ಲಿಂಗಕ್ಕೆಯೂ ತನಗೆಯೂ ಭಿನ್ನಭಾವವಿಲ್ಲೆಂಬರು,
ಲಿಂಗಕ್ಕೆಯೂ ತನಗೆಯೂ ಭಾಜನವೆರಡೆಂಬರು.
ಬಂದಿತ್ತು ನೋಡಾ ತೊಡಕು.
ಭಾಜನವೆರಡೆಂಬ ಮಾತೆರಡು,
ಮಾತೆರಡಾದವಾಗಿ ಅಂಗವೆರಡಹುದು,
ಅಂಗವೆರಡಿಪ್ಪಾತಂಗೆ ಲಿಂಗವಿಲ್ಲೆಂದೆನಿಸಿತ್ತು.
ಲಿಂಗವಿಲ್ಲದಾತನು ಭವಿ ಎಂದೆನಿಸುವನು.
ಇದು ಕಾರಣ, ಲಿಂಗದಲ್ಲಿ ಅವಿರಳವಾಗಿ
ಅಂಗಗುಣಭಂಗವ ಕಳೆದು, ನಿರ್ಭಿನ್ನ ಮತನಾಗಿ,
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರನಲ್ಲಿ, ಏಕಭಾಜನ ಸಮನಿಸಿತಯ್ಯ.