ಬಸವಣ್ಣನೆನ್ನ ಅಂಗ, ಮಡಿವಾಳನೆನ್ನ ಮನ,
ಪ್ರಭುವೆನ್ನ ಪ್ರಾಣ, ಚನ್ನಬಸವನೆನ್ನ ಕರಸ್ಥಲದ ಲಿಂಗ,
ಘಟ್ಟಿವಾಳನೆನ್ನ ಭಾವ, ಸೊಡ್ಡಳಬಾಚರಸರೆನ್ನ ಅರಿವು,
ಮಹಾದೇವಿಯಕ್ಕನೆನ್ನ ಜ್ಞಾನ, ಮುಕ್ತಾಯಕ್ಕನೆನ್ನ ಅಕ್ಕರು,
ಸತ್ಯಕ್ಕನೆನ್ನ ಯುಕ್ತಿ, ನಿಂಬಿಯಕ್ಕನೆನ್ನ ನಿಶ್ಚಯ,
ಅಲ್ಲಾಳಿಯಕ್ಕನೆನ್ನ ಸಮತೆ, ಅನುಮಿಷನೆನ್ನ ನಿಶ್ಚಲ,
ನಿಜಗುಣನೆನ್ನ ಕ್ಷಮೆ, ರೇವಣಸಿದ್ಧಯ್ಯದೇವರೆನ್ನ ನೇತ್ರ,
ಸಿದ್ಧರಾಮತಂದೆಗಳೆನ್ನ ನೇತ್ರದ ದೃಕ್ಕು,
ಮರುಳುಸಿದ್ಧಯ್ಯದೇವರೆನ್ನ ಶ್ರೋತೃ,
ಪಂಡಿತಾರಾಧ್ಯರೆನ್ನ ಜಿಹ್ವೆ, ಏಕೋರಾಮಯ್ಯಗಳೆನ್ನ ನಾಸಿಕ,
ಅಸಂಖ್ಯಾತರೆನ್ನ ಅವಯವಂಗಳು, ಪುರಾತರೆನ್ನ ಪುಣ್ಯದ ಪುಂಜ,
ಏಳುನೂರೆಪ್ಪತ್ತು ಅಮರಗಣಂಗಳೆನ್ನ ಗತಿಮತಿ ಚೈತನ್ಯ,
ಸೌರಾಷ್ಟ್ರ ಸೋಮೇಶ್ವರಾ, ಆ ನಿಮ್ಮ ಶರಣರ ಪಡಿದೊತ್ತಯ್ಯಾ.