ಅಥವಾ

ಒಟ್ಟು 15 ಕಡೆಗಳಲ್ಲಿ , 5 ವಚನಕಾರರು , 9 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಷ್ಟವಿಧಾರ್ಚನೆ ಷೋಡಶೋಪಚಾರವಲ್ಲದೆ ನಿಮ್ಮ ಮುಟ್ಟಲರಿಯದರ ಕಂಡಡೆ, ಅಯ್ಯ ಎಂತೆಂಬೆನವರ ಆವ ಭಾವದಲ್ಲಿ, ಆವ ಜ್ಞಾನದಲ್ಲಿ, ಆವ ಮುಖದಲ್ಲಿ ಅರಿವವರದಾರಯ್ಯಾ ಏನೆಂಬೆ ನಿಮ್ಮಲ್ಲಿ ಸಮ್ಯಕ್ಕರಾದ ಸತ್ಯಶರಣರ ಕಂಡು, ಕೂಡಲಸಂಗಮದೇವಾ, ಅವರನಯ್ಯ ಎಂಬೆನು.
--------------
ಬಸವಣ್ಣ
ಕಾಯದೊಳಗೆ ಕರುಳುಳ್ಳನ್ನಕ್ಕರ ಹಸಿವು ಮಾಣದು. ಕಾಯದೊಳಗಣ ಕರುಳ ತೆಗೆದು ಕಂಗಳ ಮೇಲಿರಿಸಿ ಇದನಡಿಗೆಯ ಮಾಡಿ ಗಡಣಿಸುತ್ತಿದ್ದೆ, ಏನೆಂಬೆ ಗುಹೇಶ್ವರಾ ?
--------------
ಅಲ್ಲಮಪ್ರಭುದೇವರು
ಅಟ್ಟಿ ಮುಟ್ಟಲಿಲ್ಲ, ಮುಟ್ಟಿ ಮರಳಲಿಲ್ಲ, ಏನೆಂಬೆ ಲಿಂಗವೆ, ಎಂತೆಂಬೆ ಲಿಂಗಯ್ಯಾ ? ನಿಜವನರಿದ ಬಳಿಕ ಮರಳಿ ಹುಟ್ಟಲಿಲ್ಲ, ಕಾಣಾ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ತಮ್ಮ ತಾವರಿಯರು ಹೇಳಿದಡೂ ಕೇಳರು. ಆರರ ಹೊಲಬ ಏನೆಂದರಿಯರು. ಎಂಟರ ಕಂಟಕವ ಮುನ್ನರಿಯರು. ಏರಿದ ಬೆಟ್ಟವ ಇಳಿಯಲರಿಯದವರ ಏನೆಂಬೆ ಗುಹೇಶ್ವರಾ ?
--------------
ಅಲ್ಲಮಪ್ರಭುದೇವರು
ಆರೈದು ಕಾಣುವುದಕ್ಕೆ ಸ್ಥಾಣು ಕರ್ತನಲ್ಲ. ನೋಯಿಸದೆ ಕಾಬುದಕ್ಕೆ ಆರಡಿಯಲ್ಲ. ನೋಯದೆ ಕೊಂಬುದಕ್ಕೆ ಪಿಪೀಲಿಕನಲ್ಲ, ಬಂಧಿಸಿ ಕಾಬುದಕ್ಕೆ ಚಂದನ ಶಿಲೆಯಲ್ಲ. ಭಕ್ತಿಯೆಂಬ ಅಂಗದ ಸತಿ ನಾನಾಗಿ, ವಿರಕ್ತಿಯೆಂಬ ಘನಲಿಂಗದ ಕೂಟಪುರುಷ ನೀನಾಗಿ, ಇಂತೀ ಉಭಯದಿಂದ ಒದಗಿದ ರೂಪು ನಾಮವ ಏನೆಂಬೆ ? ಅಲೇಖನಾದ ಶೂನ್ಯ ಕಲ್ಲಿನ ಹಂಗು ಬಿಡು, ಬೇಡಿಕೊಂಬೆ.
--------------
ವಚನಭಂಡಾರಿ ಶಾಂತರಸ
ಏನೆಂಬೆ ಏನೆಂಬೆ ಕೊಟ್ಟ ದೇವರಂದವ ! ಮನದಲ್ಲಿ ಘನಲಿಂಗವಾಯಿತ್ತು, ಧ್ಯಾನದಲ್ಲಿ ಭಾವಲಿಂಗವಾಯಿತ್ತು, ನೇತ್ರದಲ್ಲಿ ಶಿವಲಿಂಗವಾಯಿತ್ತು, ಹೃದಯದಲ್ಲಿ ಮಹಾಲಿಂಗವಾಯಿತ್ತು, ಎನ್ನ ಕರಸ್ಥಲದಲ್ಲಿ ಇಷ್ಟಲಿಂಗವಾಗಿ ಅಳವಟ್ಟಿತ್ತು. ಎಲೆ ಕಪಿಲಸಿದ್ಧಮಲ್ಲಿಕಾರ್ಜುನಾ, ಎಲ್ಲ ಕಡೆಯಲ್ಲಿ ಪರಾತ್ಪರ ವಸ್ತುವಾಗಿ, ಚೆನ್ನಬಸವಣ್ಣನಾಗಿ, ನಾನು ಮರೆದೆನಯ್ಯಾ ಎನ್ನ ನಾಮವ, ನೋಡಯ್ಯಾ ಪ್ರಭುವೆ.
--------------
ಸಿದ್ಧರಾಮೇಶ್ವರ
ಕ್ರಿಯೆ ಜಡವೆಂಬರು, ಜ್ಞಾನ ಅಜಡವೆಂಬರು ಅದೆಂತಯ್ಯಾ ? ನೀತಿಯ ಹೇಳಿದುದು ಜಡವೆ ? ಕಷ್ಟವಿಲ್ಲದೆ ಬಂದಂತೆ ಬೊಗಳಿ ಭೋಗಿಸಿ ಭವಕ್ಕೆ ಹೋಗುವುದು ಅಜಡವೆ ? ಕ್ರಿಯಾ-ಜ್ಞಾನವೆಂಬ ಉಭಯ ಶಬ್ದಾರ್ಥವನರಿಯದೆ ಕಂಡ ಕಂಡ ಹಾಗೆ ಬೊಗಳುವ ಹೊಲೆಮಾದಿಗರನು ಏನೆಂಬೆ ಕೂಡಲಚೆನ್ನಸಂಗಮದೇವಾ ?
--------------
ಚನ್ನಬಸವಣ್ಣ
ಅನುಭಾವ ಅನುಭಾವವೆಂದೆಂಬರು ಅನುಭಾವವೆಂಬುದು ನೆಲದ ಮರೆಯ ನಿಧಾನ ಕಾಣಿರೋ ಅನುಭಾವವೆಂಬುದು ಅಂತರಂಗದ ಶುದ್ಧಿ ಕಾಣಿರೋ. ಅನುಭಾವವೆಂಬುದು ರಚ್ಚೆಯ ಮಾತೆ ? ಅನುಭಾವವೆಂಬುದು ಸಂತೆಯ ಸುದ್ದಿಯೆ ? ಅನುಭಾವವೆಂಬುದೇನು ಬೀದಿಯ ಪಸರವೆ ? ಏನೆಂಬೆ ಹೇಳಾ ಮಹಾಘನವ ! ಆನೆಯ ಮಾನದೊಳಗಿಕ್ಕಿದರಡಗೂದೆ ದರ್ಪಣದೊಳಗಡಗೂದಲ್ಲದೆ ? ಕಂಡ ಕಂಡಲ್ಲಿ ಗೋಷಿ*, ನಿಂದ ನಿಂದಲ್ಲಿ ಅನುಭಾವ, ಬಂದ ಬಂದಲ್ಲಿ ಪ್ರಸಂಗವ ಮಾಡುವ ನಿರ್ಬುದ್ಧಿ ನೀಚರ ಮೆಚ್ಚ ಕೂಡಲಚೆನ್ನಸಂಗಮದೇವ.
--------------
ಚನ್ನಬಸವಣ್ಣ
ಏನೆಂಬೆ, ಏನೆಂಬೆ ಒಂದೆರಡಾದುದ ಏನೆಂಬೆ, ಏನೆಂಬೆ ಎರಡೊಂದಾದುದ ಏನೆಂಬೆ, ಏನೆಂಬೆ ಅವಿರಳ ಘನವ ಮಹಾದಾನಿ ಕೂಡಲಸಂಗಮದೇವಯ್ಯ ತಾನೆ ಬಲ್ಲ.
--------------
ಬಸವಣ್ಣ
-->