ಅಥವಾ

ಒಟ್ಟು 5 ಕಡೆಗಳಲ್ಲಿ , 5 ವಚನಕಾರರು , 5 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪ್ರಾಣಲಿಂಗ, ಲಿಂಗಪ್ರಾಣ `ಇಷ್ಟಂ ಪ್ರಾಣಸ್ತಥಾ ಭಾವಸ್ತ್ರಿಧಾ ಚೈಕಂ ಎಂದುದಾಗಿ ಪಂಚಭೂತಕಾಯವಳಿದು ಪ್ರಸಾದಕಾಯವ ಮಾಡಿ ಭಕ್ತದೇಹಿಕನೆನಿಸಿದನು. ಈ ಸತ್ಕ್ರೀಯನು ಶ್ರೀಗುರು ಕರುಣಿಸಿ ಮಾಡಿದನಾಗಿ ಪ್ರಾಣಲಿಂಗ, ಕಾಯಭಕ್ತನು ಇದೂ ಸ್ವಭಾವ. ದಾಸೋಹಿಯಾಗಿ ಅರ್ಚನೆ ಪೂಜನೆ ಸರ್ವದ್ರವ್ಯ ಸಕಲಭೋಗವನೂ ಅರ್ಪಿತವ ಮಾಡುತ್ತಿಹನು, ಪ್ರಸಾದವ ಭೋಗಿಸುತ್ತಿಹನು. ಸತ್ಕ್ರೀಯಲ್ಲಿ ಲಿಂಗಕ್ಕೆ ಕಾಯಶೂನ್ಯನಾಗಿ ಭಕ್ತಕಾಯ ಮಮಕಾಯನೆಂದು ಅವಗ್ರಹಿಸಿಕೊಂಡ ಭಕ್ತಂಗೆ ಬೇರೆ ಪ್ರಾಣವಿಲ್ಲಾಗಿ ಪ್ರಾಣವೆಂದು ಅವಗ್ರಹಿಸಿಕೊಂಡ. ಇಂತಹ ಪ್ರಾಣಲಿಂಗವು, ಕಾಯಭಕ್ತನು ತನ್ನೊಳಗೆ ತಾನೇ ಐಕ್ಯವಾಯಿತ್ತು. ಭಕ್ತನೇ ಲಿಂಗ, ಲಿಂಗವೇ ಭಕ್ತನು, ದಾಸೋಹಕ್ರೀಯೆ ಸೋಹಕ್ರೀ, ಸೋಹಕ್ರೀಯೆ ದಾಸೋಹಕ್ರೀ. ಈ ಕ್ರೀಯನು ಅದ್ವೈತವೆನ್ನಿ, ಸೋಹವೆನ್ನಿ, ದಾಸೋಹವೆನ್ನಿ ಬಲ್ಲವರುಗಳು ಬಲ್ಲಂತೆ ನಿಮ್ಮ ನಿಮ್ಮ ಅರಿವಿನ ಹವಣಿಂಗೆ ನುಡಿಯಿರಿ. ಆ ಲಿಂಗಾಯತವ, ಆ ಲಿಂಗದ ಮರ್ಮವ ಅರ್ಪಿತದ ಮರ್ಮವ, ಪ್ರಸಾದದ ಮಹಿಮೆಯ ಮಹಾಪರಿಣಾಮದ ಕ್ರೀಯು ಸಾಮಾನ್ಯರಿಗೆ ಅರಿಯಬಾರದು. ಈ ಮಹಾ ಕ್ರೀ ವಾಙ್ಮನೋತೀತ. ಈ ಮಹಾಕುಳವ ಮಹಾನುಭಾವರೇ ಬಲ್ಲರು, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಕಂಗಳ ಸೂತಕ ಕಾಮಿಸಲಾಗಿ ಹರಿಯಿತ್ತು. ಮನದ ಸೂತಕ ಮುಟ್ಟಲಾಗಿ ಬಿಟ್ಟಿತ್ತು. ನಾನೆಂಬ ಭಾವ ಗುಹೇಶ್ವರಲಿಂಗದಲ್ಲಿ ಐಕ್ಯವಾಯಿತ್ತು !
--------------
ಅಲ್ಲಮಪ್ರಭುದೇವರು
ಆತ್ಮನ ಸುಳುಹು ನಿಂದ ಮತ್ತೆ ಕಾಯದ ಅವತಾರವಳಿಯಿತ್ತು. ನೀನೆಂಬ ಭಾವವರತಲ್ಲಿ, ಕೂಡಲಸಂಗಮದೇವರ ಭಾವ ಪ್ರಭುದೇವರಲ್ಲಿ ಐಕ್ಯವಾಯಿತ್ತು.
--------------
ಬಸವಣ್ಣ
ಆವ ಸ್ಥಲ ಸಾಧಿಸಿ ಬಂದು ನಿಂದಡೂ ಭಾವಶುದ್ಧಾತ್ಮವಾಗಿ ವೇಧಿಸುವುದೊಂದೆ ವಸ್ತು. ಅದು ಭಕ್ತಿಯ ಬೇರು, ಸದಾಶ್ರದ್ಧೆಯ ಶಾಖೆ, ವಿಶ್ವಾಸದ ಫಲ, ನಿಜತತ್ವದ ರಸ, ಸ್ವಯದ ಸಾದು. ಅದು ಸಂಗನಬಸವಣ್ಣನಿಂದ ಬಂದ ಬೆಳೆ, ಬ್ರಹ್ಮೇಶ್ವರಲಿಂಗದಲ್ಲಿ ಐಕ್ಯವಾಯಿತ್ತು.
--------------
ಬಾಹೂರ ಬೊಮ್ಮಣ್ಣ
ಗುರುಸೇವೆಯ ಮಾಡುವಲ್ಲಿ, ಉತ್ಪತ್ಯದ ಒಡಲೊಡೆಯಬೇಕು. ಲಿಂಗಪೂಜೆಯ ಮಾಡುವಲ್ಲಿ, ಸುಖದುಃಖ ಭೋಗಂಗಳ ಸಕಲದ ಬುಡಗೆಡೆಯಬೇಕು. ಜಂಗಮ ಪೂಜೆಯ ಮಾಡುವಲ್ಲಿ, ಚತುರ್ವಿಧಫಲಪದಂಗಳ ಭಾವ ನಷ್ಟವಾಗಬೇಕು. ತ್ರಿವಿಧವ ತ್ರಿವಿಧದಿಂದ ಕೂಡಿ, ಬೆಳಗಿಂಗೆ ಬೆಳಗೊಳಗಾದಂತೆ, ಷಟ್ಸ್ಥಲಭಾವ ಲೇಪವಾಯಿತ್ತು, ಪ್ರಾಣಲಿಂಗದ ಸಂಗವ ಮಾಡಲಾಗಿ. ಇಂತೀ ಗುಣವ ತಿಳಿದು ನೋಡಲಾಗಿ ಐಕ್ಯವಾಯಿತ್ತು, ನಿಃಕಳಂಕ ಮಲ್ಲಿಕಾರ್ಜುನನಲ್ಲಿ ನಿಜಭಾವದ ಬೆಳಗು.
--------------
ಮೋಳಿಗೆ ಮಾರಯ್ಯ
-->