ಭಕ್ತನಂಗ ಕಾಮ, ಮಹೇಶ್ವರನಂಗ ಲೋಭ,
ಪ್ರಸಾದಿಯಂಗ ಕ್ರೋಧ, ಪ್ರಾಣಲಿಂಗಿಯಂಗ ಮೋಹ,
ಶರಣನಂಗ ಮದ, ಐಕ್ಯನಂಗ ಮತ್ಸರ.
ಇಂತೀ ಷಡ್ಭಾವಸ್ಥಲಂಗಳ ಕೂಡುವಲ್ಲಿ,
ಸ್ಥೂಲವ ಕೂಡಿದಂಗ ಭಕ್ತನಾಗಿ,
ಸೂಕ್ಷ್ಮವ ಕೂಡಿದಂಗ ಮಾಹೇಶ್ವರನಾಗಿ,
ಕಾರಣವ ಕೂಡಿದಂಗ ಪ್ರಸಾದಿಯಾಗಿ,
ಇಂತೀ ಮೂರು ಭಕ್ತಿಸ್ವರೂಪವಾಗಿ,
ಆ ಸ್ಥೂಲದ ಕಳೆ ಪ್ರಾಣಲಿಂಗಿಯಾಗಿ, ಆ ಸೂಕ್ಷ್ಮದ ಕಳೆ ಶರಣನಾಗಿ,
ಆಕಾಶದ ಕಳೆ ಐಕ್ಯನಾಗಿ, ಏಕಮೂರ್ತಿ ತ್ರೈಮೂರ್ತಿಯಾಗಿ,
ಭಕ್ತಿಜ್ಞಾನವೈರಾಗ್ಯವೆಂಬುದನಾಧರಿಸಿದೆಯಲ್ಲಾ.
ಅದು ನಿನ್ನ ಲೀಲಾಭಾವ, ನಿಃಕಳಂಕ ಮಲ್ಲಿಕಾರ್ಜುನಾ.