ಅಥವಾ

ಒಟ್ಟು 24 ಕಡೆಗಳಲ್ಲಿ , 12 ವಚನಕಾರರು , 24 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಾನಾ ಬಹುವರ್ಣದ ಬೊಕ್ಕಸವ ಹೊತ್ತು ಮಾಡುವಲ್ಲಿ ಭಾವದ ಬಹುಚಿತ್ತವನರಿಯಬೇಕು. ನಾನಾ ವರ್ಣದ ಆಭರಣ, ಹದಿನೆಂಟು ಆಶ್ರಯಂಗಳ ತೊಡುವಲ್ಲಿ ದ್ರವ್ಯವ ಕೊಡುವಲ್ಲಿ ಇಂದ್ರಿಯಾತ್ಮನ ಬೆಂಬಳಿಯನರಿಯಬೇಕು. ಎಂಟುರತ್ನದ ಕಾಂತಿ, ಜೀವರತ್ನದ ಕಳೆ ಭಾವಿಸಿ ಏಕವ ಮಾಡಿ ನಡೆವುದು. ನೀವು ಕೊಟ್ಟ ಕಾಯಕ ತನುವಿಂಗೆ ಕ್ರೀ, ಆತ್ಮಂಗೆ ಅರಿವು. ಆ ಅರಿವಿಂಗೆ ಮಹಾಬೆಳಕು ಒಡಗೂಡಿ ಕರಿಗೊಂಡಲ್ಲಿ ಬೊಕ್ಕಸದ ಮಣಿಹವನೊಪ್ಪಿಸಬೇಕು, ಬಸವಣ್ಣಪ್ರಿಯ ನಾಗರೇಶ್ವರಲಿಂಗಕ್ಕೆ.
--------------
ಆನಂದಯ್ಯ
ಬಟ್ಟಬಯಲ ತುಟ್ಟತುದಿಯ ನಟ್ಟನಡುವಣ, ಕಟ್ಟಕಡೆಯ ಮೆಟ್ಟಿ ನೋಡಿ, ಉಟ್ಟುದನಳಿದು ಒಟ್ಟಬತ್ತಲೆಯಾದೆ. ಇನ್ನು ಬಿಟ್ಟುದ ಹಿಡಿಯಬಾರದು, ಶಿಡಿದುದ ಬಿಡಬಾರದು. ಇದಕ್ಕೆ ಒಡೆಯನಾವನೆಂದು ನೋಡಲಾಗಿ ನೋಡಿಹೆನೆಂದರೆ ನೋಟಕ್ಕಿಲ್ಲ. ಕೂಡಿಹೆನೆಂದರೆ ಕೂಟಕ್ಕಿಲ್ಲ, ಹಿಡಿದಿಹೆನೆಂದರೆ ಹಿಡಿಹಿಗಿಲ್ಲ. ಪೂಜಿಸಿಹೆನೆಂದರೆ ಪೂಜೆಗಿಲ್ಲ. ಇದ ಮೆಲ್ಲಗೆ ಓಜೆಯಿಂದ ನೋಡಿಲಾಗಿ, ನೋಡುವ ನೋಟವು ತಾನೆ, ಕೂಡುವ ಕೂಟವು ತಾನೆ, ಹಿಡಿವುದು ಆ ಹಿಡಿಗೆ ಸಿಕ್ಕಿಕೊಂಬುದು ತಾನೆ, ಪೂಜಿಸುವುದು ಪೂಜೆಗೊಂಬುದು ತಾನೆ. ನಾನಿದರ ಭೇದವನರಿದು ಆದಿ ಅನಾದಿಯನು ಏಕವ ಮಾಡಿ, ನಾನಲ್ಲೇ ಐಕ್ಯನಾದೆನಯ್ಯಾ, ಬಸವಪ್ರಿಯ ಕೂಡಲಚೆನ್ನಬಸವಣ್ಣಾ.
--------------
ಹಡಪದ ಅಪ್ಪಣ್ಣ
ಉತ್ತರ, ದಕ್ಷಿಣ , ಪೂರ್ವ, ಪಶ್ಚಿಮ ನಾಲ್ಕು ಪಥವನು ಏಕವ ಮಾಡಿ, ಊಧ್ರ್ವಮುಖವ ಮಾಡಿ, ಈಡಾ ಪಿಂಗಳ ನಾಳಮಂ ಕಟ್ಟಿ, ಸುಷಮ್ನನಾಳವಂ ಎತ್ತಿ , ಮನ ಪವನ ಬಿಂದು ಒಡಗೂಡಿ, ಚಂದ್ರ ಸೂರ್ಯ ಶಿಖಿಯರಂ ಮುಪ್ಪುರಿಯ ಮಾಡಿ, ಒಡಗೂಡಿ ಏಕವಾಗಿ ಹುರಿಗೂಡಿ, ಮತ್ರ್ಯಲೋಕವ ಬಿಟ್ಟು, ದೇವಲೋಕವ ಮೆಟ್ಟಿನಿಂದು, ಭಾವ ಬಯಲಾಗಿ, ಬಯಕೆ ಸವೆದು, ಇನ್ನು ಈ ಲೋಕದೊಳಗೆ ಬಂದು ಬದುಕಿದೆನೆಂಬುದನಕ್ಕೆ ಹೇಯ ಹುಟ್ಟಿ, ಇದಾವುದನೂ ಒಲ್ಲದಿರ್ಪರು, ಬಸವಪ್ರಿಯ ಕೂಡಲಚೆನ್ನಬಸವಣ್ಣಾ.
--------------
ಹಡಪದ ಅಪ್ಪಣ್ಣ
ತನುಮಧ್ಯ ವಿದಳಾಚಲದೊಳಗೆ ಭಾಸ್ಕರಭವನ ಬೆಳಗುತಿಪ್ಪುದು ಲೋಕ ಹದಿನಾಲ್ಕರ ಅಜಲೋಕದೊಳಗೆ ಆತ ಬೆಳಗುವ ಪ್ರಜ್ವಲದ ಪ್ರಭೆಯ ಮಂಟಪವು ತಾನೆರಡಾಗುತ ದಿವ ರಾತ್ರೆ ಒಡಗೂಡಿ ಭರಿತ ಪರಿಮಳವಾಗೆ ವಳಯ ಹದಿನಾಲ್ಕುರೊಳು ಬೆರೆಸಿಪ್ಪ ಜ್ಯೋತಿಯನು ತಿಳಿದು ನೋಡಿದಡತ್ಯದ್ಥಿಕ ಸರ್ವಜ್ಞನೆನಿಪ ಲೋಕಾಲೋಕದ ಏಕವ ಮಾಡಲಿಕಾತ ಆಕಾರ ಚತುಷ್ಟಯವ ಮೀರಿದಾತ ವರ್ಣಾಶ್ರಮವ ಕಳೆದು ನಿರ್ಮಳಾನಂದದೊಳು ಸೊಮ್ಮುಗೆಟ್ಟಾತ ಪರಶಿವ ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ಕವಿಗಳ ತರ್ಕದ ಪ್ರಸ್ತಾವನ ವಚನ: ಪಾದ ಪ್ರಾಸ ಗಣವ ಬಲ್ಲೆನೆಂಬ ಅಣ್ಣಗಳು ನೀವು ಕೇಳಿರೊ. ತನ್ನಂಗಪಥದಲ್ಲಿದ್ದ ಪೃಥ್ವಿಯ ಮೂಲವನಳಿದು ಆ ನಾಗಲೋಕದ ಸರ್ಪನ ಎಬ್ಬಿಸಿ, ಆಕಾಶಮೂಲಕ್ಕೆ ನಡೆಸಬಲ್ಲಡೆ ಆತ ಪಾದಕಾರುಣ್ಯದ ಬಲ್ಲನೆಂದೆನಿಸಬಹುದು. ಅಷ್ಟದಳಕಮಲದ ಹುಗುಲ ಹಿಡಿದು ಮೆಟ್ಟಿ ಒಂಬತ್ತು ಪರಿಯಲ್ಲಿ ಸುತ್ತಿ ಆಡುವ ಅಗ್ರವ ನಿಲ್ಲಿಸಿ, ನಾಲ್ಕು ಮುಖದ ಬಿರಡದಲ್ಲಿ ಸಿಂಹಾಸನವನಿಕ್ಕಿದ ಮಹಾರಾಯನ ನಿರೀಕ್ಷಣವ ಮಾಡಬಲ್ಲರೆ ಆತ ಪ್ರಾಸವ ಬಲ್ಲವನೆಂದೆನಿಸಬಹುದು. ಹತ್ತುಮುಖದಲ್ಲಿ ಹರಿದಾಡುವ ವಾಯುವ ಏಕವ ಮಾಡಬಲ್ಲರೆ, ಮೂರು ಪವನವೊಂದರೊಳು ಕೂಡಿ ಪಂಚದ್ವಾರದಲ್ಲಿ ತುಂಬಿ ಮೇಲ್ಗಿರಿಗೆ ನಡಸಿ ಪರಮಾಮೃತದ ಹೊಳೆಯ ನಿಲ್ಲಿಸಬಲ್ಲರೆ ಆತ ಗಣವ ಬಲ್ಲವನೆಂದೆನಿಸಬಹುದು. ಇದನರಿಯದೆ ಛಂದ ನಿಘಂಟು ಅಸಿ ವ್ಯಾಕರಣಂಗಳು ಪಂಚಮಹಾಕಾವ್ಯಂಗಳುಯೆಂಬ ಮಡಕಿಯ ಅಟ್ಟುಂಡ ಹಂಚಮಾಡಿ ಬಿಟ್ಟುಹೋಹುದನರಿಯದೆ ಆ ಹಂಚನೆ ಹಿಡಿದು ಕವಿಯೆಂದು ತಿರಿದುಂಬ ದೀಕ್ಷವಿಲ್ಲದ ತಿರುಕರಿಗೆ ಕವಿಗಳೆನುವವರ ಕಂಡು ನಗುತಿರ್ದ ನಮ್ಮ ಗೊಹೇಶ್ವರಪ್ರಿಯ ನಿರಾಳಲಿಂಗ.
--------------
ಗುಹೇಶ್ವರಯ್ಯ
ಯೋಗಾಂಗ ಭೋಗಾಂಗ ತ್ಯಾಗಾಂಗ ಈ ತ್ರಿವಿಧವನು ಮರೆದು, ಭಕ್ತಿಯೋಗದ ಮೇಲೆ ನಿಂದು, ರಾಜಯೋಗದ ಮೇಲೆ ನಿಂದು, ನಡೆದು ನುಡಿದು ತೋರುವರು ನಮ್ಮ ಶರಣರು. ಗುರು ಲಿಂಗ ಜಂಗಮ ಈ ತ್ರಿವಿಧವನು, ಸುಖ ದುಃಖ ಚಿಂತೆ ಸಂತೋಷವೆಂಬುವ ಕಳೆದು, ಉತ್ಪತ್ತಿ ಸ್ಥಿತಿಲಯವೆಂಬುವಂ ಸುಟ್ಟು, ದೃಕ್ಕು ದೃಶ್ಯ ನಿಜವೆಂಬ ತ್ರಿಕರಣವ ಏಕವ ಮಾಡಿ, ಪಿಂಡಾಂಡ ಬ್ರಹ್ಮಾಂಡ ಒಂದೆಂಬುದನರಿದು, ಸಂದಹರಿದು ನಿಂದ ನಿಜಾನಂದದಲ್ಲಿ ಹಿಂದುಮುಂದೆಂಬುದನರಿಯದೆ, ನಿಮ್ಮೊಳೊಂದಾದ ಲಿಂಗೈಕ್ಯಂಗೆ ವಂದಿಸಿ ವಂದಿಸಿ, ಎನ್ನ ಬಂಧನ ಹರಿದು, ನಾನು ಬಟ್ಟಬಯಲಾದೆನಯ್ಯಾ, ಬಸವಪ್ರಿಯ ಕೂಡಲಚೆನ್ನಬಸವಣ್ಣಾ.
--------------
ಹಡಪದ ಅಪ್ಪಣ್ಣ
ಕಾಯ ಕರಣಾದಿಗಳ ಏಕವ ಮಾಡಿದ ಪ್ರಸಾದಿ. ಪ್ರಾಣ ನಿಃಪ್ರಾಣವನೇಕವ ಮಾಡಿದ ಪ್ರಸಾದಿ. ಭಾವ ನಿರ್ಭಾವವನೇಕವ ಮಾಡಿದ ಪ್ರಸಾದಿ. ಮನಬುದ್ಧಿಚಿತ್ತಹಂಕಾರವನೇಕವ ಮಾಡಿದ ಪ್ರಸಾದಿ. ಸಪ್ತಧಾತು ಷಡುವರ್ಣವನೇಕವ ಮಾಡಿದ ಪ್ರಸಾದಿ. ಇಂತಿವೆಲ್ಲವನೇಕವ ಮಾಡಿದ ಪ್ರಸಾದಿ. ಈ ಪ್ರಸಾದವ ಕಂಡು ಎನ್ನ ಭವಂ ನಾಸ್ತಿಯಾಯಿತ್ತು ಕಾಣಾ, ಬಸವಪ್ರಿಯ ಕೂಡಲಚೆನ್ನಬಸವಣ್ಣಾ.
--------------
ಹಡಪದ ಅಪ್ಪಣ್ಣ
ಗುರುವ ಬೆಸಗೊಳಹೋದಡೆ, ಗುರುವೆನ್ನಂತರಂಗವನರಿದು, ಜೀವ ಪರಮರ ಏಕವ ಮಾಡಿ ತೋರಿ, ಕಾಯದ ಕಂಗಳಲ್ಲಿರಿಸಿ, ಮನವ ಕೊನೆಯಲ್ಲಿ ನೆಲೆಗೊಳಿಸಿ, ಸರ್ವಾಂಗದಲ್ಲಿಯೂ, ಲಿಂಗಸಂಬಂಧವ ಮಾಡಿ ತೋರಿದನಯ್ಯಾ, ಎನ್ನ ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನು.
--------------
ಸ್ವತಂತ್ರ ಸಿದ್ಧಲಿಂಗ
ಒಂ ಏಕವ ನ ದ್ವಿತೀಯಾಃ ಸ್ವಯಂಭುವೇ ಚಕಿತಮಭಿದತ್ತೇ ಶ್ರುತಿರಪಿ ಅತ್ಯತಿಷ*ದ ಶಾಂಗುಲವೆಂಬ ಬಿರುದು ನಿಮಗೆ ಸಂದಿತ್ತು ಗುರುವೆ. ನ ಗುರೋರಧಿಕಂ ನ ಗುರೋರಧಿಕಂ ವಿದಿತಂ ವಿದಿತಂ ಎಂಬ ಬ್ರಹ್ಮಬ್ರಹ್ಮ ಶಬ್ದಕ್ಕೆ ಪರಬ್ರಹ್ಮ ಗುರುವೆ ಗುರು. ಬಸವಪ್ರಿಯ ಕೂಡಲಸಂಗಮದೇವಾ ಮಾಂ ತ್ರಾಹಿ ಕರುಣಾಕರನೆ.
--------------
ಹಡಪದ ಅಪ್ಪಣ್ಣ
ಗುರು-ಲಿಂಗ-ಜಂಗಮವೆಂಬ ಭೇದವನೆ ಕಳೆದು, ಗುರು ಲಿಂಗವ ಏಕವ ಮಾಡಿ ತೋರಿದನಾಗಿ, ತನು, ಮನ, ಪ್ರಾಣ ಮೊದಲಾಗಿಪ್ಪ ಕರಣೇಂದ್ರಿಯಂಗಳನು, ತನು ಮುಟ್ಟಿದ ಸುಖಂಗಳನು ಲಿಂಗಕ್ಕೆ ಕೊಟ್ಟು, ಅದ ಬಗೆಗೆತ್ತಿ ಬಿಚ್ಚಿ ಬೇರೆ ಮಾಡ, ಕೂಡಲಚೆನ್ನಸಂಗಾ ಲಿಂಗೈಕ್ಯನು.
--------------
ಚನ್ನಬಸವಣ್ಣ
ಗುರುವೆ, ನಿಗಮಕ್ಕಭೇದ್ಯನೆ, ಅಕ್ಷರ ಮೂರರ ರೂಪನೆ, ಅಕ್ಷರ ಎರಡರ ನಿತ್ಯನೆ, ಅಕ್ಷರ ನಾಲ್ಕಕ್ಕೆ ಸಿಕ್ಕದನೆ, ಅಕ್ಷರ ಐದಕ್ಕಿಂದತ್ತಲಾದವನೆ, ಅಕ್ಷರ ಏಳ ಮೀರಿದವನೆ, ಅಕ್ಷರವಾರ ನೀ ಜರಿದವನೆ, ಅಕ್ಷರವಾರರ ರೂಪನೆ, ಆರರಕ್ಷರಕ್ಕೆ ಅನಾಮಯನೆ, ಅಕ್ಷರವೆಂಟರ ರೂಪನೆ, ಹದಿನಾರಕ್ಷರಕ್ಕೆ ಸಂಪೂರ್ಣನೆ, ಇವು ಮೊದಲಾದ ಅಕ್ಷರ ಹಲವನು ಏಕವ ಮಾಡಿ ತೋರಬಲ್ಲ ರೂಪನೆ, ಆನಂದಮಯನ ಕಪಿಲಸಿದ್ಧ ಮಲ್ಲಿಕಾರ್ಜುನಯ್ಯನ ತೋರಿದ ಪರಮಗುರುವೆ.
--------------
ಸಿದ್ಧರಾಮೇಶ್ವರ
ಆಸೆಯನುಳಿದು ನಿರಾಸೆಯಲ್ಲಿ ನಿಂದು, ವೇಷವ ಮರೆದು, ಜಗದ ಹೇಸಿಯಾಟವ ತೊರೆದು, ವಿೂಸಲಾಗಿದ ಮನವನೆ ಲಿಂಗವ ಮಾಡಿ, ಗಾಸಿಗೊಳಗಾಗುವ ತನುವನೆ ಗುರುವ ಮಾಡಿ, ಇವಿಷ್ಟಕ್ಕೂ ಕರ್ತನಾಗಿರುವ ಪ್ರಾಣವನ್ನೆ ಜಂಗಮವ ಮಾಡಿ, ಈ ತ್ರಿವಿಧವನು ಏಕವ ಮಾಡುವೆ. ಆ ಭಾವವನೆ ಭಾವರುಚಿ ಪ್ರಸಾದವ ಮಾಡುವೆ. ಈ ತ್ರಿವಿಧವನರಿದು ಅಂಗವಿಸಿದವನೆ ಎನ್ನ ದೇವನೆಂದು ಕಾಂಬೆ ಕಾಣಾ, ಬಸವಪ್ರಿಯ ಕೂಡಲಚೆನ್ನಬಸವಣ್ಣ, ನೀವು ಸಾಕ್ಷಿಯಾಗಿ.
--------------
ಹಡಪದ ಅಪ್ಪಣ್ಣ
ನಡೆವ ನುಡಿವ ಚೈತನ್ಯವುಳ್ಳನಕ್ಕ ಒಡಲ ಗುಣಂಗಳಾರಿಗೂ ಕಾಣವು. ನೋಡುವ ನಯನ, ಕೇಳುವ ಶ್ರೋತ್ರ, ವಾಸಿಸುವ ಘ್ರಾಣ, [ಮುಟ್ಟವ ತ್ವಕ್ಕು, ರುಚಿಸುವ ಚಿಹ್ವೆ] ತಾಗಿತ್ತೆನಬೇಡ. ನೋಡುತ್ತ [ಕೇಳುತ್ತ ವಾಸಿಸುತ್ತ ಮುಟ್ಟುತ್ತ, ರುಚಿಸುತ್ತ] ಲಿಂಗಾರ್ಪಿತವಮಾಡಿ ಲಿಂಗಭೋಗೋಪಭೋಗಿಯಾದ ಪ್ರಸಾದಿಗಳಿಗೆ ಸರ್ವಾಂಗಶುದ್ಧವೆಂಬುದಿದೆಯಯ್ಯಾ. ಕಾಯತ್ರಯಂಗಳ ಜೀವತ್ರಯಂಗಳ ಭಾವತ್ರಯಂಗಳನೊಂದು ಮಾಡಿ; ಸುಖ-ದುಃಖ, ಗುಣ-ನಿರ್ಗುಣಂಗಳೆಂಬ ಉಭಯವ, ಲಿಂಗದಲ್ಲಿ ಏಕವ ಮಾಡಿ; ಅಹುದು ಅಲ್ಲ, ಬೇಕುಬೇಡೆಂಬ ಸಂಶಯವ ಕಳೆದು; ಕೂಡಲಚೆನ್ನಸಂಗನ ಆದಿಯ ಪುರಾತನರು ಮಾಡಿದ ಪಥವಿದು.
--------------
ಚನ್ನಬಸವಣ್ಣ
ಹಿಂದನರುಹಿ ಹಿಂದ ಹರಿದಿರಿ, ಮುಂದನರುಹಿ ಮುಕ್ತನ ಮಾಡಿದಿರಿ. ಸಂದುಸಂಶಯವನಳಿದಿರಿ, ಗುರುಲಿಂಗಜಂಗಮವ ಒಂದೇ ಎಂದು ತೋರಿದಿರಿ. ಪ್ರಸಾದವೇ ಪರವೆಂದರುಹಿದಿರಿ. ಇಂತಿವರ ಪೂರ್ವಶ್ರಯವ ಕಳೆದು ಎನಗೆ ಏಕವ ಮಾಡಿ ತೋರಬೇಕಾಗಿ, ನೀವು ಒಂದು ಸಾಕಾರವ ತಾಳಿ ಬಂದಿರಿ. ಇದು ಕಾರಣ ನಿಮ್ಮ ಲೋಕಾರಾಧ್ಯರೆಂದು ನೆರೆನಂಬಿ ಸಲೆಸಂದು ನಿಮ್ಮ ಪಾದದೊಳು ಏಕವಾದೆನಯ್ಯ ಚೆನ್ನ ಮಲ್ಲೇಶ್ವರ. ಇದ ನಿಮ್ಮನರಿದ ಶರಣರೇ ಬಲ್ಲರು. ಬಸವಪ್ರಿಯ ಕೂಡಲಚೆನ್ನಬಸವಣ್ಣ .
--------------
ಹಡಪದ ಅಪ್ಪಣ್ಣ
ಹರಂಗೆಯೂ ತನಗೆಯೂ ಏಕೋಭಾಜನವೆಂಬರು, ಗುರುಲಿಂಗ ಬಂದರೆ ಮತ್ತೊಂದು ಭಾಜನವ ತನ್ನಿಯೆಂಬ[ರಿಗೆ] ಲಿಂಗವುಂಟೆ ? ಲಿಂಗವ ಮುಟ್ಟಿ ಹಿಂಗುವ ಭವಿಗಳಿಗೆ ಲಿಂಗವುಂಟೆ ? ಲಿಂಗ ಜಂಗಮವನು ಮಹಾಪ್ರಸಾದವನು ಏಕವ ಮಾಡಿದವಂಗಲ್ಲದೆ. ಏಕೋಭಾಜನವಿಲ್ಲ ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ
ಇನ್ನಷ್ಟು ... -->