ಅಥವಾ

ಒಟ್ಟು 24 ಕಡೆಗಳಲ್ಲಿ , 12 ವಚನಕಾರರು , 14 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಲೌಕಿಕದಲ್ಲಿ ಒಬ್ಬ ಪುರುಷಂಗೆ ಸ್ತ್ರೀಯರು ಒಬ್ಬರು, ಇಬ್ಬರು, ಮೂವರು, ನಾಲ್ವರು, ಐವರು ಪರಿಯಂತರ ಸತಿಯರುಂಟು. ಒಬ್ಬ ಸ್ತ್ರೀಯಳಿಗೆ ಐವರು ಪುರುಷರುಂಟೆ? ಇಲ್ಲೆಂಬ ಹಾಗೆ, ಎನಗೆ ಎನ್ನ ತಾಯಿತಂದೆಗಳು ಮೂರಾರು ಗಂಡರ ಮದುವೆ ಮಾಡಿ ಒಗತನ ಮಾಡೆಂದು ಸಕಲಗಣಂಗಳ ಸಾಕ್ಷಿಯಾಗಿ ಎನಗೆ ಕೊಟ್ಟರು. ಆ ನಿರೂಪವ ಕೈಕೊಂಡು ಗಂಡನ ಸಂಗವ ಮಾಡದೆ ಅವರ ಸಂಗವ ಬಿಡದೆ ರಂಗಮಂಟಪದಲ್ಲಿ ಒಬ್ಬನ ಕುಳ್ಳಿರಿಸಿ, ನಡುಮನೆಯಲ್ಲಿ ಒಬ್ಬನ ಕುಳ್ಳಿರಿಸಿ, ಒಬ್ಬನ ಹಿರಿಮನೆಯಲ್ಲಿ ಕುಳ್ಳಿರಿಸಿ, ಷಡ್ವಿಧಸ್ಥಾನಗಳಲ್ಲಿ ಷಡ್ವಿಧರ ಕುಳ್ಳಿರಿಸಿ, ಇಂತೀ ಪುರುಷರ ಕೂಡಿ ಒಗತನವ ಮಾಡಿ, ಇವರಿಗೆ ಸಿಕ್ಕದೆ ಹೊಲೆಯನ ಕೂಡಿ ಕುಲಗೆಟ್ಟು ನಾಯೆತ್ತ ಹೋದೆನೆಂದರಿಯನಯ್ಯ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ತ್ರಿಭುವನಗಿರಿಯರಸರು ತ್ರೈಲೋಕಪಟ್ಟಣಕ್ಕೆ ದಾಳಿಯನಿಕ್ಕಿದರು. ಆ ಪಟ್ಟಣ ಸುತ್ತಿ ಮುತ್ತಿಕೊಂಡರು. ಏಳು ಭೂದುರ್ಗಂಗಳು ಕೊಳಹೋದವು. ಅರಮನೆಯ ಹೊಕ್ಕರು, ಹನ್ನೆರಡುಸಾವಿರ ರಾಣಿವಾಸವ ಸೆರೆ ಹಿಡಿದರು. ಆನೆಯ ಸಾಲೆಗೆ ಕಿಚ್ಚನಿಕ್ಕಿದರು, ಕುದುರೆಗಳ ಕಾಲ ಹರಿಯ ಹೊಯ್ದರು. ನಾಯಿಗಳ ಕಣ್ಣ ಕೆಡಿಸಿದರು, ಹಿರಿಯರಸನ ಹಿಡಿದುಕೊಂಡರು. ಇಪ್ಪತ್ತೈದು ತಳವಾರರ ನಿರ್ಮೂಲಿಸಿ ಬಿಟ್ಟರು. ಮೂವರ ಮೂಗ ಕೊಯ್ದರು, ಒಬ್ಬನ ಶೂಲಕ್ಕೆ ಹಾಕಿದರು. ಆ ಪಟ್ಟಣದ ಲಕ್ಷ್ಮಿ ಹಾರಿತ್ತು. ಆ ಪಟ್ಟಣದ ಪ್ರಜೆಗಳಿಗೆ ರಣಮಧ್ಯ ಮರಣವಾಯಿತ್ತು. ಆ ರಣಭೂಮಿಯಲ್ಲಿಕಾಡುಗಿಚ್ಚೆದ್ದುರಿಯಿತ್ತು. ಆ ಊರ ನಡುಗಡೆಯಲ್ಲಿ ಒಬ್ಬ ಬೇತಾಳ ನಿಂದಿರ್ದ. ಆ ಬೇತಾಳನ ಮೇಲೆ ಅಕಾಲವರುಷ ಸುರಿಯಿತ್ತು. ಆ ವರುಷದಿಂ ಹದಿನಾಲ್ಕು ಭುವನ, ಸಚರಾಚರಂಗಳಿಗೆ ಶಾಂತಿಯಾಯಿತ್ತು. ಆ ಶಾಂತಿ ವಿಶ್ರಾಂತಿಯಲ್ಲಿ ಹುಟ್ಟಿದ ಸುಖವ, ನಿಮ್ಮ ಉಂಗುಷ್ಟಾಗ್ರದಲ್ಲಿ ಕಂಡ ಘನ[ವ], ಸುರಗಿಯ ಚೌಡಯ್ಯಗಳು ಬಲ್ಲರಲ್ಲದೆ, ನಾನೆತ್ತ ಬಲ್ಲೆನಯ್ಯಾ. ಶುದ್ಧಸಿದ್ಧ ಪ್ರಸಿದ್ಧ ಪ್ರಸನ್ನ ಪ್ರಭುವೆ ಶಾಂತಚೆನ್ನಮಲ್ಲಿಕಾರ್ಜುನಯ್ಯಾ, ನಿಮ್ಮ ಧರ್ಮ ನಿಮ್ಮ ಧರ್ಮ ನಿಮ್ಮ ಧರ್ಮ.
--------------
ಮರುಳಶಂಕರದೇವ
ಎನ್ನ ಮನದಲ್ಲಿ ನೀ ಹುಟ್ಟಿ, ನಿನ್ನ ಕರದಲ್ಲಿ ನಾ ಹುಟ್ಟಿ, ಉಭಯರು ಕೂಡಲಿಕ್ಕೆ ಎನಗೊಂದು, ನಿನಗೆ ಮೂರು ಮಕ್ಕಳು ಹುಟ್ಟಿ, ನಾ ಬರುವಾಗ ನಿನ್ನ ಮಕ್ಕಳ ಮೂವರನು ಒಬ್ಬನ ಮತ್ರ್ಯಲೋಕದಲ್ಲಿಟ್ಟೆ, ಒಬ್ಬನ ಪಾತಾಳಲೋಕದಲ್ಲಿಟ್ಟೆ, ಒಬ್ಬನ ಸ್ವರ್ಗಲೋಕದಲ್ಲಿಟ್ಟೆ. ಇಂತೀ ಮೂವರನು ಮೂರುಲೋಕದಲ್ಲಿಟ್ಟು ನಾ ನನ್ನ ಮಗನ ಸಂಗವ ಮಾಡಿ, ಸತ್ತು ಮುತ್ತೈದೆಯಾಗಿರ್ದೆನಯ್ಯಾ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಅಯ್ಯಾ, ನಾವು ಪರಮವಿರಕ್ತರು, ಪಟ್ಟದ ಅಯ್ಯನವರು, ಚರಮೂರ್ತಿಗಳು, ಪರದೇಶಿಗಳು ಎಂದು ಶಂಖ ಗಿಳಿಲು ದಂಡಾಗ್ರ ಎಂಬ ಬಿರುದು ಪಿಡಿದು, ಕಾವಿ ಕಾಷಾಯಾಂಬರವ ಹೊತ್ತು, ಸರ್ವಕಾರ್ಯದಲ್ಲಿ ಶ್ರೇೀಷ*ರೆಂದು ಗರ್ವದಲ್ಲಿ ಕೊಬ್ಬಿ, ಕಾಮನಾಟದಲ್ಲಿ ಕಲಕಿ, ಮನಸ್ಸಿನಲ್ಲಿ ದುರ್ಗುಣವನ್ನಿಟ್ಟುಕೊಂಡು ಮಾತಿನಲ್ಲಿ ನೀತಿಯ ಸೇರಿಸುತ್ತ ಕಪಟದಲ್ಲಿ ಚರಿಸುವಂತಹ ತೊನ್ನ ಹೊಲೆಮಾದಿಗರ ಸಂಗಮಾಡಲಾಗದು, ಅವರ ಪ್ರಸಂಗವ ಕೇಳಲಾಗದು. ಅದೇನು ಕಾರಣವೆಂದಡೆ: ಗುರುಲಿಂಗಜಂಗಮವಾದ ಬಳಿಕ ಅಷ್ಟಾವರಣದಲ್ಲಿ ನಿಷಾ*ಪರವಾಗಿರಬೇಕು. ಪರಧನ ಪರಸತಿಯರ ಹಿಡಿಯೆನೆಂಬ ನೇಮದಲ್ಲಿ ಬಲ್ಲಿದರಾಗಿರಬೇಕು. ಶಿವಭಕ್ತರಾದವರ ಭವವ ಗೆಲಿಸಿ ಮೋಕ್ಷವ ಹೊಂದಿಸಬೇಕು. ಶಿವಲಾಂಛನವ ಹೊತ್ತ ಬಳಿಕ ಶಿವನಂತಿರಬೇಕು ಬರಿದೆ, ನಾನು ಮಾಹೇಶ್ವರನೆಂದು, ನಾನು ಶಿವಭಕ್ತನೆಂದು ತನ್ನ ಹೃನ್ಮಂದಿರದಲ್ಲಿ ನೆಲಸಿದ ಚಿನ್ಮಯಜಂಗಮಲಿಂಗಕ್ಕೆ ತನು-ಮನ-ಧನವೆಂಬ ತ್ರಿವಿಧಪದಾರ್ಥವನರ್ಪಿಸಿ, ತ್ರಿವಿಧಪ್ರಸಾದವ ಗರ್ಭೀಕರಿಸಿಕೊಂಡು, ಪ್ರಸನ್ನಪ್ರಸಾದವ ಸ್ವೀಕರಿಸಿ ಪರತತ್ವಪ್ರಸಾದದಲ್ಲಿ ತಾನು ತಾನಾಗಲರಿಯದೆ ಉಚ್ಚಂಗಿದುರ್ಗಿಗೆ ಬಿಟ್ಟ ಪೋತರಾಜನಂತೆ ಮೂರು ಮೂರು ಜಡೆಗಳ ಬಿಟ್ಟು, ಆಡಿನೊಳಗಿರುವ ಹಿರಿಯ ಹೋತಿನಂತೆ ಮೊಳ ಮೊಳ ಗಡ್ಡವ ಬಿಟ್ಟು, [ಡಂ]ಬ ಜಾತಿಗಾರನಂತೆ ವೇಷವ ತೊಟ್ಟು, ಮೀಸೆಯ ಬೋಳಿಸಿಕೊಂಡು, ಕೈಪವ ಧರಿಸಿ, ಸಂಸ್ಕೃತ ಗೀರ್ವಾಣಭಾಷೆಯ ಕಲಿತು, ಕಾಕ ಕುಟಿಲ ಕುಹಕದ ಗಾಳಿಪೂಜೆಯಿಂದ ಬಂದ ಸುಡಗಾಡು ಸಿದ್ಧಯ್ಯಗಳಂತೆ, ಗಿಡಮೂಲಿಕೆಗಳು ತಂತ್ರ ಮಂತ್ರ ಯಂತ್ರದ ಭಾಷೆಗಳ ಕಲಿತುಕೊಂಡು ಪುರಜನರ ಮೆಚ್ಚಿಸಬೇಕೆಂದು ಅಯ್ಯಾ, ನಾವು ಕೆರೆ ಭಾವಿಯನಗೆಸಬೇಕೆಂದು, ಮಠ ಗುಡಿಯ ಕಟ್ಟಿಸಬೇಕೆಂದು, ಮಾನ್ಯದಲಿ ಬಿಲ್ವಗಿಡಗಳ ಹಚ್ಚಬೇಕೆಂದು, ಮದುವೆ ಅಯ್ಯಾಚಾರವ ಮಾಡಬೇಕೆಂದು, ಅನ್ನಕ್ಷೇತ್ರ ಅರವಟ್ಟಿಗೆಯ ಇಡಿಸಬೇಕೆಂದು, ಪುರಾಣಗಳ ಹಚ್ಚಿಸಬೇಕೆಂದು, ಇಂತಪ್ಪ ದುರಾಸೆಯ ಮುಂದುಗೊಂಡು ನಾನಾ ದೇಶವ ತಿರುಗಿ, ಅರಸರ ಮದದಂತೆ ಗರ್ವದಿಂದ ಹೆಚ್ಚಿ, ಹೇಸಿ ಹೊಲೆ ಮಾದಿಗರ ಕಾಡಿ ಬೇಡಿ, ಹುಸಿಯನೆ ಬೊಗಳಿ ಒಬ್ಬನ ಒಲವ ಮಾಡಿ[ಕೊಂ]ಡು, ವ್ಯಾಪಾರ ಮರ್ಯಾದೆಯಲ್ಲಿ ಪೇಟೆಯಲ್ಲಿ ಕುಳಿತು ಅನಂತ ಮಾತುಗಳನಾಡುತ್ತ, ಸೆಟ್ಟಿ ಮುಂತಾದ ಅನಂತ ಕಳ್ಳ ಹಾದರಗಿತ್ತಿಯ ಮಕ್ಕಳ ಮಾತಿನಿಂದೊಲಿಸಿ, ಅವರು ಕೊಟ್ಟಡೆ ಹೊಗಳಿ, ಕೊಡದಿರ್ದಡೆ ಬೊಗಳಿ, ಆ ಭ್ರಷ್ಟ ಹೊಲೆಮಾದಿಗರು ಕೊಟ್ಟ ದ್ರವ್ಯಗಳ ತೆಗೆದುಕೊಂಡು ಬಂದು ಕಡೆಗೆ ಚೋರರು ಒಯ್ದರೆಂದು ಮಠದೊಳಗೆ ಮಡಗಿಕೊಂಡು ಪರಸ್ತ್ರೀಯರ ಹಡಕಿ ಯೋನಿಯೊಳಗೆ ಇಂದ್ರಿಯ ಬಿಟ್ಟು, ಕಾಮಕ್ರೋಧದಲ್ಲಿ ಮುಳುಗಿ ಮತಿಗೆಟ್ಟು, ಶಿವಪಥಕ್ಕೆ ದೂರಾಗಿ, ದುರಾಚಾರವ ಆಚರಿಸಿ, ನಡೆನುಡಿಗಳ ಹೊರತಾಗಿ, ವ್ಯರ್ಥ ಹೊತ್ತುಗಳೆದು, ಸತ್ತುಹೋಗುವ ಜಡದೇಹಿ ಕಡುಪಾತಕ ಕತ್ತೆ ಹಡಿಕರಿಗೆ ಪರಮ ನಿರಂಜನ ಜಂಗಮಲಿಂಗದೇವರೆಂದು ಕರೆತಂದು, ಪಾದತೀರ್ಥ ಪ್ರಸಾದವ ತೆಗೆದುಕೊಂಬುವರಿಗೆ ಇಪ್ಪತ್ತೊಂದು ಯುಗಪರಿಯಂತರ ನರಕಕೊಂಡದಲ್ಲಿಕ್ಕುವ. ಇಂತಪ್ಪ ಜಂಗಮವನು ಪೂಜೆ ಮಾಡುವಂತಹ ಶಿವಭಕ್ತನ ಉಭಯತರ ಮೂಗ ಸೀಳಿ ಮೆಣಸಿನ ಹಿಟ್ಟು ತುಪ್ಪವ ತುಂಬಿ, ಪಡಿಹಾರಿ [ಉತ್ತಣ]ಗಳೆಡದ ಪಾದುಕೆಯಿಂದ ಪಡಪಡನೆ ಹೊಡಿ ಎಂದಾತ ನಮ್ಮ ಅಂಬಿಗರ ಚೌಡಯ್ಯ ನಿಜಶರಣನು.
--------------
ಅಂಬಿಗರ ಚೌಡಯ್ಯ
ಒಬ್ಬನ ಮಾತಕೊಟ್ಟು ಬಾಹ್ಯದಲ್ಲಿಟ್ಟು ಕೊಂದೆ. ಒಬ್ಬನ ಗುಪ್ತಭಾಷೆಯಕೊಟ್ಟು ಅಂತರಂಗದಲ್ಲಿಟ್ಟು ಕೊಂದೆ. ಒಬ್ಬನ ಮೌನಭಾಷೆಯಕೊಟ್ಟು ಆಕಾಶದಲ್ಲಿಟ್ಟು ಕೊಂದೆ. ಒಬ್ಬ ಅಧಮನಿಗೆ ತಪ್ಪದೆ ಭಾಷೆಯಕೊಟ್ಟು ಒಳಗಾಗಿ ಹಾದರವನಾಡಿ ಕಾಯಕದಲ್ಲಿರ್ಪೆನು ನೋಡೆಂದನಯ್ಯಾ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಒಬ್ಬನಿಗೆ ರೂಹಿಲ್ಲ, ಒಬ್ಬನಿಗೆ ರೂಹುಂಟು, ಒಬ್ಬನ ರೂಹು ಹೋಗುತ್ತ ಬರುತ್ತದೆ. ಮೂವರನೊಂದೆಡೆಗೆ ತಂದಡೆ ಏನಹರೆಂಬುದ ನೋಡಿಕೊಳ್ಳಿರಣ್ಣಾ. ಕಂಡಡೆ ಉಣಲಿಲ್ಲ, ಕಾಣದಿರ್ದಡೆ ಉಣದಿರಲಿಲ್ಲ. ಇದೇನು ಸೋಜಿಗವಯ್ಯಾ ಸೌರಾಷ್ಟ್ರ ಸೋಮೇಶ್ವರಾ.
--------------
ಆದಯ್ಯ
ತಂದೆಯ ಹೆಸರ ಮಗನಮಡದಿಗೆ ಮಿಂಡರು ಮೂವರು ನೋಡಾ. ಒಬ್ಬಂಗೆ ಕೈಗೊಟ್ಟು ಗುದ್ಯಾಡುವಳು, ಒಬ್ಬಂಗೆ ಮಾತುಕೊಟ್ಟು ಚಿಂತಿಸುವಳು, ಒಬ್ಬನ ನೆರೆದು ಸುಖಿಸುವಳು, ಇಂತಪ್ಪ ನಿತ್ಯ ನೇಮದ ಹಾದರಗಿತ್ತಿಗೆ ಗುರುನಿರಂಜನ ಚನ್ನಬಸವಲಿಂಗವ ಕೂಡುವಳೆಂದು ನಗುವರು ಶರಣರು.
--------------
ದೇಶಿಕೇಂದ್ರ ಸಂಗನಬಸವಯ್ಯ
ಹೊಲಕ್ಕೆ ಹೋಗುತಿರ್ಪವನ ಕಂಡು, ಊರೆಲ್ಲರು ನೆರೆದು, ಬೇಡ ಬದುಕೆಂದಡೆ ಆರೆನೆಂದ. ಅದೇತಕ್ಕೆ ಆಕೆಯ ದೂರೆಂದಡೆ ಅವ ಬಾತಿಗೇಡಿ. ಅವಳ ತಾಯ ಕೊಟ್ಟಡೆ ಇರ್ಪೆನೆಂದು ಕೂಡಿಕೊಂಡ. ಅಜಾತರೊಂದಿಗೆ ಹೇಳೆ, ನೀತಿ ಲೇಸಾಯಿತ್ತು ಅತ್ತೆ ಅಳಿಯಂಗೆ. ಅತ್ತೆ ಅಳಿಯನ ಒಲ್ಲೆನೆಂದು ಹೊತ್ತುಹೋರುತ್ತಿರಲಾಗಿ, ಅಳಿಯ ಅತ್ತೆಯ ಹಿಡಿದು ಅಳಿದನುಟ್ಟ ಸೀರೆಯ. ಮೊತ್ತದ ಭಗವ ಕಂಡು ಒತ್ತಿಹಿಡಿಯಲಾಗಿ, ಸತ್ತಳು ಅತ್ತೆ ಅಳಿಯನ ಕೈಯಲ್ಲಿ. ಅತ್ತೆಯ ಕಾಲುದೆಸೆಯಲ್ಲಿ ಕುಳಿತು, ಎತ್ತಿ ನೋಡಲಾಗಿ, ನಿಶ್ಚಯವಾಯಿತ್ತು ಅತ್ತೆಯ ಭಗ. ಹುಟ್ಟಿದರು ಮೂವರಲ್ಲಿ, ಕೆಲದಲ್ಲಿ ಇಬ್ಬರು, ನಡುವೆ ಒಬ್ಬನಾಗಿ. ಇಬ್ಬರ ಬಿಟ್ಟು, ಒಬ್ಬನ ಹಿಡಿದು ಅಬ್ಬರಿಸಲಾಗಿ, ಅವನೆದ್ದು ಬೊಬ್ಬೆಯ ಹೊಯ್ದ. ಹೊಯ್ದ ಹೊಯ್ಗಳಿನಲ್ಲಿ ಅತ್ತೆಯ ತಂದ ಅಳಿಯ, ನಾಮನಷ್ಟವಾದ. ಇಂತಿದನೆತ್ತಲೆಂದರಿಯೆ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಒಬ್ಬನ ಮನೆಯಲುಂಡು ಹೊತ್ತುಗಳೆದೆ, ಒಬ್ಬನ ಮನೆಯಲುಡಲೊಂದ ಗಳಿಸಿದೆ, ಗರ್ವ ಬೇಡ ಬೇಡ ನಿನಗೆ. ಚೆನ್ನಯ್ಯನ ಮನೆಯಲಂಬಲಿಯನುಂಡು ಬದುಕಿದೆ. ಗರ್ವ ಬೇಡ ಬೇಡ. ಕೂಡಲಸಂಗಯ್ಯಾ, ಸಿರಿಯಾಳನಿಂದ ಮಾನಿಸಲೋಕಗಂಡೆ.
--------------
ಬಸವಣ್ಣ
ಬಿಂದಿನ ಕೊಡನ ಹೊತ್ತಾಡುವ ಅಂಗನೆಯ ಒಂದಾಗಿ ಹುಟ್ಟಿದರೈವರು ಸ್ತ್ರೀಯರು. ಚಂದ ಚಂದದ ಮನೆಯ ರಚಿಸಿ ಅಲ್ಲಿ ಸರ್ವರ ಒಂದುಗೂಡುವುದ ಕಂಡೆನಯ್ಯಾ. ಬಿಂದಿನ ಕೊಡ ತುಳುಕಿ ಚಂದ್ರಾಮೃತವೊಗಲು ಚಂದಚಂದದ ಮನೆಯಳಿದು ಒಂದಾಗಿ ಹುಟ್ಟಿದವರೈವರು ಒಬ್ಬನ ನೆರೆದು ನಿಬ್ಬೆರಗಾದುದ ಕಂಡು ನಾನು ಬೆರಗಾದೆನು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಒಬ್ಬನ ಮನೆಯಲುಂಡು, ಒಬ್ಬನ ಮನೆಯಲುಟ್ಟು, ಒಬ್ಬನ ಬಾಗಿಲ ಕಾದಡೆ ನಮಗೇನಯ್ಯಾ ? ನೀನಾರಿಗೊಲಿದಡೂ ನಮಗೇನಯ್ಯಾ ? ಚೆನ್ನಮಲ್ಲಿಕಾರ್ಜುನಯ್ಯಾ, ಭಕ್ತಿಯ ಬೇಡಿ ಬಾಯಿ ಬೂತಾಯಿತ್ತು.
--------------
ಅಕ್ಕಮಹಾದೇವಿ
ಒಂದು ಬಾಗಿಲಲ್ಲಿ ಇಬ್ಬರ ತಡೆವೆ, ಎರಡು ಬಾಗಿಲಲ್ಲಿ ಮೂವರ ತಡೆವೆ, ಆರು ಬಾಗಿಲಲ್ಲಿ ಒಬ್ಬನ ತಡೆವೆ. ಒಂಬತ್ತು ಬಾಗಿಲಲ್ಲಿ ನಿಂದು ನೋಡಲಾಗಿ ಕೂಡಲಸಂಗಮದೇವರಲ್ಲಿ ಬಸವಣ್ಣ ಸಾಕ್ಷಿಯಾಗಿ ಎತ್ತಹೋದರೆಂದರಿಯೆ.
--------------
ಉಗ್ಘಡಿಸುವ ಗಬ್ಬಿದೇವಯ್ಯ
ಅಕ್ಕತಂಗಿಯರೈವರು ಒಬ್ಬನ ಅರಸಿಯರು. ಕಿರಿಯಾಕೆಯ ಕೂಡುವಡೆ ಹಿರಿಯಾಕೆ ಕುಂಟಣಿ. ಹಿರಿಯಾಕೆಯ ಕೂಡುವಡೆ ಕಿರಿಯಾಕೆ ಕುಂಟಣಿ. ಇಬ್ಬರನೂ ಕೂಡುವಡೆ ಬೇರೆಮಾಡಿ ಬೆರಸುಬಾರದೆಂದರಿದು, ಒಂದಾಗಿ ಕೂಡಲು ಒಬ್ಬಾಕೆ ಕಣ್ಣ ಕೆಚ್ಚನೆ ಮಾಡುವಳು. ಒಬ್ಬಾಕೆ ಬುದ್ಭಿಯ ಹೇಳುವಳು ಒಬ್ಬಾಕೆ ಹಾಸಿ ಕೊಡುವಳು. ಈ ಐವರನೂ ಅಪ್ಪಿಕೊಂಡು ಒಂದೆಬಾರಿ ಬೆರಸಲು ನೀರು ನೀರ ಬೆರಸಿದಂತಾಯಿತು ಕಲಿದೇವಯ್ಯಾ. ನಿಮ್ಮ ಶರಣ ಸಿದ್ಧರಾಮಯ್ಯದೇವರು ಎನಗೆ ಈ ಪಥವ ಕಲಿಸಿ, ನಿಜನಿವಾಸದಲ್ಲಿರಿಸಿದ ಕಾರಣ ಆನು ನಮೋ ನಮೋ ಎನುತಿರ್ದೆನು.
--------------
ಮಡಿವಾಳ ಮಾಚಿದೇವ
ಇಬ್ಬರ ಹಿಡಿವಡೆ ಒಬ್ಬನ ಕೊಲಬೇಕು, ಒಬ್ಬನ ಕೊಂದರೆ ಎಲ್ಲರೂ ಸಾವರು. ಎಲ್ಲರೂ ಸತ್ತು ಹಿಡಿದವರಿಬ್ಬರು ಉಳಿದಡೆ, ಆ ಇಬ್ಬರ ನಂಬಿ ಬಯಲಾದೆ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
-->