ಅಥವಾ

ಒಟ್ಟು 6 ಕಡೆಗಳಲ್ಲಿ , 6 ವಚನಕಾರರು , 6 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ತಾರಕಾಕೃತಿಯ ನಕಾರಪ್ರಣವದ ಆಧಾರಚಕ್ರದೊಳು ಕೆಂಪುಬಣ್ಣವಿರ್ಪುದು. ದಂಡಕಾಕೃತಿಯ ಮಕಾರಪ್ರಣವದ ಸ್ವಾದಿಷ್ಠಾನಚಕ್ರದೊಳು ನೀಲವರ್ಣವಿರ್ಪುದು. ಕುಂಡಲಾಕೃತಿಯ ಶಿಕಾರಪ್ರಣವದ ಮಣಿಪೂರಚಕ್ರದೊಳು ಕುಂಕುಮವರ್ಣವಿರ್ಪುದು. ಅರ್ಧಚಂದ್ರಾಕೃತಿಯ ಯಕಾರಪ್ರಣವದ ಅನಾಹತಚಕ್ರದೊಳು ಪೀತವರ್ಣವಿರ್ಪುದು. ದರ್ಪಣಾಕೃತಿಯ ಯಕಾರಪ್ರಣವದ ವಿಶುದ್ಧಿಚಕ್ರದೊಳು ಶ್ವೇತವರ್ಣವಿರ್ಪುದು. ಜ್ಯೋತಿರಾಕೃತಿಯ ಒಂಕಾರಪ್ರಣವದ ಆಜ್ಞಾಚಕ್ರದೊಳು ಮಾಣಿಕ್ಯವರ್ಣವಿರ್ಪುದು. ಮತ್ತಂ, ಪೃಥ್ವಿತತ್ವಯುಕ್ತನಾದ ಸದ್ಭಕ್ತನೆಂಬ ಅಂಗನ ಸುಚಿತ್ತಹಸ್ತದೊಳು ಆಚಾರಲಿಂಗವಿರ್ಪುದು. ಅಪ್ಪು ತತ್ವಯುಕ್ತವಾದ ಮಹೇಶನೆಂಬ ಅಂಗನ ಸುಬುದ್ಧಿಹಸ್ತದೊಳು ಗುರುಲಿಂಗವಿರ್ಪುದು. ತೇಜತತ್ವಯುಕ್ತನಾದ ಪ್ರಸಾದಿಯೆಂಬ ಅಂಗನ ನಿರಹಂಕಾರಹಸ್ತದೊಳು ಶಿವಲಿಂಗವಿರ್ಪುದು. ವಾಯುತತ್ವಯುಕ್ತನಾದ ಪ್ರಾಣಲಿಂಗಿಯೆಂಬ ಅಂಗನ ಸೂರ್ಯಹಸ್ತದೊಳು ಜಂಗಮಲಿಂಗವಿರ್ಪುದು. ಆಕಾಶತತ್ವಯುಕ್ತನಾದ ಶರಣನೆಂಬ ಅಂಗನ ಸುಜ್ಞಾನಹಸ್ತದೊಳು ಪ್ರಸಾದಲಿಂಗವಿರ್ಪುದು. ಆತ್ಮತತ್ವಯುಕ್ತನಾದ ಐಕ್ಯನೆಂಬ ಅಂಗನ ಸದ್ಭಾವಹಸ್ತದೊಳು ಮಹಾಲಿಂಗವಿರ್ಪುದು. ಮತ್ತಂ, ಘ್ರಾಣವೆಂಬಮುಖದ ಕ್ರಿಯಾಶಕ್ತಿಯ ಶ್ರದ್ಧಾಭಕ್ತಿಯೊಳು ಸುಗಂಧಪದಾರ್ಥವಿರ್ಪುದು. ಜಿಹ್ವೆಯೆಂಬಮುಖದ ಜ್ಞಾನಶಕ್ತಿಯ ನೈಷ್ಠಿಕಾಭಕ್ತಿಯೊಳು ಸಾರಸಪದಾರ್ಥವಿರ್ಪುದು. ನೇತ್ರವೆಂಬಮುಖದ ಇಚ್ಛಾಶಕ್ತಿಯ ಸಾವಧಾನಭಕ್ತಿಯೊಳು ಸಾರೂಪಪದಾರ್ಥವಿರ್ಪುದು. ತ್ವಗೇಂದ್ರಿಯೆಂಬಮುಖದ ಆದಿಶಕ್ತಿಯ ಅನುಭಾವಭಕ್ತಿಯೊಳು ಸುಸ್ವರೂಪಪದಾರ್ಥವಿರ್ಪುದು. ಶ್ರೋತ್ರೇಂದ್ರಿಯಮುಖದ ಪರಶಕ್ತಿಯ ಆನಂದವೆಂಬಭಕ್ತಿಯೊಳು ಸುಶಬ್ದಪದಾರ್ಥವಿರ್ಪುದು. ಹೃದಯೇಂದ್ರಿಯಮುಖದ ಚಿತ್‍ಶಕ್ತಿಯ ಸಮರಸಭಕ್ತಿಯೊಳು ಸುತೃಪ್ತಿಯಿರ್ಪುದು. ಇಂತೀ ಎಪ್ಪತ್ತೆರಡುಮುಖದಿ ನಿನ್ನ ಪೂಜಿಸಿ, ನಿನ್ನ ಹಾಡ್ಯಾಡಿ, ನಿನ್ನ ಧ್ಯಾನಿಸಿ, ನಿನ್ನ ಚಿಂತಿಸಿ, ನಿನ್ನೊಳು ಕೂಡುತ, ನೀನಾರೆಂದು ಹವಣಿಸಿ ಅಂತರಂಗದಿ ಪೊಕ್ಕು ನೋಡೆ ನೀನಲ್ಲದೆ ನಾನೇ ಆದ ಪರಿ ಇದೇನು ಚೋದ್ಯವೊ ನಿರುಪಮ ನಿರಾಳ ಮಹತ್ಪ್ರಭು ಮಹಾಂತಯೋಗಿ ?
--------------
ಮಡಿವಾಳಪ್ಪ / ಕಡಕೋಳ ಮಡಿವಾಳಪ್ಪ
ತಾನೆ ಭಕ್ತ ಮಹೇಶ್ವರ ಪ್ರಸಾದಿ ಪ್ರಾಣಲಿಂಗಿ ಶರಣ ಐಕ್ಯನೆಂಬ ಆರು ಸ್ಥಲವ ಮೀರಿದ ಅಖಂಡನಿರ್ವಯಲು ನೋಡಾ. ಇಷ್ಟಲಿಂಗ ಪ್ರಾಣಲಿಂಗ ಭಾವಲಿಂಗ ಮೊದಲಾಗಿ ಆಚಾರಾದಿ ಮಹಾಲಿಂಗ ಕಡೆಯಾಗಿ ನವನಾದಬ್ರಹ್ಮಲಿಂಗವ ಮೀರಿದ ಮಹಾಘನಲಿಂಗೈಕ್ಯ ತಾನಲ್ಲದೆ ಮತ್ತಾರುಂಟು ಹೇಳಾ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ನಾದಬಿಂದುಕಳಾತೀತಲಿಂಗವನು, ಒಬ್ಬ ಪುರುಷನು ಉನ್ಮನಿಯ ಬಾಗಿಲ ಮುಂದೆ ನಿಂದು ಜಂಗಮರೂಪಿನಿಂದ ಲಿಂಗಧ್ಯಾನ ಮಹಾಧ್ಯಾನಮಂ ಮಾಡಿ, ಪಶ್ಚಿಮದಿಕ್ಕಿನಲ್ಲಿ ನಿಂದು ಚಿತ್ರಿಕನಾಗಿ ಎರಡು ಕಮಲಂಗಳ ರಚಿಸಿ, ಅಷ್ಟಕುಳಪರ್ವತದ ಮೇಲೆ ಲಿಂಗಾರ್ಚನೆಯಂ ಮಾಡಿ, ನವಸ್ಥಲದ ಗುಡಿಯ ಶಿಖರವಿಡಿದಿರಲು, ಒಸರುವ ಕೆರೆಬಾವಿಗಳು ಬತ್ತಿದವು ನೋಡಾ! ಸಪ್ತದ್ವೀಪಂಗಳ ರಚಿಸಿದ ನಿಶ್ಚಿಂತ ನಿರಾಕುಳವೆಂಬ ಸಿಂಹಾಸನದ ಮೇಲೆ ಪರಂಜ್ಯೋತಿಯೆಂಬ ಲಿಂಗವು ತೊಳಗಿ ಬೆಳಗುತಿರ್ಪುದು ನೋಡಾ! ಆ ಲಿಂಗದ ಬೆಳಗಿನೊಳಗೆ ಅನಂತಕೋಟಿ ಸೋಮಸೂರ್ಯರ ಬೆಳಗು ನೋಡಾ! ಆ ಲಿಂಗಕ್ಕೆ ಸಜ್ಜನವೆಂಬ ಮಜ್ಜನವ ನೀಡಿ, ಅಂತರಂಗದ ಬೆಳಗಿನ ಮಹಾಚಿದ್ವಿಭೂತಿಯಂ ಧರಿಸಿ, ನಿರ್ಮಲವೆಂಬ ಗಂಧವನೊರೆದು, ಸುಜ್ಞಾನವೆಂಬ ಅಕ್ಷತೆಯನಿಟ್ಟು, ನಿರ್ಭಾವವೆಂಬ ಪತ್ರಿಯನೇರಿಸಿ, ನಿದ್ರ್ವಂದ್ವವೆಂಬ ಧೂಪವ ತೋರಿ, ಭಕ್ತನೆಂಬ ಅಡ್ಡಣಿಗೆ,ಮಹೇಶ್ವರನೆಂಬ ಹರಿವಾಣ, ಪ್ರಸಾದಿಯೆಂಬ ನೈವೇದ್ಯ, ಪ್ರಾಣಲಿಂಗಿಯೆಂಬ ತೈಲ, ಶರಣನೆಂಬ ಮೇಲೋಗರ, ಐಕ್ಯನೆಂಬ ಭೋಜಿಯನು ಆ ಲಿಂಗಕ್ಕೆ ತೃಪ್ತಿಯನೆಯ್ದಿಸಿ, ಮನಜ್ಞಾನವೆ ವೀಳ್ಯೆಯ, ಸುಜ್ಞಾನವೆ ಅಡಕಿ, ಪರಮಜ್ಞಾನವೆ ಸುಣ್ಣ, ಮಹಾಜ್ಞಾನವೆ ತಾಂಬೂಲ, ಅಜಾಂಡಬ್ರಹಾಂಡ್ಮವೆ ಕುಕ್ಷಿ, ಅಲ್ಲಿಂದತ್ತ ಮಹಾಲಿಂಗದ ಬೆಳಗು, ಸ್ವಯಾನಂದದ ತಂಪು, ನಿರಂಜನದ ಸುಖ, ಪರಿಪೂರ್ಣವೆಂಬ ಆಶ್ರಮದಲ್ಲಿ ತೊಳಗಿ ಬೆಳಗುವ ಮಹಾಮಹಿಮಂಗೆ ಓಂ ನಮಃ ಓಂ ನಮಃ ಎನುತಿರ್ದೆನಯ್ಯ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ತನುರಹಿತವಾಗಿ ನಿಂದಾತ ಶರಣ ; ಮನತರಹರವಾಗಿ ನಿಂದಾತ ಶರಣ ; ಪ್ರಾಣತರಹರವಾಗಿ ನಿಂದಾತ ಶರಣ. ಇಂತಲ್ಲದೆ ತನು ಆಣವಮಲದಲ್ಲಿ ತರಹರವಾಗಿ, ಮನ ಮಾಯಾಮಲದಲ್ಲಿ ತರಹರವಾಗಿ, ಪ್ರಾಣ ಕಾರ್ಮಿಕಮಲದಲ್ಲಿ ತರಹರವಾಗಿ, ಇಂತಿರ್ದು ನಾನು ಭಕ್ತ ನಾನು ಮಾಹೇಶ್ವರ ನಾನು ಪ್ರಸಾದಿ ನಾನು ಪ್ರಾಣಲಿಂಗಿ ನಾನು ಶರಣ ನಾನು ಐಕ್ಯನೆಂಬ ನುಡಿಗಡಣವ ಕಂಡು ಮೃಡನ ಶರಣರು ಕೈಹೊಡೆದು ನಗುತಿರ್ದರು ಕಾಣಾ ಗುರುನಿರಂಜನ ಚನ್ನಬಸವಲಿಂಗಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ಆಚಾರಲಿಂಗ ಗುರುಲಿಂಗ ಶಿವಲಿಂಗ ಜಂಗಮಲಿಂಗ ಪ್ರಸಾದಲಿಂಗ ಮಹಾಲಿಂಗ ಈ ಆರುಲಿಂಗಸ್ಥಲಗಳು. ಭಕ್ತ ಮಹೇಶ್ವರ ಪ್ರಸಾದಿ ಪ್ರಾಣಲಿಂಗಿ ಶರಣ ಐಕ್ಯನೆಂದಿಂತು ಆರು ಅಂಗಸ್ಥಲUಳು. ಅವರವರ ಸಂಬಂಧವಾವಾವೆಂದರೆ: ಘ್ರಾಣದಲ್ಲಿ ಆಚಾರಲಿಂಗ ಸಂಬಂಧ ಜಿಹ್ವೆಯಲ್ಲಿ ಗುರುಲಿಂಗ ಸಂಬಂಧ ನೇತ್ರದಲ್ಲಿ ಶಿವಲಿಂಗ ಸಂಬಂಧ ತ್ವಕ್ಕಿನಲ್ಲಿ ಜಂಗಮಲಿಂಗ ಸಂಬಂಧ ಶ್ರೋತ್ರದಲ್ಲಿ ಪ್ರಸಾದಲಿಂಗ ಸಂಬಂಧ ಭಾವದಲ್ಲಿ ಮಹಾಲಿಂಗ ಸಂಬಂಧ ತತ್‍ಪದವೆಂದು ಲಿಂಗ, ತ್ವಂ ಪದವೆಂದು ಅಂಗ ಅಸಿಪದವೆಂದುಭಯ ಸಂಬಂಧ. ಭಕ್ತನೆಂಬ ಅಂಗಕ್ಕೆ ಆಚಾರಲಿಂಗ ಸುಚಿತ್ತವೆ ಹಸ್ತ. ಘ್ರಾಣೇಂದ್ರಿಯವೆ, ಮುಖ ಸದ್‍ಭಕ್ತಿ, ಕ್ರಿಯಾಶಕ್ತಿ, ಪರಿಮಳ ದ್ರವ್ಯ, ಅರ್ಪಿತ ಗಂಧ ಪ್ರಸಾದ. ಮಹೇಶ್ವರನೆಂಬ ಅಂಗಕ್ಕೆ ಗುರುಲಿಂಗ, ಸುಬುದ್ಧಿಯೇ ಹಸ್ತ, ಜಿಹ್ವೆಯೆ ಮುಖ, ನೈಷಿ*ಕವೇ ಭಕ್ತಿ, ಜ್ಞಾನ ಶಕ್ತಿ, ರಸದ್ರವ್ಯಾರ್ಪಿತ ರುಚಿಪ್ರಸಾದ. ಪ್ರಸಾದಿ ಎಂಬ ಅಂಗಕ್ಕೆ ಶಿವಲಿಂಗ, ನಿರಹಂಕಾರವೆ ಹಸ್ತ ನೇತ್ರೇಂದ್ರಿಯವೆ ಮುಖ, ಸಾವಧಾನವೇ ಭಕ್ತಿ, ಇಚ್ಛಾಶಕ್ತಿ, ರೂಪ ಅರ್ಪಿತ, ರೂಪ ಪ್ರಸಾದ. ಪ್ರಾಣಲಿಂಗಿ ಎಂಬ ಅಂಗಕ್ಕೆ ಚರಲಿಂಗ ಸುಮನವೆ ಹಸ್ತ, ತ್ಪಗಿಂದ್ರಿಯವೆ ಮುಖ, ಅನುಭವವೇ ಭಕ್ತಿ, ಆದಿಶಕ್ತಿ, ಸೋಂಕೆ ಅರ್ಪಿತ, ಸ್ಪರ್ಶವೇ ಪ್ರಸಾದ. ಶರಣನೆಂಬ ಅಂಗಕ್ಕೆ ಪ್ರಸಾದಲಿಂಗ, ಜ್ಞಾನವೇ ಹಸ್ತ ಶ್ರೋತ್ರೇಂದ್ರಿಯವೇ ಮುಖ, ಆನಂದವೇ ಭಕ್ತಿ, ಪರಾಶಕ್ತಿ, ಶಬ್ದವೆ ಅರ್ಪಿತ, ಶಬ್ದಪ್ರಸಾದ. ಐಕ್ಯನೆಂಬ ಅಂಗಕ್ಕೆ ಮಹಾಲಿಂಗ, ಭಾವವೆ ಹಸ್ತ, ಹೃದಯವೇ ಮುಖ, ಸಮರಸವೇ ಭಕ್ತಿ, ಚಿಚ್ಛಕ್ತಿ, ತೃಪ್ತಿಯೆ ಅರ್ಪಿತ, ಪರಿಣಾಮವೇ ಪ್ರಸಾದ. ಇಂತು ಅಂಗ ಲಿಂಗ ಹಸ್ತ ಮುಖ ಶಕ್ತಿ ಭಕ್ತಿ ಅರ್ಪಿತ ಪ್ರಸಾದ ಎಂಬ ಅಷ್ಟವಿಧದ ಬ್ರಹ್ಮದ ಭೇದವನರಿದು ನಡೆಸಬಲ್ಲ ಮಹಾಮಹಿಮಂಗೆ ನಮೋ ನಮೋ ಎಂಬೆನಯ್ಯಾ ಕೂಡಲಚೆನ್ನಸಂಗಮದೇವ
--------------
ಚನ್ನಬಸವಣ್ಣ
ಲಿಂಗಸ್ಥಲ ಭಾವಸ್ವರೂಪವಾದಲ್ಲಿ, ಪ್ರಾಣಲಿಂಗಿ ಶರಣ ಐಕ್ಯನೆಂಬ ತ್ರಿವಿಧವ ತಾಳ್ದು, ಮೂರ್ತಿ ಕುರುಹುಗೊಂಬಲ್ಲಿ, ನಾನಾ ಮಧುರ ರಸದಂಡ ವೃಕ್ಷಂಗಳಲ್ಲಿ ಮಿಕ್ಕಾದ ಲತೆ ಪಚ್ಚೆ ಪೈರುಗಳಲ್ಲಿ ಕುಸುಮಗಂಧ ಮೃಗಗಂಧಂಗಳು ಸ್ಥಾವರ ಮುಂತಾದ ಸುಗಂಧ ಸುವಾಸನೆಗಳಿಗೆಲ್ಲಕ್ಕೂ ತದ್ರೂಪಿಂಗೆ ಹಿಂಗದಂತೆ ಬಂದೊದಗಿದ ಸಂಗದಂತೆ ಕುರುಹುಗೊಂಡೆಯಲ್ಲಾ. ಕಾಯದ ಜೀವದ ಉಭಯದ ಮಧ್ಯದಲ್ಲಿ ನಿಂದು ದೇವನಾದೆಯಲ್ಲಾ. ನಿನ್ನ ಲೀಲೆ ಕಾರಣವಾಗಿ, ಸಂದೇಹಿಗಳಿಗೆ ಸಂಕಲ್ಪಿಯಾಗಿ, ನಿರಂಗಿಗೆ ನಿರಾಲಂಬನಾಗಿ, ಸಮ್ಯಕ್‍ಜ್ಞಾನ ಮುಕುರದಂತೆ ಸಂಬಂಧಿಸಿದೆಯಲ್ಲಾ, ನಿರಂಗ ನಿಃಕಳಂಕ ಮಲ್ಲಿಕಾರ್ಜುನಾ, ನಿನ್ನಿರವ ನೀನೇ ಬಲ್ಲೆ.
--------------
ಮೋಳಿಗೆ ಮಾರಯ್ಯ
-->