ಅಥವಾ

ಒಟ್ಟು 59 ಕಡೆಗಳಲ್ಲಿ , 22 ವಚನಕಾರರು , 47 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮಿಂಚುಬುಳು ಒಮ್ಮೆ ಪ್ರಚಂಡ ತೇಜೋಮಯ ಸೂರ್ಯಂಗೆ ಸರಿಯಾದಂದು, ಹರಿ ಹರಂಗೆ ಸರಿಯಹನು. ಕಹಿಬೇವಿನ ಕೊರಡು ಬಾವನ್ನ ಶ್ರೀಗಂಧಕ್ಕೆ ಸರಿಯಾದಂದು, ವಿರಿಂಚಿ ಗಿರೀಶಂಗೆ ಸರಿಯಹನು. ಅಜ್ಞಾನ ಸುಜ್ಞಾನಕ್ಕೆ ಸರಿಯಾದಂದು, ವಜ್ರಪಾಣಿ ಮೊದಲಾದ ದೇವ ದಾನವ ಮಾನವರು ಶೂಲಪಾಣಿಗೆ ಸರಿಯಹರು. ಏನ ಹೇಳುವೆ, ಅಜ್ಞಾನಿ ಜನರ ಅಜ್ಞಾನಪ್ರಬಲ ಚೇಷ್ಟೆಯನು ? ಅದೆಂತೆಂದಡೆ: ಖದ್ಯೋತೋಯದಿ ಚಂಡಭಾನು ಸದೃಶಸ್ತುತ್ಯೋ ಹರಿಃ ಶಂಭುನಾ ಕಿಂ ಕಾಷ್ಠಂ ಹರಿಚಂದನೇನ ಸದೃಶಂ ತುಲ್ಯೋಹಮೀಶೇನ ಚ | ಅಜ್ಞಾನಂ ಯದಿ ವೇದನೇನ ಸದೃಶಂ ದೇವೇನ ತುಲ್ಯೋ ಜನಾ ಕಿಂ ವಕ್ಷ್ಯೇ ಸುರಪುಂಗವಾ ಅಹಮಹೋಮೋಹಸ್ಯದುಶ್ಚೇಷ್ಟಿತಂ ನಿಮಗೆ ಸರಿಯೆಂಬವರಿಗೆ ನರಕವೆ ಗತಿಯಯ್ಯಾ, ಬಸವಪ್ರಿಯ ಕೂಡಲಸಂಗಮದೇವಾ.
--------------
ಸಂಗಮೇಶ್ವರದ ಅಪ್ಪಣ್ಣ
ಏನನೋದಿ ಏನ ಕೇಳಿ ಏನ ಹೇಳಿದಡೆ ಏನು ಫಲ ತನ್ನಲ್ಲಿದ್ದ ವಸ್ತುವ ತಾನರಿಯದನ್ನಕ್ಕ? ಚಿನ್ನದ ತೊಡಹದ ತಾಮ್ರದಂತೆ ಒಳಗೆ ಕಾಳಿಕೆ ಬಿಡದು. ನುಣ್ಣಗೆ ಬಣ್ಣಗೆ ನುಡಿವ ಅಣ್ಣಗಳೆಲ್ಲರು ಕಣ್ಣು ಕಾಣದೇ ಕಾಡಬಿದ್ದರು. ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ, ನಿಮ್ಮನರಿಯದ ಅಂಧಕರೆಲ್ಲರು.
--------------
ಸ್ವತಂತ್ರ ಸಿದ್ಧಲಿಂಗ
ತನ್ನ ವಿಚಾರಿಸಲೊಲ್ಲದು, ಇದಿರ ವಿಚಾರಿಸಹೋಹುದೀ ಮನವು. ಏನ ಮಾಡುವೆನೀ ಮನವನು, ಎಂತು ಮಾಡುವೆನೀ ಮನವನು. ಕೂಡಲಸಂಗಮದೇವನ ಶರಣರ ನಚ್ಚದ ಮಚ್ಚದ ಬೆಂದ ಮನವನು. 38
--------------
ಬಸವಣ್ಣ
ಉಕ್ಕುದ ಕೊಂಬನ್ನಬರ ಭೃತ್ಯಾಚಾರ ಭಕ್ತಂಗೆ. ಉಕ್ಕುದನಿಕ್ಕಿದಲ್ಲಿ ಅವನ ಅರ್ಥಪ್ರಾಣ ಅಬ್ಥಿಮಾನಕ್ಕೆ ತಪ್ಪುವನಾದಡೆ ಕರ್ತೃತ್ವ ಮೊದಲೆ ಕೆಟ್ಟಿತ್ತು, ಜಂಬುಕಫಲದ ನೇಮವ ಹಿಡಿದಂತಾಯಿತ್ತು, ಅದರಂಗವ ಕಂಡು ನಿಂದಿಸಿದ ಭಕ್ತಂಗೆ. ಬಾಗಿಲ ಪೂಜಿಸಿದ ಜಾರೆ ಲಕ್ಷಣದಂತಾಗಬೇಡ. ನೆರೆ ನಂಬು ಏನ ಹಿಡಿದಲ್ಲಿ, ಕಾಲಾಂತಕ ಬ್ಥೀಮೇಶ್ವರಲಿಂಗವನರಿಯಬಲ್ಲಡೆ.
--------------
ಡಕ್ಕೆಯ ಬೊಮ್ಮಣ್ಣ
ಗಂಗೆವಾಳುಕ ರುದ್ರರೆಲ್ಲರು ಅಂಗವರತು ಲಿಂಗವನರಿದಲ್ಲದೆ, ಅಂಗಗುಣವರಿಯದೆ, ಲಿಂಗತ್ರಯವೆಂಬುದ ಸಂಘಟಿಸಲರಿಯದೆ, ನಿಂದು ಕಾಬ ನೆಲೆಯಿನ್ನೆಂತು ? ಮಾತ ಕಂಡಾಡಿದಲ್ಲಿ ವಾಗದ್ವೈತಿ. ಬಳಗನರಿದು ಪೂಜಿಸುವಲ್ಲಿ ಡಂಬಕಧಾರಿ. ಏನ ಮುಟ್ಟಿದಲ್ಲಿ ಕೇಡಿಲ್ಲಾ ಎಂದು ಮನ ಬ್ರಹ್ಮವನಾಡಿ, ಮನುಜರಂತೆ ಹರಿದಾಡುತ್ತ, ಗಂಪವ ಕೂಡಿಕೊಂಡು, ಶಂಕೆಯಿಲ್ಲಾಯೆಂದು ನಿಶ್ಶಂಕೆಯ ನುಡಿಯಬಹುದೆ ಅಯ್ಯಾ ? ನಡೆ ನುಡಿ ಸಿದ್ಧಾಂತವಾದಲ್ಲಿ, ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವು ಅವರಲ್ಲಿ ಪ್ರಸಿದ್ಧವಾಗಿಪ್ಪನು.
--------------
ಶಿವಲೆಂಕ ಮಂಚಣ್ಣ
ಅಂಗದ ಮೇಲೆ ಲಿಂಗವಿಪ್ಪ ಶಿವಭಕ್ತನ ಕಂಡರೆ ಸಂಗಯ್ಯನ ಸಮವೆಂಬೆನಯ್ಯಾ. ಲಿಂಗವಿಲ್ಲದೆ ನಾಲ್ಕು ವೇದವನೋದುವ ವಿಪ್ರನಾದರೂ ಆಗಲಿ, ಹೊಲೆಮಾದಿಗರೇಳು ಜಾತಿಗಿಂತ ಕಡೆಯೆಂಬೆನಯ್ಯಾ. ತಾಯಿಲ್ಲದ ಮಕ್ಕಳಂತೆ, ಗಂಡನಿಲ್ಲದ ಮುಂಡೆಗೆ ಮುತ್ತೈದೆತನವುಂಟೇನಯ್ಯಾ ? ಲಿಂಗವಿಲ್ಲದ ಭವಿ ಏನನೋದಿ ಏನ ಹಾಡಿದರೂ ವ್ಯರ್ಥ. ಸಾಕ್ಷಿ :``ಮಾತಾ ನಾಸ್ತಿ ಯಥಾ ಸುತಂ ಪತಿರ್ನಾಸ್ತಿ ಯಥಾ ನಾರೀ | ಲಿಂಗಂ ನಾಸ್ತಿ ಯಥಾ ಪ್ರಾಣಂ ತಸ್ಯ ಜನ್ಮ ನಿರರ್ಥಕಂ ||'' ಇಂತೆಂಬುದನರಿಯದೆ ವಾಗದ್ವೈತದಿಂದ ತನುಲಿಂಗ ಮನಲಿಂಗ ಪ್ರಾಣಲಿಂಗವೆಂಬ ಹೊಲೆಯರ ಮುಖವನೆನಗೊಮ್ಮೆ ತೋರದಿರಯ್ಯಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಲಿಂಗವನರಿದು ಲಿಂಗಾರ್ಚನೆಯ ಮಾಡಿ ಗುರು ಲಿಂಗ ಜಂಗಮಕ್ಕೆ, ತನು ಮನ ಧನವ ನಿವೇದಿಸಿ ಲಿಂಗವನಲ್ಲದೆ ಅನ್ಯವನರಿಯದಿಪ್ಪ ಮಹಾಮಹಿಮನು. ಆತನ ನುಡಿಯೇ ವೇದ, ಆತನ ನಡೆಯೇ ಆಗಮ, ಆತ ಮಾಡಿತ್ತೇ ಶಾಸ್ತ್ರ, ಆತ ಹೇಳಿತ್ತೇ ಪುರಾಣ, ಆತನಿದ್ದುದೇ ದೇವಲೋಕ. ಆತನುಪಮಾತೀತನು, ಆತನ ದರ್ಶನ ಸ್ಪರ್ಶನದಿಂದ ಪಾಪಕ್ಷಯ. ಆತನ ಪಾದೋದಕಸೇವನೆಯೊಳೆಲ್ಲರು ಜೀವನ್ಮಕ್ತರು ಕೇಳಿರಣ್ಣ. ಆ ಮಹಾಮಹಿಮನ ಶ್ರುತ ದೃಷ್ಟ ಅನುಮಾನದಿಂದ ವಿಚಾರಿಸಿ ನೋಡಿರಣ್ಣ, ಬಸವರಾಜದೇವರು ಮೊದಲಾದ ಪುರಾತನರ ಚರಿತ್ರವನು. ಅವರು ಲಿಂಗವನರಿದು ಲಿಂಗಾರ್ಚನೆಯ ಮಾಡಿ ಗುರು ಲಿಂಗ ಜಂಗಮಕ್ಕೆ ತನು ಮನ ಧನವನರ್ಪಿಸಿ ಅಹುದೆನಿಸಿಕೊಂಡರಲ್ಲವೆ ? ಇದನರಿತು ಆವನಾನೊಬ್ಬನು ಆಷ್ಟಾದಶವಿದ್ಯೆ ಪುರಾಣವನೋದಿ ಕೇಳಿ ಹೇಳಿದರೇನೋ ಗಿಣಿ ಓದಿದಂತೆ ? ಸರ್ವಸಂಗಪರಿತ್ಯಾಗಿಯಾಗಿ ಅರಣ್ಯದೊಳಗಿದ್ದಡೇನು, ವನಚರವ್ಯಾಧನಂತೆ ? ಭೂಪ್ರದಕ್ಷಿಣೆ ಮಾಡಿ ಬಂದಡೇನು, ಮೃಗದಂತೆ ? ಅಶನವ ಬಿಟ್ಟಡೇನು, ಪರಾಕಿಯಂತೆ ? ವಿಷಯವ ಬಿಟ್ಟಡೇನು, ಅಶಕ್ತನಪುಂಸಕನಂತೆ ? ನಿದ್ರೆಯ ಬಿಟ್ಟಡೇನು, ಜಾರಚೋರರಂತೆ ? ಸಾಮಥ್ರ್ಯಪುರುಷರೆನಿಸಿ ಖೇಚರತ್ವದಲ್ಲಿದ್ದಡೇನು, ಪಕ್ಷಿಗಳಂತೆ ? ಜಲದಲ್ಲಿ ಚರಿಸಿ ಸಮುದ್ರಲಂಘನೆಯ ಮಾಡಿದಡೇನು, ಮತ್ಸ್ಯಾದಿಗಳಂತೆ ? ದಾನಾದಿಗಳ ಮಾಡಿದಡೇನು, ಕ್ಷತ್ರಿಯನಂತೆ ? ಏನ ಮಾಡಿದಡೇನು ? ಏನ ಕೇಳಿದಡೇನು ? ಸಾಮಾಥ್ರ್ಯಪುರುಷರೆನಿಸಿಕೊಂಡರೇನು ? ಫಲವಿಲ್ಲ, ಭಕ್ತಿಗೆ ಸಲ್ಲದು, ಮುಕ್ತಿಗೆ ಸಲ್ಲದು. ಇದರಿದು ಶಿವಲಿಂಗಾರ್ಚನೆಯ ಮಾಡುವುದು ಗುರು ಲಿಂಗ ಜಂಗಮಕ್ಕೆ ತನು ಮನ ಧನವ ನಿವೇದಿಸುವುದು. ನಿವೇದಿಸಿದಡೆ ಸರ್ವಸಿದ್ಧಿಯಹುದು. ಸಕಲಲೋಕಕ್ಕೆ ಪೂಜ್ಯನಹ, ಇದೇ [ಸ]ಲುವ ಯುಕ್ತಿ, ಇದೆ ಸದ್ಭಕ್ತಿ, ಇದೇ ಕೇವಲ ಮುಕ್ತಿ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಗಜ ಗಮನ, ಅಹಿತ ಶರಸಂಧಾನ, ಮಯೂರನ ಶಯನ, ಮಾರ್ಜಾಲನ ಧ್ಯಾನ, ಕಂಠೀರವನ ಲಾಗು, ಬಕಮೂರ್ತಿಯ ಅನುಸಂಧಾನ, ಅಳಿಯ ಗಂಧ ಭುಂಜನೆ, ಮಧು ಮಕ್ಷಿಕದ ಘೃತಗೊಡ ವಾಸ, ಮೂಷಕದ ದ್ವಾರಭೇದ, ಮರೆವಾಸವೈದುವ ಸಂಚ, ಚೋರನ ಕಾಹು, ಪರಿಚಾರಕನ ವೇಳೆ, ಸಾಹಿತ್ಯನ ಉಪಮೆ, ಸಂಗೀತರ ಸಂಚು, ತಾಳಧಾರಿಯ ಕಳವು, ವಾದ್ಯಭೇದಕನ ಮುಟ್ಟು, ಘ್ರಾಣನ ಹರಿತ, ಭಾವಜ್ಞನ ಚಿತ್ತ . ಇಂತೀ ನಾನಾ ಗಣಂಗಳ ಲಕ್ಷಾಲಕ್ಷಿತವ ತಿಳಿದು, ಶ್ರುತ ದೃಷ್ಟ ಅನುಮಾನ ಮುಂತಾದ ನಾನಾ ಭೇದಂಗಳಲ್ಲಿ ವಿಚಾರಿಸಿ ಕಂಡು, ನಾನಾರೆಂಬುದದೇನೆಂದು ತಿಳಿದು, ತನಗೂ ಇದಿರಿಂಗೂ ಪಡಿಪುಚ್ಚವಿಲ್ಲದೆ, ಸಿಂಧುವಿನೊಳಗಾದ ಸಂಭ್ರಮಂಗಳ ಸಂಚಾರದ ಅಂಗವೆಲ್ಲ ಹೋಗಿ ನಿರಂಗವಾದಂತೆ. ಅಂಗವಾತ್ಮನ ಸಂಗ, ಈ ಅಂಗವೆಂದು ತಿಳಿದು, ಆವ ಸ್ಥಲವನಂಗೀಕರಿಸಿದಲ್ಲಿಯೂ ಪರಿಪೂರ್ಣವಾಗಿ ಏನ ಹಿಡಿದಲ್ಲಿಯೂ ತಲೆವಿಡಿಯಿಲ್ಲದೆ ಏನ ಬಿಟ್ಟಲ್ಲಿಯೂ ಕುಳವಿಡಿಯಿಲ್ಲದೆ ಕರ್ಪುರ ಮಹಾಗಿರಿಯ ಸುಟ್ಟಡೆ ಒಕ್ಕುಡಿತೆ ಬೂದಿ ಇಲ್ಲದಂತೆ, ಚಿತ್ತನಿಶ್ಚಯವಾದ ಸದ್ಭಕ್ತ ಪರಮ ವಿರಕ್ತನ ಇರವು ಇದು. ಎನ್ನೊಡೆಯ ಚೆನ್ನಬಸವಣ್ಣನ ಹರವರಿಯ ತೆರನಿದು. ಸಾಧ್ಯ ಮೂವರಿಗಾಯಿತ್ತು , ಅಸಾಧ್ಯವಸಂಗತ. ನಿಃಕಳಂಕ ಕೂಡಲಚೆನ್ನ ಸಂಗಮದೇವರೆಂದರಿದವಂಗೆ ಅಸಾಧ್ಯ ಸಾಧ್ಯವಾಯಿತ್ತು ?
--------------
ಹಡಪದ ರೇಚಣ್ಣ
ದ್ವೈತಾದ್ವೈತವನೋದಿ ಏನ ಮಾಡುವಿರಯ್ಯಾ ನಮ್ಮ ಶರಣರಿಗುರಿ[ಯ]ರಗಾಗಿ ಕರಗದನ್ನಕ್ಕ, ಸ್ಥಾವರ ಜಂಗಮವೊಂದೆ ಎಂದು ನಂಬದನ್ನಕ್ಕ. ಕೂಡಲಸಂಗಮದೇವಾ, ಬರಿಯ ಮಾತಿನ ಮಾಲೆಯಲೇನಹುದು 191
--------------
ಬಸವಣ್ಣ
ಹೊಲೆಗಂಡಲ್ಲದೆ ಪಿಂಡದ ನೆಲೆಗಾಶ್ರಯವಿಲ್ಲ ಜಲ-ಬಿಂದುವಿನ ವ್ಯವಹಾರ ಒಂದೇ, ಆಶೆಯಾಮಿಷರೋಷಹರುಷ ವಿಷಯಾದಿಗಳೆಲ್ಲಾ ಒಂದೇ. ಏನನೋದಿ, ಏನ ಕೇಳಿ, ಏನು ಫಲ ಕುಲಜನೆಂಬುದಕ್ಕೆ ಆವುದು ದೃಷ್ಟ ಸಪ್ತಧಾತುಸಮಂ ಪಿಂಡಂ ಸಮಯೋನಿಸಮದ್ಭವಂ ಆತ್ಮಜೀವಸಮಾಯುಕ್ತಂ ವರ್ಣಾನಾಂ ಕಿಂ ಪ್ರಯೋಜನಂ ಎಂದುದಾಗಿ, ಕಾಸಿ ಕಮ್ಮಾರನಾದ, ಬೀಸಿ ಮಡಿವಾಳನಾದ, ಹಾಸನಿಕ್ಕಿ ಸಾಲಿಗನಾದ, ವೇದವನೋದಿ ಹಾರುವನಾದ. ಕರ್ಣದಲ್ಲಿ ಜನಿಸಿದರುಂಟೆ ಜಗದೊಳಗೆ ಇದು ಕಾರಣ ಕೂಡಲಸಂಗಮದೇವಾ, ಲಿಂಗಸ್ಥಲವನರಿದವನೆ ಕುಲಜನು.
--------------
ಬಸವಣ್ಣ
ಕೆಡೆ ನಡೆಯದೆ, ಕೆಡೆ ನುಡಿಯದೆ, ಅನ್ಯರ ಪ್ರತಿಪಾದಿಸದಿದ್ದಡೆ ಏನ ಮಾಡನಯ್ಯಾ ಲಿಂಗವು ಏನ ಕೊಡನಯ್ಯಾ ತಾನು ಏನ ಬೇಡಿದುದನೀವನಾಗಿ, ನಂಬುಗೆಯುಳ್ಳ ಶಿವಭಕ್ತಂಗೆ ಇದೇ ದಿಬ್ಯ, ಕೂಡಲಸಂಗಮದೇವಾ. 236
--------------
ಬಸವಣ್ಣ
ನಿಚ್ಚ ಕನಸಿನಲ್ಲಿ ಅಶ್ವಮೇಧ ಬ್ರಹ್ಮಹತ್ಯವ ಮಾಡಿದಡಂ ಎಂತು ನಡೆದಡಂ ದೇವದತ್ತಂಗೆ ಗುಣದೋಷವುಂಟೆ? ಸ್ವರ್ಗನರಕವುಂಟೆ ಹೇಳಾ? ಅದೆತ್ತಣ ಮಾತೊ! ಕನಸು ತಾ ಮಿಥ್ಯೆಯಪ್ಪುದರಿಂ ಮಾಯಾಮಯ. ಈ ಮಾಯೆಯನರಿದು ಹುಸಿ ಜೀವಭಾವದಿಂದ ಏನ ಮಾಡಿದಡೇನೋ ಸಿಮ್ಮಲಿಗೆಯ ಚೆನ್ನರಾಮಾ.
--------------
ಚಂದಿಮರಸ
ಮೃಗಾದಿಗಳಂತೆ [ಆಚರಿಸಿದಡೇನುರಿ] ದಾನಾದಿಗಳ ಕೊಟ್ಟಡೇನು ? ಕ್ಷತ್ರಿಯರಂತೆ. ಅದೆಂತೆಂದಡೆ, ಶಿವನ ವಾಕ್ಯ: ಪಯೋಹಾರೀ ತು ಮಾರ್ಜಾಲೋ ನಗ್ನೋ ಮುಗ್ಧಃ ಪಿಶಾಚವತ್ ನಿತ್ಯಸ್ನಾನಶ್ಚ ಕಾಕಶ್ಚ ವಾಲ್ಮೀಕಾಃ ಸರ್ಪಜಾತಯಃ ತೃಣಂ ಭಕ್ಷಂತಿ ಪಶವಃ ವನವಾಸಿಮೃಗಾಸ್ತಥಾ [ಮಾ]ಸ್ತು ಚೈತಾನಿ ಕಾರ್ಯಾಣಿ ನ ಕರೋತಿ ಹಿ ಪಾರ್ವತಿ ಎಂದುದಾಗಿ, ಆವ ಸಿದ್ಧಿಗಳಿಂದಲೂ ಫಲವಿಲ್ಲ, ಏನನೋದಿ ಏನ ಕೇಳಿ ಏನ ಹೇಳಿಯೂ ಫಲವಿಲ್ಲ, ಇವು ಭಕ್ತಿಯೊಳಗಲ್ಲ, ಮುಕ್ತಿಗೆ ಸಲ್ಲವು. ಇದನರಿದು ಆವನಾನೊಬ್ಬನು ಲಿಂಗವರಿತು ಲಿಂಗಾರ್ಚನೆಯಂ ಮಾಡಿ, ಗುರುಲಿಂಗಜಂಗಮಕ್ಕೆ ತನುಮನಧನವ ಸವೆಸಿದಡೆ ಅದೇ ಚಲ್ವ ಭಕ್ತಿ, ಅದೇ ಚಲ್ವ ಮುಕ್ತಿ, ಅದೇ ಸರ್ವಸಿದ್ಧಿ. ಅದೇ ಸರ್ವಕಾರಣವಯ್ಯಾ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಪಶು ಸಾವುತ್ತ ತನ್ನ ಶಿಶುವಿಂಗೆ ಏನ ಗಳಿಸಿಕೊಟ್ಟಿತ್ತು? ಪಿಂಡ ಹುಟ್ಟುವಾಗ ಅದಕ್ಕೆ ಸಂಚಿತ ಪ್ರಾರಬ್ಧ ಆಗಾಮಿ ತಪ್ಪದೆಂದೆ. ಆರು ಸತ್ತರೂ ಲೇಸಿಗರಿಲ್ಲ; ತಮ್ಮ ತಮ್ಮಷ್ಟಕ್ಕೆ ಲೇಸಿಗರೆಲ್ಲರು. ಇದು ತಪ್ಪದು, ಕಲ್ಯಾಣದ ತ್ರಿಪುರಾಂತಕ ಲಿಂಗದಲ್ಲಿ ಗಾವುದಿ ಮಾಚಯ್ಯ ಹೇಳಿದುದ ದಿಟವೆನ್ನಿರಣ್ಣಾ.
--------------
ಗಾವುದಿ ಮಾಚಯ್ಯ
ಹಮ್ಮಿ ಹನ್ನೆರಡು ಸಂವತ್ಸರ ಹಿಂದಾಯಿತ್ತು, ಏನ ಮಾಡಿದಡೇನಯ್ಯಾ, ಎನ್ನಲ್ಲಿ ದಿಟವಿಲ್ಲದನ್ನಕ್ಕರ ಏನ ಹಮ್ಮಿದಡೇನಯ್ಯಾ, ಎನ್ನಲ್ಲಿ ದಿಟವಿಲ್ಲದನ್ನಕ್ಕರ ಎನ್ನ ಪುಣ್ಯದ ಫಲ, ಕೂಡಲಸಂಗಮದೇವಾ, ಬಾಯಿನದುಂಡೆಗೆ ತೋಯನಟ್ಟಂತಾಯಿತ್ತು.
--------------
ಬಸವಣ್ಣ
ಇನ್ನಷ್ಟು ... -->