ಅಥವಾ

ಒಟ್ಟು 10 ಕಡೆಗಳಲ್ಲಿ , 7 ವಚನಕಾರರು , 9 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬಸವೇಶ್ವರದೇವರು ತೃಣಪುರುಷನ ಮಾಡಿ `ಮೀಮಾಂಸಕಂಗೆ ಉತ್ತರವ ಕೊಡು ಹೋಗು' ಎನಲು ಆ ತೃಣಪುರುಷನು ಮಹಾಪ್ರಸಾದವೆಂದು ಕೈಕೊಂಡು, ಮೀಮಾಂಸಕಂಗೆ ಉತ್ತರವ ಕೊಟ್ಟು ಶಿವವಿರಹಿತವಾದ ಕಾಳ್ಪುರಾಣವೆಲ್ಲವ ಬಯಲು ಮಾಡಿ ನುಡಿಯಲು ಆತಂಗೆ ಶಿವಜ್ಞಾನ ತಲೆದೋರಿ, ಆ ಬಸವೇಶಂಗೆ ವಂದನಂಗೈದು ಉಪದೇಶವ ಮಾಡಬೇಕೆನಲು, ಆತಂಗೆ ವೀರಶೈವದೀಕ್ಷೆಯ ಮಾಡಿ ಷಟ್‍ಸ್ಥಲಮಾರ್ಗ ಕ್ರೀಯ ನಿರೂಪಿಸಿ ತಿಳುಹಲು `ಎಲೆ ಬಸವೇಶ್ವರಾ ಜಂಗಮದ ಪಾದತೀರ್ಥಪ್ರಸಾದವ ಲಿಂಗಕ್ಕೆ ಕೊಟ್ಟುಕೊಳಬಹುದೆರಿಱ ಎಂದು ಕೇಳಲು, ಕೇಳೈ ಮೀಮಾಂಸಕಾ, ಪೂರ್ವದಲ್ಲಿ ಪರಮೇಶ್ವರನು ಸಮಸ್ತ ದೇವತೆಗಳು ಒಡ್ಡೋಲಗದಲ್ಲಿರಲು ಸೂತ್ರಿಕನೆಂಬ ಶೈವಾಚಾರ್ಯನು `` ಎಲೆ ಪರಮೇಶ್ವರಾ ಜಂಗಮದ ಪಾದತೀರ್ಥಪ್ರಸಾದವ ಲಿಂಗಕ್ಕೆ ಕೊಡಬಹುದೆರಿ' ಎನಲು `ಎಲೆ ಸೂತ್ರಿಕನೆ ಕೇಳು ನಾನೆಂದಡೆಯೂ ಜಂಗಮವೆಂದಡೆಯೂ ಬೇರಿಲ್ಲ ಅದು ಕಾರಣ ಜಂಗಮವೆ ಅಧಿಕ. ನೀನಾ ಜಂಗಮಲಿಂಗದ ಪಾದತೀರ್ಥಪ್ರಸಾದವ ಲಿಂಗಕ್ಕೆ ಕೊಡಬಾರದೆಂದು ನಿಂದಿಸಿ ನುಡಿದ ವಾಗ್ದೋಷಕ್ಕೆ ಮತ್ರ್ಯಕ್ಕೆ ಹೋಗಿ ಹೊಲೆಯನ ಮನೆಯ ಸೂಕರನ ಬಸುರಲ್ಲಿ ಹುಟ್ಟಿ ಹದಿನೆಂಟು ಜಾತಿಯ ಅಶುದ್ಧವನು ನಾಲಗೆಯಲಿ ಭುಂಜಿಸಿ ನರಕಜೀವಿಯಾಗಿರುಱಱ ಎಂದುದೆ ಸಾಕ್ಷಿ. ಇದನರಿದು ಮತ್ತೆ ಜಂಗಮದ ಪಾದತೀರ್ಥಪ್ರಸಾದವ ಲಿಂಗಕ್ಕೆ ಕೊಟ್ಟು ಕೊಳಲಾಗದೆಂಬ ಪಂಚಮಹಾಪಾತಕರ ಮಾತ ಕೇಳಲಾಗದು. ಅದೆಂತೆಂದಡೆ:ವೀರಾಗಮದಲ್ಲಿ, ಜಂಗಮಾನಾಮಹಂ ಪ್ರಾಣೋ ಮಮ ಪ್ರಾಣೋ ಹಿ ಜಂಗಮಃ ಜಂಗಮೇನ ತ್ವಹಂ ಪೂಜ್ಯೋ ಮಯಾ ಪೂಜ್ಯೋ ಹಿ ಜಂಗಮಃ ಪರಸ್ಪರಮಭೇದತ್ವಾಜ್ಜಂಗಮಸ್ಯ ಮಮಾಪಿ ಚ ಪಾದೋದಕಪ್ರಸಾದಾಭ್ಯಾಂ ವಿನಾ ತೃಪ್ತಿರ್ನ ಜಾಯತೇ ಇಂತೆಂಬ ಶಿವನ ವಾಕ್ಯವನರಿದು, ಜಂಗಮದ ಪಾದತೀರ್ಥವ ಲಿಂಗಕ್ಕೆ ಮಜ್ಜನಕ್ಕೆರೆದು ಪ್ರಸಾದವ ಲಿಂಗಕ್ಕೆ ನೈವೇದ್ಯವ ಸಮರ್ಪಿಸಿ ಭೋಗಿಸುವಾತನೆ ಸದ್ಭಕ್ತ, ಆತನೆ ಮಾಹೇಶ್ವರ, ಆತನೆ ಪ್ರಸಾದಿ, ಆತನೆ ಪ್ರಾಣಲಿಂಗಿ, ಆತನೆ ಶರಣ, ಆತನೆ ಐಕ್ಯನು. ಇಂತಪ್ಪ ಷಟ್‍ಸ್ಥಲಬ್ರಹ್ಮಿಗೆ ನಮೋ ನಮೋ ಎಂಬೆ. ಇಂತಲ್ಲದೆ ಜಂಗಮದ ಪಾದತೀರ್ಥಪ್ರಸಾದರಹಿತನಾಗಿ ಆವನಾನೊಬ್ಬನು ತನ್ನ ಇಷ್ಟಲಿಂಗಕ್ಕೆ ಅರ್ಷವಿಧಾರ್ಚನೆ ಷೋಡಶೋಪಚಾರಕ್ರೀಯಿಂದ ಪೂಜೆಯ ಮಾಡುವಲ್ಲಿ ಅವನು ಶುದ್ಧಶೈವನು, ಅವನಿಗೆ ಮುಕ್ತಿಯಿಲ್ಲ ಕಾಣಾ ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ
ಆತ್ಮವೆ ಅಂಗವಾದ ಐಕ್ಯಂಗೆ ಸದ್‍ಭಾವನೆ ಹಸ್ತ. ಆ ಹಸ್ತಕ್ಕೆ ಚಿಚ್ಛಕ್ತಿ , ಆ ಶಕ್ತಿಗೆ ಮಹಾಲಿಂಗ, ಆ ಲಿಂಗಕ್ಕೆ ಹೃದಯೇಂದ್ರಿಯವೆ ಮುಖ, ಆ ಮುಖಕ್ಕೆ ಸುತೃಪ್ತಿ ಪದಾರ್ಥ; ಆ ಪದಾರ್ಥವನು ಹೃದಯದಲ್ಲಿಹ ಮಹಾಲಿಂಗಕ್ಕೆ ಸಮರಸಭಕ್ತಿಯಿಂದರ್ಪಿಸಿ, ಆ ಪದಾರ್ಥವನು ಹೃದಯಲ್ಲಿಹ ಮಹಾಲಿಂಗಕ್ಕೆ ಸಮರಸ ಭಕ್ತಿಯಿಂದರ್ಪಿಸಿ ಆ ಸುತೃಪ್ತಿಪ್ರಸಾದವನು ಪಡೆದು ಸುಖಿಸುವಾತನೆ ಐಕ್ಯನು ನೋಡಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಮತಿಜ್ಞಾನ, ಶ್ರುತಿಜ್ಞಾನ, ಖಂಡಜ್ಞಾನ, ಕೇವಲಜ್ಞಾನ, ಜ್ಯೋತಿಜ್ರ್ಞಾನ, ಮಹಾಜ್ಯೋತಿಜ್ರ್ಞಾನವೆಂದಿಂತು ಜ್ಞಾನವಾರು ತೆರನು. ಮತಿಜ್ಞಾನದಿಂದ ಶ್ರುತಿಜ್ಞಾನವಹುದು, ಶ್ರುತಿಜ್ಞಾನದಿಂದ ಖಂಡಜ್ಞಾನವಹುದು. ಖಂಡಜ್ಞಾನದಿಂದ ಕೇವಲಜ್ಞಾನವಹುದು, ಕೇವಲಜ್ಞಾನದಿಂದ ಜ್ಯೋತಿಜ್ರ್ಞಾನವಹುದು. ಜ್ಞೋತಿಜ್ರ್ಞಾನದಿಂದ ಮಹಾಜ್ಯೋತಿಜ್ರ್ಞಾನವಹುದು. ಮತಿಜ್ಞಾನವೆ ಭಕ್ತ, ಶ್ರುತಿಜ್ಞಾನವೆ ಮಹೇಶ್ವರ, ಖಂಡಜ್ಞಾನವೆ ಪ್ರಸಾದಿ, ಕೇವಲಜ್ಞಾನವೆ ಪ್ರಾಣಲಿಂಗಿ, ಜ್ಯೋತಿಜ್ರ್ಞಾನವೆ ಶರಣ, ಮಹಾಜ್ಯೋತಿಜ್ರ್ಞಾನವೆ ಐಕ್ಯ. ಈ ಷಟ್‍ಸ್ಥಲದ ನೆಲೆಯ ಬಲ್ಲಾತನೆ- ಕೂಡಲಚೆನ್ನಸಂಗಯ್ಯನಲ್ಲಿ ಐಕ್ಯನು
--------------
ಚನ್ನಬಸವಣ್ಣ
ನಿರಾಕಾರ ಪರವಸ್ತು ಹೇಗೆಂದಡೆ : ಹೆಣ್ಣಲ್ಲ ಗಂಡಲ್ಲ, ಬೀಜವಲ್ಲ ವೃಕ್ಷವಲ್ಲ, ಆಕಾರವಲ್ಲ ನಿರಾಕಾರವಲ್ಲ, ಸ್ವೇತವಲ್ಲ ಪೀತವಲ್ಲ, ಹರಿತವಲ್ಲ ಮಾಂಜಿಷ್ಟವಲ್ಲ, ಕಪೋತವಲ್ಲ, ಮಾಣಿಕ್ಯವಲ್ಲ. ಆತನು ವರ್ಣಾತೀತನು, ವಾಙ್ಮನಕ್ಕಗೋಚರನು. ಇಂತಪ್ಪ ವಸ್ತುವಿನೊಳಗೆ ಬೆರೆವ ಪರಿಯೆಂತೆಂದಡೆ : ಗುರುವಿನ ವಾಕ್ಯವಿಡಿದು ಆಚರಿಸಿದವನು ಐಕ್ಯನು. ಹೇಗೆಂದಡೆ : ಎಲೆಯಿಲ್ಲದ ವೃಕ್ಷದಂತೆ, ಸಮುದ್ರದೊಳಗೆ ನೊರೆ ತೆರೆ ಬುದ್ಬುದಾಕಾರ ಅಡಗಿದ ಹಾಗೆ ಭಕ್ತನು ಮಹೇಶ್ವರನೊಳಡಗಿ, ಆ ಮಹೇಶ್ವರನು ಪ್ರಸಾದಿಯೊಳಡಗಿ, ಆ ಪ್ರಸಾದಿಯು ಪ್ರಾಣಲಿಂಗಿಯೊಳಡಗಿ, ಆ ಪ್ರಾಣಲಿಂಗಿಯು ಶರಣನೊಳಡಗಿ, ಆ ಶರಣ ಐಕ್ಯನೊಳಡಗಿ, ಆ ಐಕ್ಯನು ನಿರವಯದೊಳು ಕೂಡಿ ಕ್ಷೀರವು ಕ್ಷೀರವ ಕೂಡಿದಂತೆ ನೀರು ನೀರ ಕೂಡಿದಂತೆ ಜ್ಯೋತಿ ಜ್ಯೋತಿಯ ಕೂಡಿದಂತೆ ಬಯಲು ಬಯಲ ಕೂಡಿ ಚಿದ್ಬಯಲುವಾಗಿ ನಿಂದ ನಿಲವ ಲಿಂಗದೊಳರುಹಿ ಮೂವತ್ತಾರುಲಿಂಗದ ಮುಖದಿಂದಾದ ಮೂವತ್ತಾರು ವಚನವ ಓದಿದವರು ಕೇಳಿದವರು ಸದ್ಯೋನ್ಮುಕ್ತರಪ್ಪುದು ತಪ್ಪದು ಎಂದಾತ ನಮ್ಮ ಶಾಂತಕೂಡಲಸಂಗಮದೇವ.
--------------
ಗಣದಾಸಿ ವೀರಣ್ಣ
ಇನ್ನೀ ಲಿಂಗಮುಖಕ್ಕೆ ಅರ್ಪಿಸುವ ಅವಧಾನವಾವುದೆಂದೊಡೆ: ಪೃಥ್ವಿಯೇ ಅಂಗವಾದ ಭಕ್ತನು ಸುಚಿತ್ತವೆಂಬ ಹಸ್ತದಿಂದ ಆಚಾರಲಿಂಗಕ್ಕೆ ಘ್ರಾಣವೆಂಬ ಮುಖದಲ್ಲಿ ಗಂಧವ ಸಮರ್ಪಣವ ಮಾಡಿ ಆಚಾರಲಿಂಗದ ಪ್ರಸನ್ನ ಪ್ರಸಾದವ ಸ್ವೀಕರಿಸುತ್ತಿಪ್ಪನಯ್ಯ. ಜಲವೇ ಅಂಗವಾದ ಮಾಹೇಶ್ವರನು ಸುಬುದ್ಧಿಯೆಂಬ ಹಸ್ತದಿಂದ ಗುರುಲಿಂಗಕ್ಕೆ ಜಿಹ್ವೆಯೆಂಬ ಮುಖದಲ್ಲಿ ರಸವನು ಸಮರ್ಪಣವ ಮಾಡಿ ಗುರುಲಿಂಗದ ಪ್ರಸನ್ನ ಪ್ರಸಾದವ ಸ್ವೀಕರಿಸುತ್ತಿಪ್ಪನಯ್ಯ. ಅಗ್ನಿಯೇ ಅಂಗವಾದ ಪ್ರಸಾದಿಯು ನಿರಹಂಕಾರವೆಂಬ ಹಸ್ತದಿಂದ ಶಿವಲಿಂಗಕ್ಕೆ ನೇತ್ರವೆಂಬ ಮುಖದಲ್ಲಿ ರೂಪವ ಸಮರ್ಪಣವ ಮಾಡಿ ಶಿವಲಿಂಗದ ಪ್ರಸನ್ನ ಪ್ರಸಾದವ ಸ್ವೀಕರಿಸುತ್ತಿಪ್ಪನಯ್ಯ. ವಾಯುವೇ ಅಂಗವಾದ ಪ್ರಾಣಲಿಂಗಿಯು ಸುಮನವೆಂಬ ಹಸ್ತದಿಂದ ಜಂಗಮಲಿಂಗಕ್ಕೆ ತ್ವಕ್ಕೆಂಬ ಮುಖದಲ್ಲಿ ಸ್ಪರ್ಶನ ಸಮರ್ಪಣವಮಾಡಿ ಜಂಗಮಲಿಂಗದ ಪ್ರಸನ್ನ ಪ್ರಸಾದವ ಸ್ವೀಕರಿಸುತ್ತಿಪ್ಪನಯ್ಯ. ಆಕಾಶವೇ ಅಂಗವಾದ ಶರಣನು ಸುಜ್ಞಾನವೆಂಬ ಹಸ್ತದಿಂದ ಪ್ರಸಾದಲಿಂಗಕ್ಕೆ ಶ್ರೋತ್ರವೆಂಬ ಮುಖದಲ್ಲಿ ಶಬ್ದವ ಸಮರ್ಪಣವ ಮಾಡಿ ಪ್ರಸಾದಲಿಂಗದ ಪ್ರಸನ್ನ ಪ್ರಸಾದವ ಸ್ವೀಕರಿಸುತ್ತಿಪ್ಪನಯ್ಯ. ಆತ್ಮನೇ ಅಂಗವಾದ ಐಕ್ಯನು ಸದ್ಭಾವವೆಂಬ ಹಸ್ತದಿಂದ ಮಹಾಲಿಂಗಕ್ಕೆ ಮನೆವೆಂಬ ಮುಖದಲ್ಲಿ ತೃಪ್ತಿಯ ಸಮರ್ಪಣವ ಮಾಡಿ ಮಹಾಲಿಂಗದ ಪ್ರಸನ್ನ ಪ್ರಸಾದವ ಸ್ವೀಕರಿಸುತ್ತಿಪ್ಪನಯ್ಯ. ಈ ಅರ್ಪಿತ ಅವಧಾನದ ಭೇದವನರಿದು ಭೋಗಿಸುವ ಭೋಗವಲ್ಲವು ಲಿಂಗಭೋಗ ಪ್ರಸಾದ, ಅಂಗಭೋಗ ಅನರ್ಪಿತ; ಅನಪಿರ್ತವೇ ಕರ್ಮದ ತವರುಮನೆ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವನೊಮ್ಮೆಯೂ ಮುಟ್ಟವು.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಪೃಥ್ವಿ ಅಂಗವಾದ ಭಕ್ತನು, ಅಪ್ಪು ಅಂಗವಾದ ಮಹೇಶ್ವರನು, ತೇಜ ಅಂಗವಾದ ಪ್ರಸಾದಿ, ವಾಯು ಅಂಗವಾದ ಪ್ರಾಣಲಿಂಗಿ, ಆಕಾಶವೆ ಅಂಗವಾದ ಶರಣನು, ಆತ್ಮನೆ ಅಂಗವಾದ ಐಕ್ಯನು, ನಿರಾತ್ಮನೆ ಅಂಗವಾದ ಉಪಮಾತೀತನು, ಇಂತಪ್ಪ ಭೇದಾಭೇದವನರಿತು ಇರಬಲ್ಲಡೆ ಆತನೆ ಮಹಾಜ್ಞಾನಸಂಬಂಧಿ ಕಾಣಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ನಿಃಕಲ ಶಿವನ ಮಧ್ಯದಲ್ಲಿ ಚಚ್ಛಕ್ತಿ ಉದಯಿಸಿದಳು. ಆ ಚಿಚ್ಛಕ್ತಿಯ ಮಧ್ಯದಲ್ಲಿ ಶಾಂತ್ಯತೀತೋತ್ತರೆಯೆಂಬ ಕಲೆ. ಆ ಶಾಂತ್ಯತೀತೋತ್ತರೆಯೆಂಬ ಕಲೆಯ ಮಧ್ಯದಲ್ಲಿ ಮಹಾಲಿಂಗ. ಆತ ಮಹಾಲಿಂಗದ ಮಧ್ಯದಲ್ಲಿ ನಿರ್ಮುಕ್ತಸಾದಾಖ್ಯ. ಆ ನಿರ್ಮುಕ್ತಸಾದಾಖ್ಯದ ಮಧ್ಯದಲ್ಲಿ ಪಶುಪತಿಯೆಂಬ ಕಲಾಮೂರ್ತಿ. ಆ ಪಶುಪತಿಯೆಂಬ ಕಲಾಮೂರ್ತಿಯ ಮಧ್ಯದಲ್ಲಿ ಶಿವನೆಂಬ ಐಕ್ಯನು. ಆ ಶಿವನೆಂಬ ಐಕ್ಯನ ಮಧ್ಯದಲ್ಲಿ ಉಪಮಾತೀತನು. ಆ ಉಪಮಾತೀತನ ಮಧ್ಯದಲ್ಲಿ ಆತ್ಮನು. -ಇಂತು ಮಹಾಸಾದಾಖ್ಯದ ಸೃಷ್ಟಿ. ಆ ನಿಃಕಲ ಶಿವನ ಮಧ್ಯದಲ್ಲಿ ಪರಾಶಕ್ತಿ; ಆ ಪರಾಶಕ್ತಿಯ ಮಧ್ಯದಲ್ಲಿ ಶಾಂತ್ಯಾತೀತೆಯೆಂಬ ಕಲೆ. ಆ ಶಾಂತ್ಯಾತೀತೆಯೆಂಬ ಕಲೆಯ ಮಧ್ಯದಲ್ಲಿ ಪ್ರಸಾದಲಿಂಗ. ಆ ಪ್ರಸಾದಲಿಂಗದ ಮಧ್ಯದಲ್ಲಿ ಶಿವಸಾದಾಖ್ಯ. ಆ ಶಿವಸಾದಾಖ್ಯದ ಮಧ್ಯದಲ್ಲಿ ಮಹಾದೇವನೆಂಬ ಕಲಾಮೂರ್ತಿ. ಆ ಮಹಾದೇವನೆಂಬ ಕಲಾಮೂರ್ತಿಯ ಮಧ್ಯದಲ್ಲಿ ಕ್ಷೇತ್ರಜ್ಞನೆಂಬ ಶರಣ. ಆ ಶರಣನ ಮಧ್ಯದಲ್ಲಿ ಸದಾಶಿವನು. ಆ ಸದಾಶಿವನ ಮಧ್ಯದಲ್ಲಿ ಆಕಾಶ. ಇಂತು ಶಿವಸಾದಾಖ್ಯದ ಸೃಷ್ಟಿ. ಆ ನಿಃಕಲ ಶಿವನ ಮಧ್ಯದಲ್ಲಿ ಆದಿಶಕ್ತಿ. ಆ ಆದಿಶಕ್ತಿಯ ಮಧ್ಯದಲ್ಲಿ ಶಾಂತಿಯೆಂಬ ಕಲೆ. ಆ ಶಾಂತಿಯೆಂಬ ಕಲೆಯ ಮಧ್ಯದಲ್ಲಿ ಜಂಗಮಲಿಂಗ. ಆ ಜಂಗಮಲಿಂಗದ ಮಧ್ಯದಲ್ಲಿ ಅಮೂರ್ತಿಸಾದಾಖ್ಯ. ಆ ಅಮೂರ್ತಿಸಾದಾಖ್ಯದ ಮಧ್ಯದಲ್ಲಿ ಭೀಮೇಶ್ವರನೆಂಬ ಕಲಾಮೂರ್ತಿ. ಆ ಭೀಮೇಶ್ವರನೆಂಬ ಕಲಾಮೂರ್ತಿಯ ಮಧ್ಯದಲ್ಲಿ ಕರ್ತಾರನೆಂಬ ಪ್ರಾಣಲಿಂಗಿ. ಆ ಕರ್ತಾರನೆಂಬ ಪ್ರಾಣಲಿಂಗಿಯ ಮಧ್ಯದಲ್ಲಿ ಈಶ್ವರ. ಆ ಈಶ್ವರನ ಮಧ್ಯದಲ್ಲಿ ವಾಯು. -ಇಂತು ಅಮೂರ್ತಿಸಾದಾಖ್ಯದ ಸೃಷ್ಟಿ. ಆ ನಿಃಕಲ ಶಿವನ ಮಧ್ಯದಲ್ಲಿ ಇಚ್ಛಾಶಕ್ತಿ. ಆ ಇಚ್ಛಾಶಕ್ತಿಯ ಮಧ್ಯದಲ್ಲಿ ವಿದ್ಯೆಯೆಂಬ ಕಲೆ. ಆ ವಿದ್ಯೆಯೆಂಬ ಕಲೆಯ ಮಧ್ಯದಲ್ಲಿ ಶಿವಲಿಂಗ. ಆ ಶಿವಲಿಂಗದ ಮಧ್ಯದಲ್ಲಿ ಮೂರ್ತಿಸಾದಾಖ್ಯ. ಆ ಮೂರ್ತಿಸಾದಾಖ್ಯದ ಮಧ್ಯದಲ್ಲಿ ಮಹಾರುದ್ರನೆಂಬ ಕಲಾಮೂರ್ತಿ. ಆ ಮಹಾರುದ್ರನೆಂಬ ಕಲಾಮೂರ್ತಿಯ ಮಧ್ಯದಲ್ಲಿ ಭಾವನೆಂಬ ಪ್ರಸಾದಿ. ಆ ಭಾವನೆಂಬ ಪ್ರಸಾದಿಯ ಮಧ್ಯದಲ್ಲಿ ರುದ್ರನು. ಆ ರುದ್ರನ ಮಧ್ಯದಲ್ಲಿ ಅಗ್ನಿ. -ಇಂತು ಮೂರ್ತಿಸಾದಾಖ್ಯದ ಸೃಷ್ಟಿ. ಆ ನಿಃಕಲ ಶಿವನ ಮಧ್ಯದಲ್ಲಿ ಪ್ರತಿಷೆ*ಯೆಂಬ ಕಲೆ. ಆ ಪ್ರತಿಷೆ*ಯೆಂಬ ಕಲೆಯ ಮಧ್ಯದಲ್ಲಿ ಗುರುಲಿಂಗ. ಆ ಗುರುಲಿಂಗದ ಮಧ್ಯದಲ್ಲಿ ಕರ್ತುಸಾದಾಖ್ಯ. ಆ ಕರ್ತುಸಾದಾಖ್ಯದ ಮಧ್ಯದಲ್ಲಿ ಸರ್ವನೆಂಬ ಕಲಾಮೂರ್ತಿ. ಆ ಸರ್ವನೆಂಬ ಕಲಾಮೂರ್ತಿಯ ಮಧ್ಯದಲ್ಲಿ ಚೈತನ್ಯವೆಂಬ ಮಾಹೇಶ್ವರ. ಆ ಚೈತನ್ಯನೆಂಬ ಮಾಹೇಶ್ವರನ ಮಧ್ಯದಲ್ಲಿ ವಿಷ್ಣು. ಆ ವಿಷ್ಣುವಿನ ಮಧ್ಯದಲ್ಲಿ ಅಪ್ಪು. -ಇಂತು ಕರ್ತುಸಾದಾಖ್ಯದ ಸೃಷ್ಟಿ. ಆ ನಿಃಕಲ ಶಿವನ ಮಧ್ಯದಲ್ಲಿ ಕ್ರಿಯಾಶಕ್ತಿ. ಆ ಕ್ರಿಯಾಶಕ್ತಿಯ ಮಧ್ಯದಲ್ಲಿ ನಿವೃತ್ತಿಯೆಂಬ ಕಲೆ. ಆ ನಿವೃತ್ತಿಯೆಂಬ ಕಲೆಯ ಮಧ್ಯದಲ್ಲಿ ಆಚಾರಲಿಂಗ. ಆ ಆಚಾರಲಿಂಗದ ಮಧ್ಯದಲ್ಲಿ ಕರ್ಮಸಾದಾಖ್ಯ. ಆ ಕರ್ಮಸಾದಾಖ್ಯದ ಮಧ್ಯದಲ್ಲಿ ಭವನೆಂಬ ಕಲಾಮೂರ್ತಿ. ಆ ಭವನೆಂಬ ಕಲಾಮೂರ್ತಿಯ ಮಧ್ಯದಲ್ಲಿ ಅಂತರ್ಯಾಮಿಯೆಂಬ ಭಕ್ತ. ಆ ಅಂತರ್ಯಾಮಿಯೆಂಬ ಭಕ್ತನ ಮಧ್ಯದಲ್ಲಿ ಬ್ರಹ್ಮ. ಆ ಬ್ರಹ್ಮನ ಮಧ್ಯದಲ್ಲಿ ಪೃಥ್ವಿ. ಆ ಬ್ರಹ್ಮನಿಂದ ನರರು ಸುರರು ಅಸುರರು ಅಂಡಜ ಸ್ವೇದಜ ಉದ್ಭಿಜ ಜರಾಯುಜವೆಂಬ ಸಕಲ ಚರಾಚರಂಗಳೆಲ್ಲವೂ ಹುಟ್ಟಿದವು. ಇಂತಿವೆಲ್ಲವು ಶಿವನ ನೆನಹುಮಾತ್ರದಿಂದಲಾದವಯ್ಯಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಕರುವಿನ ರೂಪಿಂಗೆ ಒಳಗೊಂದು ಹೊರಗೊಂದಲ್ಲದೆ ಪರುಷದ ರೂಪಿಂಗೆ ಒಳಗೊಂದು ಹೊರಗೊಂದುಂಟೆ ? ಅಲ್ಲ, ನಿಲ್ಲು, ಮಾಣು, ಪರೀಕ್ಷಿಸಿ ನೋಡಾ. ಪಂಚಭೂತಸಮ್ಮಿಶ್ರನಾದಡೆ ದೇವ ದಾನವರೊಳಗಾದ ಪ್ರಕೃತಿಕಾಯವಾದಾ ತನುವಿಂಗೆ ಒಳಗೊಂದು ಹೊರಗೊಂದು ಅದೂ ಕ್ರಿಯಾಕರ್ಮ ಬೇರೆ ದ್ವಂದ್ವಗ್ರಸ್ತವಾಗಿಹುದು. ಆಪ್ರಕಾರವಲ್ಲ ನೋಡಾ. ಗುರುಲಿಂಗಜಂಗಮ ಪ್ರಸನ್ನವಾದ ಪ್ರಸಾದಕಾಯ ಮಹಾಜ್ಞಾನತನು ಪ್ರಾಣಲಿಂಗ ಸ್ವಾಯತವಾಗಿಪ್ಪ ಘನತರ ಶಿವಲಿಂಗಮೂರ್ತಿ ಸರ್ವಾಂಗಲಿಂಗ ಮೂರ್ತಿಯ ಪರೀಕ್ಷಿಸಿ ನೋಡಿ, ಇಂತು ಸದ್ಗುರುಸ್ವಾಮಿ ಪ್ರಾಣಲಿಂಗಪ್ರತಿಷೆ*ಯಂ ಎಂದು ಮಾಡಿದನೋ ಅಂದೇ ಐಕ್ಯನು, ಅಂದೇ ಶರಣನು, ಅಂದೇ ಪ್ರಾಣಲಿಂಗಿ, ಅಂದೇ ಪ್ರಸಾದಿ, ಅಂದೇ ಮಾಹೇಶ್ವರ, ಅಂದೇ ಭಕ್ತನು. ಇಂದಿನ್ನಾವುದು ಹೊಸತಲ್ಲ ನೋಡಾ. ಗುರುಲಿಂಗಜಂಗಮಕ್ಕೆ ತ್ರಿವಿಧಭಕ್ತಿಯ ಮಾಡುತ್ತಿಪ್ಪ ಭಕ್ತನಾಗಿಪ್ಪನು ಪರಧನ ಪರಸ್ತ್ರೀ ಪರದೈವಂಗಳ ಬಿಟ್ಟು ಮಾಹೇಶ್ವರನಾಗಿಪ್ಪನು. ಕರ್ಮಣಾ ಮನಸಾ ವಾಚಾ ಗುರೂಣಾಂ ಭಕ್ತವತ್ಸಲಃ ಶರೀರಮರ್ಥಂ ಪ್ರಾಣಂ ಚ ಸದ್ಗುರುಭ್ಯೋ ನಿವೇದಯೇತ್ ಎಂಬುದನರಿದು ಈ ತ್ರಿವಿಧವನೂ ಗುರುಲಿಂಗಜಂಗಮಕ್ಕೆ ಅರ್ಪಿಸಿ ನಿರಂತರ ಪ್ರಸಾದವನವಗ್ರಹಿಸಿ ಭಕ್ತಕಾಯ ಮಮಕಾಯವೆಂಬೀ ವಾಕ್ಯದಲೂ ತನು ಶಿವತನುವೆಂದರಿದು ಸದ್ಗುರು ಪ್ರಾಣಲಿಂಗವನೇಕೀಭವಿಸಿದ ಲಿಂಗವೇ ಪ್ರಾಣವೆಂಬುದರಿದ ಬಳಿಕ ಪ್ರಾಣಲಿಂಗವೆಂದರಿದು, ಒಳಗು ಹೊರಗೆಂದರಿಯದೆ ಸರ್ವಾಂಗಲಿಂಗವೆಂದರಿದು, ಪ್ರಾಣಮಯ ಶಿವನೆಂದರಿದು ತತ್ವಮಯಶಿವನೆಂದರಿದು ಸರ್ವಕ್ರಿಯಾಕರ್ಮಂಗಳೆಲ್ಲವನೂ ಶಿವಕ್ರೀ ಎಂದರಿದು ಕರಣಂಗಳೆಲ್ಲವೂ ಶಿವಕರಣಂಗಳೆಂದರಿದು ಶಿವಪ್ರೇರಣೆಯಿಂದ ಬಂದ ಪದಾರ್ಥಂಗಳೆಲ್ಲವೂ ಸರ್ವಶುದ್ಧ ಎಂದರಿದು ಶಿವಹಸ್ತದಲ್ಲಿ ಶಿವಾರ್ಪಿತವಂ ಮಾಡಿ ರೂಪನರ್ಪಿಸಿ ಶಿವಜಿಹ್ವೆಯಲ್ಲಿ ಶಿವಾರ್ಪಿತವಂ ಮಾಡಿ ರುಚಿಯನರ್ಪಿಸಿ ಅರ್ಪಿಸಿದೆನೆಂದೆನ್ನದೆ, ಶಿವಕ್ರೀ ಎಂದರಿದು ಮಹಾಜ್ಞಾನ ಪರಿಣಾಮಪ್ರಸಾದವ ನಿರಂತರ ಗ್ರಹಿಸುವನು. ಮನೋವಾಕ್ಕಾಯದಲ್ಲಿ ಮಿಥ್ಯವ ಕಳೆದು ಜಂಗಮಲಿಂಗಕ್ಕೆ ಅಷ್ಟಭೋಗಂಗಳ ಸಲಿಸಿ ಪ್ರಸನ್ನತೆಯಂ ಪಡೆದು ಪ್ರಸನ್ನಪ್ರಸಾದವ ಪ್ರಸಾದಿಯಾಗಿ ಗ್ರಹಿಸುನವನುಫ. ಅಲಸುಗಾರನ ಭಕ್ತಿ ಅದ್ವೈತವೆಂಬ ವಾಕ್ಯಕ್ಕಂಜಿ ಸರ್ವಕ್ರೀಯಲ್ಲಿ ಎಚ್ಚತ್ತು ನಡೆವನು. ಪ್ರಾಣ ಲಿಂಗವೆಂದರಿದು, ಪ್ರಾಣಲಿಂಗಿಯಾಗಿ ಸುಖ ದುಃಖ ಭಯಾದಿ ದ್ವಂದ್ವಕರ್ಮಂಗಳು ನಾಸ್ತಿಯಾಗಿಪ್ಪನು. ಸರ್ವಕ್ರಿಯಾಕರ್ಮಂಗಳೆಲ್ಲವನೂ ಲಿಂಗದಲ್ಲಿ ಇರಿಸಿ, ಧರಿಸಿ, ಸುಖಿಸಿ, ಶರಣನಾಗಿಪ್ಪನು. ಸರ್ವಕ್ರೀಯಲ್ಲಿ ನಡೆದು ತನುಮನಧನವ ಸವೆಸಿ ಮಹಾಜ್ಞಾನವಳವಟ್ಟು, ನಿಸ್ಸಂಗಿಯಾಗಿ ಸರ್ವಕ್ರೀಯನೇಕೀಭವಿಸಿ ಕ್ರಿಯಾನಾಸ್ತಿಯಾಗಿ ಐಕ್ಯನಾಗಿಪ್ಪನು. ಕ್ರಿಯಾಕ್ರಿಯೆ ಅಂದು ಇಂದು ಎಂದೂ ಒಂದೇ ಪರಿಯಯ್ಯಾ. ಈ ವಿಚಾರ ಒಮ್ಮಿಂದೊಮ್ಮೆ ಅರಿಯಬಾರದು. ಅರಿಯದಿದ್ದರೇನುರಿ ಬಾಲ್ಯದಲ್ಲಿ ಸತಿಪತಿಗಳೂ ಮಾತಾಪಿತರುಗಳು ವಿವಾಹವ ಮಾಡುವಲ್ಲಿ ಒಮ್ಮಿಂದೊಮ್ಮೆ ಬಾಲಕ್ರಿಯಾಕರ್ಮ ರತಿಸುಖವನರಿಯಬಾರದು. ಅರಿಯದಿದ್ದರೇನು? ಬಾಲ್ಯ ಸತಿಪತಿಗಳಲ್ಲಿ ಮುಂದೆ ಯೌವನದಲ್ಲಿ ಕ್ರಿಯಾಕರ್ಮಕರದಿ ಸುಖವನರಿವಂತೆ ಶಿವಾಚಾರ ಸರ್ವಕ್ರಿಯಾ ಸಂಪನ್ನತ್ವವನೂ, ಮಹಾನುಭಾವರ ಸಂಗದಿಂದಲರಿಯಬಹುದು ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಘ್ರಾಣಕ್ಕೂ ಗುದಕ್ಕೂ ಪೃಥ್ವಿ ಎಂಬ ಮಹಾಭೂತ. ಅಲ್ಲಿ ನಿವೃತ್ತಿ ಎಂಬ ಕಲೆಯಿಹುದು. ಆ ಕಲೆಯಲ್ಲಿ, ಕ್ರಿಯಾಶಕ್ತಿಯುಕ್ತವಾದ ಆಚಾರಲಿಂಗವ ಧರಿಸಿದಾತ ಭಕ್ತನು. ಜಿಹ್ವೆಗೂ ಗುಹ್ಯಕ್ಕೂ ಅಪ್ಪು ಎಂಬ ಮಹಾಭೂತ. ಅಲ್ಲಿ ಪ್ರತಿಷೆ* ಎಂಬ ಕಲೆಯಿಹುದು. ಆ ಕಲೆಯಲ್ಲಿ, ಜ್ಞಾನಶಕ್ತಿಯುಕ್ತವಾದ ಗುರುಲಿಂಗವ ಧರಿಸಿದಾತ ಮಾಹೇಶ್ವರನು. ನೇತ್ರಕ್ಕೂ ಪಾದಕ್ಕೂ ಅಗ್ನಿ ಎಂಬ ಮಹಾಭೂತ. ಅಲ್ಲಿ ವಿದ್ಯೆ ಎಂಬ ಕಲೆಯಿಹುದು. ಆ ಕಲೆಯಲ್ಲಿ, ಇಚ್ಛಾಶಕ್ತಿಯುಕ್ತವಾದ ಶಿವಲಿಂಗವ ಧರಿಸಿಕೊಂಡಾತ ಪ್ರಸಾದಿ. ತ್ವಕ್ಕಿಗೂ ಪಾಣಿಗೂ ವಾಯುವೆಂಬ ಮಹಾಭೂತ. ಅಲ್ಲಿ ಶಾಂತಿ ಎಂಬ ಕಲೆಯಿಹುದು. ಆ ಕಲೆಯಲ್ಲಿ, ಆದಿಶಕ್ತಿಯುಕ್ತವಾದ ಜಂಗಮಲಿಂಗವ ಧರಿಸಿಕೊಂಡಾತ ಪ್ರಾಣಲಿಂಗಿ. ಶ್ರೋತ್ರಕ್ಕೂ ವಾಕ್ಕಿಗೂ ಆಕಾಶ ಎಂಬ ಮಹಾಭೂತ. ಅಲ್ಲಿ ಶಾಂತ್ಯತೀತ ಎಂಬ ಕಲೆಯಿಹುದು. ಆ ಕಲೆಯಲ್ಲಿ, ಪರಾಶಕ್ತಿಯುಕ್ತವಾದ ಪ್ರಸಾದಲಿಂಗವ ಧರಿಸಿಕೊಂಡಾತ ಶರಣನು. ಆತ್ಮಾಂಗಕ್ಕೆ ಮನ ಎಂಬ ಮಹಾಭೂತ. ಅಲ್ಲಿ ಶಾಂತ್ಯತೀತೋತ್ತರ ಎಂಬ ಕಲೆಯಿಹುದು. ಆ ಕಲೆಯಲ್ಲಿ, ಚಿಚ್ಛಕ್ತಿಯುಕ್ತವಾದ ಮಹಾಲಿಂಗವ ಧರಿಸಿಕೊಂಡಾತ ಐಕ್ಯನು. ಇಂತೀ ಷಡುಸ್ಥಲಭಕ್ತರು ಷಡ್ವಿಧಲಿಂಗವ ಧರಿಸಿ ನಿರಾಳಲಿಂಗಾರ್ಚನೆಯ ಮಾಡುತ್ತಿಹರು, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರ ಪ್ರಭುವೇ.
--------------
ಸ್ವತಂತ್ರ ಸಿದ್ಧಲಿಂಗ
-->