ಅಥವಾ

ಒಟ್ಟು 33 ಕಡೆಗಳಲ್ಲಿ , 20 ವಚನಕಾರರು , 31 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಜಂಗಮದ ಮುಂದಿಟ್ಟು ಕೊಟ್ಟು ಕೊಂಡೆಹೆನೆಂಬ ಸರ್ವಸಮಯಾಚಾರ ಸಂಪತ್ತಿನಿರವು: ಮಜ್ಜನ ಭೋಜನ ಅಂದಳ ಛತ್ರ ಚಾಮರ ಕರಿ ತುರಗ ದರ್ಪಣ ಹಲುಕಡ್ಡಿ ನಖಚಣ ಪರಿಮಳ ಗಂಧ ಮೆಟ್ಟಡಿ ತಾಂಬೂಲ ರತ್ನಾಭರಣ ಮೆತ್ತೆ ಶಯನ ಸ್ತ್ರೀಸಂಸರ್ಗ ಒಡೆಯಂಗೆ ಆಯಿತ್ತೆಂಬುದ ಕೇಳಿ, ಆ ಒಡೆಯನ ವಾಚಾಪ್ರಸಾದದಿಂದ ಮಹಾಪ್ರಸಾದವೆಂದು ತನ್ನ ಸ್ವಸ್ತ್ರೀಗೆ ಕೂಟಸ್ಥನಾಗಬೇಕು. ಇಂತೀ ಭಾವ ಸರ್ವಸಮಯಾಚಾರ. ಈ ವರ್ತಕದಂಗ ನಿಂದಾತನ ಸಂಗ, ಏಲೇಶ್ವರದಂಗ ಉಮೇಶ್ವರಲಿಂಗವು ಆ ಭಕ್ತನಂಗ.
--------------
ಏಲೇಶ್ವರ ಕೇತಯ್ಯ
ಪಡುವ ಕಚ್ಚಿದ ನಾಯಿ ಒಡೆಯನ ಕುರುಹ ಬಲ್ಲುದೆ? ಹೊನ್ನು ಹೆಣ್ಣು ಮಣ್ಣ ಕಚ್ಚಿದ ಮನುಜರು ನಿಮ್ಮನೆತ್ತ ಬಲ್ಲರಯ್ಯ? ನಿಮ್ಮನರಿಯದ ಮನುಜರು ನಾಯಕುನ್ನಿಗಿಂದಲೂ ಕರಕಷ್ಟ ನೋಡಾ ನಿತ್ಯವ ಹಿಡಿಯದೆ, ಅನಿತ್ಯವ ಹಿಡಿದು, ವ್ಯರ್ಥಕ್ಕೆ ಸತ್ತವರ ನೋಡಿ ಹೇಸಿದೆನು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ವಚನದ ರಚನೆಯ ನುಡಿವ ಬಯಲುರಂಜಕರೆಲ್ಲ ಭಕ್ತರಪ್ಪರೆ ಅಯ್ಯಾ ? ವಚನ ತನ್ನಂತಿರದು, ತಾನು ವಚನದಂತಿರ. ಅದೆಂತೆಂದಡೆ: ತನುಮನಧನವನೆಲ್ಲ ಹಿಂದಿಟ್ಟುಕೊಂಡು, ಮಾತಿನ ಬಣಬೆಯ ಮುಂದಿಟ್ಟುಕೊಂಡು, ಒಡೆಯನ ಕಂಡು ನಾಯಿ ಬಾಲವ ಬಡಿದುಕೊಂಬಂತೆ, ಆ ತೆರನಾಯಿತೆಂದ ಕಲಿದೇವರದೇವಯ್ಯ.
--------------
ಮಡಿವಾಳ ಮಾಚಿದೇವ
ಪೃಥ್ವಿಯನೆ ಆದಿಯ ಮಾಡಿ, ಅಪ್ಪುವಿನಲ್ಲಿ ಗೋಡೆಯನಿಕ್ಕಿ, ಅಗ್ನಿಯನೆ ಅಪ್ಪುವಿನೊಳಗೆ ಹುದುಗಿಸಿ, ಅಸ್ತಿಯನೆ ಗಳುವ ಮಾಡಿ, ವಾಯುವನೆ ಬೀರಿ, ಆಕಾಶವನೆ ಹೊದಿಸಿ, ಸಹಸ್ರದಳ ಕಮಲವನೆ ಮೇಲುಕಟ್ಟ ಕಟ್ಟಿ, ಬಯಲಮಂಟಪವ ಶೃಂಗಾರವ ಮಾಡಿ, ಒಡೆಯನ ಬರವ ಹಾರುತಿದ್ದೆನಯ್ಯಾ. ಒಡೆಯನ ಬರವ ಹಾರೈಸುವ ಅವಸ್ಥೆಯನೆ ಕಂಡು, ಹಡದಪ್ಪಣ್ಣನೆ ಕರ್ಪುರದ ಸಿಂಹಾಸನವಾಗಿ ನಿಂದರು. ಅದಕ್ಕೆ ಚೆನ್ನಮಲ್ಲೇಶ್ವರನೆ ಜ್ಯೋತಿರ್ಮಯಲಿಂಗವಾಗಿ ಬಂದು ನೆಲೆಗೊಂಡರು. ಜ್ಯೋತಿರ್ಮಯಲಿಂಗವು ಕರ್ಪುರವು ಏಕವಾಗಿ ಪ್ರಜ್ವಲಿಸಿ ಪರಮಪ್ರಕಾಶವಾಯಿತ್ತು. ಈ ಬೆಳಗಿನಲ್ಲಿ ನಾ ನಿಜಮುಕ್ತಳಾದೆನಯ್ಯಾ ಚೆನ್ನಮಲ್ಲೇಶ್ವರ, ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ
--------------
ಹಡಪದಪ್ಪಣ್ಣಗಳ ಪುಣ್ಯಸ್ತ್ರೀ ಲಿಂಗಮ್ಮ
ಒಡೆಯರ ಕಟ್ಟಳೆಯಾದ ಮತ್ತೆ, ಒಡಗೂಡಿ ಸಹಪಂಙÂ್ತಯಲ್ಲಿ ಮೃಡಶರಣನ ಪ್ರಸಾದವ ಕೊಳಲೊಲ್ಲದೆ, ತುಡುಗುಣಿನಾಯಂತೆ ತೊಗಲಗಡಿಗೆಯ ತುಂಬುವ, ಗುರುಪಾತಕರಿಗೆಲ್ಲಿಯದೊ ಒಡೆಯರ ಕಟ್ಟಳೆ? ಒಡೆಯನ ನಿರೀಕ್ಷಣೆಯಲ್ಲಿ ಸರಿಗದ್ದುಗೆಯನೊಲ್ಲದೆ, ಒಡೆಯಂಗೆ ಮನೋಹರವಾಗಿ ಸಡಗರಿಸಿ ಸಮರ್ಪಿಸಿದ ಮತ್ತೆ, ತನ್ನೊಳಗಿಪ್ಪ ಆತ್ಮಂಗೆ ತೃಪ್ತಿ, ಕೂರ್ಮನ ಶಿಶುವಿನ ಸ್ನೇಹದಂತೆ. ಹೀಂಗಲ್ಲದೆ ಭಕ್ತಿ ಸಲ್ಲ. ಎನಗೆ ಪರಸೇವೆ ಪರಾಙ್ಮುಖವೆಂದು, ಒಡೆಯರಿಗೆ ಎಡೆಮಾಡೆಂದು ಎನಗೆ ತಳುವೆಂದಡೆ, ಒಪ್ಪುವರೆ ನಿಜಶರಣರು? ಸತಿ ಕೋಣೆಯಲ್ಲಿದ್ದು, ಪತಿ ನಡುಮನೆಯಲ್ಲಿದ್ದಡೆ ರತಿಕೂಟವುಂಟೆ? ಇದರ ಗಸಣೆಗಂಜಿ, ವಿಶೇಷವನರಿಯದ ಪಶುಗಳಿಗೆಲ್ಲಿಯೂ, [ಐಕ್ಯಾನುಭಾವ], ನಿಃಕಳಂಕ ಮಲ್ಲಿಕಾರ್ಜುನಾ?
--------------
ಮೋಳಿಗೆ ಮಾರಯ್ಯ
ಡಂಭಕರೊಂದು ಲಿಂಗವ ಕೊಂಡು ಮಂಡಲದೊಳಗಾಡುವರಯ್ಯಾ. ಒಡೆಯನ ಪೂಜೆಯ ಮಾಡುವರಯ್ಯಾ. ಹೊತ್ತಾರೆದ್ದು ಕ್ಷೇತ್ರ ಮನೆಕೆಲಸವ ಮುಂದಿಟ್ಟು, ಒಂದೊಂದು ಕುರುಹ ಮುಂದಿಟ್ಟು ಸಂದ್ಥಿಸಿ ಮಾಡಿಕೊಂಬ ಬಂಧಮೋಹಿಗಳ ಪೂಜೆ ಎಂದೆಂದು ನಿಮ್ಮ ಕಾಣಲರಿಯದು. ಮತ್ತೆಂತೆಂದೊಡೆ, ಹಿಂದುಮುಂದಿನ ಸಂದೇಹವಳಿದು ಆನಂದಮುಖನಾಗಿ, ಆಯಾಯ ಕಾಲಕ್ಕೆ ಪೂಜಾರ್ಪಣವ ಪರಿಣಾಮಿಸಿ ನಿರಂತರಸಾವಧಾನಿಯಾದರೆ ಆತ ನಿಜವೆಂಬೆ ಗುರುನಿರಂಜನ ಚನ್ನಬಸವಲಿಂಗಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ವೇದಂಗಳ ನಾಲ್ಕು ಭೇದಿಸಲರಿಯದೆ, ಹದಿನಾರು ಶಾಸ್ತ್ರ ನಿಮ್ಮ ಶಾಂತಿಯನರಿಯದೆ, ಇಪ್ಪತ್ತೆಂಟು ಪುರಾಣ ನಿಮ್ಮ ಪುಣ್ಯದ ಪುಂಗವನರಿಯದೆ, ತೊಳಲಿ ಬಲುಳವುದಕ್ಕೆ [ಚ]ರ್ಚೆಯ ಮಾಡಿದೆ. ನಾ ಕೆಟ್ಟೆ, ಹುಚ್ಚುಗೊಂಡ ನಾಯಿ ಒಡೆಯನ ಕಚ್ಚಿದಂತೆ, ಕೆಟ್ಟೆ. ಆಗಮಗಳಲ್ಲಿ ಹೋರಿ, ದೃಷ್ಟವ ಕಾಣದೆ ಹೊತ್ತುಹೋರಿದೆನಯ್ಯಾ. ತಿರುಗುವ ಮೃಗವ ಎಚ್ಚಂತೆ, ಎನೆಗದು ಕುರುಹಾಯಿತ್ತು, ಎನ್ನ ಗೂಡಿನ ಗುಮ್ಮಟನೊಡೆಯ ಅಗಮ್ಯೇಶ್ವರಲಿಂಗ.
--------------
ಮನುಮುನಿ ಗುಮ್ಮಟದೇವ
ಇದಿರೆಡೆಯಾದಲ್ಲಿ ಹಿಂದಣಲಗ ಸತ್ತಿತ್ತು. ಕಡ ಚೀಟ ಕೊಟ್ಟಲ್ಲಿ ಒಡೆಯನ ಬೇಡಲಿಲ್ಲ. ವಸ್ತುವ ಅಡಿ ಅರಿದು ಕೂಡಿದಲ್ಲಿ, ಬೇರೊಂದು ಬಿಡುಗಡೆ ಉಂಟೆ ? ಆ ತೆರನನರಿದು ಕರಿಗೊಂಡಲ್ಲಿ. ಮನಸಂದಿತ್ತು ಮಾರೇಶ್ವರಾ.
--------------
ಮನಸಂದ ಮಾರಿತಂದೆ
ನಡೆನೋಟ ಚೈತನ್ಯದೊಡವೆರೆದು ಒಡೆಯನ ಪಿಡಿದು ಸಡಗರಮುಖನಾದಲ್ಲಿ ಮೊದಲು-ಮಧ್ಯ-ತುದಿ ಭಜನೆಯೆಂಬ ಕಣ್ಮನದ ಕಳವಳನಳಿದುಳಿದ ನಿಜಾನಂದ ನೋಡಾ ! ಮಾಡಿದರೆ ಮಾಟ ಶೂನ್ಯ, ನೋಡಿದರೆ ನೋಟ ಶೂನ್ಯ, ನೀಡಿದರೆ ನಿಲವು ಶೂನ್ಯ, ಮಾಟತ್ರಯದಾಟಭರಿತ, ಗುರುನಿರಂಜನ ಚನ್ನಬಸವಲಿಂಗದಂಗ ತಾನೆಯಾಗಿ.
--------------
ದೇಶಿಕೇಂದ್ರ ಸಂಗನಬಸವಯ್ಯ
ವ್ರತ ನೇಮ ಶೀಲಮಂ ಮಾಡಿಕೊಂಡು, ಸಮಯಾಚಾರದಲ್ಲಿ ನಡೆದೆನೆಂಬ ಭಕ್ತನ ಕ್ರಮವೆಂತೆಂದಡೆ ; ತಾನು ಭೋಗಿಸುವಂತಹ ಸಕಲದ್ರವ್ಯಂಗಳೆಲ್ಲವನು, ಜಂಗಮಕ್ಕೆ ಕೊಟ್ಟು ತಾನು ಕೊಳಬೇಕು. ಅವಾವೆಂದಡೆ ಮಜ್ಜನ ಭೋಜನ ಅಂದಣ ಸತ್ತಿಗೆ ಚಾಮರ ಆನೆ ಕುದುರೆ ಕನ್ನಡಿ ಪರಿಮಳ ಲೇಪನ ಗಂಧ ಅಕ್ಷತೆ ವಸ್ತ್ರ ರತ್ನಾಭರಣ ತಾಂಬೂಲ ಮೆಟ್ಟಡಿ ಮಂಚ ಸುಪ್ಪತ್ತಿಗೆ ಒಡೆಯರಿಗೆ ಆಯಿತೆಂಬುದ ಕೇಳಿ, ಆ ಒಡೆಯನ ವಾಕ್ಯಪ್ರಸಾದದಿಂದ, ಮಹಾಪ್ರಸಾದವೆಂದು ಎಲ್ಲ ವ್ರತಂಗಳಿಗೆಯೂ ಜಂಗಮಪ್ರಸಾದವೆ ಪ್ರಾಣ; ಎಲ್ಲ ನೇಮಕ್ಕೆಯೂ ಜಂಗಮದರ್ಶನವೆ ನೇಮ; ಎಲ್ಲ ಶೀಲಕ್ಕೆಯೂ ಜಂಗಮದ ಮಾಟವೆ ಶೀಲ; ಎಲ್ಲ ವ್ರತ ನೇಮ ಶೀಲಂಗಳೆಲ್ಲವು ಜಂಗಮವ ಮುಂದಿಟ್ಟು ಶುದ್ಧತೆಯಹ ಕಾರಣ, ಆ ಜಂಗಮದಲ್ಲಿ ಅರ್ಥ, ಪ್ರಾಣ, ಅಭಿಮಾನ ಮುಂತಾದ ಈ ಮೂರಕ್ಕು ಕಟ್ಟು ಮಾಡಿದೆನಾದಡೆ ಎನಗೆ ದ್ರೋಹ. ಆ ಜಂಗಮದ ದರ್ಶನದಿಂದವೆ ಸಕಲದ್ರವ್ಯಂಗಳು ಪವಿತ್ರವು ; ಆ ಜಂಗಮಪ್ರಸಾದದಿಂದವೆ ಮಹಾಘನಲಿಂಗಕ್ಕೆ ತೃಪ್ತಿ. ಇಷ್ಟನರಿದ ಬಳಿಕ ಜಂಗಮಲಿಂಗಕ್ಕೆ ಸಂದೇಹವ ಮಾಡಿದೆನಾದಡೆ ಎನಗೆ ಕುಂಭೀಪಾತಕ ನಾಯಕನರಕ ತಪ್ಪದು. ಈ ಜಂಗಮದ ಭಕ್ತಿ ಕಿಂಚಿತ್ತು ಕೊರತೆ ಇಲ್ಲದ ಹಾಗೆ ಜೀವವುಳ್ಳ ಪರಿಯಂತರ ಇದೆ ಆಚಾರವಾಗಿ, ಇದೇ ಪ್ರಾಣವಾಗಿ ನಡೆದು, ಆಚಾರವೆ ಪ್ರಾಣವಾದ ರಾಮೇಶ್ವರಲಿಂಗವನೊಡಗೂಡುವೆನು.
--------------
ಅಕ್ಕಮ್ಮ
ಘನಲಿಂಗದೇವರು ಘನಲಿಂಗದೇವರೆಂದು ನುಡಿದುಕೊಂಬ ಬಿನುಗು ಹೊಲೆಯರನೇನೆಂಬೆನಯ್ಯಾ ! ಹೊಟ್ಟೆಯಕಿಚ್ಚಿಗೆ ಒಟ್ಟಿದ ಬಣವೆಯ ಸುಟ್ಟಾತ ಘನಲಿಂಗದೇವರೆ ? ಕೊಟ್ಟಾತ ಒಳಗು, ಕೊಡದಾತ ಹೊರಗೆಂದು ಕಟ್ಟಿದಲಿಂಗವ ಮೆಟ್ಟಿ ಮೆಟ್ಟಿ ಹರಿವಾತ ಘನಲಿಂಗದೇವರೆ ? ಒಡೆಯನ ವೇಷವ ಧರಿಸಿ ಒಡಲ ಕಿಚ್ಚಿಗೆ ತುಡುಗನಾಯಂತೆ ಕಡಿದು ಕನ್ನವನಿಕ್ಕುವಾತ ಘನಲಿಂಗದೇವರೆ ? ಅಹುದಾದುದನಲ್ಲಮಾಡಿ ಅಲ್ಲವಾದುದ ಅಹುದುಮಾಡಿ ಅಧರ್ಮ ಅನ್ಯಾಯದಲ್ಲಿ ಹೊಡೆದಾಡಿ ಹೊಲಬುದಪ್ಪಿ ಮಡಿದುಹೋಗುವ ಬಾಯಬಡಕ ಭ್ರಷ್ಟಮಾದಿಗರ ಘನಲಿಂಗದೇವರೆಂದಡೆ ಅಘೋರನರಕ ತಪ್ಪದಯ್ಯಾ ಅಖಂಡೇಶ್ವರಾ ?
--------------
ಷಣ್ಮುಖಸ್ವಾಮಿ
ಲಿಂಗಕ್ಕೆ ಮಲಿನವಾದಲ್ಲಿ ಒರಸಿ ತೊಳೆದಡೆ ದೋಷವ ಕಟ್ಟಬಹುದೆ? ಗುರು ಚರ ಭಕ್ತರಲ್ಲಿ ಭ್ರಾಮಕದಿಂದ ಮರೆದಿರೆ ಅರುಪಲಿಕ್ಕೆ ದೂಷಣೆ ಉಂಟೆ? ತನ್ನಂಗದ ಕಲೆವ ತಾ ಹಿಂಗಿಸುವುದಕ್ಕೆ ನಿಂದೆ ಗುಣದೋಷಂಗಳುಂಟೆ? ಇದು ಕಾರಣದಲ್ಲಿ ಒಡೆಯನ ಹರವರಿ ಬಂಟಂಗೆ ಲಾಭವಹಂತೆ, ಉಭಯಕ್ಕೆ ಕೇಡಿಲ್ಲದಿರ್ಪ ಭಕ್ತಿಸತ್ಯ. ಕಾಲಾಂತಕ ಭೀಮೇಶ್ವರಲಿಂಗನು ಉಭಯದ ತಪ್ಪನೊಪ್ಪನಾಗಿ.
--------------
ಡಕ್ಕೆಯ ಬೊಮ್ಮಣ್ಣ
ಉರು ಬಡತನಕ್ಕೆ ವಾಳಿ (?) ಧನಿಕನಾಗುವುದ ಕಂಡೆ. ಧನವ ಬೇಡುವ ಧನಿಕನ ನುಂಗುವುದ ಕಂಡೆನು. ರಾಜ್ಯ[ವ]ನಾಳೇನೆಂಬ ಅರಸು ತೇಜಿಯ ಕಡಿವಾಣದೊಳಡಗುವುದ ಕಂಡೆ. ಉತ್ಸಾಹವ ಬೇಡುವ ಹೆಣ್ಣು ಉಮ್ಮತ್ತದಕಾಯೊಳಡಗಿದ್ದುದ ಕಂಡೆನು. ವಿಶ್ವಾಸದಿಂದ ಕುಡಿದ ಅಮೃತ ವಿಷವಾಗುವುದ ಕಂಡೆನು. ಸೇವಕ ಒಡೆಯನ ಕಾಣದೆ ಬಟ್ಟೆಬಟ್ಟೆಯಲರಸುವುದ ಕಂಡೆನು. ಇದೇನು ಚೋದ್ಯ ಹೇಳಾ ! ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಮುದುಕಿ ಮುದುಕನ ಸಂಗದಿಂದೊಂದು ಎಳೆಯ ಶಿಶು ಪುಟ್ಟಿತ್ತು. ಆ ಶಿಶುವಿನ ಬೆನ್ನಿನಿಂದ ಒಬ್ಬ ಎಳೆಯ ಕುಮಾರಿ ಪುಟ್ಟಿದಳು. ಆ ಕುಮಾರಿ ಅಣ್ಣನ ಮದುವೆಯಾಗಿ ಮುದುಕನ ಒಡಗೂಡಿ ಮನೆಯ ಸುಟ್ಟು, ಮನೆಯ ಒಡೆಯನ ಕೊಂದು ಒಡತಿಯ ನುಂಗಿ, ತಾಯಿಯ ಕೊಂದು ಹೊಲಗೇರಿಯ ಹೊಕ್ಕು, ಕುಲಗೆಟ್ಟು ಹೊಲೆಯನ ಸಂಗವ ಮಾಡಿ, ಸತ್ತುಹೋದ ಭೇದವನು ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವಿನ ಶರಣರು ಬಲ್ಲರಲ್ಲದೆ ಮಿಕ್ಕಿನ ಜಡಮತಿ ಕುರಿಮನುಜರೆತ್ತ ಬಲ್ಲರಯ್ಯಾ.
--------------
ಕಾಡಸಿದ್ಧೇಶ್ವರ
ನಡುವಳ ಮಂಟಪದಲ್ಲಿ ಮೃಡಮೂರ್ತಿಯ ಕಂಡೆನಯ್ಯ. ಮೃಡನ ಗಡಣೆಯಲ್ಲಿ ಜಗವೆಲ್ಲ ಅಡಗಿ ಉಡುಗಿದೆ ನೋಡಾ. ಈ ಒಡೆಯನ ಮಹಿಮೆಯನೇನೆಂಬೆನಯ್ಯಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಇನ್ನಷ್ಟು ... -->