ಕಾಯಶೂನ್ಯ, ಜೀವಶೂನ್ಯ,
ಪ್ರಾಣಶೂನ್ಯವೆಂದೆಂಬರು, ಅದೆಂತಯ್ಯ ?
ಮನ ಮನನ ಮನನೀಯಂಗಳಲ್ಲಿ
ಮಂತ್ರಲೀಯವಾದುದೆ ಕಾಯಶೂನ್ಯ.
ಆ ಮಂತ್ರ ಪಿಂಡಾಂಡದಲ್ಲಿ,
ಪರಿಪೂರ್ಣಭೇದ ತೋರಿದಾಗಲೆ ಜೀವಶೂನ್ಯ.
ಆ ಪ್ರಭೆಯ ಪರಿಣಾಮದಲ್ಲಿ ಜೀವನ ಉಪಾದ್ಥಿ ನಷ್ಟವಾಗಿ,
ಜೀವ ಪರಮ ಸಂಯೋಗವೆಂಬ ಸಂದೇಹವಳಿದಾಗಲೇ ಪ್ರಾಣಶೂನ್ಯ,
ಇದು ತ್ರಿವಿಧಶೂನ್ಯ,
ಐಘಟದೂರ ರಾಮೇಶ್ವರಲಿಂಗದಲ್ಲಿ ನಿಲುಕಡೆ.