ಅಥವಾ

ಒಟ್ಟು 58 ಕಡೆಗಳಲ್ಲಿ , 16 ವಚನಕಾರರು , 55 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆದಿಯಿಂದಲಾದ ಪುರುಷನು ಮೇದಿನಿಗೆ ಬಂದು, ಐವರ ಸಂಗವ ಮಾಡಿ, ಅನಾದಿಯೆಂಬ ಕರಸ್ಥಲದಲಿ ನಿಂದು, ಪರಕೆಪರವನೈದಿದ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಕಾಡಾರಣ್ಯದೊಳಗೆ ಒಬ್ಬ ಸೂಳೆ ಕರೆದು ಐವರಿಗೆ ಒತ್ತೆಯಕೊಡುವುದ ಕಂಡೆನಯ್ಯ ! ಊರೊಳಗಣ ಗೊಲ್ಲತಿ ಐವರ ಒಪ್ಪಿಸಿಕೊಟ್ಟು ಸೂಳೆ ಗೊಲ್ಲತಿ ಒಂದಾದುದ ಕಂಡೆ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಪರಮಾರ್ಥದಲ್ಲಿ ಪರೀಕ್ಷಿಸಿ ತಿಳಿದು ನೋಡುವಡೆ ಗುರುವಾರೂ ಇಲ್ಲ ಚೋಳ ತಪ್ಪಿಸಿ. ಪರಮಾರ್ಥದಲ್ಲಿ ಪರೀಕ್ಷಿಸಿ ತಿಳಿದು ನೋಡುವಡೆ ಭಕ್ತರಾರೂ ಇಲ್ಲ ಬಸವಣ್ಣ ತಪ್ಪಿಸಿ. ಪರಮಾರ್ಥದಲ್ಲಿ ಪರೀಕ್ಷಿಸಿ ತಿಳಿದು ನೋಡುವಡೆ ನಿರ್ವಾಣಿಗಳಾರೂ ಇಲ್ಲ ಅಕ್ಕಗಳು ತಪ್ಪಿಸಿ. ಪರಮಾರ್ಥದಲ್ಲಿ ಪರೀಕ್ಷಿಸಿ ತಿಳಿದು ನೋಡುವಡೆ ಹಿರಿಯರಾರೂ ಇಲ್ಲ ಚೀಲಾಳ ತಪ್ಪಿಸಿ. ಪರಮಾರ್ಥದಲ್ಲಿ ಪರೀಕ್ಷಿಸಿ ತಿಳಿದು ನೋಡುವಡೆ ಗಂಭೀರರಾರೂ ಇಲ್ಲ ಅಜಗಣ್ಣ ತಪ್ಪಿಸಿ. ಇಂತೀ ಐದು ತೆರದನುವು ಆರಿಗೂ ಇಲ್ಲವೆಂದೆನಬೇಡ. ಅವರ ಕರುಣ ಉಳ್ಳವರಿಗೆ ಆ ಮುಕ್ತಿಯುಂಟು. ಆ ಐವರ ಕಾರುಣ್ಯದ ಪ್ರಸಾದವ ಕೊಂಡು ನಾನು ಬಯಲಾದೆನು ಕಾಣಾ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಮೂರು ಲೋಕದ ಮೇಲೆ ಒಂದು ಪಕ್ಷಿ ಕುಳಿತು ಐವರ ಸಂಗವ ಮಾಡಿ, ಸಾವಿರೆಸಳ ಮಂಟಪಕ್ಕೆ ಹಾರಿಹೋದ ಸೋಜಿಗವ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಬಸವಣ್ಣನ ಡಿಂಗರಿಗನಯ್ಯಾ, ಚನ್ನಬಸವಣ್ಣನ ಹಳೆಯನಯ್ಯಾ, ಪ್ರಭುದೇವರ ಬಂಟನಯ್ಯಾ, ಮಡಿವಾಳಯ್ಯನ ಲೆಂಕನಯ್ಯಾ, ಸಿದ್ಭರಾಮಯ್ಯನ ಭೃತ್ಯನಯ್ಯಾ. ಇಂತೀ ಐವರ ಒಕ್ಕು ಮಿಕ್ಕ ಶೇಷಪ್ರಸಾದವನುಂಡು, ಬದುಕಿದೆನಯ್ಯಾ. ಕಾಮಧೂಮ ಧೂಳೇಶ್ವರಾ. ನಿಮ್ಮ ಶರಣರೆನ್ನ ಪಾವನವ ಮಾಡಿದ ಪರಿಣಾಮವ, ಅಂತಿಂತೆನಲಮ್ಮದೆ ನಮೋ ನಮೋ ಎನುತಿರ್ದೆನು.
--------------
ಮಾದಾರ ಧೂಳಯ್ಯ
ಇರುವೆಯ ಮಸ್ತಕದ ಮೇಲೆ ಇರುತಿಪ್ಪ ಶಿವಾಲಯವ ಕಂಡೆನಯ್ಯ. ಆ ಶಿವಾಲಯದೊಳಗೆ ಅಘಟಿತಲಿಂಗವಿಪ್ಪುದು ನೋಡಾ. ಆ ಲಿಂಗದ ಕಿರಣದೊಳಗೆ ರಾಜಬೀದಿಯ ಕಂಡೆನಯ್ಯ. ಆ ರಾಜಬೀದಿಯಲ್ಲಿ ಒಬ್ಬ ಪುರುಷನು ಐವರ ಕೂಡಿಕೊಂಡು ಮಹಾಮೇರುವೆಯ ಹತ್ತಿ, ಅಘಟಿತ ಲಿಂಗಾರ್ಚನೆಯ ಮಾಡುತಿಪ್ಪನು ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಇರುಳು ಹಗಲೆಂಬೆರಡು ಮಹಾಘನಲಿಂಗದೊಳಡಗಿ ಗರ್ಭಗತವಾಗಿಪ್ಪವು ನೋಡಾ. ಆ ಲಿಂಗದ ಸಂಗದಿಂದ ಒಬ್ಬ ಸತಿಯಳು ಐವರ ಕೂಡಿಕೊಂಡು, ಚಿದುಲಿಂಗಾರ್ಚನೆಯಂ ಮಾಡಿ ಚಿದ್ಘನಸ್ವರೂಪವಾದ ಸೋಜಿಗವ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಮೂರು ಮೇರುವೆಯ ಮೇಲೆ ಮೀರಿ ತೋರುತಿತ್ತಯ್ಯ ಒಂದು ಲಿಂಗ. ಆ ಲಿಂಗದಲ್ಲಿಯೆ ಒಬ್ಬ ಪುರುಷನು ಐವರ ಕೂಡಿಕೊಂಡು ಆ ಲಿಂಗಾರ್ಚನೆಯ ಮಾಡಿ ನಿಃಪ್ರಿಯವಾದ ಸೋಜಿಗವ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಲಿಂಗವಾದಡೆ ಚೆನ್ನಬಸವಣ್ಣನಂತಾಗಬೇಕಯ್ಯಾ; ವೀರನಾದಡೆ ಮಡಿವಾಳಯ್ಯನಂತಾಗಬೇಕಯ್ಯ; ನಿಗ್ರಹಿಯಾದಡೆ ಹೊಡೆಹುಲ್ಲ ಬಂಕಯ್ಯನಂತಾಗಬೇಕಯ್ಯ; ದ್ಥೀರನಾದಡೆ ಘಟ್ಟಿವಾಳಯ್ಯನಂತಾಗಬೇಕಯ್ಯ; ಲಿಂಗದಲ್ಲಿ ನಿರ್ವಯಲಾದಡೆ ನೀಲಲೋಚನೆಯಮ್ಮನಂತಾಗಬೇಕಯ್ಯ. ಈ ಐವರ ಕಾರುಣ್ಯಪ್ರಸಾದವ ಕೊಂಡು ಬದುಕಿದೆನಯ್ಯ, ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ.
--------------
ಸಿದ್ಧರಾಮೇಶ್ವರ
ಕಕ್ಕಯ್ಯನೆನಗೆ ಕಾಮಧೇನುವಯ್ಯ. ಚೆನ್ನಯ್ಯನೆನಗೆ ಕಲ್ಪವೃಕ್ಷವಯ್ಯಾ. ಹರಳಯ್ಯನೆನಗೆ ಚಿಂತಾಮಣಿಯಯ್ಯಾ. ಕೆಂಭಾವಿಯ ಭೋಗಯ್ಯನೆನಗೆ ಸುದಾಬ್ಧಿಯಯ್ಯಾ. ಶಿವನಾಗಮಯ್ಯನೆನಗೆ ಪರುಷದ ಗಿರಿಯಯ್ಯಾ. ಇಂತೀ ಐವರ ಕಾರುಣ್ಯ ಪ್ರಸಾದವ ಕೊಂಡು ಬದುಕಿದೆನಯ್ಯಾ. ಮರುಶಂಕರಪ್ರಿಯ ಸಿದ್ಧರಾಮೇಶ್ವರಯ್ಯಾ.
--------------
ವೈದ್ಯ ಸಂಗಣ್ಣ
ಐವರ ಸಂಗಡ ಉದಯದಲ್ಲಿ ಹೊರವಂಟಿರಾದಡೆ, ಕೇಳಿರಣ್ಣಾ, ಮಧ್ಯಾಹ್ನಕ್ಕೆ ಬಂದಿರಾದಡೆ, ಕಳೆಯಳಿದು ಕಳೆಯ ತಪ್ಪದೆ ನಿಂದಿರಾದಡೆ, ಬಟ್ಟೆ ಸರಿಸ ಕಪಿಲಸಿದ್ಧಮಲ್ಲಿಕಾರ್ಜುನನಲ್ಲಿಗೆ ಹೋಯಿತ್ತು.
--------------
ಸಿದ್ಧರಾಮೇಶ್ವರ
ದಾಸಿಯ ಸಂಗ, ಭಂಗಿಯ ಸೇವನೆ, ವೇಶಿಯ ಸಂಗ, ಸುರೆಯ ಸೇವನೆ, ಮುಂಡೆಯ ಸಂಗ, ಅಮೇಧ್ಯದ ಸೇವನೆ, ಕನ್ನೆಯ ಸಂಗ, ರಕ್ತದ ಸೇವನೆ._ ಇಂತೀ ಐವರ ಸಂಗವ ಮಾಡುವ ದ್ರೋಹಿಗೆ ಕÀಠಪಾವಡ, ಧೂಳಪಾವಡ, ಸರ್ವಾಂಗಪಾವಡ ಉಂಟೆಂಬ ಪಂಚಮಹಾಪಾತಕರಿಗೆ, ಗುರುವಿಲ್ಲ ಲಿಂಗವಿಲ್ಲ ಜಂಗಮವಿಲ್ಲ, ಪಾದೋದಕ ಪ್ರಸಾದವಿಲ್ಲ ನಾ(ನಾಮ?) ಮೊದಲೇ ಇಲ್ಲ_ ಕೂಡಲಚೆನ್ನಸಂಗಮದೇವಾ
--------------
ಚನ್ನಬಸವಣ್ಣ
ಐವರ ಎನ್ನ ದುಃಖ, ನಿನ್ನ ಅಡಿಮಸ್ತಕದಲೆ ಇದ್ದಲ್ಲಿ ಹುಟ್ಟು ಹೊಂದಿಲ್ಲದೆ ಹೋಗು. ಅಯ್ಯ, ನಿನ್ನ ದೆಸೆಗಱಸುತ್ತದ್ದೇನೆ ಕವಿಲೆಯ ಕಂದನಂತೆ. ನಾನಿದ್ದೇನೆಂದು ಬಾರಾ ಕಪಿಲಸಿದ್ಧಮಲ್ಲಿಕಾರ್ಜುನ
--------------
ಸಿದ್ಧರಾಮೇಶ್ವರ
ಭಾವಗೆಟ್ಟು ಭವನಷ್ಟನು ಒಡಹುಟ್ಟಿದ ಐವರ ಕೈಬಿಟ್ಟನು. ಭಂಡನು ಲಜ್ಜೆಭಂಡನು, ಕಂಡಡೆ ನುಡಿಸದಿರಾ ಮಾಯಾದೇವಿ. ಅರಿವೆಯ (ಅರಿವ?)ನುಟ್ಟು ನೆರೆ ಮರುಳಾದನು ಹುಟ್ಟ ಮುರಿದನು ಮಡಕೆಯನೊಡೆದನು ಆದಿ ಪುರಾತನು ಅಚಲ ಲಿಂಗೈಕ್ಯನು. ಗುಹೇಶ್ವರನಲ್ಲಯ್ಯಂಗೆ ಮೂಗಿಲ್ಲ ಮಗಳೆ.
--------------
ಅಲ್ಲಮಪ್ರಭುದೇವರು
ತನುಮನದ ಕೊನೆಯ ಮೇಲೆ ಅಘಟಿತಲಿಂಗವಿಪ್ಪುದು ನೋಡಾ. ಆ ಲಿಂಗದ ಸಂತತಿಯಲ್ಲಿ ಒಬ್ಬ ಸತಿಯಳು ಐವರ ಸಂಗವ ಮಾಡಿ ನಿರವಯವೆಂಬ ಕರಸ್ಥಲದಲ್ಲಿ ನಿಂದು ಪರವಶವಾದ ಸೋಜಿಗವ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಇನ್ನಷ್ಟು ... -->