ಅಥವಾ

ಒಟ್ಟು 12 ಕಡೆಗಳಲ್ಲಿ , 8 ವಚನಕಾರರು , 12 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಿರಂಜನ ಪ್ರಣವದ ನೆನಹುಮಾತ್ರದಿಂದ ಅವಾಚ್ಯ ಪ್ರಣವದುತ್ಪತ್ಯವಾಯಿತ್ತು. ಇನ್ನು ಅವಾಚ್ಯ ಪ್ರಣವದ ನಿರ್ದೇಶಸ್ಥಲದ ವಚನವೆಂತೆಂದಡೆ : ``ಸತ್ಯಂ ಜ್ಞಾನಮನಂತಂ ಬ್ರಹ್ಮ ಏಕಮೇವ ನ ದ್ವಿತೀಯಂ ಬ್ರಹ್ಮಂ'' ಎಂಬ ಪರಬ್ರಹ್ಮವಿಲ್ಲದಂದು, ``ಏಕಏವೋ ರುದ್ರೋ ಮಹೇಶ್ವರಃ'' ಎಂಬ ಮಹೇಶ್ವರತತ್ವವಿಲ್ಲದಂದು, ವಿಶ್ವರೂಪರುದ್ರ ವಿಶ್ವಾದ್ಥಿಕಮಹಾರುದ್ರರಿಲ್ಲದಂದು, ಕೋಟಿ ಶತಕೋಟಿ ಸಾವಿರ ಜಡೆಮುಡಿ ಗಂಗೆ ಗೌರಿಯರಿಲ್ಲದಂದು, ಕೋಟಾನುಕೋಟಿ ಕಾಲರುದ್ರರಿಲ್ಲದಂದು, ಅಸಂಖ್ಯಾತ ಪ್ರಳಯ ಕಾಲರುದ್ರರಿಲ್ಲದಂದು, ಅವಾಚ್ಯಪ್ರಣವವಾಗಿದ್ದನಯ್ಯ ಇಲ್ಲದಂತೆ ನಮ್ಮ ಅಪ್ರಮಾಣಕೂಡಲಸಂಗಮದೇವ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಅತಕ್ರ್ಯ ಅಪ್ರಮಾಣ ಅನಾಮಯ ಅನುಪಮ ಸರ್ವಗತ ಸರ್ವಜ್ಞ ಸರ್ವೇಶ್ವರನಪ್ಪ ಪರಶಿವನು ಜಗತ್‍ಸೃಷ್ಟ್ಯರ್ಥವಾಗಿ ಸಮಸ್ತತತ್ವಂಗಳುತ್ಪತ್ತಿಗೆ ಮೂಲಿಗನಾಗಿ ತನ್ನಿಚ್ಛೆಯ ನೆನಹೆಂಬ ಚಿಂತಾಶಕ್ತಿಯ ಸಹಸ್ರದೊಳೊಂದಂಶದಲ್ಲಿ ಕುಂಡಲಿನಿಯಪ್ಪ ಪರೆ ಜನಿಸಿತ್ತು. ಆ ಪರಶಿವನಪ್ಪ ನಿಷ್ಕಲಬ್ರಹ್ಮವು ಈ ಕುಂಡಲಿನಿಯು [ತಾದಾತ್ಯ]ದಿಂ ಬ್ಥಿನ್ನವಿಲ್ಲದಿಹುದೆ ಸಕಲ ನಿಷ್ಕಲವಪ್ಪ ಸದಾಶಿವನು. ಆ ಸದಾಶಿವನು ತಾನೆ ಸಾದಾಖ್ಯದಿಂ ಪಂಚಬ್ರಹ್ಮಮೂರ್ತಿಯಾದುದು. ಎಂತೆಂದೊಡೆ: ಆ ಕುಂಡಲಿನಿಯಪ್ಪ ಪರೆಯ ಸಹಸ್ರದೊಳೊಂದಂಶಂದಲ್ಲಿ ಆದಿಶಕ್ತಿ ಜನಿಸಿತ್ತು. ಆದಿಶಕ್ತಿಯ ಸಹಸ್ರದೊಳೊಂದಂಶದಲ್ಲಿ ಇಚ್ಛಾಶಕ್ತಿ ಜನಿಸಿತ್ತು. ಇಚ್ಛಾಶಕ್ತಿಯ ಸಹಸ್ರದೊಳೊಂದಂಶದಲ್ಲಿ ಜ್ಞಾನಶಕ್ತಿ ಜನಿಸಿತ್ತು. ಜ್ಞಾನಶಕ್ತಿಯ ಸಹಸ್ರದೊಳೊಂದಂಶದಲ್ಲಿ ಕ್ರಿಯಾಶಕ್ತಿ ಜನಿಸಿತ್ತು. ಆ ನಿಷ್ಕಲವಪ್ಪ ಶಿವನ ನಿಷ್ಕಲೆಯಪ್ಪ ಕುಂಡಲಿನಿಯಪ್ಪ ಪರೆಯ ಹತ್ತರೊಳೊಂದಂಶದಲ್ಲಿ ಶಿವಸಾದಾಖ್ಯ ಜನಿಸಿತ್ತು. ಆದಿಶಕ್ತಿಯ ಹತ್ತರೊಳೊಂದಂಶದಲ್ಲಿ ಅಮೂರ್ತಿಸಾದಾಖ್ಯ ಜನಿಸಿತ್ತು. ಇಚ್ಛಾಶಕ್ತಿಯ ಹತ್ತರೊಳೊಂದಂಶದಲ್ಲಿ ಮೂರ್ತಿಸಾದಾಖ್ಯ ಜನಿಸಿತ್ತು. ಜ್ಞಾನಶಕ್ತಿಯ ಹತ್ತರೊಳೊಂದಂಶದಲ್ಲಿ ಕರ್ತೃಸಾದಾಖ್ಯ ಜನಿಸಿತ್ತು. ಕ್ರಿಯಾಶಕ್ತಿಯ ಹತ್ತರೊಳೊಂದಂಶದಲ್ಲಿ ಕರ್ಮಸಾದಾಖ್ಯ ಜನಿಸಿತ್ತು. ಆ ಕರ್ಮಸಾದಾಖ್ಯವಪ್ಪ ಮಾಹೇಶ್ವರನು ಸಕಲಸ್ವರೂಪದಿಂ ಸೋಮಧರ ಮೊದಲಾದ ಲಿಂಗೋದ್ಭವ ಕಡೆಯಾದ ಪಂಚವಿಂಶತಿಲೀಲೆಯ ತಾಳ್ದ ಸಕಲವಪ್ಪ ಮಾಹೇಶ್ವರನು ಸಕಲನಿಷ್ಕಲವಪ್ಪ ಸದಾಶಿವನು ನಿಷ್ಕಲವಪ್ಪ ಶಿವನೊಬ್ಬನಲ್ಲದೆ ಬೇರಲ್ಲವೆಂಬುದಕ್ಕೆ `ತತ್ಪರಂ ಬ್ರಹ್ಮೇತಿ, ಸ ಏಕೋ ರುದ್ರಸ ಈಶಾನಸ್ಸ ಭಗವಾನ್ ಶ್ರುತಿ: ಸ ಮಹೇಶ್ವರಸ್ಸ ಮಹಾದೇವ ಇತಿ ಇಂತೆಂದುದಾಗಿ, ಏಕಮೇವ ಅದ್ವಿತೀಯನಪ್ಪ ಸೋಮಧರನು, ಉಮಾಸಹವಾದ ಸೋಮನಿಂದ ವಾಯು, ಅಗ್ನಿ, ಪೃಥ್ವಿ, ರವಿ ಮೊದಲಾದ ಅಷ್ಟಮೂರ್ತಿಗಳು ದೇವರ್ಕಳು ಸುರಪ ಹರಿವಿರಿಂಚಿಗಳು ಜನಿಸಿದುದಕ್ಕೆ ಶ್ರುತಿ:ಸೋಮಃ ಪವತೇ ಜನಿತಾ ಮತೀನಾಂ ಜನಿತಾ ದಿವೋ ಜನಿತಾ ಪೃಥಿವ್ಯಾರ್ಜನಿತಾಗ್ನಿ ಸೂರ್ಯಸ್ಯ ಜನಿತೇಂದ್ರಸ್ಯ ಜನಿತಾಥ ವಿಷ್ಣೋಃ ಎಂದುದಾಗಿ, ತನ್ಮಹೇಶ್ವರಕೋಟ್ಯಂಶ ಬ್ರಹ್ಮವಿಷ್ಣುಸಮುದ್ಭವಂ ಋಷಯಃ ಕೃತವೋ ಕೋಟಿರ್ನಿಮಿಷೇಣ ಸಮುದ್ಭವಂ ಎಂದುದಾಗಿ, ಅಷ್ಟತನುವಿನೊಳಗಾದ ಜಗದ ರಚನೆ ಆರಿಂದ ರಚಿಸಿತ್ತು? ಅದ್ಥಿಕಾರ ಲಯ ಭೋಗಕ್ಕೆ ಅವನೊರ್ವ ಕರ್ತನು ಸೃಷ್ಟಿ, ಸ್ಥಿತಿ, ಸಂಹೃತಿ ತಿರೋಧಾನಾನುಗ್ರಹವಾವನಿಂದಹುದು; ಸರ್ವಜ್ಞತ್ವ ಕರ್ತೃತ್ವ ಅನಾದಿಬೋಧತ್ವ ಸ್ವತಂತ್ರತ್ವ ನಿತ್ಯತ್ವ ಅಲುಪ್ತಶಕ್ತಿತ್ವವಾವಗುಂಟು, ಆ ಶಿವನೆ ಘೃತಕಾಠಿಣ್ಯದಂತೆ, ನೀರಾಲಿಕಲ್ಲಂತೆ, ಸಕಲ ಸಕಲನಿಷ್ಕಲ ನಿಷ್ಕಲವಾದವನು, ಸೌರಾಷ್ಟ್ರ ಸೋಮೇಶ್ವರಲಿಂಗನೊಬ್ಬನೆ ಕಾಣಿರೆ.
--------------
ಆದಯ್ಯ
ಅಯ್ಯ, ಶ್ರೀಗುರುಲಿಂಗಜಂಗಮವೇ ರುದ್ರಲೋಕದ ರುದ್ರಗಣಂಗಳಿಗೆ, ಶಾಂಭವಲೋಕದ ಶಾಂಭವಗಣಂಗಳಿಗೆ, ನಾಗಲೋಕದ ನಾಗಗಣಂಗಳಿಗೆ, ದೇವಲೋಕದ ದೇವಗಣಂಗಳಿಗೆ, ಮರ್ತೃಲೋಕದ ಮಹಾಗಣಂಗಳಿಗೆ ಅವರವರ ಮನ-ಭಾವ-ಕಾರಣಂಗಳು ಹೇಗುಂಟೊ ಹಾಂಗೆ ಆಯಾಯ ಪ್ರಸನ್ನೇತಿ ಪ್ರಸಾದವಾಗಿರ್ಪರು ನೋಡ. ಸ್ವರ್ಗ-ಮರ್ತೃ-ಪಾತಾಳಲೋಕದಲ್ಲಿ ಚರಿಸುವ ಹÀರಿಸುರಬ್ರಹ್ಮಾದಿ ದೇವದಾನವಮಾನವ ಮನಮುನಿಗಳೆಲ್ಲ ಅತ್ಯತಿಷ*ದ್ದಶಾಂಗುಲವೆಂದು ಹೊಗಳುವ ಶ್ರುತಿಯಂತೋ ಹಾಂಗೆ ಅವರವರ ಮನದಂತೆ ಮಹಾದೇವನಾಗಿ ಫಲಪದಂಗಳ ಕೊಟ್ಟು, ದುಷ್ಟನಿಗ್ರಹ ಶಿಷ್ಟಪ್ರತಿಪಾಲಕತ್ವದಿಂದ ಸರ್ವಲೋಕಂಗಳಿಗೆಲ್ಲ ಸೂತ್ರಧಾರಿಗಳಾಗಿರ್ಪರು ನೋಡ. ಇಂತು ಏಕಮೇವ ಪರಬ್ರಹ್ಮವೆಂಬ ಶ್ರುತಿಯ ದಿಟವಮಾಡಿ ಪರಮಸ್ವಸ್ಥಿರದ ಮಂಡಲದ ಮೇಲೆ ಶಿವ-ಶಕ್ತಿ, ಅಂಗ-ಲಿಂಗವೆಂಬ ಉಭಯನಾಮವಳಿದು ಶಿಷ್ಯರೂಪಿನಿಂದ ಕುಳ್ಳಿರಿಸಿ ದೀಕ್ಷಾಪಾದೋದಕ ಮಿಶ್ರವಾದ ಗೋಮೂತ್ರದಿಂದ ಸಪ್ತವ್ಯಸನ ಸಂಬಂಧವಾದಂಗ, ಸಪ್ತಧಾತುಸಂಬಂಧವಾದ ಲಿಂಗ, ಇಂತು ಅಂಗದ ಮಲಿನಭಾವ, ಲಿಂಗದ ಶಿವಭಾವವ ಕಳದು, ಕ್ಷೀರ, ಘೃತ, ರಂಭಾ, ಇಕ್ಷು, ಮಧುಯುಕ್ತವಾದ ರಸಪಂಚಾಮೃತವ ಜಂಗಮಚರಣೋದಕ ಮಿಶ್ರದಿಂದ ಅಭಿಷೇಕಮಾಡಿಸಿ, ಅದರಿಂ ಮೇಲೆ ಗುರುಪಾದೋದಕದಲ್ಲಿ ಶರಣಗಣಂಗಳು ಹಸ್ತೋದಕ, ಮಂತ್ರೋದಕ, ಶುದ್ಧೋದಕ, ಗಂಧೋದಕ, ಪುಷ್ಪೋದಕವೆಂಬ ಪಂಚಪರಮಾನಂದ ಜಲದಿಂದ ಅಭ್ಯಂಗಸ್ನಾನ ಮಾಡಿಸಿ, ಹಿಂದು-ಮುಂದಣ ಕಾಲಕಾಮರ ಭಯಕ್ಕೆ ಅಂಜಬೇಡವೆಂದು ತ್ರಿವಿಧಂಗುಲಪ್ರಮಾಣವಾದ ದರ್ಭೆಯ ಅಂತು ಮಾಡಿ ತ್ರಿವಿಧಮಂತ್ರಸ್ಮರಣೆಯಿಂದ ಕಟಿಯಲ್ಲಿ ಧರಿಸಿದರಯ್ಯ. ಆರುವೈರಿಗಳಿಗೆ ಒಳಗಾಗಬೇಡವೆಂದು ಷಡಂಗುಲಪ್ರಮಾಣವಾದ ರಂಭಾಪಟ್ಟೆಯ ಕೌಪೀನವ ಮಾಡಿ ಷಡಕ್ಷರಮಂತ್ರಸ್ಮರಣೆಯಿಂದ ಹರಿಯಜದ್ವಾರಗಳ ಬಂಧಿಸಿದರಯ್ಯ. ಅದರಿಂದ ಮೇಲೆ ನಾರಂಗಶಾಟಿಯ ಪವಿತ್ರತೆಯಿಂ ಹೊದ್ದಿಸಿ, ಶ್ರೀ ಗುರುದೇವನ ಚರಣಕಮಲಕ್ಕೆ ಅಷ್ಟಾಂಗಪ್ರಣಿತನ ಮಾಡಿಸಿ, ಶಿವಶರಣ ಭಕ್ತ ಮಾಹೇಶ್ವರರುಗಳಿಗೆ ಹುಸಿಯ ನುಡಿಯದೆ, ದಿಟವ ಬಿಡದೆ, ಆಪ್ತತ್ವದಿಂದ ನಡೆ-ನುಡಿ, ಕೊಟ್ಟುಕೊಂಬ ವಿಚಾರಂಗಳ ಶ್ರುತಮಾಡಿದಲ್ಲಿ ಶ್ರೀ ಗುರುದೇವನು ಶರಣಗಣ ಒಪ್ಪಿಗೆಯಿಂದ ಶಿಷ್ಯನ ಮಸ್ತಕದ ಮೇಲೆ ಅಭಯಹಸ್ತವನ್ನಿಟ್ಟು, ಗುರುಶಿಷ್ಯಭಾವವಳಿದು, ಗುರುವಿನ ಸೂತ್ರದ ಶಿಷ್ಯಹಿಡಿದು, ಶಿಷ್ಯನ ಸೂತ್ರವ ಗುರುವು ಹಿಡಿದು, ಅಂತರಂಗಬಹಿರಂಗದಲ್ಲಿ ಶಿವಯೋಗಾನುಸಂಧಾನದಿಂದ ಏಕರೂಪವಾಗಿ ಭೃತ್ಯರಿಂದ ಕಳಸಾರ್ಚನೆಯ ರಚಿಸಿ, ಪ್ರಮಥಗಣಾರಾಧ್ಯ ಭಕ್ತಮಾಹೇಶ್ವರರೊಡಗೂಡಿ ನವರತ್ನಖಚಿತವಾದ ಶೂನ್ಯಸಿಂಹಾಸನದ ಮೇಲೆ ಮೂರ್ತಿಗೊಂಡಿರುವಂಥ ಮಂತ್ರಮೂರ್ತಿ ನಿರಂಜನಜಂಗಮಕ್ಕೆ ವಿಭೂತಿ ವೀಳ್ಯ, ಸುವರ್ಣಕಾಣಿಕೆ, ದಶಾಂಗಘನಸಾರ, ಪುಷ್ಪದಮಾಲೆ, ವಸ್ತ್ರಾಭರಣ ಮೊದಲಾಗಿ ಸಪ್ತಪದಾರ್ಥಂಗಳ ಪ್ರಮಥಗಣಾರಾಧ್ಯ ಭಕ್ತಮಾಹೇಶ್ವರ ಮಧ್ಯದಲ್ಲಿ ಇಟ್ಟು ಅಷ್ಟಾಂಗಯುಕ್ತರಾಗಿ ಸ್ವಸ್ಥದೃಢಚಿತ್ತದಿಂದ ಬಹು ಪರಾಕು ಭವರೋಗ ವೈದ್ಯನೆ ಎಂದು ತ್ರಿಕರಣಶುದ್ಧತಿಯಿಂದ ಅಭಿವಂದಿಸುವಂಥಾದ್ದೆ ಸ್ವಸ್ತಿಕಾರೋಹಣದೀಕ್ಷೆ. ಇಂತುಟೆಂದು ಶ್ರೀ ಗುರುನಿಷ್ಕಳಂಕಮೂರ್ತಿ ಚೆನ್ನಬಸವರಾಜೇಂದ್ರನು ನಿರ್ಲಜ್ಜಶಾಂತಲಿಂಗದೇಶಿಕೋತ್ತಮಂಗೆ ನಿರೂಪಮಂ ಕೊಡುತಿರ್ದರು ನೋಡ ಸಂಗನಬಸವೇಶ್ವರ.
--------------
ಗುರುಸಿದ್ಧದೇವರು
ಆಕಾರ ನಿರಾಕಾರವಿಲ್ಲದಂದು, ಹಮ್ಮುಬಿಮ್ಮುಗಳಿಲ್ಲದಂದು, ಜೀವ ಪರಮರಿಲ್ಲದಂದು, ಮನ ಮನನ ಮನುನೀಯವಿಲ್ಲದಂದು, ಶೂನ್ಯ ನಿಶೂನ್ಯ ನಾಮ ನಿರ್ನಾಮ ಇವೇನೂ ಇಲ್ಲದೆ, ಬಚ್ಚಬರಿಯ ಬಯಲೆ ಸಹಜದಿಂದ ಗಟ್ಟಿಗೊಂಡು, ಘನಲಿಂಗವೆಂಬ ಪುರುಷತತ್ತ್ವವಾಯಿತ್ತಯ್ಯ. ಆ ಘನಲಿಂಗದಿಂದ ಚಿಚ್ಛಕ್ತಿ ಜನಿಸಿದಳು. ಚಿಚ್ಚಕ್ತಿಯಿಂದ ಪರಶಕ್ತಿ ಪುಟ್ಟಿದಳು. ಪರಶಕ್ತಿಯಿಂದ ನಾದ ಬಿಂದು ಕಳೆಗಳಾದವು. ಅಕಾರವೇ ನಾದ, ಉಕಾರವೇ ಬಿಂದು, ಮಕಾರವೇ ಕಳೆ. ಇಂತೀ ತ್ರಿವಿಧಕ್ಕೆ ಪರಶಕ್ತಿಯೇ ತಾಯಿ. ಇಂತೀ ನಾಲ್ಕು ಒಂದಾದಲ್ಲಿ ಓಂಕಾರವಾಯಿತ್ತಯ್ಯ. ಮುಂದೀ ಪ್ರಣವ ತಾನೆ ಪಂಚಲಕ್ಷಣವಾಯಿತ್ತು. ಆ ಘನಲಿಂಗದಿಂದಲೇ ಪಂಚಸಾದಾಖ್ಯಮೂರ್ತಿಗಳಾದುವು. ಆ ಚಿಚ್ಛಕ್ತಿಯಿಂದಲೇ ಪಂಚಶಕ್ತಿಯರಾದರು. ಆ ಪಂಚಶಕ್ತಿಯರಿಂದಲೇ ಪಂಚಕಲೆಗಳಾದವು. ಆ ಪಂಚಲಕ್ಷಣವುಳ್ಳ ಮೂರ್ತಿ ತಾನೆ ತ್ರಯವಾದ ಭೇದವ ಹೇಳಿಹೆನು. ಅದೆಂತೆಂದಡೆ: ಶಿವತತ್ತ್ವ ಸದಾಶಿವತತ್ತ್ವ ಮಾಹೇಶ್ವರತತ್ತ್ವವೆಂದು ಮೂರುತೆರನಾಗಿಪ್ಪುದು. ಬಾಹ್ಯ ನಿಃಕಲತತ್ತ್ವವಾಗಿಪ್ಪುದು. ಒಂದು ಸಕಲನಿಃಕಲತತ್ತ್ವವಾಗಿಪ್ಪುದು. ಒಂದು ಸಕಲತತ್ತ್ವವಾಗಿಪ್ಪುದು. ಶಿವತತ್ತ್ವ ಏಕಮೇವ ಒಂದೆಯಾಗಿಪ್ಪುದು. ಸದಾಶಿವತತ್ತ್ವ ಐದುತೆರನಾಗಿಪ್ಪುದು. ಮಾಹೇಶ್ವರತತ್ವ ಇಪ್ಪತ್ತೆ ೈದು ತೆರನಾಗಿಪ್ಪುದು. ಹೀಂಗೆ ಶಿವತತ್ತ್ವ ಮೂವತ್ತೊಂದು ತೆರನೆಂದರಿವುದು. ಸ್ಥೂಲ, ಸೂಕ್ಷ ್ಮ, ಪರತತ್ವವೆಂಬ ಈ ಮೂರು ತತ್ತ್ವವೆ ಆರಾದ ಭೇದಮಂ ಪೇಳ್ವೆ. ಅದೆಂತೆಂದಡೆ: ಆ ಘನಲಿಂಗದ ಸಹಸ್ರಾಂಶದಲ್ಲಿ ಚಿತ್‍ಶಕ್ತಿ. ಚಿತ್‍ಶಕ್ತಿಯ ಸಹಸ್ರಾಂಶದಿಂದ ಪರಮೇಶ್ವರ. ಪರಮೇಶ್ವರನ ಸಹಸ್ರಾಂಶದಿಂದ ಪರಶಕ್ತಿ. ಆ ಪರಶಕ್ತಿಯ ಸಹಸ್ರಾಂಶದಿಂದ ಸದಾಶಿವನು. ಆ ಸದಾಶಿವನ ಸಹಸ್ರಾಂಶದಿಂದ ಆದಿಶಕ್ತಿ. ಆದಿಶಕ್ತಿಯ ಸಹಸ್ರಾಂಶದಿಂದ ಈಶ್ವರ. ಆ ಈಶ್ವರನ ಸಹಸ್ರಾಂಶದಿಂದ ಇಚ್ಛಾಶಕ್ತಿ. ಇಚ್ಛಾಶಕ್ತಿಯ ಸಹಸ್ರಾಂಶದಿಂದ ಮಾಹೇಶ್ವರ. ಮಾಹೇಶ್ವರನ ಸಹಸ್ರಾಂಶದಿಂದ ಜ್ಞಾನಶಕ್ತಿ. ಆ ಜ್ಞಾನಶಕ್ತಿಯ ಸಹಸ್ರಾಂಶದಿಂದ ರುದ್ರನು. ಆ ರುದ್ರನ ಸಹಸ್ರಾಂಶದಿಂದ ಕ್ರಿಯಾಶಕ್ತಿ. ಆ ಕ್ರಿಯಾಶಕ್ತಿಯ ಸಹಸ್ರಾಂಶದಿಂದ ಈಶಾನ್ಯಮೂರ್ತಿಯಾದನು. ಹೀಂಗೆ ಮೂರು ಆರು ತೆರನಾಯಿತ್ತಯ್ಯ. ಇನ್ನೀ ಲಿಂಗಂಗಳಿಗೆ ಸರ್ವ ಲಕ್ಷಣ ಸಂಪೂರ್ಣವ ಹೇಳಿಹೆನು. ಅದೆಂತೆಂದಡೆ: ಒಂದು ಮೂರ್ತಿ ಸರ್ವತೋಮುಖ ಸರ್ವತೋಚಕ್ಷು, ಸರ್ವತೋಬಾಹು, ಸರ್ವತೋಪಾದ, ಸರ್ವಪರಿಪೂರ್ಣನಾಗಿ ಮಾಣಿಕ್ಯವರ್ಣದ ಧಾತುವಿನಲ್ಲಿ ಭಾವಗಮ್ಯವಾಗಿ ಒಪ್ಪುತಿಪ್ಪುದು. ಅದರಿಂದಲಾದ ಮೂರ್ತಿಗೆ ಏಕ ಶಿರಸ್ಸು, ತ್ರಿಣೇತ್ರ, ಎರಡು ಹಸ್ತ, ಎರಡು ಪಾದ. ಮಿಂಚಿನವರ್ಣದ ಧಾತುವಿನಲ್ಲಿ ಜ್ಞಾನಗಮ್ಯವಾಗಿ ಒಪ್ಪುತಿಪ್ಪುದು. ಅದರಿಂದಲಾದ ಮೂರ್ತಿಗೆ ಎರಡು ಶಿರಸ್ಸು, ಆರು ಕಂಗಳು, ನಾಲ್ಕು ಭುಜ, ಎರಡು ಪಾದ, ಸುವರ್ಣದ ಧಾತುವಿನಲ್ಲಿ ಮನೋಗಮ್ಯವಾಗಿ ಒಪ್ಪುತಿಪ್ಪುದು. ಅದರಿಂದಲಾದ ಮೂರ್ತಿಗೆ ಮೂರು ಮುಖ, ಒಂಬತ್ತು ಕಂಗಳು, ಆರು ಭುಜ, ಎರಡು ಪಾದ, ಶ್ವೇತವರ್ಣದ ಧಾತುವಿನಲ್ಲಿ ಅಹಂಕಾರಗಮ್ಯವಾಗಿ ಒಪ್ಪುತಿಪ್ಪುದು. ಅದರಿಂದಲಾದ ಮೂರ್ತಿಗೆ ನಾಲ್ಕುಮುಖ, ಹನ್ನೆರಡು ಕಂಗಳು, ಎಂಟು ಭುಜ, ಎರಡು ಪಾದ, ಕುಂಕುಮವರ್ಣದ ಧಾತುವಿನಲ್ಲಿ ಬುದ್ಧಿಗಮ್ಯವಾಗಿ ಒಪ್ಪುತಿಪ್ಪುದು. ಅದರಿಂದಲಾದ ಮೂರ್ತಿಗೆ ಪಂಚಮುಖ, ದಶಭುಜ, ದಶಪಂಚನೇತ್ರ, ದ್ವಿಪಾದ, ತನುಯೇಕ, ಶುದ್ಧಸ್ಫಟಿಕವರ್ಣದ ಧಾತುವಿನಲ್ಲಿ ಚಿತ್ತಗಮ್ಯವಾಗಿ ಒಪ್ಪುತಿಪ್ಪುದು. ನಿರಾಕಾರವೇ ಸಾಕಾರವಾಗಿ ತೋರಿತ್ತು. ಸಾಕಾರ ನಿರಾಕಾರವೇಕವೆಂಬುದನು ಸ್ವಾನುಭಾವದಿಂದ ಅನುಭಾವಕೆ ತಂದೆನಯ್ಯ. ಇದು ತನ್ನಿಂದ ತಾನೆ ಸ್ವಯಂಭುವಾದ ಮೂರ್ತಿಯಲ್ಲದೆ ಮತ್ತೊಂದರಿಂದಾದುದಲ್ಲ. ಇಂತೆಸೆವ ಶಿವನ ಮುಖದಲ್ಲಿ ಒಗೆದ ಭೂತಂಗಳಾವವೆಂದಡೆ: ಸದ್ಯೋಜಾತ ಮುಖದಲ್ಲಿ ಪೃಥ್ವಿ. ವಾಮದೇವ ಮುಖದಲ್ಲಿ ಅಪ್ಪು. ಅಘೋರ ಮುಖದಲ್ಲಿ ಅಗ್ನಿ. ತತ್ಪುರುಷ ಮುಖದಲ್ಲಿ ವಾಯು. ಈಶಾನ್ಯ ಮುಖದಲ್ಲಿ ಆಕಾಶ. ಇಂತುದಯವಾದ ಪಂಚಭೂತಂಗಳು ಪಂಚವಿಂಶತಿತತ್ವವಾದ ಭೇದವ ಹೇಳಿಹೆನು. ಆವಾವೆಂದರೆ: ಪೃಥ್ವಿ ಅಪ್ಪು ತೇಜ ವಾಯು ಆಕಾಶ ಇಂತಪ್ಪ ಸ್ಥೂಲಭೂತಿಕವೈದು. ಪ್ರಾಣ ಅಪಾನ ವ್ಯಾನ ಉದಾನ ಸಮಾನವೆಂದು ವಾಯುಗಳೈದು. ವಾಕು ಪಾಣಿ ಪಾದ ಪಾಯು ಗುಹ್ಯವೆಂದು ಕರ್ಮೇಂದ್ರಿಯಂಗಳೈದು. ಶ್ರೋತ್ರ ತ್ವಕ್ಕು ನೇತ್ರ ಜಿಹ್ವೆ ಘ್ರಾಣವೆಂದು ಬುದ್ಧೀಂದ್ರಿಯಂಗಳೈದು. ಮನ ಬುದ್ಧಿ ಚಿತ್ತ ಅಹಂಕಾರವೆಂದು ಕರಣ ಚತುಷ್ಟಯ ನಾಲ್ಕು. ಜೀವನೊಬ್ಬನು; ಅಂತು ಆತ್ಮತತ್ತ್ವವಿಪ್ಪತ್ತೆ ೈದು. ವಿದ್ಯಾತತ್ತ್ವಹತ್ತು ತೆರನು. ಅದೆಂತೆಂದಡೆ: ಶಾಂತಾತೀತ, ಶಾಂತಿ, ವಿದ್ಯೆ, ಪ್ರತಿಷೆ*, ನಿವೃತ್ತಿ ಎಂದು ಕಲಾಶಕ್ತಿಯರೈದು. ಶಿವಸಾದಾಖ್ಯ ಅಮೂರ್ತಿಸಾದಾಖ್ಯ ಮೂರ್ತಿಸಾದಾಖ್ಯ ಕರ್ತೃಸಾದಾಖ್ಯ ಕರ್ಮಸಾದಾಖ್ಯವೆಂದು ಶಿವಾದಿಯಾದ ಸಾದಾಖ್ಯಮೂರ್ತಿಗಳೈದು. ಅಂತು ವಿದ್ಯಾತತ್ವ ಹತ್ತು ತೆರನು. ದ್ವಿತೀಯ ತತ್ತ್ವಮೂವತ್ತೆ ೈದು ತೆರನು. ಇವೆಲ್ಲಾ ತತ್ತ್ವಂಗಳಿಗನುತ್ತರತತ್ತ್ವವಾಗಿ ಶಿವತತ್ತ್ವವೊಂದು. ಅಂತು ತತ್ತ್ವ ಮೂವತ್ತಾರು. ಅಂತು ಆತ್ಮತತ್ತ್ವ ವಿದ್ಯಾತತ್ತ್ವ ಶಿವತತ್ತ್ವವೆಂಬ ತ್ರೆ ೈತತ್ತ್ವ ಮೂವತ್ತಾರು ತೆರನು. ಈ ತತ್ತ್ವಂಗಳಲ್ಲಿಯೇ ತತ್ತ್ವಮಸ್ಯಾದಿ ವಾಕ್ಯಾರ್ಥ ಕಾಣಲಾಯಿತ್ತು. ಅದು ಹೇಂಗೆಂದಡೆ: ತತ್‍ಪದ ತ್ತ್ವಂಪದ ಅಸಿಪದವೆಂದು ಮೂರು ತೆರನು. ತತ್‍ಪದವೆಂದು ತೂರ್ಯನಾಮದ ಶಿವತತ್ತ್ವವು. ತ್ವಂ ಪದವೆಂದು ಇಪ್ಪತ್ತೆ ೈದು ತೆರನಾಗುತಂ ಇದ್ದಂಥಾ ಆತ್ಮತತ್ತ್ವವು. ಅಸಿ ಪದವೆಂದು ಹತ್ತು ತೆರನಾಗುತಂ ಇದ್ದಂಥಾ ವಿದ್ಯಾತತ್ತ್ವವು. ತತ್‍ಪದವೇ ಲಿಂಗ, ತ್ವಂ ಪದವೇ ಅಂಗ, ಅಸಿ ಪದವೇ ಲಿಂಗಾಂಗ ಸಂಬಂಧ. ಈ ತ್ರಿವಿಧ ಪದವನೊಳಕೊಂಡು ನಿಂದುದೇ ಪರತತ್ತ್ವವಯ್ಯಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ನೇಣಿನಲ್ಲಿ ಹಾವನಿಲ್ಲೆಂದು ಹೇಳುವಂಗೆ ಹಾವಿನಲ್ಲಿನೇಣು ಉಂಟಾಗಬಲ್ಲುದೆ ಹೇಳಾ? ಶಿವನಿಂದನ್ಯವೇನೂ ಇಲ್ಲೆಂದು ಬೋಧಿಸುವಂಗೆ ತನು ಕರಣೇಂದ್ರಿಯ ಶಬ್ದಾದಿ ವಿಷಯ ಸಂಸಾರ ಸುಖದುಃಖಗಳಾಗಬಲ್ಲವೆ? ಇಲ್ಲದುದ ಕಂಡೆ, ಉಂಟೆಂಬುದತರ್ಕ `ನೇಹನಾ ನಾಸ್ತಿಕಿಂಚನ, ಏಕಮೇವ ನಿರಂತರಂ' ಎಂದುದು ವೇದ. ಶಿವನಿಂದನ್ಯವೇನೂ ಇಲ್ಲ ಎಂದರಿದರಿವು ನೀನೇ, ಸಿಮ್ಮಲಿಗೆಯ ಚೆನ್ನರಾಮಾ.
--------------
ಚಂದಿಮರಸ
ಇದಕ್ಕೆ ಪ್ರಣವೋಪನಿಷತ್ತು : ಅಕಾರವೆಂಬ ಪ್ರಣವದಲ್ಲಿ- ``ದಂಡಶ್ಚ ತಾರಕಾಕಾರೋಭವತಿ ಓಂ ನಿರಾಳಾತ್ಮ ದೇವತಾ | ಅಕಾರೇ ಚ ಲಯಂ ಪ್ರಾಪ್ತೇ ದಶಮಂ ಪ್ರಣವಾಂಶಕೇ ||'' ಉಕಾರವೆಂಬ ಪ್ರಣವದಲ್ಲಿ- ``ಕುಂಡಲಶ್ಚ ಅರ್ಧಚಂದ್ರೋಭವತಿ ಓಂ ನಿರಂಜನಾತ್ಮಾ ದೇವತಾ ಉಕಾರೇ ಚ ಲಯಂ ಪ್ರಾಪ್ತೇ ಏಕಮೇವ ಪ್ರಣವಾಂಶಕೇ ||'' ಮಕಾರವೆಂಬ ಪ್ರಣವದಲ್ಲಿ- ``ದರ್ಪಣಶ್ಚ ಜ್ಯೋತಿರೂಪೋ ಭವತಿ ಓಂ ನಿರಾಮಯಾತ್ಮಾ ದೇವತಾ | ಮಕಾರೇ ಚ ಲಯಂ ಪ್ರಾಪ್ತೇ ದ್ವಾದಶಂ ಪ್ರಣವಾಂಶಕೇ ||'' ``ಅಕಾರೇ ಚ ಉಕಾರೇ ಚ ಮಕಾರೇ ಚ ನಿರಂಜನಂ | ಇದಮೇಕಂ ಸಮುತ್ಪನ್ನಂ ಓಂ ಇತಿ ಜ್ಯೋತಿರೂಪಕಂ || ಪ್ರಥಮಂ ಕಾರಕಾರೂಪಂ ದ್ವಿತೀಯೋ ದಂಡ ಉಚ್ಯತೇ | ತೃತೀಯಃ ಕುಂಡಲಾಕಾರಃ ಚತುರ್ಥಶ್ಚಾರ್ಧಚಂದ್ರಕಂ || ಪಂಚಮಂ ದರ್ಪಣಾಕಾರಂ ಷಷೊ*ೀ ಜ್ಯೋತಿಸ್ವರೂಪಕಂ | ಇತಿ ಪ್ರಣವಃ ವಿಜ್ಞಾತಃ ಏತದ್ಗೋಪಂ ವರಾನನೇ || ಓಂಕಾರಪ್ರಭವೋ ರುದ್ರಃ ಓಂಕಾರ ಪ್ರಭುವೋ ಜಪಃ | ಓಂಕಾರಪ್ರಭವೋ ಬ್ರಹ್ಮಾ ಓಂಕಾರ ಪ್ರಭವೋ ಹರಿಃ || ಓಂಕಾರಪ್ರಭವಶ್ಚಂದ್ರಃ ಓಂಕಾರ ಪ್ರಭುವೋ ರವಿಃ | ಓಂಕಾರಪ್ರಭವೋ ವೇದಃ ಓಂಕಾರ ಪ್ರಭವಃ ಸ್ವರಃ || ಓಂಕಾರಪ್ರಭವಂ ಸರ್ವಂ ತ್ರೈಲೋಕ್ಯಂ ಸಚರಾಚರಂ | ಸರ್ವವ್ಯಾಪಕಮೋಂಕಾರಂ ಮಂತ್ರಾಣ್ಯನ್ಯತ್ರನಸೋ ಭವೇತ್ || ಪ್ರಣವೋಹಿಃ ಪರಬ್ರಹ್ಮ ಪ್ರಣವಃ ಪರಮಂ ಪದಂ | ಓಂಕಾರಂ ನಾದರೂಪಂ ಚ ಓಂಕಾರಂ ಮಂತ್ರರೂಪಕಂ | ಓಂಕಾರಂ ವ್ಯಾಪಿ ಸರ್ವತ್ರ ಓಂಕಾರಂ ಗೋಪ್ಯಮಾನನಂ | ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಆಜ್ಞಾಕರ್ತೃವಿನ ಅಂಗನೆಗೆ ಮೋಹದ ಮಗಳು ಹುಟ್ಟಿದಳು ನೋಡಾ. ಆಕೆಯ ವಿಲಾಸದಿಂದ ಲೋಕಾದಿಲೋಕಂಗಳೆಲ್ಲ ಉದಯಿಸಿದವು ನೋಡಾ. ಆಯಾಕೆ ನಿಂದಲ್ಲೆ ಪ್ರಳಯವಾಗುತ್ತಿಪ್ಪವು ನೋಡಾ. ಆ ಲೋಕ ಲೌಕಿಕವನತಿಗಳೆದು, ಆಕೆಯ ಸಂಗಕ್ಕೆ ಹೊರಗಾದಾತನೇ, ಏಕಮೇವ ನ ದ್ವಿತೀಯ ಪರಬ್ರಹ್ಮವು. ತಾನು ತಾನಾದ ಪ್ರಾಣಲಿಂಗೈಕ್ಯನಯ್ಯಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಇನ್ನು ಲಿಂಗಗರ್ಭದಲ್ಲಿ ಅನೇಕ ಕೋಟಿ ತತ್ವಂಗಳು, ಅನೇಕ ಕೋಟಿ ಸದಾಶಿವರು, ಅನೇಕ ಕೋಟಿ ಈಶ್ವರರು ಅಡಗಿಹರು ನೋಡಾ. ಆ ಲಿಂಗಗರ್ಭದಲ್ಲಿ ಅನೇಕ ಕೋಟಿ ಮಹೇಶ್ವರರು, ಅನೇಕ ಕೋಟಿ ರುದ್ರರು, ಅನೇಕ ಕೋಟಿ ವಿಷ್ಣಾ ್ವದಿಗಳಡಗಿಹರು ನೋಡಾ. ಆ ಲಿಂಗಗರ್ಭದಲ್ಲಿ ಅನೇಕ ಕೋಟಿ ಬ್ರಹ್ಮರು, ಅನೇಕ ಕೋಟಿ ಚಂದ್ರಾದಿತ್ಯರು, ಅನೇಕ ಕೋಟಿ ಋಷಿಗಳಡಗಿಹರು ನೋಡಾ. ಆ ಲಿಂಗಗರ್ಭದಲ್ಲಿ ಅನೇಕ ಕೋಟಿ ಇಂದ್ರರು, ಅನೇಕ ಕೋಟಿ ದೇವರ್ಕಳು, ಅನೇಕ ಕೋಟಿ ಬ್ರಹ್ಮಾಂಡಂಗಳಡಗಿ ಆದಿಮಧ್ಯಾವಸಾನಗಳಿಲ್ಲದೆ ಅಖಂಡ ಪರಿಪೂರ್ಣ ಗೋಳಕಾಕಾರ ಅಪ್ರಮಾಣ ಅಗೋಚರ ಅಪ್ರಮೇಯ ಅವ್ಯಕ್ತ ಅನಂತತೇಜ ಅತ್ಯಂತಪ್ರಚಯ ಅನಂತಕೋಟಿ ಸೂರ್ಯಚಂದ್ರಾಗ್ನಿ ಪ್ರಕಾಶ ಅನಂತಕೋಟಿ ಸಿಡಿಲೊಡೆದ ಬಯಲಪ್ರಕಾಶವಾಗಿಹರು ನೋಡಾ. ಇದಕ್ಕೆ ಶಿವಧರ್ಮ ಸೂತ್ರೇ: ``ತತ್ವ ಸಂಜ್ಞಾಃ ಅಸಂಖ್ಯಾತಾಃ ಅಸಂಖ್ಯಾತ ಅಂಬರಂ ತಥಾ | ಅಸಂಖ್ಯಾ ದೇವಮುನಯಃ ಲಿಂಗತತ್ವೇ ವಿಲೀಯಂತೇ || ಅಸಂಖ್ಯಾತ ಸೂರ್ಯಚಂದ್ರಾಗ್ನಿ ತಾರಾಖ್ಯ ದೈತ್ಯ ಮಾನವಾಃ | ಅಸಂಖ್ಯಾತ ಸುರೇಂದ್ರಾಣಾಂ ಲಿಂಗಗರ್ಭೇ ವಿಲೀಯತೇ || ಅಸಂಖ್ಯಾ ಮಹಾವಿಷ್ಣವಃ ಅಸಂಖ್ಯಾತ ಪಿತಾಮಹಾಃ | ಅಸಂಖ್ಯಾತ ಮಹದಾಕಾಶಂ ಲಂಗಗರ್ಭೇ ವಿಲೀಯತೇ ||'' ಇಂತೆಂದುದಾಗಿ, ಇದಕ್ಕೆ ಶಿವಧರ್ಮ ಪುರಾಣೇ : ``ಕಲ್ಪಾಂತೇ ತಸ್ಯ ದೇವಸ್ಯ ಲೀಯತೇ ಸರ್ವದೇವತಾ | ದಕ್ಷಿಣೇ ಲೀಯತೇ ಬ್ರಹ್ಮಾ ವಾಮಭಾಗೇ ಜನಾರ್ಧನಃ || ಹೃದಯೇ ಚೈವ ಗಾಯತ್ರೀ ಸರ್ವದೇವೋತ್ತಮೋತ್ತಮಃ | ಲೀಯತೇ ಮೂಧ್ರ್ನಿ ವೈವೇದಾ ಷಡಂಗಪದಕ್ರಮಾತ್ || ಜಠರೇ ಲೀಯತೇ ಸರ್ವಂ ಜಗತ್‍ಸ್ಥಾವರ ಜಂಗಮಂ || ಉತ್ಪಾದ್ಯತೇ ಘನಸ್ತಸ್ಮಾತ್ ಬ್ರಹ್ಮಾದ್ಯಂ ಸಚರಾಚರಂ ||'' ಇಂತೆಂದುದಾಗಿ. ಇದಕ್ಕೆ ಶಿವಲಿಂಗಾಗಮೇ : ``ಚಿದ್ವ್ಯೋಮ ಲಿಂಗಮಿತ್ಯಾಹುಃ ಚಿದ್ಭೂಮಿ ತಸ್ಯ ಪೀಠಿಕಾ | ಆಲಯಃ ಸರ್ವದೇವಾನಾಂ ಲಯಾನಾಂ ಲಿಂಗಮುಚ್ಯತೇ || ಲಿಂಗಮಧ್ಯೇ ಜಗತ್ಸರ್ವಂ ತ್ರೈಲೋಕ್ಯಂ ಸಚರಾಚರಂ | ಉತ್ಪದ್ಯಂತೇ ಪುನಸ್ತಸ್ಮಾತ್ ಬ್ರಹ್ಮಾವಿಷ್ಣಾದಿ ದೇವತಾಃ ||'' ಇಂತೆಂದುದಾಗಿ, ಇದಕ್ಕೆ ಮಕುಟಾಗಮಸಾರೇ : ``ಆದಿಮಧ್ಯಾಂತ ಶೂನ್ಯಂ ಚ ಶೂನ್ಯ ಶೂನ್ಯಂ ದಶಾದಿಶಂ | ಸರ್ವಶೂನ್ಯಂ ನಿರಾಕಾರಂ ನಿದ್ರ್ವಂದ್ವಂ ಪರಮಂ ಪದಂ ||'' ಇಂತೆಂದುದಾಗಿ, ಇದಕ್ಕೆ ಉತ್ತರವಾತುಲಾಗಮೇ : ``ನ ಭೂಮಿರ್ನಜಲಂ ಚೈವ ನ ತೇಜೋ ನ ಚ ವಾಯುಚ | ನಚಾಕಾಶಂ ನ ಸೂರ್ಯಶ್ಚ ನಚ ಚಂದ್ರಮಇಂದ್ರಯೋ | ನ ಚ ಬ್ರಹ್ಮ ನ ವಿಶ್ವಂ ಚ ನಚೋ ನಕ್ಷತ್ರಕಾರಕಾ | ಏಕಮೇವ ಪರಂ ನಾಸ್ತಿ ಅಖಂಡಿತಮಹೋದಯಂ | ಸರ್ವಶೂನ್ಯಂ ನಿರಾಲಂಬಂ ಸ್ವಯಂ ಲಿಂಗಮಯಂ ಪರಂ ||'' ಇಂತೆಂದುದಾಗಿ, ಇದಕ್ಕೆ ರುದ್ರಕೋಟಿಸಂಹಿತಾಯಾಂ : ``ವಾಚಾತೀತಂ ಮನೋತೀತಂ ಭಾವಾತೀತಂ ಪರಂ ಶಿವಂ | ಸರ್ವಶೂನ್ಯಂ ನಿರಾಕಾರಂ ಸ್ವಯಂಭುರ್ಲಿಂಗಮೂರ್ತಯೇ ||'' ಇಂತೆಂದುದಾಗಿ, ಇದಕ್ಕೆ ಮಹಾಗಮಸಾರೇ : ``ಊಧ್ರ್ವಶೂನ್ಯಂ ಅಧಃ ಶೂನ್ಯಂ ಮಧ್ಯಶೂನ್ಯಂ ನಿರಾಮಯಂ | ಸರ್ವಶೂನ್ಯಂ ನಿರಾಕಾರಂ ಸ್ವಯಂಭುರ್ಲಿಂಗಮೂರ್ತಯೇ ||'' ಇಂತೆಂದುದಾಗಿ, ಇದಕ್ಕೆ ಆದಿ ನಾರಾಯಣ ಉವಾಚ : ``ನಮಸ್ತೇ ಜ್ಞಾನಲಿಂಗಾಯ ಶಿವಲಿಂಗಾಯ ಲಿಂಗಿನೇ | ನಮಸ್ತೇ ಗೂಢಲಿಂಗಾಯ ಪರಲಿಂಗಾಯ ಲಿಂಗಿನೇ || ಜಗತ್ಕಾರಣಲಿಂಗಾಯ ಜಗತಾಂ ಪತಯೇ ನಮಃ | ಆವಯೋಃ ಪತಯೇ ನಮಃ ನಿತ್ಯಂ ಪತೀನಾಂ ಪತಯೇ || ಅನಾದಿಮಲಸಂಸಾರೇ ರೋಗವೈದ್ಯಾಯ ಶಂಭವೇ | ನಮಃ ಶಿವಾಯ ಶಾಂತಾಯ ಬ್ರಹ್ಮಣೇ ಲಿಂಗಮೂರ್ತಯೇ || ಪ್ರಳಯಾಂಬುಧಿ ಸಂಸ್ಥಾಯ ಪ್ರಳಯೋತ್ಪತ್ಯಹೇತವೇ | ನಮಃ ಶಿವಾಯ ಶಾಂತಾಯ ಬ್ರಹ್ಮಣೇ ಲಿಂಗಮೂರ್ತಯೇ || ಆದಿಮಧ್ಯಾಂತಶೂನ್ಯಾಯ ಅಂಬರಸ್ಯಾಪಿ ಹೇತವೇ | ನಮಃ ಶಿವಾಯ ಶಾಂತಾಯ ಬ್ರಹ್ಮಣೇ ಲಿಂಗಮೂರ್ತಯೇ || ನಿಷ್ಕಳಾಯ ವಿಶುದ್ಧಾಯ ನಿತ್ಯಾನಂದಸ್ಯ ಹೇತವೇ | ನಮಃ ಶಿವಾಯ ಶಾಂತಾಯ ಬ್ರಹ್ಮಣೇ ಲಿಂಗಮೂರ್ತಯೇ || ನಿರ್ವಿಕಾರಾಯ ನಿತ್ಯಾಯ ಸತ್ಯಾಯ ಪರಮಾತ್ಮನೇ | ನಮಃಶಿವಾಯ ಶಾಂತಾಯ ಬ್ರಹ್ಮಣೇ ಲಿಂಗಮೂರ್ತಯೇ || ಓಂಕಾರಾಂತಾಯ ಸೂಕ್ಷ್ಮಾಯ ಸ್ತ್ರೀಪುಂಸಾಯಾತ್ಮ ರೂಪಣೇ | ನಮಃಶಿವಾಯ ಶಾಂತಾಯ ಬ್ರಹ್ಮಣೇ ಲಿಂಗಮೂರ್ತಯೇ || ಲೀಲಾತ್ಮಂಚ ದ್ವಯೋರ್ಮಧ್ಯೇ ಕಾಯಾತ್ಮರೂಪಣೇ | ನಮಃಶಿವಾಯ ಶಾಂತಾಯ ಬ್ರಹ್ಮಣೇ ಲಿಂಗಮೂರ್ತಯೇ ||'' ಇಂತೆಂದುದಾಗಿ, ಇದಕ್ಕೆ ಮಹಾದೇವ ಉವಾಚ : ``ವಾಚಾತೀತಂ ಮನೋತೀತಂ ವರ್ಣಾತೀತಂ ಪರಂ ಶಿವಂ | ಸರ್ವಶೂನ್ಯಂ ನಿರಾಕಾರಂ ನಿರಾಲಂಬಸ್ಯ ಲಿಂಗಯೋಃ ||'' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಕಾಮದಿಂದ ಕರಗನು, ಕ್ರೋಧದಿಂದ ಕೊರಗನು. ಲೋಭ ಮೋಹಂಗಳಿಂದತಿ ನೋವನಲ್ಲ ನೋಡಾ, ಭಕ್ತನು. ಮದ ಮತ್ಸರಗಳಿಂದ ಬೆದಬೆದನೆ ಬೇವವನಲ್ಲ; ಅಹಂಕಾರ ಮಮಕಾರಗಳಿಂದ ಮತಿಮಂದನಲ್ಲ ನೋಡಾ, ಭಕ್ತನು ಆಕಾರ ನಿರಾಕಾರ ಏಕವಾದ ಏಕಮೇವ ಪರಬ್ರಹ್ಮವು ತಾನೇ ನೋಡಾ, ಭಕ್ತನು, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಆಕಾರವಳಿದು ನಿರಾಕಾರವಾದ ಶರಣನು ಏಕಮೇವ ಪರಬ್ರಹ್ಮಲಿಂಗವನಾಚರಿಸುತಿರ್ದನು ನೋಡಾ. ಸಾಕಾರವಿಡಿದು, ಆ ಲಿಂಗದಲ್ಲಿ ಕೂಡಿ, ನಿಶ್ಚಿಂತ ನಿರಾಕುಳನಾಗಿರ್ದ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಏಕಮೇವ ನ ದ್ವಿತೀಯಂ ಬ್ರಹ್ಮವೆಂಬ ಘನಮಹಿಮನ ಕಂಡ ಕಾಣಿಕೆಯಲ್ಲಿ, ತನುಮನ ಕರಗಿ, ಕರಣಂಗಳೆಲ್ಲ ತರಹರವಾದವಯ್ಯಾ. ದೀರ್ಘದಂಡ ನಮಸ್ಕಾರಂ ನಿರ್ಲಜ್ಜಂ ಗುರುಸನ್ನಿಧೌ | ಶರೀರಮರ್ಥಪ್ರಾಣಂ ಚ ಸದ್ಗುರುಭ್ಯೋ ನಿವೇದಯೇತ್ || ಎಂದುದಾಗಿ, ಶರಣುವೊಕ್ಕೆ ನಾನು. ಎನ್ನ ಶಿರ ನಿಮ್ಮ ಚರಣದಲ್ಲಿ ಬಿಡಿಸಬಾರದ ಸಂಗ. ಮಹಾದಾನಿ ಸೊಡ್ಡಳನ ಶರಣ ಪ್ರಭುದೇವರ ಕಂಡು, ಎನ್ನ ಭವದ ಬಳ್ಳಿಯ ಬೇರು ಹರಿಯಿತ್ತಯ್ಯಾ.
--------------
ಸೊಡ್ಡಳ ಬಾಚರಸ
ಅಯ್ಯಾ ತತ್ವ ವಿತತ್ವ ಶೂನ್ಯ ಮಹಾಶೂನ್ಯವಿಲ್ಲದಂದು, ಬ್ರಹ್ಮ ವಿಷ್ಣು ರುದ್ರ ಇನ ಶಶಿ ವ್ಯೋಮ ಸಮೀರ ಅಗ್ನಿ ಅಂಬು ಪೃಥ್ವಿ ನವಗ್ರಹ ದಶದಿಕ್ಕು ಛತ್ತೀಸ ತತ್ವಂಗಳೇನೂ ಇಲ್ಲದಂದು, ತಾರಜ ತಂಡಜ ಬಿಂದುಜ ಭಿನ್ನಾಯುಕ್ತ ಅವ್ಯ[ಕ್ತ] ಅಮದಾಯುಕ್ತ ಮಣಿರಣ ಮಾನ್ಯರಣ್ವ ವಿಶ್ವರಣ ವಿಶ್ವಾವಸು ಅಲಂಕೃತ ಕೃತಯುಗ ತ್ರೇತಾಯುಗ ದ್ವಾಪರ ಕಲಿಯುಗ ಇಂತಿವು ಯಾವವೂ ಇಲ್ಲದಂದು, ನಾದ ಬಿಂದು ಕಳೆಗಳಿಲ್ಲದಂದು, ಪಶುಪಾಶ ಪತಿ ಕುಂಡಲಿ ಕಾರಕ ಇವೇನೂ ಇಲ್ಲದಂದು, ವಿಜ್ಞಾನಾಲಕರು ಸಕಲಾಕಲರು ಪ್ರಳಯಾಕಲರು ಇವೇನೂ ಇಲ್ಲದಂದು, ದನುಜ ಮನುಜ ದಿವಿಜ ಮನು ಮುನಿ ನಕ್ಷತ್ರಮಂಡಲ ಇವೇನೂ ಇಲ್ಲದಂದು, ಅಂದು ನೀನು ನಿಷ್ಕಲ ನಿರವಯ ನಿಃಶೂನ್ಯನಾಗಿರ್ದೆಯಯ್ಯ ಬಸವಣ್ಣ. ನೀವೊಂದು ಅನಂತಕಾಲ ಅನಂತಯುಗ ನಿಮ್ಮ ಲೀಲಾ ವಿಚಿಂತನೆ ನೆನೆದ ನೆನಹೇ ಸುನಾದ. ಆ ಸುನಾದದ ಪ್ರಕಾಶ ತೇಜೋಪುಂಜವೇ ಬಿಂದು. ನಾದವೇ ನಿರಂಜನ. ಬಿಂದುವೇ ನಿರಾಲಂಬ..... ಕೂಟವೇ ನಿರಾಮಯ. ಇಂತೀ ನಾದ ಬಿಂದು ಕಳೆ ಮೂರು ಕೂಡೆ ಅಖಂಡ ತೇಜೋಮಯವಾಗಿ ಷಡ್‍ಬ್ರಹ್ಮಸ್ವರೂಪವನೈದಿದೆಯಲ್ಲ ಬಸವಣ್ಣ. ನಿನ್ನ ವಿನೋದದಿಂದ ಆ ಷಡ್‍ಬ್ರಹ್ಮದಿಂದ ಷಡ್ವಿಧ ಭೂತಂಗಳು ಪುಟ್ಟಿ ಆ ಷಡ್ವಿಧಭೂತಂಗಳೇ ಎನಗಂಗವಾದಲ್ಲಿ ಆ ಷಡ್‍ಬ್ರಹ್ಮವೇ ಷಡಕ್ಷರಿಮಯವಾಗಿ ಆ ಷಡ್ವಿಧಭೂತಂಗಳೊಳಗೆ ಸಮೇತವಾಗಿ ಕೂಡಿ ಛತ್ತೀಸತತ್ವ ಮಂತ್ರಸ್ವರೂಪವಾದ ಭೇದ ಹೇಗೆಂದಡೆ ಅದಕ್ಕೆ ವಿವರ: ಓಂಕಾರವೇ ಆತ್ಮನು. ಓಂಕಾರ ಯಕಾರ ಸಂಯೋಗವಾದಲ್ಲಿ ಆಕಾಶ ಪುಟ್ಟಿತ್ತು. ಓಂಕಾರ ವಾಕಾರ ಸಂಯೋಗವಾದಲ್ಲಿ ವಾಯು ಪುಟ್ಟಿತ್ತು. ಓಂಕಾರ ಶಿಕಾರ ಸಂಯೋಗದಲ್ಲಿ ಅಗ್ನಿ ಪುಟ್ಟಿತ್ತು. ಓಂಕಾರ ಮಃಕಾರ ಸಂಯೋಗದಲ್ಲಿ ಅಪ್ಪು ಪುಟ್ಟಿತ್ತು. ಓಂಕಾರ ನಕಾರ ಸಂಯೋಗವಾದಲ್ಲಿ ಪೃಥ್ವಿ ಪುಟ್ಟಿತ್ತು. ಇನ್ನ ಯಕಾರ ಓಂಕಾರ ಸಂಯೋಗವಾದಲ್ಲಿ ಭಾವ ಪುಟ್ಟಿತ್ತು. ಯಕಾರವೇ ಜ್ಞಾನ. ಯಕಾರ ವಾಕಾರ ಸಂಯೋಗವಾದಲ್ಲಿ ಮನ ಪುಟ್ಟಿತ್ತು. ಯಕಾರ ಶಿಕಾರ ಸಂಯೋಗವಾದಲ್ಲಿ ಅಹಂಕಾರ ಪುಟ್ಟಿತ್ತು. ಯಕಾರ ಮಃಕಾರ ಸಂಯೋಗವಾದಲ್ಲಿ ಬುದ್ಧಿ ಪುಟ್ಟಿತ್ತು. ಯಕಾರ ನಕಾರ ಸಂಯೋಗವಾದಲ್ಲಿ ಚಿತ್ತು ಪುಟ್ಟಿತ್ತು. ಇನ್ನು ವಕಾರ ಓಂಕಾರ ಸಂಯೋಗವಾದಲ್ಲಿ ಪಂಚವಾಯು ಪುಟ್ಟಿದವು. ವಕಾರ ಯಕಾರ ಸಂಯೋಗವಾದಲ್ಲಿ ಸಮಾನವಾಯು ಪುಟ್ಟಿತ್ತು. ವಾಕಾರ ತಾನೇ ಉದಾನವಾಯು. ವಕಾರ ಶಿಕಾರ ಸಂಯೋಗವಾದಲ್ಲಿ ವ್ಯಾನವಾಯು ಪುಟ್ಟಿತ್ತು. ವಕಾರ ಮಃಕಾರ ಸಂಯೋಗವಾದಲ್ಲಿ ಅಪಾನವಾಯು ಪುಟ್ಟಿತ್ತು. ವಕಾರ ನಕಾರ ಸಂಯೋಗವಾದಲ್ಲಿ ಪ್ರಾಣವಾಯು ಪುಟ್ಟಿತ್ತು. ಇನ್ನು ಶಿಕಾರ ಓಂಕಾರ ಸಂಯೋಗವಾದಲ್ಲಿ ಹೃದಯ ಪುಟ್ಟಿತ್ತು. ಶಿಕಾರ ಯಕಾರ ಸಂಯೋಗವಾದಲ್ಲಿ ಶ್ರೋತ್ರ ಪುಟ್ಟಿತ್ತು. ಶಿಕಾರಾ ವಾಕಾರ ಸಂಯೋಗವಾದಲ್ಲಿ ತ್ವಕ್ಕು ಪುಟ್ಟಿತ್ತು. ಶಿಕಾರ ತಾನೇ ನೇತ್ರ ಶಿಕಾರ ಮಃಕಾರ ಸಂಯೋಗವಾದಲ್ಲಿ ಜಿಹ್ವೆ ಪುಟ್ಟಿತ್ತು. ಶಿಕಾರ ನಕಾರ ಸಂಯೋಗವಾದಲ್ಲಿ ಘ್ರಾಣ ಪುಟ್ಟಿತ್ತು. ಇನ್ನು ಮಃಕಾರ ಓಂಕಾರ ಸಂಯೋಗವಾದಲ್ಲಿ ತೃಪ್ತಿ ಪುಟ್ಟಿತ್ತು. ಮಕಾರ ಯಕಾರ ಸಂಯೋಗವಾದಲ್ಲಿ ಶಬ್ದ ಪುಟ್ಟಿತ್ತು. ಮಕಾರ ವಾಕಾರ ಸಂಯೋಗವಾದಲ್ಲಿ ಸ್ಪರ್ಶನ ಪುಟ್ಟಿತ್ತು. ಮಕಾರ ಶಿಕಾರ ಸಂಯೋಗವಾದಲ್ಲಿ ರೂಪು ಪುಟ್ಟಿತ್ತು. ಮಃಕಾರ ತಾನೇ ರಸ. ಮಕಾರ ನಕಾರ ಸಂಯೋಗವಾದಲ್ಲಿ ಗಂಧ ಪುಟ್ಟಿತ್ತು. ಇನ್ನು ನಕಾರ ಓಂಕಾರ ಸಂಯೋಗವಾದಲ್ಲಿ ಅಂತರ್ವಾಕ್ಕು ಪುಟ್ಟಿತ್ತು. ನಕಾರ ಯಕಾರ ಸಂಯೋಗವಾದಲ್ಲಿ ವಾಕ್ಕು ಪುಟ್ಟಿತ್ತು. ನಕಾರ ವಾಕಾರ ಸಂಯೋಗವಾದಲ್ಲಿ ಪಾಣಿ ಪುಟ್ಟಿತ್ತು. ನಕಾರ ಶಿಕಾರ ಸಂಯೋಗವಾದಲ್ಲಿ ಪಾದ ಪುಟ್ಟಿತ್ತು. ನಕಾರ ಮಃಕಾರ ಸಂಯೋಗವಾದಲ್ಲಿ ಗುಹ್ಯ ಪುಟ್ಟಿತ್ತು. ನಕಾರ ತಾನೇ ವಾಯು. ಇಂತೀ ಛತ್ತೀಸತತ್ವವೆಲ್ಲ ಮಂತ್ರಸ್ವರೂಪವಾದ ಬಸವಣ್ಣನೇ. ಎನಗೆ ಅಂಗ ಲಿಂಗ ಹಸ್ತ ಮುಖ ಶಕ್ತಿ ಭಕ್ತಿ ಪದಾರ್ಥ ಪ್ರಸಾದ ಇಂತಿವೆಲ್ಲವನರಿದು ಅರ್ಪಿಸುವ ಭೇದ ಹೇಗೆಂದಡೆ ಪ್ರಮಥದಲ್ಲಿ ಷಟ್‍ಸ್ಥಲದ ವಿವರ: ಭಕ್ತ ಮಾಹೇಶ್ವರ ಪ್ರಸಾದಿ ಪ್ರಾಣಲಿಂಗಿ ಶರಣ ಐಕ್ಯ. ಇನ್ನು ಭಕ್ತನ ಷಡ್ವಿಧಲಿಂಗದ ವಿವರ: ಆಚಾರಲಿಂಗ ಗುರುಲಿಂಗ ಶಿವಲಿಂಗ ಜಂಗಮಲಿಂಗ ಪ್ರಸಾದಲಿಂಗ ಮಹಾಲಿಂಗ. ಇನ್ನು ಭಕ್ತನ ಷಡ್ವಿಧಹಸ್ತದ ವಿವರ: ಸುಚಿತ್ತ ಸುಬುದ್ಧಿ ನಿರಹಂಕಾರ ಸುಮನ ಸುಜ್ಞಾನ ಸದ್ಭಾವ. ಇನ್ನು ಭಕ್ತನ ಷಡ್ವಿಧಮುಖದ ವಿವರ: ಘ್ರಾಣ ಜಿಹ್ವೆ ನೇತ್ರ ತ್ವಕ್ಕು ಶ್ರೋತ್ರ ಹೃದಯ. ಇನ್ನು ಭಕ್ತನ ಷಡ್ವಿಧಶಕ್ತಿಯ ವಿವರ: ಶ್ರದ್ಧೆ ನೈಷೆ* ಸಾವಧಾನ ಅನುಭಾವ ಆನಂದ ಸಮರಸ. ಇನ್ನು ಭಕ್ತನ ಷಡ್ವಿಧಪದಾರ್ಥದ ವಿವರ: ಗಂಧ ರಸ ರೂಪು ಸ್ಪರ್ಶನ ಶಬ್ದ ಪರಿಣಾಮ. ಇನ್ನು ಭಕ್ತನ ಷಡ್ವಿಧಪ್ರಸಾದದ ವಿವರ: ಗಂಧಪ್ರಸಾದ ರಸಪ್ರಸಾದ ರೂಪುಪ್ರಸಾದ ಸ್ಪರ್ಶಪ್ರಸಾದ ಶಬ್ದಪ್ರಸಾದ ಪರಿಣಾಮಪ್ರಸಾದ. ಇನ್ನು ದ್ವಿತೀಯದಲ್ಲಿ ಮಾಹೇಶ್ವರನ ಷಟ್‍ಸ್ಥಲ ವಿವರ: ಮಾಹೇಶ್ವರ ಭಕ್ತ ಪ್ರಸಾದಿ ಪ್ರಾಣಲಿಂಗಿ ಶರಣ ಐಕ್ಯ. ಇನ್ನು ಮಾಹೇಶ್ವರನ ಷಡ್ವಿಧಲಿಂಗದ ವಿವರ: ಗುರುಲಿಂಗ ಆಚಾರಲಿಂಗ ಶಿವಲಿಂಗ ಜಂಗಮಲಿಂಗ ಪ್ರಸಾದಲಿಂಗ ಮಹಾಲಿಂಗ. ಇನ್ನು ಮಾಹೇಶ್ವರನ ಷಡ್ವಿಧಹಸ್ತದ ವಿವರ: ಸುಬುದ್ಧಿ ಸುಚಿತ್ತ ನಿರಹಂಕಾರ ಸುಮನ ಸುಜ್ಞಾನ ಸದ್ಭಾವ. ಇನ್ನು ಮಾಹೇಶ್ವರನ ಷಡ್ವಿಧಮುಖದ ವಿವರ: ಜಿಹ್ವೆ ಘ್ರಾಣ ನೇತ್ರ ತ್ವಕ್ಕು ಶ್ರೋತ್ರ ಹೃದಯ. ಇನ್ನು ಮಾಹೇಶ್ವರನ ಷಡ್ವಿಧಶಕ್ತಿಯ ವಿವರ: ಜ್ಞಾನಶಕ್ತಿ ಕ್ರಿಯಾಶಕ್ತಿ ಇಚ್ಛಾಶಕ್ತಿ ಆದಿಶಕ್ತಿ ಪರಾಶಕ್ತಿ ಚಿತ್ಯಕ್ತಿ. ಇನ್ನು ಮಾಹೇಶ್ವರನ ಷಡ್ವಿಧಭಕ್ತಿಯ ವಿವರ: ನೈಷೆ* ಶ್ರದ್ಧೆ ಸಾವಧಾನ ಅನುಭಾವ ಆನಂದ ಸಮರಸ. ಇನ್ನು ಮಾಹೇಶ್ವರನ ಷಡ್ವಿಧಪದಾರ್ಥದ ವಿವರ: ರಸ ಗಂಧ ರೂಪು ಸ್ಪರುಶನ ಶಬ್ದ ಪರಿಣಾಮ ಇನ್ನು ಮಾಹೇಶ್ವರನ ಷಡ್ವಿಧಪ್ರಸಾದದ ವಿವರ: ರಸಪ್ರಸಾದ ಗಂಧಪ್ರಸಾದ ರೂಪುಪ್ರಸಾದ ಸ್ಪರುಶನಪ್ರಸಾದ ಶಬ್ದಪ್ರಸಾದ ಪರಿಣಾಮಪ್ರಸಾದ. ಇನ್ನು ತೃತೀಯದಲ್ಲಿ ಪ್ರಸಾದಿಯ ಷಟ್‍ಸ್ಥಲದ ವಿವರ: ಪ್ರಸಾದಿ ಭಕ್ತ ಮಾಹೇಶ್ವರ ಪ್ರಾಣಲಿಂಗಿ ಶರಣ ಐಕ್ಯ. ಇನ್ನು ಪ್ರಸಾದಿಯ ಷಡ್ವಿಧಲಿಂಗದ ವಿವರ: ಶಿವಲಿಂಗ ಆಚಾರಲಿಂಗ ಗುರುಲಿಂಗ ಜಂಗಮಲಿಂಗ ಪ್ರಸಾದಲಿಂಗ ಮಹಾಲಿಂಗ. ಇನ್ನು ಪ್ರಸಾದಿಯ ಷಡ್ವಿದಹಸ್ತದ ವಿವರ: ನಿರಹಂಕಾರ ಸುಚಿತ್ತ ಸುಬುದ್ಧಿ ಸುಮನ ಸುಜ್ಞಾನ ಸದ್ಭಾವ. ಇನ್ನು ಪ್ರಸಾದಿಯ ಷಡ್ವಿಧಮುಖದ ವಿವರ: ನೇತ್ರ ಘ್ರಾಣ ಜಿಹ್ವೆ ತ್ವಕ್ಕು ಶ್ರೋತ್ರ ಹೃದಯ. ಇನ್ನು ಪ್ರಸಾದಿಯ ಷಡ್ವಿಧಶಕ್ತಿಯ ವಿವರ: ಇಚ್ಛಾಶಕ್ತಿ ಕ್ರಿಯಾಶಕ್ತಿ ಜ್ಞಾನಶಕ್ತಿ ಆದಿಶಕ್ತಿ ಪರಾಶಕ್ತಿ ಚಿತ್ಯಕ್ತಿ. ಇನ್ನು ಪ್ರಸಾದಿಯ ಷಡ್ವಿಧಭಕ್ತಿಯ ವಿವರ: ಸಾವಧಾನ ಶ್ರದ್ಧೆ ನೈಷೆ* ಅನುಭಾವ ಆನಂದ ಸಮರಸ. ಇನ್ನು ಪ್ರಸಾದಿಯ ಷಡ್ವಿಧಪದಾರ್ಥದ ವಿವರ: ರೂಪು ಗಂಧ ರಸ ಸ್ಪರುಶನ ಶಬ್ದ ಪರಿಣಾಮ. ಇನ್ನು ಪ್ರಸಾದಿಯ ಷಡ್ವಿಧಪ್ರಸಾದದ ವಿವರ: ರೂಪುಪ್ರಸಾದ ಗಂಧಪ್ರಸಾದ ರಸಪ್ರಸಾದ ಸ್ಪರುಶನ ಪ್ರಸಾದ ಶಬ್ದಪ್ರಸಾದ ಪರಿಣಾಮಪ್ರಸಾದ. ಇಂತೀ ಮಾರ್ಗಕ್ರಿ ಅಂಗ ಲಿಂಗವಾದಲ್ಲಿ ಮುಂದೆ ಮೀರಿದ ಕ್ರಿಯೆ ಅಂಗ ಲಿಂಗ ತೃತೀಯಸ್ಥಲ. ಇನ್ನು ಚತುರ್ಥದಲ್ಲಿ ಪ್ರಾಣಲಿಂಗಿಯ ಷಡ್ವಿಧ ವಿವರ: ಪ್ರಾಣಲಿಂಗಿ ಭಕ್ತ ಮಾಹೇಶ್ವರ ಪ್ರಸಾದಿ ಶರಣ ಐಕ್ಯ. ಇನ್ನು ಪ್ರಾಣಲಿಂಗಿಯ ಷಡ್ವಿಧಲಿಂಗದ ವಿವರ: ಜಂಗಮಲಿಂಗ ಆಚಾರಲಿಂಗ ಗುರುಲಿಂಗ ಶಿವಲಿಂಗ ಪ್ರಸಾದಲಿಂಗ ಮಹಾಲಿಂಗ. ಇನ್ನು ಪ್ರಾಣಲಿಂಗಿಯ ಷಡ್ವಿಧಹಸ್ತದ ವಿವರ: ಸುಮನ ಸುಚಿತ್ತ ಸುಬುದ್ಧಿ ನಿರಹಂಕಾರ ಸುಜ್ಞಾನ ಸದ್ಭಾವ. ಇನ್ನು ಪ್ರಾಣಲಿಂಗಿಯ ಷಡ್ವಿಧಶಕ್ತಿಯ ವಿವರ: ಆದಿಶಕ್ತಿ ಕ್ರಿಯಾಶಕ್ತಿ ಜ್ಞಾನಶಕ್ತಿ ಇಚ್ಛಾಶಕ್ತಿ ಪರಶಕ್ತಿ ಚಿತ್ಯಕ್ತಿ. ಇನ್ನು ಪ್ರಾಣಲಿಂಗಿಯ ಷಡ್ವಿಧಭಕ್ತಿಯ ವಿವರ: ಅನುಭಾವ ಶ್ರದ್ಧೆ ನೈಷೆ* ಸಾವಧಾನ ಆನಂದ ಸಮರಸ. ಇನ್ನು ಪ್ರಾಣಲಿಂಗಿಯ ಷಡ್ವಿಧಪದಾರ್ಥದ ವಿವರ: ಸ್ಪರುಶನ ಗಂಧ ರಸ ರೂಪು ಶಬ್ದ ಪರಿಣಾಮ. ಇನ್ನು ಪ್ರಾಣಲಿಂಗಿಯ ಷಡ್ವಿಧಪ್ರಸಾದದ ವಿವರ: ಸ್ಫರುಶನಪ್ರಸಾದ ಗಂಧಪ್ರಸಾದ ರಸಪ್ರಸಾದ ರೂಪುಪ್ರಸಾದ ಶಬ್ದಪ್ರಸಾದ ಪರಿಣಾಮಪ್ರಸಾದ. ಇನ್ನು ಪಂಚಮದಲ್ಲಿ ಶರಣನ ಷಟ್‍ಸ್ಥಲದ ವಿವರ: ಶರಣ ಭಕ್ತ ಮಾಹೇಶ್ವರ ಪ್ರಸಾದಿ ಪ್ರಾಣಲಿಂಗಿ ಐಕ್ಯ. ಇನ್ನು ಶರಣನ ಷಡ್ವಿಧಲಿಂಗದ ವಿವರ: ಪ್ರಸಾದಲಿಂಗ ಆಚಾರಲಿಂಗ ಗುರುಲಿಂಗ ಶಿವಲಿಂಗ ಜಂಗಮಲಿಂಗ ಮಹಾಲಿಂಗ. ಶರಣನ ಷಡ್ವಿಧಹಸ್ತದ ವಿವರ: ಸುಜ್ಞಾನ ಸುಚಿತ್ತ ಸುಬುದ್ಧಿ ನಿರಂಕಾರ ಸುಮನ ಸದ್ಭಾವ ಇನ್ನು ಶರಣನ ಷಡ್ವಿಧಶಕ್ತಿಯ ವಿವರ: ಪರಾಶಕ್ತಿ ಕ್ರಿಯಾಶಕ್ತಿ ಜ್ಞಾನಶಕ್ತಿ ಇಚ್ಛಾಶಕ್ತಿ ಆದಿಶಕ್ತಿ ಚಿತ್ಯಕ್ತಿ. ಇನ್ನು ಶರಣನ ಷಡ್ವಿಧಭಕ್ತಿಯ ವಿವರ: ಆನಂದ ಶ್ರದ್ಧೆ ನೈಷೆ* ಸಾವಧಾನ ಅನುಭಾವ ಸಮರಸ. ಇನ್ನು ಶರಣನ ಷಡ್ವಿಧ ಪ್ರಸಾದದ ವಿವರ: ಶಬ್ದಪ್ರಸಾದ ಗಂಧಪ್ರಸಾದ ರಸಪ್ರಸಾದ ರೂಪುಪ್ರಸಾದ ಸ್ಪರುಶನಪ್ರಸಾದ ಪರಿಣಾಮಪ್ರಸಾದ. ಇನ್ನು ಷಷ*ಮದಲ್ಲಿ ಆ ಐಕ್ಯನ ಷಟ್‍ಸ್ಥಲದ ವಿವರ: ಐಕ್ಯ ಭಕ್ತ ಮಾಹೇಶ್ವರ ಪ್ರಸಾದಿ ಪ್ರಾಣಲಿಂಗಿ ಶರಣ. ಇನ್ನು ಐಕ್ಯನ ಷಡ್ವಿಧಲಿಂಗದ ವಿವರ: ಮಹಾಲಿಂಗ ಆಚಾರಲಿಂಗ ಗುರುಲಿಂಗ ಶಿವಲಿಂಗ ಜಂಗಮಲಿಂಗ ಪ್ರಸಾದಲಿಂಗ. ಇನ್ನು ಐಕ್ಯನ ಷಡ್ವಿಧಹಸ್ತದ ವಿವರ: ಸದ್ಭಾವ ಸುಚಿತ್ತ ಸುಬುದ್ಧಿ ನಿರಹಂಕಾರ ಸುಮನ ಸುಜ್ಞಾನ. ಇನ್ನು ಐಕ್ಯನ ಷಡ್ವಿಧಮುಖದ ವಿವರ: ಹೃದಯ ಪ್ರಾಣ ಜಿಹ್ವೆ ನೇತ್ರ ತ್ವಕ್ಕು ಶ್ರೋತ್ರ. ಇನ್ನು ಐಕ್ಯನ ಷಡ್ವಿಧಶಕ್ತಿಯ ವಿವರ: ಚಿತ್ಯಕ್ತಿ ಕ್ರಿಯಾಶಕ್ತಿ ಜ್ಞಾನಶಕ್ತಿ ಇಚ್ಛಾಶಕ್ತಿ ಆದಿಶಕ್ತಿ ಪರಾಶಕ್ತಿ. ಇನ್ನು ಐಕ್ಯನ ಷಡ್ವಿಧಭಕ್ತಿಯ ವಿವರ: ಸಮರಸ ಶ್ರದ್ಧೆ ನೈಷೆ* ಸಾವಧಾನ ಅನುಭಾವ ಆನಂದ. ಇನ್ನು ಐಕ್ಯನ ಷಡ್ವಿಧಪದಾರ್ಥದ ವಿವರ: ಪರಿಣಾಮ ಗಂಧ ರಸ ರೂಪು ಸ್ಪರುಶನ ಶಬ್ದ. ಇನ್ನು ಐಕ್ಯನ ಷಡ್ವಿಧಪ್ರಸಾದದ ವಿವರ: ಪರಿಣಾಮಪ್ರಸಾದ ಗಂಧಪ್ರಸಾದ ರಸಪ್ರಸಾದ ರೂಪುಪ್ರಸಾದ ಸ್ಪರುಶನಪ್ರಸಾದ ಶಬ್ದಪ್ರಸಾದ. ಇಂತಿವೆಲ್ಲವೂ ಅರ್ಪಿತವಾಗಲೊಡನೆ ಏಕಮೇವ ಪರಬ್ರಹ್ಮ ತಾನೆಯಾಗಿ ಉಳಿದ ಉಳುಮೆಯೇ ಬಸವಣ್ಣ. ಆ ಬಸವಣ್ಣನೇ ಎನಗೆ ಇಷ್ಟಬ್ರಹ್ಮವು. ಆ ಇಷ್ಟಬ್ರಹ್ಮದಲ್ಲಿ ಎನ್ನ ಅಂಗ ಮನ ಪ್ರಾಣ ಇಂದ್ರಿಯ ಕರಣಂಗಳೆಲ್ಲವು ನಿರವಯಲಾದ ಭೇದ ಹೇಗೆಂದಡೆ ವಾರಿ[ಬಲಿ]ದು ವಾರಿಕಲ್ಲಾಗಿ ವಾರಿಯಾದ ಹಾಗೆ ಉಪ್ಪಿನ ಪೊಟ್ಟಣವಪ್ಪುವಿನೊಳು ಬಯಚಿಟ್ಟ ಹಾಗೆ ಉರಿ ಕರ್ಪುರ ಸಂಯೋಗವಾದ ಹಾಗೆ ಎನ್ನ ಅಂಗ ಮನ ಅಂಗ ಏಕರಸವಾದ ಭೇದವನು ಸಿದ್ಧೇಶ್ವರನು ತೋರಿ[ದ ಕಾ]ರಣ ಪರಂಜ್ಯೋತಿ ಮಹಾಲಿಂಗಗುರು ಸಿದ್ಧಲಿಂಗಪ್ರಭುವಿನಲ್ಲಿ ಬಸವೇಶ್ವರನ ಶ್ರೀಪಾದದಲ್ಲಿ ಮನಮಗ್ನ ಯೋಗವೆನಗಾಯಿತಯ್ಯಾ, ಬೋಳಬಸವೇಶ್ವರ ನಿಮ್ಮ ಧರ್ಮ ನಿಮ್ಮ ಧರ್ಮ.
--------------
ಗುಮ್ಮಳಾಪುರದ ಸಿದ್ಧಲಿಂಗ
-->