ಆತ್ಮನೆ ಅಂಗವಾದ ಐಕ್ಯನ ಭಾವಹಸ್ತದಲ್ಲಿ
ಮಹಾಲಿಂಗವು ಜನ್ಮ ಜರಾ ಮರಣಂಗಳಿಲ್ಲವಾಗಿ, ನಿರ್ವಿಕಾರವಾಗಿ,
ಸರ್ವವ್ಯಾಪಿಯಾಗಿ, ಅದ್ವಿತೀಯನಾಗಿ,
ಅಣುವಿಗೆ ಅಣುವಾಗಿ,
ಪರಾಪರವಾಗಿ, ಸಂಸಾರವ್ಯಾಧಿ ಇಲ್ಲದುದಾಗಿ,
ಹವಣಿಸಲು ಬಾರದುದಾಗಿ, ಭಾವವೊಂದರಿಂದವೆ
ಅರಿಯಲು ಬಹುದಾಗಿ, ಚೈತನ್ಯಸ್ವರೂಪವಾಗಿ
ಶಿವತತ್ವವನು ಚಿತ್ ಎಂಬ ಶಕ್ತಿಯ ಸ್ಫುರಣವೇ ರೂಪಾಗಿವುಳ್ಳ
ಮಹಾಲಿಂಗವಾಗಿ ಹೇಳುತ್ತಿಹರು ನೋಡಾ.
ಇದಕ್ಕೆ ಮಹಾವಾತುಲಾಗಮೇ :ವ್ತೃತ್ತ -
``ಆದ್ಯಂತಯ ಶೂನ್ಯ ಅಮಲಂ ಪರಿಪೂರ್ಣಮೇಕಂ
ಸೂಕ್ಷ್ಮಂ ಪರಾತ್ಪರಮನಾಮಯಮಪ್ರಮೇಯಂ |
ಭಾವೈಕ್ಯಗಮ್ಯಮಜಡಂ ಶಿವತತ್ವಮಾಹುಃ
ಚಿಚ್ಛಕ್ತಿಸಂಸ್ಫುರಣರೂಢಮಾತ್ಮಲಿಂಗಂ ||''
ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.