ಭಕ್ತಿಸ್ಥಲ ಮೂರು, ಮಾಹೇಶ್ವರಸ್ಥಲ ನಾಲ್ಕು,
ಪ್ರಸಾದಿಸ್ಥಲ ಐದು, ಪ್ರಾಣಲಿಂಗಿಸ್ಥಲ ಆರು,
ಶರಣಸ್ಥಲವೆರಡು, ಐಕ್ಯಸ್ಥಲ ಒಂದು,
ಭಕ್ತಂಗೆ ಮೂರು ಗೊತ್ತು, ಮಾಹೇಶ್ವರಂಗೆ ನಾಲ್ಕು ಗೊತ್ತು,
ಪ್ರಸಾದಿಗೆ ಐದು ಗೊತ್ತು, ಪ್ರಾಣಲಿಂಗಿಗೆ ಆರು ಗೊತ್ತು,
ಶರಣಂಗೆ ಎರಡು ಗೊತ್ತು, ಐಕ್ಯಂಗೆ ಒಂದು ಗೊತ್ತಾಗಿ
ಸಂಬಂಧಿಸಿ ಷಡುಸ್ಥಲ ರೂಪಾದಲ್ಲಿ ಒಂದು ಸ್ಥಲಕ್ಕೆ ಆರು ಸ್ಥಲ
ಹೊರೆ ಹೊರೆಯಾಗಿ ಮಿಶ್ರವಾಗಿ ಸ್ಥಲಂಗಳು ಚರಿಸುವಲ್ಲಿ
ನೂರೊಂದು ಸ್ಥಲಂಗಳಲ್ಲಿ ಆರೋಪಿಸಿ ನಿಂದುದು ಮೂರೆ
ಭಕ್ತಿಸ್ಥಲ,
ಸಂದುದು ನಾಲ್ಕೆ ಮಾಹೇಶ್ವರಸ್ಥಲ,
ಕೊಂಡುದು ಐದೆ ಪ್ರಸಾದಿಸ್ಥಲ,
ಗಮನವಿಲ್ಲದೆ ನಿಜದಲ್ಲಿ ನಿಂದುದಾರೆ ಪ್ರಾಲಿಂಗಿಸ್ಥಲ,
ಸ್ತುತಿ-ನಿಂದೆಗೆಡೆಯಿಲ್ಲದೆ ನಿಂದುದೆರಡೆ ಶರಣಸ್ಥಲ,
ನಿರ್ನಾಮವಾಗಿ ಭಾವಕ್ಕೆ ಬ್ರಮೆಯಿಲ್ಲದುದೊಂದೆ ಐಕ್ಯಸ್ಥಲ.
ಇಂತೀ ಭಿನ್ನ ವರ್ಣಂಗಳಲ್ಲಿ ವರ್ಣಸ್ವರೂಪನಾದೆಯಲ್ಲಾ,
ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ,
ಮಾತುಳಂಗ ಮಧುಕೇಶ್ವರನು.
|| 67 ||