ಅಥವಾ

ಒಟ್ಟು 45 ಕಡೆಗಳಲ್ಲಿ , 18 ವಚನಕಾರರು , 35 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆನಂದವೆಂಬ ತರತರಂಗಳಲಿ ಒಡನೆ ಆಡಿದೆನಯ್ಯಾ. ಆಡಿದ ಚಿತ್ರವು ವಿಚಿತ್ರವಾಯಿತಯ್ಯಾ, ನಿನ್ನ ಕೂಟದ ಸಂಗಮ ಆರರಲ್ಲಿ ಮೀದಿದ್ದ ಕಾರಣ ಎನಗೆ ಸಮನಿಸಿತು ಕಾಣಾ ಕಪಿಲಸಿದ್ಧಮಲ್ಲಿಕಾರ್ಜುನಯ್ಯ.
--------------
ಸಿದ್ಧರಾಮೇಶ್ವರ
ಆಯುಷ್ಯವುಂಟು ಪ್ರಳಯವಿಲ್ಲೆಂದು ಅರ್ಥವ ಮಡುಗುವಿರಿ; ಆಯುಷ್ಯ ತೀರಿ ಪ್ರಳಯ ಬಂದಡೆ ಆ ಅರ್ಥವನುಂಬುವರಿಲ್ಲ. ನೆಲನನಗೆದು ಮಡುಗದಿರಾ, ನೆಲ ನುಂಗಿದಡುಗುಳುವುದೆ ಕಣ್ಣಿನಲ್ಲಿ ನೋಡಿ, ಮಣ್ಣಿನಲ್ಲಿ ನೆರಹಿ, ಉಣ್ಣದೆ ಹೋಗದಿರಾ ! ನಿನ್ನ ಮಡದಿಗಿರಲೆಂದಡೆ, ಆ ಮಡದಿಯ ಕೃತಕ ಬೇರೆ; ನಿನ್ನ ಒಡಲು ಕಡೆಯಲು ಮತ್ತೊಬ್ಬನಲ್ಲಿಗೆ ಅಡಕದೆ ಮಾಬಳೆ ಹೆರರಿಗಿಕ್ಕಿ ಹೆಗ್ಗುರಿಯಾಗಿ ಕೆಡಬೇಡ, ಕೂಡಲಸಂಗನ ಶರಣರಿಗೆ ಒಡನೆ ಸವೆಸುವುದು. 201
--------------
ಬಸವಣ್ಣ
ಆಗಮಪುರುಷರಿರಾ, ನಿಮ್ಮ ಆಗಮ ವಾಯವಾಗಿ ಹೋಯಿತ್ತಲ್ಲಾ. ವಿದ್ಯಾಪುರುಷರಿರಾ ನಿಮ್ಮ ವಿದ್ಯೆ ಅವಿದ್ಯೆಯಾಗಿ ಹೋದಲ್ಲಿ, ಬರುಮುಖರಾಗಿ ಇದ್ದಿರಲ್ಲಾ. ವೇದಪುರುಷರಿರಾ ನಿಮ್ಮ ವೇದ ಹೊಲಬುದಪ್ಪಿ ಹೋದಲ್ಲಿ, ವೇದವೇ ದೈವವೆಂದು ಕೆಟ್ಟಿರಲ್ಲಾ. ಪುರಾಣಪುರುಷರಿರಾ ನಿಮ್ಮ ಪುರಾಣ ವಿಚಾರಭ್ರಷ್ಟವಾಗಿ ಹೋದಲ್ಲಿ, ನೀವು ಒಡನೆ ಭ್ರಷ್ಟರಾಗಿ ಹೋದಿರಲ್ಲಾ. ಶಾಸ್ತ್ರಪುರುಷರಿರಾ, ನಿಮ್ಮ ಶಾಸ್ತ್ರದ ಮಹಾಪಥ ಹೊನಲಲ್ಲಿ ಹೋದಲ್ಲಿ ಭಕ್ತದೇಹಿಕದೇವನೆಂದರಿಯದೆ ಕೆಟ್ಟಿರಲ್ಲಾ. `ಯತ್ರ ಶಿವಸ್ತತ್ರ ಮಾಹೇಶ್ವರ'ನೆಂದು ಹೇಳಿತ್ತು ಮುನ್ನ, ಅಂತು ಭಕ್ತ, ನಿತ್ಯ ಸತ್ಯ ಸನ್ನಹಿತ ಗುಹೇಶ್ವರಾ_ನಿಮ್ಮ ಶರಣ.
--------------
ಅಲ್ಲಮಪ್ರಭುದೇವರು
ಶಬ ಸ್ಪರ್ಶ ರೂಪು ರಸ ಗಂಧ ಪಂಚೇಂದ್ರಿಯವೆಲ್ಲ ಏಕಾಕಾರಿಗಳಾಗಿ, ತಿರುಗಿ ಹರಿಯದೆ, ಏಕಾಕಾರಿಗಳಾಗಿದ್ದವು ತಮ್ಮೊಳಗೆ. ಸಕಳೇಶ್ವರದೇವರಲ್ಲಿ, ಪರಿಣಾಮಪ್ರಸಾದಪದವಿಯ ಪಡೆದನಾಗಿ, ಒಡನೆ ಹುಟ್ಟಿ, ನೀವೆಲ್ಲ ಸುಖಿಯಾದಿರಯ್ಯಾ.
--------------
ಸಕಳೇಶ ಮಾದರಸ
ಉತ್ತರ ದಕ್ಷಿಣ ಪೂರ್ವ ಪಶ್ಚಿಮವೆಂಬ ದಿಕ್ಕಿನ ಹಂಗು ಹರಿದೆ. ನೀನುತ್ತರದಲ್ಲಿ ಓಂಕಾರ ಪ್ರದೀಪನಾಗಿ ಉತ್ತರದ್ವಾರದಲ್ಲಿ ಬಪ್ಪಾಗ ಆನೊಡನೆ ಬಂದೆ. ನೀನು ಅರಿತೂ ಅರಿಯದ ಹಾಂಗೆ ಇದ್ದೆ. ದಕ್ಷಿಣದ್ವಾರದಲ್ಲಿ ಜನಿತ ನಾಶವಾಗಿ ಬಪ್ಪಂದು ಆನೊಡನೆ ಬಂದು ನೀನರಿಯದಂತಿದ್ದೆ. ನೀನು ಪೂರ್ವದ್ವಾರದಲ್ಲಿ ಅಕ್ಷರದ್ವಯದ ವಾಹನವೇರಿಬಪ್ಪ್ಲ ಆನೊಡನೆ ಬಂದೆ. ನೀ ಪಶ್ಚಿಮದ್ವಾರದ್ಲ ಅವ್ವೆಯ ಮನದ ಕೊನೆಯ ಮೇಲೆ ಅವ್ಯಕ್ತಶೂನ್ಯವಾಗಿ ಬಪ್ಪಾಗ ಒಡನೆ ಬಂದೆ ಎಲೆ ಅಯ್ಯಾ. ಎನ್ನನು ಅನ್ಯಕ್ಕೊಪ್ಪಿಸುವ, ಎನ್ನನು ಶುದ್ಧ ನಾನು ನಿನ್ನವನಲ್ಲಾ. ಆನು ಬಂದ ಬರವ, ಇದ್ದ ಇರುವ ಆನರಿಯೆನಲ್ಲದೆ ನೀ ಬಲ್ಲೆ. ಅರಿದು ಕಾಡುವುದುಚಿತವೆ? ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ಶರಣಲಿಂಗಸಂಬಂಧಿಯಾದಾತನು ತನ್ನಂಗದ ಲಿಂಗದಲ್ಲಿ ಗೋಳಕ ಕಟಿ ಭಿನ್ನವಾದಲ್ಲಿ ಒಡನೆ ಪ್ರಾಣವಂ ಬಿಡು[ವುದ]ಲ್ಲದೆ ಬಂಧಿಸಿ ಧರಿಸಿಕೊಂಡನಾದಡೆ, ಜನ್ಮಜನ್ಮಾಂತರ ಸೂಕರನ ಬಸುರಲ್ಲಿ ಬಪ್ಪುದು ತಪ್ಪದು ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.
--------------
ಉರಿಲಿಂಗಪೆದ್ದಿ
ಒಡಲಲ್ಲಿ ಹುಟ್ಟಿತ್ತು ಭ್ರಮೆಯಿಂದ ಬೆಳೆಯಿತ್ತು. ಒಡನೆ ಹುಟ್ಟಿತ್ತು ತನ್ನನರಿಯದ ಕಾರಣ. ಇದು ಒಂದು ಸೋಜಿಗವ ಕಂಡೆ. ಕೂಡೆ ಭರಿತವೆಂದರಿಯಲು ಅಂಗದಲಳವಟ್ಟಿತ್ತು ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಇದೇನಯ್ಯಾ ಪ್ರಸಾದ ಒಡನೆ ನ [ಡೆ]ವುತ್ತಿದೆ, ಇದೇನಯ್ಯಾ ಪ್ರಸಾದ ಒಡನೆ ನುಡಿವುತ್ತಿದೆ, ಪ್ರಾಣದ ಮೇಲೆ ಲಿಂಗ ಪ್ರತಿಷೆ*ಯಾಗಲೊಡನೆ ಅದು ತಾನೆ ನಡೆವುದು, ಅದು ತಾನೆ ನುಡಿವುದು, ಕಂಡಯ್ಯಾ. ಎರಡೆಂಬುದಿಲ್ಲಾಗಿ ಮುಂದೆ ನಾನೊಂದೆ ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ
ಕಲ್ಲುದೇವರ ನಂಬಿದವರೆಲ್ಲ ಕಲಿಯುಗದ ಕತ್ತಲೆಯೊಳಗಾಗಿ ಕತ್ತೆಗಳಾಗಿ ಹೋದರು. ಅದೇನು ಕಾರಣವೆಂದರೆ: ತಮ್ಮ ದೇವರು ಇಕ್ಕಿದ ಓಗರವನುಣ್ಣಲೊಲ್ಲದೆ, ಒಡನೆ ಮಾತಾಡದು. ಗುಡಿಯ ಕಲ್ಲು ಮೇಲೆ ಬಿದ್ದರೆ ಒಡೆದು ಹಾಳಾಗಿ ಹೋಗುತ್ತದೆ. ಇಂತಪ್ಪ ಕಲ್ಲ ಪೂಜಿಸಿ, ಸಲ್ಲದೆ ಹೋದರು. ಅದಂತಿರಲಿ, ಮಣ್ಣ ದೇವರು ಎಂದು ಪೂಜಿಸಿ, ಮಜ್ಜನಕ್ಕೆ ನೀಡಲಮ್ಮದೆ, ಲಜ್ಜೆಗೆಟ್ಟು ನಾಯಾಗಿ ಬೊಗುಳಿ ಹೋದರು. ಆದಂತಿರಲಿ, ಮರನ ದೇವರೆಂದು ಪೂಜಿಸಿ ಧೂಪ ದೀಪವ ಮುಂದಿಡಲಮ್ಮರು. ಅದೊಂದು ವ್ಯಾಪಾರಕ್ಕೊಳಗಾಗಿ, ತಾಪತ್ರಯಕ್ಕೆ ಸಿಲ್ಕಿ ಪಾಪಿಗಳಾಗಿ ಸತ್ತುಹೋದರು. ಸಲ್ಲದು ಶಿವನಲ್ಲಿ. ಎಮ್ಮ ಭಕ್ತರಿಗೆ ಈ ಪರಿಯಲ್ಲ ಕೇಳಿರಣ್ಣಾ. ಇದೆಲ್ಲ ಪಾಪಿಗಳ ಹಾಗೆ, ಎನ್ನ ದೇವ ನಡೆವ, ನುಡಿವ, ಇಕ್ಕಿದರುಂಬ, ಕೊಟ್ಟರೆ ತಕ್ಕೊಂಬ, ಪೂಜಿಸಿದರೆ ಪೂಜೆಗೊಂಬ, ಅನೇಕ ಪೂಜೆಯಲ್ಲಿ. ತನ್ನ ನಂಬಿದ ಭಕ್ತರಿಗೆ-ಬುದ್ಧಿಯ ಹೇಳುವ, ಶುದ್ಧಾತ್ಮನ ತೋರುವ. ತಾ ಮುದಿನಲ್ಲಿ ಸಜ್ಜನ ಸದ್ಭಕ್ತರಲ್ಲಿ ಇದ್ದೂ ಇಲ್ಲದಂತಿಪ್ಪ. ಪ್ರಸಿದ್ಧ ಜಂಗಮಲಿಂಗವ ಪೂಜಿಸಿ, ಸ್ವಯಲಿಂಗಿಗಳಾದರು ಎಮ್ಮ ಶರಣರು. ಅವರು ಹೋದ ಹಾದಿಯ ನೋಡಿದರೆ, ಎನಗೊಂದು ಹಾದಿ ಸಿಕ್ಕಿತ್ತು. ಆ ಹಾದಿಗೊಂಡು ಹೋಗಿ ಅವರ ಪಾದವಕಂಡು, ಕೆಟ್ಟು ಬಟ್ಟಬಯಲಾದೆ ನಯ್ಯಾ, ಬಸವಪ್ರಿಯ ಕೂಡಲಚೆನ್ನಬಸವಣ್ಣಾ.
--------------
ಹಡಪದ ಅಪ್ಪಣ್ಣ
ಹೊಸ್ತಿಲೊಳಗಿರಿಸಿದ ಜ್ಯೋತಿಯಂತೆ ಒಳಗೆ ನೋಡುವನು ತಾನೆ, ಹೊರಗೆ ನೋಡುವನು ತಾನೆ. ಅರಿದೆನೆಂಬುವನು ತಾನೆ, ಮರೆದೆನೆಂಬುವನು ತಾನೆ. ಕಂಡೆನೆಂಬವನು ತಾನೆ, ಕಾಣೆನೆಂಬವನು ತಾನೆ. ದೃಷ್ಟ ದೃಕ್ಕು ದೃಶ್ಯವೆಂಬ ತ್ರಿಪುಟಿ ಭೇದವ ಮೀರಿ. ತ್ರಿಕೂಟವನೇರಿ, ಅತ್ತಲೆ ನೋಡುತ್ತಿರಲು, ಹಿತ್ತಲ ಕದವ ತೆರೆದು ಮತ್ತವಾಗಿ ಎತ್ತಲೆಂದರಿಯದೆ, ಸತ್ತುಚಿತ್ತಾನಂದದಲ್ಲಿ ಆಡುವ ಶರಣನ ಇರವೆಂತೆಂದಡೆ: ಬಿತ್ತಲಿಲ್ಲ ಬೆಳೆಯಲಿಲ್ಲ; ಒಕ್ಕಲಿಲ್ಲ ತೂರಲಿಲ್ಲ. ಇವನೆಲ್ಲಾ ಇಕ್ಕಲಿಸಿ ನಿಂದು ಮಿಕ್ಕು ಮೀರಿ ಕುಕ್ಕುಂಭೆ ಮೇಲೆ ಕುಳಿತುಕೊಂಡು ನೋಡುತ್ತಿರಲು, ಹಡಗೊಡೆಯಿತ್ತು; ಒಡವೆ - ವಸ್ತು, ಮಡದಿ -ಮಕ್ಕಳು ನೀರೊಳಗೆ ನೆರೆದು ಹೋಯಿತ್ತು. ಒಡನೆ ತಂಗಾಳಿ ಬಂದು ಬೀಸಲು, ತಂಪಿನೊಳಗೆ ನಿಂದು, ಗುಂಪು ಬಯಲಾಗಿ ಗೂಢವಾಗಿ ಆಡುವ ಶರಣ, ಅಪ್ಪಣ್ಣಪ್ರಿಯ ಚೆನ್ನಬಸವಣ್ಣ ತಾನೆ ನೋಡಾ.
--------------
ಹಡಪದಪ್ಪಣ್ಣಗಳ ಪುಣ್ಯಸ್ತ್ರೀ ಲಿಂಗಮ್ಮ
ಅಡಿಗಡಿಗೆ ಅಮೃತದ ಕೊಡನೊಡೆಯೆ, ನಿನ್ನ ನುಡಿ ಬ್ರಹ್ಮವು ತಾನು ನಿತ್ಯವಾಗಿ ಮಾಡಿ ಒಳಗೆ ಭಕ್ತಿಯನು ಅಡಿಯೊಳಗೆ ನಿತ್ಯವನು ಕಡಲ ಕಂಡೆನು ಭಕ್ತಿಸಮುದ್ರದಾ, ಕೊಡನೊಡಲು ಒಡೆದೀಗ ಕಡಲೊಳಗೆ ಬೆರಸಲ್ಕೆ ಅಡಿಗಡಿಗೆ ದೀಕ್ಷತ್ರಯದ ಸೊಮ್ಮು. ನಿತ್ಯ ಮೃಡನೀಗ ಕಪಿಲಸಿದ್ಧಮಲ್ಲಿಕಾರ್ಜುನಯ್ಯ ನುಡಿಯ ಬ್ರಹ್ಮದೊಳಗೆ ಒಡನೆ ಬ್ರಹ್ಮಾ.
--------------
ಸಿದ್ಧರಾಮೇಶ್ವರ
ಧರಣಿಯ ಮೇಲೊಂದು ಹಿರಿದಪ್ಪ ಅಂಗಡಿಯನಿಕ್ಕಿ, ಹರದ ಕುಳ್ಳಿರ್ದ ನಮ್ಮ ಮಹಾದೇವಸೆಟ್ಟಿ. ಒಮ್ಮನವಾದಡೆ ಒಡನೆ ನುಡಿವನು, ಇಮ್ಮನವಾದಡೆ ನುಡಿಯನು. ಕಾಣಿಯ ಸೋಲ, ಅರ್ಧಗಾಣಿಯ ಗೆಲ್ಲ, ಜಾಣ ನೋಡವ್ವಾ, ನಮ್ಮ ಕೂಡಲಸಂಗಮದೇವ. 115
--------------
ಬಸವಣ್ಣ
ಲಿಂಗಗಂಭೀರ ಗಮನಗೆಟ್ಟುದಲ್ಲಾ, ಜಂಗಮಗಂಭೀರ ಸುಳುಹುಗೆಟ್ಟುದಲ್ಲಾ, ಪ್ರಸಾದಗಂಭೀರ ರೂಪುಗೆಟ್ಟುದಲ್ಲಾ, ಆಚಾರಗಂಭೀರ ಅವಯವಗೆಟ್ಟುದಲ್ಲಾ, ಜ್ಞಾನಗಂಭೀರ ನಡೆಗೆಟ್ಟುದಲ್ಲಾ, ಕೂಡಲಸಂಗಮದೇವರಲ್ಲಿ ಪ್ರಭುದೇವರು ನಿಜವನೈದಲು ಸಂಗನಬಸವಣ್ಣನ ಪ್ರಾಣ ಒಡನೆ ಬಳಿಸಂದಿತ್ತಲ್ಲಾ.
--------------
ಬಸವಣ್ಣ
ಏನಿ ಬಂದಿರಿ, ಹದುಳಿದ್ದಿರೆ ಎಂದಡೆ ನಿ[ಮ್ಮೈ]ಸಿರಿ ಹಾರಿ ಹೋಹುದೆ ಕುಳ್ಳಿರೆಂದಡೆ ನೆಲ ಕುಳಿಹೋಹುದೆ ಒಡನೆ ನುಡಿದಡೆ ಸಿರ, ಹೊಟ್ಟೆಯೊಡೆವುದೆ ಕೊಡಲಿಲ್ಲದಿದ್ದಡೊಂದು ಗುಣವಿಲ್ಲದಿದ್ದಡೆ ಮೂಗ ಕೊಯ್ವುದ ಮಾಬನೆ ಕೂಡಲಸಂಗಮದೇವಯ್ಯ 241
--------------
ಬಸವಣ್ಣ
ಅಂಗದಲ್ಲಿ ಲಿಂಗ ಬೆರೆದು, ಲಿಂಗದಲ್ಲಿ ಅಂಗ ಬೆರೆದು ಅಂಗ ಲಿಂಗ ಸಂಗದಿಂದ ಸಹವರ್ತಿಯಾದ ಲಿಂಗಪ್ರಸಾದಿಯ ಇಂಗಿತವನೇನೆಂದು ಹೇಳಬಹುದು? ಲಿಂಗ ನಡೆಯಲು ಒಡನೆ ಪ್ರಸಾದಿ ನಡೆವ ಲಿಂಗ ನೋಡಲು ಒಡನೆ ಪ್ರಸಾದಿ ನೋಡುವ ಲಿಂಗ ಕೇಳಲು ಒಡನೆ ಪ್ರಸಾದಿ ಕೇಳುವ ಲಿಂಗ ಮುಟ್ಟಲು ಒಡನೆ ಪ್ರಸಾದಿ ಮುಟ್ಟುವ ಲಿಂಗ ರುಚಿಸಲು ಒಡನೆ ಪ್ರಸಾದಿ ರುಚಿಸುವ. ಲಿಂಗ ಘ್ರಾಣಿಸಲು ಒಡನೆ ಪ್ರಸಾದಿ ಘ್ರಾಣಿಸುವ. ಇಂತು ಸರ್ವಭೋಗವ ಲಿಂಗದೊಡನೆ ಕೂಡಿ ಭೋಗಿಸಬಲ್ಲ, ನಿಮ್ಮ ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನಲ್ಲಿ ಚೆನ್ನಬಸವಣ್ಣನು.
--------------
ಸ್ವತಂತ್ರ ಸಿದ್ಧಲಿಂಗ
ಇನ್ನಷ್ಟು ... -->