ಅಥವಾ

ಒಟ್ಟು 36 ಕಡೆಗಳಲ್ಲಿ , 15 ವಚನಕಾರರು , 35 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಹೊಸತಿಲ ಪೂಜಿಸಿ ಹೊಡವಂಟು ಹೋದ ಒಕ್ಕಲಿತಿಯಂತಾುತ್ತೆನ್ನ ಭಕ್ತಿ. ಜಂಗಮವೆನ್ನೊಡೆಯರೆಂದು ಒಕ್ಕುದ ಕೊಂಡು ಉದಾಸೀನವ ಮಾಡಿದಡೆ, ಇಹಲೋಕಕ್ಕೆ ದೂರ, ಪರಲೋಕಕ್ಕೆ ದೂರ ! ಕೂಡಲಸಂಗಮದೇವ ಅಘೋರನರಕದಲ್ಲಿಕ್ಕುವ. 423
--------------
ಬಸವಣ್ಣ
ಒಕ್ಕುದ ಮಿಕ್ಕುದನುಂಡು ಕಿವಿಕಿವಿದಾಡುವೆ. ಶರಣರ ಮನೆಯ ಲೆಂಗಿಯ ಡಿಂಗರಿಗ ನಾನು, ಕೂಡಲಸಂಗನ ಶರಣರ ಮನೆಯ ಭಕ್ತಿಯ ಮರುಳ ನಾನು. 461
--------------
ಬಸವಣ್ಣ
ಕರ್ತನನರಿಯದವನು ವಿಪ್ರನಾದಡೇನು ! ಚತುರ್ವೇದಿಯಾದಡೇನು ಭುಕ್ತಿಕಾರಣ ಲೋಕದ ಇಚ್ಛೆಗೆ ನುಡಿದು ನಡೆವರಯ್ಯಾ ! ಭವಿಮಾಡಿದ ಪಾಕವ ತಂದು, ಲಿಂಗಕ್ಕರ್ಪಿಸುವ ಕಷ್ಟರ ಕಂಡು ನಾಚಿತ್ತೆನ್ನ ಮನವು, ಕೂಡಲಸಂಗನ ಶರಣರ ಒಕ್ಕುದ ಕೊಂಡು ಅನ್ಯವನಾಚರಿಸಿದಡೆ ತಪ್ಪದು ಸೂಕರ ಶುಚಿರ್ಭೂತತೆಯ ಪ್ರಾಣಿಯಂತೆ.
--------------
ಬಸವಣ್ಣ
ಪ್ರಥಮಕಾಲದಲ್ಲಿ ಅನಾದಿ ಜಂಗಮವು ಸಾವಿರೆಸಳಮಂಟಪದಲ್ಲಿ ನಿಂದು, ವಿಶ್ವತೋಮುಖವಾಗಿ ತೋರುತಿಪ್ಪನು ನೋಡಾ! ಆ ಜಂಗಮದ ಚಿದ್ವಿಲಾಸದಿಂದ, ಭಕ್ತಾಂಗನೆ ಉದಯವಾದಳು ನೋಡಾ! ಆ ಭಕ್ತಾಂಗನೆಯು ಒಂದಗಲನಿಡಲೊಡನೆ ಆ ಜಂಗಮ ಉಂಡು ಒಕ್ಕುದ ನಾನುಂಡು ಮಹಾಧನ್ಯನಾದೆ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಪಾದಾರ್ಚನೆಯ ಮಾಡುವೆನಯ್ಯಾ, ಪಾದೋದಕದ ಹಂಗಿಗೆ. ಶರಣಾರ್ಥಿಯೆಂಬೆನಯ್ಯಾ ಒಕ್ಕುದ ಕೊಂಬ ಹಂಗಿಗೆ. ಎಡೆಯಾಟ ಕಡಬಡ್ಡಿಯ ಕೊಟ್ಟು ಕೆಟ್ಟಿತ್ತು ನೋಡಾ, ಭಕ್ತಿ. ಕೂಡಲಸಂಗನ ಶರಣರ ನಿಲವನರಿಯದೆ, ಮುಯ್ಯಿಗೆ ಮುಯ್ಯಾಗಿ ಕೆಟ್ಟಿತ್ತಯ್ಯಾ ಎನ್ನ ಭಕ್ತಿ.
--------------
ಬಸವಣ್ಣ
ಎನ್ನ ಭವದ ಬಳ್ಳಿಯ ಬೇರು ಹರಿಯಿತ್ತಯ್ಯಾ ಸಂಗನಬಸವಣ್ಣನ ಒಕ್ಕುದ ಕೊಂಡೆನಾಗಿ. ಎನ್ನ ಮನದ ಕಪಟ ಹಿಂಗಿತ್ತಯ್ಯಾ ಚೆನ್ನಬಸವಣ್ಣನ ಕರುಣವ ಪಡೆದೆನಾಗಿ. ಎನ್ನಂತರಂಗದ ಸಂದುಸಂಶಯ ತೊಲಗಿತ್ತಿಂದು ಬಸವಣ್ಣಪ್ರಿಯ ಚೆನ್ನಸಂಗಯ್ಯನಲ್ಲಿ ಎನ್ನ ಪರಮಗುರು ಅಲ್ಲಮಪ್ರಭುದೇವರ ಶ್ರೀ ಚರಣವ ಕಂಡೆನಾಗಿ.
--------------
ನಾಗಲಾಂಬಿಕೆ
ನುಡಿದ ನುಡಿಗೆ ನಡೆ ಇಲ್ಲದಿದ್ದರೆ, ಮೃಡನ ಶರಣರು ಕಡೆನುಡಿದಲ್ಲದೆ ಮಾಣರು. ಎಮ್ಮ ಶರಣರು ಮತ್ತೆ ಹೊಡೆಗೆಡೆದು ಎನ್ನ ನುಡಿದು, ಹೊಡೆದು, ರಕ್ಷಿಸಿದಿರಲ್ಲ. ಎನ್ನ ಒಡೆಯರು ನೀವಹುದೆಂದು ಬಿಡದೆ ಅವರ ಬೇಡಿಕೊಂಬೆ. ಇದೀಗ ನಮ್ಮ ಶರಣರ ನಡೆನುಡಿ. ಅದಂತಿರಲಿ. ಅದಕೆ ನಮೋ ನಮೋ ಎಂಬೆ. ಈ ಪೊಡವಿಯೊಳು ಹುಟ್ಟಿದ ಮನುಜರೆಲ್ಲರು ಒಡೆಯರೆಂದು ಪೂಜೆಯಮಾಡಿ,ತುಡುಗುಣಿನಾಯಿಯಂತೆ ಒಕ್ಕುದ ಮಿಕ್ಕುದ ನೆಕ್ಕಿ, ತಮ್ಮ ಇಚ್ಛೆಗೆ ನುಡಿದರೆ ಒಳ್ಳಿದನೆಂಬರು. ಸತ್ಯವ ನುಡಿದರೆ ಸಾಯಲವನೆಲ್ಲಿಯ ಶರಣ ? ಇವನೆಲ್ಲಿಯ ಜಂಗಮ? ಇವರ ಕೂಡಿದ ಮನೆ ಹಾಳೆಂದು, ಕಂಡ ಕಂಡವರ ಕೂಡ ಹೇಳಿಯಾಡುವ, ಈ ಕಾಳುಮನುಜರನು ಲಿಂಗ ಜಂಗಮವೆಂದು ನುಡಿದು ಕೂಡಿಕೊಂಡು ಹೋದರೆ, ತನ್ನ ತನ್ನ ಪದಾರ್ಥವ ಹಿಡಿದರೆ, ಒಡೆಯನೆ ಬದುಕಿದೆ, ತ್ರಾಹಿ ಎಂಬ ಮೃಡಶರಣನು ಈ ಅಡ[ಗು] ಕಚ್ಚಿಕೊಂಡಿರುವ, ಹಡಿಕಿಮನುಜರನು ಸರಿಗಂಡಡೆ, ನಾಯಕ ನರಕದಲ್ಲಿಕ್ಕುವ, ನಮ್ಮ ಬಸವಪ್ರಿಯ ಕೂಡಲಚೆನ್ನಬಸವಣ್ಣಾ.
--------------
ಹಡಪದ ಅಪ್ಪಣ್ಣ
ಒಕ್ಕುದ ಮಿಕ್ಕುದ ಕೊಂಬೆನೆಂಬ ನಿಚ್ಚಳ ಶರಣನ ತೋರಾ, ಒಕ್ಕುದ ಮಿಕ್ಕುದ ಕೊಂಬೆನೆಂಬ ವಿವರವ ಬಲ್ಲಡೆ ಹೇಳಿರೆ ? ಒಕ್ಕುದೆಂಬುದೆ ಕಾಯ, ಮಿಕ್ಕುದೆಂಬುದೆ ಪ್ರಾಣ ಈ ಉಭಯವೆ ತಕ್ಕುದೆಂದರಿತುಕೊಳ್ಳ ಬಲ್ಲಡೆ ಸಿಕ್ಕುವ ಕಾಣಾ ಕೂಡಲಚೆನ್ನಸಂಗಮದೇವ.
--------------
ಚನ್ನಬಸವಣ್ಣ
ಶಿವಜನ್ಮ ಶಿವಕುಲಜನಾಗಿ ಶಿವಶರಣರ ಮನೆಯ ಒಕ್ಕುದ ಕೊಂಬುದು. ಭವಭಾರಿಯ ಮನೆಯಲು ಲಿಂಗಾರ್ಚನೆಯ ಮಾಡಲಾಗದು. ಭವಿವಿರಹಿತಂ, ಭವಿಪಾಕವ ತನ್ನ ಲಿಂಗಕ್ಕೆ ಕೊಟ್ಟಡೆ ರೌರವಂ ನರಕ ನೋಡಾ. ಅಸಂಸ್ಕಾರಿಕೃತಂ ಪಾಕಂ ಶಂಭೋರ್ನೈವೇದ್ಯಮೇವ ನ ಅನಿವೇದ್ಯಂ ತು ಭುಂಜೀಯಾನ್ನರಕೇ ಕಾಲಮಕ್ಷಯಂ ಇದು ಕಾರಣ ಕೂಡಲಚೆನ್ನಸಂಗಯ್ಯಾ, ಭವಿಯ ಸಂಗ ಪುನರಪಿ ಜನ್ಮ.
--------------
ಚನ್ನಬಸವಣ್ಣ
ಶಿವಭಕ್ತರ ಮನೆಗೆ ಹೋಗಿ ಒರಳಕ್ಕಿಯನಾಯ್ದು ತಂದು, ಲಿಂಗಕ್ಕೆ ಬೋನವ ಮಾಡಿ, ಜಂಗಮಕ್ಕೆ ನೀಡಿ, ಒಕ್ಕುದ ಕೊಂಡವ ಪೋಪನೈ ಕೈಲಾಸಕ್ಕೆ. ಅವರಿಗೆ ಮುಕ್ಕಣ್ಣನಲ್ಲದೆ ಉಳಿದ ಭುವನತ್ರಯದವರು ಸರಿಯಲ್ಲೆಂದಾತನಂಬಿಗ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ಸಕಲಪದಾರ್ಥದ್ರವ್ಯಂಗಳೆಲ್ಲವ ಲಿಂಗಕ್ಕೆ ಮುಟ್ಟಿಸಿ ಪ್ರಸಾದ ಮುಂತಾಗಿ ತಾ ಮುಟ್ಟಿಹೆನೆಂಬಲ್ಲಿ ತನ್ನ ಸಂಕಲ್ಪದ ಗುಣವೊ? ಘನಲಿಂಗಕ್ಕೆ ತೃಪ್ತಿಮಾಡಿ ಒಕ್ಕುದ ಕೊಂಡಿಹೆನೆಂಬ ಕಟ್ಟಳೆಯ ಗುಣವೊ ? ಇಂತೀ ಸತ್ಕ್ರೀಮಾರ್ಗಂಗಳನರಿದು ಅರ್ಪಿಸುವಲ್ಲಿ ಲಿಂಗಮುಂತಾಗಿ ತಾ ಕೊಂಬನಾಗಿ ಲಿಂಗಕ್ಕೆ ಮರೆದು ತಾ ಕೊಂಡಿಹೆನೆಂಬಲ್ಲಿ ಲಿಂಗಕ್ಕೆ ತಾನೊಳಗೊ ಹೊರಗೊ - ಎಂಬುದ ತಿಳಿದು, ಸಂದುದ ಕೈಕೊಂಡು, ಸಲ್ಲದೆ ಮರವೆಯಿಂದ ಬಂದುದ ಚರಲಿಂಗದ ಮುಖದಿಂದ ಸಂದುದ ಕೈಕೊಂಬುದು ಅಂಗಸೋಂಕು, ಆತ್ಮಸೋಂಕು, ಅರಿವುಸೋಂಕು, ಈ ತ್ರಿವಿಧ ಸೋಂಕು ಪರಿಪೂರ್ಣವಾದುದು ಅರ್ಪಿತ, ಅವಧಾನಿಯ ಕಟ್ಟು. ಹೀಂಗಲ್ಲದೆ ಮಿಕ್ಕಾದುದೆಲ್ಲವೂ ವಾಚಾಲಕರ ಕಟ್ಟುಕದ ಮಾತು. ಆ ಮಾತಿನ ಮಾಲೆಯೆಲ್ಲವೂ ಭ್ರಷ್ಟ, ಭೋಗಬಂಕೇಶ್ವರಲಿಂಗದಲ್ಲಿ ನಿಹಿತಾಚಾರಿಗಳ ಕಟ್ಟು.
--------------
ಶ್ರೀ ಮುಕ್ತಿರಾಮೇಶ್ವರ
ಬಿಡದೆ ಬಾಗಿಲ ಎಂಜಲ ಕಾ್ದುಪ್ಪೆನು, ಕಿಂಕರನು. ಕಿಂಕರರ ಮನೆಯಲ್ಲಿ ಕಿಂಕಿಲವನು ಆನು ಹಾರುತ್ತಿಪ್ಪೆನು, ನಮ್ಮ ಕೂಡಲಸಂಗನ ಶರಣರ ಒಕ್ಕುದ ಮಿಕ್ಕುದನುಂಬ ಕಿಂಕರ ನಾನು. 466
--------------
ಬಸವಣ್ಣ
ಆವ ಕುಲವಾದಡೇನು ಶಿವಲಿಂಗವಿದ್ದವನೆ ಕುಲಜನು, ಕುಲವನರಸುವರೆ ಶರಣರಲ್ಲಿ, ಜಾತಿಸಂಕರನಾದ ಬಳಿಕ ಶಿವಧರ್ಮಕುಲೇಜಾತಃ ಪುನರ್ಜನ್ಮ ವಿವರ್ಜಿತಃ± ಉಮಾ ಮಾತಾ ಪಿತಾ ರುದ್ರ ಐಶ್ವರಂ ಕುಲಮೇವ ಚ± ಎಂದುದಾಗಿ, ಒಕ್ಕುದ ಕೊಂಬೆನವರಲ್ಲಿ, ಕೂಸ ಕೊಡುವೆ. ಕೂಡಲಸಂಗಮದೇವಾ, ನಂಬುವೆ ನಿಮ್ಮ ಶರಣನು.
--------------
ಬಸವಣ್ಣ
ಅಯ್ಯಾ, ಏಳೇಳು ಜನ್ಮದಲ್ಲಿ ಶಿವಭಕ್ತನಾಗಿ ಬಾರದಿರ್ದಡೆ ನಿಮ್ಮಾಣೆ, ನಿಮ್ಮ ಪ್ರಮಥರಾಣೆ ! ನಿಮ್ಮ ಪ್ರಸಾದಕ್ಕಲ್ಲದೆ ಬಾಯ್ದೆರೆಯೆನಯ್ಯಾ. ಪ್ರಥಮಭವಾಂತರದಲ್ಲಿ ಶಿಲಾದನೆಂಬ ಗಣೇಶ್ವರನ ಮಾಡಿ, ಹೆಸರಿಟ್ಟು ಕರೆದು ನಿಮ್ಮ ಭೃತ್ಯನ ಮಾಡಿ ಎನನ್ನಿರಿಸಿಕೊಂಡಿರ್ದಿರಯ್ಯಾ. ಎರಡನೆಯ ಭವಾಂತರದಲ್ಲಿ ಸ್ಕಂದನೆಂಬ ಗಣೇಶ್ವರನ ಮಾಡಿ, ಹೆಸರಿಟ್ಟು ಕರೆದು ನಿಮ್ಮ ಕಾರುಣ್ಯವ ಮಾಡಿರಿಸಿಕೊಂಡಿರ್ದಿರಯ್ಯಾ. ಮೂರನೆಯ ಭವಾಂತರದಲ್ಲಿ ನೀಲಲೋಹಿತನೆಂಬ ಗಣೇಶ್ವರನ ಮಾಡಿ, ಹೆಸರಿಟ್ಟು ಕರೆದು ನಿಮ್ಮ ಲೀಲಾವಿನೋದದಿಂದಿರಿಸಿಕೊಂಡಿರ್ದಿರಯ್ಯಾ. ನಾಲ್ಕನೆಯ ಭವಾಂತರದಲ್ಲಿ ಮನೋಹರನೆಂಬ ಗಣೇಶ್ವರನ ಮಾಡಿ, ಹೆಸರಿಟ್ಟು ಕರೆದು ನಿಮ್ಮ ಮನಃಪ್ರೇರಕನಾಗಲೆಂದಿರಿಸಿಕೊಂಡಿರ್ದಿರಯ್ಯಾ. ಐದನೆಯ ಭವಾಂತರದಲ್ಲಿ ಕಾಲಲೋಚನನೆಂಬ ಗಣೇಶ್ವರನ ಮಾಡಿ, ಹೆಸರಿಟ್ಟು ಕರೆದು ಸರ್ವಕಾಲಸಂಹಾರವ ಮಾಡಿಸುತ್ತಿರ್ದಿರಯ್ಯಾ. ಆರನೆಯ ಭವಾಂತರದಲ್ಲಿ ವೃಷಭನೆಂಬ ಗಣೇಶ್ವರನ ಮಾಡಿ, ಹೆಸರಿಟ್ಟು ಕರೆದು ನಿಮಗೇರಲು ವಾಹನವಾಗಲೆಂದಿರಿಸಿಕೊಂಡಿರ್ದಿರಯ್ಯಾ. ಏಳನೆಯ ಭವಾಂತರದಲ್ಲಿ ಬಸವದಣ್ಣಾಯಕನೆಂಬ ಗಣೇಶ್ವರನ ಮಾಡಿ, ಹೆಸರಿಟ್ಟು ಕರೆದು ನಿಮ್ಮ ಒಕ್ಕುದ ಮಿಕ್ಕುದಕ್ಕೆ ಯೋಗ್ಯನಾಗಲೆಂದಿರಿಸಿಕೊಂಡಿರ್ದಿರಯ್ಯಾ. ಇದು ಕಾರಣ ಕೂಡಲಸಂಗಮದೇವಾ, ನೀವು ಬರಿಸಿದ ಭವಾಂತರದಲ್ಲಿ ನಾನು ಬರುತಿರ್ದೆನಯ್ಯಾ. 4
--------------
ಬಸವಣ್ಣ
ಆವ ಕಾಯಕವಾದಡೂ ಸ್ವಕಾಯಕವ ಮಾಡಿ ಗುರು ಲಿಂಗ ಜಂಗಮದ ಮುಂದಿಟ್ಟು, ಒಕ್ಕುದ ಹಾರೈಸಿ, ಮಿಕ್ಕುದ ಕೈಕೊಂಡು ವ್ಯಾಧಿ ಬಂದಡೆ ನರಳು, ಬೇನೆ ಬಂದಡೆ ಒರಲು, ಜೀವ ಹೋದಡೆ ಸಾಯಿ, ಇದಕ್ಕಾ ದೇವರ ಹಂಗೇಕೆ, ಭಾಪು ಲದ್ದೆಯ ಸೋಮಾ ?
--------------
ಗುರುಬಸವೇಶ್ವರ
ಇನ್ನಷ್ಟು ... -->