ಅಥವಾ

ಒಟ್ಟು 19 ಕಡೆಗಳಲ್ಲಿ , 13 ವಚನಕಾರರು , 19 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಲಿಂಗ ಜಂಗಮ, ಜಂಗಮ ಲಿಂಗವೆಂಬುದ ತೋರಿ, ನಿಜೈಕ್ಯನಾದೆಯಲ್ಲಾ ನಿಜಗುರು ಬಸವಣ್ಣಾ ! ಪ್ರಸಾದ ಕಾಯ, ಕಾಯ ಪ್ರಸಾದವೆಂಬುದ ಎನ್ನ ಸರ್ವಾಂಗದಲ್ಲಿ ಪ್ರತಿಷ್ಠಿಸಿ, ಎನ್ನನಾಗು ಮಾಡಿ ಮುಂದುವರಿದೆಯಲ್ಲಾ ಬಸವಣ್ಣಾ ! ಲಿಂಗ ಪ್ರಾಣ, ಪ್ರಾಣ ಲಿಂಗವೆಂಬುದ ಎನ್ನಂತರಂಗದಲ್ಲಿ ಸ್ಥಾಪ್ಯವ ಮಾಡಿ ಎನ್ನ ನಿನ್ನಂತೆ ಮಾಡಿ ನಿಜಲಿಂಗದೊಳಗೆ ನಿರವಯವಾದೆಯಲ್ಲಾ ಬಸವಣ್ಣಾ ! ಎನ್ನ ಮನವ ಮಹಾಸ್ಥಲದಲ್ಲಿ ಲಯವ ಮಾಡಿ, ನಿರ್ವಯಲಾಗಿ ಹೋದೆಯಲ್ಲಾ ನಿಜಲಿಂಗೈಕ್ಯ ಬಸವಣ್ಣಾ ! ನಿನ್ನ ಒಕ್ಕುಮಿಕ್ಕ ಶೇಷವನಿಕ್ಕಿ ಆಗು ಮಾಡಿ ನಿನ್ನಂತರಂಗದಲ್ಲಿ ಅವ್ವೆ ನಾಗಾಯಿಯ ಇಂಬುಗೊಂಡಡೆ, ಎನ್ನ ಮನ ನಿಮ್ಮ ಪಾದದಲ್ಲಿ ಕರಗಿ ಕೊರಗಿತ್ತಯ್ಯಾ, ಸಂಗನಬಸವಣ್ಣಾ ! ಕೂಡಲಚೆನ್ನಸಂಗಯ್ಯಂಗೆ ಸುಜ್ಞಾನವಾಹನವಾಗಬೇಕೆಂದು ನಿರವಯವಾದೆಯಲ್ಲಾ ಸಂಗನಬಸವಣ್ಣಾ !
--------------
ಚನ್ನಬಸವಣ್ಣ
ಶಂಕರದಾಸಿಮಯ್ಯಗೆ ಸುಂಕದಬಂಕಯ್ಯಗೆ ಶಿವಲೆಂಕಮಂಚಣ್ಣಗೆ ಶಿವರಾತ್ರಿಯಯ್ಯಗಳಿಗೆ ಸಿದ್ಧರಾಮಯ್ಯಗಳಿಗೆ ಚಿಮ್ಮುಲಿಗೆಯ ಚಂದಯ್ಯ ಚಿಕ್ಕಯ್ಯ ಡೋಹರ ಕಕ್ಕಯ್ಯ ಒಕ್ಕುಮಿಕ್ಕ ಪ್ರಸಾದವಯಿಕ್ಕೆಯ್ಯಲ್ಲಿ ಕೊಂಬ ಅಕ್ಕನಾಗಾಯಿಗೆ ಹರಳಯ್ಯ ಮಧುವಯ್ಯ ಬಳ್ಳೇಶ್ವರಯ್ಯಗಳಿಗೆ ಹಾವಿನಾಳ ಕಲ್ಲಯ್ಯಗಳಿಗೆ ಸರವೂರ ಬಂಕಯ್ಯಗೆ ಸುರಗಿಯ ಚೌಡಯ್ಯಗೆ ಪರಿಪರಿಯ ಶರಣರಿಗೆ ಶರಣು ಶರಣಾರ್ಥಿ ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ ಶಿವಸಾಕ್ಷಿಯಾಗಿ.
--------------
ಕುಷ್ಟಗಿ ಕರಿಬಸವೇಶ್ವರ
ಗುರುವಾಗಿ ಬಂದರಯ್ಯಾ ರೇವಣಸಿದ್ಧೇಶ್ವರದೇವರು. ಲಿಂಗದಲ್ಲಿ ನಿಬ್ಬೆರಗಾದರಯ್ಯಾ ಅನುಮಿಷದೇವರು. ಜಂಗಮವಾಗಿ ಸುಳಿದರಯ್ಯಾ ಪ್ರಭುದೇವರು. ಪ್ರಸಾದವ ಕೊಂಡು ಪಥವ ತೋರಿದರಯ್ಯಾ ಬಿಬ್ಬಿಬಾಚಯ್ಯಗಳು. ಲಿಂಗದಲ್ಲಿ ನಿರ್ವಯಲಾದರಯ್ಯಾ ನೀಲಲೋಚನೆಯಮ್ಮನವರು. ಸೌರಾಷ್ಟ್ರಮಂಡಲದಲ್ಲಿ ಮೆರೆದರಯ್ಯಾ ಓಹಿಲದೇವರು. ಇಂತಿವರ ಒಕ್ಕುಮಿಕ್ಕ ಬಯಲಪ್ರಸಾದ ಕೊಂಡು ಬದುಕಿದೆನಯ್ಯಾ, ವೀರಶೂರ ರಾಮೇಶ್ವರಾ
--------------
ಬಾಲಬೊಮ್ಮಣ್ಣ
ಭಕ್ತನಾದಡೆ ಚಿತ್ತ ನಿಶ್ಚಲವಾಗಿ ಸದ್ಭಕ್ತಿ ನೆಲೆಗೊಂಡಿರಬೇಕು. ಮಹೇಶ್ವರನಾದಡೆ ಸಕಲಕರ್ಮವು ಕ್ಷಯವಾಗಿರಬೇಕು. ಪ್ರಸಾದಿಯಾದಡೆ ಶಿವಜ್ಞಾನಪರಾಯಣನಾಗಿರಬೇಕು. ಪ್ರಾಣಲಿಂಗಿಯಾದಡೆ ನಿತ್ಯಾನಿತ್ಯವಿಚಾರವನರಿದಿರಬೇಕು. ಶರಣನಾದಡೆ ಗರ್ವ ಅಹಂಕಾರದ ಮೊಳೆಯ ಮುರಿದಿರಬೇಕು. ಐಕ್ಯನಾದಡೆ ಬ್ಥಿನ್ನಭಾವವನಳಿದು ಮಹಾಜ್ಞಾನದೊಳಗೆ ಓಲಾಡಬೇಕು. ಅದೆಂತೆಂದೊಡೆ : ``ಭಕ್ತಿಃ ಕರ್ಮಕ್ಷಯೋ ಬುದ್ಧಿರ್ವಿಚಾರೋ ದರ್ಪಸಂಕ್ಷಯಃ | ಸಮ್ಯಗ್‍ಜ್ಞಾನಮಿತಿ ಪ್ರಾಜ್ಞೆ ೈಃ ಸ್ಥಲಷಟ್ಕಮುದಾಹೃತಮ್ ||'' ಎಂದುದಾಗಿ, ಇಂತಪ್ಪ ಷಟ್‍ಸ್ಥಲವೇದ್ಯರಾದ ಮಹಾಶರಣರ ಒಕ್ಕುಮಿಕ್ಕ ಪ್ರಸಾದವನೇ ಕರುಣಿಸಿ ಬದುಕಿಸಯ್ಯ ಎನ್ನ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ದಾಸ-ದುಗ್ಗಳೆಯವರ ತವನಿದ್ಥಿಪ್ರಸಾದವ ಕೊಂಡೆನಯ್ಯಾ. ಸಿರಿಯಾಳ-ಚೆಂಗಳೆಯವರ ಪ್ರಾಣಪ್ರಸಾದವ ಕೊಂಡೆನಯ್ಯಾ. ಸಿಂಧು-ಬಲ್ಲಾಳವರ ಸಮತಾಪ್ರಸಾದವ ಕೊಂಡೆನಯ್ಯಾ. ಬಿಬ್ಬಬಾಚಯ್ಯಗಳ ಸಮಯಪ್ರಸಾದವ ಕೊಂಡೆನಯ್ಯಾ. ಮಹಾದೇವಿಯಕ್ಕಗಳ ಜ್ಞಾನಪ್ರಸಾದವ ಕೊಂಡೆನಯ್ಯಾ. ನೀಲಲೋಚನೆಯಮ್ಮನವರ ನಿರ್ವಯಲಪ್ರಸಾದವ ಕೊಂಡೆನಯ್ಯಾ. ಇಂತೀ ಏಳ್ನೂರೆಪ್ಪತ್ತಮರಗಣಂಗಳ ಒಕ್ಕುಮಿಕ್ಕ ಬಯಲಪ್ರಸಾದವ ಕೊಂಡು ಬದುಕಿದೆನು ಕಾಣಾ ಗಾರುಡೇಶ್ವರಾ.
--------------
ಉಪ್ಪರಗುಡಿಯ ಸೋಮಿದೇವಯ್ಯ
ಕುಲ ಎಷ್ಟು ಎಂದಡೆ, ಎರಡು ಕುಲ. ಅವಾವೆಂದಡೆ : ಭವಿ ಒಂದು ಕುಲ, ಭಕ್ತ ಒಂದು ಕುಲ. ಅಷ್ಟಾವರಣವೇ ಅಂಗವಾಗಿ, ಪಂಚಾಚಾರವೇ ಪ್ರಾಣವಾಗಿಪ್ಪ ಭಕ್ತರ ಕುಲವನರಸಿದಡೆ ಬಾರದ ಭವಂಗಳಲ್ಲಿ ಬಪ್ಪುದು ತಪ್ಪುದು. ನೀರಿಂದಾದ ಮುತ್ತು ಮರಳಿ ಉದಕವಪ್ಪುದೆ ? ಆಕಾಶಕ್ಕೆ ಹೋದ ಹೊಗೆ ಹಿಂದಕ್ಕೆ ಬಪ್ಪುದೆ ? ಮಣ್ಣಿಂದಾದ ಮಡಕೆ ಮತ್ತೆ ಮಣ್ಣಪ್ಪುದೆ ? ಮತ್ತೆ ವಾಮನಮುನಿ ಹಿರಿಯ ಭಕ್ತರ ಮನೆಯ ಬಿನ್ನಹವ ಕೈಕೊಂಡು ಕುಲಕಂಜಿ ಉಣಲೊಲ್ಲದೆ ಹೋದ ನಿಮಿತ್ತದಿಂದ, ಹಾವಿನಹಾಳ ಕಲ್ಲಯ್ಯಗಳ ಮನೆಯ ಶ್ವಾನನಾಗಿ ಹುಟ್ಟಲಿಲ್ಲವೆ ? ಅದು ಕಾರಣ, ಶಿವಭಕ್ತರ ಒಕ್ಕುಮಿಕ್ಕ ಪ್ರಸಾದವ ಕೊಳಬೇಕು ಎಂದಾತ ನಮ್ಮ ಶಾಂತಕೂಡಲಸಂಗಮದೇವ.
--------------
ಗಣದಾಸಿ ವೀರಣ್ಣ
ಹೆಡತಲೆಯ ಮಾತ ಬಲ್ಲಡೆ ಪ್ರಸಾದಿ. ನಡುನೆತ್ತಿಯ ಮರ್ಮವನರಿದಡೆ ಪ್ರಸಾದಿ. ಕಂಗಳ ಮೊಲೆ ಕೂರ್ಮನ ಆಪ್ಯಾಯನವ ಬಲ್ಲಡೆ ಪ್ರಸಾದಿ. ಅಂಗೇಂದ್ರಿಯವನೊಂದು ಮುಖವ ಮಾಡಬಲ್ಲಡೆ ಪ್ರಸಾದಿ. ನಿರಂಜನ ಜಂಗಮನನಾರೋಗಿಸಬಲ್ಲಡೆ ಪ್ರಸಾದಿ. ನಿರಾಲಂಬ ಪ್ರಣವಮನುಚ್ಚರಿಸಬಲ್ಲಡೆ ಪ್ರಸಾದಿ. ಹ್ರೀಂ ಶಕ್ತ್ಯಾರೂಢನಾದ ಚರಪಾದಾಂಬುವ ಹ್ರೈಂಶಕ್ತಿ ಬದ್ಧನಾದ ಲಿಂಗಕ್ಕೆ ಶಾಂತಿಯ ಮಾಡಬಲ್ಲಡೆ ಪ್ರಸಾದಿ. ಆಧಾರ ಬ್ರಹ್ಮದೊಳಗೆ ಅಡಗಿದ ಅಕ್ಷರವ ನೋಡಿ ಓದಬಲ್ಲಡೆ ಪ್ರಸಾದಿ. ಭಾವವ ಕ್ರೀಯಲ್ಲಿ ತಂದು ಭಾವದಲ್ಲಿ ನೆಲೆಗೊಳಿಸಬಲ್ಲಡೆ ಪ್ರಸಾದಿ. ಒಳಹೊರಗೆಂಬ ಭಾವಗೆಟ್ಟು ಸುಳುಹಿನ ಪ್ರಸಾದದ ಕಳೆವೆಳಗ ನುಂಗಿದ ಲಿಂಗಕ್ಕೆ ಅರ್ಪಿಸಿ ಸುಖಿಸಬಲ್ಲಡೆ ಪ್ರಸಾದಿ. ಸ್ಥಾವರವ ಜಂಗಮದೊಳಡಗಿಸಿ ಜಂಗಮವ ಸ್ಥಾವರವ ಮಾಡಬಲ್ಲಡೆ ಪ್ರಸಾದಿ. ಇದು ಕಾರಣ ನಿಜಗುಣನೆಂಬ ಮಹಾಜಂಗಮ ನಿಜಾನಂದವೆಂಬ ಒಕ್ಕುಮಿಕ್ಕ ಘನಪ್ರಸಾದವ ಕೊಟ್ಟನಾಗಿ ಸಿಮ್ಮಲಿಗೆಯ ಚೆನ್ನರಾಮನೆಂಬ ಲಿಂಗವೆನ್ನ ಹಿಂಗದಾಲಿಂಗಿಸಿದನಾಗಿ ಪ್ರಸಾದಿಯಾದೆ.
--------------
ಚಂದಿಮರಸ
ಎನಗುಣಲಿಕ್ಕಿದರಯ್ಯ ಸಿರಿಯಾಳ-ಚೆಂಗಳೆಯರು. ಎನಗುಡ ಕೊಟ್ಟರಯ್ಯಾ ದಾಸ- ದುಗ್ಗಳೆಯವರು. ಎನ್ನ ಮುದ್ದಾಡಿಸಿದರಯ್ಯಾ ಅಕ್ಕನಾಗಮ್ಮನವರು. ಎನ್ನ ಸಲಹಿದರಯ್ಯಾ ಅಮ್ಮವ್ವೆ ಕೊಡಗೂಸು ಚೋಳಿಯಕ್ಕ ನಿಂಬವ್ವೆ ನೀಲಮ್ಮ ಮಹಾದೇವಿ ಮುಕ್ತಾಯಕ್ಕಗಳು. ಇಂತಿವರ ಒಕ್ಕುಮಿಕ್ಕ ತಾಂಬೂಲ ಪ್ರಸಾದವ ಕೊಂಡು ಬದುಕಿದೆನಯ್ಯಾ ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ.
--------------
ಕೋಲ ಶಾಂತಯ್ಯ
ಹೋ ಹೋ ಗುರುವೆ, ನಿಮ್ಮ ಕರಕಮಲದಲ್ಲಿ ಉದಯಿಸಿ ಅಂಗದ ಮೇಲೆ ಲಿಂಗವ ಧರಿಸಿ, ಲಿಂಗದಲ್ಲಿ ಆಗಾಗಿ ಪ್ರಾಣಲಿಂಗ ಲಿಂಗಪ್ರಾಣ ಎಂಬುದ ನಾನು ಕಂಡೆನು. ನಿಮಗಾನು ತೋರಲು ಸಮರ್ಥನೆ ? ಆಚಾರ ಅಂಗದ ಮೇಲೆ ನೆಲೆಗೊಂಡು, ಇಷ್ಟಲಿಂಗದಲ್ಲಿ ದೃಷ್ಟಿನಟ್ಟು ಭಾವಸಂಪನ್ನವಾಗಿಪ್ಪ ನಿಮ್ಮ ಘನವ ನಾನೆತ್ತ ಬಲ್ಲೆನಯ್ಯಾ ? ಅನುಭಾವ ಅಂತರಂಗದಲ್ಲಿ ಎಡೆಗೊಂಡು, ಪ್ರಾಣಲಿಂಗದಲ್ಲಿ ನಿಕ್ಷೇಪವಾಗಿ, ನಿಜಲಿಂಗೈಕ್ಯನಾಗಿಪ್ಪ ನಿಮ್ಮ ಘನವ ನಾನೆತ್ತ ಬಲ್ಲೆನಯ್ಯಾ ? ಜ್ಞಾನಸಮಾಧಿಯೊಳಗೆ ಬಯಕೆಯಡಗಿ ಪರಿಣಾಮಲಿಂಗದಲ್ಲಿ ಮನಸ್ಸು ಲಯವಾಗಿ ನಿಜಲಿಂಗತೃಪ್ತರಾಗಿಪ್ಪಿರಿ ನೀವು; ನಿಮ್ಮ ಘನವ ನಾನೆತ್ತ ಬಲ್ಲೆನಯ್ಯಾ ! ಅಂಗದ ಮೇಲೆ ಲಿಂಗವುಳ್ಳುದೆಲ್ಲವು ಸಂಗಮನಾಥನೆಂಬಲ್ಲಿ ಜಂಗಮಲಿಂಗ ಪ್ರಾಣಿಯಾಗಿಪ್ಪಿರಿ ನೀವು, ನಿಮ್ಮ ಘನವ ನಾನೆತ್ತ ಬಲ್ಲೆನಯ್ಯಾ ಲಿಂಗಕ್ಕೆ ಬಂದ ಪದಾರ್ಥವನಲ್ಲದೆ ಕೊಳ್ಳೆನೆಂದು ಮನ ಮೀಸಲು, ತನುಮೀಸಲು ಮಾಡಿ, ಸರ್ವಾಂಗಸುಖವೆಲ್ಲವನು ಪ್ರಾಣಲಿಂಗದಲ್ಲಿ ಅರ್ಪಿಸಿ . ನಿರಾಭಾರಿಯಾಗಿ, ಪ್ರಸಾದಲಿಂಗಪ್ರಾಣಿಯಾಗಿಪ್ಪಿರಿ ನೀವು ನಿಮ್ಮ ಘನವ ನಾನೆತ್ತ ಬಲ್ಲೆನಯ್ಯಾ ! ಅನಾದಿ ಶಿವಂಗೆ ಆಧಾರವಿಲ್ಲೆಂದು, ಅಖಂಡಿತನ ನಿಮ್ಮ ರೋಮದ ಕೊನೆಯಲ್ಲಿ ಧರಿಸಿ ಮಹಾಲಿಂಗಪ್ರಾಣಿಯಾಗಿಪ್ಪಿರಿ ನೀವು, ನಿಮ್ಮ ಘನವ ನಾನೆತ್ತ ಬಲ್ಲೆನಯ್ಯಾ ! ಕೂಡಲಚೆನ್ನಸಂಗಮದೇವ ಸಾಕ್ಷಿಯಾಗಿ, ನಿಮ್ಮ ಪ್ರಾಣಲಿಂಗಸಂಬಂಧದ ಸೆರಗು ಸೋಂಕಿನ ಒಕ್ಕುಮಿಕ್ಕ ಪ್ರಸಾದಿ ನಾನು ಕಾಣಾ ಸಂಗನಬಸವಣ್ಣ.
--------------
ಚನ್ನಬಸವಣ್ಣ
ಬಸವಣ್ಣಾ ನಿನಗೇಳು ಜನ್ಮ, ನನಗೆ ನಾಲ್ಕು ಜನ್ಮ, ಚನ್ನಬಸವಣ್ಣಗೊಂದೆ ಜನ್ಮ. ನೀನು ಗುರುವೆನಿಸಿಕೊಳಬೇಡ, ನಾನು ಜಂಗಮವೆನಿಸಿಕೊಳಬೇಡ, ನಾವಿಬ್ಬರು ಚೆನ್ನಬಸವಣ್ಣನ ಒಕ್ಕುಮಿಕ್ಕ ಪ್ರಸಾದವ ಕೊಳ್ಳದಡೆ ನಮ್ಮ ಗುಹೇಶ್ವರ ಸಾಕ್ಷಿಯಾಗಿ ಭವಂ ನಾಸ್ತಿಯಾಗದು ಕಾಣಾ ಸಂಗನಬಸವಣ್ಣಾ.
--------------
ಅಲ್ಲಮಪ್ರಭುದೇವರು
ಧ್ಯಾನ ಧಾರಣ ಸಮಾಧಿಯೆಂತೆಂದಡೆ ಸದ್ಗುರುವೆ ಕರುಣಿಪುದು. ಕೇಳಯ್ಯ ಮಗನೆ : ಧ್ಯಾನ ಯೋಗವೆಂತೆಂದಡೆ : ಷಡಾಧಾರಚಕ್ರದೊಳಗೆ ಆಧಾರ ಮೊದಲಾಗಿ ಆಜ್ಞೆ ಕಡೆತನಕ ಇಷ್ಟಲಿಂಗವ ಧ್ಯಾನಿಸಿ ಅರ್ಚಿಸಿ ಪೂಜಿಸಿ ಅಲ್ಲಿ ತ್ರಿಕೂಟ ಸಂಗಮದಲ್ಲಿ ಗಂಗಾ ಯಮುನಾ ಸರಸ್ವತಿ ನದಿಗಳು ಕೂಡಿದ ಠಾವಿನಲ್ಲಿ ಪ್ರಮಥಗಣಂಗಳು ಮೊದಲಾಗಿ ಅಲ್ಲಿ ಮಜ್ಜನವ ನೀಡುತ್ತಿಹರು. ಅಲ್ಲಿ ಸೂರ್ಯಪೀಠದ ಮೇಲೆ ಗುರುವು ಮೂರ್ತವ ಮಾಡಿರಲು ಅವರ ಪಾದಾರ್ಚನೆಯಂ ಮಾಡಿ, ಪಾದೋದಕದ ನದಿಗಳಲ್ಲಿ ಸ್ನಾನವ ಮಾಡಿ ಅವರ ಸಂಗಡ ಏಳನೆಯ ಮಂಟಪಕ್ಕೆ ಹೋಗಿ ಅಲ್ಲಿ ಪಶ್ಚಿಮಚಕ್ರದಿಂದ ನಿರಂಜನಜಂಗಮವು ಶಿಖಾಚಕ್ರದಲ್ಲಿರ್ದ ಬಸವಾದಿ ಪ್ರಮಥರು ಮೊದಲಾದವರು ಬಿಜಯಮಾಡಿ, ಅಲ್ಲಿ ಅಸಂಖ್ಯಾತ ಪ್ರಮಥರು, ನೂತನ ಗಣಂಗಳು ಸಹವಾಗಿ ಲಿಂಗಾರ್ಚನೆಯ ಮಾಡುತ್ತಿಹರು. ಆ ಲಿಂಗಾರ್ಚನೆ ಎಂತೆಂದಡೆ : ಮೊದಲು ಚಿದ್ಭಸ್ಮವನೆ ಧರಿಸಿ, ಆನಂದೋದಕದಿಂದ ಲಿಂಗಕ್ಕೆ ಕ್ರಿಯಾಮಜ್ಜನವ ನೀಡಿ, ಅಷ್ಟತನುವಿನ ಅಷ್ಟಸುಗಂಧವ ಧರಿಸಿ, ಕರಣಂಗಳ ಸಂಚಲವಿಲ್ಲದ ಗುಣತ್ರಯದಕ್ಷತೆಯ ಧರಿಸಿ, ಸಾವಿರದೈವತ್ತು ಪ್ರಣವದ ಪರಿಮಳ ತುಂಬಿರ್ದ ಪುಷ್ಪವ ಧರಿಸಿ, ದಶವಾಯುಗಳ ಗುಣಧರ್ಮಂಗಳ ಜ್ಞಾನಾಗ್ನಿಯೊಳು ನೀಡಿ, ದಶಾಂಗದ ಸದ್ವಾಸನೆಯ ಧೂಪವ ಧರಿಸಿ, ಹೃದಯವೆಂಬ ಪ್ರಣತಿಯಲ್ಲಿ ದೃಢಚಿತ್ತವೆಂಬ ಬತ್ತಿಯನಿರಿಸಿ, ಅರುಹೆಂಬ ತೈಲವನೆರದು, ಮಹಾಜ್ಞಾನವೆಂಬ ಜ್ಯೋತಿಯ ಮುಟ್ಟಿಸಿ ಅದರಿಂದೊದಗಿದ ಏಕಾರತಿ ತ್ರಿಯಾರತಿ ಪಂಚಾರತಿ ಕಡ್ಡಿ ಬತ್ತಿ ಮೊದಲಾದ ಮಹಾಪ್ರಕಾಶದ ದೀಪವ ಧರಿಸಿ, ಕ್ರಿಯಾ ಜ್ಞಾನ ಇಚ್ಫಾ ಆದಿ ಪರ ಚಿತ್‍ಶಕ್ತಿ ಮೊದಲಾದವರು ಆರತಿಯ ಪಿಡಿದಿಹರು. ಆ ಮೇಲೆ ಪಾದತೀರ್ಥವ ಸಲಿಸಿ, ಮತ್ತೆ ಐವತ್ತು ದಳದಲ್ಲಿರ್ದ ಐವತ್ತು ರುದ್ರಕನ್ನಿಕೆಯರು ಅಡುಗೆಯ ಮಾಡಿ, ಅವರಿಗೆ ಇಚ್ಫಾಪದಾರ್ಥವ ನೀಡುತ್ತಿಹರು. ಅವರ ಒಕ್ಕುಮಿಕ್ಕ ಪ್ರಸಾದವನುಂಡು ಫಲದಾಕಾಂಕ್ಷೆಗಳಿಲ್ಲದೆ ಉಲುಹಡಗಿದ ನಿಜ ಪ್ರಭಾಲತೆ ಪರ್ಣದ ವೀಳ್ಯವನಿತ್ತು ಅವರ ತಾಂಬೂಲ ಪ್ರಸಾದವ ಕೊಂಡು ಪರಿಣಾಮಿಸಿ ಮನ ಭಾವಂಗಳಿಂದ ಪ್ರತ್ಯಕ್ಷವಾಗಿ ಕಂಡು, ಧ್ಯಾನಿಸುವುದೇ ಧ್ಯಾನ ಯೋಗ. ಇನ್ನು ಧಾರಣಯೋಗದ ವಿವರ : ಕರದೊಳಗೆ ಇಷ್ಟಲಿಂಗವ ಮೂರ್ತವ ಮಾಡಿಸಿ ಮನದೊಳಗೆ ಪ್ರಾಣಲಿಂಗವ ಮೂರ್ತವ ಮಾಡಿಸಿ ಭಾವದೊಳಗೆ ತೃಪ್ತಿಲಿಂಗವ ಮೂರ್ತವ ಮಾಡಿಸಿ ಕರ ಮನ ಭಾವದೊಳಗೆ ಪ್ರತ್ಯಕ್ಷವಾಗಿ ಕಂಡು ಧರಿಸಿಕೊಂಡಿಪ್ಪುದೀಗ ಧಾರಣಯೋಗ. ಇನ್ನು ಸಮಾಧಿಯೋಗದ ವಿವರ : ಆ ಇಷ್ಟ ಪ್ರಾಣ ಭಾವಲಿಂಗವ ಏಕವ ಮಾಡಿ, ಅಲ್ಲಿ ಐಕ್ಯವಾಗಿಪ್ಪುದೀಗ ಸಮಾಧಿಯೋಗ ಎಂದರುಹಿದಾತ ನಮ್ಮ ಶಾಂತಕೂಡಲಸಂಗಮದೇವ.
--------------
ಗಣದಾಸಿ ವೀರಣ್ಣ
ಶಿವಭಕ್ತ ಆವ ಊರೊಳಗಿದ್ದರೇನು ? ಆವ ಕೇರಿಯಲಿದ್ದರೇನು ? ಹೊಲಗೇರಿಯೊಳಗಿದ್ದರೇನು ? ಶಿವಭಕ್ತನಿದ್ದುದೇ ಕೈಲಾಸ ! ಆತನ ಮನೆಯೇ ಶಿವನ ಅರಮನೆ ! ಆತನ ಮನೆಯ ಸುತ್ತಮುತ್ತಲಿದ್ದ ಲೋಕವೆಲ್ಲ ಶಿವಲೋಕ ! ಸಾಕ್ಷಿ : 'ಚಾಂಡಾಲವಾಟಿಕಾಯಾಂ ಚ ಶಿವಭಕ್ತಃ ಸ್ಥಿತೋ ಯದಿ | ಅತ್ಯ್ರಾಪಿ ಶಿವಲೋಕಃ ಸ್ಯಾತ್ ತದ್ಗøಹಂ ಶಿವಮಂದಿರಂ ||' ಎಂದುದಾಗಿ, ಇಂತಪ್ಪ ಶಿವಭಕ್ತನ ಅಂಗಳವ ಕಂಡಡೆ ಕೋಟಿ ಬ್ರಹ್ಮಹತ್ಯ ಕೋಟಿ ಶಿಶುಹತ್ಯ ಇವೆಲ್ಲ ಅಳಿದುಹೋಗುವವು. ಅವರಿಗೆ ಸಾಷ್ಟಾಂಗ ನಮಸ್ಕಾರ ಮಾಡಿದವರಿಗೆ ಅಷ್ಟೈಶ್ವರ್ಯ ಅಷ್ಟಮಹಾಸಿದ್ಧಿ ಫಲವು ತಪ್ಪದು. ಅವರ ಒಕ್ಕುಮಿಕ್ಕ ಪ್ರಸಾದವ ಕೊಂಡಡೆ ಸದ್ಯೋನ್ಮುಕ್ತರಪ್ಪುದು ತಪ್ಪದು. ಇಂತಪ್ಪ ಶಿವಭಕ್ತರಿಗೆ ಏನೆಂದು ಉಪಮಿಸುವೆನಯ್ಯ ಆತನು ಮಹಾದೇವನಲ್ಲದೆ ಬೇರುಂಟೆ ? ಆತ ಅಗಮ್ಯ ಅಗೋಚರ ಅಪ್ರಮಾಣ ಆನಂದಮಹಿಮನು. ಅಂತಪ್ಪ ಸದ್ಭಕ್ತನ ಶ್ರೀಚರಣವ ಎನ್ನೊಳಗೆ ತೋರಿದಾತ ನಮ್ಮ ಶಾಂತಕೂಡಲಸಂಗಮದೇವ.
--------------
ಗಣದಾಸಿ ವೀರಣ್ಣ
ಅಯ್ಯ! ಶ್ರೀಗುರುಲಿಂಗಜಂಗಮದ ವೇಧಾಮಂತ್ರಕ್ರಿಯಾದೀಕ್ಷೆಗೆ ಹೊರಗಾದ ಭುವನದ ಶೈವದೈವದಾರ್ಚನೆ ಪೂಜೆಯ ಮಾಡಿ, ಅದರುಚ್ಛಿಷ್ಟವ ಭುಂಜಿಸುವದಂಗಾಚಾರ. ಅದನುಳಿದು ಶುದ್ಧಸಿದ್ಧಪ್ರಸಿದ್ಧಪ್ರಸಾದಸ್ವರೂಪವಾದ ಅನಾದಿಗುರುಲಿಂಗಜಂಗಮದ ಅರ್ಚನೆ ಪೂಜೆಯ ಮಾಡಿ ಕಿಂಕರ್ವಾಣದಿಂದ ಅವರ ಒಕ್ಕುಮಿಕ್ಕ ಪ್ರಸಾದವ ಹಾರೈಸುವುದೆ ಲಿಂಗಾಚಾರ. ಈ ಭೇದವ ತಿಳಿದು ಪಂಚಾಚಾರ ಆಚರಣೆಗೆ ತಂದು, ಸಪ್ತಾಚಾರವ ಸಂಬಂಧವಿಟ್ಟು, ಅಷ್ಟಾವರಣದ ಕಲೆನೆಲೆಗಳ ಒಳಗು-ಹೊರಗು ಎನ್ನದೆ, ಸದ್ಗುರುಮುಖದಿಂದ ಆಚರಣೆ-ಸಂಬಂಧವ ತಿಳಿದು, ಸದ್ಭಕ್ತಿ-ಸಮ್ಯಜ್ಞಾನ-ವೈರಾಗ್ಯ-ಷಟ್ಸ್ಥಲಮಾರ್ಗವ ಹಿಡಿದು, ನಿಜಾಚರಣೆಯಲ್ಲಿ ಆಚರಿಸುವರೆ ಶಿವಶಕ್ತಿ, ಶಿವಭಕ್ತ, ಶಿವಜಂಗಮವಲ್ಲದೆ, ಉಳಿದ ವೇಷಧಾರಿಗಳೆಲ್ಲ ಎನ್ನೊಡೆಯ ಪ್ರಮಥಗಣಾಚಾರಕ್ಕೆ ಹೊರಗೆಂದಾತನಂಬಿಗರ ಚೌಡಯ್ಯನು.
--------------
ಅಂಬಿಗರ ಚೌಡಯ್ಯ
ಕಾಲಿಲ್ಲವೆಂಬರಯ್ಯಾ ಪ್ರಭುದೇವರ, ಸಂಸಾರಸೂತಕವ ಮೆಟ್ಟನಾಗಿ. ಕೈಯಿಲ್ಲವೆಂಬರಯ್ಯಾ ಪ್ರಭುದೇವರ ಪರಧನವ ಕೊಳ್ಳನಾಗಿ. ಕಿವಿಯಿಲ್ಲವೆಂಬರಯ್ಯಾ ಪ್ರಭುದೇವರ ಅನ್ಯವ ಕೇಳನಾಗಿ. ಮೂಗಿಲ್ಲವೆಂಬರಯ್ಯಾ ಪ್ರಭುದೇವರ ದುರ್ಗಂಧಕ್ಕೆಳಸನಾಗಿ. ಎದೆಯಿಲ್ಲವೆಂಬರಯ್ಯಾ ಪ್ರಭುದೇವರ ಪರಸ್ತ್ರೀಯನಪ್ಪನಾಗಿ. ಇದು ಕಾರಣ-ಕೂಡಲಚೆನ್ನಸಂಗಮದೇವಾ ಪ್ರಭುದೇವರ ಒಕ್ಕುಮಿಕ್ಕ ಪ್ರಸಾದವ ಕೊಂಡು ನಾನು ಧನ್ಯನಾದೆನು ಕಾಣಾ ಸಂಗನಬಸವಣ್ಣಾ.
--------------
ಚನ್ನಬಸವಣ್ಣ
>ಶೈವ ಸೈವೆರಗಾದ, ಪಾಶುಪತಿ ಪಥವನರಿಯ ಕಾಳಾಮುಖಿ ಕಂಗೆಟ್ಟ, ಮಹಾವ್ರತಿ ಮದವೇರಿದ ಸನ್ಯಾಸಿ ಪಾಷಂಡಿಯಾದ, ಕಾಪಾಲಿ ಮರುಳಾಗಿ ತಿರುಗಿದ. ಈ ಆರು ಭಕ್ತಿಸ್ಥಲಕ್ಕೆ ಸಲ್ಲವು ಕೇಳಿರಣ್ಣಾ- ಏಳೇಳು ಭವದಲ್ಲಿ ಭವಿಯಾಗಿ ಬಂದು, ಶ್ರೀಗುರುಕಟಾಕ್ಷ ನಿರೀಕ್ಷಣೆಯಿಂದ ಪ್ರಾಣದಮೇಲೆ ಲಿಂಗಪ್ರತಿಷೆ*ಯಂ ಮಾಡಿಕೊಂಡು ಆರರಿಂದ ಮೀರಿದ ಸ್ಥಲವಿಟ್ಟು ವೀರಮಾಹೇಶ್ವರತ್ವಮಂ ಪಡೆದು ಮರಳಿ ತನ್ನ ಕುಲವನರಿಸಿದರೆ ಒಡೆದ ಮಡಕೆಯ ಓಡಿನಂತಹನು ಕೇಳಿರಣ್ಣಾ. ತನ್ನ ಕುಲವೆಂದು ಪ್ರಾಣಸ್ನೇಹ ಮಾಯಾಮೋಹ ಕಿಂಚಿತ್ ಮಾತ್ರ ಬೆರಸಿದರೆ, ಅವ ಪಂಚಮಹಾಪಾತಕಿ, ರೌರವ ನಾರಕಿ. ಅವನ ಭಕ್ತನೆಂದು ನೋಡಿದಡೆ, ನುಡಿಸಿದಡೆ, ಸಪಂಕ್ತಿಯಲ್ಲಿ ಕುಳಿತಡೆ, ಸಂಭಾಷಣೆಯ ಮಾಡಿದಡೆ, ಕೈವೊಡ್ಡಿ ಬೇಡಿದಡೆ ಅವಂಗೆ ಕುಂಭೀಪಾತಕ ನಾಯಕನರಕ ಕೇಳಿರಣ್ಣಾ. ಭಕ್ತಂಗೆ ಭವಿನೇಮಸ್ತರು ಸಲಲಾಗದು. ಭವಿ ಶ್ವಪಚ, ನೇಮಸ್ತ ಸಮ್ಮಗಾರ- ಇವರಿಬ್ಬರನು ಸತಿಸುತ ಮಿತ್ರರೆಂದು ಮಠಮಂ ಹೊಗಿಸಿದಡೆ ಅನ್ನಮನಿಕ್ಕಿದಡೆ; ಸುರೆಯ ಮಡಕೆಯಂ ತೊಳೆದು ಘೃತಮಂ ತುಂಬಿ ಶ್ವಾನನಂ ಕರೆದು ತಿನಿಸಿ, ಮಿಕ್ಕುದನು ತಾನು ಭುಂಜಿಸಿದಂತೆ ಕೇಳಿರಣ್ಣಾ. ಭಕ್ತ ಲಿಂಗಾರ್ಚನೆಯ ಮಾಡಿದ ಪವಿತ್ರ ಭಾಜನಮಂ ಶ್ವಾನ ಸೂಕರ ಕುಕ್ಕುಟ ಮಾರ್ಜಾಲಂಗಳು ಮುಟ್ಟಿದಡೆ ಅವರ ಕೂಡೆ ಸಹಭೋಜನವ ಮಾಡಿದಂತೆ. ಗುರುಲಿಂಗಜಂಗಮಕ್ಕೆ ಅರ್ಪಿತವ ಮಾಡಿ, ಒಕ್ಕುಮಿಕ್ಕ ಪ್ರಸಾದವ ಭೋಗಿಸುವಲ್ಲಿ ಪದಾರ್ಥವೆಂದು ಭಾವಿಸಿದಡೆ ಪ್ರಸಾದದ್ರೋಹ. ಜಂಗಮದಲ್ಲಿ ಅನೃತ ಅಸ್ಥಿರವಾಕ್ಯ ಪಂಕ್ತಿಭೇದ ಉದಾಸೀನ, ನಿರ್ದಯೆ, ಇಷ್ಟು (ಇರ್ದಡೆ) ಜಂಗಮದ್ರೋಹ. ಲಿಂಗದಲ್ಲಿ ತ್ರಿಕಾಲಪೂಜೆ ಪ್ರೀತಿ ಪ್ರೇಮ ಸ್ನೇಹ ಮೋಹ -ಇಂತೀ ಐದು ಇಲ್ಲದಿರುವದೆ ಲಿಂಗದ್ರೋಹ ಗುರುವಿನಲ್ಲಿ ಅಹಂಕಾರ, ಭಯವಿಲ್ಲದಿಹುದು, ಸಮಪಂಕ್ತಿಯಲ್ಲಿ ಕುಳ್ಳಿರುವುದು ಸಂಭಾಷಣೆಯ ಮಾಡುವುದು, ಕೈವೊಡ್ಡಿ ಬೇಡುವುದು- ಇಷ್ಟು ಗುರುದ್ರೋಹ. ಇದು ಕಾರಣ ಗುರುಲಿಂಗಜಂಗಮಕ್ಕೆ, ತನುಮನಧನವ ಸಮರ್ಪಿಸಿ ಏಕಲಿಂಗನಿಷಾ*ಪರನಾಗಿ, ಭಕ್ತಕಾಯ ಮಮಕಾಯವೆಂಬ ಶಬ್ದಕ್ಕೆ ಸಂದು, ಪ್ರಸಾದವೆಂದು ಕೊಂಡು ಎಂಜಲೆಂದು ಕೈತೊಳೆದಡೆ ಅಘೋರನರಕ ತಪ್ಪದು ಕೂಡಲಚೆನ್ನಸಂಗಮದೇವಯ್ಯಾ.
--------------
ಚನ್ನಬಸವಣ್ಣ
ಇನ್ನಷ್ಟು ... -->