ಅಥವಾ

ಒಟ್ಟು 19 ಕಡೆಗಳಲ್ಲಿ , 7 ವಚನಕಾರರು , 13 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸಮಶೀಲ ನೇಮ ಒಂದಾದಲ್ಲಿ ಉಡುವ ತೊಡುವ ಕೊಡುವ ಕೊಂಬ ಅಡಿಯೆಡೆ ಮುಂತಾಗಿ ಸಕ್ಕರೆಯ ಬುಡಶಾಖೆಯಂತೆ ಮಧುರಕ್ಕೆ ಹೆಚ್ಚು ಕುಂದಿಲ್ಲದೆ ಇಪ್ಪ ನೇಮ ಕಟ್ಟಾಚಾರ ನಿಶ್ಚಯವಾದವಂಗೆ, ಅಂಗ ಹಲವಲ್ಲದೆ ಕುಂದಣ ಒಂದೆ ಭೇದ. ನೇಮ ಹಲವಲ್ಲದೆ ಜ್ಞಾನವೊಂದೆ ಭೇದ. ಭೂಮಿ ಹಲವಲ್ಲದೆ ಅಪ್ಪುವೊಂದೆ ಭೇದ, ಬಂದ ಯೋನಿ ಒಂದೆ. ತಾ ಮುಂದಿಕ್ಕುವ ಯೋನಿ ಒಂದಾದ ಕಾರಣ. ಹಿಟ್ಟು ಹಲವಾದಡೆ ಅಪ್ಪದಕಲ್ಲು ಒಂದೆಯಾದಂತೆ. ಇದು ತಪ್ಪದ ಆಚಾರ, ಇದಕ್ಕೆ ಮಿಥ್ಯತಥ್ಯವಿಲ್ಲ, ತಪ್ಪದು ನಿಮ್ಮಾಣೆ. ಆಚಾರಕ್ಕರ್ಹನಾದ ರಾಮೇಶ್ವರಲಿಂಗವೆ ನೀನೆ ಬಲ್ಲೆ.
--------------
ಅಕ್ಕಮ್ಮ
ಮಾಡುವ ಮಾಡಿಸಿಕೊಂಬ ಎರಡರ ಉಭಯ ಒಂದೆ. ಲಿಂಗವೊಂದೆ, ಜಂಗಮವೊಂದೆ, ಪ್ರಸಾದವೊಂದೆ. ಒಂದಾದಲ್ಲಿ ಎರಡಾಗಿ ಮಾಡುವ ಭಕ್ತ ನೀನೇ, ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ
ಉಪದೇಶವ ಮಾಡುವ ಗುರು ಒಬ್ಬನಲ್ಲದೆ ಇಬ್ಬರು ಸಾಲದು ನೋಡಾ. ಉಪದೇಶವ ಮಾಡುವ ಗುರು ಒಂದಾದಲ್ಲಿ ಲಿಂಗ ಒಂದು, ಲಿಂಗ ಒಂದಾದಲ್ಲಿ ದೀಕ್ಷೆ ಒಂದು, ದೀಕ್ಷೆ ಒಂದಾದಲ್ಲಿ ಪ್ರಸಾದ ಒಂದು, ಪ್ರಸಾದ ಒಂದಾದಲ್ಲಿ ಭಕ್ತಿ ಒಂದು, ಭಕ್ತಿ ಒಂದಾದಲ್ಲಿ ಮುಕ್ತಿ ಒಂದು, ಅದೆಂತೆಂದಡೆ; ಗುರುರೇಕೋ ಲಿಂಗಮೇಕಂ ದೀಕ್ಷಾಮೇಕಾಂ ಪ್ರಸಾದಕಂ ಏಕಮುಕ್ತಿಮಿದಂ ದೇವಿ ವಿಶೇಷಂ ಶುದ್ಧಭಕ್ತಿಮಾನ್ ದ್ವಯೋರ್ಗುರು ದ್ವಯೋರ್ಲಿಂಗ ದ್ವಯೋದೀಕ್ಷಾ ಪ್ರಸಾದಯೋಃ ಯಥಾದ್ವಯಮಿದಂ ದೇವಿ ವಿಶೇಷಂ ಪಾತಕಂ ಭವೇತ್ ಎಂದುದಾಗಿ ಗುರುವೆರಡಾದಲ್ಲಿ ಲಿಂಗವೆರಡು ಲಿಂಗವೆರಡಾದಲ್ಲಿ ದೀಕ್ಷೆ ಎರಡು ದೀಕ್ಷೆ ಎರಡಾದಲ್ಲಿ ಭಕ್ತಿ ಎರಡು ಭಕ್ತಿ ಎರಡಾದಲ್ಲಿ ಮುಕ್ತಿದೂರ ನೋಡ. ಇಂತೀ ಮುಕ್ತಿದೂರರಿಗೆ ಮುಂದೆ ನರಕ ತಪ್ಪದು ನೋಡಾ. ಇದು ಕಾರಣ ತನ್ನ ಸತಿ-ಸುತ ಪಿತ ಮಾತೆ ಸಹೋದರ ಭೃತ್ಯ ದಾಸಿಯರಿಗುಪದೇಶವ ಮಾಡುವ ಗುರು ಒಬ್ಬನಲ್ಲದೆ ಇಬ್ಬರು ಸಲ್ಲದು ನೋಡಾ. ಅದೆಂತೆಂದಡೆ; ಪತೀ ಪತ್ನಿ ಭ್ರಾತೃಪುತ್ರ ದಾಸಿ ಗೃಹಚರಾದಿನಾಂ ಏಕದೀಕ್ಷಾ ಭವೇಸಿದ್ದೇವಿ ವಿಶೇಷಂತು ಶುದ್ಧಭಕ್ತಿಮಾನ್ ಎಂದುದಾಗಿ, ಒಂದು ಮನೆಗೆ ಗುರುಲಿಂಗವ ಎರಡು ಮಾಡಿಕೊಂಡು ನಡೆದಡೆ ಕೂಡಲಚೆನ್ನಸಂಗಯ್ಯ ಅಘೋರನರಕದಲ್ಲಿಕ್ಕುವನು.
--------------
ಚನ್ನಬಸವಣ್ಣ
ಅವಧಿಜ್ಞಾನ ಅಂತರಿಕ್ಷಜ್ಞಾನ ಪವನಜ್ಞಾನ ಪರಸ್ವರೂಪಜ್ಞಾನ ಪರಬ್ರಹ್ಮಜ್ಞಾನ ಪರತತ್ವಜ್ಞಾನ ಸ್ವಯಜ್ಞಾನ ಸ್ವಾನುಭಾವಜ್ಞಾನ ಸರ್ವಪರಿಪೂರ್ಣಜ್ಞಾನ ದಿವ್ಯಜ್ಯಾನವೆಂದು ಸಂಕಲ್ಪಿಸುವಾಗ ಆ ಆತ್ಮಕ್ಕೆ ಅದು ನಿಜವೊ, ಅದರ ಪರಿಭ್ರಮಣವೊ? ಸಕಲ ಶಸ್ತ್ರಂಗಳಿಂದ ಕಡಿವಡಿದಂಗ ಆತ್ಮಬಿಡುವಲ್ಲಿ ಹಲವು ಶಸ್ತ್ರದ ಭೇದವೊ? ಅಂಗದ ಆಯಧ ಗಾಯದ ಭೇದವೊ? ಎಂಬುದ ತಿಳಿದು ಪದಪದಾರ್ಥಂಗಳ ಲಕ್ಷಿಸಿ ನಿರೀಕ್ಷಿಸಿಆರೋಪಿಸಬೇಕು. ಒಂದು ವಿಶ್ವವಾದಲ್ಲಿ, ವಿಶ್ವ ಒಂದಾದಲ್ಲಿ ಉಭಯದಲ್ಲಿ ನಿಂದು ತಿಳಿದಲ್ಲಿ ಗೋರಕ್ಷಪಾಲಕ ಮಹಾಪ್ರಭು ಸಿದ್ಧ ಸೋಮನಾಥಲಿಂಗವುಒಂದೆನಬೇಕು.
--------------
ಗೋರಕ್ಷ / ಗೋರಖನಾಥ
ಆಕಾರ ನಿರಾಕಾರವಿಲ್ಲದಂದು, ಹಮ್ಮುಬಿಮ್ಮುಗಳಿಲ್ಲದಂದು, ಜೀವ ಪರಮರಿಲ್ಲದಂದು, ಮನ ಮನನ ಮನುನೀಯವಿಲ್ಲದಂದು, ಶೂನ್ಯ ನಿಶೂನ್ಯ ನಾಮ ನಿರ್ನಾಮ ಇವೇನೂ ಇಲ್ಲದೆ, ಬಚ್ಚಬರಿಯ ಬಯಲೆ ಸಹಜದಿಂದ ಗಟ್ಟಿಗೊಂಡು, ಘನಲಿಂಗವೆಂಬ ಪುರುಷತತ್ತ್ವವಾಯಿತ್ತಯ್ಯ. ಆ ಘನಲಿಂಗದಿಂದ ಚಿಚ್ಛಕ್ತಿ ಜನಿಸಿದಳು. ಚಿಚ್ಚಕ್ತಿಯಿಂದ ಪರಶಕ್ತಿ ಪುಟ್ಟಿದಳು. ಪರಶಕ್ತಿಯಿಂದ ನಾದ ಬಿಂದು ಕಳೆಗಳಾದವು. ಅಕಾರವೇ ನಾದ, ಉಕಾರವೇ ಬಿಂದು, ಮಕಾರವೇ ಕಳೆ. ಇಂತೀ ತ್ರಿವಿಧಕ್ಕೆ ಪರಶಕ್ತಿಯೇ ತಾಯಿ. ಇಂತೀ ನಾಲ್ಕು ಒಂದಾದಲ್ಲಿ ಓಂಕಾರವಾಯಿತ್ತಯ್ಯ. ಮುಂದೀ ಪ್ರಣವ ತಾನೆ ಪಂಚಲಕ್ಷಣವಾಯಿತ್ತು. ಆ ಘನಲಿಂಗದಿಂದಲೇ ಪಂಚಸಾದಾಖ್ಯಮೂರ್ತಿಗಳಾದುವು. ಆ ಚಿಚ್ಛಕ್ತಿಯಿಂದಲೇ ಪಂಚಶಕ್ತಿಯರಾದರು. ಆ ಪಂಚಶಕ್ತಿಯರಿಂದಲೇ ಪಂಚಕಲೆಗಳಾದವು. ಆ ಪಂಚಲಕ್ಷಣವುಳ್ಳ ಮೂರ್ತಿ ತಾನೆ ತ್ರಯವಾದ ಭೇದವ ಹೇಳಿಹೆನು. ಅದೆಂತೆಂದಡೆ: ಶಿವತತ್ತ್ವ ಸದಾಶಿವತತ್ತ್ವ ಮಾಹೇಶ್ವರತತ್ತ್ವವೆಂದು ಮೂರುತೆರನಾಗಿಪ್ಪುದು. ಬಾಹ್ಯ ನಿಃಕಲತತ್ತ್ವವಾಗಿಪ್ಪುದು. ಒಂದು ಸಕಲನಿಃಕಲತತ್ತ್ವವಾಗಿಪ್ಪುದು. ಒಂದು ಸಕಲತತ್ತ್ವವಾಗಿಪ್ಪುದು. ಶಿವತತ್ತ್ವ ಏಕಮೇವ ಒಂದೆಯಾಗಿಪ್ಪುದು. ಸದಾಶಿವತತ್ತ್ವ ಐದುತೆರನಾಗಿಪ್ಪುದು. ಮಾಹೇಶ್ವರತತ್ವ ಇಪ್ಪತ್ತೆ ೈದು ತೆರನಾಗಿಪ್ಪುದು. ಹೀಂಗೆ ಶಿವತತ್ತ್ವ ಮೂವತ್ತೊಂದು ತೆರನೆಂದರಿವುದು. ಸ್ಥೂಲ, ಸೂಕ್ಷ ್ಮ, ಪರತತ್ವವೆಂಬ ಈ ಮೂರು ತತ್ತ್ವವೆ ಆರಾದ ಭೇದಮಂ ಪೇಳ್ವೆ. ಅದೆಂತೆಂದಡೆ: ಆ ಘನಲಿಂಗದ ಸಹಸ್ರಾಂಶದಲ್ಲಿ ಚಿತ್‍ಶಕ್ತಿ. ಚಿತ್‍ಶಕ್ತಿಯ ಸಹಸ್ರಾಂಶದಿಂದ ಪರಮೇಶ್ವರ. ಪರಮೇಶ್ವರನ ಸಹಸ್ರಾಂಶದಿಂದ ಪರಶಕ್ತಿ. ಆ ಪರಶಕ್ತಿಯ ಸಹಸ್ರಾಂಶದಿಂದ ಸದಾಶಿವನು. ಆ ಸದಾಶಿವನ ಸಹಸ್ರಾಂಶದಿಂದ ಆದಿಶಕ್ತಿ. ಆದಿಶಕ್ತಿಯ ಸಹಸ್ರಾಂಶದಿಂದ ಈಶ್ವರ. ಆ ಈಶ್ವರನ ಸಹಸ್ರಾಂಶದಿಂದ ಇಚ್ಛಾಶಕ್ತಿ. ಇಚ್ಛಾಶಕ್ತಿಯ ಸಹಸ್ರಾಂಶದಿಂದ ಮಾಹೇಶ್ವರ. ಮಾಹೇಶ್ವರನ ಸಹಸ್ರಾಂಶದಿಂದ ಜ್ಞಾನಶಕ್ತಿ. ಆ ಜ್ಞಾನಶಕ್ತಿಯ ಸಹಸ್ರಾಂಶದಿಂದ ರುದ್ರನು. ಆ ರುದ್ರನ ಸಹಸ್ರಾಂಶದಿಂದ ಕ್ರಿಯಾಶಕ್ತಿ. ಆ ಕ್ರಿಯಾಶಕ್ತಿಯ ಸಹಸ್ರಾಂಶದಿಂದ ಈಶಾನ್ಯಮೂರ್ತಿಯಾದನು. ಹೀಂಗೆ ಮೂರು ಆರು ತೆರನಾಯಿತ್ತಯ್ಯ. ಇನ್ನೀ ಲಿಂಗಂಗಳಿಗೆ ಸರ್ವ ಲಕ್ಷಣ ಸಂಪೂರ್ಣವ ಹೇಳಿಹೆನು. ಅದೆಂತೆಂದಡೆ: ಒಂದು ಮೂರ್ತಿ ಸರ್ವತೋಮುಖ ಸರ್ವತೋಚಕ್ಷು, ಸರ್ವತೋಬಾಹು, ಸರ್ವತೋಪಾದ, ಸರ್ವಪರಿಪೂರ್ಣನಾಗಿ ಮಾಣಿಕ್ಯವರ್ಣದ ಧಾತುವಿನಲ್ಲಿ ಭಾವಗಮ್ಯವಾಗಿ ಒಪ್ಪುತಿಪ್ಪುದು. ಅದರಿಂದಲಾದ ಮೂರ್ತಿಗೆ ಏಕ ಶಿರಸ್ಸು, ತ್ರಿಣೇತ್ರ, ಎರಡು ಹಸ್ತ, ಎರಡು ಪಾದ. ಮಿಂಚಿನವರ್ಣದ ಧಾತುವಿನಲ್ಲಿ ಜ್ಞಾನಗಮ್ಯವಾಗಿ ಒಪ್ಪುತಿಪ್ಪುದು. ಅದರಿಂದಲಾದ ಮೂರ್ತಿಗೆ ಎರಡು ಶಿರಸ್ಸು, ಆರು ಕಂಗಳು, ನಾಲ್ಕು ಭುಜ, ಎರಡು ಪಾದ, ಸುವರ್ಣದ ಧಾತುವಿನಲ್ಲಿ ಮನೋಗಮ್ಯವಾಗಿ ಒಪ್ಪುತಿಪ್ಪುದು. ಅದರಿಂದಲಾದ ಮೂರ್ತಿಗೆ ಮೂರು ಮುಖ, ಒಂಬತ್ತು ಕಂಗಳು, ಆರು ಭುಜ, ಎರಡು ಪಾದ, ಶ್ವೇತವರ್ಣದ ಧಾತುವಿನಲ್ಲಿ ಅಹಂಕಾರಗಮ್ಯವಾಗಿ ಒಪ್ಪುತಿಪ್ಪುದು. ಅದರಿಂದಲಾದ ಮೂರ್ತಿಗೆ ನಾಲ್ಕುಮುಖ, ಹನ್ನೆರಡು ಕಂಗಳು, ಎಂಟು ಭುಜ, ಎರಡು ಪಾದ, ಕುಂಕುಮವರ್ಣದ ಧಾತುವಿನಲ್ಲಿ ಬುದ್ಧಿಗಮ್ಯವಾಗಿ ಒಪ್ಪುತಿಪ್ಪುದು. ಅದರಿಂದಲಾದ ಮೂರ್ತಿಗೆ ಪಂಚಮುಖ, ದಶಭುಜ, ದಶಪಂಚನೇತ್ರ, ದ್ವಿಪಾದ, ತನುಯೇಕ, ಶುದ್ಧಸ್ಫಟಿಕವರ್ಣದ ಧಾತುವಿನಲ್ಲಿ ಚಿತ್ತಗಮ್ಯವಾಗಿ ಒಪ್ಪುತಿಪ್ಪುದು. ನಿರಾಕಾರವೇ ಸಾಕಾರವಾಗಿ ತೋರಿತ್ತು. ಸಾಕಾರ ನಿರಾಕಾರವೇಕವೆಂಬುದನು ಸ್ವಾನುಭಾವದಿಂದ ಅನುಭಾವಕೆ ತಂದೆನಯ್ಯ. ಇದು ತನ್ನಿಂದ ತಾನೆ ಸ್ವಯಂಭುವಾದ ಮೂರ್ತಿಯಲ್ಲದೆ ಮತ್ತೊಂದರಿಂದಾದುದಲ್ಲ. ಇಂತೆಸೆವ ಶಿವನ ಮುಖದಲ್ಲಿ ಒಗೆದ ಭೂತಂಗಳಾವವೆಂದಡೆ: ಸದ್ಯೋಜಾತ ಮುಖದಲ್ಲಿ ಪೃಥ್ವಿ. ವಾಮದೇವ ಮುಖದಲ್ಲಿ ಅಪ್ಪು. ಅಘೋರ ಮುಖದಲ್ಲಿ ಅಗ್ನಿ. ತತ್ಪುರುಷ ಮುಖದಲ್ಲಿ ವಾಯು. ಈಶಾನ್ಯ ಮುಖದಲ್ಲಿ ಆಕಾಶ. ಇಂತುದಯವಾದ ಪಂಚಭೂತಂಗಳು ಪಂಚವಿಂಶತಿತತ್ವವಾದ ಭೇದವ ಹೇಳಿಹೆನು. ಆವಾವೆಂದರೆ: ಪೃಥ್ವಿ ಅಪ್ಪು ತೇಜ ವಾಯು ಆಕಾಶ ಇಂತಪ್ಪ ಸ್ಥೂಲಭೂತಿಕವೈದು. ಪ್ರಾಣ ಅಪಾನ ವ್ಯಾನ ಉದಾನ ಸಮಾನವೆಂದು ವಾಯುಗಳೈದು. ವಾಕು ಪಾಣಿ ಪಾದ ಪಾಯು ಗುಹ್ಯವೆಂದು ಕರ್ಮೇಂದ್ರಿಯಂಗಳೈದು. ಶ್ರೋತ್ರ ತ್ವಕ್ಕು ನೇತ್ರ ಜಿಹ್ವೆ ಘ್ರಾಣವೆಂದು ಬುದ್ಧೀಂದ್ರಿಯಂಗಳೈದು. ಮನ ಬುದ್ಧಿ ಚಿತ್ತ ಅಹಂಕಾರವೆಂದು ಕರಣ ಚತುಷ್ಟಯ ನಾಲ್ಕು. ಜೀವನೊಬ್ಬನು; ಅಂತು ಆತ್ಮತತ್ತ್ವವಿಪ್ಪತ್ತೆ ೈದು. ವಿದ್ಯಾತತ್ತ್ವಹತ್ತು ತೆರನು. ಅದೆಂತೆಂದಡೆ: ಶಾಂತಾತೀತ, ಶಾಂತಿ, ವಿದ್ಯೆ, ಪ್ರತಿಷೆ*, ನಿವೃತ್ತಿ ಎಂದು ಕಲಾಶಕ್ತಿಯರೈದು. ಶಿವಸಾದಾಖ್ಯ ಅಮೂರ್ತಿಸಾದಾಖ್ಯ ಮೂರ್ತಿಸಾದಾಖ್ಯ ಕರ್ತೃಸಾದಾಖ್ಯ ಕರ್ಮಸಾದಾಖ್ಯವೆಂದು ಶಿವಾದಿಯಾದ ಸಾದಾಖ್ಯಮೂರ್ತಿಗಳೈದು. ಅಂತು ವಿದ್ಯಾತತ್ವ ಹತ್ತು ತೆರನು. ದ್ವಿತೀಯ ತತ್ತ್ವಮೂವತ್ತೆ ೈದು ತೆರನು. ಇವೆಲ್ಲಾ ತತ್ತ್ವಂಗಳಿಗನುತ್ತರತತ್ತ್ವವಾಗಿ ಶಿವತತ್ತ್ವವೊಂದು. ಅಂತು ತತ್ತ್ವ ಮೂವತ್ತಾರು. ಅಂತು ಆತ್ಮತತ್ತ್ವ ವಿದ್ಯಾತತ್ತ್ವ ಶಿವತತ್ತ್ವವೆಂಬ ತ್ರೆ ೈತತ್ತ್ವ ಮೂವತ್ತಾರು ತೆರನು. ಈ ತತ್ತ್ವಂಗಳಲ್ಲಿಯೇ ತತ್ತ್ವಮಸ್ಯಾದಿ ವಾಕ್ಯಾರ್ಥ ಕಾಣಲಾಯಿತ್ತು. ಅದು ಹೇಂಗೆಂದಡೆ: ತತ್‍ಪದ ತ್ತ್ವಂಪದ ಅಸಿಪದವೆಂದು ಮೂರು ತೆರನು. ತತ್‍ಪದವೆಂದು ತೂರ್ಯನಾಮದ ಶಿವತತ್ತ್ವವು. ತ್ವಂ ಪದವೆಂದು ಇಪ್ಪತ್ತೆ ೈದು ತೆರನಾಗುತಂ ಇದ್ದಂಥಾ ಆತ್ಮತತ್ತ್ವವು. ಅಸಿ ಪದವೆಂದು ಹತ್ತು ತೆರನಾಗುತಂ ಇದ್ದಂಥಾ ವಿದ್ಯಾತತ್ತ್ವವು. ತತ್‍ಪದವೇ ಲಿಂಗ, ತ್ವಂ ಪದವೇ ಅಂಗ, ಅಸಿ ಪದವೇ ಲಿಂಗಾಂಗ ಸಂಬಂಧ. ಈ ತ್ರಿವಿಧ ಪದವನೊಳಕೊಂಡು ನಿಂದುದೇ ಪರತತ್ತ್ವವಯ್ಯಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ನಾಮರೂಪು ಕ್ರೀಗಳೇನುಯೇನೂ ಇಲ್ಲದ ನಿತ್ಯನಿರಂಜನ ಪರವಸ್ತು ತಾನೆ ನಿರಂಜನಪ್ರಣವ ನೋಡಾ. [ಆ] ನಿರಂಜನ ಪರವಸ್ತುವಿನಲ್ಲಿ ಪರಮ ಚಿತ್ಕಲೆ ಉದಯವಾಗಿ, ಆ ಚಿದ್ರೂಪ ಕಲೆಯ ಶುದ್ಧಪ್ರಣವವೆನಿಸಿತ್ತು ನೋಡಾ. ಆ ಶುದ್ಧ ಪ್ರಣವದಲ್ಲಿ ಚಿತ್ತು; ಆ ಚಿತ್ತೇ ಸಚ್ಚಿದಾನಂದಸ್ವರೂಪವನುಳ್ಳುದಾಗಿ, ಚಿತ್‍ಪ್ರಣವವೆನಿಸಿತ್ತು ನೋಡಾ. ಆ ಚಿತ್ ಪ್ರಣವಸ್ವರೂಪವಪ್ಪ ಪರತತ್ವದಲ್ಲಿ ಪರಶಕ್ತಿ ಉದಯವಾಯಿತ್ತು. ಆ ಪರಶಕ್ತಿಯಿಂದ ನಾದ ಬಿಂದು ಕಳೆಗಳಾದವಯ್ಯ. ಆಕಾರವೇ ನಾದ, ಉಕಾರವೇ ಬಿಂದು, ಮಕಾರವೇ ಕಳೆ; ಇಂತೀ ಮೂರಕ್ಕೆ ಪರಶಕ್ತಿಯೇ ತಾಯಿ. ಇಂತೀ ನಾಲ್ಕು ಒಂದಾದಲ್ಲಿ ಪ್ರಣವವಾಯಿತ್ತಯ್ಯ. ಆ ಪ್ರಣವವೇ ಪಂಚಲಕ್ಷಣವಾಯಿತ್ತು; ಅದೆಂತೆಂದಡೆ: ತಾರಕಾಕೃತಿ, ದಂಡಕಾಕೃತಿ, ಕುಂಡಲಾಕೃತಿ, ಅರ್ಧಚಂದ್ರಾಕೃತಿ ಬಿಂದುಕೃತಿ. ಇಂತೀ ಪಂಚಾಕೃತಿಯಾಯಿತ್ತಯ್ಯ. ತಾರಕಾಕೃತಿಯಲ್ಲಿ ನಕಾರ ಜನನ; ದಂಡಕಾಕೃತಿಯಲ್ಲಿ ನಕಾರ ಜನನ. ಕುಂಡಲಾಕೃತಿಯಲ್ಲಿ ಶಿಕಾರ ಜನನ. ಅರ್ಧಚಂದ್ರಾಕೃತಿಯಲ್ಲಿ ವಕಾರ ಜನ. ಬಿಂದುಕೃತಿಯಲ್ಲಿ ಯಕಾರ ಜನನ. ಇಂತೀ ಪ್ರಣವದಿಂದ ಪಂಚಾಕ್ಷರ[ಂ]ಗಳುತ್ಪತ್ತಿಯಾದವಯ್ಯ. ಪ್ರಣವವೇ ಕೂಡಿ, ಷಡಕ್ಷರವೆಂದು ಹೇಳಲ್ಪಟ್ಟಿತಯ್ಯಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಶುಕ್ತಿಕರಂಡದಲ್ಲಿ ಬಿದ್ದ ಅಪ್ಪು, ಶುಕ್ತಿಯ ಭೇದವೋ? ಕರಂಡದ ಭೇದವೋ? ಅಪ್ಪುವಿನ ಭೇದವೋ? ಕಾಯದಲ್ಲಿದ್ದ ಭಾವ, ಭಾವದಲ್ಲಿದ್ದ ಜೀವ, ಜೀವದಿಂದ ಭಾವವಾಯಿತ್ತೋ, ಭಾವದಿಂದ ಕಾಯವಾಯಿತ್ತೋ? ಪಾಷಾಣವ ಕೂಡಿದ್ದ ರತಿ, ರತಿಯ ಕೂಡಿದ್ದ ಬೆಳಗು, ಬೆಳಗು ರತಿಯಿಂದಲಾಯಿತ್ತೋ, ರತಿ ಶಿಲೆಯಿಂದಲಾಯಿತ್ತೋ? ಇಂತೀ ಅಂಗ ತ್ರಿವಿಧ, ಇಂತೀ ಭಾವ ತ್ರಿವಿಧ, ಇಂತಿ ಜೀವ ತ್ರಿವಿಧ. ಇಂತೀ ತ್ರಿವಿಧ ಸ್ಥಲಂಗಳಲ್ಲಿ ಇಂತೀ ತ್ರಿವಿಧ ಸೂಕ್ಷ್ಮಂಗಳಲ್ಲಿ, ಇಂತೀ ತ್ರಿವಿಧ ಕಾರಣಂಗಳಲ್ಲಿ, ಅಳಿವ ಉಳಿವ ಉಭಯವನರಿತು ನೆನೆವುದು, ನೆನೆಯಿಸಿಕೊಂಬ ಉಭಯವನರಿತು, ಉಭಯ ಒಂದಾದಲ್ಲಿ ಪ್ರಾಣಲಿಂಗ. ಉಭಯಸಂಬಂಧ ಉಭಯ ಲೇಪವಾದಲ್ಲಿ, ಐಕ್ಯಾನುಭಾವ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಮುನ್ನಿನವರು ನಡೆದ ಪರಿಯಲ್ಲಿ ಇನ್ನು ನಡೆದರಾಗದೆಂಬ ಭಿನ್ನ ನುಡಿಯ ಕೇಳಲಾಗದು, ಹೇಳಲಾಗದು. ಅದೆಂತೆಂದಡೆ: ಶ್ರೀಗುರು ಕಾರುಣ್ಯವಂ ಪಡೆದು ಜ್ಞಾನಪ್ರತಿಷೆ*ಯಂ ತೋರಿದನಾಗಿ ಅನ್ಯಾಯದ ಗೊಡವೆಯಂ ಬಿಟ್ಟು ಚೆನ್ನಾಗಿ ಶಿವಭಕ್ತರಭಾವವ ಲಾಲಿಸಿ ಕೇಳಿಹೆನೆಂದಡೆ ಹೇಳುವೆ ಕೇಳಿರಣ್ಣಾ: ಶಿವಕಾರುಣ್ಯೇನ ಸಾಧ್ಯಾಹಿ ಗಾರುಡಂ ಚಾಷ್ಟಸಿದ್ಧಯಃ ಸ್ವರ್ಗಪಾತಾಳಸಾಧ್ಯಾಸ್ತು ಅಂಜನಂ ಘಟಿಕಾಸ್ತಥಾ ಎಂದುದಾಗಿ ಮಲಗಿದ್ದಲ್ಲಿ ಕನಸ ಕಂಡೆಹೆನೆಂಬರು, ಆ ಜೀವನು ಈ ಕಾಯ ನಾಶವ ಮಾಡಿ, ಆ ದ್ವೀಪಕ್ಕೆ ಹೋಗಿ ಕಂಡುಬಂದಿತ್ತೆ ? ಆ ದ್ವೀಪಕ್ಕೆ ಹೋದವು ಈ ಕಾಲೆ ? ಆ ದ್ವೀಪಕ್ಕೆ ಹೋದವು ಈ ಕಣ್ಣೆ ? ಅದು ಹುಸಿ, ದಿಟವೆಂದಡೆ : ಆ ದ್ವೀಪ ತನ್ನ ಹೃದಯಕಮಲ ಮಧ್ಯದಲುಂಟು, ಮತ್ತು ಸರ್ವಜಗವುಂಟು. ಅದೆಂತೆಂದಡೆ : ನಿದ್ರೆಗೈದಲ್ಲಿ ಕಣ್ಣಿನ ಜ್ಯೋತಿ ಹೃದಯಕಮಲ ಮಧ್ಯಕ್ಕಿಳಿದಲ್ಲಿ ಜ್ಯೋತಿ ಮನ ಒಂದಾಯಿತ್ತು; ಒಂದಾದಲ್ಲಿ ಶಿವನುಂಟು. ಆ ಶಿವನ ಹೃದಯದಲ್ಲಿ ಸಕಲ ಭುವನಾದಿ ಭುವನಂಗಳೆಲ್ಲ ಉಂಟು, ಅಲ್ಲಿ ಈ ವಾಯು ತಿರುಗುತ್ತಿದ್ದುದು, ಅಲ್ಲಿ ಕಂಡುದ ಕನಸೆಂದೆಂಬರು ತಲೆಯೊಳಗಣ ಸಹಸ್ರದಳಕಮಲ ಮಧ್ಯದಲ್ಲಿ ಸಕಲಾತ್ಮನು ಸುಖದಿಂದಿರುತ್ತಿಹನು ಅದೆಂತೆಂದಡೆ: ಅಂತಹ ಆತ್ಮನಿಲ್ಲದಿರ್ದಡೆ ನೀರಬೊಬ್ಬುಳಿಕೆಯ ಕಣ್ಣು ಕಾಣಬಲ್ಲುದೆ ? ಅಂತಹ ಆತ್ಮನಿಲ್ಲದಿರ್ದಡೆ ತೊಗಲ ಛಿದ್ರದ ಕಿವಿಗಳು ಕೇಳಬಲ್ಲುವೆ ? ಅಂತಹ ಆತ್ಮನಿಲ್ಲದಿರ್ದಡೆ ಹಡಿಕೆ ಮಲಿನ ಮೂಗು ಪರಿಮಳಂಗಳ ಕೊಳಬಲ್ಲುದೆ ? ಅಂತಹ ಆತ್ಮನಿಲ್ಲದಿರ್ದಡೆ ಮತಿಯು ಮನದೊಳಗಿರಬಲ್ಲುದೆ ? ಅದು ಹುಸಿ ಎಂದಡೆ, ಅಂಗುಷ್ಟದೊಳಗೆ ವಿಷವುಂಟು; ನಾಭಿಯಲ್ಲಿ ಅಗ್ನಿಯುಂಟು, ಕಂಕುಳಲ್ಲಿ ನಗೆಯುಂಟು, ಕಂಗಳಲ್ಲಿ ದುಃಖವುಂಟು; ಹುಬ್ಬಿನಲ್ಲಿ ಅಮೃತವುಂಟು, ಕೋಪವೆಂಬಾ ಕಿಚ್ಚು ಕೆದರಿ ಅಂಗುಷ್ಟದ ಮೇಲೆ ಬೀಳಲಿಕೆ, ಆ ವಿಷವು ಭುಗಿಲೆಂದೆದ್ದು ಸರ್ವಾಂಗಮಂ ಸುಡುತ್ತ ಬಪ್ಪಲ್ಲಿ ಜ್ಞಾನವೆಂಬ ಜ್ಯೋತಿ ಹೋಗಿ ತಲೆಯೊಳಡಗಿತ್ತು. ಅಂತಹ ಕೋಪವೆಂಬ ಹೊಲೆಯು ಶತಸಹಸ್ರ ಹೊನ್ನ ಕೊಟ್ಟಡೆ ತಿದ್ದುವುದೆ ? ತಿದ್ದದು. ಹಣೆಯ ಅಮೃತ ಬಂದು ಅಂಗುಷ್ಟದ ವಿಷದ ಮೇಲೆ ಬೀಳಲಿಕೆ ಪರುಷ ಬಂದು ಲೋಹಮಂ ಮುಟ್ಟಿದಂತಾಯಿತ್ತು. ಸರ್ವಮಂ ಕೊಂದ ಹಗೆಯಾದಡೆಯೂ ಹೋಹುದು. ಇಂತಪ್ಪ ಸರ್ವಾಂಗಲಿಂಗಾಂಗಿಗಳು ನಿಮ್ಮ ಶರಣರು. ಕೂಡಲಚೆನ್ನಸಂಗಮದೇವಾ
--------------
ಚನ್ನಬಸವಣ್ಣ
ಅಖಂಡ[ಗೋಳಕಾ]ಕಾರವಾದ ಸ[ಹಜ] ನಿ[ರಂಜನ] ವಸ್ತು ಲಿಂಗವೆನಿಸುವದಯ್ಯಾ. ನಿಂದಲ್ಲಿ ಒಂದಾಯಿತ್ತು , ಒಂದಾದಲ್ಲಿ ಉಭಯವಾಗಿತ್ತು. ಪೂಜಿಸಿದಲ್ಲಿ ಮೂರಾಯಿತ್ತು, ಆಚರಿಸಿದಲ್ಲಿ ಆರಾಯಿತ್ತು. ಆನಂದಿಸಿದಲ್ಲಿ ಮೂವತ್ತಾರು ಆಯಿತ್ತು. ಗುಣಿತ ಮಾಡಿದಲ್ಲಿ ಇನ್ನೂರ ಹದಿನಾರಾಯಿತ್ತು. ಅಖಂಡಲಿಂಗದಿಂದ ಚಿದ್ರೂಪವಾದ ಪರಿಯನು ಶಿಷ್ಯಂಗೆ ಗುರುವು ನಿರೂಪಿಸಿದ ಕಾಣಾ, ಜಂಗಮಲಿಂಗಪ್ರಭುವೆ.
--------------
ಜಂಗಮಲಿಂಗ ಪ್ರಭುವೆ
ಸುಖದುಃಖಗಳನರಿವುದು, ಕಾಯ ಜೀವ ಒಂದಾದಲ್ಲಿ. ಅಹುದು ಅಲ್ಲಾ ಎಂಬುದನರಿವುದು, ಜೀವ ಪರಮ ಒಂದಾದಲ್ಲಿ. ಕಂಡೆ ಕಾಣೆನೆಂಬುದು, ದೃಕ್ಕೂ ದೃಶ್ಯ ಒಂದಾದಲ್ಲಿ. ಇಂತೀ ಪೂರ್ವ ಉತ್ತರ ಮಧ್ಯದಲ್ಲಿ ನಿಶ್ಚಯವದೇಕೋ, ನಿಃಕಳಂಕ ಮಲ್ಲಿಕಾರ್ಜುನಾ ?
--------------
ಮೋಳಿಗೆ ಮಾರಯ್ಯ
ವಾದ್ಯವೊಂದರಲ್ಲಿ ಬಹುಸಂಚುಗಳ ಮುಟ್ಟಿ ತೋರುವುದು ಒಂದೋ, ಹಲವೋ ? ವೇಣು ಮುಹುರಿಗಳಲ್ಲಿ ಮೂವತ್ತೆರಡು ರಾಗಮಿಶ್ರಂಗಳ ಅರುವತ್ತುನಾಲ್ಕರಲ್ಲಿ ಕೂಡಿ ನುಡಿವುದು ಒಂದೋ, ಎರಡೋ ? ಅದರಂತೆ ಪರಿ ಭಿನ್ನವಾಗಿ, ಸ್ವಸ್ಥಾನಂಗಳಲ್ಲಿ ಮುಟ್ಟಿ, ವೇಧಿಸಿಕೊಂಬ ವಸ್ತು ಒಂದಾದಲ್ಲಿ, ಅದು ಖಂಡನೆಯ ಪತ್ರದ ಚಂಡಿಕಾ ಕಿರಣದಂತೆ. ಸಂಗವನರಿದಲ್ಲಿ, ನಿಃಕಳಂಕ ಮಲ್ಲಿಕಾರ್ಜುನಲಿಂಗ ಭಿನ್ನರೂಪನಲ್ಲ.
--------------
ಮೋಳಿಗೆ ಮಾರಯ್ಯ
ಅನ್ನಮಯ ಪ್ರಾಣಮಯ ಮನೋಮಯ ವಿಜ್ಞಾನಮಯ ಆನಂದಮಯ ಎಂಬ ಪಂಚಕೋಶ ಕೆಡುವುದಕ್ಕೆ ವಿವರ: ಸರ್ವಪದಾರ್ಥವನು ಸಾವಧಾನಮುಖದಲ್ಲಿ ಲಿಂಗಾರ್ಪಿತ ಮಾಡಿ ಲಿಂಗಭೋಗೋಪಭೋಗಿಯಾದಲ್ಲಿ ಅನ್ನಮಯಕೋಶ ಕೆಟ್ಟಿತ್ತು. ಪ್ರಾಣಮಯ ಲಿಂಗಾಂಗವಾಗಿ ಲಿಂಗಪ್ರಾಣಿಯಾದಲ್ಲಿ ಪ್ರಾಣಮಯಕೋಶ ಕೆಟ್ಟಿತ್ತು. ಮನೋಮಧ್ಯದಲ್ಲಿ ಲಿಂಗದ ನೆನಹು ನೆಲೆಗೊಂಡು ಮನವೆ ಲಿಂಗವಾದಲ್ಲಿ ಮನೋಮಯಕೋಶ ಕೆಟ್ಟಿತ್ತು. ಸುಜ್ಞಾನ ಪರಿಪೂರ್ಣವಾಗಿ ಜ್ಞಾನ ಜ್ಞೇಯಂಗಳೆರಡೂ ಒಂದಾದಲ್ಲಿ ವಿಜ್ಞಾನಮಯಕೋಶ ಕೆಟ್ಟಿತ್ತು. ಪರಮಾನಂದ ಪದದಲ್ಲಿ ಓಲಾಡುತ್ತ ಆ ಶಿವಾನಂದದಲ್ಲಿ ಇರಲಿಕ್ಕಾಗಿ ಆನಂದಮಯಕೋಶ ಕೆಟ್ಟಿತ್ತು. ಇಂತೀ ಪಂಚಕೋಶ ಪ್ರಕೃತಿಗುಣ ಕೆಟ್ಟು ಲಿಂಗಗುಣ ನಿಂದುದು, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ, ನಿಮ್ಮ ಶರಣಂಗೆ.
--------------
ಸ್ವತಂತ್ರ ಸಿದ್ಧಲಿಂಗ
ನಿಃಕಲ ಶಿವತತ್ವದಲ್ಲಿ ಜ್ಞಾನಚಿತ್ತು ಉದಯವಾಯಿತ್ತು. ಆ ಚಿತ್ತಿನಿಂದ ಆಕಾರ ಉಕಾರ ಮಕಾರಗಳೆಂಬ ಅಕ್ಷರತ್ರಯಂಗಳಾದವು. ಅಕಾರವೇ ನಾದ, ಉಕಾರವೇ ಬಿಂದು, ಮಕಾರವೇ ಕಳೆ. ಇಂತೀ ತ್ರಿವಿಧಕಕ್ಕೆ ತಾಯಿ ಚಿತ್ತು. ಇಂತೀ ನಾಲ್ಕು ಒಂದಾದಲ್ಲಿ ಓಂಕಾರವೆಂಬ ಪ್ರಣವದುತ್ಪತ್ತಿಯಾಯಿತ್ತು. ಆ ಓಂಕಾರವೆಂಬ ಪ್ರಣವವೇ, ಅಖಂಡ ಪರಿಪೂರ್ಣ ಗೋಳಕಾಕಾರ ತೇಜೋಮೂರ್ತಿಯಪ್ಪ ಮಹಾಲಿಂಗನೋಡಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
-->