ತನುತ್ರಯದಲ್ಲಿ ಘನಂಗ ಪ್ರಾಣಸಂಬಂಧಿಯಾದವರ
ತೋರಯ್ಯಾ, ನಿಮ್ಮ ಧರ್ಮ.
ಅವಯವಂಗಳೆ ನಿಮ್ಮ ವದನಂಗಳಾಗಿ,
ಅರ್ಪಿತವಲ್ಲದ ಅನರ್ಪಿತವ ಕೊಳ್ಳರಾಗಿ,
ಐದಾರು ಪ್ರಸಾದದಲ್ಲಿ ಅನುಮಾನವಿಲ್ಲದೆ ನಿತ್ಯರಪ್ಪವರ,
ಈರೈದು ಪಾದೋದಕದಲ್ಲಿ ವಿರಳವಿಲ್ಲದೆ ವಿಮಲರಪ್ಪವರ,
ನೋಡಿ ಕಂಡೆಹೆನೆಂದಡೆ, ಎನಗೆ ಕಾಣಬಾರದು.
ಅವರಿಚ್ಛಾಮಾತ್ರದಲ್ಲಿ ನೀನಿಪ್ಪೆಯಾದಂತೆ, ನಿನಗೆ ಕಾಣಬಹುದು.
ಅಲ್ಲದ್ದಡೆ ನಿನಗೆಯೂ ಅಭೇದ್ಯ ಕಾಣಾ,
ಕಪಿಲಸಿದ್ಧಮಲ್ಲಿಕಾರ್ಜುನಾ.