ಅಥವಾ

ಒಟ್ಟು 5 ಕಡೆಗಳಲ್ಲಿ , 3 ವಚನಕಾರರು , 5 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಭಕ್ತನಾದಲ್ಲಿ ಭಕ್ತಿಸ್ಥಲ ಅಳವಟ್ಟು. ಮಾಹೇಶ್ವರನಾದಲ್ಲಿ ಆ ಸ್ಥಲ ಅಳವಟ್ಟು. ಪ್ರಸಾದಿಯಾದಲ್ಲಿ ಆ ಸ್ಥಲ ಅಳವಟ್ಟು. ಪ್ರಾಣಲಿಂಗಿಯಾದಲ್ಲಿ ಆ ಸ್ಥಲ ಅಳವಟ್ಟು. ಶರಣನಾದಲ್ಲಿ ಆ ಸ್ಥಲ ಅಳವಟ್ಟು. ಐಕ್ಯನಾದಲ್ಲಿ ಆ ಸ್ಥಲ ಅಳವಟ್ಟು. ಆರು ಲೇಪವಾಗಿ, ಮೂರು ಮುಗ್ಧವಾಗಿ, ಒಂದೆಂಬುದಕ್ಕೆ ಸಂದಿಲ್ಲದೆ, ಲಿಂಗವೆ ಅಂಗವಾಗಿಪ್ಪ ಶರಣನ ಇರವು, ಗುಡಿಯ ಗುಮ್ಮಟನೊಡೆಯ ಅಗಮ್ಯೇಶ್ವರಲಿಂಗ ತಾನು ತಾನಾದ ಶರಣ.
--------------
ಮನುಮುನಿ ಗುಮ್ಮಟದೇವ
ಭಕ್ತಂಗೆ ತ್ರಿವಿಧಮಲ ನಾಸ್ತಿಯಾಗಿರಬೇಕು. ಮಾಹೇಶ್ವರಂಗೆ ಬಂಧ ಜಪ ನೇಮ ಕರ್ಮಂಗಳು ಹಿಂಗಿರಬೇಕು. ಪ್ರಸಾದಿಗೆ ಆಯತ ಸ್ವಾಯತ ಸನ್ನಹಿತವೆಂಬುದ ಸಂದೇಹಕ್ಕಿಕ್ಕದೆ ಸ್ವಯಸನ್ನದ್ಧವಾಗಿರಬೇಕು. ಪ್ರಾಣಲಿಂಗಿಯಾದಡೆ ಬಂದು ಸೋಂಕುವ ಸುಗುಣ ನಿಂದು ಸೋಂಕುವ ದುರ್ಗುಣ ಉಭಯ ಸೋಂಕುವುದಕ್ಕೆ ಮುನ್ನವೆ ಹಿಡಿವುದ ಹಿಡಿದು, ಬಿಡುವುದ ಬಿಟ್ಟು ಅರ್ಪಿಸಬೇಕು. ಶರಣನಾದಲ್ಲಿ ಆಗುಚೇಗೆಯೆಂಬುದನರಿಯದೆ ಸ್ತುತಿನಿಂದ್ಯಾದಿಗಳಿಗೆ ಮೈಗೊಡದೆ ರಾಗವಿರಾಗವೆಂಬುದಕ್ಕೆ ಮನವಿಕ್ಕದೆ ಜಿಹ್ವೆ ಗುಹ್ಯೇಂದ್ರಿಯಕ್ಕೆ ನಿಲುಕದೆ ಮದಗಜದಂತೆ ಇದಿರನರಿಯದಿಪ್ಪುದು. ಐಕ್ಯನಾದಲ್ಲಿ ಸುಗಂಧದ ಸುಳುಹಿನಂತೆ ಪಳುಕಿನ ರಾಜತೆಯಂತೆ, ಶುಕ್ತಿಯ ಅಪ್ಪುವಿನಂತೆ ಅಣೋರಣಿಯಲ್ಲಿ ಆವರಿಸಿ ತಿರುಗುವ ನಿಶ್ಚಯತನದಂತೆ ಬಿಂಬದೊಳಗಣ ತರಂಗದ ವಿಸ್ತರದಂಗದಂತೆ ಇಂತೀ ಷಟ್‍ಸ್ಥಲಕ್ಕೆ ನಿರ್ವಾಹಕವಾಗಿ ವಿಶ್ವಾಸದಿಂದ ಸಂಗನಬಸವಣ್ಣನ ಸಾಕ್ಷಿಯಾಗಿ ಬ್ರಹ್ಮೇಶ್ವರಲಿಂಗವನರಿದವರಿಗಲ್ಲದೆ ಸಾಧ್ಯವಲ್ಲ.
--------------
ಬಾಹೂರ ಬೊಮ್ಮಣ್ಣ
ಭಕ್ತನಾದಲ್ಲಿ ಧರಿತ್ರಿಯಂತಿರಬೇಕು. ಮಾಹೇಶ್ವರನಾದಲ್ಲಿ ಅಪ್ಪುವಿನಂತಿರಬೇಕು. ಪ್ರಸಾದಿಯಾದಲ್ಲಿ ವಹ್ನಿಯಂತಿರಬೇಕು. ಪ್ರಾಣಲಿಂಗಿಯಾದಲ್ಲಿ ಶುಕ್ತಿ ಕೊಂಡ ವಿಷದಂತಿರಬೇಕು. ಶರಣನಾದಲ್ಲಿ ಉರಿಯುಂಡ ಕರ್ಪುರದಂತಿರಬೇಕು. ಐಕ್ಯನಾದಲ್ಲಿ ಹಸುಳೆ ಕಂಡ ಕನಸಿನಂತಿರಬೇಕು. ಹೀಂಗರಿದಡೆ ಆರರಲ್ಲಿ ಲೇಪ, ಮೂರರಲ್ಲಿ ಮುಕ್ತಿ. ಇದ ಮೀರಲಿಲ್ಲ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಪೃಥ್ವಿಯ ಅಂಗ ಭಕ್ತನಾದಲ್ಲಿ, ಸರ್ವಸಮಾಧಾನಿಯಾಗಿ ಭೂತಹಿತನಾಗಿರಬೇಕು. ಅಪ್ಪುವಿನ ಅಂಗ ಮಾಹೇಶ್ವರನಾದಲ್ಲಿ, ಮಲ ನಿರ್ಮಲವೆನ್ನದೆ ಇರಬೇಕು. ತೇಜದ ಅಂಗ ಪ್ರಸಾದಿಯಾದಲ್ಲಿ, ಜಿಗುಪ್ಸೆ ಚಿಕಿತ್ಸೆಯನರಿಯದಿರಬೇಕು. ವಾಯುವಿನ ಅಂಗ ಪ್ರಾಣಲಿಂಗಿಯಾದಲ್ಲಿ, ಸುಗುಣ ದುರ್ಗುಣಂಗಳನರಿಯದಿರಬೇಕು. ಆಕಾಶದ ಅಂಗ ಶರಣನಾದಲ್ಲಿ, ಲೇಖ ಅಲೇಖಂಗಳನರಿಯದಿರಬೇಕು. ಮಹದಾಕಾಶದಂತೆ ಐಕ್ಯನಾದಲ್ಲಿ, ಸುರಾಳ ನಿರಾಳಂಗಳನರಿಯದಿರಬೇಕು. ಇಂತೀ ಷಟ್ಸ್ಥಲವ ಒಂದ ನೆಮ್ಮಿ, ಒಂದ ವೇಧಿಸಬೇಕು. ವೇಧಿಸುವನ್ನಕ್ಕ ವಿರಳನಾಗಿ, ವೇಧಿಸಿ ನಿಂದಲ್ಲಿ ಅವಿರಳನಾಗಿ, ತತ್ವಮಸಿಯೆಂಬ ಭಿತ್ತಿಯ ಮೆಟ್ಟದೆ, ನಿಶ್ಚಿಂತನಾಗಿರಬೇಕು, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಭಕ್ತನಾದಲ್ಲಿ ಬ್ರಹ್ಮನ ಒಡಲೊಡೆಯಬೇಕು. ಮಾಹೇಶ್ವರನಾದಲ್ಲಿ ವಿಷ್ಣುವಿನ ಚೇತನಕ್ಕೆ ಸಿಕ್ಕದಿರಬೇಕು. ಪ್ರಸಾದಿಯಾದಿಯಲ್ಲಿ ರುದ್ರನ ಬಂಧಕ್ಕೆ ಹೊದ್ದದಿರಬೇಕು. ಪ್ರಾಣಲಿಂಗಿಯಾದಲ್ಲಿ ಈಶ್ವರನ ಗೊತ್ತ ಮೆಟ್ಟದಿರಬೇಕು. ಶರಣನಾದಲ್ಲಿ ಸದಾಶಿವಮೂರ್ತಿಯ ತಪ್ಪಲ ತಪ್ಪಿರಬೇಕು. ಐಕ್ಯನಾದಲ್ಲಿ ಪರಶಿವನೆಂಬ ಪ್ರಮಾಣು ನಷ್ಟವಾಗಿರಬೇಕು. ಇಂತೀ ಸ್ಥಲಂಗಳ ನೆಮ್ಮಿ ತೆಪ್ಪವ ಹತ್ತಿ ಒತ್ತುವನಂತೆ, ತೆಪ್ಪವ ತಪ್ಪಲಿಗೆ ಸೇರಿದ ಮತ್ತೆ ಒತ್ತುವುದು ಹತ್ತುವುದು. ಆ ಹೊಳೆ ಕಾಲಿಂಗೆ ಹೊಲಬಾರದ ಮತ್ತೆ ಪೂರ್ವವಿತ್ತ ಉತ್ತರವತ್ತ. ಉಭಯನಷ್ಟವಾದುದೆತ್ತ, ಅತ್ತಲೆ ತನ್ನಷ್ಟ ಮತ್ತೆ ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
-->