ಅಥವಾ

ಒಟ್ಟು 37 ಕಡೆಗಳಲ್ಲಿ , 15 ವಚನಕಾರರು , 35 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇಂದೆನ್ನ ಮನೆಗೆ ಒಡೆಯರು ಬಂದಡೆ ತನುವೆಂಬ ಕಳಶದಲುದಕವ ತುಂಬಿ, ಕಂಗಳ ಸೋನೆಯೊಡನೆ ಪಾದಾರ್ಚನೆಯ ಮಾಡುವೆ. ನಿತ್ಯ ಶಾಂತಿಯೆಂಬ ಶೈತ್ಯದೊಡನೆ ಸುಗಂಧವ ಪೂಸುವೆ. ಅಕ್ಷಯ ಸಂಪದವೆಂದರಿದು ಅಕ್ಷತೆಯನೇರಿಸುವೆ. ಹೃದಯಕಮಲ ಪುಷ್ಪದೊಡನೆ ಪೂಜೆಯ ಮಾಡುವೆ. ಸದ್ಭಾವನೆಯೊಡನೆ ಧೂಪವ ಬೀಸುವೆ. ಶಿವಜ್ಞಾನ ಪ್ರಕಾಶದೊಡನೆ ಮಂಗಳಾರತಿಯನೆತ್ತುವೆ. ನಿತ್ಯತೃಪ್ತಿಯೊಡನೆ ನೈವೇದ್ಯವ ಕೈಕೊಳಿಸುವೆ. ಪರಿಣಾಮದೊಡನೆ ಕರ್ಪೂರ ವೀಳೆಯವ ಕೊಡುವೆ. ಪಂಚಬ್ರಹ್ಮದೊಡನೆ ಪಂಚಮಹಾವಾದ್ಯವ ಕೇಳಿಸುವೆ. ಹರುಷದೊಡನೆ ನೋಡುವೆ, ಆನಂದದೊಡನೆ ಕುಣಿಕುಣಿದಾಡುವೆ, ಪರವಶದೊಡನೆ ಹಾಡುವೆ, ಭಕ್ತಿಯೊಡನೆ ಎರಗುವೆ, ನಿತ್ಯದೊಡನೆ ಕೂಡಿ ಆಡುವೆ. ಚೆನ್ನಮಲ್ಲಿಕಾರ್ಜುನಾ, ನಿಮ್ಮ ನಿಲವ ತೋರಿದ ಗುರುವಿನಡಿಯಲ್ಲಿ ಅರನಾಗಿ ಕರಗುವೆ.
--------------
ಅಕ್ಕಮಹಾದೇವಿ
ಮಹಾರಾಣುವೆಯ ಬಿಟ್ಟು ಬಂದು, ಮತ್ತೆ ಒಡೆಯರು ಭಕ್ತರಲ್ಲಿ ರಾಣಿವಾಸವೆಂದು ಕಟ್ಟು ಮೆಟ್ಟುಂಟೆ ? ಖಂಡಿತ ಕಾಯವನಂಗೀಕರಿಸಿದ ಭಕ್ತಂಗೆ, ಮತ್ತೆ ಹೆಂಡತಿ ಮಕ್ಕಳು ಬಂಧುಗಳೆಂದು ಜಂಗಮಕ್ಕೆ ತಂದ ದ್ರವ್ಯವನ್ಯರಿಗಿಕ್ಕಿ, ತಾನುಂಡನಾದಡೆ, ತಿಂಗಳು ಸತ್ತ ಹುಳಿತನಾಯ ಕಾಗೆ ತಿಂದು, ಆ ಕಾಗೆಯ ಕೊಂದು ತಿಂದ ಭಂಡಂಗೆ ಕಡೆ. ನಿಃಕಳಂಕ ಮಲ್ಲಿಕಾರ್ಜುನಲಿಂಗವೆ, ನೀವೆ ಬಲ್ಲಿರಿ.
--------------
ಮೋಳಿಗೆ ಮಾರಯ್ಯ
ದೃಷ್ಟಿ ಕಾಮ್ಯಾರ್ಥದಲ್ಲಿ ನೆಟ್ಟು ನೋಡಿ, ಒಡೆಯರು ಭಕ್ತರ ವಧುಗಳಲ್ಲಿ ಮತ್ತಾ ದೃಷ್ಟಿಯ ಮುಟ್ಟಲೇತಕ್ಕೆ? ಮತ್ತೆ ಇತ್ಯಾದಿಗಳ ಬಿಟ್ಟು ಹೆಣ್ಣವ್ರತ ಕಟ್ಟೆಂದು ಮಾಡಬಹುದೆ? ಮತ್ತದ ಕಟ್ಟಿಕೊಂಡು ಮಿಟ್ಟಿಯ ಭಂಡರಂತೆ ಕುಟ್ಟಿಯಾಡಬಹುದೆ? ಇಂತೀ ಬಾಹ್ಯ ದೃಷ್ಟಿಗಳ್ಳರ, ಆತ್ಮಚಿತ್ತಗಳ್ಳರ ವ್ರತಸ್ಥರೆಂದು ಎನಲಾಗದು. ಮನಕ್ಕೆ ಮನೋಹರ ಶಂಕೇಶ್ವರ ಲಿಂಗವು ಅವರುವ ಮುಟ್ಟದಿಹನಾಗಿ
--------------
ಕರುಳ ಕೇತಯ್ಯ
ಒಡೆಯರು ದೇವರಿಗೆ ಕೊಟ್ಟಲ್ಲದೆ, ಕೊಳ್ಳೆನೆಂಬ ಮೃಡನ ಭಕ್ತರ ನೋಡಾ. ಒಡೆಯರಿಗೊಂದು ಪರಿ, ತನಗೊಂದು ಪರಿ ಮಾಡುವ ಸಡಗರವ ನೋಡಾ. ಒಡೆಯಂಗೆ ಭೆಟ್ಟಿ, ಮನೆಯೊಡಯಂಗೆ ತುಪ್ಪ ಕಟ್ಟು ಮೊಸರು ಮೃಷ್ಟಾನ್ನ. ಒಡೆಯರಿಗೆ ಕುರುಹ ತೋರಿ, ತಾ ಹಿರಿದಾಗಿ ಉಂಬ ಕಡುಗಲಿಯ ನೋಡಾ. ಇವರಡಿಯಲ್ಲಿ ಬಂದಡೆ, ಇವರನೊಡಗೂಡಿ ನುಡಿದೆನಾದಡೆ, ಜೇನಗಡಿಗೆಯಲ್ಲಿ ಬಿದ್ದ ಗುದಿಮಕ್ಷಿಕನಂತೆ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಒಡೆಯರು ಭಕ್ತರಿಗೆ ಸಲುವ ಸಹಪಙô್ತಯಲ್ಲಿ, ಗುರು ಅರಸೆಂದು, ತನ್ನ ಪರಿಸ್ಪಂದವೆಂದು ರಸದ್ರವ್ಯವ ಎಸಕದಿಂದ ಇಕ್ಕಿದಡೆ, ಅದು ತಾನರಿದು ಕೊಂಡಡೆ ಕಿಸುಕುಳದ ಪಾಕುಳ. ಅಲ್ಪ ಜಿಹ್ವೆಲಂಪಟಕ್ಕೆ ಸಿಕ್ಕಿ ಸಾವ ಮತ್ಸ್ಯದಂತೆಯಾಗದೆ- ಈ ಗುಣವ ನಿಶ್ಚಯಿಸಿದಲ್ಲಿ ಏಲೇಶ್ವರಲಿಂಗವನರಿಯಬಲ್ಲ.
--------------
ಏಲೇಶ್ವರ ಕೇತಯ್ಯ
ಒಡೆಯರು ಭಕ್ತರಿಗೆ ಸಲುವ ಸಹಪ:ಕ್ತಿಯಲ್ಲಿ ಗುರುವೆಂದು, ಅರಸೆಂದು, ತನ್ನ ಪರಿಸ್ಪಂದದವರೆಂದು, ರಸದ್ರವ್ಯವನೆಸಕದಿಂದ ನೀಡಿದೊಡೆ, ಅದ ನಾನರಿದು ಕೈಕೊಂಡಡೆ ಕಿಸುಕುಳದ ಪಾಕುಳಕಿಚ್ಚೈಸಿದಂತೆ ; ಅಲ್ಪ ಜಿಹ್ವಾಲಂಪಟಕ್ಕೆ ಸಿಕ್ಕಿದ ಮತ್ಸ್ಯ ಬಂಧನದಿ ಸತ್ತಂತೆ. ಇದನರಿದು ಭಕ್ತನಾಗಲಿ, ಗುರುವಾಗಲಿ, ಜಂಗಮವಾಗಲಿ, ಶಿವಗಣಪ:ಕ್ತಿಯ ನಡುವೆ ತಾ ಕುಳ್ಳಿರ್ದು ಮಿಗಿಲಾಗಿ ಷಡುರಸಾನ್ನವಾದಿಯಾದ ಸುಪದಾರ್ಥಂಗಳನಿಕ್ಕಿಸಿಕೊಂಡು ತಿಂದನಾದಡೆ ಆಚಾರವೆ ಪ್ರಾಣವಾದ ರಾಮೇಶ್ವರಲಿಂಗಕ್ಕೆ ದೂರ.
--------------
ಅಕ್ಕಮ್ಮ
ನುಡಿದ ನುಡಿಗೆ ನಡೆ ಇಲ್ಲದಿದ್ದರೆ, ಮೃಡನ ಶರಣರು ಕಡೆನುಡಿದಲ್ಲದೆ ಮಾಣರು. ಎಮ್ಮ ಶರಣರು ಮತ್ತೆ ಹೊಡೆಗೆಡೆದು ಎನ್ನ ನುಡಿದು, ಹೊಡೆದು, ರಕ್ಷಿಸಿದಿರಲ್ಲ. ಎನ್ನ ಒಡೆಯರು ನೀವಹುದೆಂದು ಬಿಡದೆ ಅವರ ಬೇಡಿಕೊಂಬೆ. ಇದೀಗ ನಮ್ಮ ಶರಣರ ನಡೆನುಡಿ. ಅದಂತಿರಲಿ. ಅದಕೆ ನಮೋ ನಮೋ ಎಂಬೆ. ಈ ಪೊಡವಿಯೊಳು ಹುಟ್ಟಿದ ಮನುಜರೆಲ್ಲರು ಒಡೆಯರೆಂದು ಪೂಜೆಯಮಾಡಿ,ತುಡುಗುಣಿನಾಯಿಯಂತೆ ಒಕ್ಕುದ ಮಿಕ್ಕುದ ನೆಕ್ಕಿ, ತಮ್ಮ ಇಚ್ಛೆಗೆ ನುಡಿದರೆ ಒಳ್ಳಿದನೆಂಬರು. ಸತ್ಯವ ನುಡಿದರೆ ಸಾಯಲವನೆಲ್ಲಿಯ ಶರಣ ? ಇವನೆಲ್ಲಿಯ ಜಂಗಮ? ಇವರ ಕೂಡಿದ ಮನೆ ಹಾಳೆಂದು, ಕಂಡ ಕಂಡವರ ಕೂಡ ಹೇಳಿಯಾಡುವ, ಈ ಕಾಳುಮನುಜರನು ಲಿಂಗ ಜಂಗಮವೆಂದು ನುಡಿದು ಕೂಡಿಕೊಂಡು ಹೋದರೆ, ತನ್ನ ತನ್ನ ಪದಾರ್ಥವ ಹಿಡಿದರೆ, ಒಡೆಯನೆ ಬದುಕಿದೆ, ತ್ರಾಹಿ ಎಂಬ ಮೃಡಶರಣನು ಈ ಅಡ[ಗು] ಕಚ್ಚಿಕೊಂಡಿರುವ, ಹಡಿಕಿಮನುಜರನು ಸರಿಗಂಡಡೆ, ನಾಯಕ ನರಕದಲ್ಲಿಕ್ಕುವ, ನಮ್ಮ ಬಸವಪ್ರಿಯ ಕೂಡಲಚೆನ್ನಬಸವಣ್ಣಾ.
--------------
ಹಡಪದ ಅಪ್ಪಣ್ಣ
ಅರ್ಥ ಪ್ರಾಣ ಅಬ್ಥಿಮಾನಕ್ಕೆ ಒಡೆಯರು ಸದ್‍ಭಕ್ತರಲ್ಲದೆ ಎನಗಾರೂ ಇಲ್ಲಯ್ಯಾ. `ಭೃತ್ಯಾಪರಾಧಃ ಸ್ವಾಮಿನೋ ದಂಡಃ ಕೂಡಲಸಂಗಮದೇವಾ, ನೀವೇ ಪ್ರಮಾಣು. 341
--------------
ಬಸವಣ್ಣ
ಅವಳ ಕಂದ ಬಾಲಸಂಗ, ನಿನ್ನ ಕಂದ ಚೆನ್ನಲಿಂಗ ಎಂದು ಹೇಳಿದರಮ್ಮಾ ಎನ್ನ ಒಡೆಯರು. ಫಲವಿಲ್ಲದ ಕಂದನಿರ್ಪನವಳಿಗೆ, ಎನಗೆ ಫಲವಿಲ್ಲ, ಕಂದನಿಲ್ಲ. ಇದೇನೋ ದುಃಖದಂದುಗ ಗಂಗಾಪ್ರಿಯ ಕೂಡಲಸಂಗಮದೇವಾ ?
--------------
ಗಂಗಾಂಬಿಕೆ
ಭಾಜನಕ್ಕೆ ಸರ್ವಾಂಗ ಮುಸುಕಿಟ್ಟಲ್ಲಿ ಸರ್ವವ್ಯಾಪಾರ ನಿರಸನವಾಗಿರಬೇಕು ; ಸರ್ವಸಂಗವನೊಲ್ಲದೆ ಇರಬೇಕು. ಒಡೆಯರು ಭಕ್ತರಲ್ಲಿ ನಿಗರ್ವಿಯಾಗಿ ಬಂದು ನಿಂದುದ ಜಂಗಮಲಿಂಗವ ಮುಂದಿರಿಸಿ, ಅವರು ಕೈಕೊಂಡು ಮಿಕ್ಕ ಪ್ರಸಾದವ ಲಿಂಗಕ್ಕೆ ಅರ್ಪಿತವ ಮಾಡಿ, ಗುರುಲಿಂಗಜಂಗಮದಲ್ಲಿ ಸಂದುಸಂಶಯವಿಲ್ಲದೆ ಆಚಾರವೆ ಪ್ರಾಣವಾಗಿ ನಿಂದುದು ರಾಮೇಶ್ವರಲಿಂಗದಂಗ.
--------------
ಅಕ್ಕಮ್ಮ
ಒಡೆಯರು ಭಕ್ತರು ತಾವೆಂದು ಅಡಿಮೆಟ್ಟಿ ಹೋಹಲ್ಲಿ ತಡೆಯಿತು ಶಕುನವೆಂದುಳಿದಡೆ, ಕಾಗೆ ವಿಹಂಗ ಮಾರ್ಜಾಲ ಮರವಕ್ಕಿ ಗರ್ದಭ ಶಶಕ ಶಂಕೆಗಳು ಮುಂತಾದ ಸಂಕಲ್ಪಕ್ಕೊಳಗಾದಲ್ಲಿ ವ್ರತಕ್ಕೆ ಭಂಗ, ಆಚಾರಕ್ಕೆ ದೂರ. ಅದೆಂತೆಂದಡೆ: ಅಂಗಕ್ಕೆ ಆಚಾರವ ಸಂಬಂಧಿಸಿ, ಮನಕ್ಕೆ ಅರಿವು-ಅರಿವಿಂಗೆ ವ್ರತವ ಮಾಡಿದಲ್ಲಿ, ಬೇರೊಂದು ಪರಿಹರಿಸುವ ನಿಮಿತ್ತವುಂಟೇರಿ ಇಂತೀ ಸತ್ಕ್ರಿಯಾವಂತಗೆ ಕಷ್ಟಜೀವದ ಲಕ್ಷದಲ್ಲಿ ಚಿತ್ತ ಮೆಚ್ಚಿಹನ್ನಕ್ಕ ಆತನು ಆಚಾರಭ್ರಷ್ಟ, ಏಲೇಶ್ವರಲಿಂಗಕ್ಕೆ ದೂರ.
--------------
ಏಲೇಶ್ವರ ಕೇತಯ್ಯ
ಅಯ್ಯಾ ನಾ ಹುಟ್ಟಿದಂದಿಂದ ಎನ್ನ ಹೊಟ್ಟೆಗೆ ಕಾಣದೆ, ಮೂರುವಟ್ಟೆಯನೆ ಕಾದಿರ್ದೆನಯ್ಯಾ. ಹೊಟ್ಟೆಯ ಒಡೆಯರು ಹೊಟ್ಟೆಯ ಹೊಡೆದುಹೋದರೆ, ಎನ್ನ ಹೊಟ್ಟೆ ಏಕೆ ತುಂಬಿತ್ತೆಂದು ನೋಡಿದರೆ, ಅಲ್ಲಿ ಬಟ್ಟಬಯಲಾಗಿರ್ದಿತ್ತು ಕಾಣಾ, ಬಸವಪ್ರಿಯ ಕೂಡಲಚೆನ್ನಬಸವಣ್ಣಾ.
--------------
ಹಡಪದ ಅಪ್ಪಣ್ಣ
ಒಡೆಯರು ಬಂದಡೆ ಗುಡಿ ತೋರಣವ ಕಟ್ಟಿ, ನಂಟರು ಬಂದಡೆ ಸಮಯವಿಲ್ಲೆನ್ನಿ. ಅಂದೇಕೆ ಬಾರರು ನೀರಿಂಗೆ ನೇಣಿಂಗೆ ಹೊರಗಾದಂದು, ಸಮಯಾಚಾರಕ್ಕೆ ಒಳಗಾದಂದು. ಪರುಷ ಮುಟ್ಟಲು ಕಬ್ಬುನ ಸುವರ್ಣವಾಯಿತ್ತು. ಬಳಿಕ ಬಂಧುಗಳುಂಟೆ, ಕೂಡಲಸಂಗಮದೇವಾ 449
--------------
ಬಸವಣ್ಣ
ನಡೆವ ದಾರಿಯಲ್ಲೆನ್ನ ಒಡೆಯರು ಬರಲು ಬಿಳಿಯಂಬರ ಗರ್ದುಗೆಯ ಮೇಲಿರಿಸಿ, ಪಾದಪ್ರಕ್ಷಾಲನೆಯ ಮಾಡಿ, ಇಚ್ಫಿತ ಪದಾರ್ಥವ ಮುಚ್ಚಿನೀಡಿ, ನಚ್ಚಿ ಮೆಚ್ಚಿ ನಲಿದಾಡುವೆ. ಹೆಚ್ಚಿ ಉಳಿಮೆಯ ಶೇಷವ ಕೊಂಡು ಪಾದೋದಕವ ಧರಿಸಿ ಪಾವನನಾದೆನು ಗುರುನಿರಂಜನ ಚನ್ನಬಸವಲಿಂಗ ಸಾಕ್ಷಿಯಾಗಿ.
--------------
ದೇಶಿಕೇಂದ್ರ ಸಂಗನಬಸವಯ್ಯ
ಬೇಡಲೇತಕ್ಕೆ ಕಾಯಕವ ಮಾಡಿಹೆನೆಂದು? ಕೊಡದಡೆ ಒಡಗೂಡಿ ಬಯ್ಯಲೇತಕ್ಕೆ? ಒಡೆಯರು ಭಕ್ತರಿಗೆ ಮಾಡಿಹೆನೆಂದು ಗಡಿತಡಿಗಳಲ್ಲಿ ಕವಾಟ ಮಂದಿರ ಮಂದೆ ಗೊಂದಿಗಳಲ್ಲಿ ನಿಂದು ಕಾಯಲೇತಕ್ಕೆ? ಈ ಗುಣ ಕಾಯಕದಂದವೆ? ಈ ಗುಣ ಹೊಟ್ಟೆಗೆ ಕಾಣದ ಸಂಸಾರದ ಘಟ್ಟದ ನಿಲುವು. ಉಭಯ ಭ್ರಷ್ಟಂಗೆ ಕೊಟ್ಟ ದ್ರವ್ಯ ಮೇಖಲೇಶ್ವರಲಿಂಗಕ್ಕೆ ಮುಟ್ಟದೆ ಹೋಯಿತ್ತು.
--------------
ಕಲಕೇತಯ್ಯ
ಇನ್ನಷ್ಟು ... -->