ಅಥವಾ

ಒಟ್ಟು 5 ಕಡೆಗಳಲ್ಲಿ , 5 ವಚನಕಾರರು , 5 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅನಲನಾರಣ್ಯದೊಳಗೆ ಎದ್ದಲ್ಲಿ; ದೂ(ಧು?)ರದೆಡೆಯಲಾರನೂ ಕಾಣೆವು, ಸಂಗ್ರಾಮಧೀರರೆಲ್ಲರೂ ನೆಲೆಗೆಟ್ಟರಾಗಿ ! ಮಾಯಾಮಂಜಿನ ಕೋಟೆಗೆ, ರಂಜನೆಯ ಕೊತ್ತಳ, ಅಂಜನೆಯ ಕಟ್ಟಳೆ. ಗುಹೇಶ್ವರನು ಶರಣ ಐಕ್ಯಸ್ಥಲವ ಮೆಟ್ಟಲೊಡನೆ, ಸರ್ವವೂ ಸಾಧ್ಯವಾಯಿತ್ತು.
--------------
ಅಲ್ಲಮಪ್ರಭುದೇವರು
ಎನಗೆ ಗುರುಸ್ಥಲವ ತೋರಿದಾತ ಸಂಗನ ಬಸವಣ್ಣನು. ಎನಗೆ ಲಿಂಗಸ್ಥಲದ ತೋರಿದಾತ ಚನ್ನಬಸವಣ್ಣನು. ಎನಗೆ ಜಂಗಮಸ್ಥಲವ ತೋರಿದಾತ ಸಿದ್ಧರಾಮಯ್ಯನು. ಎನಗೆ ಪ್ರಸಾದಿಸ್ಥಲವ ತೋರಿದಾತ ಬಿಬ್ಬಬಾಚಯ್ಯನು. ಎನಗೆ ಪ್ರಾಣಲಿಂಗಿಸ್ಥಲವ ತೋರಿದಾತ ಚಂದಯ್ಯನು. ಎನಗೆ ಶರಣಸ್ಥಲವ ತೋರಿದಾತ ಸೊಡ್ಡಳ ಬಾಚರಸನು. ಎನಗೆ ಐಕ್ಯಸ್ಥಲವ ತೋರಿದಾತ ಅಜಗಣ್ಣನು. ಎನಗೆ ನಿಜಸ್ಥಲವ ತೋರಿದಾತ ಪ್ರಭುದೇವರು. ಇಂತೀ ಸ್ಥಲಗಳ ಕಂಡು ಏಳ್ನೂರೆಪ್ಪತ್ತು ಅಮರಗಣಂಗಳ ಶ್ರೀಪಾದಕ್ಕೆ ಶರಣೆಂದು ಬದುಕಿದೆನು ಕಾಣಾ! ಅಭಿನವ ಮಲ್ಲಿಕಾರ್ಜುನಾ.
--------------
ಡೋಹರ ಕಕ್ಕಯ್ಯ
ಭಕ್ತಸ್ಥಲವ ತಾಳ್ದ ಮತ್ತೆ ತ್ರಿವಿಧದಲ್ಲಿ ಆವ ಸೋಂಕು ಬಂದಡೂ ಗುರುಚರಪರದಲ್ಲಿ ಶ್ರುತದಿಂದ ಕೇಳಿ ದೃಷ್ಟದಿಂದ ಕಂಡು, ಅನುಮಾನದಿಂದ ವಿಚಾರಿಸಿಕೊಂಡರಿದಡೂ ವೃಶ್ಚಿಕದಿಂದ ನೊಂದ ಚೋರನಂತೆ ಬಾಯಿ ಮುಚ್ಚಿದಂತಿರಬೇಕು. ಮಾಹೇಶ್ವರಸ್ಥಲವ ತಾಳ್ದಲ್ಲಿ ಆವ ವ್ರತಹಿಡಿದಡೂ ತಪ್ಪಿದವರ ಕಂಡಲ್ಲಿ, ಗುರುಲಿಂಗಜಂಗಮದ ನಿಂದೆಯ ಕೇಳಿ ಕಂಡಲ್ಲಿ, ತನ್ನ ಅನುವಿಂಗೆ ಬಾರದೆ ಆಚಾರಕ್ಕೆ ಓಸರಿಸಿದವರ ಕಂಡಲ್ಲಿ, ತನ್ನ ಸ್ಥಲಕ್ಕೆ ಊಣಯವೆಂದು ಕೇಳಿದಲ್ಲಿ ಕೇಳಿದ ತೆರನ ತನ್ನ ತಾನರಿದಲ್ಲಿ, ಇದಿರಿಗೆ ಆಜ್ಞೆ ತನಗೆ ಸಾವಧಾನ ಕಡೆಯೆಂಬುದನರಿತುದು ವಿಶ್ವಲಿಂಗ ಮಾಹೇಶ್ವರಸ್ಥಲ. ಪ್ರಸಾದಿಸ್ಥಲವ ತಾಳ್ದಲ್ಲಿ, ಶುದ್ಧವೆನ್ನದೆ ಸಿದ್ಧವೆನ್ನದೆ ಪ್ರಸಿದ್ಧವೆನ್ನದೆ ಉಚಿತದಲ್ಲಿ ಚಿಕಿತ್ಸೆ ಜುಗುಪ್ಸೆಯೆನ್ನದೆ ಕಾಲರುದ್ರನಂತೆ ದಾವಾನಳನಂತೆ ಪೂರ್ಣಚಂದ್ರ ಮಹಾರ್ಣಸಿಂಧುವಿನ ತೆರದಂತೆ ನೂತನ ಇನನ ಹೋದ ಕಳೆಯಂತೆ ಬಂದುದ ನಿಂದುದ ಬಹುದ ಸಂದಿತ್ತು. ಸಾಕುಬೇಕೆನ್ನದೆ ಕರುಣದಿಂದ ಬಂದಡೆ ಕರುಣದಿಂದ ಸಾಕೆಂದು ನಿಂದಡೆ, ಪ್ರಸಾದವ ಕೊಂಡಲ್ಲಿ ಉಕ್ಕಳ ಉಬ್ಬಸ ತಬ್ಬಿಬ್ಬು ಹೋಗಿ, ವೃದ್ಧಿಗೆ ಎಡೆಯಿಲ್ಲದೆ, ಭಾಗೀರಥಿಯಂತೆ ತುಂಬಿತ್ತೆಂದು ಸೂಸದೆ ಎಲ್ಲಾ ಎಂದು ಹಿಂಗದೆ ಎಂದಿನಂತೆ ತುಂಬಿದಂತೆ ಇಪ್ಪ ನಿಜಪ್ರಸಾದಿಯ ನಿಜದಂಗಸ್ಥಲ. ಪ್ರಾಣಲಿಂಗಿಸ್ಥಲವ ತಾಳ್ದಲ್ಲಿ, ಬಿತ್ತುಳಿದ ಕಾರ್ಪಾಸದ ಹಿಕ್ಕಿದ ಮಧ್ಯದಲ್ಲಿ ಕಿಚ್ಚು ಮುಟ್ಟದಂತೆ ಪೃಥ್ವಿಯ ಪಿಪೀಲಿಕ ಮೃತ್ತಿಕೆಯ ಮುಟ್ಟಲಿಕ್ಕಾಗಿ, ಅಪ್ಪು ಒಡಗೂಡಿಯೆ ತಿಟ್ಟ ನಿಂದಂತೆ, ಕರ್ಪೂರದ ವೃಕ್ಷಕ್ಕೆ ಬುಡದಿಂದ ಕಿಚ್ಚು ಹತ್ತಿದಂತೆ, ಮಧುಮಕ್ಷಿಕದ ಚಿತ್ತವಿದ್ದಂತೆ, ಆಯುಃಕಾಂತ ಲೋಹಕ್ಕೆ ಆತ್ಮಭಾವವಿದ್ದಂತೆ, ಕೂರ್ಮನ ಶಿಶುವಿನ ಸ್ನೇಹವಿದ್ದಂತೆ, ಈ ಗುಣ ಸದ್ಭಾವದಲ್ಲಿ ಪ್ರಾಣಲಿಂಗಿಸ್ಥಲ. ಶರಣಸ್ಥಲದ ತಾಳ್ದಲ್ಲಿ, ಮದಗಜದಂತೆ ಬಿದಿರಿನ ಪಟುಭಟನಂತೆ ಮಸಗಿದ ಮಾರುತನಂತೆ ಘನಸಿಂಧು ಎಸಗಿದ ಉದ್ಭವದಂತೆ ಕಾಲಸಂಹಾರ ಲೀಲೆಯಾದಂತೆ ತಾನಿರೆಂಬ ಭಾವವ ಮರೆದು ನಿಶ್ಚಲ ನಿಜವಾದುದು ಶರಣಸ್ಥಲ. ಐಕ್ಯಸ್ಥಲವ ತಾಳ್ದಲ್ಲಿ, ಶಕ್ತಿಯಲ್ಲಿ ನಿಂದ ಅಪ್ಪುವಿನಂತೆ, ಬಿಂದುವನೊಳಕೊಂಡ ರಜ್ಜುವಿನಂತೆ ರಜ್ಜುವನೊಳಕೊಂಡ ಋತುಕಾಲದ ಸುರಂಗದ ನಿರಂಗದಂತೆ. ಸುಗಂಧವ ಕೊಂಡೊಯ್ದ ಸಂಚಾರ ಹೋಗ ಹೋಗಲಿಕ್ಕಾಗಿ ಸುಗಂಧದಂಗವಡಗಿದಂತೆ ವಿದ್ಯುಲ್ಲತೆಯ ಕುಡಿವೆಳಗಿನಂತೆ ನಿರವಯದ ಗರ್ಜನೆಯಂತೆ, ವಿಷರುಹದ ಭದ್ರದ ಸುವರ್ಣದ ನಿರ್ಧರದ ನಿರವಯದಂತೆ, ಅಂಬುಧಿಯೊಳಗಡಗಿದ ಸೂಕ್ಷ ್ಮ ಸಮಸಂಗದ ಘಟದಂತೆ, ಮಂಜಿನಪದ ಬಿಸಿಲಂಗದ ನಾಮದಲ್ಲಿ ಇಂಗಿ ಹೋದಂತೆ, ಈ ನಿರಂಗ ನಿಶ್ಚಯವಾದಲ್ಲಿ ಐಕ್ಯಸ್ಥಲ. ಇಂತೀ ಆರುಸ್ಥಲವನರಿದು ಮೂರುಸ್ಥಲದಲ್ಲಿ ನಿಂದು, ಉಭಯಸ್ಥಲ ಕೂಡಿ ಎರಡಳಿದ ಉಳುಮೆ ಪರಿಪೂರ್ಣವಸ್ತು ಬಂಧಮೋಕ್ಷ ಕರ್ಮಂಗಳಿಂದತ್ತ ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ, ಮಾತುಳಂಗ ಮಧುಕೇಶ್ವರನು. || 68 ||
--------------
ದಾಸೋಹದ ಸಂಗಣ್ಣ
ಮಾಯಾಕೋಳಾಹಳನೆಂಬ ಬಿರುದ ಸೂರೆಗೊಂಡರು ಪ್ರಭುದೇವರು. ಯೋಗಾಂಗವ ಸೂರೆಗೊಂಡರು ಸಿದ್ಧರಾಮೇಶ್ವರದೇವರು. ಭಕ್ತಿಸ್ಥಲವ ಸೂರೆಗೊಂಡು, ನಿತ್ಯಪವಾಡವ ಗೆದ್ದರು ಬಸವೇಶ್ವರದೇವರು. ಷಟ್‍ಸ್ಥಲವ ಸೂರೆಗೊಂಡರು ಚನ್ನಬಸವೇಶ್ವರದೇವರು. ಐಕ್ಯಸ್ಥಲವ ಸೂರೆಗೊಂಡರು ಅಜಗಣ್ಣದೇವರು. ಶರಣಸತಿ ಲಿಂಗಪತಿಯಾದರು ಉರಿಲಿಂಗದೇವರು. ಪ್ರಸಾದಿಸ್ಥಲವ ಸೂರೆಗೊಂಡರು ಬಿಬ್ಬಿ ಬಾಚಯ್ಯಂಗಳು, ಜ್ಞಾನವ ಸೂರೆಗೊಂಡರು ಚಂದಿಮರಸರು. ನಿರ್ವಾಣವ ಸೂರೆಗೊಂಡರು ನಿಜಗುಣದೇವರು. ಪ್ರಸಾದಕ್ಕೆ ಸತಿಯಾದರು ಅಕ್ಕನಾಗಮ್ಮನವರು. ಉಟ್ಟುದ ತೊರೆದು ಬಟ್ಟಬಯಲಾದರು ಮೋಳಿಗಯ್ಯನ ರಾಣಿಯರು. ಪರಮ ದಾಸೋಹವ ಮಾಡಿ, ಲಿಂಗದಲ್ಲಿ ನಿರವಲಯನೈದಿದರು ನೀಲಲೋಚನೆಯಮ್ಮನವರು. ಪರಮವೈರಾಗ್ಯದಿಂದ ಕಾಮನ ಸುಟ್ಟ ಭಸ್ಮವ ಗುಹ್ಯದಲ್ಲಿ ತೋರಿಸಿ ಮೆರೆದರು ಮಹಾದೇವಿಯಕ್ಕಗಳು. ಗಂಡ ಸಹಿತ ಲಿಂಗದಲ್ಲಿ ಐಕ್ಯವಾದರು ತಂಗಟೂರ ಮಾರಯ್ಯನ ರಾಣಿಯರು. ಇಂತಿವರು ಮುಖ್ಯವಾದ ಏಳುನೂರೆಪ್ಪತ್ತು ಅಮರ ಗಣಂಗಳ ಶ್ರೀಪಾದವ ಅಹೋರಾತ್ರಿಯಲ್ಲಿ ನೆನೆನೆದು ಬದುಕಿದೆನಯ್ಯಾ, ಬಸವಪ್ರಿಯ ಕೂಡಲಚೆನ್ನಸಂಗಮದೇವಾ.
--------------
ಸಂಗಮೇಶ್ವರದ ಅಪ್ಪಣ್ಣ
ಲಿಂಗಸ್ಥಲವ ಬಲ್ಲೆನೆಂಬ ಪರಬ್ರಹ್ಮಿಗಳು ನೀವು ಕೇಳಿರೆ, ಲಿಂಗಸ್ಥಲ ನಿಃಶೂನ್ಯವಾಯಿತ್ತು ಸಂಗಮದೇವರ ಬೆನ್ನಿನಲ್ಲಿ. ಜಂಗಮಸ್ಥಲ ಬಲ್ಲೆನೆಂಬ ಪರಬ್ರಹ್ಮಿಗಳು ನೀವು ಕೇಳಿರೆ, ಜಂಗಮಸ್ಥಲ ನಿಃಶೂನ್ಯವಾಯಿತ್ತು ಪ್ರಭುದೇವರ ಬೆನ್ನಿನಲ್ಲಿ. ಭಕ್ತಿಸ್ಥಲವ ಬಲ್ಲೆನೆಂಬ ಪರಬ್ರಹ್ಮಿಗಳು ನೀವು ಕೇಳಿರೆ, ಭಕ್ತಿಸ್ಥಲ ನಿಃಶೂನ್ಯವಾಯಿತ್ತು ಸಂಗನಬಸವರಾಜದೇವರ ಬೆನ್ನಿನಲ್ಲಿ. ಪ್ರಾಣಲಿಂಗಿಸ್ಥಲವ ಬಲ್ಲೆನೆಂಬ ಪರಬ್ರಹ್ಮಿಗಳು ನೀವು ಕೇಳಿರೆ, ಪ್ರಾಣಲಿಂಗಿಸ್ಥಲ ನಿಃಶೂನ್ಯವಾಯಿತ್ತು ಸಿದ್ಧರಾಮೇಶ್ವರದೇವರ ಬೆನ್ನಿನಲ್ಲಿ. ಪ್ರಸಾದಿಸ್ಥಲವ ಬಲ್ಲೆನೆಂಬ ಪರಬ್ರಹ್ಮಿಗಳು ನೀವು ಕೇಳಿರೆ, ಪ್ರಸಾದಿಸ್ಥಲ ನಿಃಶೂನ್ಯವಾಯಿತ್ತು ಚಿಕ್ಕದಣ್ಣಾಯಕರ ಬೆನ್ನಿನಲ್ಲಿ. ಐಕ್ಯಸ್ಥಲವ ಬಲ್ಲೆನೆಂಬ ಪರಬ್ರಹ್ಮಿಗಳು ನೀವು ಕೇಳಿರೆ, ಐಕ್ಯಸ್ಥಲ ನಿಃಶೂನ್ಯವಾಯಿತ್ತು ಅಜಗಣ್ಣದೇವರ ಬೆನ್ನಿನಲ್ಲಿ. ಇಂತೆನ್ನ ಷಟ್‍ಸ್ಥಲಂಗಳು ಒಬ್ಬೊಬ್ಬರ ಬೆನ್ನಿನಲ್ಲಿ ನಿಃಶೂನ್ಯವಾದವು ಎನಗಿನ್ನಾವ ಕಿಂಚಿತುಸ್ಥಲವೂ ಇಲ್ಲವಯ್ಯಾ ಚೆನ್ನಮಲ್ಲಿಕಾರ್ಜುನಯ್ಯಾ
--------------
ಅಕ್ಕಮಹಾದೇವಿ
-->