ಅಥವಾ

ಒಟ್ಟು 68 ಕಡೆಗಳಲ್ಲಿ , 22 ವಚನಕಾರರು , 55 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸಮಶೀಲ ನೇಮ ಒಂದಾದಲ್ಲಿ ಉಡುವ ತೊಡುವ ಕೊಡುವ ಕೊಂಬ ಅಡಿಯೆಡೆ ಮುಂತಾಗಿ ಸಕ್ಕರೆಯ ಬುಡಶಾಖೆಯಂತೆ ಮಧುರಕ್ಕೆ ಹೆಚ್ಚು ಕುಂದಿಲ್ಲದೆ ಇಪ್ಪ ನೇಮ ಕಟ್ಟಾಚಾರ ನಿಶ್ಚಯವಾದವಂಗೆ, ಅಂಗ ಹಲವಲ್ಲದೆ ಕುಂದಣ ಒಂದೆ ಭೇದ. ನೇಮ ಹಲವಲ್ಲದೆ ಜ್ಞಾನವೊಂದೆ ಭೇದ. ಭೂಮಿ ಹಲವಲ್ಲದೆ ಅಪ್ಪುವೊಂದೆ ಭೇದ, ಬಂದ ಯೋನಿ ಒಂದೆ. ತಾ ಮುಂದಿಕ್ಕುವ ಯೋನಿ ಒಂದಾದ ಕಾರಣ. ಹಿಟ್ಟು ಹಲವಾದಡೆ ಅಪ್ಪದಕಲ್ಲು ಒಂದೆಯಾದಂತೆ. ಇದು ತಪ್ಪದ ಆಚಾರ, ಇದಕ್ಕೆ ಮಿಥ್ಯತಥ್ಯವಿಲ್ಲ, ತಪ್ಪದು ನಿಮ್ಮಾಣೆ. ಆಚಾರಕ್ಕರ್ಹನಾದ ರಾಮೇಶ್ವರಲಿಂಗವೆ ನೀನೆ ಬಲ್ಲೆ.
--------------
ಅಕ್ಕಮ್ಮ
ಶಿವನೆ, ನೀನು ಗುರುವಾದೆ ಲಿಂಗವಾದೆ ಜಂಗಮವಾದೆ ಭಕ್ತನಾದೆ. ಗುರುವಾಗಿದ್ದು ಭಕ್ತನೊಳಡಗಿದೆ. ಅದೇನು ಕಾರಣವೆಂದಡೆ ಗುರುವಿಂಗೆ ಅರ್ಥಪ್ರಾಣಾಭಿಮಾನವನು ಕೊಟ್ಟು, ಆತ ಭೋಗಿಸಿದ ಬಳಿಕ ತಾನಾ ಪ್ರಸಾದ ಮುಂತಾಗಿ ಭೋಗಿಸುವನಾಗಿ, ಆ ಗುರುವು ತನ್ನೊಳಡಗಿದ. ಲಿಂಗವಾಗಿದ್ದು ಭಕ್ತನೊಳಡಗಿದೆ. ಅದೇನು ಕಾರಣವೆಂದಡೆ ಲಿಂಗಕ್ಕೆ ಅರ್ಥಪ್ರಾಣಾಭಿಮಾನವನು ಕೊಟ್ಟು, ಆತ ಭೋಗಿಸಿದ ಬಳಿಕ ತಾನಾ ಪ್ರಸಾದ ಮುಂತಾಗಿ ಭೋಗಿಸುವನಾಗಿ, ಆ ಲಿಂಗವು ಭಕ್ತನೊಳಡಗಿದ. ಜಂಗಮವಾಗಿದ್ದು ಭಕ್ತನೊಳಡಗಿದೆ. ಅದೇನು ಕಾರಣವೆಂದಡೆ ಜಂಗಮಕ್ಕೆ ಅರ್ಥಪ್ರಾಣಾಭಿಮಾನವನು ಕೊಟ್ಟು, ಆ ಜಂಗಮವು ಭೋಗಿಸಿದ ಬಳಿಕ ತಾನಾ ಪ್ರಸಾದ ಮುಂತಾಗಿ ಭೋಗಿಸುವನಾಗಿ, ಆ ಜಂಗಮವು ಭಕ್ತನೊಳಡಗಿದ. ಇಂತಡಗುವರೆ ಹಿರಿಯರು; ಇಂತಡಗುವರೆ ಗುರುವರು; ಇಂತಡಗುವರೆ ಮಹಿಮರು; ಇವರಿಗೆ ಭಾಜನವೊಂದೆ ಭೋಜನವೊಂದೆ. ಈ ನಾಲ್ಕು ಒಂದಾದ ಘನಕ್ಕೆ ಪರಿಯಾಣಬೇರೆಂಬ ಶಾಸ್ತ್ರದ ಸೂತಕಿಗಳನೆನಗೆ ತೋರದಿರಯ್ಯಾ, ಮಸಣಯ್ಯಪ್ರಿಯ ಗಜೇಶ್ವರಾ.
--------------
ಗಜೇಶಮಸಣಯ್ಯಗಳ ಪುಣ್ಯಸ್ತ್ರೀ
ಪರಮಗುರು ಲಿಂಗಜಂಗಮವ ನಿಜವಿಶ್ವಾಸ ನೈಷ್ಠೆಯೊಳ್ ಮೂರ್ತಿಗೊಳಿಸಿ ಅರ್ಚಿಸುವ ಸುಚಿತ್ತಕಮಲದಳಂಗಳೆಲ್ಲ ಒಂದೊಡಲಾಗಿ, ಭಕ್ತನ ಕರಕಮಲ, ಜಂಗಮದ ಚರಣಕಮಲ, ಈ ನಾಲ್ಕರಲ್ಲಿ ಸಂಬಂಧವಾದ ಪ್ರಣಮದೊಳ್ ಕೂಡಿದ ನೇತ್ರಕಮಲ ಒಂದಾದ, ಸಮರಸೈಕ್ಯವಾಗಿ ಕೂಡಿದ ತ್ರಿಕೂಟಸಂಗಮಸ್ಥಾನವಿದೆ. ಅಷ್ಟಾಷಷ್ಟಿವರಕೋಟಿ ತೀರ್ಥಸ್ಥಾನವಿದೆ. ದೇವಗಂಗೆ ನೀಲಗಂಗೆ ಶಿವಗಂಗಾ ಸರಸ್ವತಿ ಯಮುನಾಸ್ಥಾನವಿದೆ. ಚಿತ್ಸೂರ್ಯ ಚಂದ್ರಾಗ್ನಿಮಂಡಲವಿದೆ. ಜ್ಯೋತಿರ್ಮಂಡಲ ಅಖಂಡಜ್ಯೋತಿರ್ಮಂಡಲ ಅಖಂಡಮಹಾಪರಿಪೂರ್ಣಜ್ಯೋತಿರ್ಮಂಡಲ ಸ್ಥಾನವಿದೆ. ರೋಷವೆಂಬ ಕಾಲರತಿಕ್ರೀಡಾಭ್ರಾಂತೆಂಬ ಕಾಮ ಆಸೆ ಆಮಿಷ ಲೋಭ ಮೋಹ ಮದ ಮತ್ಸರವೆಂಬ ಮಾಯಾ ಸಂಸಾರಸಂಕಲ್ಪ ವಿಕಲ್ಪಂಗಳ ಹಿಂದುಳಿದು, ಆದ್ಯರು ಭೇದ್ಯರು ವೇದ್ಯರು ಸಾಧ್ಯರುಯೆಂದವತರಿಸಿ, ಜಿಹ್ವಾತುರ ಗುಹ್ಯಾತುರ ಅರ್ಥಾತುರ ತ್ಯಾಗಾತುರ ಭೋಗಾತುರ ಯೋಗಾತುರ ಕಡೆಯಾದ ಅನಂತ ಆತುರಗಳೆಂಬ ಷಡಿಂದ್ರೀಕರಣ ವಿಷಯವ್ಯಾಪಾರಂಗಳ ಜೊಳ್ಳುಮಾಡಿ ತೂರಿ, ಜಗದಾದಿ ಗಟ್ಟಿಬೀಜವಾಗಿ, ನಿಂದ ನಿಲುಕಡೆಯ ಉಳಿದ ಉಳುವೆಯ ಮಹಾಘನದುನ್ಮನಿಸ್ಥಾನವಿದೆ. ಎನ್ನ ಭಕ್ತಿ-ಜಾÕನ-ವೈರಾಗ್ಯ-ಕ್ರಿಯಾಚಾರ ಸತ್ಯಶುದ್ಧ ನಿಜನಡೆನುಡಿಗಳ ಕರುಣಿಸಿ, ಅಂಗ-ಮನ-ಪ್ರಾಣ-ಭಾವ-ಕರಣೇಂದ್ರಿಗಳ ಪಾವನವೆನಿಸಿ ಸಲಹಿದ ಪರಮಾಮೃತಸುಧೆಯಿದೆ. ಭಕ್ತಸ್ಥಲ ವಿರಕ್ತಸ್ಥಲ ಪ್ರಸಾದಿಸ್ಥಲ ಪ್ರಾಣಲಿಂಗಿಸ್ಥಲ ಶರಣಸ್ಥಲ ಐಕ್ಯಸ್ಥಲ ನಿಃಕಳಂಕಸ್ಥಲ ನಿರ್ಮಾಯಸ್ಥಲ ನಿರಾಲಂಬಸ್ಥಲ ನಿಃಪ್ರಪಂಚಸ್ಥಲ ನಿಜಾನಂದಸ್ಥಲ ನಿರೂಪಾದ್ಥಿಕಸ್ಥಲ ನಿರ್ನಾಮಕಸ್ಥಲ ನಿರ್ಗುಣಸ್ಥಲ ಸಗುಣಸ್ಥಲ ನಿತ್ಯತೃಪ್ತಸ್ಥಲ ಕಾಯಾರ್ಪಣಸ್ಥಲ ಕರಣಾರ್ಪಣಸ್ಥಲ ಭಾವಾರ್ಪಣಸ್ಥಲ ಪರಿಪೂರ್ಣಾರ್ಪಣಸ್ಥಲ ನಿರವಯಸ್ಥಲವೆ ಕಡೆಯಾದ ಏಕವಿಂಶತಿ ದೀಕ್ಷಾನುಭಾವ ಏಕವಿಂಶತಿ ಯುಗಂಗಳನೊಳಗೊಂಡು ಅಣುವಿಂಗೆ ಪರಮಾಣುವಾಗಿ, ಮಹತ್ತಿಂಗೆ ಘನಮಹತ್ತಾಗಿ, ಸೃಷ್ಟಿ ಸ್ಥಿತಿಲಯಂಗಳಿಗೆ ಕಾರಣಾರ್ಥ ಕಾಮಧೇನು ಕಲ್ಪವೃಕ್ಷ ಚಿಂತಾಮಣಿ ಪರಮಾನಂದ ಪಂಚಪರುಷದ ಖಣಿಯಿದೆಯೆಂದು ಪೂರ್ಣಾನುಭಾವಭರಿತವಾದ ನಿರ್ದೇಹಿಗಳೆ ನಿರವಯಪ್ರಭು ಮಹಾಂತಘನವೆಂಬೆ ಕಾಣಾ ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ.
--------------
ಮೂರುಸಾವಿರ ಮುಕ್ತಿಮುನಿ
ಘಟದೊಳಗೆ ರಸವಿದ್ದು, ರಸದೊಳಗೆ ಘಟವಿದ್ದು, ಸಂಗಗುಣದಿಂದ ನೀರಾಗಿ. ಸಂಗ ಹಿಂಗಲಿಕೆ ಉಭಯದಂಗ ಒಂದಾದ ತೆರನಂತೆ, ಈ ಗುಣ ಲಿಂಗಾಂಗಿಯ ಸಂಗದ ವಿವರ, ನಿಃಕಳಂಕ ಮಲ್ಲಿಕಾರ್ಜುನಲಿಂಗವ ಕೂಡಿದ ಪರಮಸುಖಿಯಂಗ.
--------------
ಮೋಳಿಗೆ ಮಾರಯ್ಯ
ಎರಡು ಒಂದಾದ ಬಳಿಕ ಅರ್ಚನೆ ಹಿಂಗಿತ್ತು. ಎರಡು ಒಂದಾದ ಬಳಿಕ ಅರ್ಪಿತ ಹಿಂಗಿತ್ತು. ಎರಡು ಒಂದಾದ ಬಳಿಕ ಆಚಾರ ಹಿಂಗಿತ್ತು. ಎರಡು ಒಂದಾದ ಬಳಿಕ ಅವಧಾನ ಹಿಂಗಿತ್ತು. ಎರಡು ಒಂದಾದ ಬಳಿಕ ಶಬ್ದಕ್ಕೆ ಇಂಬಿಲ್ಲ ರೂಹಿಸಲೆಡೆಯುಂಟೆ ಗುಹೇಶ್ವರಾ ?
--------------
ಅಲ್ಲಮಪ್ರಭುದೇವರು
ಹುಸಿಯಿಲ್ಲದ ಶಿಷ್ಯನು, ಮರಹಿಲ್ಲದ ಗುರುವಿನ ಪಾದವ ಹಿಡಿದಡೆ, ಕುರುಹಿಲ್ಲದ ಲಿಂಗವ ಕೊಡಲಿಕ್ಕಾಗಿ, ತೆರಹಿಲ್ಲದಪ್ಪಲೊಡನೆ ಬರಿದಾದವು ತನುಮನಪ್ರಾಣಂಗಳೆಲ್ಲವು. ಈ ಬೆಡಗಿನುಪದೇಶವ ಪಡೆದ ಶಿಷ್ಯನಲ್ಲಿ, ಗುರುವಡಗಿ ಗುರು ಶಿಷ್ಯನಾಗಿ, ಎರಡೂ ಒಂದಾದ ಪರಿಯನೇನೆಂದುಪಮಿಸುವೆನಯ್ಯಾ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನಲ್ಲೊಂದಾದ ಗುರುಶಿಷ್ಯರ?.
--------------
ಸ್ವತಂತ್ರ ಸಿದ್ಧಲಿಂಗ
ಲೋಕದ ನುಡಿ ತನಗೆ ಡೊಂಕು, ತನ್ನ ನುಡಿ ಲೋಕಕ್ಕೆ ಡೊಂಕು. ಊರ ಹೊದ್ದ, ಕಾಡ ಹೊದ್ದ, ಆಪ್ಯಾಯನ ಮುಕ್ತಿ ವಿರಹಿತ ಶರಣ. ಕಪಾಲದೊಳಗೆ ಉಲುಹಡಗಿದ, ಕೂಡಲಚೆನ್ನ[ಸಂಗ]ಯ್ಯನಲ್ಲಿ ಒಂದಾದ, ಲಿಂಗೈಕ್ಯವು.
--------------
ಚನ್ನಬಸವಣ್ಣ
ಅಂಗ ಲಿಂಗ್ವ ಒಂದಾದ ಬಳಿಕ [ಅಂ]ಗೇಂದ್ರಿಯಂಗಳಾಚರಿಸಲಾಗದು. ಅಂಗೇಂ್ರಯಂಗಳು ಹೋಗಿ ಲಿಂಗೇಂದ್ರಿಯಂಗಳಾಗಿ ಆಚರಿಸುವುದು. `ಘೃತೋ ಭೂತ್ವಾ ಕಥಂ ಕ್ಷೀರಂ ಭವತ್ಯೇವಂ ವರಾನನೇ' ಎಂಬಾಗಮೋಕ್ತಿ ಪುಸಿಯಾಯಿತ್ತೆ? ಆಗಿ ಆಚರಿಸಿದಡೆ ಭವ ಹಿಂಗದು ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
ಗುರು ಲಿಂಗ ಒಂದೆಂಬರು. ಗುರು ಲಿಂಗ ಒಂದಾದ ಠಾವ ತಿಳಿದು ನೋಡಿರೆ. ಗುರು ಕಾರುಣ್ಯವಾದ ಬಳಿಕ ಅಂಗದ ಮೇಲೆ ಲಿಂಗವಿರಬೇಕು. ಲಿಂಗವಿಲ್ಲದ ಗುರುಕಾರುಣ್ಯವು ಬತ್ತಿದ ಕೆರೆಯಲ್ಲಿ ತಾವರೆಯ ಬಿತ್ತದಂತೆ ಕಾಣಾ!ರಾಮನಾಥ.
--------------
ಜೇಡರ ದಾಸಿಮಯ್ಯ
ಕಾಯವೆಂಬ ಪಟ್ಟಣಕ್ಕೆ ಅಕಾಯನಿತ್ಯನೆಂಬರಸು ಕ್ಷಮೆ ದಮೆ ತಿತಿಕ್ಷೆ ಶಾಂತಿ ಉಪರತಿ ಸುಮನ ನಿರಹಂಕಾರಗಳೆಂಬ ಪರಿವಾರ. ಆ ಪಟ್ಟಣದ ಹೊರ ಒಳಯಕ್ಕೆ ಒಂಬತ್ತು ಬಾಗಿಲು. ಮಧ್ಯ ಒಳಯಕ್ಕೆ ನಾಲ್ಕು ಬಾಗಿಲು. ಆ ಅರಸಿನರಮನೆಯ ಸ್ವಯಂಭುನಾಥನ ಗರ್ಭಗೃಹಕ್ಕೆ ಎರಡು ಬಾಗಿಲು. ಮೇಲುಶಿಖರದಲೊಂದು ಬಾಗಿಲು ಉರಿಯನುಗುಳುವರು. ಆ ಪಟ್ಟಣದ ಅರಸು ಸ್ವಯಂಭುನಾಥನಿಗೆ ನಿತ್ಯ ನೇಮವ ಮಾಡಲೆಂದು ಗರ್ಭಗೃಹವ ಹೊಗಲೊಡನೆ ಆತನ ಕೈವಿಡಿದು ಉಭಯ ಬಾಗಿಲ ಹೊಕ್ಕು ಹೋಗಿ ಉಭಯ ನಿರ್ವಯಲಾದ ನಿಲವನುಪಮಿಸಬಹುದೇ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನಲ್ಲಿ ಒಂದಾದ ಲಿಂಗೈಕ್ಯವನು?
--------------
ಸ್ವತಂತ್ರ ಸಿದ್ಧಲಿಂಗ
ಇಲ್ಲ ಇಲ್ಲೆಂಬೊ ನಿರ್ಬೈಲೊಳು ತಾನೇನು ಇಲ್ಲದವಾಚ್ಯ ಸ್ವಯಂಭು ಬೈಲ್ಹೆಂಗಾದುದೊ ತಾನೇ ತಾನೆಂದರೆ | ಪಲ್ಲ | ನಿರುಪಮ ನಿಃಕಳ ಪರಬ್ರಹ್ಮವಾದುದು ತಾನೆ ತಾನೆ ಆ- ಪರಬ್ರಹ್ಮದೊಳಗೆ ಚಿತ್ಕಳೆ ಅರವು ಆದುದು ತಾನೆ ತಾನೆ ಅರವಿನೊಳು ಅರವು ಅರಿತುದೆ ಮನವಾದುದು ತಾನೆ ಆ ಅರಿತ ಮನವೆ ನೆನವಿಗೆ ಘನವಾದುದು ತಾನೆ ತಾನೆ ಘನವಾದ ಘನವೇ ತಾ ಘನಲಿಂಗವಾದುದು ತಾನೆ ತಾನೆ ಆ ಘನಲಿಂಗದೊಳಗೆ ತಾ ನವಲಿಂಗವಾದುದು ತಾನೆ ತಾನೆ ಆ ಘನಲಿಂಗವೇ ಅವನ ಅಂಗವಾದುದು ತಾನೆ ತಾನೆ ಘನ ನವಲಿಂಗವೇ ಬಹುಬಗೆಯಾದುದು ತಾನೆ ನವಶಕ್ತಿ ನವಭಕ್ತಿ ನವನಾದವಾದುದು ತಾನೆ ತಾನೆ ನವಚಕ್ರ ನವವರ್ಣ ನವಮಂತ್ರವಾದುದು ತಾನೆ ತಾನೆ ನವಹಸ್ತ ನವಮುಖ ನವದೈವವಾದುದು ತಾನೆ ತಾನೆ ಈ ನವರೂಪು ನವರುಚಿ ನವತೃಪ್ತಿಯಾದುದು ತಾನೆ ತಾನೆ ಮೂರಾರು ಮುಂದೆ ಮೂವತ್ತಾರಾದುದು ತಾನೆ ತಾನೆ ಈ ಮೂರಾರೇ ಇನ್ನೂರಾಹದಿನಾರಾದುದು ತಾನೆ ತಾನೆ ಮೂರಾರೇ ಹನ್ನೆರಡುನೂರಾ ತೊಂಬತ್ತಾರಾದುದು ತಾನೆ ತಾನೆ ಈ ಮೂರಾರೇ ಮೀರಿ ಈ ಜಗಮಯವಾದುದು ತಾನೆ ತಾನೆ ಒಂದೇ ಮೂರಾದುದು ಒಂದೇ ಆರಾದುದು ತಾನೆ ತಾನೆ ಆ ಒಂದೇ ಆರು ಮೂರು ಒಂದೇ ಬರಿ ಆದುದು ತಾನೆ ತಾನೆ ಒಂದಾದ ಅಂದದಾನಂದ ನಾಮವಾದುದು ತಾನೆ ತಾನೆ ಈ ಸಂದ ಮಹಾಂತನ ಕಂದನಾದುದು ತಾನೆ ತಾನೆ
--------------
ಮಡಿವಾಳಪ್ಪ / ಕಡಕೋಳ ಮಡಿವಾಳಪ್ಪ
ಈ ಬಚ್ಚಬರಿಯ ಬಯಲ ಕಂಡಿಹೆನೆಂದರೆ, ಕಾಣಬಾರದು. ಕೇಳಿಹೆನೆಂದರೆ ಕೇಳಬಾರದು, ಹೇಳಿಹೆನೆಂದರೆ ಹೇಳಬಾರದು. ಇವ ಮೂರರ ಕಾಳಿಕೆಯ ಕಳೆದು, ಈ ಹನ್ನೆರಡ ಜಾಣಿಯಲ್ಲಿ ದಾಂಟಿ, ಒಂದರ ಮೇಲೆ ನಿಂದು, ಅಂದವಳಿಯದೆ, ಬಿಂದು ತುಳುಕದೆ, ಅಂದಂದಿನ ಹೊಸಪೂಜೆಯ ನೋಡಿ, ಕಣ್ದೆರೆದು ಕರಗಿ ಒಂದಾದ ಶರಣರ ಚರಣವ ತೋರಿ ಬದುಕಿಸಯ್ಯಾ ಎನ್ನ , ಬಸವಪ್ರಿಯ ಕೂಡಲಚೆನ್ನಬಸವಣ್ಣಾ.
--------------
ಹಡಪದ ಅಪ್ಪಣ್ಣ
ಲಿಂಗ ಜಂಗಮ ಒಂದಾದ ಬಳಿಕ ಲಿಂಗಾರ್ಚನೆ ಸಲ್ಲದು ಜಂಗಮಕ್ಕೆ. ಲಿಂಗಾರ್ಚನೆ ಬೇಕು ಭಕ್ತಂಗೆ. ಲಿಂಗಾರ್ಚನೆ ವಿರಹಿತ ಭಕ್ತನ ಮುಖ ನೋಡಲಾಗದು, ನುಡಿಸಲಾಗದು, ಅವನ ಹೊರೆಯಲ್ಲಿರಲಾಗದಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
ಅಂತರಂಗದ ಅರಿವು, ಬಹಿರಂಗದ ಕ್ರಿಯೆ- ಈ ಉಭಯಸಂಪುಟ ಒಂದಾದ ಶರಣಂಗೆ ಹಿಂಗಿತ್ತು ತನುಸೂತಕ, ಹಿಂಗಿತ್ತು ಮನಸೂತಕ. ಕೂಡಲಚೆನ್ನಸಂಗಯ್ಯಲ್ಲಿ ಸಂಗವಾದುದು ಸರ್ವೇಂದ್ರಿಯ.
--------------
ಚನ್ನಬಸವಣ್ಣ
ಚೌದಳ ಷಡುದಳ ದಶದಳ ದ್ವಾದಶದಳ ಷೋಡಶದಳ ದ್ವಿದಳ, ಒಳಹೊರಗಣ ಸ್ಥಳಕುಳವನರಿದು, ಬೆಳಗುವ ಬೆಳಗ, ಹೊಳೆವ ಪ್ರಭೆ ಪ್ರಜ್ವಲಿಸಿ ಕಳವಳವಳಿದು, ಕಾಯದ ಕದಳಿಯ ಗೆಲಿದು, ಕರಗಿ ಒಂದಾದ ಶರಣನೆ ಹರನು, ಒಸವಪ್ರಿಯ ಕೂಡಲಸಂಗಮದೇವ ಪ್ರಭುವೆ.
--------------
ಹಡಪದ ಅಪ್ಪಣ್ಣ
ಇನ್ನಷ್ಟು ... -->