ಅಥವಾ

ಒಟ್ಟು 19 ಕಡೆಗಳಲ್ಲಿ , 10 ವಚನಕಾರರು , 19 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಒಂದನೆ ದೆಸೆಯಲ್ಲಿ ಒಂದು ಮುಖದ ಭೈರವನು. ಎರಡನೆಯ ದೆಸೆಯಲ್ಲಿ ಎರಡು ಮುಖದ ಭೈರವನು. ಮೂರನೆಯ ದೆಸೆಯಲ್ಲಿ ಮೂರು ಮುಖದ ಭೈರವನು. ನಾಲ್ಕನೆಯ ದೆಸೆಯಲ್ಲಿ ನಾಲ್ಕು ಮುಖದ ಭೈರವನು. ಐದನೆಯ ದೆಸೆಯಲ್ಲಿ ಐದು ಮುಖದ ಭೈರವನು. ಆರನೆಯ ದೆಸೆಯಲ್ಲಿ ಆರು ಮುಖದ ಭೈರವನು. ಏಳನೆಯ ದೆಸೆಯಲ್ಲಿ ಏಳು ಮುಖದ ಭೈರವನು. ಎಂಟನೆಯ ದೆಸೆಯಲ್ಲಿ ಎಂಟು ಮುಖದ ಭೈರವನು. ಇಂತಿರುವ ಅಷ್ಟಭೈರವರು ಹೊರಸುತ್ತಿನಲ್ಲಿ ಪಹರಿಕರು. ತುತ್ತರಸಿನವೆಂಬ ಚಕ್ರವು ಸುರಗಿಯಂದದಿ ಸುತ್ತಿ, ತೆರಹು ಇಲ್ಲವೆ ತಿರುಗುತ್ತಿಹುದು. ಅದು ಕಾಣಬಾರದಂತಿಹುದು ನೋಡಾ, ಜಂಗಮಲಿಂಗಪ್ರಭುವೆ.
--------------
ಜಂಗಮಲಿಂಗ ಪ್ರಭುವೆ
ಆಚಾರವೆಂಬುದು ಕೂರಲಗು, ತಪ್ಪಿ ಬಂದಡೆ ಪ್ರಾಣವ ತಗಲುವುದು. ಅದು ಕಾರಣ, ಅರಿದರಿದು ಆಚರಿಸಬೇಕು. ಆಚಾರವಿಚಾರ ಉಭಯದ ವಿಚಾರವ ನೋಡದೆ, ಶಿವದೀಕ್ಷೆಯ ಮಾಡಲಾಗದು. ಅದೆಂತೆಂದಡೆ : ಪರರ ಹೆಣ್ಣಿಗೆ ಕಣ್ಣಿಡದಿಹುದೆ ಒಂದನೆಯ ಆಚಾರ. ಪರರ ದ್ರವ್ಯವ ಅಪಹಾರ ಮಾಡದಿಹುದೆ ಎರಡನೆ ಆಚಾರ. ಸುಳ್ಳಾಡದಿರವುದೆ ಮೂರನೆಯ ಆಚಾರ. ವಿಶ್ವಾಸಘಾತವ ಮಾಡದಿಹುದೆ ನಾಲ್ಕನೆಯ ಆಚಾರ. ಪ್ರಾಣಹಿಂಸೆಯ ಮಾಡದಿಹುದೆ ಐದನೆಯ ಆಚಾರ. ಸಕಲ ಶಿವಶರಣರ್ಗೆ ಸಂತೋಷವಂ ಪುಟ್ಟಿಸುವುದೆ ಆರನೆಯ ಆಚಾರ. ಸ್ವೀಕರಿಸಿದ ನೇಮವ ಪ್ರಾಣಾಂತ್ಯವಾಗಿ ಬಿಡೆನೆಂಬುವ ಏಳನೆಯ ಆಚಾರ. ಷಟ್ಸ್ಥಲದವರ ಧಿಕ್ಕರಿಸುವ ಜನರ ಸೀಳುವೆನೆಂಬುವ ವ್ರತವೆ ಎಂಟನೆ ಆಚಾರ. ಕೆಟ್ಟಜನರ ಸಹವಾಸ ಮಾಡದಿಹುದೆ ಒಂಬತ್ತನೆಯ ಆಚಾರ. ಸಜ್ಜನ ಸಂಗತಿಯ ಬಿಡದಿಹುದೆ ಹತ್ತನೆಯ ಆಚಾರ ಅನ್ಯದೇವತಾಭಜನೆಗೆ ವಿಮುಖನಾಗುವುದೆ ಹನ್ನೊಂದನೆಯ ಆಚಾರ. ಶಿವನೇ ಸರ್ವದೇವಶಿಖಾಮಣಿಯೆಂದು ಮನದಲ್ಲಿ ಅಚ್ಚೊತ್ತಿಪ್ಪುದೆ ಹನ್ನೆರಡನೆಯ ಆಚಾರ. ಶಿವನಿಗೆ ಶಿವಗಣಂಗಳಿಗೆ ಭೇದವ ಮಾಡದಿಹುದೆ ಹದಿಮೂರನೆಯ ಆಚಾರ. ಸಕಲ ಜೀವಿಗಳಿಗೆ ಹಿತವ ಬಯಸುವುದೆ ಹದಿನಾಲ್ಕನೆಯ ಆಚಾರ. ಸರ್ವರಿಗೆ ಹಿತವ ಮಾಡುವುದೆ ಹದಿನೈದನೆಯ ಆಚಾರ. ಕಡ್ಡಿಯ ಲಿಂಗಕ್ಕೆ ತೋರಿ ದಂತಧಾವನೆಯ ಮಾಡುವುದೆ ಹದಿನಾರನೆಯ ಆಚಾರ. ಸರ್ವಾವಯವವ ಸ್ವಚ್ಛ ಪ್ರಕ್ಷಾಳಿಸುವುದೆ ಹದಿನೇಳನೆಯ ಆಚಾರ ಲಿಂಗಮುದ್ರೆಯಿಲ್ಲದ ಗುಡಿಯಲ್ಲಿ ಪಾಕವ ಮಾಡದಿಹುದೆ ಹದಿನೆಂಟನೆಯ ಆಚಾರ. ಪ್ರಣವಮುದ್ರೆ ಇಲ್ಲದ ವಸ್ತ್ರ ಹೊದೆಯದಿಹುದೆ ಹತ್ತೊಂಬತ್ತನೆಯ ಆಚಾರ. ಹುಟ್ಟಿದ ಶಿಶುವಿಗೆ ಲಿಂಗಾಧಾರಣ ಮಾಡದೆ, ತಾಯ ಮೊಲೆಹಾಲು ಜೇನುತುಪ್ಪ ಮುಟ್ಟಿಸದಿಹುದೆ ಇಪ್ಪತ್ತನೆಯ ಆಚಾರ. ಆಡಿದ ಭಾಷೆಯ ಕಡೆಪೂರೈಸುವುದೆ ಇಪ್ಪತ್ತೊಂದನೆಯ ಆಚಾರ. ಸತ್ಯವ ನುಡಿದು ತಪ್ಪದಿಹುದೆ ಇಪ್ಪತ್ತೆರಡನೆಯ ಆಚಾರ. ತುರುಗಳ ಕಟ್ಟಿ ರಕ್ಷಿಸುವುದೆ ಇಪ್ಪತ್ತುಮೂರನೆಯ ಆಚಾರ. ತುರುಗಳಿಗೆ ಲಿಂಗಮುದ್ರೆಯಿಕ್ಕಿ ಹಾಲು ಕರೆವುದು ಇಪ್ಪತ್ತುನಾಲ್ಕನೆಯ ಆಚಾರ. ಮಂತ್ರಸಹಿತ ಗೋಮಯವ ಹಿಡಿದು, ಮಂತ್ರಸಹಿತ ಪುಟವಿಕ್ಕಿ ಭಸ್ಮದ ರಾಶಿಯ ಮಾಡುವುದೆ ಇಪ್ಪತ್ತೈದನೆಯ ಆಚಾರ. ಆ ಭಸ್ಮದ ರಾಶಿಯ ಪಾದೋದಕದೊಡನೆ ಉಂಡಿಯ ಕಟ್ಟುವುದೆ ಇಪ್ಪತ್ತಾರನೆಯ ಆಚಾರ. ವಿಧಿಯರಿತು ಸ್ಥಾನವರಿತು ರುದ್ರಾಕ್ಷಿಗ? ಧರಿಸುವುದೆ ಇಪ್ಪತ್ತೇಳನೆಯ ಆಚಾರ. ಶಿವಾನುಭವವ ಶಾಸ್ತ್ರವ ವಿಚಾರಿಸುವುದೆ ಇಪ್ಪತ್ತೆಂಟನೆಯ ಆಚಾರ. ಮನವ ನೋಯಿಸಿ ಮಾತನಾಡದಿಹುದೆ ಇಪ್ಪತ್ತೊಂಬತ್ತನೆಯ ಆಚಾರ. ಲಿಂಗದ ಕಲೆಯರಿತು ಲಿಂಗವ ಪೂಜಿಸುವುದೆ ಮೂವತ್ತನೆಯ ಆಚಾರ. ಗುರುಮುಖದಿಂದ `ತಾನಾರು' ತನ್ನ ನಿಜವೇನೆಂದು ಬೆಸಗೊಳ್ಳವುದೆ ಮೂವತ್ತೊಂದನೆಯ ಆಚಾರ. ಷಡ್ವರ್ಗಂಗಳ ಮೆಟ್ಟಿ ಷಟ್ಸ್ಥಲವನಿಂಬುಗೊಂಡುದೆ ಮೂವತ್ತೆರಡನೆಯ ಆಚಾರ. ಅವಿಚ್ಛಿನ್ನವಾಗಿ ಅಂಗತ್ರಯದಲ್ಲಿ ಮನ ಓಕರಿಸಿಕೊಂಡುದೆ ಮೂವತ್ತುಮೂರನೆಯ ಆಚಾರ. ಲಿಂಗದಲ್ಲಿ ಶಿಲೆಯ ಭಾವವನರಸದಿಹುದೆ ಮೂವತ್ತುನಾಲ್ಕನೆಯ ಆಚಾರ. ಜಂಗಮದಲ್ಲಿ ಕುಲವನರಸದಿಹುದೆ ಮೂವತ್ತೈದನೆಯ ಆಚಾರ. ವಿಭೂತಿಯ ಮಾಣ್ಬದಿಹುದೆ ಮೂವತ್ತಾರನೆಯ ಆಚಾರ. ರುದ್ರಾಕ್ಷಿಯ ಶುದ್ಧವ ಮಾಡಿ ಮಣಿಗಳ ಅರಸುವುದೆ ಮೂವತ್ತೇಳನೆಯ ಆಚಾರ. ಪಾದೋದಕದಲ್ಲಿ ಉಚ್ಛಿಷ್ಟವಳಿದುದೆ ಮೂವತ್ತೆಂಟನೆಯ ಆಚಾರ. ಪ್ರಸಾದದಲ್ಲಿ ರುಚಿಯ ನೋಡದಿಹುದೆ ಮೂವತ್ತೊಂಬತ್ತನೆಯ ಆಚಾರ. ಮಂತ್ರದಲ್ಲಿ ಕುತ್ಸಿತಕಲ್ಪನೆಯ ಮಾಡದಿಹುದೆ ನಾಲ್ವತ್ತೆಳನೆಯ ಆಚಾರ. ಲಿಂಗಾರ್ಚನವಿರಹಿತ ಭೋಜನ ಮಾಡದಿಹುದೆ ನಾಲ್ವತ್ತೊಂದನೆಯ ಆಚಾರ. ಐಕ್ಯರ ಸಮಾಧಿಗೊಳಿಸಿ ತಾನು ಲಿಂಗಪೂಜೆಯ ಮಾಡುವುದೆ ನಾಲ್ವತ್ತೆರಡನೆಯ ಆಚಾರ. ಲಿಂಗದ್ರೋಹವ ಕೇಳಿ ತಾನು ಪ್ರಾಣಬಿಡುವುದೆ ನಾಲ್ವತ್ತುಮೂರನೆಯ ಆಚಾರ. ಜಂಗಮದ್ರೋಹವ ಕೇಳಿ ತಾನು ಐಕ್ಯನಾಗುವುದೆ ನಾಲ್ವತ್ತುನಾಲ್ಕನೆಯ ಆಚಾರ. ಲಿಂಗದ್ರೋಹವ ಮಾಡಿದವನ ಪ್ರಾಣವ ಭೇದಿಸುವುದೆ ನಾಲ್ವತ್ತೈದನೆಯ ಆಚಾರ. ಜಂಗಮದ್ರೋಹವ ಮಾಡಿದವನ ಶಿರವನೀಡಾಡುವುದೆ ನಾಲ್ವತ್ತಾರನೆಯ ಆಚಾರ. ಅಷ್ಟಾವರಣಸಂಗವ ಮಾಡುವ ಭೇದವ ತಿಳಿವುದೆ ನಾಲ್ವತ್ತೇ?ನೆಯ ಆಚಾರ. ತಾನಾರು ಲಿಂಗವಾರು ಎಂಬ ಭೇದವು ತಿಲಮಾತ್ರ ಇಲ್ಲದಿರುವುದೆ ನಾಲ್ವತ್ತೆಂಟನೆಯ ಆಚಾರ. ತನ್ನ ನಿಜವಿಚಾರವ ತಾ ಮರೆಯದೆ ಷಟ್ಸ್ಥಲದವರಿಗೆ ಅರುಹಿ ತನ್ನಂತೆ ಮಾಡುವುದೆ ನಾಲ್ವತ್ತೊಂಬತ್ತನೆಯ ಆಚಾರ. ಇಂತಿಷ್ಟು ಆಚಾರಂಗಳ ಕಡೆಮುಟ್ಟಿಸುವುದೆ, ಕೂಡಲಚೆನ್ನಸಂಗಮದೇವರಲ್ಲಿ ಐವತ್ತನೆಯ ಆಚಾರ ನೋಡಾ ಸಿದ್ದರಾಮಯ್ಯಾ.
--------------
ಚನ್ನಬಸವಣ್ಣ
ಅಯ್ಯ ಸದಾಚಾರಸದ್ಭಕ್ತಿಯಿಲ್ಲದ ಗುರುವು ನರಜೀವಿ. ಆತನಿಂದ ಹುಟ್ಟಿದ ಲಿಂಗಾಂಗವೆರಡು ಜಡಜೀವಿ. ಅವರಿಬ್ಬರಲ್ಲಿ ಹೊಕ್ಕು ಕೊಟ್ಟು ಕೊಂಬುವ ಜಂಗಮ ಭೂತಪ್ರಾಣಿ. ಈ ನರಜೀವಿ, ಜಡಜೀವಿ, ಭೂತಪ್ರಾಣಿಗಳಿಗೆ ಕೊಟ್ಟುಕೊಂಬ ಭಕ್ತಂಗೆ ಏಳನೆಯ ಪಾತಕ ಬಿಡದು ಕಾಣಾ. ಗುಹೇಶ್ವರಲಿಂಗದ ಸದಾಚಾರಸದ್ಭಕ್ತಿಯಿಂದಲ್ಲದೆ ಮುಕ್ತಿಯಿಲ್ಲ ನೋಡಾ ಚೆನ್ನಬಸವಣ್ಣ.
--------------
ಅಲ್ಲಮಪ್ರಭುದೇವರು
ಬಳಿಕೀ ಪ್ರಕಾರಮಾದ ಹಠಯೋಗರೂಪಮಪ್ಪ ಅಷ್ಟಾಂಗಗಳಂ ನಿರಾಲಸ್ಯದಿಂ ಎಡೆಬಿಡುವಿಲ್ಲದೆ ಮಾಡಿದಾತಂಗೆ ಆಗುವ ಸಿದ್ಧಿಪ್ರಕಾರಗಳೆಂತೆನೆ : ಮೊದಲನೆಯ ವರ್ಷದಲ್ಲಿ ನಿರೋಗಿಯಾಗಿ ಸಕಲಜನ ಪ್ರೀತನಾಗುವನು. ಎರಡನೆಯ ವರ್ಷದಲ್ಲಿ ಸುಸಂಸ್ಕøತ ಭಾಷೆಯಿಂದ ಕವಿತ್ವವಂ ಮಾಡುವನು. ಮೂರನೆಯ ವರ್ಷದಲ್ಲಿ ಸರ್ಪಾದಿ ದುಷ್ಟಪ್ರಾಣಿಗಳಿಂದೆ ಬಾಧಿಸಿಕೊಳ್ಳುತಿರನು. ನಾಲ್ಕನೆಯ ವರ್ಷದಲ್ಲಿ ಹಸಿವು ತೃಷೆ ವಿಷಯ ನಿದ್ರೆ ಶೋಕ ಮೋಹಾದಿಗಳಂ ಬಿಡುವನು. ಐದನೆಯ ವರ್ಷದಲ್ಲಿ ದೂರಶ್ರವಣ ವಾಕ್ಸಿದ್ಧಿ ಪರಕಾಯಪ್ರವೇಶಾಧಿಕವುಳ್ಳಾತನಹನು. ಆರನೆಯ ವರ್ಷದಲ್ಲಿ ವಜ್ರಾದ್ಯಾಯುಧಗಳಿಂದೆ ಭೇದಿಸಲ್ಪಡದಾತನಾಗಿ, ಶೀಘ್ರಗಾಮಿಯಾಗಿ ದೂರದರ್ಶನವುಳ್ಳಾತನಾಗುವನು. ಏಳನೆಯ ವರ್ಷದಲ್ಲಿ ಖೇಚರಗಾಮಿಯಾಗುವನು. ಎಂಟನೆಯ ವರ್ಷದಲ್ಲಿ ಅಣಿಮಾದಿ ಅಷ್ಟಮಹದೈಶ್ವರ್ಯಸಂಪನ್ನನಾಹನು. ಒಂಬತ್ತನೆಯ ವರ್ಷದಲ್ಲಿ ಸ್ವೇಚ್ಛಾಗಮನಿಯಾಗಿ ವಜ್ರಶರೀರಿಯಾಹನು. ಹತ್ತನೆಯ ವರ್ಷದಲ್ಲಿ ಮನೋಯೋಗಿಯಾಗಿ ಇಚ್ಛಾವಿಷಯಂಗಳ ಪಡೆಯುವನು. ಹನ್ನೊಂದನೆಯ ವರ್ಷದಲ್ಲಿ ಸಕಲ ಲೋಕಂಗಳಿಗೆ ಆಜ್ಞಾಕರ್ತೃವಾಹನು. ಹನ್ನೆರಡನೆಯ ವರ್ಷದಲ್ಲಿ ಶಿವನ ಸಮಾನವಾಗಿ ಸೃಷ್ಟಿಸ್ಥಿತಿಲಯಂಗಳಂ ಮಾಡುತಿರ್ಪುದೇ ಹಠಯೋಗಸಿದ್ಧಿ ನೋಡಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಆದಿ, ಅನಾದಿ, ಅನಾಗತ, ಅನಂತ, ಅದ್ಭುತ, ತಮಂಧ, ತಾರಜ, ತಂಡಜ, ಬಿಂದುಜ, ಭಿನ್ನಾಯುಕ್ತ, ಅವ್ಯಕ್ತ, ಆಮದಾಯುಕ್ತ, ಮಣಿರಣ, ಮಾನ್ಯರಣ, ವಿಶ್ವರಣ, ವಿಶ್ವವಸು, ಅಲಂಕೃತ, ಕೃತಯುಗ, ತ್ರೇತಾಯುಗ, ದ್ವಾಪರ[ಯುಗ], ಕಲಿಯುಗ- ಇಂತೀ ಇಪ್ಪತ್ತೊಂದು ಯುಗಂಗಳ ನಿರ್ಮಿಸಿದಾತ ನಮ್ಮ ಬಸವಣ್ಣ. ಪ್ರಥಮ ಯುಗದಲ್ಲಿ ಪೃಥ್ವಿ, ಅಪ್ಪು, ತೇಜ, ವಾಯು, ಆಕಾಶಂಗಳಿಲ್ಲದಂದು ಆರೂ ಆರೂ ಇಲ್ಲದಂದು, ನಾಮವಿಲ್ಲದಂದು, ಅಂದು ನಿಃಶೂನ್ಯವಾಗಿದ್ದ ಕಾಣ ನಮ್ಮ ಬಸವಣ್ಣ. ಅಂದು ನಿಮ್ಮ ನಾಭಿಕಮಲದಲ್ಲಿ ಜಲಪ್ರಳಯ ಪುಟ್ಟಿತ್ತು. ಆ ಜಲಪ್ರಳಯದಲ್ಲಿ ಒಂದುಗುಳ್ಳೆ ಲಿಂಗಾಕಾರವಾಗಿ ಪುಟ್ಟಿತ್ತು. ಆ ಲಿಂಗವ ತಕ್ಕೊಂಡು ಸ್ಥಾಪ್ಯವಿಟ್ಟಾತ ನಮ್ಮ ಬಸವಣ್ಣನು. ಇಪ್ಪತ್ತನೆಯ ಯುಗದಲ್ಲಿ ಓಂಕಾರವೆಂಬ ಮೇವ ಮೇದು, ಮೆಲುಕಿರಿದು, ಪರಮಾರ್ಥವೆಂಬ ಹೆಂಡಿಯನ್ನಿಕ್ಕಿ ನೊಸಲ ಕಣ್ಣತೆರೆದು ನೋಡಲಾಗಿ ಆ ಹೆಂಡಿ ಭಸ್ಮವಾಯಿತ್ತು. ಆ ಭಸ್ಮವನೆ ತೆಗೆದು ತಳಿಯಲಾಗಿ ಭೂಮಂಡಲ ಹೆಪ್ಪಾಯಿತ್ತು ಹೆಪ್ಪಾಗಲಿಕ್ಕಾಗಿ ತೊಡೆಯ ಮೇಲಿದ್ದ ಲಿಂಗವ ತಕ್ಕೊಂಡು ಸ್ಥಾಪ್ಯವಿಟ್ಟಾತ ನಮ್ಮ ಬಸವಣ್ಣ. ಹತ್ತೊಂಬತ್ತನೆಯ ಯುಗದಲ್ಲಿ ಏಕಪಾದದ ಮಾಹೇಶ್ವರನ ನಿರ್ಮಿಸಿದಾತ ನಮ್ಮ ಬಸವಣ್ಣ. ಹದಿನೆಂಟನೆಯ ಯುಗದಲ್ಲಿ ಕತ್ತಲೆಯ ಕಾಳೋದರನೆಂಬ ರುದ್ರನ ನಿರ್ಮಿಸಿದಾತ ನಮ್ಮ ಬಸವಣ್ಣ ಹದಿನೇಳನೆಯ ಯುಗದಲ್ಲಿ ವೇದಪುರಾಣಾಗಮಶಾಸ್ತ್ರಂಗಳ ನಿರ್ಮಿಸಿದಾತ ನಮ್ಮ ಬಸವಣ್ಣ ಹದಿನಾರನೆಯ ಯುಗದಲ್ಲಿ....... ಹದಿನೈದನೆಯ ಯುಗದಲ್ಲಿ ಅಮೃತಮಥನವ ಮಾಡಿದಾತ ನಮ್ಮ ಬಸವಣ್ಣ. ಹದಿನಾಲ್ಕನೆಯ ಯುಗದಲ್ಲಿ ತೆತ್ತೀಸಕೋಟಿ ದೇವರ್ಕಳ ನಿರ್ಮಿಸಿದಾತ ನಮ್ಮ ಬಸವಣ್ಣ. ಹದಿಮೂರನೆಯ ಯುಗದಲ್ಲಿ ಸೌರಾಷ್ಟ್ರ ಸೋಮೇಶ್ವರನ ನಿರ್ಮಿಸಿದಾತ ನಮ್ಮ ಬಸವಣ್ಣ. ಹನ್ನೆರಡನೆಯ ಯುಗದಲ್ಲಿ ಪಾರ್ವತಿಪರಮೇಶ್ವರರ ನಿರ್ಮಿಸಿದಾತ ನಮ್ಮ ಬಸವಣ್ಣ. ಹನ್ನೊಂದನೆಯ ಯುಗದಲ್ಲಿ ಏಕಾದಶ ರುದ್ರರ ನಿರ್ಮಿಸಿದಾತ ನಮ್ಮ ಬಸವಣ್ಣ. ಹತ್ತನೆಯ ಯುಗದಲ್ಲಿ ದಶವಿಷ್ಣುಗಳ ನಿರ್ಮಿಸಿದಾತ ನಮ್ಮ ಬಸವಣ್ಣ. ಒಂಬತ್ತನೆಯ ಯುಗದಲ್ಲಿ ನವಬ್ರಹ್ಮರ ನಿರ್ಮಿಸಿದಾತ ನಮ್ಮ ಬಸವಣ್ಣ. ಎಂಟನೆಯ ಯುಗದಲ್ಲಿ ಅಷ್ಟದಿಕ್ಪಾಲರ ನಿರ್ಮಿಸಿದಾತ ನಮ್ಮ ಬಸವಣ್ಣ. ಏಳನೆಯ ಯುಗದಲ್ಲಿ ಸಪ್ತ ಸಮುದ್ರಂಗಳ ನಿರ್ಮಿಸಿದಾತ ನಮ್ಮ ಬಸವಣ್ಣ. ಆರನೆಯ ಯುಗದಲ್ಲಿ ಷಣ್ಮುಖದೇವರ ನಿರ್ಮಿಸಿದಾತ ನಮ್ಮ ಬಸವಣ್ಣ. ಐದನೆಯ ಯುಗದಲ್ಲಿ ಪಂಚಮುಖದೀಶ್ವರನ ನಿರ್ಮಿಸಿದಾತ ನಮ್ಮ ಬಸವಣ್ಣ. ನಾಲ್ಕನೆಯ ಯುಗದಲ್ಲಿ ಚತುರ್ಮುಖದ ಬ್ರಹ್ಮನ ನಿರ್ಮಿಸಿದಾತ ನಮ್ಮ ಬಸವಣ್ಣ. ಮೂರನೆಯ ಯುಗದಲ್ಲಿ ಬ್ರಹ್ಮ, ವಿಷ್ಣು, ರುದ್ರರ ನಿರ್ಮಿಸಿದಾತ ನಮ್ಮ ಬಸವಣ್ಣ. ಎರಡನೆಯ ಯುಗದಲ್ಲಿ ಸಂಗಯ್ಯನ ನಿರ್ಮಿಸಿದಾತ ನಮ್ಮ ಬಸವಣ್ಣ. ಒಂದನೆಯ ಯುಗದಲ್ಲಿ ಪ್ರಭುವೆಂಬ ಜಂಗಮವ ನಿರ್ಮಿಸಿದಾತ ನಮ್ಮ ಬಸವಣ್ಣ. ಇಂತೀ ಇಪ್ಪತ್ತೊಂದು ಯುಗಂಗಳಲ್ಲಿ ಬಸವಣ್ಣನು ತಮ್ಮ ಕರಕಮಲವೆಂಬ ಗರ್ಭದಲ್ಲಿ ಜನಿಸಿದನೆಂದು. ಕಕ್ಕಯ್ಯಗಳು ತಮ್ಮ ಮೋಹದ ಮಗನೆಂದು ಒಕ್ಕುದನಿಕ್ಕಿ ಸಲಹಿದರು ಕಾಣಾ ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ
ಅಯ್ಯಾ, ಏಳೇಳು ಜನ್ಮದಲ್ಲಿ ಶಿವಭಕ್ತನಾಗಿ ಬಾರದಿರ್ದಡೆ ನಿಮ್ಮಾಣೆ, ನಿಮ್ಮ ಪ್ರಮಥರಾಣೆ ! ನಿಮ್ಮ ಪ್ರಸಾದಕ್ಕಲ್ಲದೆ ಬಾಯ್ದೆರೆಯೆನಯ್ಯಾ. ಪ್ರಥಮಭವಾಂತರದಲ್ಲಿ ಶಿಲಾದನೆಂಬ ಗಣೇಶ್ವರನ ಮಾಡಿ, ಹೆಸರಿಟ್ಟು ಕರೆದು ನಿಮ್ಮ ಭೃತ್ಯನ ಮಾಡಿ ಎನನ್ನಿರಿಸಿಕೊಂಡಿರ್ದಿರಯ್ಯಾ. ಎರಡನೆಯ ಭವಾಂತರದಲ್ಲಿ ಸ್ಕಂದನೆಂಬ ಗಣೇಶ್ವರನ ಮಾಡಿ, ಹೆಸರಿಟ್ಟು ಕರೆದು ನಿಮ್ಮ ಕಾರುಣ್ಯವ ಮಾಡಿರಿಸಿಕೊಂಡಿರ್ದಿರಯ್ಯಾ. ಮೂರನೆಯ ಭವಾಂತರದಲ್ಲಿ ನೀಲಲೋಹಿತನೆಂಬ ಗಣೇಶ್ವರನ ಮಾಡಿ, ಹೆಸರಿಟ್ಟು ಕರೆದು ನಿಮ್ಮ ಲೀಲಾವಿನೋದದಿಂದಿರಿಸಿಕೊಂಡಿರ್ದಿರಯ್ಯಾ. ನಾಲ್ಕನೆಯ ಭವಾಂತರದಲ್ಲಿ ಮನೋಹರನೆಂಬ ಗಣೇಶ್ವರನ ಮಾಡಿ, ಹೆಸರಿಟ್ಟು ಕರೆದು ನಿಮ್ಮ ಮನಃಪ್ರೇರಕನಾಗಲೆಂದಿರಿಸಿಕೊಂಡಿರ್ದಿರಯ್ಯಾ. ಐದನೆಯ ಭವಾಂತರದಲ್ಲಿ ಕಾಲಲೋಚನನೆಂಬ ಗಣೇಶ್ವರನ ಮಾಡಿ, ಹೆಸರಿಟ್ಟು ಕರೆದು ಸರ್ವಕಾಲಸಂಹಾರವ ಮಾಡಿಸುತ್ತಿರ್ದಿರಯ್ಯಾ. ಆರನೆಯ ಭವಾಂತರದಲ್ಲಿ ವೃಷಭನೆಂಬ ಗಣೇಶ್ವರನ ಮಾಡಿ, ಹೆಸರಿಟ್ಟು ಕರೆದು ನಿಮಗೇರಲು ವಾಹನವಾಗಲೆಂದಿರಿಸಿಕೊಂಡಿರ್ದಿರಯ್ಯಾ. ಏಳನೆಯ ಭವಾಂತರದಲ್ಲಿ ಬಸವದಣ್ಣಾಯಕನೆಂಬ ಗಣೇಶ್ವರನ ಮಾಡಿ, ಹೆಸರಿಟ್ಟು ಕರೆದು ನಿಮ್ಮ ಒಕ್ಕುದ ಮಿಕ್ಕುದಕ್ಕೆ ಯೋಗ್ಯನಾಗಲೆಂದಿರಿಸಿಕೊಂಡಿರ್ದಿರಯ್ಯಾ. ಇದು ಕಾರಣ ಕೂಡಲಸಂಗಮದೇವಾ, ನೀವು ಬರಿಸಿದ ಭವಾಂತರದಲ್ಲಿ ನಾನು ಬರುತಿರ್ದೆನಯ್ಯಾ. 4
--------------
ಬಸವಣ್ಣ
ತನು ಮನ ಬಳಲದೆ ಉದ್ದಂಡವೃತ್ತಿಯಲ್ಲಿ ಧನವ ಗಳಿಸಿ ತಂದು ಗುರುಲಿಂಗಜಂಗಮಕ್ಕೆ ವೆಚ್ಚಿಸಿ, ದಾಸೋಹವ ಮಾಡಿ, ಭಕ್ತರಾದೆವೆಂಬವರನೆನಗೆ ತೋರದಿರಯ್ಯಾ. ಅದೇಕೆಂದರೆ:ಅವ ಪರಧನ ಚೋರಕ; ಅವ ಪಾಪಿ, ಅವಗೆ ವಿಚಾರಿಸದೆ ಉಪದೇಶವ ಕೊಟ್ಟ ಗುರುವಿಂಗೆ gõ್ಞರವ ನರಕ. ಅವನ ಕಾಯಕವ ವಿಚಾರಿಸದೆ ಅವರ ಮನೆಯಲ್ಲಿ ಹೊಕ್ಕು ಲಿಂಗಾರ್ಚನೆಯ ಮಾಡುವ ಜಂಗಮಕ್ಕೆ ಏಳನೆಯ ಪಾತಕ. ಇಂತಹರ ಬದುಕು, ಹುಲಿ ಕಪಿಲೆಯ ತಿಂದು ಮಿಕ್ಕುದ ನರ ಬಂದು ತಿಂಬಂತೆ ಕಾಣಾ. ಕೂಡಲಚೆನ್ನಸಂಗಮದೇವಾ
--------------
ಚನ್ನಬಸವಣ್ಣ
ಧ್ಯಾನ ಧಾರಣ ಸಮಾಧಿಯೆಂತೆಂದಡೆ ಸದ್ಗುರುವೆ ಕರುಣಿಪುದು. ಕೇಳಯ್ಯ ಮಗನೆ : ಧ್ಯಾನ ಯೋಗವೆಂತೆಂದಡೆ : ಷಡಾಧಾರಚಕ್ರದೊಳಗೆ ಆಧಾರ ಮೊದಲಾಗಿ ಆಜ್ಞೆ ಕಡೆತನಕ ಇಷ್ಟಲಿಂಗವ ಧ್ಯಾನಿಸಿ ಅರ್ಚಿಸಿ ಪೂಜಿಸಿ ಅಲ್ಲಿ ತ್ರಿಕೂಟ ಸಂಗಮದಲ್ಲಿ ಗಂಗಾ ಯಮುನಾ ಸರಸ್ವತಿ ನದಿಗಳು ಕೂಡಿದ ಠಾವಿನಲ್ಲಿ ಪ್ರಮಥಗಣಂಗಳು ಮೊದಲಾಗಿ ಅಲ್ಲಿ ಮಜ್ಜನವ ನೀಡುತ್ತಿಹರು. ಅಲ್ಲಿ ಸೂರ್ಯಪೀಠದ ಮೇಲೆ ಗುರುವು ಮೂರ್ತವ ಮಾಡಿರಲು ಅವರ ಪಾದಾರ್ಚನೆಯಂ ಮಾಡಿ, ಪಾದೋದಕದ ನದಿಗಳಲ್ಲಿ ಸ್ನಾನವ ಮಾಡಿ ಅವರ ಸಂಗಡ ಏಳನೆಯ ಮಂಟಪಕ್ಕೆ ಹೋಗಿ ಅಲ್ಲಿ ಪಶ್ಚಿಮಚಕ್ರದಿಂದ ನಿರಂಜನಜಂಗಮವು ಶಿಖಾಚಕ್ರದಲ್ಲಿರ್ದ ಬಸವಾದಿ ಪ್ರಮಥರು ಮೊದಲಾದವರು ಬಿಜಯಮಾಡಿ, ಅಲ್ಲಿ ಅಸಂಖ್ಯಾತ ಪ್ರಮಥರು, ನೂತನ ಗಣಂಗಳು ಸಹವಾಗಿ ಲಿಂಗಾರ್ಚನೆಯ ಮಾಡುತ್ತಿಹರು. ಆ ಲಿಂಗಾರ್ಚನೆ ಎಂತೆಂದಡೆ : ಮೊದಲು ಚಿದ್ಭಸ್ಮವನೆ ಧರಿಸಿ, ಆನಂದೋದಕದಿಂದ ಲಿಂಗಕ್ಕೆ ಕ್ರಿಯಾಮಜ್ಜನವ ನೀಡಿ, ಅಷ್ಟತನುವಿನ ಅಷ್ಟಸುಗಂಧವ ಧರಿಸಿ, ಕರಣಂಗಳ ಸಂಚಲವಿಲ್ಲದ ಗುಣತ್ರಯದಕ್ಷತೆಯ ಧರಿಸಿ, ಸಾವಿರದೈವತ್ತು ಪ್ರಣವದ ಪರಿಮಳ ತುಂಬಿರ್ದ ಪುಷ್ಪವ ಧರಿಸಿ, ದಶವಾಯುಗಳ ಗುಣಧರ್ಮಂಗಳ ಜ್ಞಾನಾಗ್ನಿಯೊಳು ನೀಡಿ, ದಶಾಂಗದ ಸದ್ವಾಸನೆಯ ಧೂಪವ ಧರಿಸಿ, ಹೃದಯವೆಂಬ ಪ್ರಣತಿಯಲ್ಲಿ ದೃಢಚಿತ್ತವೆಂಬ ಬತ್ತಿಯನಿರಿಸಿ, ಅರುಹೆಂಬ ತೈಲವನೆರದು, ಮಹಾಜ್ಞಾನವೆಂಬ ಜ್ಯೋತಿಯ ಮುಟ್ಟಿಸಿ ಅದರಿಂದೊದಗಿದ ಏಕಾರತಿ ತ್ರಿಯಾರತಿ ಪಂಚಾರತಿ ಕಡ್ಡಿ ಬತ್ತಿ ಮೊದಲಾದ ಮಹಾಪ್ರಕಾಶದ ದೀಪವ ಧರಿಸಿ, ಕ್ರಿಯಾ ಜ್ಞಾನ ಇಚ್ಫಾ ಆದಿ ಪರ ಚಿತ್‍ಶಕ್ತಿ ಮೊದಲಾದವರು ಆರತಿಯ ಪಿಡಿದಿಹರು. ಆ ಮೇಲೆ ಪಾದತೀರ್ಥವ ಸಲಿಸಿ, ಮತ್ತೆ ಐವತ್ತು ದಳದಲ್ಲಿರ್ದ ಐವತ್ತು ರುದ್ರಕನ್ನಿಕೆಯರು ಅಡುಗೆಯ ಮಾಡಿ, ಅವರಿಗೆ ಇಚ್ಫಾಪದಾರ್ಥವ ನೀಡುತ್ತಿಹರು. ಅವರ ಒಕ್ಕುಮಿಕ್ಕ ಪ್ರಸಾದವನುಂಡು ಫಲದಾಕಾಂಕ್ಷೆಗಳಿಲ್ಲದೆ ಉಲುಹಡಗಿದ ನಿಜ ಪ್ರಭಾಲತೆ ಪರ್ಣದ ವೀಳ್ಯವನಿತ್ತು ಅವರ ತಾಂಬೂಲ ಪ್ರಸಾದವ ಕೊಂಡು ಪರಿಣಾಮಿಸಿ ಮನ ಭಾವಂಗಳಿಂದ ಪ್ರತ್ಯಕ್ಷವಾಗಿ ಕಂಡು, ಧ್ಯಾನಿಸುವುದೇ ಧ್ಯಾನ ಯೋಗ. ಇನ್ನು ಧಾರಣಯೋಗದ ವಿವರ : ಕರದೊಳಗೆ ಇಷ್ಟಲಿಂಗವ ಮೂರ್ತವ ಮಾಡಿಸಿ ಮನದೊಳಗೆ ಪ್ರಾಣಲಿಂಗವ ಮೂರ್ತವ ಮಾಡಿಸಿ ಭಾವದೊಳಗೆ ತೃಪ್ತಿಲಿಂಗವ ಮೂರ್ತವ ಮಾಡಿಸಿ ಕರ ಮನ ಭಾವದೊಳಗೆ ಪ್ರತ್ಯಕ್ಷವಾಗಿ ಕಂಡು ಧರಿಸಿಕೊಂಡಿಪ್ಪುದೀಗ ಧಾರಣಯೋಗ. ಇನ್ನು ಸಮಾಧಿಯೋಗದ ವಿವರ : ಆ ಇಷ್ಟ ಪ್ರಾಣ ಭಾವಲಿಂಗವ ಏಕವ ಮಾಡಿ, ಅಲ್ಲಿ ಐಕ್ಯವಾಗಿಪ್ಪುದೀಗ ಸಮಾಧಿಯೋಗ ಎಂದರುಹಿದಾತ ನಮ್ಮ ಶಾಂತಕೂಡಲಸಂಗಮದೇವ.
--------------
ಗಣದಾಸಿ ವೀರಣ್ಣ
ಕುರಿ ಕುನ್ನಿ ಮೊದಲಾಗಿರ್ದವು ಒಡೆಯನ ಬಲ್ಲವು. ಅರ್ಚಿಸಿ ಪೂಜಿಸಿ ಭಾವಿಸಿ ಏಕೆ ಅರಿಯೊ ? ಅಯ್ಯಾ ಹೋಯಿತ್ತು ಭಕ್ತಿ, ಮ[ಳ]ಲ ಕೂಡಿದೆಣ್ಣೆಯಂತೆ. ಹೋಯಿತ್ತು ಪೂಜೆ, ಪುರೋಹಿತನ ಕೊಂದು ಪುರಾಣವ ಕೇಳಿದಂತೆ. ತಾ ಮಾಡುವ ಭಕ್ತಿಯ, ತಾ ಮಾಡುವ ಸತ್ಯವ, ತಾ ಮಾಡುವ ಸದಾಚಾರವನರಿಯದೆ, ಮಾಡುವ ಭಕ್ತ[ನ] ಮನೆಯಲ್ಲಿ ಹೊಕ್ಕುಂಡ ಜಂಗಮಕ್ಕೆ ಏಳನೆಯ ಪಾತಕ. ಆ ಜಂಗಮಪ್ರಸಾದವ ಕೊಂಡ ಭಕ್ತಂಗೆ, ಹುಲಿ ಕವಿಲೆಯ ತಿಂದು, ಮಿಕ್ಕುದ ನರಿ ತಿಂದಂತೆ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಒಂದನೆಯ ಬಾಗಿಲಲ್ಲಿ ನೇಹವಿಪ್ಪುದು, ಎರಡನೆಯ ಬಾಗಿಲಲ್ಲಿ ಗುಣವಿಪ್ಪುದು, ಮೂರನೆಯ ಬಾಗಿಲಲ್ಲಿ ಧ್ಯಾನವಿಪ್ಪುದು, ನಾಲ್ಕನೆಯ ಬಾಗಿಲಲ್ಲಿ ಯೋಗವಿಪ್ಪುದು, ಐದನೆಯ ಬಾಗಿಲಲ್ಲಿ ಪಂಚೇಂದ್ರಿಯ ಗುಣವಿಪ್ಪುದು, ಆರನೆಯ ಬಾಗಿಲಲ್ಲಿ ಷಡುಸ್ಥಲಂಗಳಿಪ್ಪವು, ಏಳನೆಯ ಬಾಗಿಲಲ್ಲಿ ಸಪ್ತವ್ಯಸನಂಗಳಿಪ್ಪವು, ಎಂಟನೆಯ ಬಾಗಿಲಲ್ಲಿ ಅಷ್ಟಮದಂಗಳಿಪ್ಪವು ಒಂಬತ್ತನೆಯ ಬಾಗಿಲಲ್ಲಿ ನಾದಬಿಂದುಗಳಿಪ್ಪವು, ಹತ್ತನೆಯ ಬಾಗಿಲಲ್ಲಿ ಸುಜ್ಞಾನವಿಪ್ಪುದು, ಇಂತೀ ಒಂಬತ್ತು ಬಾಗಿಲಂ ಕಳೆದು ದಶಮಬಾಗಿಲಂ ತೆಗೆದು ಹೊಕ್ಕು ಮಹಾಸುಖಿಯಾಗಿದ್ದ ಕೂಡಲಚೆನ್ನಸಂಗಾ ನಿಮ್ಮ ಶರಣ.
--------------
ಚನ್ನಬಸವಣ್ಣ
ಹಿಡಿ ಪುಣ್ಯವ, ಬಿಡು ಪಾಪವ, ಸತ್ವ ರಜ ತಮ, ಒಡಲೈದು ಇಂದ್ರಿಯವ, ಏಳನೆಯ ಧಾತುವ, ಒಡಲಷ್ಟ ತನುವನು ಕೆಡೆ ಮೆಟ್ಟಿ ಶಿಖರದ ತುದಿಯ ಮೇಲೆರಿಸು, ಮತ್ತೆರಡಿಲ್ಲದೆ ನಡೆ, ಅಲ್ಲಿಂದ ಹಿಡಿದು ಲಂಘನೆ ಮಾಡೆ ಹಡೆವೆ ಮೋಕ್ಷವನೆಂದನಂಬಿಗ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ಸಂಗಾ, ನೀನಿಲ್ಲದವರಂಗಣ ಪಂಚ ಮಹಾಪಾತಕ, ಏಳನೆಯ ನರಕ. ಸಂಗಾ, ನೀನಿಲ್ಲದವರಂಗಣ ಬ್ರಹ್ಮೇತಿಗೆ ಅದು ಮೊದಲು. ಸಂಗಾ, ನೀನಿದ್ದವರಂಗಣ ಲಿಂಗಾಂಗಣ, ಅವರಂಗವು ಲಿಂಗ. ಸಂಗಾ, ನೀನಿದ್ದವರಂಗಣವೆ ವಾರಣಾಸಿಯಿಂದಧಿಕ. ಸಂಗಾ, ನೀನಿದ್ದವರಂಗಣ ಅಮೃತ ದಿವ್ಯಕ್ಷೇತ್ರದಿಂದಧಿಕ. ಸಂಗಾ, ಕೂಡಲಚೆನ್ನಸಂಗಾ, ನಿಮ್ಮ ಶರಣರ ಸಂಗ ಸುಸಂಗವೆನಗೆ.
--------------
ಚನ್ನಬಸವಣ್ಣ
ಶೀಲ ಶೀಲವೆಂತೆಂಬಿರಯ್ಯಾ, ಶೀಲದ ನೆಲೆಯ ಬಲ್ಲರೆ ಹೇಳಿರೊ, ಅರಿಯದಿರ್ದಡೆ ಕೇಳಿರೊ. ಕಾಮ ಒಂದನೆಯ ಭವಿ, ಕ್ರೋಧ ಎರಡನೆಯ ಭವಿ, ಲೋಭ ಮೂರನೆಯ ಭವಿ, ಮೋಹ ನಾಲ್ಕನೆಯ ಭವಿ, ಮದ ಐದನೆಯ ಭವಿ, ಮತ್ಸರ ಆರನೆಯ ಭವಿ, ಆಮಿಷ ಏಳನೆಯ ಭವಿ. ಇಂತೀ ಏಳು ಭವಿಗಳ ತಮ್ಮೊಳಗಿಟ್ಟುಕೊಂಡು, ಲಿಂಗವಿಲ್ಲದವರ ಭವಿ ಭವಿ ಎಂಬರು. ತಮ್ಮಂತರಂಗದಲ್ಲಿರ್ದ ಲಿಂಗಾಂಗದ ಸುದ್ದಿಯನರಿದೆ, ಅಚ್ಚಪ್ರಸಾದಿ ನಿಚ್ಚಪ್ರಸಾದಿ ಸಮಯಪ್ರಸಾದಿಗಳೆಂದು ಜಲಕ್ಕೆ ಕನ್ನವನಿಕ್ಕಿ, ಉದಕವ ತಂದು, ಲಿಂಗಕ್ಕೆ ಮಜ್ಜನಕ್ಕೆರೆವ ಪಗಲುಗಳ್ಳರಿಗೆ ಮೆಚ್ಚುವನೇ, ನಿಃಕಳಂಕ ಮಲ್ಲಿಕಾರ್ಜುನ ?
--------------
ಮೋಳಿಗೆ ಮಾರಯ್ಯ
ಸ್ವರ್ಗಕ್ಕೆ ಏಳು ಸೋಪಾನವಿರ್ಪುದನು ಆರೂ ಅರಿಯರಲ್ಲ ! ಅದು ಹೇಗೆಂದೊಡೆ : ಜಂಗಮವ ಕಾಣುತ್ತ ಸದ್‍ಭಕ್ತನು ಕುಳಿತಾಸನವ ಬಿಟ್ಟು ಇದಿರೆದ್ದು ನಡೆವುದೇ ಒಂದನೆಯ ಸೋಪಾನ. ಮನಕರಗಿ ತನು ಉಬ್ಬಿ ಕಂಗಳಲ್ಲಿ ಪರಿಣಾಮಜಲವುಕ್ಕಿ ಅವರ ಚರಣಕಮಲದ ಮೇಲೆ ಸುರಿವಂತೆ ಸಾಷ್ಟಾಂಗದಿಂದೆ ನಮಸ್ಕರಿಸುವುದೇ ಎರಡನೆಯ ಸೋಪಾನ. ಆ ಜಂಗಮವ ತನ್ನ ಮಠಕ್ಕೆ ಬಿಜಯಂಗೈಸಿ ಉನ್ನತಾಸನದ ಗದ್ದುಗೆಯ ಮೇಲೆ ಕುಳ್ಳಿರಿಸಿ ಪಾದಪ್ರಕ್ಷಾಲನವ ಮಾಡುವುದೇ ಮೂರನೆಯ ಸೋಪಾನ. ಆ ಜಂಗಮದೇವರ ಅಷ್ಟವಿಧಾರ್ಚನೆ - ಷೋಡಶೋಪಚಾರಗಳಿಂದರ್ಚಿಸಿ, ಪಾದಿತೀರ್ಥವ ಕೊಂಬುವುದೇ ನಾಲ್ಕನೆಯ ಸೋಪಾನ. ಆ ಜಂಗಮಕ್ಕೆ ಮೃಷ್ಟಾನ್ನಪಾನಂಗಳಿಂದೆ ತೃಪ್ತಿಪಡಿಸುವುದೇ ಐದನೆಯ ಸೋಪಾನ. ಆ ಜಂಗಮದ ಒಕ್ಕುಮಿಕ್ಕಪ್ರಸಾದವ ಕೊಂಬುವುದೇ ಆರನೆಯ ಸೋಪಾನ. ಆ ಜಂಗಮದಲ್ಲಿ ಅನುಭಾವವ ಬೆಸಗೊಂಬುವುದೇ ಏಳನೆಯ ಸೋಪಾನ. ಇಂತೀ ಸಪ್ತಸೋಪಾನಂಗಳ ಬಲ್ಲ ಸದ್ಭಕ್ತಂಗೆ ಕೈಲಾಸ ಕರತಾಳಮಳಕವಲ್ಲದೆ ತನುವ ಸವೆಸದೆ, ಮನವ ದಂಡಿಸದೆ, ಧನವ ಸಮರ್ಪಿಸದೆ, ಮಿಥ್ಯಾಸಂಸಾರದಲ್ಲಿ ಸಿಲ್ಕಿ ಹೊತ್ತುಗಳೆದು ಹೊಡೆದಾಡಿ ಸತ್ತು ಹೋಗುವ ವ್ಯರ್ಥಜೀವಿಗಳಿಗೆ ಇನ್ನೆತ್ತಣ ಕೈಲಾಸವಯ್ಯ ಅಖಂಡೇಶ್ವರಾ ?
--------------
ಷಣ್ಮುಖಸ್ವಾಮಿ
ನಿಮ್ಮ ಜಂಗಮವ ಕಂಡು ಉದಾಸೀನವ ಮಾಡಿದಡೆ, ಒಂದನೆಯ ಪಾತಕ. ನಿಮ್ಮ ಜಂಗಮದ ಸಮಯೋಚಿತವ ನಡೆಸದಿದ್ದಡೆ, ಎರಡನೆಯ ಪಾತಕ. ನಿಮ್ಮ ಜಂಗಮದ ಕೂಡೆ ಮಾರುತ್ತರವ ಕೊಟ್ಟಡೆ, ಮೂರನೆಯ ಪಾತಕ. ನಿಮ್ಮ ಜಂಗಮದ ಸಕಲಾರ್ಥಕ್ಕೆ ಸಲ್ಲದಿದ್ದಡೆ, ನಾಲ್ಕನೆಯ ಪಾತಕ. ನಿಮ್ಮ ಜಂಗಮಕ್ಕೆ ಮಾಡಿದೆನೆಂದು ಮನದಲ್ಲಿ ಹೊಳೆದಡೆ, ಐದನೆಯ ಪಾತಕ. ನಿಮ್ಮ ಜಂಗಮವು ಅಂಥವರಿಂಥವರೆಂದು ನುಡಿದಡೆ, ಆರನೆಯ ಪಾತಕ. ನಿಮ್ಮ ಜಂಗಮವೆ ಲಿಂಗವೆಂದು ನಂಬದಿದ್ದಡೆ, ಏಳನೆಯ ಪಾತಕ. ನಿಮ್ಮ ಜಂಗಮದ ಕೂಡೆ ಸುಖಸಂಭಾಷಣೆಯ ಮಾಡದಿದ್ದಡೆ, ಎಂಟನೆಯ ಪಾತಕ. ನಿಮ್ಮ ಜಂಗಮಕ್ಕೆ ಸಕಲ ಪದಾರ್ಥವ ನೀಡದೆ, ತನ್ನ ಲಿಂಗಕ್ಕೆ ಕೊಡುವುದು ಒಂಬತ್ತನೆಯ ಪಾತಕ. ನಿಮ್ಮ ಜಂಗಮದ ಪಾದೋದಕ ಪ್ರಸಾದವನು ತಂದು, ತನ್ನ ಲಿಂಗಕ್ಕೆ ಕೊಟ್ಟು ಕೊಳದಿಹುದು ಹತ್ತನೆಯ ಪಾತಕ_ಇಂತೀ ಹತ್ತು ಪಾತಕವ ಕಳೆದಲ್ಲದೆ ಭಕ್ತನಲ್ಲ, ಮಹೇಶ್ವರನಲ್ಲ, ಪ್ರಸಾದಿಯಲ್ಲ, ಪ್ರಾಣಲಿಂಗಿಯಲ್ಲ, ಶರಣನೈಕ್ಯನೆಂತೂ ಆಗಲರಿಯ. ಇದು ಕಾರಣ, ಕೂಡಲಚೆನ್ನಸಂಗಮದೇವಾ ಭಕ್ತಹೀನ ಜಡಜೀವಿಗಳು ನಿಮಗೆಂದೂ ದೂರವಯ್ಯಾ.
--------------
ಚನ್ನಬಸವಣ್ಣ
ಇನ್ನಷ್ಟು ... -->