ಅಥವಾ

ಒಟ್ಟು 25 ಕಡೆಗಳಲ್ಲಿ , 10 ವಚನಕಾರರು , 18 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಹೊಸ ಮದುವೆ ಹಸೆಯುಡುಗದ ಮುನ್ನ, ಹೂಸಿದ ಅರಿಸಿನ ಬಿಸಿಲಿಂಗೆ ಹರಿಯದ ಮುನ್ನ, ತನು ಸಂಚಲವಡಗಿ ಮನವು ಗುರುಕಾರುಣ್ಯವ ಪಡೆದು ಹುಸಿಯಿಲ್ಲದಿರ್ದಡೆ ಭಕ್ತನೆಂಬೆ! ಹಿಡಿಹಿಂಗಿಲ್ಲದಿರ್ದಡೆ ಮಾಹೇಶ್ವರನೆಂಬೆ! ತನುವಿಲ್ಲದಿರ್ದಡೆ ಪ್ರಸಾದಿಯೆಂಬೆ! ಜೀವವಿಲ್ಲದಿರ್ದಡೆ ಪ್ರಾಣಲಿಂಗಿಯೆಂಬೆ! ಆಶೆಯಿಲ್ಲದಿರ್ದಡೆ ಶರಣನೆಂಬೆ! ಈ ಐದರ ಸಂಪರ್ಕ ನಿರ್ಭೋಗವಾದಡೆ ಐಕ್ಯನೆಂಬೆ! ಐಕ್ಯದ ಸಂತೋಷ ಹಿಂಗಿದಡೆ ಜ್ಯೋತಿರ್ಮಯನೆಂಬೆ! ಈ ಹೀಂಗಾದ ದೇಹವನಿರಿದಡರಿಯದು ತರಿದಡರಿಯದು. ಬೈದಡರಿಯದು; ಹೊಯ್ದಡರಿಯದು. ನಿಂದಿಸಿದಡರಿಯದು; ಸ್ತುತಿಸಿದಡರಿಯದು. ಸುಖವನರಿಯದು; ದುಃಖವನರಿಯದು. ಇಂತಿವರ ತಾಗು ನಿರೋಧವನರಿಯದಿರ್ದಡೆ ಅವರ ಮಹಾಲಿಂಗ ಗಜೇಶ್ವರನೆಂಬೆ.
--------------
ಗಜೇಶ ಮಸಣಯ್ಯ
ಮೂರುವರ್ಣದ ಬೊಟ್ಟುಗ, ಆರು ವರ್ಣದ ಅಳಗ, ಐದು ವರ್ಣದ ಸಂಚಿಗ ಇವರೊಳಗಾದ ನಾನಾ ವರ್ಣದ ಅಜಕುಲ, ಕುರಿವರ್ಗ, ಕೊಲುವ ತೋಳನ ಕುಲ, ಮುಂತಾದ ತ್ರಿವಿಧದ ಬಟ್ಟೆಯ ಮೆಟ್ಟದೆ ಮೂರ ಮುಟ್ಟದೆ, ಆರ ತಟ್ಟದೆ, ಐದರ ಬಟ್ಟೆಯ ಮೆಟ್ಟದೆ, ಒಂದೇ ಹೊಲದಲ್ಲಿ ಮೇದು, ಮಂದೆಯಲ್ಲಿ ನಿಂದು, ಸಂದೇಹ ಕಳೆದು, ಉಳಿಯದ ಸಂದೇಹವ ತಿಳಿದು, ವೀರಬೀರೇಶ್ವರಲಿಂಗದಲ್ಲಿಗೆ ಹೋಗುತ್ತಿರಬೇಕು.
--------------
ವೀರ ಗೊಲ್ಲಾಳ/ಕಾಟಕೋಟ
ಹೇಳಿ [ಹೆ] ಹೇಳಿ [ಹೆ] ಕೇಳಿರಣ್ಣಾ ಮೂರರ ಹೊಲಿಗೆಯ ಬಿಚ್ಚಿ ಆರಮಾಡಬೇಕು. ಆರರ ತಿರುಳ ತೆಗೆದು ಒದೂರೊಳಗೆ ನಿಲಿಸಬೇಕು. ಐದರ ಮುಸುಕನುಗಿದು, ಐದರ ಕೆಳೆಯ ಕೆಡಿಸಿ ಐದರ ನಿಲವನಡಗಿಸಿ, ಮೂರರ ಮುದ್ರೆಯನೊಡೆದು, ನಾಲ್ಕರೊಳಗೆ ನಿಲ್ಲದೆ ಮೂರು ಮುಖವು ಒಂದೆ ಭಾವವಾಗಿರಬೇಕು. ಈ ಭೇದವನರಿಯದೆ ಸುಳಿವವರ ಕಂಡು ಬೆರಗಾದನು ಕಾಣಾ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಭಕ್ತಂಗೆ ಸ್ಪರ್ಶನ ವಿಷಯವಳಿದು ಮಾಹೇಶ್ವರಂಗೆ ಅಪ್ಪು ವಿಷಯವಳಿದು ಪ್ರಸಾದಿಗೆ ರುಚಿ ವಿಷಯವಳಿದು ಪ್ರಾಣಲಿಂಗಿಗೆ ಉಭಯದ ಭೇದ ವಿಷಯವಳಿದು ಶರಣಂಗೆ ಸುಖದುಃಖ ವಂದನೆ ನಿಂದೆ ಅಹಂಕಾರ ಭ್ರಮೆ ವಿಷಯವಳಿದು ಐಕ್ಯಂಗೆ ಇಂತೀ ಐದರ ಭೇದದಲ್ಲಿ ಹಿಂದಣ ಮುಟ್ಟು ಮುಂದಕ್ಕೆ ತಲೆದೋರದೆ ಮುಂದಣ ಹಿಂದಣ ಸಂದೇಹದ ವಿಷಯ ನಿಂದು ಕರ್ಪುರವುಳ್ಳನ್ನಕ್ಕ ಉರಿಯ ಭೇದ ಉರಿವುಳ್ಳನ್ನಕ್ಕ ಕರ್ಪುರದಂಗ. ಉಭಯ ನಿರಿಯಾಣವಾದಲ್ಲಿ ಐಕ್ಯಸ್ಥಲ ನಾಮನಿರ್ಲೇಪ ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗದಲ್ಲಿ.
--------------
ಪ್ರಸಾದಿ ಭೋಗಣ್ಣ
ಸಮಯದಲ್ಲಿ ಸಮ್ಮತನು ಆಚಾರದ ನೆಲೆಯನರಿದು, ಹೃದಯದ ಕತ್ತಲೆಯ ಉದಯದಲ್ಲಿಯೇ ಕಳೆದ. ಮುಟ್ಟುವುದ ಮುಟ್ಟದೆ ಕಳೆದ; ಮುಟ್ಟದುದ ಮುನ್ನವೆ ಕಳೆದ. ಅಯ್ಯಾ ಆಯ್ಯಾ ಎಂದಲ್ಲಿಯೆ ಕಲಿಯಾದ. ಕೇಸರಿಸಮ ಜೋಗ; ಐದರ ಮದಸೇನೆ ಮುರಿಯಿತ್ತು, ಎನ್ನೊಡೆಯ ಕೂಡಲಚೆನ್ನಸಂಗಯ್ಯ ಹಿಡಿವಡೆದ
--------------
ಚನ್ನಬಸವಣ್ಣ
ಪುಷ್ಪಗಂಧದಂತೆ ಪ್ರಾಣಲಿಂಗಭಾವ. ನೀರು ಗಂಧದಂತೆ ಇಷ್ಟಲಿಂಗಭಾವ. ಇಂತೀ ನಾಲ್ಕರ ಯೋಗ ಕೂಡಿದಲ್ಲಿ ಶರಣಸ್ಥಲಭಾವ. ಇಂತೀ ಐದರ ಭಾವವ ಅವಗವಿಸಿ ನಿಂದುದು, ಐಕ್ಯಸ್ಥಲಂಗೆ ಅವದ್ಥಿಗೊಡಲಿಲ್ಲ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಮೂರರ ಹೊಲಿಗೆಯ ಬಿಚ್ಚಿ ಆರ ಮಾಡಲರಿಯರು ! ಆರರ ತಿರುಳ ತೆಗೆದು ಒಂದರೊಳಗೆ ನಿಲಿಸಲರಿಯರು ! ಐದರ ಮುಸುಕ ತೆಗೆದು ಐದರ ಕಳೆಯ ಕೆಡಿಸಿ, ಐದರ ನಿಲವನಡಗಿಸಿ ಮೂರುಸಂಕಲೆಯ ಕಳದು ಮೂರರ ಮುದ್ರೆಯನೊಡದು ಒಂದುಮುಖವಾಗಿನಿಂದಲ್ಲದೆ ಜಂಗಮವಾಗಲರಿಯರು ಕಾಣಾ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಐದರ ಮಧ್ಯದ ಕಣ್ಣ ಕಾಡಿನೊಳಗೆ ಬಿದ್ದಿದಾವೆ ಈರೈದು ಹೆಣನು ಬೆಂಬಳುವರು ಬಳಗ ಘನವಾದ ಕಾರಣ ಆ ಹೆಣನು ಬೇಯವು, ಕಾಡೂ ನಂದದು ಮಾಡು ಉರಿಯಿತ್ತು ಗುಹೇಶ್ವರಾ
--------------
ಅಲ್ಲಮಪ್ರಭುದೇವರು
ಪಂಚವಿಂಶತಿತತ್ವಾಶ್ರಯವೆಂಬ ಪಟ್ಟಣದೊಳಗೆ ಆರುಬಣ್ಣದ ಪಕ್ಷಿ ಮೂರು ಗೂಡ ಮಾಡಿಕೊಂಡು ನಾಲ್ಕರಾಹಾರವ ಕೊಂಬುವುದ ಕಂಡೆನಯ್ಯ. ಐದರ ನೀರ ಕುಡಿದು ಪರಿಣಾಮಿಸುತ್ತಿದೆ ನೋಡ. ಏಳರ ಮೊಲೆಯನುಂಡು ಎಂಟರಾಭರಣವ ತೊಟ್ಟಿದೆ ನೋಡಾ. ಹತ್ತರ ಬೆಂಬಳಿವಿಡಿದು ಒಂಬತ್ತು ಬಾಗಿಲೊಳಗೆ ನಡೆದಾಡುವದ ಕಂಡೆನಯ್ಯ. ಕೊಂಬುಕೊಂಬಿನಯಿಂಬಿನಲ್ಲಿ ಸುಳಿದಾಡುತ್ತಿದೆ ನೋಡಯ್ಯ. ಆ ಸುಳುಹಿನ ಸೂಕ್ಷ ್ಮವ ತಿಳಿದು ತನ್ನ ಸುಳುಹನರಿವ ಹಿರಿಯರಾರನು ಕಾಣೆನಯ್ಯಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ರೂಪಚಕ್ರ ನಯನದಿಂದೆ ನಡೆವುದು; ಶಬ್ದಚಕ್ರ ಶ್ರೋತ್ರದಿಂದೆ ನಡೆವುದು. ¸õ್ಞರಭಚಕ್ರ ಘ್ರಾಣದಿಂದೆ ನಡೆವುದು, ರುಚಿಚಕ್ರ ಜಿಹ್ವೆಯಿಂದ ನಡೆವುದು,_ ಸ್ಪರ್ಶಚಕ್ರ ತ್ವಕ್ಕಿನಿಂದ ನಡೆವುದು, ಈ ಐದರಿಂದ ನಡೆವುದು ಲೋಕಾದಿಲೋಕಂಗಳೆಲ್ಲ. ರೂಹಿಗೆ ಕೆಟ್ಟು ಹೋದರು. ಈ ಐದರ ಕಥನದಲ್ಲಿ, ಈ ಸಂಸಾರವೆಂಬ ವಿಧಿಯ ಕೈಯಲ್ಲಿ ಹರಿಬ್ರಹ್ಮಾಸುರರು ಮೊದಲಾದವರೆಲ್ಲರು ಕೆಟ್ಟುಹೋದರು ನೋಡಾ ಕೂಡಲಚೆನ್ನಸಂಗಮದೇವಾ
--------------
ಚನ್ನಬಸವಣ್ಣ
ಜಂಗಮಸ್ಥಲಕ್ಕೆ ಲಕ್ಷಣವಾವುದೆಂದಡೆ ಹೇಳಿಹೆ ಕೇಳಿರಣ್ಣಾ : ಮೂರರ ಹೊಲಿಗೆಯ ಬಿಚ್ಚಿ ಆರ ಮಾಡಬೇಕು. ಆರರ ತಿರುಳ ತೆಗೆದು ಒಂದರೊಳಗೆ ನಿಲಿಸಬೇಕು, ಐದರ ಮುಸುಕನುಗಿದು, ಐದರ ಕಳೆಯ ಕೆಡಿಸಿ ಐದರ ನಿಲವನಡಗಿಸಿ, ಮೂರರ ಮುದ್ರೆಯನೊಡೆದು ನಾಲ್ಕರೊಳಗೆ ನಿಲ್ಲದೆ, ಮೂರು ಮುಖವು ಒಂದು ಭಾಗವಾಗಿ ಇರಬೇಕು ! ಈ ಭೇದವನರಿಯದೆ ಸುಳಿವರ ಕಂಡು ಬೆರಗಾದೆ ಕಾಣಾ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ರಸರುಚಿಸುವಲ್ಲಿ, ಗಂಧ ವಾಸಿಸುವಲ್ಲಿ, ರೂಪು ನೋಡುವಲ್ಲಿ, ಶಬ್ದ ಕೇಳುವಲ್ಲಿ, ಸ್ಪರ್ಶ ಮುಟ್ಟುವಲ್ಲಿ. ಇಂತೀ ಐದರ ಮುಖದಲ್ಲಿ, ಅರ್ಪಿಸಿಕೊಂಬವನಾರೆಂಬುದನರಿತು, ಬಂಗಾರದ ಹಲವು ತೆರದ ಆಭರಣವ ಸ್ವಸ್ಥಾನಂಗಳಲ್ಲಿ ಶೃಂಗರಿಸುವುದು, ಘಟದಂದಚೆಂದವಲ್ಲದೆ ಆತ್ಮಂಗೊಂದೆ ವಿಲಾಸಿತ. ತನ್ನಭೀಷ್ಟೆಯ ತಾನರಿದು, ಲೀಲೋಲ್ಲಾಸತೆಯನೆಯ್ದುವಂತೆ, ಲೌಕಿಕಕ್ಕೆ ಕ್ರೀಭರಿತನಾಗಿ, ಭಾವಕ್ಕೆ ಸತ್ಕ್ರೀವಂತನಾಗಿ, ಜ್ಞಾನಕ್ಕೆ ಸರ್ವಸಂತುಷ್ಟನಾಗಿ, ರಾಗವಿರಾಗಿಯಾಗಿ, ನಿಜದಲ್ಲಿ ನಿಂದಾತನೆ ಪ್ರಾಣಲಿಂಗಸಂಬಂಧಿ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಪೃಥ್ವಿಯ ಗುಣವ ಅಪ್ಪು ನುಂಗಿತ್ತಾಗಿ, ಪೃಥ್ವಿಯ ಗುಣವಿಲ್ಲ. ಅಪ್ಪುವಿನ ಗುಣವ ಅನಲ ನುಂಗಿತ್ತಾಗಿ, ಅಪ್ಪುವಿನ ಗುಣವಿಲ್ಲ. ಅನಲನ ಗುಣವ ಅನಿಲ ನುಂಗಿತ್ತಾಗಿ, ಅನಲನ ಗುಣವಿಲ್ಲ. ಅನಿಲನ ಗುಣವ ಆಕಾಶ ನುಂಗಿತ್ತಾಗಿ, ಆನಿಲನ ಗುಣವಿಲ್ಲ ಅನಿಲನ ಗುಣವ ತನ್ನನೆ ನುಂಗಿತ್ತಾಗಿ, ಆಕಾಶದ ಗುಣವಿಲ್ಲ. ಆಕಾಶದ ಗುಣವ ತನ್ನ ತನ್ನನೆ ನುಂಗಿತ್ತಾಗಿ, ಆಕಾಶದ ಗುಣವಿಲ್ಲ. ಇದು ಕಾರಣ, ಐದರ ಗುಣದಲ್ಲಿ ಅರ್ಪಿಸಿ, ಮುಕ್ತಿಯ ಕಂಡೆಹೆನೆಂಬ ನಿಷೆ* ನಿನಗೆಲ್ಲಿಯದೊ? ಹೊಯ್ದಿರಿಸಿದ ಹೊಯ್ಗಲದಂತೆ ಭೋಗಿಸಿಹೆನೆಂದಡೆ ಕರ್ತೃತ್ವವಿಲ್ಲ. ದರುಶನವ ಹೊತ್ತು ಹೊತ್ತು ತಿರುಗುವುದಕ್ಕಲ್ಲದೆ, ಜ್ಞಾನಕ್ಕೆ ಸಂಬಂಧಿಗಳಲ್ಲ. ಐದರ ಗುಣವಡಗಿ, ಮೂರರ ಗುಣ ಮುಗಿದು, ಆರರ ಗುಣ ಹಾರಿ, ಎಂಟರ ಗುಣದ [ನೆ]ಂಟತನವ ಬಂಧಿಸಿ, ತೋರುವುದಕ್ಕೆ ಮುನ್ನವೆ ಮನ ಜಾರಿ ನಿಂದ ಮತ್ತೆ ಮೀರಲಿಲ್ಲವಾಗಿ, ಸ್ವಯ ಚರ ಪರ ತ್ರಿವಿಧವನರಿದು ಹೊರಗಾಗಿ, ಮೂರು ಮಾಟದ ಬೆಡಗನರಿದು ವಿಚಾರಿಸದೆ, ಉದರ ಘಾತಕತನಕ್ಕೆ ಹೊಟ್ಟೆಹೊರಕರೆಲ್ಲ ಜಂಗಮವೆ ? ಅಂತಲ್ಲ, ನಿಲ್ಲಿರಣ್ಣಾ. ನೀವೆ ಲಿಂಗ ಜಂಗಮವಾಗಬಲ್ಲಡೆ ನಾನೆಂಬುದ ವಿಚಾರಿಸಿಕೊಳ್ಳಿರಣ್ಣಾ. ನೀವು ಪೂಜೆಯ ಮಾಡಿಸಿಕೊಂಬುದಕ್ಕೆ ವಿವರ: ಪೂಜೆಯ ಮಾಡುವ ಭಕ್ತಂಗೆ, ಭಾರಣೆಯ ವಿದ್ಯವ ಹೊತ್ತ ವಿಧಾತೃನಂತಿರಬೇಕು. ಜಲವ ನಂಬಿದ ಜಲಚರದಂತಿರಬೇಕು, ಆಡುವ ಪಶುವಿನ ಲಾಗಿನಂತಿರಬೇಕು. ಇಂತಿವನೆಲ್ಲವಂ ಕಳೆದುಳಿದು, ಆ ಚರಲಿಂಗಮೂರ್ತಿ ತಾನಾಗಿ ನಿಂದಾತನೆ ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಪೃಥ್ವಿ ಅಪ್ಪು ತೇಜ ವಾಯು, ಆಕಾಶ_ ಇಂತೀ ಪಂಚಭೂತದಿಂದ ಒದಗಿದ ತನುವಿನ ಭೇದವ ನೋಡಿರೆ ಅಯ್ಯಾ. ಐದರ ವಿಶ್ರಾಂತಿಯಲ್ಲಿಯೆ ತನು ಸವೆದು ಹೋಗುತ್ತಿರಲು ಮತ್ತೆ ದೇವರ ಕಂಡೆನೆಂದರೆ ತನುವೆಲ್ಲಿಯದೊ ? ಅಕ್ಕಟಕ್ಕಟಾ ಲಿಂಗವೆ ! ಜಡದೇಹಿಗಳೆಲ್ಲಾ ಜಡವನೆ ಪೂಜಿಸಿ ಹತ್ತಿದರಲ್ಲಾ ಕೈಲಾಸದ ಬಟ್ಟೆಯ, ಹೋ ಹೋ ಅಲ್ಲಿಯೂ ಪ್ರಳಯ ಬಿಡದು ! ನಾ ನನ್ನ ಅಚಲಲಿಂಗವ ಸೋಂಕಿ ಸ್ವಯಾನುಭಾವ ಸಮ್ಯಕ್‍ಜ್ಞಾನದಿಂದ ಕೈಲಾಸದ ಬಟ್ಟೆ ಹಿಂದಾಗಿ ನಾ ಬಯಲಾದೆ ಕಾಣಾ ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ
ರಸ ಗಂಧ ರೂಪ ಸ್ಪರ್ಶವೆಂಬ ಪಂಚೇಂದ್ರಿಯಂಗಳಲ್ಲಿ, ಲಿಂಗಕರ್ಪಿತವ ಮಾಡಬೇಕೆಂಬ ಭಂಗಿತರ ನೋಡಾ. ಅಂಗುಷ*ದಲ್ಲಿ ಸರ್ಪದಷ್ಟವಾದಡೆ, ಸರ್ವಾಂಗದಲ್ಲಿ ವಿಷಾವರ್ತಿಸುವುದಲ್ಲದೆ, ಖಂಡಿತವಾಗಿ ನಿಂದುದಿಲ್ಲ. ಸರ್ವಾಂಗಲಿಂಗಿಗೆ ಬೇರೆ ಐದು ಸ್ಥಾನದಲ್ಲಿ, ಅರ್ಪಿತವ ಮಾಡಬೇಕೆಂಬುದಿಲ್ಲ. ಇಷ್ಟಕ್ಕೂ ಪ್ರಾಣಕ್ಕೂ ಕಟ್ಟಿದ ಈಡ ನೋಡಾ ಅಯ್ಯಾ, ಪರುಷಸರ ಕೈಯಲ್ಲಿದ್ದು ಹೇಮವನರಸಿ ತಿರುಗುವನಂತೆ. ಖೇಚರತ್ವದಲ್ಲಿ ಬಹ ಸಾಮಥ್ರ್ಯವಿದ್ದಡೇನೊ, ಅಂಬಿಗನ ಹಂಗನರಸುವನಂತೆ. ನಿತ್ಯನಿತ್ಯ ತೃಪ್ತಂಗೆ ಉಂಡೆಹೆನೆಂದು ತಳಿಗೆ ಕಂಕುಳೊಳಗಿನ ತೆರನಂತೆ. ಸ್ವಯಂಜ್ಯೋತಿಯ ಬೆಳಗುಳ್ಳವಂಗೆ, ಜ್ಯೋತಿಯ ಹಂಗಿನಲ್ಲಿ ಕಂಡೆಹೆನೆಂಬ ಭ್ರಾಂತನಂತೆ. ವಾಯುಗಮನವುಳ್ಳವಂಗೆ ತೇಜಿಯನರಸುವಂತೆ. ಅಮೃತದ ಸೇವನೆಯುಳ್ಳವಂಗೆ ಆಕಳನರಸಿ ಬಳಲಿ ಬಪ್ಪವನಂತೆ. ತಾ ಬೈಚಿಟ್ಟ ನಿಕ್ಷೇಪದ ಹೊಲಬುದಪ್ಪಿ ಬಳಲುವನಂತೆ. ಇದು ಕಾರಣ, ಐದರ ಗುಣದಲ್ಲಿ ಅರ್ಪಿತವೆಂಬ, ಮೂರರ ಗುಣದಲ್ಲಿ ಮುಕ್ತಿಯೆಂಬ, ಆರರ ಗುಣದಲ್ಲಿ ಆಧಾರವೆಂಬ, ಎಂಟರ ಗುಣದಲ್ಲಿ ಸಂತೋಷವೆಂಬ, ಭ್ರಾಂತ ಹರಿದು ಕಾಳಿಕೆಯೊಳಗಿಪ್ಪ ಕರಿಯ ಬಣ್ಣವ ಕಳೆದು, ಬೆಳಗಿನೊಳಗಿಪ್ಪ ಜ್ವಲಿತಮಂ ಕಡಿದು ತಾನು ತಾನಾಗಬಲ್ಲಡೆ, ಆತನೆ ನಿರ್ಮುಕ್ತ, ನಿಃಕಳಕಂ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಇನ್ನಷ್ಟು ... -->