ಅಥವಾ

ಒಟ್ಟು 17 ಕಡೆಗಳಲ್ಲಿ , 12 ವಚನಕಾರರು , 17 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ತನುಗುಣವಳಿದಾತನಲ್ಲದೆ ಭಕ್ತನಲ್ಲ, ಮನೋಗುಣವಳಿದಾತನಲ್ಲದೆ ಮಹೇಶ್ವರನಲ್ಲ ಪ್ರಕೃತಿಗುಣರಹಿತನಾದಾತನಲ್ಲದೆ ಪ್ರಸಾದಿಯಲ್ಲ, ಪ್ರಾಣಗುಣವನಳಿದಾತನಲ್ಲದೆ ಪ್ರಾಣಲಿಂಗಿಯಲ್ಲ, ಶಬ್ದದುದ್ದೇಶವಳಿದಾತನಲ್ಲದೆ ಶರಣನಲ್ಲ, ಆತ್ಮನ ನೆಲೆಯನರಿದಾತನಲ್ಲದೆ ಐಕ್ಯನಲ್ಲ. ಇಂತೀ ಷಡಂಗಕ್ಕೆ ಅತೀತವಾದಲ್ಲದೆ ಸೌರಾಷ್ಟ್ರ ಸೋಮೇಶ್ವರಲಿಂಗ ಸನ್ನಹಿತನಲ್ಲ.
--------------
ಆದಯ್ಯ
ಭವಿಯ ಸಂಗವುಳ್ಳನ್ನಬರ ಭಕ್ತನಲ್ಲ, ಪರಧನ ಪರಸತಿಯಾಸೆಯುಳ್ಳನ್ನಬರ ಮಾಹೇಶ್ವರನಲ್ಲ, ಸಕಲ ಪದಾರ್ಥವನೆಲ್ಲ ಗ್ರಹಿಸುವನ್ನಕ್ಕ ಪ್ರಸಾದಿಯಲ್ಲ, ಪ್ರಾಣಲಿಂಗದಲ್ಲಿ ಸ್ವಸ್ಥಿರವಾಗದನ್ನಕ್ಕ ಪ್ರಾಣಲಿಂಗಿಯಲ್ಲ, ಕರಣಾದಿಗಳು ವರ್ತಿಸುವನ್ನಕ್ಕ ಶರಣನಲ್ಲ, ಜನನಮರಣವುಳ್ಳನ್ನಕ್ಕ ಐಕ್ಯನಲ್ಲ. ಕೂಡಲಚೆನ್ನಸಂಗಮದೇವರಲ್ಲಿ ಈ ಷಡುಸ್ಥಲದ ನಿರ್ಣಯವ ಬಸವಣ್ಣನೆ ಬಲ್ಲ.
--------------
ಚನ್ನಬಸವಣ್ಣ
ಕಂಗಳ ಸೂತಕ ಹಿಂಗಿಯಲ್ಲದೆ ಭಕ್ತನಾಗಬಾರದು. ಕಾಯದ ಸೂತಕ ಹಿಂಗಿಯಲ್ಲದೆ ಮಾಹೇಶ್ವರನಾಗಬಾರದು. ಮನದ ಸೂತಕ ಹಿಂಗಿಯಲ್ಲದೆ ಪ್ರಸಾದಿಯಾಗಬಾರದು. ಜ್ಞಾನದ ಸೂತಕ ಹಿಂಗಿಯಲ್ಲದೆ ಪ್ರಾಣಲಿಂಗಿಯಾಗಬಾರದು. ತೋರಿ ಅಡಗುವ ಭ್ರಾಂತು ಹಿಂಗಿಯಲ್ಲದೆ ಶರಣನಲ್ಲ, ಐಕ್ಯನಲ್ಲ. ಆರಡಗಿ ಮೂರರಲ್ಲಿ ಮುಗ್ಧನಾಗಿ, ಮೀರಿ ಕಾಬುದಕ್ಕೆ ಏನೂ ಇಲ್ಲದೆ, ಅದು ತಾನೆ ಯೋಗಲಿಂಗಾಂಗ, ಗುಡಿಯ ಗುಮ್ಮಟನಾಥನ ಒಡೆಯ ಅಗಮ್ಯೇಶ್ವರಲಿಂಗದಲ್ಲಿ ಐಕ್ಯವಾದ ಶರಣಂಗೆ.
--------------
ಮನುಮುನಿ ಗುಮ್ಮಟದೇವ
ಉಪೇಕ್ಷೆಯುಳ್ಳನ್ನಕ್ಕ ಭಕ್ತನಲ್ಲ, ಹಿತಶುತ್ರುವಾಗಿಹನ್ನಕ್ಕ ಮಾಹೇಶ್ವರನಲ್ಲ. ಪರದ್ರವ್ಯಭಕ್ಷಿತ ಪ್ರಸಾದಿಯಲ್ಲ. ಪ್ರಜ್ಞಾಹೀನ ಪ್ರಾಣಲಿಂಗಿಯಲ್ಲ. ಕುಚಿತ್ತ ಅಪಸರೆಯ ಕ್ಷಣಿಕ ಶರಣನಲ್ಲ. ಉಪಮಾ ಭೇದ ಗುಪ್ತಪಾತಕ ಐಕ್ಯನಲ್ಲ. ಇಂತೀ ಷಡುಸ್ಥಲಂಗಳ ಸ್ಥಾನ ವಿವರಂಗಳನರಿತು ಸ್ಥಲನಿರ್ವಾಹಿಯಾಗಿ ತತ್ವದ ಮುಖದಿಂದ ನಿತ್ಯ ಅನಿತ್ಯವತಿಳಿದು ಪರತತ್ವದ ಗೊತ್ತಿನಲ್ಲಿ ನಿಜ ನಿರವಯವಪ್ಪ ಆತ್ಮನಬೆಚ್ಚಂತೆ ಬೈಚಿಟ್ಟು ತತ್ಕಾಲ ಉಚಿತವನರಿದು ಕಾಂತಿ ನಷ್ಟವಾಗಿ ಕಳವಳಿಸಿ ಕಂಗೆಡದೆ ಕುರುಹಿನ ಲಕ್ಷ ್ಯದಲ್ಲಿ ಚಿತ್ತ ಸಮೂಹದಲ್ಲಿ ಎಚ್ಚರಿಕೆ ನಿಜವಸ್ತುವಿನಲ್ಲಿ ಚಿತ್ತು ಲೇಪವಾದುದು ಸಾವಧಾನ ಸಂಬಂದ್ಥಿಯ ಸಂಬಂಧ. ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ, ಮಾತುಳಂಗ ಮಧುಕೇಶ್ವರನು.
--------------
ದಾಸೋಹದ ಸಂಗಣ್ಣ
ಉದಯಕಾಲ ಮಧ್ಯಾಹ್ನಕಾಲ ಅಸ್ತಮಯಕಾಲದಲ್ಲಿ, ತನ್ನ ಇಷ್ಟಲಿಂಗಕ್ಕೆ ಅಷ್ಟವಿಧಾರ್ಚನೆ ಷೋಡಶೋಪಚಾರವ ಮಾಡುವಾತನೆ ಸದ್ಭಕ್ತನು. ಇಂತೀ ತ್ರಿಕಾಲದಲ್ಲಿ ಲಿಂಗಾರ್ಚನೆಯ ಮಾಡುವಲ್ಲಿ, ಹಿಂದಣ ಕ್ರೀಯಿಂದ ಮಾಡಬೇಕು. ಅಂತಲ್ಲದೆ ಸುಮ್ಮನೆ ಲಿಂಗಾರ್ಚನೆಯ ಮಾಡುವಾತ, ಭಕ್ತನಲ್ಲ, ಮಾಹೇಶ್ವರನಲ್ಲ, ಪ್ರಸಾದಿಯಲ್ಲ, ಪ್ರಾಣಲಿಂಗಿಯಲ್ಲ, ಶರಣನಲ್ಲ ಐಕ್ಯನಲ್ಲ. ಅವನು ಶ್ರೀಗುರುವಿನಾಜ್ಞೆಯ ಮೀರಿದವನು, ಪಂಚಮಹಾಪಾತಕನು, ಲಿಂಗಚೋರಕನು. ಇದನರಿದು ತ್ರಿಸಂಧ್ಯಾಕಾಲದಲ್ಲಿ ತನ್ನ ಇಷ್ಟಲಿಂಗಕ್ಕೆ ಅಷ್ಟವಿಧಾರ್ಚನೆ ಷೋಡಶೋಪಚಾರದಿಂದ ಹಿಂದಣ ಕ್ರೀವಿಡಿದು ಮಾಡುವ ಸದ್ಭಕ್ತಂಗೆ ನಮೋ ನಮೋ ಎನುತಿರ್ದೆನಯ್ಯಾ, ಬಸವಪ್ರಿಯ ಕೂಡಲಚೆನ್ನಸಂಗಮದೇವಾ.
--------------
ಸಂಗಮೇಶ್ವರದ ಅಪ್ಪಣ್ಣ
ಕಾಮವ ತೊರೆದಾತ ಭಕ್ತನಲ್ಲ, ಕ್ರೋಧವ ತೊರೆದಾತ ಮಾಹೇಶ್ವರನಲ್ಲ. ಮತ್ಸರವ ತೊರೆದಾತ ಪ್ರಸಾದಿಯಲ್ಲ. ಮದವ ಬಿಟ್ಟಾತ ಪ್ರಾಣಲಿಂಗಿಯಲ್ಲ. ಮೋಹವ ಬಿಟ್ಟಾತ ಶರಣನಲ್ಲ. ಲೋಭವ ಬಿಟ್ಟಾತ ಐಕ್ಯನಲ್ಲ. ಇಂತು ಷಡುವರ್ಗಶೂನ್ಯನಾದಲ್ಲಿ ಸ್ಥಲಶೂನ್ಯವಾದ ಕಾರಣ ಷಡ್ವರ್ಗಸನ್ನಿಹಿತನೇ ಶರಣ ಕಾಣಾ ಗುರುನಿರಂಜನ ಚನ್ನಬಸವಲಿಂಗಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ಪರಿಪೂರ್ಣನಲ್ಲ, ಪ್ರದೇಶಿಕನಲ್ಲ, ನಿರತಿಶಯದೊಳತಿಶಯ ತಾ ಮುನ್ನಲ್ಲ. ಶರಣನಲ್ಲ, ಐಕ್ಯನಲ್ಲ, ಪರಮನಲ್ಲ, ಜೀವನಲ್ಲ, ನಿರವಯನಲ್ಲ, ಸಾವಯನಲ್ಲ; ಪರವಿಹವೆಂಬುಭಯದೊಳಿಲ್ಲದವನು. ನಿರಾಲಯ ನಿಜಗುರು ಶಾಂತೇಶ್ವರನ ಶರಣನ ನಿಲವು ಉಪಮೆಗೆ ತಾನನುಪಮ.
--------------
ನಿರಾಲಯ ನಿಜಗುರುಶಾಂತೇಶ್ವರ
ವ್ಯಸನವುಳ್ಳನ್ನಕ್ಕ ಪ್ರಸಾದಿಯಲ್ಲ . ವಿಷಯವುಳ್ಳನ್ನಕ್ಕ ಪಾದೋದಕಸಂಬಂಧಿಯಲ್ಲ . ಭಾವವುಳ್ಳನ್ನಕ್ಕ ಭವವಿರಹಿತನಲ್ಲ , ಬಯಕೆಯುಳ್ಳನ್ನಕ್ಕ ಐಕ್ಯನಲ್ಲ . ಇಂತೀ ಐಕ್ಯಸ್ಥಲವೆಲ್ಲರಿಗೆಲ್ಲಿಯದೊ ? ಐಕ್ಯನಾದರೆ ಅನ್ನಪಾನಾದಿಗಳ ಇಚ್ಛೆ ನಿಂದು, ಅನಲ, ಪವನನ ಗುಣ ಕೆಟ್ಟು, ಆಕಾಶದ ಗುಣವರತು, ಆತ್ಮನೊಳು ಬೆರೆದವರ ಐಕ್ಯರೆಂಬೆ. ಆತ್ಮ ಅನಾತ್ಮನೊಳು ಅಡಗಿದರೆ ನಿರವಯಲನೆಂಬೆ. ಇಂತಪ್ಪ ಶರಣ ಬಯಲು ಬಯಲಾಗಿಪ್ಪನಲ್ಲದೆ, ವಿವರಿಸಿ ನೋಡಿದರೆ ಏನೆಂದರಿಯಬಾರದು, ಬಸವಪ್ರಿಯ ಕೂಡಲಚೆನ್ನಬಸವಣ್ಣಾ .
--------------
ಹಡಪದ ಅಪ್ಪಣ್ಣ
ನಿರುಪಾಧಿಕನಾಗಿ, ನಿರ್ವಂಚಕತ್ವದಿಂದ ದಾಸೋಹವ ಮಾಡಿ, ಪರಿಣಾಮದಿಂದ ನಿತ್ಯದಾಸೋಹಿಯೆನಿಸಿದೊಡೆ, ಆ ದಾಸೋಹಿಯೆ ಸದ್ಭಕ್ತನು, ಆತನೆ ಮಾಹೇಶ್ವರ, ಆತನೇ ಪ್ರಸಾದಿ, ಆತನೇ ಪ್ರಾಣಲಿಂಗಿ, ಆತನೇ ಶರಣ, ಆತನೇ ಐಕ್ಯ. ಆತನೇ ಇಹಲೋಕ[ಪರಲೋಕ] ಪೂಜ್ಯನು, ಆತನೇ ಶ್ರೇಷ*, ಆತನೇ ವಿದ್ವಾನ್, ಆತನೇ ಸುಜ್ಞಾನಿ, ಇನಿತಲ್ಲದೆ ಶ್ರೀಗುರುಲಿಂಗಜಂಗಮ ಒಂದೆಯೆಂದು ಭಾವಿಸದರ್ಚಿಸದೆ ವಿಚಾರಿ[ಸದ] ದುರ್ಭಾವಿ ಉಪಾಧಿಕನು, ವಂಚಕನು, ದಾಸೋಹವ ಮಾಡಲರಿಯದಹಂಕಾರಿ, ಅಭಾಸನು, ಅಪೂಜ್ಯನು. ಭಕ್ತನಲ್ಲ, ಮಾಹೇಶ್ವರನಲ್ಲ. ಪ್ರಸಾದಿಯಲ್ಲ, ಪ್ರಾಣಲಿಂಗಿಯಲ್ಲ, ಶರಣನಲ್ಲ; ಐಕ್ಯನಲ್ಲ; ಆತನೇ ಮೂರ್ಖನು, ಆತನೇ ಅಜ್ಞಾನಿ, ಆತನೇತಕ್ಕೆಯೂ ಬಾತೆಯಯ್ಯಾ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.
--------------
ಉರಿಲಿಂಗಪೆದ್ದಿ
ಹುಸಿಯುಳ್ಳವ ಭಕ್ತನಲ್ಲ, ವಿಷಯವುಳ್ಳವ ಮಾಹೇಶ್ವರನಲ್ಲ, ಆಸೆಯುಳ್ಳವ ಪ್ರಸಾದಿಯಲ್ಲ, ಜೀವಗುಣವುಳ್ಳವ ಪ್ರಾಣಲಿಂಗಿಯಲ್ಲ, ತನುಗುಣವುಳ್ಳವ ಶರಣನಲ್ಲ, ಜನನಮರಣವುಳ್ಳವ ಐಕ್ಯನಲ್ಲ. ಈ ಆರರ ಅರಿವಿನ ಅರ್ಕದ ಸಂಪತ್ತಿನ ಭೋಗ ಹಿಂಗಿದಡೆ ಸ್ವಯಂ ಜಾತನೆಂಬೆ._ಆ ದೇಹ ನಿಜದೇಹವೆಂಬೆ ಆ ನಿಜದೇಹ ಇರಿದರರಿಯದು, ತರಿದರರಿಯದು, ಹೊಯ್ದರರಿಯದು, ಬಯ್ದರರಿಯದು, ಸ್ತುತಿಸಿದರರಿಯದು, ನಿಂದಿಸಿದರರಿಯದು, ಪುಣ್ಯವನರಿಯದು, ಪಾಪವನರಿಯದು, ಸುಖವನರಿಯದು ದುಃಖವನರಿಯದು, ಕಾಲವನರಿಯದು, ಕರ್ಮವನರಿಯದು ಜನನವನರಿಯದು, ಮರಣವನರಿಯದು_ ಇಂತೀ ಷಡುಸ್ಥಲದೊಳಗೆ ತಾ ಒಂದು ನಿಜವಿಲ್ಲವಾಗಿ ನಾವು ಹಿರಿಯರು ನಾವು ಗುರುಗಳು ನಾವು ಸಕಲಶಾಸ್ತ್ರಸಂಪನ್ನ ಷಡುಸ್ಥಲದ ಜ್ಞಾನಿಗಳು ಎಂಬ ಮೂಕೊರೆಯರ ಮೆಚ್ಚುವನೆ ಕೂಡಲಚೆನ್ನಸಂಗಮದೇವ ? ಕುತ್ತಗೆಯುದ್ದ ಹೂಳಿಸಿಕೊಂಡು ಮುಗಿಲುದ್ದಕ್ಕೆ ಹಾರಲುಂಟೆ ?
--------------
ಚನ್ನಬಸವಣ್ಣ
ಭಕ್ತ ಜಂಗಮದ ಷಟ್‍ಸ್ಥಲದ, ಸಕೀಲ ಸಂಬಂಧವನಾರು ಬಲ್ಲರು ಹೇಳಾ ಅದೇನು ಕಾರಣವೆಂದಡೆ: ಹಸಿವುಳ್ಳವ ಭಕ್ತನಲ್ಲ ವಿಷಯವುಳ್ಳವ ಮಹೇಶ್ವರನಲ್ಲ ಆಸೆಯುಳ್ಳವ ಪ್ರಸಾದಿಯಲ್ಲ ಜೀವಗುಣವುಳ್ಳವ ಪ್ರಾಣಲಿಂಗಿಯಲ್ಲ ತನುಗುಣವುಳ್ಳವ ಶರಣನಲ್ಲ ಜನನ-ಮರಣವುಳ್ಳವ ಐಕ್ಯನಲ್ಲ ಈ ಆರರ ಅರಿವಿನ ಅರ್ಥದ, ಸಂಪತ್ತಿನ ಭೋಗ ಹಿಂಗಿದರೆ, ಸ್ವಯಂ ಜಾತನೆಂಬೆ ಆ ದೇಹ ನಿಜದೇಹವೆಂಬೆ ಆ ದೇಹ ಗುರುಗುಹೇಶ್ವರನೆಂಬೆ.
--------------
ಅಲ್ಲಮಪ್ರಭುದೇವರು
ಶ್ರೀಗುರುಸ್ವಾಮಿ ಶಿಷ್ಯನ ಪೂರ್ವಾಶ್ರಯಮಂ ಕಳೆದು ಪುನರ್ಜಾತನಂ ಮಾಡಿದ ಬಳಿಕ, ಪಂಚಭೂತಕಾಯವ ಕಳೆದು ಪ್ರಸಾದಕಾಯವ ಮಾಡಿದ ಬಳಿಕ, ವಾಯುಪ್ರಾಣಿಯ ಕಳೆದು ಲಿಂಗಪ್ರಾಣಿಯ ಮಾಡಿದ ಬಳಿಕ, ಎಲ್ಲಿಯ ಕುಲಸೂತಕ, ಎಲ್ಲಿಯ ಛಲಸೂತಕ, ಎಲ್ಲಿಯ ತನುಸೂತಕ ಎಲ್ಲಿಯ ಮನಸೂತಕ ಎಲ್ಲಿಯ ನೆನಹುಸೂತಕ ಎಲ್ಲಿಯ ಭಾವಸೂತಕ, _ಇವನೆಂತೂ ಹಿಡಿಯಲಾಗದು, ಸದ್ಭಕ್ತನು. ಕುಲಸೂತಕವುಳ್ಳನ್ನಕ್ಕರ ಭಕ್ತನಲ್ಲ ಛಲಸೂತಕವುಳ್ಳನ್ನಕ್ಕರ ಮಹೇಶ್ವರನಲ್ಲ ತನುಸೂತಕವುಳ್ಳನ್ನಕ್ಕರ ಪ್ರಸಾದಿಯಲ್ಲ ಮನಸೂತಕವುಳ್ಳನ್ನಕ್ಕರ ಪ್ರಾಣಲಿಂಗಿಯಲ್ಲ ನೆನಹುಸೂತಕವುಳ್ಳನ್ನಕ್ಕರ ಶರಣನಲ್ಲ ಭಾವಸೂತಕವುಳ್ಳನ್ನಕ್ಕರ ಐಕ್ಯನಲ್ಲ ಇಂತೀ ಸೂತಕವ ಮುಂದುಗೊಂಡಿಪ್ಪವರ ಮುಖವ ನೋಡಲಾಗದು ಗುಹೇಶ್ವರ.
--------------
ಅಲ್ಲಮಪ್ರಭುದೇವರು
ಪೃಥ್ವಿಯಂಗ ಭಕ್ತನಲ್ಲ, ಅಪ್ಪುವಿನಂಗ ಮಹೇಶ್ವರನಲ್ಲ, ಅಗ್ನಿಯಂಗ ಪ್ರಸಾದಿಯಲ್ಲ, ವಾಯುವಂಗ ಪ್ರಾಣಲಿಂಗಿಯಲ್ಲ, ಆಕಾಶದಂಗ ಶರಣನಲ್ಲ. ಇಂತೀ ಪಂಚತತ್ವವ ಮೆಟ್ಟಿ ನೋಡಿ ಕೂಡಿಹೆನೆಂಬುದು ಐಕ್ಯನಲ್ಲ. ಅದೆಂತೆಂದಡೆ: ಆ ಪೃಥ್ವಿ ಅಪ್ಪುವಿನ ಪ್ರಳಯಕ್ಕೊಳಗು, ಆ ಅಪ್ಪು ಅಗ್ನಿಯ ಆಪೋಶನಕ್ಕೆ ಒಡಲು. ಆ ಅಗ್ನಿ ವಾಯುವಿನ ಭಾವಕ್ಕೊಳಗು, ಆ ವಾಯು ಆಕಾಶದ ಅವಧಿಗೊಡಲು. ಇಂತೀ ಪಂಚತತ್ವಂಗಳಲ್ಲಿ ಬೆರಸಿ, ಕೂಡಿಹೆನೆಂಬ ಷಟ್ಸ್ಥಲವ ನಾನರಿಯೆ. ಅದು ನಿಮ್ಮ ಭಾವ, ನಿಮ್ಮಲ್ಲಿಯೆ ಆರರ ಹೊಳಹು. ಅದು ನಿಮ್ಮ ಲೀಲಾಭಾವ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
>ಲಿಂಗಸ್ಥಲ ನಾಸ್ತಿಯಾದಲ್ಲದೆ ಭಕ್ತನಲ್ಲ, ಜಂಗಮಸ್ಥಲ ನಾಸ್ತಿಯಾದಲ್ಲದೆ ಶರಣನಲ್ಲ, ಗುರುಸ್ಥಲ, ನಾಸ್ತಿಯಾದಲ್ಲದೆ ಐಕ್ಯನಲ್ಲ. ಇದು ಕಾರಣ ಕೂಡಲಚೆನ್ನಸಂಗಮದೇವಾ, ಈ ತ್ರಿವಿಧನಾಸ್ತಿಯಾಗಿ ಭಕ್ತಿ ಕೆಟ್ಟು ಭವಿಯಾದಲ್ಲದೆ ಲಿಂಗೈಕ್ಯನಲ್ಲ.
--------------
ಚನ್ನಬಸವಣ್ಣ
ಆದಿವಿಡಿದು ಬಹಾತ ಭಕ್ತನಲ್ಲ, ಅನಾದಿವಿಡಿದು ಬಹಾತ ಮಾಹೇಶ್ವರನಲ್ಲ. ಸ್ಥಲವಿಡಿದು ಬಹಾತ ಪ್ರಸಾದಿಯಲ್ಲ, ಇಷ್ಟಲಿಂಗದಲ್ಲಿ ಪ್ರಸಾದವ ಕೊಂಬಾತ ಪ್ರಾಣಲಿಂಗಿಯಲ್ಲ, ಲಿಂಗವಿಡಿದು ಬಹಾತ ಶರಣನಲ್ಲ, ಭಿನ್ನಭಾವವಿಡಿದು ಬಹಾತ ಐಕ್ಯನಲ್ಲ, ಶೂನ್ಯಕಾಯವ ನಿಶ್ಶೂನ್ಯಂಗಿಕ್ಕಿ, ಪ್ರಾಣಲಿಂಗಪ್ರಸಾದವ ಕೊಳಬಲ್ಲನಾಗಿ ಗುಹೇಶ್ವರಲಿಂಗದಲ್ಲಿ ಚೆನ್ನಬಸವಣ್ಣಂಗೆ ನಮೋ ನಮೋ ಎಂಬೆನು
--------------
ಅಲ್ಲಮಪ್ರಭುದೇವರು
ಇನ್ನಷ್ಟು ... -->