ಅಥವಾ

ಒಟ್ಟು 28 ಕಡೆಗಳಲ್ಲಿ , 12 ವಚನಕಾರರು , 18 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಂದೂ ನೀನೆ, ಇಂದೂ ನೀನೆ, ಎಂದೂ ನೀನೆ, ಕೇಳಾ ತಂದೆ. ನಿನ್ನ ಬೆಂಬಳಿವಿಡಿದ ಹಳೆಮಗಳಾನಯ್ಯ ಅಂದೂ ಇಂದೂ ಎಂದೂ ನಿನ್ನ ನಂಬಿದ ಒಲವಿನ ಶಿಶು ನಾನಯ್ಯ. ಒಂದಲ್ಲದೆ ಎರಡರಿಯೆನಯ್ಯಾ. ಎನ್ನ ತಂದೆ ಕೇಳಾ, ಚೆನ್ನಮಲ್ಲಿಕಾರ್ಜುನಾ ನಿಮ್ಮ ಎಂಜಲನುಂಬ ಹಳೆಯವಳಾನಯ್ಯಾ.
--------------
ಅಕ್ಕಮಹಾದೇವಿ
ಗುರುಪ್ರಸಾದ, ಲಿಂಗಪ್ರಸಾದ, ಜಂಗಮಪ್ರಸಾದ, ಅಚ್ಚಪ್ರಸಾದ, ಅರ್ಪಿತಪ್ರಸಾದ, ಸಹಭೋಜನ, ಆರರಲ್ಲಿ ಅರ್ಪಿತ, ಮೂರರಲ್ಲಿ ಮುಕ್ತವೆಂದು ಊರೆಲ್ಲರ ಮುಂದೆ ದೂರಿಯಾಡುವ ನಾಯಿಮನುಜರಿರಾ, ಹೀಗೇಕೆ ದೂರುವಿರಿ? ಗುರುವೆಷ್ಟು, ಲಿಂಗವೆಷ್ಟು, ಜಂಗಮವೆಷ್ಟು, ಪ್ರಸಾದವೆಷ್ಟು, ಅರ್ಪಿತವೆಷ್ಟು? ಇದರ ಅವಧಾನವನರಿದ ಶರಣಂಗೆ, ಒಂದಲ್ಲದೆ ಎರಡುಂಟೆ? ಅವು ಒಂದೆಂಬುವನಕ ಬಂಧನವು. ತತ್ವಾರ್ಥಕ್ಕೆ ಇದಿರಿಟ್ಟುಕೊಂಡಿಪ್ಪನಲ್ಲದೆ, ಅರಿದ ಶರಣಂಗೆ ಒಂದೆಂಬುದು ಸಂದೇಹ. ಈ ರೀತಿಯನರಿಯದೆ ತೂತುಬಾಯೊಳಗೆ ಮಾತಿಗೆ ತಂದು ನುಡಿದಾಡುವ ಪಾತಕರ ಮೆಚ್ಚುವನೆ, ನಮ್ಮ ಶರಣ ಬಸವಪ್ರಿಯ ಕೂಡಲಚೆನ್ನಬಸವಣ್ಣ ?
--------------
ಹಡಪದ ಅಪ್ಪಣ್ಣ
ನಿನ್ನಿನವರೂ ಇಂದಿನವರೂ ನಾಳಿನವರೂ ಹೋದ ದಾರಿ ಒಂದಲ್ಲದೆ ಎರಡಿಲ್ಲ ನೋಡೆಂದನಯ್ಯ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಘಟಪಟದ ಭಿತ್ತಿಯಂತೆ ಭಿನ್ನವೆಂಬ ಹಾಂಗೆ ಇಹುದು. ತಿಳಿದು ನೋಡಿದಡೆ ಭಿನ್ನವುಂಟೆ ? ಘಟದೊಳಗಣ ಬಯಲು, ಪಟದೊಳಗಣ ನೂಲು; ಭಿತ್ತಿಯ ಮೃತ್ತಿಕೆಯಂತೆ ಒಂದಲ್ಲದೆ ಎರಡಿಲ್ಲ. ದೇಹಿಗಳೊಳಗೆ ಗುಹೇಶ್ವರನಲ್ಲದೆ ಮತ್ತಾರೂ ಇಲ್ಲ.
--------------
ಅಲ್ಲಮಪ್ರಭುದೇವರು
ಸತ್ಯಸಹಜ ನಿತ್ಯ ಉತ್ತಮ ವಸ್ತು, ನಿಜತತ್ವವೆನಿಸುವ ಶಿವನು ಒಂದೇ ವಸ್ತು. ವೇದ, ಶಾಸ್ತ್ರ, ಪುರಾಣ, ಆಗಮ, ಅಷ್ಟಾದಶ ವಿದ್ಯೆಂಗಳು ವಾದಿಸಲು, ಅಂದೂ ಇಂದೂ ಶಿವತತ್ವ ಒಂದೇ ವಸ್ತುವೆಂದು ನಿರ್ಧರಿಸುವವು. ಸಕಲ ನಿಃಕಲದೊಳಗೆ ಉತ್ತಮೋತ್ತಮ ವಸ್ತುವೊಂದೇ. ಇದನರಿದು ನಿಶ್ಚೈಸುವ ವಿವೇಕವುಳ್ಳ ಮನ ಅಂದೂ ಇಂದೂ ಒಂದೇ. ಇದನೆಂತೂ ನೀವೇ ಬಲ್ಲರಿ. ಈ ಒಂದೊಂದರಲ್ಲೆ ಒಂದೊಂದ ಮಾಡಲು ಒಂದಲ್ಲದೆ ಮತ್ತೊಂದಿಲ್ಲ. ಇದಲ್ಲದೆ ಇನ್ನೊಂದುಂಟೆಂಬವಂಗೆ ಎರಡಲ್ಲದೆ ಒಂದಿಲ್ಲ. ಅವಂಗೆ ಅಧೋಗತಿ, ಅವನಜ್ಞಾನಿ. ಒಂದೆಂದರಿದವಂಗೆ ಜ್ಞಾನವಿದೆ, ಭಕ್ತಿಯಿದೆ, ಮುಕ್ತಿಯಿದೆ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.
--------------
ಉರಿಲಿಂಗಪೆದ್ದಿ
ಅಯ್ಯಾ ನಾ ಉತ್ತರವನೇರಿ ನೋಡಲಾಗಿ, ಊರೊಳಗಣ ಉಲುಹೆಲ್ಲ ನಿಂದಿತ್ತು. ಪಶ್ಚಿಮಕ್ಕಿಳಿದು ನೋಡಲಾಗಿ, ಪ್ರಾಣ ಪವನನ ಸುಳುಹು ನಿಂದಿತ್ತು. ಪೂರ್ವವ ಮೆಟ್ಟಿ ನೋಡಲಾಗಿ, ಆರು ನೆಲೆ ಮೂರಾಗಿದ್ದವು. ಅಯ್ಯಾ ನಾ ದಕ್ಷಿಣಕ್ಕೆ ಬಂದು ನೋಡಲಾಗಿ ಈರೇಳು ಭವನವು ಕುಕ್ಷಿಯೊಳಗೆ ನಿಕ್ಷೇಪವಾಗಿದ್ದಿತು. ಅದು ಹೇಗೆಂದಡೆ : ಇಹಲೋಕವು ತನ್ನೊಳಗೆ, ಪರಲೋಕವು ತನ್ನೊಳಗೆ, ಸಚರಾಚರವೆಲ್ಲ ತನ್ನೊಳಗೆ, ಶಿವಶಕ್ತಿಯು ತನ್ನೊಳಗೆ, ಭುವನಾದಿ ಭುವನಂಗಳು ತನ್ನೊಳಗೆ. ಅದು ಹೇಗೆಂದಡೆ : ಅದಕ್ಕೆ ದೃಷ್ಟವ ಹೇಳಿಹೆನು, ಬಲ್ಲವರು ತಿಳಿದುನೋಡಿ, `ಒಂ ಏಕಮೇವನದ್ವಿತೀಯ' ಎಂಬ ಶ್ರುತಿ ಕೇಳಿ ಬಲ್ಲಿರೆ. ಇಂತಪ್ಪ ಮನಕ್ಕೆ ಒಂದಲ್ಲದೆ ಎರಡುಂಟೆ ? ತಾನಲ್ಲದೆ ಅನ್ಯೋನ್ಯವಿಲ್ಲಾಯೆಂದು ಅರಿದ ಮೇಲೆ ತನಗಿಂದ ಮುನ್ನ ಇವೇನಾದರು ಉಂಟೆ ? ಇದು ಕಾರಣ, ನಮ್ಮ ದೇವನೊಬ್ಬನೆ. ಬಸವಪ್ರಿಯ ಕೂಡಲಚೆನ್ನಬಸವಣ್ಣಾ, ಆತಂಗೆ ನಮೋ ನಮೋ ಎಂಬೆ.
--------------
ಹಡಪದ ಅಪ್ಪಣ್ಣ
ಒಂದು ದ್ವಾರದಲ್ಲಿ ಬಂದ ಆತ್ಮಂಗೆ, ಹಲವು ದ್ವಾರದಲ್ಲಿ ಉಂಟೆಂದು, ಹೊಲಬುದಪ್ಪಿ ನುಡಿದವರ ನೋಡಾ. ವಾಯು ಒಂದಲ್ಲದೆ ಶತವಾಯುವಿಲ್ಲೆಂದೆ, ಇಂದ್ರಿಯ ಒಂದಲ್ಲದೆ ಐದಿಲ್ಲವೆಂದೆ. ಕರಣ ಒಂದಲ್ಲದೆ ನಾಲ್ಕಿಲ್ಲವೆಂದೆ, ಮದ ಒಂದಲ್ಲದೆ ಎಂಟಿಲ್ಲವೆಂದು. ವ್ಯಸನ ಒಂದಲ್ಲವೆ ಏಳಿಲ್ಲವೆಂದೆ, ಆಧಾರ ಒಂದಲ್ಲದೆ ಷಡಾಧಾರವಿಲ್ಲವೆಂದೆ. ಒಂದು ಬೀಜದಲ್ಲಿ ಅದ ಹಣ್ಣಿನ ರುಚಿಗೆ, ನಾನಾ ಫಲದ ರಸದ ರುಚಿ ಉಂಟೆ? ಆ ಬೀಜ ಮೊಳೆತಲ್ಲಿ ಏಕರೂಪವಾಗಿ ತಲೆದೋರಿತ್ತು. ಬಲಿದು ಮತ್ತೆ ಹಲವುರೂಪಾಗಿ ಪಲ್ಲವಿಸಿತ್ತು. ನೆಲೆಯ ಕಡಿದ ಮತ್ತೆ ರೂಪೆಲ್ಲ ನೆಲೆಯೊಳಡಗಿದವು. ಸೆಲೆಸಂದ ಹೊನ್ನಿಂಗೆ ಒಟ್ಟವುಂಟೆ? ಬಲುಹು ಮುರಿದವಂಗೆ ರಣದ ಸುದ್ದಿಯೇಕೋ? ಜಲದಲ್ಲಿ ಮುಳುಗಿದವಂಗೆ ಇಳೆಯವರ ಸುದ್ದೀಯೇಕೋ? ಇದು ಕಾರಣ, ನಾನಾ ವರ್ಣದ ಹೇಮವ ಭಾವಿಸಿ, ಒಂದರಲ್ಲಿ ಕಡೆಗಾಣಿಸಿದ ಮತ್ತೆ ಭಾವನೆಯ ಬಣ್ಣ ಒಂದಲ್ಲದೆ ಮತ್ತೆ ಭಾವಿಸಲಿಲ್ಲವಾಗಿ, ಅರಿದಲ್ಲಿ ಜ್ಞಾನ, ಮರೆದಲ್ಲಿ ಅಜ್ಞಾನ, ನಾನಾರೆಂಬುದನರಿದಲ್ಲಿಯೆ ಒಂದು ಗುಣ ನಿಂದಿತ್ತು. ತನ್ನ ಮರೆದಲ್ಲಿಯೆ ನಾನಾ ಸಂಚಲನವಾಯಿತ್ತು, ಇದಕ್ಕಿದೇ ದೃಷ್ಟ. ದೇಹವಿಡಿದುದಕ್ಕೆರಡಿಲ್ಲದೆ ಮೀರಲಿಲ್ಲವಾಗಿ, ಜಗವನರಿವುದಕ್ಕೆ ದಿವರಾತ್ರಿಯದೆ ಮೀರಿ ತೋರಲಿಲ್ಲವಾಗಿ, ಸಂಸಾರ ಹರಿವುದಕ್ಕೆ ನಿಃಕಳಂಕ ಮಲ್ಲಿಕಾರ್ಜುನನಲ್ಲದಿಲ್ಲವಾಗಿ.
--------------
ಮೋಳಿಗೆ ಮಾರಯ್ಯ
ಕಾಯ ಒಂದು, ಪ್ರಾಣ ಒಂದು, ಭಾವ ಒಂದು, ನಿರ್ಭಾವ ಒಂದು, ಒಂದಲ್ಲದೆ ಎರಡುಂಟೆ ? ಗುರು ಒಂದು, ಲಿಂಗ ಒಂದು, ಉಪದೇಶ ಒಂದು. ಕೂಡಲಚೆನ್ನಸಂಗಯ್ಯನ ಶರಣ ಬಸವಣ್ಣನ ಗರುಡಿಯಲ್ಲಿ ಇಬ್ಬರಿಗೆಯೂ ಅಭ್ಯಾಸ ಒಂದೆ ಕಾಣಾ ಪ್ರಭುವೆ
--------------
ಚನ್ನಬಸವಣ್ಣ
ಅಯ್ಯಾ ಎನ್ನಂಗದ ಮೇಲಿಪ್ಪ ಲಿಂಗವು ಕರ್ಪುರದಂತಾಯಿತ್ತು. ಎನ್ನ ಪ್ರಾಣದ ಮೇಲಿಪ್ಪ ಲಿಂಗವು ಪರಂಜ್ಯೋತಿಯಂತಾಯಿತ್ತು. ಎನ್ನ ನಿಃಪ್ರಾಣದ ಮೇಲಿಪ್ಪ ಲಿಂಗವು ನಿರಂಜನದಂತಾಯಿತ್ತು. ಈ ತ್ರಿವಿಧವು ಏಕವಾದ ಭೇದವ ಹೇಳಿಹೆನು ಕೇಳಿರಣ್ಣಾ ! ಎನ್ನ ಅಂಗದ ಮೇಲಿದ ಕರ್ಪುರದಂತಿರ್ದ ಲಿಂಗ, ಪ್ರಾಣದ ಮೇಲಿಪ್ಪ ಪರಂಜ್ಯೋತಿ ಲಿಂಗವ ಬೆರೆಯಿತ್ತು . ಎನ್ನ ಪ್ರಾಮದ ಮೇಲಿಪ್ಪ ಪರಂಜ್ಯೋತಿ ಲಿಂಗ, ನಿಃಪ್ರಾಣದ ಮೇಲಿಪ್ಪ ನಿರಂಜನ ಲಿಂಗವ ಬೆರೆಯಿತ್ತು. ಈ ತ್ರಿವಿಧವು ಏಕವಾದ ಮೇಲೆ, ಒಂದಲ್ಲದೆ ಎರಡುಂಟೆ ? ಇದಕ್ಕೆ ಸಂದೇಹ ಬೇರಿಲ್ಲವಯ್ಯಾ, ಬಸವಪ್ರಿಯ ಕೂಡಲಚೆನ್ನಬಸವಣ್ಣಾ.
--------------
ಹಡಪದ ಅಪ್ಪಣ್ಣ
ಕ್ರೀಯ ತೆರನನರಿಯೆನೆಂದು ಬಿಡಬಹುದೆ ಆಚಾರವ ? ಆಚಾರದ ತೆರನನರಿಯೆನೆಂದು ಮರೆಯಬಹುದೆ ಮಾರ್ಗವ ? ಇಂತೀ ನಾನಾ ಭೇದಂಗಳಲ್ಲಿ ಅರಿದು, ವಿಚಾರಿಸಿ, ಮಣ್ಣಿನಲ್ಲಿ ಕೆಡಿಸಿ, ಮಣ್ಣಿನಲ್ಲರಸುವಂತೆ, ಮನೆಯಲ್ಲಿ ಇರಿಸಿದ ಒಡವೆಯ ಮರೆದು, ನೆನೆವಂತೆ ಅರಿ. ಇಷ್ಟಲಿಂಗದ ಪ್ರಾಣಲಿಂಗದ ಗೊತ್ತೆಂಬುಭಯ ಬೇಡ. ಅದು ನಿಶ್ಚಯ, ಒಂದಲ್ಲದೆ ಬೇರೆ ನಾಮವಿಲ್ಲ, ಐಘಟದೂರ ರಾಮೇಶ್ವರಲಿಂಗಕ್ಕೆ.
--------------
ಮೆರೆಮಿಂಡಯ್ಯ
ಒಂದು ಹುತ್ತಕ್ಕೆ ಒಂಬತ್ತು ಬಾಯಿ, ಅಲ್ಲಿಪ್ಪ ಸರ್ಪನೊಂದೆ. ತಪ್ಪದೆ ಹತ್ತು ಬಾಯಲು ತಲೆಯ ಒಡೆವುದು. ಅಂಜಿ ನೋಡಿದವರಿಗೆ ಸರ್ಪನಾಗಿಪ್ಪುದು. ಅಂಜದೆ ನೋಡಿದವರಿಗೆ ಒಂದೆ ಸರ್ಪನಾಗಿರುವುದು. ಇದು ಕಾರಣವಾಗಿ, ಸಂಜೆ ಮುಂಜಾನೆ ಎಂಬ ಎರಡಳಿದ ಶರಣಂಗೆ ಒಂದಲ್ಲದೆ ಎರಡುಂಟೆ? ಮೂರು ಲಿಂಗ, ಆರು ಲಿಂಗ, ಮೂವತ್ತಾರು ಲಿಂಗ, ಬೇರೆ ಇನ್ನೂರು ಹದಿನಾರು ಲಿಂಗ ಉಂಟೆಂದು ಸಂತೆಯೊಳಗೆ ಕುಳಿತುಕೊಂಡು ಸಾರುತಿಪ್ಪರು. ಇದ ನಾನರಿಯೆ, ನಾನರಿಯೆ. ಹೇಳುವುದಕ್ಕೆ ಎನ್ನ ದೂರ ಕೇಳಯ್ಯಾ, ಬಸವಪ್ರಿಯ ಕೂಡಲಚೆನ್ನಬಸವಣ್ಣಾ.
--------------
ಹಡಪದ ಅಪ್ಪಣ್ಣ
ಸರ್ಪನಲ್ಲಿ ವಿಷ ಇದ್ದಿತ್ತೆಂದಡೆ, ಸರ್ವಾಂಗದಲ್ಲಿ ವಿಷ ತಪ್ಪದಿಪ್ಪುದೆ, ವಿಷವಿಪ್ಪಠಾವು ಒಂದಲ್ಲದೆ ? ಪೃಥ್ವಿಯಲ್ಲಿ ನಿಕ್ಷೇಪವಿದ್ದಿತ್ತೆಂದಡೆ, ಅಲ್ಲಲ್ಲಿ ಎಲ್ಲಾ ಠಾವಿನಲ್ಲಿ ಅಡಗಿಪ್ಪುದೆ ? ಸಮಯಕುಲದಲ್ಲಿ ವಸ್ತು ಪರಿಪೂರ್ಣವೆಂದಡೆ, ದರ್ಶನಪಾಷಂಡಿಗಳಲ್ಲಿ ವಸ್ತುಪರಿಪೂರ್ಣನಾಗಿಪ್ಪನೆ ? ಇಪ್ಪ ಸತ್ಯಸನ್ಮುಕ್ತರಲ್ಲಿಯಲ್ಲದೆ, ಪರಮವಿರಕ್ತನಲ್ಲಿಯಲ್ಲದೆ. ನೆಲದಲ್ಲಿದ್ದ ನಿಧಾನವನರಿದು ಅಗಿವುದು, ವಿಷವಿದ್ದ ಬಾಯ ಮುಚ್ಚಿಹಿಡಿವುದು, ನೆರೆ ವಸ್ತುವಿದದ್ದ ಠಾವನರಿದು ಪೂಜಿಸುವುದು. ಇಂತೀ ಬಯಕೆಗೆ, ಬಯಕೆ ಸಮೂಹಕ್ಕೆ ತ್ರಿವಿಧಮಲ. ಖ್ಯಾತಿಲಾಭಕ್ಕೆ ಭೂತಹಿತ. ಅರಿವುಳ್ಳವರಲ್ಲಿ ಎರವಿಲ್ಲದ ಕೂಟ. ಇಂತಿವು ಜಗದಲ್ಲಿ ಅರಿದು ಮಾಡುವನ ಪರಿತೋಷ ಗಾರುಡೇಶ್ವರಲಿಂಗದಲ್ಲಿ ಎರಡಳಿದವನ ಕೂಟ.
--------------
ಉಪ್ಪರಗುಡಿಯ ಸೋಮಿದೇವಯ್ಯ
ಹೊತ್ತಾರೆ ಎದ್ದು ಹೂವು ಪತ್ರೆ ಉದಕವ ತಂದು, ಅಷ್ಟವಿಧಾರ್ಚನೆ ಷೋಡಶೋಪಚಾರವ ಮಾಡಿಹೆನೆಂದು, ಸೊರಟೆಯ ಮೊರಟೆಯ ಹರಡಿ, ಕೈಕಾಲ ಮುಖವ ತೊಳೆದು, ವಿಭೂತಿಯ ಧರಿಸಿ, ರುದ್ರಾಕ್ಷಿಯ ತೊಟ್ಟು, ತನು ಶುದ್ಧವ ಮಾಡಿ, ಲಿಂಗಕ್ಕೆ ಮಜ್ಜನಕ್ಕೆರೆಯಬೇಕೆಂಬಿರಿ. ಈ ಮೊದಲು ತಂದ ಪತ್ರೆ ಪುಷ್ಪ ಉದಕವೆ ದೇವರೊ ? ಈ ಹರಡಿಕೊಂಡಿರುವ ಸೊರಟೆ ಮೊರಟೆಗಳೆ ದೇವರೊ ? ಈ ತೊಳೆದುಕೊಂಬ ಕೈಕಾಲು ಮುಖವೆ ದೇವರೊ ? ಈ ಧರಿಸಿದ ವಿಭೂತಿ ರುದ್ರಾಕ್ಷಿಯೆ ದೇವರೊ ? ನಿಮ್ಮ ಕೈಯಲ್ಲಿ ಇಪ್ಪುದೆ ದೇವರೊ ? ನೀವೆ ದೇವರೊ ? ಇವರೊಳಗೆ ಆವುದು ದೇವರೆಂಬಿರಿ ? ಅರಿವುಳ್ಳವರು ನೀವು ಹೇಳಿರೊ. ದೇವರು ದೇವರು ಎಂದು ಒಂದಲ್ಲದೆ, ಎರಡುಂಟೆ ? ಇಂತಿದನರಿಯದೆ, ಬರುವಸೂರೆಹೋದಿರಲ್ಲ . ಇನ್ನಾದರು ಅರಿದು ಬದುಕಿರೊ ನಾನೊಂದ ಹೇಳಿದೆನು. ಇವೆಲ್ಲವನು ಮಾಡಬೇಕೆಂಬುದೀಗ ಲಿಂಗ, ಮಾಡುವದೀಗ ಜಂಗಮ. ಲಿಂಗ ಜಂಗಮವೆಂದರೆ ಒಂದೇ ಅಂಗಭೇದವು. ನಮ್ಮ ಶರಣರು ಬಲ್ಲರಲ್ಲದೆ, ಮರಣಬಾಧೆಗೊಳಗಾಗುವ ಮತ್ರ್ಯದ ಮನುಜರು ಅರಿಯರು ಬಸವಪ್ರಿಯ ಕೂಡಲಚೆನ್ನಬಸವಣ್ಣಾ .
--------------
ಹಡಪದ ಅಪ್ಪಣ್ಣ
ಶರಣಲಿಂಗಕ್ಕೆ ನೋಡುವ ಕಣ್ಣು ಒಂದಲ್ಲದೆ ಎರಡಿಲ್ಲ ಕಾಣಿರೊ. ಶರಣಲಿಂಗಕ್ಕೆ ಕೇಳುವ ಶ್ರೋತ್ರ ಒಂದಲ್ಲದೆ ಎರಡಿಲ್ಲ ಕಾಣಿರೊ. ಶರಣಲಿಂಗಕ್ಕೆ ವಾಸಿಸುವ ನಾಸಿಕ ಒಂದಲ್ಲದೆ ಎರಡಿಲ್ಲ ಕಾಣಿರೊ. ಶರಣಲಿಂಗಕ್ಕೆ ರುಚಿಸುವ ಜಿಹ್ವೆ ಒಂದಲ್ಲದೆ ಎರಡಿಲ್ಲ ಕಾಣಿರೊ. ಶರಣಲಿಂಗಕ್ಕೆ ಸೋಂಕುವ ತ್ವಕ್ಕು ಒಂದಲ್ಲದೆ ಎರಡಿಲ್ಲ ಕಾಣಿರೊ. ಶರಣಲಿಂಗಕ್ಕೆ ನೆನೆವ ಮನ ಒಂದಲ್ಲದೆ ಎರಡಿಲ್ಲ ಕಾಣಿರೊ. ನಮ್ಮ ಅಖಂಡೇಶ್ವರನಲ್ಲಿ ಒಡವೆರೆದ ಶರಣಲಿಂಗಕ್ಕೆ ಅಂಗ ಪ್ರಾಣಂಗಳೊಂದಲ್ಲದೆ ಎರಡಿಲ್ಲ ಕಾಣಿರೊ.
--------------
ಷಣ್ಮುಖಸ್ವಾಮಿ
ಹರಹರ ಎಂದು ಹತ್ತುಬಾರಿ ಎನಬಹುದಲ್ಲದೆ, ಹರಿವ ಮನವ ಮೆಟ್ಟಿ,ಮನವ ಲಿಂಗದೊತ್ತಿನಲ್ಲಿ ನಿಂದಿರಲರಿಯದುನೋಡಾ! ಇದು ಕಾರಣ, ತನುವ ಗುರುವಿಂಗಿತ್ತು , ಮನವ ಲಿಂಗಕ್ಕಿತ್ತು , ಧನವ ಜಂಗಮಕ್ಕಿತ್ತು , ತ್ರಿವಿಧವನು ತ್ರಿವಿಧಕಿತ್ತ ಬಳಿಕ, ಒಂದಲ್ಲದೆ ಎರಡುಂಟೆ ? ಇದು ಮುಂದೆ ಆವನಾನೊಬ್ಬ ಭಕ್ತನು ನೋಡಿ ನಡೆವುದಕ್ಕೆ ಇದೇ ಸಾಧನ, ಬಸವಪ್ರಿಯ ಕೂಡಲಚೆನ್ನಬಸವಣ್ಣಾ .
--------------
ಹಡಪದ ಅಪ್ಪಣ್ಣ
ಇನ್ನಷ್ಟು ... -->