ಅಥವಾ

ಒಟ್ಟು 10 ಕಡೆಗಳಲ್ಲಿ , 8 ವಚನಕಾರರು , 9 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಾಡಿನೊಳಗಣ ವರಹನ, ಊರ ಕುಕ್ಕುರ ಕೊಲುವಾಗ ಊರಿಗೂ ಕಾಡಿಗೂ ಏತರ ಹಗೆ ? ಅದರ ಭೇದ ಅಲ್ಲಿಯೆ ಅಡಗಿತ್ತು. ಅರ್ಕೇಶ್ವರಲಿಂಗವನರಿಯಿರಣ್ಣಾ.
--------------
ಮಧುವಯ್ಯ
ಏತರ ದೊಣ್ಣೆಯಲ್ಲಿ ಹೊಯ್ದಡೂ ಪೂಸನಪ್ಪನು. ಆವ ಪರಿಯಲ್ಲಿ ಸವೆದು ಮಾಡಿದಡೂ ವಸ್ತುವಿಗೆ ಲೇಸಪ್ಪುದು. ಶ್ವೇತನ ಪುಷ್ಪದಂತೆ, ಭಾಸುರನ ಕಿರಣದಂತೆ, ಪರುಷ ಕ್ರೋಧದಿಂದ ಉರವಣೆಯಲ್ಲಿ ಲೋಹವ ಬೆರಸಿದಂತೆ, ಕ್ಷುಧೆ ಅಡಸಿದವಂಗೆ ಪಾಲ್ಗಡಲ ತಡಿಯಲ್ಲಿ ತಳಿದವನಂತೆ, ಆವ ಪರಿಯಲ್ಲಿ ಸವೆದಡೂ ವಸ್ತು ಭಾವಕೆಂದಲ್ಲಿ ಶಿವಾರ್ಪಣ ಸಂಬಂಧ. ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ, ಮಾತುಳಂಗ ಮಧುಕೇಶ್ವರನು.
--------------
ದಾಸೋಹದ ಸಂಗಣ್ಣ
ಕಲ್ಲಿನಲ್ಲಿ ಹುಟ್ಟಿದ ಕಿಡಿ ಕಲ್ಲ ಸುಡಬಲ್ಲುದೆ ? ಬೆಲ್ಲದಲ್ಲಿ ಹುಟ್ಟಿದ ಸಾರವ ನಿಸ್ಸಾರ ಮೆಲ್ಲಬಲ್ಲುದೆ ? ಇಂತೀ ಬಲ್ಲತನವುಳ್ಳವರಲ್ಲಿಯ ವಾಚಕತ್ವ ಆಶೆಯ ಪಾಶವ ಕೊಲ್ಲಬಲ್ಲುದೆ ? ಮರೆಯ ಗ್ರಾಸವ ಕೊಂಬ ಮತ್ರ್ಯನಂತೆ ಈಷಣತ್ರಯಕ್ಕೆ ಮಚ್ಚಿ, ಮಾತಿನ ಮಾಲೆಯ ನೀತಿಯ ಹೇಳುವ ಈ ಯಾಚಕರುಗಳಿಗೆ ಏತರ ಬೋಧೆ ? ಇದು ನಿಹಿತದ ಉಭಯಸ್ಥಲ ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗದಲ್ಲಿ.
--------------
ಪ್ರಸಾದಿ ಭೋಗಣ್ಣ
ಗುರುವಾದಡೆ ಕಾಲಿಲ್ಲದಿರಬೇಕು. ಲಿಂಗವಾದಡೆ ಬಾಯಿಲ್ಲದಿರಬೇಕು. ಜಂಗಮವಾದಡೆ ಅಂಗವಿಲ್ಲದಿರಬೇಕು. ಈ ಮೂವರು ಮೂವರ ಹಂಗಿಗರಾದರು. ಏತರ ಹಂಗಿಲ್ಲದಾತ ನೀನೆ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಕಾಯದಲ್ಲಿ ಕಳವಳವಿರಲು, ಪ್ರಾಣದಲ್ಲಿ ಮಾಯೆಯಿರಲು, ಏತರ ಗಮನ ಏತರ ನಿರ್ವಾಣ. ಮಹಾಲಿಂಗ ತ್ರಿಪುರಾಂತಕ ನಿನ್ನ ಸಂಹಾರಿ ಎಂಬನಲ್ಲದೆ ಸಜ್ಜನೆಯೆಂದು ಕೈವಿಡಿವನಲ್ಲ.
--------------
ಕಿನ್ನರಿ ಬ್ರಹ್ಮಯ್ಯ
ಎಲುವು ತೊಗಲು ನರ ಮಾಂಸ ಪುರೀಷ ಶ್ಲೇಷ್ಮ ರಕ್ತ ಶುಕ್ಲ ಕ್ರಿಮಿ ಕೊಕ್ಕರೆ ಜರೆ ಮರಣ ಜಂತು ಹಲವು ರೋಗಂಗಳ ತವರ್ಮನೆ ನೋಡುವಡೆ ಪಾಪದ ಪುಂಜ -ಇಂತೀ ಹೇಸಿಕೆಯೊಳಗೆ ಏತರ ಸುಖವನರಸುವೆ? ಈ ಸುಖದಾಸೆಯ ವಿಚಾರಿಸಿ ನೋಡಿದಡೆ ಸಕಲ ದುಃಖದಾಗರ, ನರಕದ ಪಾಕುಳ. ಅಂಗನೆಯರಿಂತೆಂದು ತಿಳಿದು ವಿರಕ್ತನಾದ ಪರಮ ಸೌಖ್ಯಾಂಗ ನೀನೇ, ಸಿಮ್ಮಲಿಗೆಯ ಚೆನ್ನರಾಮಾ.
--------------
ಚಂದಿಮರಸ
ಅಂಗಲಿಂಗವೆಂಬನ್ನಕ್ಕರ ಕಾಯದ ಸೂತಕ. ಪ್ರಾಣಲಿಂಗವೆಂಬನ್ನಕ್ಕರ ಅರಸುವುದೆ ಜನನಸೂತಕ. ಮರೆವುದೆ ಮರಣಸೂತಕ. ಸೂತಕವ ಹಿಂಗಿ ಅಜಾತನಾಗಬಲ್ಲಡೆ, ಆತಂಗೆ ಏತರ ಬಂಧವೂ ಇಲ್ಲ, ಕಾಮಧೂಮ ಧೂಳೇಶ್ವರಾ.
--------------
ಮಾದಾರ ಧೂಳಯ್ಯ
ತಲೆಯಿಲ್ಲದೆ ಕಾಲು ನಡೆಯಬಲ್ಲುದೆ ? ಕುಕ್ಷಿಯಿಲ್ಲದಿರೆ ಬಾಯಿ ಉಣ್ಣಬಲ್ಲುದೆ ? ಆತ್ಮನಿಲ್ಲದಿರೆ ಕರಚರಣಾದಿಗಳಿಗೆ ಏತರ ಹೊಲಬು ? ನಿನ್ನ ಭಕ್ತಿಯ ಬೆಳೆ ಎನಗೆ ಸತ್ಯದ ಹಾದಿ. ಇದು ನಿಶ್ಚಯ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಮೊಲೆ ಮುಡಿ ಇದ್ದುದೆ ಹೆಣ್ಣೆಂದು ಪ್ರಮಾಣಿಸಲಿಲ್ಲ. ಕಾಸೆ ಮೀಸೆ ಕಠಾರವಿದ್ದುದೆ ಗಂಡೆಂದು ಪ್ರಮಾಣಿಸಲಿಲ್ಲ. ಅದು ಜಗದ ಹಾಹೆ; ಬಲ್ಲವರ ನೀತಿಯಲ್ಲ. ಏತರ ಹಣ್ಣಾದಡೂ ಮಧುರವೆ ಕಾರಣ, ಅಂದವಿಲ್ಲದ ಕುಸುಮಕ್ಕೆ ವಾಸನೆಯೆ ಕಾರಣ. ಇದರಂದವ ನೀನೇ ಬಲ್ಲೆ ಶಂಭುಜಕ್ಕೇಶ್ವರಾ.
--------------
ಸತ್ಯಕ್ಕ
-->