ಅಥವಾ

ಒಟ್ಟು 8 ಕಡೆಗಳಲ್ಲಿ , 8 ವಚನಕಾರರು , 8 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಿರಂಜನಜಾಗ್ರದಲ್ಲಿನಿಂದಡೆ ಭಕ್ತನೆಂಬೆ. ನಿರಂಜನಸ್ವಪ್ನದಲ್ಲಿನಿಂದಡೆ ಮಹೇಶ್ವರನೆಂಬೆ ನಿರಂಜನಸುಷುಪ್ತಿಯಲ್ಲಿ ನಿಂದಡೆ ಪ್ರಸಾದಿಯೆಂಬೆ. ನಿರಂಜನತೂರ್ಯದಲ್ಲಿ ನಿಂದಡೆ ಪ್ರಾಣಲಿಂಗಿಯೆಂಬೆ. ನಿರಂಜನವ್ಯೋಮದಲ್ಲಿ ನಿಂದಡೆ ಶರಣನೆಂಬೆ. ನಿರಂಜನವ್ಯೋಮಾತೀತದಲ್ಲಿ ನಿಂದಡೆ ಐಕ್ಯನೆಂಬೆ. ನಿರಂಜನವ್ಯೋಮಾತೀತಕತ್ತತ್ತವಾಗಿಹ ಮಹಾಘನ ನಿರ್ವಾಣಾತೀತವೆ ಅಂಗವಾದ ಮಹಾಶರಣಂಗೆ ಭವಹಿಂಗಿತ್ತಾಗಿ, ಅವರ ಶ್ರೀಪಾದಕ್ಕೆ ನಮೋ ನಮೋ ಎನುತಿರ್ದೆನು ನೋಡಾ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಜಲವ ತರದೆ, ಪಾವಕವ ಹೊತ್ತಿಸದೆ, ಪಾಕವ ಮಾಡಿ ಉಣಬಲ್ಲಡೆ ಐಕ್ಯನೆಂಬೆ, ಆರೂಢನೆಂಬೆ, ಆರುಸ್ಥಲವ ಮೀರಿದ ಮಹಾಯೋಗಿ ಎಂಬೆ, ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
ಆಸೆಯುಳ್ಳರೆ ಭಕ್ತನೆಂಬೆ, ರೋಷವುಳ್ಳರೆ ಮಹೇಶ್ವರನೆಂಬೆ, ಆಲಸ್ಯವುಳ್ಳರೆ ಪ್ರಸಾದಿಯೆಂಬೆ, ಹಿಂಸೆಯುಳ್ಳರೆ ಪ್ರಾಣಲಿಂಗಿಯೆಂಬೆ, ಸಂಸಾರವುಳ್ಳರೆ ಶರಣನೆಂಬೆ, ಸಂಗವುಳ್ಳರೆ ಐಕ್ಯನೆಂಬೆ. ಇಂತಿವು ಶೂನ್ಯವಾದರೆ ಆರೂಢನೆಂಬೆ ಗುರುನಿರಂಜನ ಚನ್ನಬಸವಲಿಂಗದ ಸಂಗಕ್ಕೆ ಬೇಕಾದ ಕಾರಣ ಬೇಕೆಂಬ ಶರಣಂಗೆ.
--------------
ದೇಶಿಕೇಂದ್ರ ಸಂಗನಬಸವಯ್ಯ
ಶ್ರೀಗುರು ಬಂದು ತ್ರಿವಿಧದೀಕ್ಷೆಯಿಂದ ಉಪದೇಶವ ಮಾಡುವ ಕಾಲದಲ್ಲಿ ಹಸ್ತದಲ್ಲಿ ಶಸ್ತ್ರವ ಹಿಡಿದು ಕಡಿದುಕೊಂಡು ನುಂಗಿದಾತನೇ ಶಿಷ್ಯನೆಂಬೆ. ಲಿಂಗವು ಬಂದು ಹಸ್ತದಲ್ಲಿ ಅಷ್ಟವಿಧಾರ್ಚನೆ ಷೋಡಶೋಪಚಾರಗಳಿಂದ ಪೂಜೆಗೊಂಬ ವೇಳೆಯಲ್ಲಿ ವಜ್ರಾಯುಧದಿಂದ ಬಡಿದು ಒಡೆದು ಚೂರ್ಣವ ಮಾಡಿ ಉದಕದೊಳಗೆ ಹಾಕಿ ಕುಡಿಯುವವನೇ ಶರಣನೆಂಬೆ. ಜಂಗಮ ಬಂದು ಇದುರಿನಲ್ಲಿ ಕುಳಿತು ಅನುಭಾವಬೋಧೆಯನು ಮಾಡುವ ಸಮಯದಲ್ಲಿ ಹಸ್ತದಲ್ಲಿ ಖಡ್ಗವ ಪಿಡಿದು ಎಡಕ ಬಂದವನ ಕುಟ್ಟಿ, ಬಲಕ ಬಂದವನ ಹೆಟ್ಟಿ, ಎದುರಿನಲ್ಲಿ ಬಂದವನ ಮೆಟ್ಟಿ, ಆ ಜಂಗಮವನು ಕಡಿದು ಅವನ ಕಂಡವ ಚಿನಿಪಾಲವ ಮಾಡಿ, ನೀರಿಲ್ಲದೆ ಅಟ್ಟು, ಕಿಚ್ಚಿಲ್ಲದೆ ಸುಟ್ಟು, ಹಸ್ತವಿಲ್ಲದೆ ಪಿಡಿದು, ಬಾಯಿಲ್ಲದೆ ಸವಿದು, ಜಿಹ್ವೆಯಿಲ್ಲದೆ ರುಚಿಸಿ, ಸಂತೋಷವಿಲ್ಲದೆ ಪರಿಣಾಮಿಸಬಲ್ಲರೆ ಭಕ್ತನೆಂಬೆ. ಇಂತೀ ತ್ರಿವಿಧದ ಅನುಭಾವವ ಹೇಳಬಲ್ಲರೆ ಭಕ್ತ ಮಹೇಶ್ವರ ಪ್ರಸಾದಿ ಪ್ರಾಣಲಿಂಗಿ ಶರಣ ಐಕ್ಯನೆಂಬೆ. ಲಿಂಗಾಂಗಿ ಎಂಬೆ, ಶಿವಜ್ಞಾನಸಂಪನ್ನರೆಂಬೆ, ಪರಶಿವಯೋಗಿಗಳೆಂಬೆ, ಚಿತ್ಪ್ರಕಾಶಜ್ಞಾನಿಗಳೆಂಬೆ, ಈ ವಚನದ ಭೇದವ ತಿಳಿಯದಿದ್ದರೆ ಸತ್ತಹಾಗೆ ಸುಮ್ಮನೆ ಇರು ಎಂದ ಕಾಣಾ ನಿಮ್ಮ ಶರಣ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಮನ ನಷ್ಟವಾದರೆ ಭಕ್ತನೆಂಬೆ, ಉಪದೇಶ ನಷ್ಟವಾದರೆ ಗುರುವೆಂಬೆ, ಭಾವ ನಷ್ಟವಾದರೆ ಲಿಂಗವೆಂಬೆ, ಗಮನ ನಷ್ಟವಾದರೆ ಜಂಗಮವೆಂಬೆ, ಅರ್ಪಿತ ನಷ್ಟವಾದರೆ ಪ್ರಸಾದಿಯೆಂಬೆ ಆಕಾ(ಚಾ?)ರ ನಷ್ಟವಾದರೆ ಐಕ್ಯನೆಂಬೆ. ಇಂತೀ ಷಡುಸ್ಥಲ ನಿಂದ ನಿಲವಿನ ಪರಿಣಾಮಪದವ ಕೂಡಲಚೆನ್ನಸಂಗಾ ನಿಮ್ಮ ಶರಣನೆ ಬಲ್ಲ.
--------------
ಚನ್ನಬಸವಣ್ಣ
ದಿನದಿನಕ್ಕೆ ದೀನಮಾನವನಂತೆ, ಹೀನಾಶ್ರಯದಲ್ಲಿ ಹುಟ್ಟಿ, ಏನನೂ ಅರಿಯದೆ, ಜ್ಞಾನವು ಇಲ್ಲದೆ, ನಾನು ನೀನೆಂಬ ಉಭಯವು ಅಳಿಯದೆ, ನಾನು ಭಕ್ತ, ನಾನು ಜಂಗಮವೆಂಬವರ ನೋಡಿ, ನಾಚಿತ್ತೆನ್ನ ಮನ್ನವು. ಅಂಗಕ್ಕೆ ಆಚಾರವಿಲ್ಲ, ಮನಸಿಂಗೆ ಅರುಹಿಲ್ಲ, ಪ್ರಾಣಕ್ಕೆ ಗೊತ್ತು ಇಲ್ಲ. ಭಾವಕ್ಕೆ ಹೇಯವಿಲ್ಲದೆ ಇನ್ನಾವ ಬಗೆಯಲ್ಲಿ ಭಕ್ತ ಜಂಗಮವಾದಿರೆ ಹೇಳಿರಣ್ಣ ? ಭಕ್ತನಾದರೆ ಎಂತಿರಬೇಕೆಂದರೆ, ಮಾಡಿಹನೆಂಬುದು ಮನದೊಳಗೆ ಹೊಳೆಯದೆ, ನೀಡಿಹೆನೆಂಬ ಅರಿಕೆ ಇಲ್ಲದೆ, ಬೇಡುವುದಕ್ಕೆ ಮುನ್ನವೆ ಆ ಜಂಗಮದ ನಿಲುಕಡೆಯನರಿದು ಮಾಡಬಲ್ಲರೆ ಭಕ್ತ. ಮಾಡಿದ ಭಕ್ತಿಯ ಕೈಕೊಂಡು, ಆ ಭಕ್ತನ ಕರಸ್ಥಲಕ್ಕೆ ಲಿಂಗವಾಗಿ, ಮನಸ್ಥಲಕ್ಕೆ ಅರಿವಾಗಿ, ಭಾವಸ್ಥಲಕ್ಕೆ ಜಂಗಮವಾಗಿ ಅಡಗಿದಡೆ, ಐಕ್ಯನೆಂಬೆ, ಜಂಗಮವೆಂಬೆ, ಲಿಂಗವೆಂಬೆ, ಗುರುವೆಂಬೆ. ಆ ಭಕ್ತ ಜಂಗಮ ಎರಡಕ್ಕೂ ಫಲಂ ನಾಸ್ತಿ, ಪದಂ ನಾಸ್ತಿ, ಭವಂ ನಾಸ್ತಿ. ಆ ನಿಲುವಿಂಗೆ ನಮೋ ನಮೋ ಎಂದು ಬದುಕಿದೆ, ನೀವು ಸಾಕ್ಷಿಯಾಗಿ, ಬಸವಪ್ರಿಯ ಕೂಡಲಚೆನ್ನ ಬಸವಣ್ಣ .
--------------
ಹಡಪದ ಅಪ್ಪಣ್ಣ
ಆಸೆಯ ಬಿಟ್ಟಡೆ ಭಕ್ತರೆಂಬೆ. ವೇಷವ ಬಿಟ್ಟಡೆ ಮಾಹೇಶ್ವರರೆಂಬೆ. ಭವಪಾಶವ ಬಿಟ್ಟಡೆ ಪ್ರಸಾದಿಯೆಂಬೆ. ಭಾವ ಘಟಿಸಿದಡೆ ಪ್ರಾಣಲಿಂಗಿಯೆಂಬೆ. ಬಯಕೆ ನಿಂದಡೆ ಶರಣನೆಂಬೆ. ಅರಿವು ಶೂನ್ಯವಾದಡೆ ಐಕ್ಯನೆಂಬೆ. ಈ ಷಡುಸ್ಥಲದ ಮಹಾಸ್ಥಲದಲ್ಲಿ ಒಡಗೂಡಿ ನಿಂದುದ ಬಸವಣ್ಣಪ್ರಿಯ ವಿಶ್ವಕರ್ಮಟಕ್ಕೆ ಕಾಳಿಕಾವಿಮಲ ರಾಜೇಶ್ವರಲಿಂಗಕ್ಕಲ್ಲದೆ ಇಲ್ಲವೆಂಬೆ.
--------------
ಬಾಚಿಕಾಯಕದ ಬಸವಣ್ಣ
ಕಾಮವುಳ್ಳವ ಭಕ್ತನಲ್ಲ , ಕ್ರೋಧವುಳ್ಳವ ಮಹೇಶ್ವರನಲ್ಲ , ಲೋಭವುಳ್ಳವ ಪ್ರಸಾದಿಯಲ್ಲ , ಮೋಹವುಳ್ಳವ ಪ್ರಾಣಲಿಂಗಿಯಲ್ಲ , ಮದವುಳ್ಳವ ಶರಣನಲ್ಲ , ಮತ್ಸರವುಳ್ಳವ ಐಕ್ಯನಲ್ಲ. ಕಾಮ ಕ್ರೋಧ ಲೋಭ ಮೋಹ ಮದ ಮತ್ಸರವುಳ್ಳನಕ ಎಂತು ಭಕ್ತನೆಂಬೆ ? ಎಂತು ಮಹೇಶ್ವರನೆಂಬೆ ? ಎಂತು ಪ್ರಸಾದಿಯೆಂಬೆ ? ಎಂತು ಪ್ರಾಣಲಿಂಗಿಯೆಂಬೆ ? ಎಂತು ಶರಣನೆಂಬೆ ? ಎಂತು ಐಕ್ಯನೆಂಬೆ ? ಬರಿಯ ಮಾತಿನ ಬಣಗರು ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
-->