ಲಿಂಗರೂಪಾದಾತ ಶ್ರೀಪರಮಾತ್ಮ ಒಬ್ಬನೆ ನೋಡಾ ! ಹಲಬರ ಕಣ್ಣಿಗೆ ಹಲವು ಜಂಗಮರೂಪಾಗಿ ತೋರುವಾತ ಶ್ರೀ ಪರಮಾತ್ಮ ಒಬ್ಬನೆ ನೋಡಾ ! ಹಲಬರ ಹಣೆಯಲ್ಲಿಹ ದುರ್ಲಿಖಿತಗಳ ತೊಡೆದು ಶ್ರೀ ವಿಭೂತಿಯಾಗಿ ನಿಂದಾತ ಶ್ರೀ ಪರಮಾತ್ಮ ಒಬ್ಬನೆ ನೋಡಾ. ಹಲಬರ ಕೊರಳಲ್ಲಿ ಶ್ರೀ ರುದ್ರಾಕ್ಷಿಯಾಗಿ ನಿಂದಾತ ಶ್ರೀ ಪರಮಾತ್ಮ ಒಬ್ಬನೆ ನೋಡಾ ! ಹಲಬರ ಜಿಹ್ವೆಯ ಕೊನೆಯ ಮೊನೆಯಲ್ಲಿ ಶ್ರೀ ಪಂಚಾಕ್ಷರಿಯಾಗಿ ನಿಂದಾತ ಶ್ರೀ ಪರಮಾತ್ಮ ಒಬ್ಬನೆ ನೋಡಾ ! ಹಲವು ಶಿವಭಕ್ತಜನಂಗಳಿಗೆ ಪಾದೋದಕ ಪ್ರಸಾದವಾಗಿ ಮುಕ್ತಿಯ ತೋರಿದಾತ ಶ್ರೀ ಪರಮಾತ್ಮ ಒಬ್ಬನೆ ನೋಡಾ ! ಹಲಬರಿಗೆ ಹಲವು ರೂಪಾದಾತ ನಮ್ಮ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆಂಬ ಪರಶಿವನೊಬ್ಬನೆ ಕಾಣಿರೋ !
--------------
ಹೇಮಗಲ್ಲ ಹಂಪ
ಕೋಗಿಲ ಶಬ್ದ ಕಿವಿಗೆ ಕೂಗಿ ಹೋಯಿತ್ತು ಕಂಡ ಕಂಡ ಪುರುಷನನಪ್ಪಲು ಅಪ್ಪಿನ ಸುಖ ಸಂತಾನವಾಯಿತ್ತೆನಗೆ. ಅಪ್ಪಿನ ಸುಖದ ಸಂತಾನದ ಬಗೆಯ ಕೇಳಲು ಕರಣಿಕ ಹೇಳಿದನಯ್ಯಾ ಮೂವತ್ತಾರು ಕುಮಾರರನು. ಆ ಕುಮಾರನ ಕೂಟದಲ್ಲಿರಲು, ಹೆತ್ತ ಮಕ್ಕಳ ಕೂಟವೆಂದಡೆ, ಹುಟ್ಟಿದರಯ್ಯಾ, ಇನ್ನೂರ ಹದಿನಾರು ರಾಜಕುಮಾರರು. ಆ ಕುಮಾರರ ಚೆಲುವಿಕೆಯ ಕಂಡು, ಆ ಚೆಲುವಿಕೆಯ ಮಕ್ಕಳ ನೆರೆಯಲು ಪತಿವ್ರತೆಯೆನಿಸಿಕೊಂಡು, ಒಬ್ಬನೆ ಪುರುಷನೆಂದಳಯ್ಯಾ ಕಪಿಲಸಿದ್ಧಮಲ್ಲಿನಾಥಯ್ಯಾ, ನಿಮ್ಮ ಹೆಂಡ್ಕ
--------------
ಸಿದ್ಧರಾಮೇಶ್ವರ
ಓಡಿನಲುಂಟೆ ಕನ್ನಡಿಯ ನೋಟ? ಮರುಳಿನ ಕೂಟ ವಿಪರೀತಚರಿತ್ರ. ನೋಟದ ಸುಖ ತಾಗಿ ಕೋಟಲೆಗೊಂಡೆನು. ಗುಹೇಶ್ವರನೆಂಬ ಲಿಂಗವು ಒಬ್ಬನೆ ಅಚಲ. ಉಳಿದವರೆಲ್ಲರೂ ಸೂತಕಿಗಳು.
--------------
ಅಲ್ಲಮಪ್ರಭುದೇವರು
ಸರ್ಬರಾದಿ ಅಂತ್ಯದಲ್ಲಿ ಒಬ್ಬನೆ ಇದ್ದೆಯಯ್ಯಾ, ಸರ್ವಗತ ನೀನೆ ಕಂಡಯ್ಯಾ, ಒಂದೊಂದು ಪರಿಯಲ್ಲಿ ಆಡುವ ಆನಂದಗುಣವ ನೋಡಯ್ಯಾ. ಶೂನ್ಯಶೂನ್ಯ! ಕಾಯದ ಕರಸ್ಥಲಕ್ಕೆ ದೇವನಾದೆ ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
ಅಯ್ಯ ಬಂದಾನವ್ವಾ, ತನು ಚಿತ್ತ ಶುದ್ಧವಾಗಿರು. ಅಯ್ಯ ಬಂದಾನವ್ವಾ, ಮನವ ಮಂಚವ ಮಾಡಿ ಪಚ್ಚಡಿಸಿರು. ಅಯ್ಯ ಬಪ್ಪುದ ಕಂಡಳು ಚಿದಂಗನೆ ಅಯ್ಯ, ಶುದ್ಧ ಸಂಗಮಕೆ ಒಬ್ಬನೆ ಬಂದನು, ಕಪಿಲಸಿದ್ಧಮಲ್ಲಿಕಾರ್ಜುನಯ್ಯನು.
--------------
ಸಿದ್ಧರಾಮೇಶ್ವರ
ಇಬ್ಬರು ಮೂವರು ದೇವರೆಂದು ಉಬ್ಬಿ ಮಾತನಾಡಬೇಡ, ಒಬ್ಬನೆ ಕಾಣಿರೊ, ಇಬ್ಬರೆಂಬುದು ಹುಸಿ ನೋಡಾ ! ಕೂಡಲಸಂಗಮದೇವನಲ್ಲದಿಲ್ಲೆಂದಿತ್ತು ವೇದ.
--------------
ಬಸವಣ್ಣ
ಒಬ್ಬನೆ ಗರುವನಿವ, ಒಬ್ಬನೆ ಚೆಲುವನಿವ, ಒಬ್ಬನೆ ಧನಪತಿ ಕೇಳಾ ಕೆಳದಿ, ಇವಗೆ ಹಿರಿಯರಿಲ್ಲ, ಇವಗೆ ಒಡೆಯರಿಲ್ಲ. ಇಂತಪ್ಪ ನಲ್ಲನು ಲೇಸು ಕಾಣೆಲಗೆ. ನಾವೆಲ್ಲಾ ಒಂದಾಗಿ ಹಿಡಿದು ಬಿಡದಿರೆ ಬಿಡಿಸುವರಿನ್ನಿಲ್ಲ ಉರಿಲಿಂಗದೇವನ.
--------------
ಉರಿಲಿಂಗದೇವ
ಆದಿ ಅನಾದಿ ಅಧಿದೇವತೆಗಳು ಮೀನಜ ರೋಮಜ ಚಿಟ್ಟಜ ಚಪ್ಪಜ ಋಷಿಯರುಗಳು ಮೊದಲಾದನಂತ ಬ್ರಹ್ಮರಿಲ್ಲದಂದಲ್ಲಿಂದತ್ತತ್ತ ಏಕಲಿಂಗ ಒಬ್ಬನೆ ಶರಣ. ಗುರುವೆ ಪರಮಗುರುವೆ ನೀನೆಯಯ್ಯಾ. ಆದಿಕುಳಕ್ಕೆ ಮೂಲಿಗನಾಗಿ ಸುಳುಹುದೋರಿ ಪಾವನವ ಮಾಡಬಂದೆಯಯ್ಯಾ. ಬಹುಮುಖ ಜೀವಿಗಳಿಗೆ ಬಹುಮುಖದಾಹಾರವ ತೋರಿದೆಯಯ್ಯಾ. ಭುವನವ ಸಲಹಲೆಂದು ಆದಿಯ ಲಿಂಗವ ಅನಾದಿಯ ಶರಣನ ಕೈಯಲ್ಲಿ ಕೊಟ್ಟಿರಿ. ಆ ಲಿಂಗವ ನೀವು ಸಂಘಟಿಸಿದ ಘಟಕ್ಕೆ ಕಾರುಣ್ಯವ ಮಾಡಿ ಸಲಹಯ್ಯಾ ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ
ಎಲೆ ವೈದಿಕರಿರಾ, ನಿಮಗೆ ಸತ್ವಬಲ ವೇದವಲ್ಲದೆ ಮತ್ತೇನೂ ಇಲ್ಲ. ಆ ವೇದವೆ ಸ್ವಯಂಭುಯೆಂದು ನುಡಿವಿರಿ, ನಾ ನಿಮಗೆ ತಿಳಿಯ ಪೇಳುವೆ. ಆದಿಸಿದ್ಧಾಂತವಿಡಿದು ವೇದ ಸ್ವಯಂಭುವಲ್ಲ. ಆದಿಮೂಲ ಶಿವನಿಂದಾದವೀ ವೇದಂಗಳು ಕೇಳಿರೆ. ಶಿವನಿಂದಾದ ಮೂವತ್ತಾರುತತ್ತ್ವದೊಳೈದನೆಯದು ಆಕಾಶತತ್ತ್ವವು. ಆ ಆಕಾಶತತ್ತ್ವದಿಂದಾದ ಶಬ ವಿಷಯವು ನಿತ್ಯವೆ ಹೇಳಿರೆ. ಪಂಚಭೂತಂಗಳೊಳಗೊಂದು ಭೂತವಿಷಯವಾ ಶಬ್ಧ. ಆ ಶಬ್ದ ಸಂಬಂಧವಾದ ವೇದಕ್ಕೆ ನಿತ್ಯವೆಲ್ಲಿಯದು ಹೇಳಿರೆ. ಆ ವೇದ ತನಗೆ ತಾನಾದುದೆಂಬಿರೆ. ಎಂಬಿರಾದಡೆ ಪ್ರಳಯಾಂತಕಾಲದಲ್ಲಿ ಅಳಿಯವೀ ವೇದಾದಿ ವಿದ್ಯೆಗಳು. ಜಗತ್ ಸೃಷ್ಟಿಕಾಲದಲ್ಲಿ ಆದಿಕರ್ತಾರ ಸೃಷ್ಟಿ ಸ್ಥಿತಿ ಲಯ ಪ್ರೇರಕಶಿವನಿಂದಾದವು ಕೇಳಿರೆ. ಚರಣಬಹ ಸೂಕ್ತಿಗಳಲ್ಲಿ ಕೇಳ್ದರಿಯಿರೆ. ಋಗ್ವೇದಕ್ಕೆ ದೇಹ ಉರುವರ್ಣ, ಅತ್ರಿಗೋತ್ರ, ಗಾಯತ್ರಿ ಛಂದ, ಅಧಿದೇವತೆ ಬ್ರಹ್ಮ. ಯಜುರ್ವೇದಕ್ಕೆ ಅಬ್ಜದಳಾಯತ ನೇತ್ರ, ಕುಂಚಿತ ಚಿಬುಕು ಮುಂಗೂರ ಮೀಸೆ, ತಾಮ್ರವರ್ಣದೇಹ, ಭಾರದ್ವಾಜಗೋತ್ರ, ತ್ರಿಷ್ಟುಪ್ ಛಂದ, ಅಧಿದೇವತೆ ವಿಷ್ಣು. ಸಾಮವೇದಕ್ಕೆ ದೇಹ ಶ್ವೇತವರ್ಣ, ಕಾಶ್ಯಪಗೋತ್ರ, ಜಗತಿ ಛಂದ, ಅಧಿದೇವತೆ ಈಶ್ವರನು. ಧವಳಶೃಂಗವೆರಡು ಅಥರ್ವಣವೇದಕ್ಕೆ ದೇಹ, ಕೃಷ್ಣವರ್ಣ, ವೈಭಾನುಗೋತ್ರ, ಅನುಷ್ಟುಪ್ ಛಂದ, ಅಧಿದೇವತೆ ಇಂದ್ರನು. ಇಂತು ಶ್ರುತಿಗಳಿಗೆ ಶರೀರವರ್ಣ, ಗೋತ್ರ, ಛಂದ, ಅಧಿದೇವತೆಗಳಿಂತಿರಲು, ತಮಗೆ ತಾವಾದವೆಂದು ನೀವು ನುಡಿವ ಪರಿ ಹೇಗೆ ಹೇಳಿರೆ ವೈದಿಕರಿರಾ. ಇವೇ ನಿತ್ಯವೆಂಬಿರಾದಡೆ ಲಯಗಮನಸ್ಥಿತಿಯುಂಟು ಕೇಳಿರೆ. ಹೃದಯ ದೈವ ಗಾಯಿತ್ರಿ ಸರ್ವವೇದೋತ್ತಮೋತ್ತಮ ಲಿಯಂಕೇ ಮೂದ್ರ್ನಿ ವೈವೇದಾಸಷದೊ ಎನಲು, ಆತ್ಮದೃಷ್ಟಿ ನೇತ್ರದೃಷ್ಟಿಯ ಪ್ರಮಾಣದಿಂ ನಮ್ಮ ಟರುರಿವಿಂದರಿದೆವೆಂಬರೆ, ನಿಮ್ಮ ನೀವರಿಯದವರು ಈ ಜಗದಾದಿಯನೆಂತರಿದಿರೆನಲು, ಜ್ಞಾನಸಾಧನವಹ ಶಾಸ್ತ್ರಾದಿಗಳಿಂದ ಜ್ಞಾನೇಂದ್ರಿಯ ಪ್ರಮಾಣ ನೇತ್ರದಿಂದರಿದವೆನಲು, ನಿಮಗೆ ಜ್ಞಾನೇಂದ್ರಿಯ ಸಾಧನ ನೇತ್ರಗಳೆಲ್ಲಿಯವು. ಈಶ್ವರನ ನಯನಾಶ್ವವೆನಿಸುವ ರವಿಚಂದ್ರಾಗ್ನಿ ತೇಜಸ್ಸಿಂದಲ್ಲದೆ, ಜಾತ್ಯಂಧರು ನೀವು ನಿಮಗೆಲ್ಲಿಯ ದೃಷ್ಟಿವಾಳತನ. ಅತಿಮತಿವಂತರೆನಿಸುವ ದೇವತೆಗಳುಂ ಕಾಣಲರಿಯರು. ಮತಿವಿಕಳರು ನೀವು ಕಾಣಲರಿದಿರೆಂತು ಜಗದಾಗುಹೋಗುಗಳ. ನೋಡಿಯರಿದೆವೆನಲು ಜಗವನಾಡಿ ನೀವು ಮೊನ್ನಿನವರು, ಸಾಮಾನ್ಯಮನುಜರು : ಜಗದನಾದಿಯ ನೀವೆಂತರಿದಿರೆನಲು, ಅದು ಕಾರಣ, ಜಗ ನಿರ್ಮಾಣಕ ಜಗ ಭ್ರಮಣ ಲೀಲಾಲೋಲ ಜಗದಂತರ್ಯಾಮಿ ಜಗತ್ರೈರಕ್ಷಕನೊಬ್ಬನೆಯರಿವ ನಿಮಗರುವಿಲ್ಲೆನಲು, ವೇದ ಶಾಸ್ತ್ರಾಗಮಾದಿಗಳಿಂ ಪ್ರಮಾಣಿಸಿ ಅರಿದೆವೆನಲು, ನಿಮಗೆ ಶ್ರುತಿ ಪ್ರಮಾಣ ಯೋಚನೆಯದೆಲ್ಲಿಯದು `ಜಗತಾಂ ಪತಯೇ ನಮಃ' ಎಂದು ಶ್ರುತಿಯಿರಲು, ಇದು ಕಾರಣ, ವೇದಾದಿಶಾಸ್ತ್ರಂಗಳಿಂದ ನಿಮಗೇನು ಆಗದು, ಪಾಠಕರರುಹಿರಲ್ಲದೆ. ಶ್ರುತಿಃ `ಶಿವೋ ಮಾಯೇವ ಪಿತರೌ' ಎನಲು, ಶಿವನೇ ವೇದಂಗಳಿಗೆ ತಂದೆ ತಾಯಾಗಿರಲು, ಜಗತ್ತಿಂಗೊಡೆಯನಾಗಿರಲು, `ಪಿತಾತದಸ್ಯಮಾ' ಎಂದು ಪಿತನೆ ಶಿವನು ತಾಯಿಪುತ್ರರೆಂದೆನಲು, ವೇದಸ್ವಯಂಭು ಜಗನಿತ್ಯವೆಂಬ ಪರಿಯೆ ಹೇಂಗೆ ಹೇಳಿರೆ. ಪೂರ್ವದಲ್ಲಿ ವೇದಪುರುಷರು, ಶಾಂಭವವ್ರತಿಗಳು, ಪಾಶುಪತವ್ರತಸ್ಥರು, ಶಿವಸಿದ್ಧಾಂತ ಭಕ್ತಿನಿಷಾ* ಸಾವಧಾನವ್ರತರು. ವೇದಾಧಾರಯಂತಿ ಎನಲು, ರುದ್ರಾಕ್ಷಧಾರಣ ಚತುರ್ವಿಧವ್ರತಿಗಳಿಗೆ ಮುಖ್ಯ ತ್ರಿಯಾಯುಷಂ ಜಮದಗ್ನೇಃ ಕಶ್ಯಪಸ್ಯತ್ರಿಯಾಯುಷಂ | ಅಗಸ್ತಸ್ಯ ತ್ರಿಯಾಯುಷಂ ಯದ್ದೇವಾನಾಂ ತ್ರಿಯಾಯುಷಂ | ತನ್ಮೇ ಅಸ್ತು ತ್ರಿಯಾಯುಷಂ' ಎನಲು, ಭಸ್ಮಾವಾಲಿಪ್ತರು ತ್ರಿಪುಂಡ್ರಾಂಕಿತನಿಷ*ರಾಗಿರದೆ, `ವೇದಾಶ್ಚಕಾವಯಂತಿ' ಎನಲು, `ತದಾಸ್ಮಾಮಿ' ಎನಲು, ತದಾಸ್ಮಾಮಿಯನೆ ಶಿವಚರಣಸಲಿಲ ಪ್ರಸಾದ ಸುಭೋಗ ಸಾವಧಾನಿಗಳೆಂದು ತಾವೆ ಹೇಳುತ್ತಿರಲು, ವೇದಾಗಮಶಾಸ್ತ್ರಗಳಿಗೂ ಪಂಚಾಕ್ಷರಿಮಂತ್ರಗಳಲ್ಲಿಯೆ ಉದಯ ಸ್ಥಿತಿಲಯವೆನ್ನುತಿರಲು, ನೀವಾ ವೇದಂಗಳ ಸ್ವಯಂಭೂಯೆಂದೂ ನಿತ್ಯವೆಂದೂ ಜಗವನೆನಬಹುದೆ. ಅದು ಕಾರಣ, ಈ ಜಗಂಗಳನು ತನ್ನ ಲೀಲೆಯಿಂದಲೆ ನಿರ್ಮಿಸುವ ಭವನೆನಿಸಿ, ತನ್ನ ಲೀಲೆಯಿಂದಲೆ ರಕ್ಷಿಸುವ ಮೃಡನಾಗಿ, ತನ್ನ ಲೀಲೆ, ಈ ಲೀಲೆಯಿಂದಲೆ ಸಂಹರಿಸುವ ಹರನಾಗಿ, ಲೀಲಾತ್ರಯರಹಿತನಾಗಿ ಶಿವನೆನಿಸುವ, || ಶ್ರುತಿ || `ಆದಿ ವೇದಸ್ಯ ಶಾಸ್ತ್ರಾಣಿ ಮಂತ್ರ ಪಂಚಾಕ್ಷರೇ ಸ್ಥಿತಾ' ಎಂದುದಾಗಿ, ಇದು ಕಾರಣ, ಉದ್ದೈಸುವ ರಕ್ಷಿಸುವ ಸಂಹರಿಪ ಭವಮೃಡಹರನಾದ ಶಿವನಿರಲು, ನೀವು ವೇದಸ್ವಯಂಭು ಜಗನಿತ್ಯವೆನಲಾಗದು. ||ಶ್ರುತಿ|| `ಪರವೋ ಭವಂತಿ' ಎನಲು, ವೇದ ದೇವತಾ ಸೃಷ್ಟಿಯೆನಲು, ಈಹಿಂಗೆ ವೇದಂಗಳು ಶಿವನಿಂದ ತಮಗೆ ಉದಯಸ್ಥಿತಿಲಯವೆನಲು, ಈ ಜಗ ಸೃಷ್ಟಿಸ್ಥಿತಿಲಯ ಕಾರಣ ಸರ್ವಜ್ಞ ಸರ್ವೇಶ್ವರ ಸರ್ವಕರ್ತು `ಏಕ ಏವ ರುದ್ರೋ ನ ದ್ವಿತೀಯಾಯ ತಸ್ಥೇ' ಎನಲು, ಒಬ್ಬನೆ ಶಿವನು ಎರಡೆನಿಪ ದೇವರಾರುಯಿಲ್ಲವೆಂದರಿದಿರಿ. ವೈದಿಕರಿರಾ, ವೇದಸ್ವಯಂಭುವಲ್ಲ ಶಿವನ ಶಿಶುಗಳು. ಜಗವು ನಿತ್ಯವಲ್ಲ. ಶಿವನ ಆಜ್ಞಾವಶವರ್ತಿಗಳು. ಅಹಂಗಾಗಲದಕ್ಕೇನು ವೈದಿಕಾಚರಣೆಯನಾಚರಿಸುವ ವೈದಿಕ ವ್ರತಿಗಳಿಗೆ ಸಾಧನವೆನಿಸುವ ವೇದಮಂತ್ರಂಗಳೆ ದೈವವೆನಲು, ವೇದಂಗಳೆ ದೈವವಾದಡೆ ಪಕ್ಷೀಶ್ವರನ ಕೈಯ ಸಿಲುಕುವುದೆ. ವೇದವೆ ದೈವವಾದಡೆ ಮುನೀಶ್ವರನಿಂದ ಅಳಿದುಹೋಗಿ ವೇದವ್ಯಾಸನಿಂದ ಪ್ರತಿಷಿ*ತವಹುದೆ. ವೇದವೆ ದೈವವಾದಡೆ ಶುನಕನಪ್ಪುದೆ, ವೇದವೆ ದೈವವಾದಡೆ ದಕ್ಷನಳಿವನೆ. ವೇದವೆ ದೈವವಾದಡೆ ತಮ್ಮಜನ ಶಿರಹೋಹಂದು ಸುಮ್ಮನಿಹವೆ. ವೇದವೆ ದೈವವಾದಡೆ ಕವಿತೆಗೊಳಗಾಹುದೆಯೆಂದು ಎನಲು, `ಆಘ್ರಾಯಘ್ರಾಯಾವದಂತಿ ವೇದ ಶ್ವಾನಶ್ಶನೈಶ್ಚನೈಃ ಯತ್ಸದಾನಿಮಹಾದಿವಾಂತಂ ವಂದೇ ಶಭರೇಶ್ವರಂ' ಇಂತೆಂದುದಾಗಿ, ಇದು ಕಾರಣ, ಶಿವನೇ ಸ್ವಯಂಭು ನಿತ್ಯವೆಂದರಿದ ವಿಪ್ರರೇ ವೈದಿಕೋತ್ತಮರು, ಬಸವಪ್ರಿಯ ಕೂಡಲಚೆನ್ನಸಂಗಯ್ಯ.
--------------
ಸಂಗಮೇಶ್ವರದ ಅಪ್ಪಣ್ಣ
ಗುರುವಿನಲ್ಲಿ ಲಿಂಗವುಂಟು, ಜಂಗಮವುಂಟೆಂದು ಗುರುಭಕ್ತಿಯ ಮಾಡೆಂದು ತೋರಿದಾತ ನಮ್ಮ ಬಸವಣ್ಣನಯ್ಯಾ. ಲಿಂಗದಲ್ಲಿ ಜಂಗಮವುಂಟೆಂದು, ಗುರುವುಂಟೆಂದು ಲಿಂಗಭಕ್ತಿಯ ಮಾಡೆಂದು ತೋರಿದಾತ ನಮ್ಮ ಬಸವಣ್ಣನಯ್ಯಾ. ಜಂಗಮದಲ್ಲಿ ಗುರುವುಂಟು, ಲಿಂಗವುಂಟು ಜಂಗಮ ಭಕ್ತಿಯ ಮಾಡೆಂದು ತೋರಿದಾತ ನಮ್ಮ ಬಸವಣ್ಣನಯ್ಯಾ. ಒಂದೇ ಮೂರ್ತಿ ಮೂರೆಂದಾತ ನಮ್ಮ ಬಸವಣ್ಣನಯ್ಯಾ. `ಏಕಮೂರ್ತಿ ತ್ರಯೋರ್ಭಾಗಾಃ' ಎಂದುದಾಗಿ, ಗುರು ಲಿಂಗಜಂಗಮವಾದಾತ ಒಬ್ಬನೆ ಶಿವನೆಂದು ಪ್ರಸಾರ ಮಾಡಿ ಭಕ್ತಿಯ ಬೆಳಸಿದಾತ ನಮ್ಮ ಬಸವಣ್ಣನಯ್ಯಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಅಷ್ಟಮೂರ್ತಿಗಳು ದೇವರೆಂಬ ಭ್ರಷ್ಟಭವಿಗಳ ಮಾತ ಕೇಳಲಾಗದು. ಅದೇನು ಕಾರಣವೆಂದೊಡೆ : ಪೃಥ್ವಿದೇವರಾದಡೆ, ಅಪ್ಪುವಿನ ಪ್ರಳಯದಲ್ಲಿ ಕರಗುವುದೆ ? ಅಪ್ಪು ದೇವರಾದಡೆ, ಅಗ್ನಿಯ ಪ್ರಳಯದಲ್ಲಿ ಅರತು ಹೋಗುವುದೆ ? ಅಗ್ನಿ ದೇವರಾದಡೆ, ವಾಯುವಿನ ಪ್ರಳಯದಲ್ಲಿ ಆರಿ ಹೋಗುವುದೆ ? ವಾಯು ದೇವರಾದಡೆ, ಆಕಾಶದ ಪ್ರಳಯದಲ್ಲಿ ಲಯವಪ್ಪುದೆ ? ಆಕಾಶ ದೇವರಾದಡೆ ಆತ್ಮನಲ್ಲಿ ಅಡಗಿಹೋಗುವುದೆ ? ಆತ್ಮದೇವರಾದಡೆ, ದ್ವಂದ್ವಕರ್ಮಂಗಳನುಂಡು ಜನನಮರಣಂಗಳಲ್ಲಿ ಬಂಧನವಡೆವನೆ ? ಚಂದ್ರಸೂರ್ಯರು ದೇವರಾದಡೆ ಭವಬಂಧನದಲ್ಲಿ ಸಿಲ್ಕಿ ತೊಳಲಿ ಬಳಲುವರೆ ? ಇದು ಕಾರಣ ಇಂತೀ ಅಷ್ಟತನುಗಳು ಎಂತು ದೇವರೆಂಬೆನು ? ದೇವರದೇವ ಮಹಾದೇವ ಮಹಾಮಹಿಮ ಎನ್ನೊಡೆಯ ಅಖಂಡೇಶ್ವರ ಒಬ್ಬನೆ ದೇವನಲ್ಲದೆ ಉಳಿದವರೆಲ್ಲ ಹುಸಿ ಹುಸಿ ಎಂಬೆನು ನೋಡಾ !
--------------
ಷಣ್ಮುಖಸ್ವಾಮಿ
ತಂದೆ-ತಾಯಿ, ಬಂಧು-ಬಳಗ, ಹೆಂಡಿರು-ಮಕ್ಕಳು, ತೊತ್ತು-ಬಂಟರುಗಳಿಗೆ ಒಬ್ಬನೆ ಗುರುವು. ಒಂದೇ ದೀಕ್ಷೆಯಾದಡೆ ಅತ್ಯಂತ ಉತ್ತಮ ನೋಡಾ ``ಪತಿಪತ್ನೀಭ್ರಾತೃಪುತ್ರದಾಸ್ಯೋ ಗೃಹಚರಾಶ್ಚ ಯೇ | ಏಕ ಏವ ಗುರುಸ್ತೇಷಾಂ ದೀಕ್ಷೈಕಾ ತು ವಿಶೇಷ್ಯತೇ ||'' ಇದಲ್ಲದೆ ಬಹುಮುಖದ ಗುರು, ಬಹುಮುಖದ ದೀಕ್ಷೆಯಾದಡೆ, ಅಘೋರನರಕ ತಪ್ಪದಯ್ಯ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಪೃಥ್ವಿ ಅಪ್ಪು ತೇಜ ವಾಯು ಆಕಾಶವಿಲ್ಲದಂದು, ಚಂದ್ರ ಸೂರ್ಯ ಆತ್ಮರಿಲ್ಲದಂದು, ಬ್ರಹ್ಮ ವಿಷ್ಣು ರುದ್ರ ಈಶ್ವರ ಸದಾಶಿವರಿಲ್ಲದಂದು, ನಾದ ಬಿಂದು ಕಳೆಗಳಿಲ್ಲದಂದು, ಪ್ರಕೃತಿ ಪ್ರಾಣ ಓಂಕಾರವಿಲ್ಲದಂದು, ಒಬ್ಬನೆ ಸ್ವಯಂಜ್ಯೋತಿಯಾಗಿದ್ದನಯ್ಯಾ ಇಲ್ಲದಂತೆ ನಮ್ಮ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಇನ್ನಷ್ಟು ... -->