ಅಥವಾ

ಒಟ್ಟು 21 ಕಡೆಗಳಲ್ಲಿ , 4 ವಚನಕಾರರು , 7 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇಂದು ನಾಳೆ ಮುಕ್ತಿಯ ಪಡೆವೆನೆಂಬ ಶಿಷ್ಯಂಗೆ ಮುಂದಳ ಮುಕ್ತಿಯ ತೋರಿಹೆನೆಂಬ ಗುರುಗಳ ನೋಡಿರೆ ! ಹೋಮ, ನೇಮ, ಜಪ, ತಪಗಳ ಮಾಡಿ ತಾನುಂಡು ಫಲವುಂಟೆಂದ ಗುರು ಹುಸಿದು ಸತ್ತ, ಶಿಷ್ಯ ಹಸಿದು ಸತ್ತ. ಹಿಂದಣ ಕಥೆಯ ಹೇಳುವಾತ ಹೆಡ್ಡ, ಮುಂದಣ ಕಥೆಯ ಹೇಳುವಾತ ಮೂಢ, ಇಂದಿನ ಘನವ ಹೇಳುವಾತನೆ ಹಿರಿಯನಯ್ಯಾ. ತಾ ಹುಟ್ಟಿದಂದೆ ಯುಗಜುಗಂಗಳು ಹುಟ್ಟಿದವು, ತಾನಳಿದಲ್ಲೆ ಯುಗಜುಗಂಗಳಳಿದವು. ತನ್ನ ನೇತ್ರಕ್ಕಿಂಪಾದುದೆ ಸುವರ್ಣಸುವಸ್ತು, ತನ್ನ ಶ್ರೋತಕ್ಕೆ ಸೊಂಪಾದುದೆ ವೇದಶಾಸ್ತ್ರ, ಪುರಾಣ. ತನ್ನ ಘ್ರಾಣಕ್ಕಿಂಪಾದುದೆ ಪರಿಮಳ, ತನ್ನ ಜಿಹ್ವೆಗಿಂಪಾದುದೆ ರುಚಿ, ತನ್ನ ಮನ ಮುಳುಗಿದುದೆ ಲಿಂಗ. ತನ್ನ ನೆತ್ತಿಯಲ್ಲಿ ಸತ್ಯರ್ಲೋಕ, ಪಾದದಲ್ಲಿ ಪಾತಾಳಲೋಕ, ನಡುವೆ ಹನ್ನೆರಡು ಲೋಕ. ಅಂಡಜ ಪಿಂಡಜ ಉದ್ಭಿಜ ಜರಾಯುಜವೆಂಬ ಎಂಬತ್ತು ನಾಲ್ಕುಲಕ್ಷ ಜೀವರಾಶಿಗಳು. ತನ್ನಲ್ಲಿ ಕಾಯವು, ತನ್ನಲ್ಲಿ ಜೀವವು, ತನ್ನಲ್ಲಿ ಪುಣ್ಯವು, ತನ್ನಲ್ಲಿ ಪಾಪವು, ತನ್ನಲ್ಲಿ ಶಬ್ದವು, ತನ್ನಲ್ಲಿ ನಿಶ್ಯಬ್ದವು. ಒಂದು ಒಡಲೆಂಬ ಊರಲ್ಲಿ ಒಂಬತ್ತು ಶಿವಾಲಯವು ಆ ಶಿವಾಲಯದ ಶಿಖರದ ಮೇಲೆ ಶಿವಲಿಂಗದೇವರು ಪೂರ್ವಭಾಗದಲ್ಲಿ ಚಂದ್ರಾದಿತ್ಯರು, ಪಶ್ಚಿಮ ಭಾಗದಲ್ಲಿ ಪರಶಿವನು ಉತ್ತರ ಭಾಗದಲ್ಲಿ ಮಹೇಶ್ವರನು, ದಕ್ಷಿಣ ಭಾಗದಲ್ಲಿ ರುದ್ರನು ಇಂತೀ ಪಂಚೈವರ ಮನದ ಕೊನೆಯ ಕೀಲಿನ ಸಂಚವನರಿದು ತುರ್ಯಾವಸ್ಥೆಯಲ್ಲಿ ನಿಲಿಸಿ ಒಡಲುವಿಡಿದು ಕಾಂಬುದೆ ಉಪಮೆ. ಈ ಘಟದೇವತೆಯ ಸಟೆಯೆಂದು ಬಿಸುಟು ಮುಂದೆ ತಾ ದಿಟವಪ್ಪುದಿನ್ನೆಲ್ಲಿಯದೊ ? ಪೃಥ್ವಿಯಳಿದಂದೆ ಭೋಗಾದಿ ಭೋಗಂಗಳಳಿದವು. ಅಪ್ಪುವಳಿದಂದೆ ಮಾಯಾಮೋಹಾದಿಗಳಳಿದವು. ತೇಜವಳಿದಂದೆ ಹಸಿವು ತೃಷೆಗಳಳಿದವು. ವಾಯುವಳಿದಂದೆ ನಡೆನುಡಿ ಚೈತನ್ಯಂಗಳಳಿದವು. ಆಕಾಶವಳಿದಂದೆ ಅವು ಅಲ್ಲಿಯೆ ಲೀಯವಾಯಿತ್ತು. ಇದು ಕಾರಣ ಉರಿಕೊಂಡ ಕರ್ಪುರದ ಕರಿ ಕಂಡವರುಂಟೆ ? ಅಪ್ಪುವುಂಡ ಉಪ್ಪಿನ ಹರಳ ಮರಳಿ ಹೊರೆಯ ಕಟ್ಟಿ ಹೊತ್ತವರುಂಟೆ ? ವಾಯುಕೊಂಡ ಜ್ಯೋತಿಯ ಬೆಳಗ ಕಂಡವರುಂಟೆ ? ಹರಿ ಬ್ರಹ್ಮಾದಿಗಳ್ಗೆಯು ಕಾಣಬಾರದಾಗಿ. ಮಣ್ಣಿನ ಸಾರಾಯದಿಂದ ಮರನುತ್ಪತ್ಯ. ಮರದ ಸಾರಾಯದಿಂದ ಎಲೆಯುತ್ಪತ್ಯ ಎಲೆಯ ಸಾರಾಯದಿಂದ ಹೂವ ಉತ್ಪತ್ಯ ಹೂವ ಸಾರಾಯದಿಂದ ಕಾಯಿ ಉತ್ಪತ್ಯ ಕಾಯ ಸಾರಾಯದಿಂದ ಹಣ್ಣು ಉತ್ಪತ್ಯ ಹಣ್ಣಿನ ಸಾರಾಯದಿಂದ ರುಚಿ ಉತ್ಪತ್ಯ ರುಚಿಯಿಂದತ್ತ ಇಲ್ಲವೆಂಬ ತತ್ವ. ಮಣ್ಣು ಮರನು ಅಳಿದ ಬಳಿಕ ಬೇರೆ ರುಚಿಯಿಪ್ಪಠಾವುಂಟೆ ? ದೇಹವಳಿದ ಬಳಿಕ ಪ್ರಾಣವಿಪ್ಪುದಕ್ಕೆ ಠಾವುಂಟೆ ? ಇಲ್ಲವಾಗಿ; ಇದು ಕಾರಣ, ಗುಹೇಶ್ವರನೆಂಬ ಲಿಂಗವ ಒಡಲು ವಿಡಿದು ಕಂಡೆ ಕಾಣಾ. ಸಿದ್ಧರಾಮಯ್ಯ.
--------------
ಅಲ್ಲಮಪ್ರಭುದೇವರು
ಭಕ್ತನಾದರು ಆಗಲಿ, ಗುರುವಾದರು ಆಗಲಿ, ಲಿಂಗವಾದರು ಆಗಲಿ, ಜಂಗಮವಾದರು ಆಗಲಿ, ಈ ಮತ್ರ್ಯದಲ್ಲಿ ಒಡಲುವಿಡಿದು ಹುಟ್ಟಿದ ಮೇಲೆ, ಮಾಯೆಯ ಗೆದ್ದೆ[ಹೆ]ನೆಂದರೆ ಸಾಧ್ಯವಲ್ಲ ಕೇಳಿರಣ್ಣಾ ! ಗೆಲ್ಲಬಹುದು ಮತ್ತೊಂದು ಭೇದದಲ್ಲಿ. ಅದೆಂತೆಂದರೆ:ಭಕ್ತನಾದರೆ ತನುವ ಗುರುವಿಂಗಿತ್ತು, ಮನವ ಲಿಂಗಕ್ಕಿತ್ತು, ಧನವ ಜಂಗಮಕ್ಕಿತ್ತು ಬೆರೆದರೆ, ಮಾಯಾಪಾಶ ಹರಿಯಿತ್ತು. ಇದರ ಗೊತ್ತು ಹಿಡಿವನೆಂದರೆ ಆತನ ಭಕ್ತನೆಂಬೆ. ಗುರುವಾದರೆ ಸಕಲ ಆಗಮಂಗಳನರಿದು, ತತ್ವಮಸಿ ಎಂದು ನಿತ್ಯವ ನೆಮ್ಮಿ, ತನ್ನ ಒತ್ತುವಿಡಿದ ಶಿಷ್ಯಂಗೆ ಪರತತ್ವವ ತೋರಿ, ಪ್ರಾಣಲಿಂಗವ ಕರದಲ್ಲಿ ಕೊಟ್ಟು, ಆ ಲಿಂಗ ಅಂಗವೆಂಬ ಉಭಯದೊಳಗೆ ತಾನಡಗಿ, ತನ್ನೊಳಗೆ ಶಿಷ್ಯನಡಗಿ, ನಾನು ನೀನು ಎಂಬ ಉಭಯ ಎರಡಳಿದರೆ, ಆತನ ಗುರುವೆಂಬೆ. ಜಂಗಮವಾದರೆ ಬಾಯಿಲೆಕ್ಕಕ್ಕೆ ಬಾರದೆ, ಬಂದು ಆಶ್ರಿತವೆನಿಸಿಕೊಳ್ಳದೆ ಆಸೆಯಳಿದು ಲಿಂಗಜಂಗಮವಾಗಿ ನಿರ್ಗಮನಿಯಾಗಿ, ಭರ್ಗೋ ದೇವಸ್ಯ ಎಂಬ, ಏಕೋದೇವ ನ ದ್ವಿತೀಯವೆಂಬ ಶ್ರುತಿಗೆ ತಂದು ತಾ ಪರಮಾನಂದದಲ್ಲಿ ನಿಂದು, ಪರಿಪೂರ್ಣನೆನಿಸಿಕೊಂಡು, ಅಣುವಿಂಗಣು, ಮಹತ್ತಿಂಗೆ ಮಹತ್ತು, ಘನಕ್ಕೆ ಘನವೆಂಬ ವಾಕ್ಯಕ್ಕೆ ಸಂದು, ತಾ ನಿಂದು ಜಗವನೆಲ್ಲವ ಆಡಿಸುವ ಅಂತರಾತ್ಮಕನಾಗಿ ಅಡಗಿದರೆ ಜಂಗಮವೆಂಬೆ. ಅಂತಾದರೆ ಈ ತ್ರಿವಿಧವು ಏಕವಾದುದನರಿದು, ಈ ಲೋಕದ ಕಾಕುಬಳಕೆಗೆ ಸಿಲ್ಕದೆ, ಇಲ್ಲಿ ಹುಟ್ಟಿದವರೆಲ್ಲ ಇವರೊಳಗೆ ಆದರು. ನಾನು ತ್ರಿವಿಧದ ನೆಲೆಯ ಹಿಡಿದುಕೊಂಡು ಇವೆಲ್ಲಕ್ಕೂ, ಹೊರಗಾಗಿ ಹೋದನಯ್ಯಾ, ಬಸವಪ್ರಿಯ ಕೂಡಲಚೆನ್ನ ಬಸವಣ್ಣಾ.
--------------
ಹಡಪದ ಅಪ್ಪಣ್ಣ
ಅಮೇಧ್ಯದ ಮಡಿಕೆ, ಮೂತ್ರದ ಕುಡಿಕೆ, ಎಲುವಿನ ತಡಿಕೆ, ಕೀವಿನ ಹಡಿಕೆ ಸುಡಲೀ ದೇಹವ ; ಒಡಲುವಿಡಿದು ಕೆಡದಿರು, ಚೆನ್ನಮಲ್ಲಿಕಾರ್ಜುನನನರಿಯದ ಮರುಳೆ.
--------------
ಅಕ್ಕಮಹಾದೇವಿ
ಒಡಲುವಿಡಿದು ಪಾಷಾಣಕ್ಕೆ ಹಂಗಿಗರಾದಿರಲ್ಲಾ. ಅಂಗಸಂಗಿಗಳೆಲ್ಲ ಮಹಾಘನವನರಿಯದೆ ನಿಂದಿರೊ! ಹುಸಿಯನೆ ಕೊಯ್ದು ಹುಸಿಯನೆ ಪೂಜಿಸಿ ಗಸಣಿಗೊಳಗಾದರು ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಶಿವಭಕ್ತರ ಹಾದಿಯ ಕಾಣದೆ, ಹರಗಣಂಗಳೆಲ್ಲಕ್ಕೆ ಪರಮಗುರುವಾಗಿ, ಪರಮಾರಾಧ್ಯರಾಗಿ ಸುಳಿದಿರಲ್ಲದೆ ನೀವು ಒಡಲುವಿಡಿದಿದ್ದರೆನ್ನಬಹುದೆ ? ಅದೇನು ಕಾರಣವೆಂದರೆ, ಎನ್ನ ಭವವ ಛೇದನೆಯ ಮಾಡಿದುದಕ್ಕೆ ಎನ್ನ ಮನಕ್ಕೆ ಮನವೇ ಸಾಕ್ಷಿ. ಮತ್ತೆ ಚೆನ್ನಮಲ್ಲೇಶ್ವರ ಸಾಕ್ಷಿ. ಮರವೆಯಿಂದ ಈ ಮತ್ರ್ಯದಲ್ಲಿ ಒಡಲುವಿಡಿದು ಹುಟ್ಟಿದವರು ಬ್ರಹ್ಮನಾದರೂ ಆಗಲಿ, ವಿಷ್ಣುವಾದರೂ ಆಗಲಿ, ರುದ್ರನಾದರೂ ಆಗಲಿ, ಶಿವನಾದರೂ ಆಗಲಿ, ಸದಾಶಿವನಾದರೂ ಆಗಲಿ, ಮಾಯೆವಿಡಿಸಿ ಕಾಡಿದಲ್ಲದೆ ಮಾಣದು. ಮಿಕ್ಕಿನವರ ಭವಕ್ಕೆ ಕಡೆ ಇಲ್ಲ . ಎನ್ನ ಪರಮಾರಾಧ್ಯರು ಚೆನ್ನಮಲ್ಲೇಶ್ವರ ಮಾಯೆಯ ಮಂಡೆಯ ಮೆಟ್ಟಿ, ಎನ್ನ ತನು ಮನ ಧನಕ್ಕೆ ಒಡೆಯನಾಗಿ ತನ್ಮಯನಾಗಿ ತಾನೇ ರೂಪಾದನಯ್ಯ. ನಾನೆಂಬುದಿಲ್ಲ, ಬಸವಪ್ರಿಯ ಕೂಡಲಚೆನ್ನಬಸವಣ್ಣಾ .
--------------
ಹಡಪದ ಅಪ್ಪಣ್ಣ
ಮತ್ತಂ, ಆ ಶಿಷ್ಯನು ತನ್ನ ಪೂರ್ವಾಪರಸಂಬಂಧವ ವಿವೇಕಿಸಿ ನುಡಿದ ಪ್ರಸ್ತಾವದ ವಚನವೆಂತೆಂದಡೆ : ಅನಾದಿಯೆಂಬ ಯುಗದಲ್ಲಿ ಅನಾದಿಕಾಯನೆಂಬ ಒಡಲುವಿಡಿದು ನಿರಂಜನಪ್ರಣವವ ಧ್ಯಾನಿಸುತಿರ್ದೆನು. ಆದಿಯೆಂಬ ಯುಗದಲ್ಲಿ ಆದಿಕಾಯನೆಂಬ ಒಡಲುವಿಡಿದು ಅವಾಚ್ಯಪ್ರಣವವ ಧ್ಯಾನಿಸುತಿರ್ದೆನು. ಅನಾಗತವೆಂಬ ಯುಗದಲ್ಲಿ ಅನಂತಕಾಯನೆಂಬ ದೇಹದೊಳು ಚಿನ್ನಾದಪ್ರಣವವ ಧ್ಯಾನಿಸುತಿರ್ದೆನು. ಅನಂತವೆಂಬ ಯುಗದಲ್ಲಿ ಅನಂತಕಾಯನೆಂಬ ಒಡಲುವಿಡಿದು ಚಿದ್ಬಿಂದುಪ್ರಣವವ ಧ್ಯಾನಿಸುತಿರ್ದೆನು. ಅದ್ಭುತವೆಂಬ ಯುಗದಲ್ಲಿ ಸೂಕ್ಷ್ಮಕಾಯನೆಂಬ ಒಡಲುವಿಡಿದು ಚಿತ್ಕಲಾಪ್ರಣವವ ಧ್ಯಾನಿಸುತಿರ್ದೆನು. ತಮಂಧವೆಂಬ ಯುಗದಲ್ಲಿ ಜ್ಞಾನಕಾಯನೆಂಬ ಒಡಲುವಿಡಿದು ಕಲಾಪ್ರಣವವ ಧ್ಯಾನಿಸುತಿರ್ದೆನು. ತಾರಜವೆಂಬ ಯುಗದಲ್ಲಿ ಸಕಲಕಾಯನೆಂಬ ಒಡಲುವಿಡಿದು ಅನಾದಿಪ್ರಣವವ ಧ್ಯಾನಿಸುತಿರ್ದೆನು. ತಂಡಜವೆಂಬ ಯುಗದಲ್ಲಿ ಪ್ರಚಂಡಕಾಯನೆಂಬ ಒಡಲುವಿಡಿದು ಅನಾದಿ ಅಕಾರಪ್ರಣವವ ಧ್ಯಾನಿಸುತಿರ್ದೆನು. ಭಿನ್ನಜವೆಂಬ ಯುಗದಲ್ಲಿ ಭಿನ್ನಜ್ಞಾನನೆಂಬ ಒಡಲುವಿಡಿದು ಅನಾದಿ ಉಕಾರಪ್ರಣವವ ಧ್ಯಾನಿಸುತಿರ್ದೆನು. ಭಿನ್ನಾಯುಕ್ತವೆಂಬ ಯುಗದಲ್ಲಿ ಅಭಿನ್ನಕಾಯನೆಂಬ ಒಡಲುವಿಡಿದು ಅನಾದಿ ಮಕಾರಪ್ರಣವವ ಧ್ಯಾನಿಸುತಿರ್ದೆನು. ಅವ್ಯಕ್ತವೆಂಬ ಯುಗದಲ್ಲಿ ಅವಿರಳಕಾಯನೆಂಬ ಒಡಲುವಿಡಿದು ಆದಿಪ್ರಣವವ ಧ್ಯಾನಿಸುತಿರ್ದೆನು. ಅಮದಾಯುಕ್ತವೆಂಬ ಯುಗದಲ್ಲಿ ಅಖಂಡಿತಜ್ಞಾನಕಾಯನೆಂಬ ಒಡಲುವಿಡಿದು ಶಿವಪ್ರಣವವ ಧ್ಯಾನಿಸುತಿರ್ದೆನು. ಮಣಿರಣವೆಂಬ ಯುಗದಲ್ಲಿ ಮನೋನ್ಮಯನೆಂಬ ಒಡಲುವಿಡಿದು ಪರಮೋಂಕಾರವ ಧ್ಯಾನಿಸುತಿರ್ದೆನು. ಮಾನ್ಯರಣವೆಂಬ ಯುಗದಲ್ಲಿ ಮಹಾಕಾಯನೆಂಬ ಒಡಲುವಿಡಿದು ಮಹದೋಂಕಾರವ ಧ್ಯಾನಿಸುತಿರ್ದೆನು. ವಿಶ್ವಾರಣವೆಂಬ ಯುಗದಲ್ಲಿ ವಿಶ್ವಕಾಯನೆಂಬ ಒಡಲುವಿಡಿದು ವಿಶ್ವಾಧಿಕಮಹಾಲಿಂಗವ ಧ್ಯಾನಿಸುತಿರ್ದೆನು. ವಿಶ್ವಾವಸುವೆಂಬ ಯುಗದಲ್ಲಿ ವಿಶ್ವಕಾರಣನೆಂಬ ದೇಹವಿಡಿದು ವಿಶ್ವರೂಪಲಿಂಗವ ಧ್ಯಾನಿಸುತಿರ್ದೆನು. ಅಲಂಕೃತವೆಂಬ ಯುಗದಲ್ಲಿ ಅನಂತಕಾಯನೆಂಬ ಒಡಲುವಿಡಿದು ಅಖಂಡಲಿಂಗವ ಧ್ಯಾನಿಸುತಿರ್ದೆನು. ಕೃತಯುಗದಲ್ಲಿ ಅಖಂಡಾತ್ಮಕನೆಂಬ ಗಣೇಶ್ವರನಾಗಿರ್ದಂದು ಅನಾದಿಲಿಂಗವ ಧ್ಯಾನಿಸುತಿರ್ದೆನು. ತ್ರೇತಾಯುಗದಲ್ಲಿ ಅಚಲಾತ್ಮನೆಂಬ ಗಣೇಶ್ವರನಾಗಿರ್ದಂದು ಆದಿಲಿಂಗವ ಧ್ಯಾನಿಸುತಿರ್ದೆನು. ದ್ವಾಪರಯುಗದಲ್ಲಿ ಅಖಂಡಿತನೆಂಬ ಗಣೇಶ್ವರನಾಗಿರ್ದಂದು `ಓಂಕಾರೇಭ್ಯೋ ಜಗದ್ರಕ್ಷಾಯ ಜಗತಾಂ ಪತಯೇ ನಮೋ ನಮಃ' ಎಂಬ ಪ್ರಣವಲಿಂಗವ ಧ್ಯಾನಿಸುತಿರ್ದೆನು. ಕಲಿಯುಗದಲ್ಲಿ ಅಪ್ರಮಾಣಗಣೇಶ್ವರನಾಗಿ ಬಂದು ಅಪ್ರಮಾಣ ಅಗೋಚರಲಿಂಗವ ಧ್ಯಾನಿಸುತಿರ್ದೆನು ನೋಡಾ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
`ಓಂ ನಮಃ ಶಿವಾಯ' ಎಂಬ ದೇವನಿರಲು ಒಡಲುವಿಡಿದು ಪಾಷಾಣಕ್ಕೆ ಹಂಗಿಗರಾದಿರೆ. ಶರೀರ, ಶರೀರ ರೂಹಿಸಿದ ರೂಹಿಂಗೆ ಮಾಯದ ಬಲೆಯಲ್ಲಿ ಸಿಲುಕಿ ಅಂಗಸಂಗಿಗಳೆಲ್ಲರು ಮಹಾಘನವನರಿಯದೆ ಹೋದಿರೆ. ಹುಸಿಯನೆ ಕೊಯ್ದು ಹುಸಿಯನೆ ಪೂಜಿಸೆ_ ನೇಮದೊಳಗಿದು ಸಲ್ಲದು, ಗುಹೇಶ್ವರಾ, ನಿಮ್ಮ ಶರಣರ ಸಂಬಂಧ ತೋರದು ತೋರದು ಬಹುಮುಖಿಗಳಿಗೆ !
--------------
ಅಲ್ಲಮಪ್ರಭುದೇವರು
-->