ಅಥವಾ

ಒಟ್ಟು 22 ಕಡೆಗಳಲ್ಲಿ , 3 ವಚನಕಾರರು , 22 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಂಧಕ ಪಂಗುಳನಾದ, ಪಂಗುಳ ಅಂಧಕನಾದ. ಈ ಉಭಯದ ಬೆಂಬಳಿಯನರಿಯಬೇಕು. ಮಂಜರಿ ವಿಹಂಗನ ಕೊಂದು ಉಭಯವನರಿಯಬೇಕು. ಪರಮ ಜೀವನದೊಳಗಡಗಿ ಪರಮನಾದ ಉಭಯವ ತಿಳಿಯಬೇಕು. ಬೆಂಕಿ ಮರದೊಳಗಿದ್ದು, ಮಥನದಿಂದ ಮರ ಸುಟ್ಟು, ಮರ ಬೆಂಕಿಯಾದ ತೆರನನರಿತಡೆ ಪ್ರಾಣಲಿಂಗಸಂಬಂದ್ಥಿ. ಪ್ರಾಣಲಿಂಗವೆಂಬುಭಯ ಸಮಯ ನಿಂದಲ್ಲಿ, ಐಕ್ಯಾನುಭಾವ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಇದು ಜಗವ್ಯವಹಾರಣೆಯ ಧರ್ಮ, ಮುಂದಕ್ಕೆ ಐಕ್ಯಾನುಭಾವ. ಕಾಯ ಅಕಾಯದಲ್ಲಿ ಅಡಗಿ, ಜೀವ ನಿರ್ಜೀವದಲ್ಲಿ ಅಡಗಿ, ಭ್ರಮೆ ಸಂಚಾರವಿಲ್ಲದೆ, ಮಹಾಘನದಲ್ಲಿ ಸಂದು, ಉಭಯದ ಸಂದಿಲ್ಲದೆ ಬಂಕೇಶ್ವರಲಿಂಗದಲ್ಲಿ ಸಲೆ ಸಂದವನ ಒಲುಮೆ.
--------------
ಸುಂಕದ ಬಂಕಣ್ಣ
ಒಡಲಿಲ್ಲದೆ ಆತ್ಮನಿರಬಲ್ಲುದೆ? ಕ್ರೀಯಿಲ್ಲದೆ ಸತ್ಯ ನಿಲಬಲ್ಲುದೆ? ಭಾವವಿಲ್ಲದೆ ವಸ್ತು ಈಡಪ್ಪುದೆ? ಒಂದರಾಸೆಯಲ್ಲಿ ಒಂದ ಕಂಡು, ದ್ವಂದ್ವನೊಂದು ಮಾಡಿ, ಒಂದೆಂಬುದನರಿತು, ಪ್ರಾಣಕ್ಕೆ ಸಂಬಂಧವ ಮಾಡಿ, ಕೂಡಿಯಿದ್ದುದು ಪ್ರಾಣಲಿಂಗ. ಆ ಉಭಯದ ಸಂದಳಿದುದು, ಐಕ್ಯಾನುಭಾವ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಅಲ್ಲಿಗೆ ಮರ್ಕಟನಂತಾಗದೆ, ಇಲ್ಲಿಗೆ ವಿಹಂಗನಂತಾಗದೆ. ಈಚೆಯಲ್ಲಿಗೆ ಪಿಪೀಲಿಕನಂತಾಗದೆ, ರಾಜಸ ತಾಮಸ ಸಾತ್ವಿಕದಲ್ಲಿ ಸಾಯದೆ, ಭಾಗೀರಥಿಯಂತೆ ಹೆಚ್ಚು ಕುಂದಿಲ್ಲದೆ, ಮಾಸದ ಚಂದ್ರನಂತೆ, ಕಲೆಯಿಲ್ಲದ ಮೌಕ್ತಿಕದಂತೆ, ರಜವಿಲ್ಲದ ರತ್ನದಂತೆ, ತೆರೆದೋರದ ಅಂಬುಧಿಯಂತೆ, ಒಡಲಳಿದವಂಗೆ, ನೆರೆ ಅರಿದವಂಗೆ, ಕುರುಹೆಂಬುದು ಆತ್ಮನಲ್ಲಿ ಘಟಿಸಿದವಂಗೆ ಬೇರೊಂದೆಡೆಯಿಲ್ಲ. ಆ ಗುಣವಡಗಿದಲ್ಲಿ ಪ್ರಾಣಲಿಂಗಸಂಬಂಧ. ಆ ಸಂಬಂಧ ಸಮಯ ಸ್ವಸ್ಥವಾದಲ್ಲಿ, ಐಕ್ಯಾನುಭಾವ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಮಹಾಮಲೆಯಲ್ಲಿ ಕೊಲುವ ವ್ಯಾಘ್ರನ ನಾಲಗೆಯ ತುದಿಯಲ್ಲಿ, ಒಂದು ಮೊಲ ಹುಟ್ಟಿತ್ತು. ಆ ಮೊಲಕ್ಕೆ ಮೂರು ಕಾಲು, ತಲೆಯಾರು, ಬಾಯಿ ಐದು. ಒಂದು ಬಾಯಿ ಎಲ್ಲಿ ಅಡಗಿತ್ತೆಂದರಿಯೆ. ಆರು ತಲೆಗೆ ಒಂದು ಕಣ್ಣು, ಅರೆ ನಾಲಗೆ, ಕಿತ್ತಿ ಹತ್ತಾಗಿ ಹರಿದಾಡುತ್ತದೆ. ಎಸುವರ ಕಾಣೆ, ಬಲೆಗೊಳಗಾಗದು. ಆ ಶವಕವ ಹೊಸ ಕೋಳಿ ನುಂಗಿತ್ತು, ನುಂಗಿದ ಕೋಳಿಯ ಶರಣ ನುಂಗಿದ. ಆ ಶರಣಸನ್ಮತವಾಗಿ ಪ್ರಣವ ನುಂಗಿತ್ತು. ಆ ನುಂಗಿದ ಪ್ರಣವವ ಅದರಂಗವನರಿದಡೆ, ಐಕ್ಯಾನುಭಾವ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಉರಿಯೊಳಗಣ ಶೈತ್ಯದಂತೆ, ಶೈತ್ಯದೊಳಗಣ ಉರಿಯಂತೆ, ಅರಿದು ಅರುಹಿಸಿಕೊಂಬುದೇನು ಹೇಳಾ? ಅದು ಚಂದ್ರನೊಳಗಣ ಕಲೆ, ತನ್ನಂಗದ ಕಳೆಯಿಂದ ಉಭಯದೃಷ್ಟವ ಕಾಣಿಸಿಕೊಂಬಂತೆ, ಆ ಇಷ್ಟದ ದೃಷ್ಟದ ಕಾಣಿಸಿಕೊಂಡಂತೆ, ಅರಿವುದು, ಅರುಹಿಸಿಕೊಂಬುದು ಒಡಗೂಡಿದಲ್ಲಿ ಶರಣ ಸ್ಥಲ. ಆ ಸಂಬಂಧಸಮಯ ನಿಂದಲ್ಲಿ ಐಕ್ಯಾನುಭಾವ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಸರ್ವವನಾಧರಿಸಿಕೊಂಡಿಪ್ಪ ಮಹಾಶರಣನ ಇರವು ಎಂತುಟೆಂದಡೆ, ಮಹಾಪಲ್ಲವಿಸಿ ಬೆಳೆದ ವೃಕ್ಷದ ಶಾಖೆಗಳಂತೆ. ಮರ್ಕಟ ವಿಹಂಗ ನಾನಾ ಕೀಟಕ ಜಾತಿ ಕುಲಕ್ಕೆ ಸಂಭ್ರಮಿಸಿ ನೆರೆದು, ತಮ್ಮ ತಮ್ಮ ಅಂಗದವೊಲು ಜಾತಿ ಉತ್ತರಗಳಿಂದ ಆಡುತ್ತಿರಲಾಗಿ, ಬೇಡಾ ಎಂಬುದಕ್ಕೆ ಈಡಾಯಿತ್ತೆ ? ಆ ತೆರನನರಿತು, ಬಂದಿತು ಬಾರದೆಂಬ ಸಂದೇಹ ನಿಂದಲ್ಲಿ, ಶರಣಸ್ಥಲ. ಇಂತೀ ಅಪ್ರಮಾಣ ಕುರುಹಳಿದು ನಿಂದಲ್ಲಿ, ಐಕ್ಯಾನುಭಾವ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಶುಕ್ತಿಕರಂಡದಲ್ಲಿ ಬಿದ್ದ ಅಪ್ಪು, ಶುಕ್ತಿಯ ಭೇದವೋ? ಕರಂಡದ ಭೇದವೋ? ಅಪ್ಪುವಿನ ಭೇದವೋ? ಕಾಯದಲ್ಲಿದ್ದ ಭಾವ, ಭಾವದಲ್ಲಿದ್ದ ಜೀವ, ಜೀವದಿಂದ ಭಾವವಾಯಿತ್ತೋ, ಭಾವದಿಂದ ಕಾಯವಾಯಿತ್ತೋ? ಪಾಷಾಣವ ಕೂಡಿದ್ದ ರತಿ, ರತಿಯ ಕೂಡಿದ್ದ ಬೆಳಗು, ಬೆಳಗು ರತಿಯಿಂದಲಾಯಿತ್ತೋ, ರತಿ ಶಿಲೆಯಿಂದಲಾಯಿತ್ತೋ? ಇಂತೀ ಅಂಗ ತ್ರಿವಿಧ, ಇಂತೀ ಭಾವ ತ್ರಿವಿಧ, ಇಂತಿ ಜೀವ ತ್ರಿವಿಧ. ಇಂತೀ ತ್ರಿವಿಧ ಸ್ಥಲಂಗಳಲ್ಲಿ ಇಂತೀ ತ್ರಿವಿಧ ಸೂಕ್ಷ್ಮಂಗಳಲ್ಲಿ, ಇಂತೀ ತ್ರಿವಿಧ ಕಾರಣಂಗಳಲ್ಲಿ, ಅಳಿವ ಉಳಿವ ಉಭಯವನರಿತು ನೆನೆವುದು, ನೆನೆಯಿಸಿಕೊಂಬ ಉಭಯವನರಿತು, ಉಭಯ ಒಂದಾದಲ್ಲಿ ಪ್ರಾಣಲಿಂಗ. ಉಭಯಸಂಬಂಧ ಉಭಯ ಲೇಪವಾದಲ್ಲಿ, ಐಕ್ಯಾನುಭಾವ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಮಾತನಾಡುವ ಪಂಜರದ ವಿಂಹಗನ ಕೊಂದು, ಕೋಡಗ ನುಂಗಿತ್ತು. ನುಂಗಿದ ಕೋಡಗವ ಮಂಜರಿ ತಿಂದಿತ್ತು. ತಿಂದ ಮಂಜರಿಯ ಅಂಧಕ ಕಂಡ. ಆ ಅಂಧಕ ಪಂಗುಳಗೆ ಹೇಳಲಾಗಿ, ಪಂಗುಳ ಹರಿದು ಮಂಜರಿಯ ಕೊಂದ. ಪಂಜರದ ಗಿಳಿಯ, ಮಂಜರಿಯ ಲಾಗ, ಅಂಧಕನ ಧ್ಯಾನವ, ಪಂಗುಳನ ಹರಿತವ, ಈ ದ್ವಂದ್ವಗಳನೊಂದುಮಾಡಿ, ಈ ಚತುರ್ವಿಧದಂಗವ ತಿಳಿದಲ್ಲಿ, ಪ್ರಾಣಲಿಂಗಸಂಬಂಧ. ಸಂಬಂಧವೆಂಬ ಸಮಯ ಹಿಂಗಿದಲ್ಲಿ, ಐಕ್ಯಾನುಭಾವ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ದ್ರವ್ಯದ ಸಂಗದಿಂದ ಅರಸಿಕೊಂಬ ಅಪ್ಪು, ದ್ರವ್ಯವ ಕಳೆದುಳಿದು ಅರಸಿಕೊಂಬುದೆ ? ಅಂಗದಲ್ಲಿ ದ್ವಂದ್ವವಾದ ಆತ್ಮಬಂಧಕ್ಕೆ ಈಡಪ್ಪುದಲ್ಲದೆ ನಿರಂಗವ ಬಂಧಿಸಬಹುದೆ ? ಆ ನೀರು ಸಾರವ ಕೊಟ್ಟ ದ್ರವ್ಯಕ್ಕೆ ಮತ್ತೆ ತುಷಾರವಾಗಿ ಸಾರವನೆಯ್ದಿದಂತೆ, ವಸ್ತು ತ್ರಿವಿಧನಾಗಿ, ನಿತ್ಯಾನಿತ್ಯವ ಹೊತ್ತಾಡಿ ಭಕ್ತಿ ಕಾರಣವಾಗಿ, ಭಕ್ತಿ ಮುಕ್ತಿಯಾಗಿ, ಮುಕ್ತಿ ನಿಶ್ಚಯವಾದಲ್ಲಿ, ಪ್ರಾಣಲಿಂಗಸಂಬಂಧ. ಪ್ರಾಣ ಪ್ರಣವದಲ್ಲಿ ಲೇಪವಾದ ಮತ್ತೆ ಐಕ್ಯಾನುಭಾವ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಸುಡುವ ಬೆಂಕಿಯ ತುದಿಮೊನೆಯಲ್ಲಿ, ಒಂದು ಅರಗಿನ ಮಣಿಮಾಡದೆ ಮನೆಯಲ್ಲಿ ಬೂರದ ಹಾಸುಹಾಕಿ, ನೀರಿನ ಮಂಚದ ಮೇಲೆ ನಾರಿಯರೆಲ್ಲರೂ ತಮ್ಮ ಕ್ರೀಡಾಭಾವಂಗಳಿಂದ ಮಲಗಿರಲಾಗಿ, ಅರಗಿನ ಮಾಡ ಎದ್ದುರಿದು, ನೀರ ಮಂಚವ ಸುಟ್ಟು, ಬೂರದ ಹಾಸು ಹೊತ್ತಿ, ನಾರಿಯರುರಿದು ಹೋಗಿ, ಉರಿವ ನಾಲಗೆ ಹರಿವ ನೀರ ಕೆಡಿಸಿತ್ತು. ಆ ಹರವರಿಯಲ್ಲಿ ಪರಿಹರಿಸಬಲ್ಲಡೆ, ಐಕ್ಯಾನುಭಾವ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಅಷ್ಟತನುಮೂರ್ತಿ ಕೂಡಿ ನಿಂದು, ವಸ್ತುವನರಿಯಬೇಕೆಂದು, ತತ್ವ ಇಪ್ಪತ್ತೈದು ಕೂಡಿ ನಿಂದು, ವಸ್ತುವನರಿಯಬೇಕೆಂಬುದು, ಶತ ಏಕವನರಸಿ ಒಂದುಗೂಡಿ ವಸ್ತುವನರಿಯಬೇಕೆಂಬುದು, ತಾಪತ್ರಯವಾರು, ತನುತ್ರಯ ಮೂರು, ದಶವಾಯುವಿನಲ್ಲಿ ಸೂಸುವ ಆತ್ಮನ ಮುಕ್ತವ ಮಾಡಿ ವಸ್ತುವನರಿಯಬೇಕೆಂಬುದು, ಅಷ್ಟಮದಂಗಳ ಹಿಟ್ಟುಗುಟ್ಟಿ, ವಸ್ತುವ ಕಾಣಬೇಕೆಂಬುದು, ಷಟ್ಸ್ಥಲವನಾಚರಿಸಿ ನಿಂದು ವಸ್ತುವ ಒಡಗೂಡಿ ಅರಿಯಬೇಕೆಂಬುದು, ಬ್ರಹ್ಮನ ಉತ್ಪತ್ಯಕ್ಕೆ ಹುಟ್ಟದೆ, ವಿಷ್ಣುವಿನ ಸ್ಥಿತಿಗೊಳಗಾಗದೆ, ರುದ್ರನ ಲಯಕ್ಕೆ ಸಿಕ್ಕದೆ, ನಿಜದಲ್ಲಿ ನಿಂದು ವಸ್ತುವನರಿಯಬೇಕೆಂಬುದು ಅದೇನು ಹೇಳಾ? ಆ ಗುಣ ಸ್ವಾದೋದಕ ಮೇಘದಲ್ಲಿ ಏರಿ ಧರೆಗೆಯ್ದಿದಂತೆ, ಆ ಅಪ್ಪುವಿನಿಂದ ತರು, ಸಸಿ ಸಕಲಜೀವಂಗಳಿಗೆ ಸುಖವನೆಯ್ದಿಸುವಂತೆ, ಎಂಬುದನರಿದು ವರ್ತನಕ್ಕೆ ಕ್ರೀ, ಕ್ರೀಗೆ ನಾನಾ ಭೇದ, ನಾನಾ ಭೇದಕ್ಕೆ ವಿಶ್ವಮಯ ಸ್ಥಲಂಗಳಾಗಿ, ಸ್ಥಲ ಏಕೀಕರಿಸಿ ನಿಂದುದು ಮಹಾಜ್ಞಾನ. ಆ ಮಹಾಜ್ಞಾನವನೇಕೀಕರಿಸಿ ನಿಂದುದು ದಿವ್ಯಜ್ಞಾನ. ಆ ಜ್ಞಾನ ಸುಳುಹುದೋರದೆ ನಿಂದುದು ಪ್ರಾಣಲಿಂಗಿಯ ಭಾವ. ಆ ಭಾವ ನಿರ್ಭಾವವಾದುದು ಐಕ್ಯಾನುಭಾವ. ನಿಃಕಳಂಕ ಮಲ್ಲಿಕಾರ್ಜುನಲಿಂಗದಲ್ಲಿ ಸಂದನಳಿದು ನಿಂದ ನಿಜ.
--------------
ಮೋಳಿಗೆ ಮಾರಯ್ಯ
ಸಕಲ ಸುಖಭೋಗಂಗಳಲ್ಲಿದ್ದೂ ಇಲ್ಲದಾತನ ಆತ್ಮನ ಇರವು ಎಂತುಟೆಂದಡೆ, ನೀರೆಣ್ಣೆಯಂತೆ, ಜಲವಾಳುಕದಂತೆ, ಉದಕ ಕಲ್ಲಿನಂತೆ, ಅಂಬುಜಪತ್ರದ ಬಿಂದುವಿನಂತೆ, ಸಕಲವಿಷಯದಲ್ಲಿ ತನು ನೋಯದೆ, ಮನವಳಿಯದೆ, ಆತ್ಮಬಂಧವಿಲ್ಲದೆ ಅಲೇಪನಾಗಿರಬಲ್ಲಡೆ, ಉಂಡು ಉಪವಾಸಿ ಬಳಸಿ ಬ್ರಹ್ಮಚಾರಿ. ಇಷ್ಟನರಿಯದೆ ಅಭಿಲಾಷೆಗೆ ಬಂದು ದೀಪದ ಬೆಳಗಿಂಗೆ ಲೇಸೆಂದು ಬೀಳುವ ಕೀಟಕನಂತಾಗದೆ, ಕಾಯಸುಖವ ಮೆಚ್ಚಿ, ಕರ್ಮಕ್ಕೊಳಗಾಗದೆ, ಜೀವ ಸರ್ವೇಂದ್ರಿಯಂಗಳಲ್ಲಿ ಲೋಲಿತನಾಗದೆ, ಬಂಧಮೋಕ್ಷಕರ್ಮಂಗಳ, ಅವು ಬಂದಬಂದ ಠಾವಿನಲ್ಲಿ ಇಂಬಿಟ್ಟು, ಉಭಯದ ಸಂದಳಿಯ ಬಿಟ್ಟು, ಬೇರೊಂದು ಉಭಯ ಬೇರಾಗದೆ ಅದು ಬಿಡುಮುಡಿಯ ಭೇದ. ಒಳಗಡಗಿದಾತನನರಿ, ದೃಷ್ಟದ ಬೇರ ಮುಟ್ಟಬೇಡ. ಮತ್ತರಿತು ಉಭಯವ ಮುಟ್ಟದಿದ್ದಡೆ ಪ್ರಾಣಲಿಂಗಸಂಬಂಧಿ. ಆ ಸಂಬಂಧ ಸಮಯಕ್ಕೆ ಹೊರಗಾದಲ್ಲಿ, ಐಕ್ಯಾನುಭಾವ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಸಕಲ ರೂಪೆಂದು, ನಿಃಕಲ ನಿರವಯವೆಂದು ಲಕ್ಷಿಸಿ ನುಡಿವಾಗ, ಸಕಲವನರಿವುದು ನಿಃಕಲವೋ, ಸಕಲವೋ? ಸಕಲವೆ ರೂಪಿಗೊಳಗಾದ ವಸ್ತು, ನಿಃಕಲವೆ ಒಡಲುಗೊಂಡ ವಸ್ತು. ಅದು ಸೂತ್ರದ ನೂಲಿನಂತೆ ಕಡೆಗಾಣಿಸಿ ನಿಂದಲ್ಲಿ, ಬೊಂಬೆಗೆ ಹಾಹೆ ಉಂಟೆ? ಅಂಗಕ್ಕ ಕರ್ಮವಿಲ್ಲ, ಆತ್ಮಂಗಲ್ಲದೆ. ಈ ದ್ವಂದ್ವದ ಸುಸಂಗದಲ್ಲಿ ನಿಂದು ನೋಡಲಾಗಿ, ಅಂಗ ನಿರಂಗವೆಂಬುದು ಅಲ್ಲಿಯೆ ಅಡಗಿತ್ತು. ಅದೇ ಐಕ್ಯಾನುಭಾವ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಇಷ್ಟಲಿಂಗಸಂಬಂಧ, ಭಾವಲಿಂಗಸಂಬಂಧ, ಪ್ರಾಣಲಿಂಗಸಂಬಂಧವೆಂದು ಭಾವಿಸಿ ಕಲ್ಪಿಸುವಾಗ, ಅಂಗದ ಮರೆಯ ಇಷ್ಟ, ಇಷ್ಟದ ಮರೆಯ ಭಾವ, ಭಾವದ ಮರೆಯ ಪ್ರಾಣ, ಪ್ರಾಣದ ಮರೆಯ ಜ್ಞಾನ, ಇಂತೀ ಗುಣಂಗಳ ಏಕವ ಮಾಡಿ, ಉಭಯ ದೃಷ್ಟಕ್ಕೆ ಒಡಲಿಲ್ಲದೆ ನಿಂದ ನಿಜ, ಐಕ್ಯಾನುಭಾವ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಇನ್ನಷ್ಟು ... -->