ನಕಾರದೊಳಗೆ ಐವತ್ತೊಂದಕ್ಷರವನರಿಯದೆ
ಎಂತು ಆಚಾರಲಿಂಗಸಂಬಂಧಿಯೆಂಬೆ ?
ಮಕಾರದೊಳಗೆ ಐವತ್ತೊಂದಕ್ಷರವನರಿಯದೆ
ಎಂತು ಗುರುಲಿಂಗಸಂಬಂಧಿಯೆಂಬೆ ?
ಶಿಕಾರದೊಳಗೆ ಐವತ್ತೊಂದಕ್ಷರವನರಿಯದೆ
ಎಂತು ಶಿವಲಿಂಗಸಂಬಂಧಿಯೆಂಬೆ ?
ವಕಾರದೊಳಗೆ ಐವತ್ತೊಂದಕ್ಷರವನರಿಯದೆ
ಎಂತು ಜಂಗಮಲಿಂಗಸಂಬಂಧಿಯೆಂಬೆ ?
ಯಕಾರದೊಳಗೆ ಐವತ್ತೊಂದಕ್ಷರವನರಿಯದೆ
ಎಂತು ಪ್ರಸಾದಲಿಂಗಸಂಬಂಧಿಯೆಂಬೆ ?
ಓಂಕಾರದೊಳಗೆ ಐವತ್ತೊಂದಕ್ಷರವನರಿಯದೆ ?
ಎಂತು ಮಹಾಲಿಂಗಸಂಬಂಧಿಯೆಂಬೆ ?
ಓಂಕಾರದೊಳಗೆ ಸಮಸ್ತ ಭೇದಾದಿಭೇದಂಗಳ ತಿಳಿದು ಮೀರಿ
ನಿರ್ವಯಲನರಿಯದೆ,
ಎಂತು ನಿರ್ವಯಲಸಂಬಂಧಿಯೆಂಬೆನಯ್ಯಾ
ಅಪ್ರಮಾಣಕೂಡಲಸಂಗಮದೇವಾ.