ಅಥವಾ

ಒಟ್ಟು 20 ಕಡೆಗಳಲ್ಲಿ , 1 ವಚನಕಾರರು , 20 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಹಿಡಿದ ವ್ರತ ಘಟಿಸಿತ್ತೆಂದು ಮುಂದೆ ಒಂದು ವ್ರತಕ್ಕೆ ಅಡಿಯಿಡುವ ಪರಿಯಿನ್ನೆಂತೊ? ಆ ವ್ರತ ತನಗೆ ಸಂಭವಿಸಿ ನಿಂದಲ್ಲಿ ಹೆಣ್ಣಿಗೆ ವಿಷಯ ಹೊನ್ನು ಮಣ್ಣಿಗೆ ಅಪೇಕ್ಷೆ ಮತ್ತೆ, ಸರ್ವೇಂದ್ರಿಯಂಗಳಲ್ಲಿ ಹಿಂಗಿ ನಿಂದ ವ್ರತದಂಗವಾವುದು? ತಾ ನಿಂದ ವ್ರತ ಒಂದಂಗದಲ್ಲಿ ಸಲೆ ಸಂದುದು. ಆ ಭಾವದಲ್ಲಿ ಸರ್ವವ್ರತ ಸಂದಿತ್ತು, ಏಲೇಶ್ವರಲಿಂಗಕ್ಕೆ.
--------------
ಏಲೇಶ್ವರ ಕೇತಯ್ಯ
ಜಲ ನೆಲ ಶಿಲೆ ತಾನಾಡುವ ಹೊಲ ಮುಂತಾಗಿ ಸರ್ವವೆಲ್ಲವು ಲಿಂಗಾಯತಸಂಬಂಧವಾಗಿ, ಭವಿಸಂಗ, ಭವಿನಿರೀಕ್ಷಣೆ, ಭವಿ ಅಪೇಕ್ಷೆ, ಭವಿದ್ರವ್ಯಂಗಳನೊಲ್ಲದೆ, ಶಿವನನರಿವರಲ್ಲಿ, ಶಿವನ ಪೂಜೆಯ ಮಾಡುವರಲ್ಲಿ, ಶಿವಮೂರ್ತಿಧ್ಯಾನದಿಂದ ಶಿವಲಿಂಗಾರ್ಚನೆಯ ಮಾಡುವರಲ್ಲಿ, ಶಿವಪ್ರಸಾದವ ಕಾಡಿ ಬೇಡಿ ತಂದು ಒಡೆಯನಿಗಿತ್ತು ಆ ಪ್ರಸಾದವ ಏಲೇಶ್ವರಲಿಂಗಕ್ಕೆ ಕೊಟ್ಟ ಆ ವ್ರತಭಾವಿಗೆ ನಮೋ ನಮೋ ಎನುತಿದ್ದೆ.
--------------
ಏಲೇಶ್ವರ ಕೇತಯ್ಯ
ಸಕಲ ವ್ರತನೇಮಂಗಳು ಸಂಭವಿಸಿದಲ್ಲಿ, ಅಪ್ಪುಲವಣ ಮೃತ್ತಿಕೆಲವಣ ಸ್ಥಾವರಲವಣ_ ಇಂತೀ ತ್ರಿವಿಧಲವಣಂಗಳಲ್ಲಿ ಅಧಮ ವಿಶೇಷಂಗಳನರಿದು, ಹಿಡಿವುದ ಹಿಡಿದು ಬಿಡುವುದ ಬಿಟ್ಟು, ಅಂಗದ ಕ್ರೀ, ಮನ, ಅಂಗೀಕರಿಸುವ ವರ್ತನ_ ಈ ತ್ರಿವಿಧಕ್ಕೆ ಲಿಂಗ ಸುಯಿದಾನಿಯಾಗಿರಬೇಕು ಏಲೇಶ್ವರಲಿಂಗಕ್ಕೆ.
--------------
ಏಲೇಶ್ವರ ಕೇತಯ್ಯ
ಕೀಳು ಲೋಹದ ಮೇಲೆ ಮೇಲು ಚಿನ್ನವ ತೊಡೆದಡೆ, ಅದು ಸ್ವಯಂಭು ಹೇಮವಪ್ಪುದೆ? ಹೆಣ್ಣು ಹೊನ್ನು ಮಣ್ಣು ಕುರಿತು ಕುಜಾತಿಗನ್ನಕ್ಕೆ ಶೀಲವಂತನಾದವ ನನ್ನಿಯ ವ್ರತದ ದೆಸೆಯ ಬಲ್ಲನೆ? ಇಂತೀ ಗನ್ನರನರಿದು, ಇಂತೀ ನಿಜಪ್ರಸನ್ನರ ಕಂಡು, ಉಭಯದ ಬಿನ್ನಾಣದ ವ್ರತದ ಬೆಸುಗೆಯ ತ್ರಿಕರಣಕ್ಕೆ ಅನ್ಯವಿಲ್ಲದೆ ಮಾಡಬೇಕು. ಏಲೇಶ್ವರಲಿಂಗಕ್ಕೆ ವ್ರತಕ್ಕೆ ಆಚಾರ್ಯನಾಗಬಲ್ಲಡೆ.
--------------
ಏಲೇಶ್ವರ ಕೇತಯ್ಯ
ಒಡೆಯರು ಭಕ್ತರು ತಾವೆಂದು ಅಡಿಮೆಟ್ಟಿ ಹೋಹಲ್ಲಿ ತಡೆಯಿತು ಶಕುನವೆಂದುಳಿದಡೆ, ಕಾಗೆ ವಿಹಂಗ ಮಾರ್ಜಾಲ ಮರವಕ್ಕಿ ಗರ್ದಭ ಶಶಕ ಶಂಕೆಗಳು ಮುಂತಾದ ಸಂಕಲ್ಪಕ್ಕೊಳಗಾದಲ್ಲಿ ವ್ರತಕ್ಕೆ ಭಂಗ, ಆಚಾರಕ್ಕೆ ದೂರ. ಅದೆಂತೆಂದಡೆ: ಅಂಗಕ್ಕೆ ಆಚಾರವ ಸಂಬಂಧಿಸಿ, ಮನಕ್ಕೆ ಅರಿವು-ಅರಿವಿಂಗೆ ವ್ರತವ ಮಾಡಿದಲ್ಲಿ, ಬೇರೊಂದು ಪರಿಹರಿಸುವ ನಿಮಿತ್ತವುಂಟೇರಿ ಇಂತೀ ಸತ್ಕ್ರಿಯಾವಂತಗೆ ಕಷ್ಟಜೀವದ ಲಕ್ಷದಲ್ಲಿ ಚಿತ್ತ ಮೆಚ್ಚಿಹನ್ನಕ್ಕ ಆತನು ಆಚಾರಭ್ರಷ್ಟ, ಏಲೇಶ್ವರಲಿಂಗಕ್ಕೆ ದೂರ.
--------------
ಏಲೇಶ್ವರ ಕೇತಯ್ಯ
ಭಕ್ತಿಯಿಂದ ನಡೆದೆಹೆನಂಬಲ್ಲಿ ವ್ರತಲಕ್ಷವುಂಟು, ಅಲಕ್ಷವುಂಟು. ಮಿಕ್ಕಾದ ಸರ್ವಗುಣಂಗಳಲ್ಲಿ ಹೊತ್ತು ಹೋರಿಹೆನೆಂದಡೆ ಭಕ್ತಿ ಲಕ್ಷಣ. ವಿಶ್ವಮಯಸತ್ವಕ್ಕೆ ತಕ್ಕ ಸಾಮಥ್ರ್ಯದಲ್ಲಿ ಚಿತ್ತವೊಪ್ಪಿ ನಡೆವ ಕೃತ್ಯವ ಹೊತ್ತು, ಆ ಕೃತ್ಯ ತಪ್ಪದೆ ನಿಶ್ಚಯವಾಗಿರಬೇಕು. ಇದು ಏಲೇಶ್ವರಲಿಂಗಕ್ಕೆ ವ್ರತದ ಗುತ್ತಗೆಯ ನೇಮ.
--------------
ಏಲೇಶ್ವರ ಕೇತಯ್ಯ
ಹೆಂಡತಿ, ಗಂಡನ ಒಡೆಯರೆಂದು ಕೂಡಿಕೊಂಡು ಉಂಡೆಹೆನೆಂಬ ಜಗಭಂಡೆಯ ನೋಡಾ. ಕೂಟಕ್ಕೆ ಪುರುಷನಾಗಿ ನೇಮಕ್ಕೆ ಒಡೆತನವುಂಟೆ? ಇಂತೀ ಜಾರೆಯ ನೇಮ ಮೂತ್ರದ ದ್ವಾರಕ್ಕೆ ಈಡು. ಇಂತೀ ಸಂಸಾರದ ಘಾತಕತನದ ವ್ರತ ಮೀಸಲ ಶುನಕ ಮುಟ್ಟಿದಂತೆ ಅದು ಏಲೇಶ್ವರಲಿಂಗಕ್ಕೆ ದೂರ.
--------------
ಏಲೇಶ್ವರ ಕೇತಯ್ಯ
ತಂದೆಯ ಮಗ ಕರೆದು, ಮಗನ ತಂದೆ ಕರೆದು, ಭಾವನ ಮೈದುನ ಕರೆದು, ಮೈದುನನ ಭಾವ ಕರೆದು, ತಮ್ಮ ಬಂಧುಗಳ ಜಂಗಮವೆಂದು ಕೂಡಿಕೊಂಡು ಉಂಬ ಜಗಭಂಡರ ನೇಮ ಸುಸಂಗವಲ್ಲ, ಏಲೇಶ್ವರಲಿಂಗಕ್ಕೆ.
--------------
ಏಲೇಶ್ವರ ಕೇತಯ್ಯ
ಸರ್ವಾಂಗವಾಡ, ಮುಖವಾಡ, ಆತ್ಮವಾಡ_ ಇಂತೀ ವ್ರತನೇಮದ ಕಟ್ಟಿನಲ್ಲಿ ಇಪ್ಪನಿರವು: ತನ್ನ ನೇಮಕ್ಕೆ ನೇಮವ ಅಂಗೀಕರಿಸಿದವನಲ್ಲಿ ಅಂಗಬಂಧವ ತೆಗೆದು ತೋರುವುದು, ಮುಖಬಂಧವ ತೆಗೆದು ನೋಡುವುದು, ಆತ್ಮಬಂಧವ ಬಿಟ್ಟು ಮಾತನಾಡುವುದು. ಇಂತೀ ಭಾಷೆಗೆ ಭಾಷೆ ಒಳಗಾದವನಲ್ಲಿ ಇದು ನಿಹಿತದ ವ್ರತ ಏಲೇಶ್ವರಲಿಂಗಕ್ಕೆ
--------------
ಏಲೇಶ್ವರ ಕೇತಯ್ಯ
ಉಂಡವರ ನೋಡಿ, ತಮ್ಮ ಬಂಧುಗಳ ನೋಡಿ, ಅವರು ಜಂಗಮವೆಂದು, ತನ್ನ ಸಂದೇಹದ ಕಟ್ಟಳೆಯವರೆಂದು ಮಾಡುವ ಲಂದಣಿಗರ ಜಗಭಂಡರ ಒಡೆಯರ ಕಟ್ಟಳೆ, ವ್ರತದಂಗದ ಸಂಗವಲ್ಲ, ಏಲೇಶ್ವರಲಿಂಗಕ್ಕೆ ದೂರ.
--------------
ಏಲೇಶ್ವರ ಕೇತಯ್ಯ
ಸದ್ಭಾವವ್ರತಿ, ವೀರವ್ರತಿ, ಧೀರವ್ರತಿ, ದೃಷ್ಟವ್ರತಿ, ನಿಷೆ*ಯವ್ರತಿ, ಸರ್ವಜ್ಞಾನವ್ರತಿ, ಸಂತೋಷವ್ರತಿ, ಸಂಬಂಧವ್ರತಿ, ಸಂಪದವ್ರತಿ, ಸರ್ವಾಂಗವ್ರತಿ, ಪರಿಪೂರ್ಣವ್ರತಿ, ಸರ್ವಜೀವದಯಾವ್ರತಿ, ಸಕಲವ್ರತಿ, ನಿಃಕಲವ್ರತಿ, ಪರವ್ರತಿ, ಪರಬ್ರಹ್ಮವ್ರತಿ, ಪರತತ್ತ್ವವ್ರತಿ, ಪರವಸ್ತುವ್ರತಿ, ಪಿಂಡವ್ರತಿ, ಪಿಂಡಜ್ಞಾನವ್ರತಿ, ಸ್ಥೂಲವ್ರತಿ, ಸೂಕ್ಷ್ಮವ್ರತಿ, ಕಾರಣವ್ರತಿ, ಅಂಗವ್ರತಿ, ಲಿಂಗವ್ರತಿ, ಧನವ್ರತಿ, ಧಾನ್ಯವ್ರತಿ, ದೃಕ್ಕಿಂಗೊಳಗಾದ, ತನ್ನ ಕ್ರೀಗನುಕೂಲವಾದ ಸಂಬಂಧವ್ರತಂಗಳ ಆರೋಪಿಸಿ ನಿಂದಲ್ಲಿ ನಾನಾ ಸಮೂಹದ ಸತ್ಕ್ರೀಗಳನರಿತು, ರೋಚಕ ಅರೋಚಕ ಮಾರ್ಗ ಅಮಾರ್ಗದ ಉಭಯದ ತತ್ತನರಿದು ಸಕ್ರೀಯ ಆದಿಯನರಿದು, ನಿಃಕ್ರೀಯ ನಿಜವ ಭೇದಿಸಿ ಕಂಡು ಸರ್ವದಯಾಸಂಪನ್ನನಾಗಿ ಸರ್ವಾಂಗಲಿಂಗಿಯಾಗಿ ಸಕಲವ್ರತಮಹಾರಾಜ್ಯಸ್ಥನಾಗಿ ನಿಂದ ಏಲೇಶ್ವರಲಿಂಗಕ್ಕೆ ನಾನಿಳಿದ ಬಂಟ. ವ್ರತವನರಿದು ಮರೆದವರ ಸ್ವಪ್ನದಲ್ಲಿ ಕಂಡಡೆ ಅವರಿಗಿಕ್ಕಿದ ತೊಡರು ಎಲೆದೊಟ್ಟ ನುಂಗಿದೆನು.
--------------
ಏಲೇಶ್ವರ ಕೇತಯ್ಯ
ಇಷ್ಟ ಬಿದ್ದಲ್ಲಿ ಎತ್ತಿ ಕಟ್ಟಿಕೊಳಲಾಗದು. ವ್ರತ ಕೆಟ್ಟುದ ಕಂಡು, ಇನ್ನು ತಪ್ಪೆನೆಂದಡೆ ಒಪ್ಪಿ ಕೂಡಿಕೊಳ್ಳಬಾರದು. ಸತಿ ಕೆಟ್ಟು ನಡೆದುದ ಕಂಡು ಆ ಗುಣ ಶುನಕಸ್ವಪ್ನದಂತೆ. ಇಂತೀ ಇವ ಕಂಡು ಮತ್ತೆ ಹಿಂಗದಿದ್ದೆನಾದಡೆ ಇಹಪರಕ್ಕೆ ಹೊರಗು, ಏಲೇಶ್ವರಲಿಂಗಕ್ಕೆ ದೂರ.
--------------
ಏಲೇಶ್ವರ ಕೇತಯ್ಯ
ವ್ರತಸ್ಥನಾಗಿ ಭವಿಗಳ ಕೆಳಗೆ ಬೊಕ್ಕಸ ಭಂಡಾರ ಅಸಿ ಕೃಷಿ ವಾಣಿಜ್ಯ ಮುಂತಾದ ಕಾಯಕವ ಬಿಟ್ಟು, ತನ್ನ ಸ್ವಕಾಯಕದಿಂದ ಬಂದು ಒದಗಿದ ದ್ರವ್ಯವ ಒಡೆಯನ ಮುಂದಿಟ್ಟು, ತಾನೊಡಗೂಡಿ ಕೊಂಡ ಪ್ರಸಾದಿಯ ಪ್ರಸಾದವ ಎನ್ನೊಡೆಯನ ಮುಂದಿಟ್ಟು ಏಲೇಶ್ವರಲಿಂಗಕ್ಕೆ ಕೊಡುವೆನು.
--------------
ಏಲೇಶ್ವರ ಕೇತಯ್ಯ
ವ್ರತಸಂಬಂಧಭಾವಿ ಒಡೆಯರು ಭಕ್ತರ ಮನೆಗೆ ಒಡಗೂಡಿ ಹೋಗಿ ಅವರ ಮಡದಿಯರ ಕಂಡು ಮನವ ಬಿಡೆಯವ ಮಾಡಿದಡೆ, ಅವರೊಡವೆಗೆ ವಂಚಿಸಿದಡೆ, ಸುಡುವನೊಡಲ. ಅವ ಮೃಡಭಕ್ತನಲ್ಲ, ಇಹ ಪರಕ್ಕೆ ದೂರ, ಏಲೇಶ್ವರಲಿಂಗಕ್ಕೆ ಮುನ್ನವೆ ದೂರ.
--------------
ಏಲೇಶ್ವರ ಕೇತಯ್ಯ
ಪರಪಾಕದ್ರವ್ಯವ ಬಿಟ್ಟಲ್ಲಿ ಬಹುಜಲ, ಹರಿವ ಜಲ ಮುಂತಾದ ಬಹು ನಿರೀಕ್ಷಣೆಯಾದ ಜಲಂಗಳ ಮುಟ್ಟಲಿಲ್ಲ. ಇಂತೀ ಪಾಕ ತಮ್ಮಾಯತ[ವೆ], ಉದಕ ಅನ್ಯರಾಯತವೆ? ಮೊಲೆಯ ಮುಚ್ಚಿ ಸೀರೆಯ ತೆರೆದಲ್ಲಿ ಅಪಮಾನವೆಲ್ಲಿ ಅಡಗಿತ್ತು? ಇಂತೀ ವ್ರತದಂಗವ ನೀವೆ ಬಲ್ಲಿರಿ. ಇದು ಏಲೇಶ್ವರಲಿಂಗಕ್ಕೆ ಒಪ್ಪದ ಕ್ರೀ.
--------------
ಏಲೇಶ್ವರ ಕೇತಯ್ಯ
ಇನ್ನಷ್ಟು ... -->