ಅಥವಾ

ಒಟ್ಟು 12 ಕಡೆಗಳಲ್ಲಿ , 8 ವಚನಕಾರರು , 12 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನೋಡುವಲ್ಲಿ ನೆರೆ ಶೃಂಗಾರವಲ್ಲದೆ, ಕೂಡುವಲ್ಲಿ ಉಂಟೆ ? ನುಡಿವಲ್ಲಿ ಮಾತಿನ ಬಲುಮೆಯಲ್ಲದೆ, ಸಂಸಾರವ ಸಾಧನವ ಮಾಡುವಲ್ಲಿ ಮುಟ್ಟದಿಪ್ಪುದುಂಟೆ ? ನಡೆ ನುಡಿ ಸಿದ್ಧಾಂತವಾದ ಶರಣಂಗೆ ಪಡಿಪುಚ್ಚವಿಲ್ಲ, ಗುಡಿಯೊಡೆಯ ಗುಮ್ಮಟನಾಥನ ಅಗಮ್ಯೇಶ್ವರಲಿಂಗದಲ್ಲಿ ಐಕ್ಯವಾದ ಶರಣಂಗೆ.
--------------
ಮನುಮುನಿ ಗುಮ್ಮಟದೇವ
ಭಾವನಿಬ್ಬೆರಗಿನೊಳು ಐಕ್ಯವಾದ ಮಹಾಜ್ಞಾನಿಗಳ ಸಂಗದಿಂದ ವಾಙ್ಮನಕ್ಕೆ ಅಗೋಚರನಾದಂಥ ಮಹಾಲಿಂಗದಲ್ಲಿ ಪರಿಪೂರ್ಣವಾದ ಭೇದವ ನೀವೇ ಬಲ್ಲಿರಿ ಅಯ್ಯಾ ಝೇಂಕಾರ ನಿಜಲಿಂಗಪ್ರಭುವೆ
--------------
ಜಕ್ಕಣಯ್ಯ
ಕಂಗಳ ಸೂತಕ ಹಿಂಗಿಯಲ್ಲದೆ ಭಕ್ತನಾಗಬಾರದು. ಕಾಯದ ಸೂತಕ ಹಿಂಗಿಯಲ್ಲದೆ ಮಾಹೇಶ್ವರನಾಗಬಾರದು. ಮನದ ಸೂತಕ ಹಿಂಗಿಯಲ್ಲದೆ ಪ್ರಸಾದಿಯಾಗಬಾರದು. ಜ್ಞಾನದ ಸೂತಕ ಹಿಂಗಿಯಲ್ಲದೆ ಪ್ರಾಣಲಿಂಗಿಯಾಗಬಾರದು. ತೋರಿ ಅಡಗುವ ಭ್ರಾಂತು ಹಿಂಗಿಯಲ್ಲದೆ ಶರಣನಲ್ಲ, ಐಕ್ಯನಲ್ಲ. ಆರಡಗಿ ಮೂರರಲ್ಲಿ ಮುಗ್ಧನಾಗಿ, ಮೀರಿ ಕಾಬುದಕ್ಕೆ ಏನೂ ಇಲ್ಲದೆ, ಅದು ತಾನೆ ಯೋಗಲಿಂಗಾಂಗ, ಗುಡಿಯ ಗುಮ್ಮಟನಾಥನ ಒಡೆಯ ಅಗಮ್ಯೇಶ್ವರಲಿಂಗದಲ್ಲಿ ಐಕ್ಯವಾದ ಶರಣಂಗೆ.
--------------
ಮನುಮುನಿ ಗುಮ್ಮಟದೇವ
ಕಂಗಳು ನುಂಗಿದ ಬಯಲವ, ಕರ್ಣ ಅವಗವಿಸಿದ ನಾದವ, ನಾಸಿಕದಲ್ಲಿ ನಷ್ಟವಾದ ಸುಗಂಧವ, ಜಿಹ್ವೆಯ ಕೊನೆಯಲ್ಲಿ ಅಳಿದ ರಸಾನ್ನವ, ಮುಟ್ಟಿನ ದೆಸೆಯಲ್ಲಿ ನಿಶ್ಚಯವಾದ ಮೃದು ಕಠಿಣಾದಿ, ಇಂತಿವೆಲ್ಲವೂ ನಿಜನೆಲೆಯಲ್ಲಿ ಅಚ್ಚೊತ್ತಿದಂತೆ ಐಕ್ಯವಾದ ಮತ್ತೆ ಅರ್ಪಿತವೆಂಬುದು ಹಿಂಚೋ, ಮುಂಚೋ ಎಂಬುದ ತಿಳಿದು, ಆ ಉಳುಮೆಯಲ್ಲಿ ಕಲೆದೋರದೆ ಅರ್ಪಿತ ನಷ್ಟವಾದುದು. ಕಮಠೇಶ್ವರಲಿಂಗವ ಕೂಡಿ ಕೂಡಿದೆನೆಂದು ಎರಡಳಿದ, ಪ್ರಾಣಲಿಂಗ ಲಿಂಗಪ್ರಾಣವೆಂಬ ಸಂದೇಹವಳಿದ ಶರಣ.
--------------
ಬಾಲಸಂಗಣ್ಣ
ಸರ್ವಜ್ಞಾನ ಸಂಬಂಧಿಯ ಇರವು: ಕಿರಣದೊಳಗಣ ಸುರಂಗದಂತೆ ಸುರಭಿಯೊಳಗಣ ನವನೀತದಂತೆ ಬೀಜದೊಳಗಣ ವೃಕ್ಷದಂತೆ ಸಾಧಕರಲ್ಲಿ ತೋರುವ ಸಂಕಲ್ಪದಂತೆ ಸಾತ್ವಿಕರಲ್ಲಿ ತೋರುವ ವಿಲಾಸಿತದಂತೆ ಆಗ್ನಿಯಲ್ಲಿ ಹೊರಹೊಮ್ಮದ ತೆರವು ಕೆಡದೆ ಉಡುಗಿ ತೋರುವ ಬೆಳಗಿನಂತೆ ತೆರಹಿಲ್ಲದ ಭಾವ ವೇದಕ್ಕೆ ಅತೀತ, ಶಾಸ್ತ್ರಕ್ಕೆ ಅಗಮ್ಮ, ಪುರಾಣಕ್ಕೆ ಆಗೋಚರ, ಪುಣ್ಯದ ಪಟಲ ದಗ್ಧ, ನಾಮ ನಾಶ, ನಾರಾಯಣಪ್ರಿಯ ರಾಮನಾಥನಲ್ಲಿ ಐಕ್ಯವಾದ ಶರಣ.
--------------
ಗುಪ್ತ ಮಂಚಣ್ಣ
ಮನವೆ ಲಿಂಗವಾದ ಬಳಿಕ ಇನ್ನಾರ ನೆನೆವುದಯ್ಯಾ ? ಭಾವವೆ ಐಕ್ಯವಾದ ಬಳಿಕ ಬಯಸುವುದಿನ್ನಾರನು ? ಭ್ರಮೆಯಳಿದು ನಿಜವು ಸಾಧ್ಯವಾದ ಬಳಿಕ ಅರಿವುದಿನ್ನಾರನು ಗುಹೇಶ್ವರಾ ?
--------------
ಅಲ್ಲಮಪ್ರಭುದೇವರು
ಕುಲವ ಕೂಡದೆ ಕೋಪವಡಗಿ ಅನ್ಯಹೇಸಿಕೆ ಮತ್ತೆ ಐಕ್ಯವಾದ ನಿರುತ ಭರಿತದ ಪರಮಸುಖ ಎನಗೆಂದಪ್ಪುದೊ? ಕಾಯದಂದುಗ ಬಿಟ್ಟು ನಿರಾಸೆಯಲ್ಲಿ ನೆರೆ ಸಲು[ಹಿ]ಂದ ಎನ್ನ ನಚ್ಚಿನ ಲಿಂಗ ಮೆಚ್ಚಿನ ಘನಕ್ಕೆ ಘನಲಿಂಗವಾಗಿ ರೇಕಣ್ಣಪ್ರಿಯ ನಾಗಿನಾಥನಯಸವಿನೊಲವೆನಗಪ್ಪುದೆಂದೋ ?
--------------
ಬಹುರೂಪಿ ಚೌಡಯ್ಯ
ಲಕ್ಷದ ಮೇಲೆ ತೊಂಬತ್ತಾರುಸಾವಿರ ಜಂಗಮಕ್ಕೆ ಮಿಕ್ಕು ಅವರಿಗೆ ಲೆಕ್ಕಕ್ಕೆ ಕಡೆಯಿಲ್ಲದೆ ಮಾಡಿ, ಹೊಕ್ಕು ಭಕ್ತಿಯಲ್ಲಿ, ಲೆಕ್ಕ ತಪ್ಪದೆ ಅವತಾರದಲ್ಲಿ ಬಂದು, ಮತ್ರ್ಯಕ್ಕೆ ಬಸವೇಶ್ವರನೆಂಬ ಗಣನಾಥನಾಮಮಂ ಪಡೆದು, ಭಕ್ತರಿಗೆ ಮುಖ್ಯವಾಗಿ ಭಕ್ತಿಯಂ ತೋರಿ, ಸತ್ಯದ ಬಟ್ಟೆಯಂ ಕಾಣದೆ, ಚಿದ್ಘನಲಿಂಗವ ಹೊಗಲರಿಯದೆ, ಬದ್ಧಕತನವನು ಸುಬದ್ಧವ ಮಾಡದೆ, ಶುದ್ಧಶೈವ ಕಪ್ಪಡಿಯ ಸಂಗಮನಾಥನಲ್ಲಿ, ಐಕ್ಯವಾದ ಚಿದ್ರೂಪ ಚಿತ್ಪ್ರಕಾಶಘನಲಿಂಗ, ಕೈಯಲ್ಲಿದ್ದಂತೆ ಹೊದ್ದಿದನೇಕರುದ್ರಮೂರ್ತಿಯಲ್ಲಿ. ರಜತಾದ್ರಿಯಲಿರ್ದು ಸುಬದ್ಧವಾಗಿ ಪ್ರಳಯವಾಗಿತ್ತು ರುದ್ರಲೋಕವೆಲ್ಲಾ. ರುದ್ರಗಣಂಗಳೆಲ್ಲರೂ ಮರ್ದನಂಗೆಯ್ದಲ್ಲಿ, ಸುದ್ದಿಯ ಹೇಳುವರನಾರನೂ ಕಾಣೆ. ಇನ್ನಿದ್ದವರಿಗೆ ಬುದ್ಧಿ ಇನ್ನಾವುದೊ ? ಶುದ್ಧಶೈವವ ಹೊದ್ದದೆ, ಪೂರ್ವಶೈವವನಾಚರಿಸದೆ, ಮಾರ್ಗಶೈವವ ಮನ್ನಣೆಯ ಮಾಡದೆ, ವೀರಶೈವವನಾರಾಧಿಸದೆ, ಆದಿಶೈವವನನುಕರಿಸದೆ, ಭೇದಿಸಬಾರದ ಲಿಂಗ ಕರದಲ್ಲಿದ್ದು, ಕಂಗಳಿನಲ್ಲಿ ನಿಂದು, ಮನದಲ್ಲಿ ಸಿಂಹಾಸನಂಗೆಯ್ದು, ಸಕಲೇಂದ್ರಿಯವ ಮರೆದು, ಕಾಯಜೀವನ ಹೊಲಿಗೆಯ ಬಿನ್ನಾಣದಿಂ ಬಿಚ್ಚಿ, ಬೇರೊಂದರಸಲಿಲ್ಲವಾಗಿ ಬಯಕೆಯರತು, ಭವಹಿಂಗಿ, ತಾನೆನ್ನದೆ ಇದಿರೆನ್ನದೆ, ಏನೂ ಎನ್ನದ ಲಿಂಗೈಕ್ಯಂಗೆ ಸ್ವಾನುಭಾವದಿಂದ ನಮೋ ನಮೋ [ಎಂಬೆ ] ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ನೀರೆಂತು ನೆನೆವುದೆಂದು ಬೆಸಗೊಂಡರೆ, ಹೇಳಬಹುದೆ ಅಯ್ಯಾ ? ನಿರಾಳ ನಿರ್ಮಾಯ ಪರಶಿವನಲ್ಲಿ ಐಕ್ಯವಾದ ನಿಜಲಿಂಗೈಕ್ಯನ ಉಪಮಿಸಲುಂಟೆ, ನಿಃಕಳಂಕ ಮಲ್ಲಿಕಾರ್ಜುನಾ ?
--------------
ಮೋಳಿಗೆ ಮಾರಯ್ಯ
ನಾನೆಂಬುದನರಿದಲ್ಲಿಯೆ ಅರಿವನೊಳಕೊಂಡುದು. ಆ ಅರಿವು ಐಕ್ಯವಾದಲ್ಲಿಯೆ ಗುರುವ ಭಾವಿಸಲಿಲ್ಲ. ಆ ಗುರು ಐಕ್ಯವಾದಲ್ಲಿಯೆ ಲಿಂಗವನರಿದುದು. ಆ ಜಂಗಮ ಐಕ್ಯವಾದಲ್ಲಿಯೆ ತ್ರಿವಿಧವ ಮರೆದುದು. ಆ ಲಿಂಗ ಐಕ್ಯವಾದಲ್ಲಿಯೆ ಜಂಗಮವ ಮರೆದುದು. ತ್ರಿವಿಧವ ಮರೆದಲ್ಲಿಯೆ ತನ್ನ ಮರೆದುದು. ತನ್ನ ಮರೆದಲ್ಲಿಯೆ ಇದಿರಿಟ್ಟುದನರಿದುದು. ಮತ್ತೆ ಅರಿದು ಮರೆಯಲಿಲ್ಲ, ಮರೆದು ಅರಿಯಲಿಲ್ಲ. ತೆರಹಿಲ್ಲವಾಗಿ ಭಾವಿಸಿ ಕಂಡೆಹೆನೆಂಬ ಭ್ರಮೆಯೆಲ್ಲಿಯದೊ ? ಪೂಜಿಸಿ ಕಂಡೆಹೆನೆಂಬ ಕ್ರೀ ಎಲ್ಲಿಯದೊ ? ಹೂಬಲಿದು ಕಾಯಾಗಬೇಕಲ್ಲದೆ ಕಾಯಿ ಬಲಿದು ಹೂವಾಗಬಲ್ಲುದೆ ? ಹಣ್ಣು ಬಲಿದು ಬಣ್ಣವಹುದಕ್ಕೆ ಮೊದಲೆ, ಕೊಂಬು ಮುರಿಯಿತ್ತು, ನಿಃಕಳಂಕ ಮಲ್ಲಿಕಾರ್ಜುನನಲ್ಲಿ ಐಕ್ಯವಾದ ಶರಣಂಗೆ.
--------------
ಮೋಳಿಗೆ ಮಾರಯ್ಯ
ಕರ್ಮಕಾಂಡಿ[ಗಳಿ]ಗೆ ಕತ್ತಲೆಕರ್ಮಿಗಳೆಂದು ನುಡಿವರು ನೋಡಾ. ಅವರು ಮಾಯಾಮೋಹಕ್ಕೆ ಸಿಲ್ಕಿ ಕೆಟ್ಟರು ಕಾಣಾ ಎಂದು ನುಡಿವರು ಕೇಳಾ. ಸಗುಣಸ್ಥಲದ ಮನೋಜ್ಞಾನಿಗಳವರು ಕೆಟ್ಟಂತೆ ನಾವು ಕೆಡಬಾರದು. ತಮ್ಮ ಮನಕ್ಕೆ ಬುದ್ಧಿಯಂ ಕೊಟ್ಟು ಆಸೆಯಂ ಬಿಟ್ಟು ತನುವೆಂಬ ಬಿಲ್ಲಿಗೆ ಮನವೆಂಬ [ಹೆದೆ]ಯನೇರಿಸಿ, ಉರಿನರಿಯಂಬ ಅಳವಡಿಸಿ ವಾರಿ ಮೋರೆಯನೆ ತಿದ್ದಿಕೊಂಡು ಗುರುಕೊಟ್ಟ ಬಿಲ್ಲ ದೃಢವಾಗಿ ಹಿಡಿದು ಶ್ರೀಗಿರಿಯೆಂಬ ಗುರಿಯ ನೋಡಿ ಎಸೆವಾಗ, ಭವ ಹರಿಯಿತ್ತು, ಕಾಲಕರ್ಮವೆಂಬ ಶಿರ ಹರಿಯಿತ್ತು. ಅರಸು ಪ್ರಧಾನಿ ಪ್ರಜೆ ಪರಿವಾರ ಓಡಿ ಹೋಯಿತ್ತು. ಪೃಥ್ವಿ ಅಪ್ಪು ತೇಜ ವಾಯು ಆಕಾಶ ಅಂದೇ ಬೆಳಗಾಯಿತ್ತು. ಇಂತಪ್ಪ ಪ್ರಸಾದ ಆ ಗುರು ಲಿಂಗ ಜಂಗಮ ತಮ್ಮೊಳಗಾಯಿತ್ತು. ಇಂತಪ್ಪ ಪ್ರಸಾದವು ಯಾರಿಗೂ ಅಳವಡದು. ಪ್ರಭುವಿನೊಳ್ ಐಕ್ಯವಾದ ಬಸವಸಂಪತ್ತಿಗಲ್ಲದೆ ಮಿಕ್ಕ ಪ್ರಪಂಚಿಗಳಿಗೆ ಅಳವಡದೆಂದು ಹೇಳುವ ಸಗುಣದ ಭ್ರಮಿತರು ಅವರು ಕೆಟ್ಟ ಕೇಡಿಂಗೆ ಕಡೆಯಿಲ್ಲ ಮೊದಲಿಲ್ಲ ನೋಡಾ. ಮುಂದೆ ಇಷ್ಟವ ಕಂಡು ಮುಳುಗಿದವರಿಗೆ ಮುಕ್ತಿ ಎಂದೆಂದಿಗೂ ಇಲ್ಲ ಕಾಣಾ. ಇನ್ನು ಕೈವಲ್ಯಾನ್ವಯ ಪ್ರವರ್ತಕ ನಿಸ್ಸೀಮಾಂಬುಧಿ ನಿರ್ಲೇಪ ತಾನಾದಂಥ ದೇವ ವರನಾಗನ ಗುರುವೀರನೆ ಪರಂಜ್ಯೋತಿ ಮಹಾವಿರಕ್ತಿ.
--------------
ಪರಂಜ್ಯೋತಿ
ಕಾಯವಿಡಿದು ಲಿಂಗವಿದೆ ಲಿಂಗವಿಡಿದು ಕಾಯವಿದೆ. ಅರಿವಿಡಿದು ಮರಹಿದೆ, ಮರಹುವಿಡಿದು ತೋರುವ ಅರಿವಿದೆ. ಲಿಂಗಾಂಗವೆರಡೂ ನಿಮ್ಮಲ್ಲಿ ಐಕ್ಯವಾದ ಪರಿ ಎಂತು ಹೇಳಾ ? ಸ್ವರವಿಡಿದು ಸಬುದ ಸಮರಸವಾದ ಪರಿ ಎಂತು ಹೇಳಾ ? `ದೇವ' `ಭಕ್ತ' ಎಂಬ ನಾಮ ಸೀಮೆಯಡಗಿ ಗುಹೇಶ್ವರಲಿಂಗದಲ್ಲಿ ತದುಗತವಾಗಿದ್ದ ಪರಿ ಎಂತು ಹೇಳಾ ಸಂಗನಬಸವಣ್ಣಾ ?
--------------
ಅಲ್ಲಮಪ್ರಭುದೇವರು
-->